ಅಂದು-
ಒಲವೇ,
ಕಸ ಕಡ್ಡಿ ತುಂಬಿದ
ಮನದಂಗಳಕೆ ನೀ
ನೀರ ಚಿಮುಕಿಸಿ,
ಕಸ ಹೊಡೆದು,
ಬೆನ್ನ ಬಗ್ಗಿಸಿ,
ಇಕ್ಕಿದೆ ಚುಕ್ಕಿಗಳ
ಜತನದಿ ನೀ
ಕೈ ಹಿಡಿದು
ರೇಖೆಗಳನೆಳೆದೆ
ಮಳೆಬಿಲ್ಲನೇ
ಬಗ್ಗಿಸಿ
ತುಂಬಿದೆ ಬಣ್ಣ
ಕಂಪನಕದುರಿತು ಕಾಯ
ರಂಗೇರಿತು ಗಲ್ಲ!
ಇಂದು-
ಒಲವೇ,
ಕಸ ಕಡ್ಡಿಗಳಿಲ್ಲ
ಮನದಂಗಳದಿ
ಧೂಳು ಹಾರದು
ನಿತ್ಯ ಶುದ್ಧ
ಚುಕ್ಕಿಗಳ
ನೆರವಿಲ್ಲದೆ
ಎಳೆಯಬಲ್ಲೆ ಗೆರೆಗಳ
ಅಂದು ರಂಗೇರಿದ
ಗಲ್ಲದ ಬಣ್ಣವೇ
ಈ ಚಿತ್ತಾರಗಳಿಗೀಗ
ನವುರಾದ ಕಂಪನ
ನೆನಪುಗಳ
ಮರಳುವಿಕೆಯಿಂದ..
No comments:
Post a Comment