ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

೧೯೮೯ರಲ್ಲಿ ಬಿ. ಜಿ. ಎಮ್ನಲ್ಲಿ ಜೂನ್ ತಿಂಗಳಲ್ಲಿ ನನ್ನ ಚಿಕ್ಕಮ್ಮನ ಮೂಲಕ ಸೇರ್ಪಡೆಗೊಂಡಾಗ ನನ್ನ ಬದುಕು ಈಗ ನಿಜವಾಗಿ ಪ್ರಾರಂಭಗೊಂಡಿತೆಂದೆನಿಸಿತ್ತು. ಬೆಳಿಗ್ಗೆ ಸಾಧಾರಣ ೯.೩೦ಕ್ಕೆ ಚಿತ್ರ ಮಾಡಲು ಕುಳಿತರೆ ನನಗೆ ಮನೆಗೆ ತಿರುಗಿ ಹೋಗಲು ಮನಸ್ಸು ಬರುತ್ತಿರಲಿಲ್ಲ...ಆಗ ನನಗೆ ನನ್ನೊಳಗೆ ಕಲಾದಾಹ ಎಷ್ಟಿದೆಯೆಂಬುದು ಅರಿವಿಗೆ ಬಂತು. ಅದಕ್ಕಿಂತ ಮುಂಚೆ ನನ್ನಷ್ಟಕ್ಕೆ ಚಿತ್ರಗಳನ್ನು ಬಿಡಿಸುತ್ತಿದ್ದೆನಾದರೂ ನಿಯಮಗಳ ಅರಿವಿರಲಿಲ್ಲ..ಚಿತ್ರ ಪರಿಕರಣೆಗಳ ಬಗ್ಗೆ ಏನೂ ಪ್ರಾಥಮಿಕ ಜ್ಞಾನವಿರಲಿಲ್ಲ..ಆದರೂ ಬಚ್ಚಲು ಗೋಡೆಗಳ ಮೇಲೆ ಆಗಿನ ಡಿಸ್ನಿ ವರ್ಲ್ಡ್ನ ಎಲ್ಲಾ ಕಾರ್ಟೂನ್ಗಳು ಸುಣ್ಣದಲ್ಲಿ ರರಾಜಿಸುತ್ತಿದ್ದವು. ಅವುಗಳು ಚೆನ್ನಾಗಿರುತ್ತಿದ್ದವೂ ಕೂಡಾ. ಆದರೂ ಮನೆಯಲ್ಲಿ ನನಗೆ ಎಂದೂ ಪ್ರೋತ್ಸಾಹದ ಮಾತುಗಳು ಬಂದಿರಲಿಲ್ಲ. ಇದರಿಂದಲೋ ಏನೋ ನಾನು ಇಂದಿಗೂ ಸಹ ಪ್ರೋತ್ಸಾಹದ ಮಾತುಗಳ ನಿರೀಕ್ಷೆ ಮಾಡುವುದಿಲ್ಲ. ಸರಿ, ಬಿ. ಜಿ.ಮೊಹಮ್ಮದರ ಕೈಕೆಳಗೆ ನನ್ನ ತರಬೇತಿ ಪ್ರಾರಂಭವಾಯಿತು...ಬೇಸಿಕ್ ತಂತ್ರಗಳನ್ನು ಬಲು ಬೇಗ ದಾಟಿ, ಇದ್ದಿಲಿನ (ಚಾರ್ಕೋಲ್) ಮೂಲಕ ಬಿಡಿಸಲು ಕಲಿಕೆ ಪ್ರರಂಭವಾದ ದಿನದಿಂದ ನನ್ನ ಕನಸುಗಳಿಗೆ ರೆಕ್ಕೆಗಳು ಮೂಡಲು ಪ್ರಾರಂಭವಾಯಿತು. ಜೆ ಜೆ ಆರ್ಟ್ ಸ್ಕೂಲ್ನಲ್ಲಿ ಕಲಿಯುವ ನನ್ನ ಮಹತ್ವಾಕಾಂಕ್ಷೆಗೆ ಇಂಬು ನೀಡುವಂತೆ ಗುರುಗಳ ಮೆಚ್ಚುಗೆ, ನನ್ನ ಸಹಪಾಠಿಗಳ ಪ್ರೋತ್ಸಾಹದ ಮಾತುಗಳು ಕೇಳಿಬಂದವು. ನಾನು ಮೂರು ತಿಂಗಳಲ್ಲೇ ನನ್ನೆಣಿಕೆಗೆ ಮೀರಿ ಬೆಳೆದೆ...ಚಿತ್ರ ಕಲೆಯಲ್ಲಿ ಮೇಲಿಂದ ಮೇಲೆ ಪದೋನ್ನತಿ ಸಿಕ್ಕಿತು...ಅಲ್ಲಿಗೆ ಬರುತ್ತಿದ್ದ ಅನೇಕರಿಗೆ ಆಶ್ಚರ್ಯ! ಆದರೆ ಇದು ಸಾಧ್ಯವಾದದ್ದು ನನ್ನೊಳಗಿನ ಕಲಾವಿದೆಯ ಹಠ ಮತ್ತು ನಿರಂತರ ಪ್ರಯತ್ನದಿಂದ. ಮನೆಯಲ್ಲಿ ಮದುವೆಯ ಮಾತು ಕತೆ ನಡೆಯುತಿತ್ತು...ನನ್ನ ಕಲಿಕೆಯು ಪೂರ್ಣವಾಗುವುದೇ, ನನ್ನ ಪತಿ ಮತ್ತು ಅವನ ಮನೆಯವರು ನನಗೆ ಮುಂದೆ ಕಲಿಯಲು ಅನುಕೂಲ ಮಾಡಿಕೊಡುವರೇ, ಇದೆಲ್ಲಾ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿರಲಿಲ್ಲ...ಬಹುಶಃ ಕಲಾ ಜೀವನದ ಹಾದಿ ಹಿಡಿದ ನಾನು ಇನ್ನೆಂದೂ ಹಿಂದೆ ತಿರುಗಿ ಬರುವುದಿಲ್ಲ..ಅದೇ ದಾರಿಯಲ್ಲಿ ನಡೆದು ಮುಂದೊಂದು ದಿನ ದೇಶದ ಅತ್ಯುನ್ನತ ಕಲಾವಿದರಲ್ಲಿ ಒಬ್ಬಳಾಗುವೆ ಎಂಬ ವಿಶ್ವಾಸವಿತ್ತು ನನ್ನಲ್ಲಿ. ಬೇಗನೇ ಕಪ್ಪು ಬಿಳಿ ಜಲ ಚಿತ್ರ..ಅಲ್ಲಿಂದ ಜಲ ವರ್ಣ....ಅದರಲ್ಲಿಯೂ ನಾನೊಂದು ಬಿಡಿಸಿದ ಸ್ಟಿಲ್ ಲೈಫ಼್ ಚಿತ್ರ- ಹಸಿರು ಬಣ್ಣದ ಗಾಜಿನ ಬಾಟ್ಲಿ ಮತ್ತು ಅದರ ಜೊತೆ ಹಣ್ಣುಗಳು ಬಹಳ ಸುಂದರವಾಗಿ ಮೂಡಿ ಬಂದಿತ್ತು.( ಈ ಚಿತ್ರ ಮದುವೆಯಾದ ಹೊಸತರಲ್ಲಿ ನನ್ನ ಓರಗಿತ್ತಿ ತನಗೆ ಬೇಕೆಂದು ತೆಗೆದುಕೊಂಡು ಹೋಗಿದ್ದಳು...ಅದು ಈವಾಗ ಅವಳ ಬಳಿ ಸಹ ಇಲ್ಲ.) ಒಂದು ದಿನ ಮಾಸ್ಟ್ರು ತೈಲ ವರ್ಣಗಳಿಗೆ ಬೇಕಾದ ಸಲಕರಣೆಗಳನ್ನು ತರಲು ಹೇಳಿದಾಗ ಆನಂದ ಆಶ್ಚರ್ಯ ಉಂಟಾಯಿತು. ಇವುಗಳ ಮಧ್ಯೆ ಗುರುಗಳ ಪತ್ನಿಯವರಿಂದ ಎರಡು ತಗಡಿನ ಮೇಲೆ ಉಬ್ಬು ಚಿತ್ರ ಬಿಡಿಸುವುದನ್ನು ಸಹ ಕಲಿತೆ. ಮಾರ್ಚ್ ತಿಂಗಳ ಮೊದಲವಾರ ಅದು.... ನನ್ನ ತಾಯಿಯವರು ಹುಡುಗ ಮತ್ತು ಮನೆಯವರು ನೋಡಲು ಬರುವ ವಿಷಯ ತಿಳಿಸಿದರು. ಮುಂದೆ ಎಲ್ಲವೂ ಬೇಗ ಬೇಗನೇ ನಡೆಯಿತು...೧೫ನೇ ತಾರೀಕು ನಿಶ್ಚಯ ತಾಂಬೂಲ...೨೪ ಜೂನ್ರಂದು ಮದುವೆಯೂ ಆಯಿತು. ಅದರ ಜೊತೆ ನನ್ನ ಕನಸಿನ ಸೌಧವೂ ಕುಸಿಯುತು. ಮೊದಮೊದಲು ಸಿಡುಕುತಿದ್ದ ನಾನು ಜೀವನದೊಂದಿಗೆ ಬಲು ಬೇಗ ರಾಜಿ ಮಾಡಿಕೊಂಡು ಬಿಟ್ಟೆ...ಮಕ್ಕಳಿಗಾಗಿ ಹೊಸ ಕನಸ ನೇಯುವುದು ಪ್ರಾರಂಭವಾಯಿತು! ನನ್ನ ಕನಸಿನಂತೆ ನನ್ನ ಮಗ ಮಗಳು ಇಬ್ಬರೂ ಚಿತ್ರ ಬಿಡಿಸುವುದರಲ್ಲಿ ನುರಿತರಾದರು. ಇಷ್ಟೆಲ್ಲ ನನ್ನೊಳಗಿನ ಕಲಾವಿದೆಯ ಧ್ವನಿ ಇನ್ನೂ ಕ್ಷೀಣವಾಗಿ ಮೊರೆಯಿಡುತಿತ್ತು....ಹೃದಯವು ಕೂಗುತಿತ್ತು. ಮುಂದೆಂದೂ ಕುಂಚವನ್ನು ಕೈಗೆತ್ತುವ ಆಸೆಯನ್ನೇ ಬಿಟ್ಟಿದ್ದೆ. ಆದರೆ ೨೦೦೭ರಲ್ಲಿ ನನ್ನ ಜೀವನದಲ್ಲಿ ಮತ್ತಿನ್ನೊಮ್ಮೆ ಬೆಳಕಿನ ಕಿರಣಗಳು ಕಾಣಹತ್ತಿದವು. ಬರಡಾದ ಬೆಂಗಾಡಿನಲ್ಲಿ ವೃಕ್ಷಗಳ ಮೇಲೆ ಮತ್ತೆ ಹಸಿರೆಲೆ ಕಾಣಿಸಿಕೊಂಡವು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮನೆ ಪಾಠ ಪ್ರಾರಂಭಿಸಿದೆ...ನಿಧಾನವಾಗಿ ಮಕ್ಕಳ ಸಂಖ್ಯೆ ಹೆಚ್ಚಾಯಿತು..ಕೈಯಲ್ಲಿ ಬಂದ ಕಾಸು ಆತ್ಮವಿಶ್ವಾಸವನ್ನೂ ತಂದಿತು. ಬಂದ ಮಕ್ಕಳಲ್ಲಿ ಕೆಲವರಿಂದ ಚಿತ್ರ ಕಲಿಸಿ ಎಂಬ ಬೇಡಿಕೆಯೂ ಬಂತು...ಇಲ್ಲಿಯೂ ಒಳ್ಳೆಯ ಬೆಳವಣಿಗೆ ಕಾಣ ಬಂತು..
ಅಂತೂ ೨೦೧೦ರಲ್ಲಿ ಮತ್ತಿನ್ನಷ್ಟು ಬೆಳವಣಿಗೆ ಜೀವನದ ನಡೆಯನ್ನೂ, ಅರ್ಥವನ್ನೂ ಬದಲಾಯಿಸಿತು. ಸಂಬಂಧಗಳ ವ್ಯಾಖ್ಯಾನವನ್ನೆ ಬುಡಮೇಲು ಮಾಡಿತು! ನಾ ಆರಾಧಿಸುತ್ತಿದ್ದ ಆ ಅದೃಶ್ಯ ಶಕ್ತಿ, ಮಾಟಗಾರ ತನ್ನ ಕಣ್ಕಟ್ಟನ್ನು ತೋರಿಸಿದ. ನನ್ನ ನಂಬಿಕೆ ನಿಜವೆಂದು ನಿರೂಪಿಸಿ ತೋರಿದ ಕಪಟನಾಟಕ ಸೂತ್ರಧಾರಿ! ತಾಳ್ಮೆಯಿಂದ ಅವನ ಪರೀಕ್ಷೆಗಳನ್ನು ಎದುರಿಸಿದ ನಾನು ಅದರ ಫಲವನ್ನು ಪಡೆದೆ. ಅದೊಂದು ದಿನ ನನ್ನ ಜೀವನವೆಂಬ ನೌಕೆಯು ಬೀಸಿದ ಬಿರುಗಾಳಿಗೆ ಸಿಕ್ಕಿ ಹೊಯ್ದಾಡುತ್ತಿದ್ದಾಗ ಜೀವ ಕಳೆಯಲು ಹೊರಟಿದ್ದ ನನ್ನನ್ನು ನನ್ನೊಳಗಿನ ಹೋರಾಟಗಾರ್ತಿಯೇ ತಡೆದು ನಿಲ್ಲಿಸಿದ್ದಳು! ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟಾಗಲೂ ಕಹಿಯನ್ನೇ ಉಣಬಡಿಸಿದ ವಿಧಿಯು, ಕಣ್ಣಿನ ನೋಡುವ ಶಕ್ತಿಗೆ ಹಾನಿಯುಂಟು ಮಾಡಿತ್ತು. ಇವೆಲ್ಲಾ ನನ್ನ ಪಾಪ ಕರ್ಮಗಳ ಫಲವೆಂದು ದಿನ ಕಳೆದಂತೆ ಅರ್ಥಮಾಡಿಕೊಂಡ ನಾನು ಮತ್ತ್ಯಾವುದೇ ಒಳ್ಳೆಯದರ ನಿರೀಕ್ಷೆಯಲ್ಲಿರಲಿಲ್ಲ! ಆದರೂ ಬಹುಶಃ ನನ್ನ ತಪಸ್ಸು ಅವನ ಮನಸನ್ನು ತಟ್ಟಿರಬೇಕು! ಅನಿತಾಳನ್ನು ನನ್ನ ಬಳಿ ಕಳುಹಿಸಿದ. ಬಹುಶಃ ಅನಿತಾಳು ಇಂದಿಗೂ ವಿಸ್ಮಿತಳಾಗುತ್ತಿದ್ದಿರಬಹುದು. ಅದ್ಯಾಕೆ ನಾನು ಇವಳನ್ನು (ನನ್ನನ್ನು) ಆಯ್ಕೆ ಮಾಡಿದೆಯೆಂದು! ಜಗನ್ನಾಥನ ಲೀಲೆಯನ್ನು ಅರಿತವರಾರು? ಅನಿತಾಳ ಬೇಡಿಕೆಯಂತೆ ಮಾಡಿದ ೬ ಹೂಗೊಂಚಲುಗಳ ಜಲವರ್ಣ ಇನ್ನೂ ಕೈಗಳಲ್ಲಿ ಶಕ್ತಿಯಿದೆ ಎಂಬುದನ್ನು ನಿರೂಪಿಸಿತು. ನಿಧಾನವಾಗಿ ಬಂದ , ಬೇಡಿಕೆಯಂತೆ ಮಾಡಿಕೊಟ್ಟ ಮತ್ತೆರಡು ಚಿತ್ರಗಳ ಕೆಲಸವು ಮತ್ತಿಷ್ಟು ಹರುಪು ತುಂಬಿತು ವಿನಾ ಇನ್ಯಾವುದೇ ನಿರೀಕ್ಷೆಯನ್ನು ತರಲಿಲ್ಲ. ಆದರೆ ವೀಣಾ ಶ್ರೀನಿವಾಸ್ ಅವರ ಕಲಾಪ್ರದರ್ಶನ ನನ್ನ ಜೀವನದಲ್ಲಿ ಹೊಸ ತಿರುವುವನ್ನು ಪಡೆಯುವುದು ಎಂದೂ ಅನಿಸಿರಲಿಲ್ಲ. ನನ್ನನ್ನು ಕಲಾವಿದರ ಚಾವಡಿಯ ಸದಸ್ಯಳಾಗಿ ಮಾಡಿಕೊಂಡಾಗಲೂ ನಾನು ಅವರಂತಹ ನುರಿತ ಕಲಾವಿದರ ಮಧ್ಯೆ ಗುರುತಿಸಿಕೊಳ್ಳುವಷ್ಟು ಯೋಗ್ಯತೆ ಪಡೆದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ್ದೆ. ಆದರೆ ಆ ಗತಿಯಲ್ಲಿ ಸಾಗಬೇಕೆಂಬ ಬಲು ಆಸೆಯಿದೆ...ಅದಕ್ಕಾಗಿ ಮಾರ್ಗದರ್ಶನ ನೀಡಬೇಕೆಂದು ಕೋರಿದ್ದೆ. ಆದರೆ ಅದು ಇಷ್ಟು ಬೇಗನೆ ಸಿಗುವುದೆಂದು ಕನಸು ಮನಸಿನಲ್ಲಿ ಎಣಿಸರಿರಲಿಲ್ಲ. ೧೮ನೇ ಡಿಸೆಂಬರ್ನಲ್ಲಿ ನಡೆದ ಕಲಾಮೇಳದಲ್ಲಿ ಪ್ರಸಿದ್ಧ ಕಲಾವಿದರ ಕೃತಿಗಳ ಜೊತೆ ನನ್ನ ಚಿತ್ರ ಪ್ರದರ್ಶನ ನಡೆಯಿತು. ನನ್ನ ಸೌಭಾಗ್ಯವೇ ಸರಿ. ಜೊತೆಗೆ ಅನೇಕ ಕಲಾವಿದರ ಒಡನಾಟದ ಭಾಗ್ಯವೂ ಪಡೆದೆ. ನನ್ನ ಜೀವನದ ಸುದಿನವದು.































ಇಷ್ಟೇ ಅಲ್ಲ..ಈಗ ಇನ್ನೊಂದು ಸುವರ್ಣಾವಕಾಶ ಬಾಗಿಲನ್ನು ತಟ್ಟಿದೆ. ಫೆಬ್ರವರಿ ೫ರಂದು ಮಹಿಳೆಯರು ಪ್ರದರ್ಶಿಸುವ "ವರ್ಣ ವನಿತೆ" ಎಂಬ ಮಹಿಳೆಯರು ಮಾತ್ರ ನಡೆಸುವ ಶಿಬಿರದಲ್ಲಿ ಚಿತ್ರ ಬಿಡಿಸುದಕ್ಕೆ ೧೭ ಮಹಿಳೆಯರಲ್ಲಿ ಒಬ್ಬಳಾಗಿ ಆಯ್ಕೆಯಾಗಿದ್ದೇನೆ. ಅನನುಭವಿಯಾದ ನನಗೆ ನನ್ನ ಗೆಳೆಯ, ಒಡೆಯನಾದ ಶ್ರೀರಾಮನು ಹನುಮನೊಂದಿಗೆ ಸಹಾಯ ಮಾಡುವನು ಎಂದು ನಂಬುತ್ತೇನೆ. ನನ್ನ ಓದುಗರ ಪ್ರೋತ್ಸಾಹದ ಮಾತುಗಳು ಶ್ರೀರಕ್ಷೆಯನ್ನು ನೀಡುವುದು!
೨೦೧೦ರ ಮಾರ್ಚ್ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ಎರಡು ಲೇಖನಗಳು ನನ್ನ ಗಮನ ಸೆಳೆದವು. ಈ ಎರಡೂ ಲೇಖನಗಳು ಚಿತ್ರ ಕಲೆಯ ಬಗ್ಗೆ ಇದ್ದವು. ವಿಕಲ ಚೇತನಳಾದ ಮಂಗಳ ಜ್ಯೋತಿ ಶಾಲೆಯಲ್ಲಿ ಕಲಿತ ಸುಧಾರತ್ನ ಮತ್ತು ವೀಣಾ ಶ್ರೀನಿವಾಸ್.

ಬಹುಶಃ ೨೦೦೧ರಲ್ಲೆಂದು ತೋರುತ್ತದೆ. ನನ್ನ ತಮ್ಮನ ಮದುವೆಯಾಗಿ ಎರಡು ವರ್ಷವಾಗಿತ್ತು. ಅವನು ಅಮೇರಿಕದಿಂದ ಊರಿಗೆ ಬಂದಿದ್ದನು. ಮಂಗಳೂರಿನ ಸ್ಕೂಲ್ ಬುಕ್ ಕಂಪನಿಯ ಮೊಮ್ಮಗಳಾದ ಅವನ ಹೆಂಡತಿಯೊಂದಿಗೆ ಸ್ಕೂಲ್ ಬುಕ್ ಕಂಪನಿಯ ಶ್ರೀನಿವಾಸ್ ಭಂಡಾರಿ ಅವರ ಮನೆಗೂ ಭೇಟಿ ಕೊಟ್ಟಿದ್ದನು. ಅವರೊಂದಿಗೆ ನನ್ನ ತಾಯಿಯೂ ಹೋಗಿದ್ದರು. ಅಲ್ಲಿಂದ ಬಂದ ಅವರು ಮತ್ತು ವಾಣಿ ಹೇಳಿದ ಮಾತು ಈಗಲೂ ನೆನಪಿದೆ...ಒಂದು ಕೋಣೆಯ ತುಂಬಾ ಸುಂದರ ಚಿತ್ರಗಳನ್ನು ವೀಣಾ ಮಾಡಿ ಇಟ್ಟಿದ್ದರು...ಮತ್ತು ಅಮ್ಮನಿಗೆ ಅದನ್ನು ನೋಡಿ ತುಂಬಾನೆ ಸಂತೋಷವಾಯಿತು...ಹಾಗು ನನ್ನ ನೆನಪಾಯಿತು ಎಂದು ನನಗೆ ರಿಪೋರ್ಟ್ ಕೊಟ್ಟಿದ್ದರು ಸಹ! ಈ ೨೦೧೦ರಲ್ಲಿ ವೀಣಾ ಅವರ ಚಿತ್ರ ಕಲೆಯ ಬಗ್ಗೆ ಪ್ರಕಟವಾದದನ್ನು ನೋಡಿ ಹಿಂದೆ ಅಮ್ಮ ಹೇಳಿದ ಮಾತು ನೆನಪಾಯಿತು. ಅವರ ದೂರವಾಣಿ ಅಂಕೆ ಗೊತ್ತಿಲ್ಲದಿದುದರಿಂದ ಅಂಗಡಿಗೆ ಫೋನು ಮಾಡಿ ತಿಳಕೊಂಡೆ...ಕೂಡಲೇ ವೀಣಾಗೆ ಫೋನು ಹಚ್ಚಿ ಮಾತನಾಡಿ ಅವರಿಗೆ ಅಭಿನಂದನೆಗಳನ್ನು ಕೊಟ್ಟೆ. ಅದರಲ್ಲಿ ಅವರು ಕಾವಿಕಲೆಯ ಬಗ್ಗೆ ಮಾಡುತ್ತಿರುವ ಅಧ್ಯಯನದ ಬಗ್ಗೆಯೂ ಬರೆದಿತ್ತು. ವೀಣಾ ತಮ್ಮ ಮನೆಗೆ ಬಂದು ಭೇಟಿಯಾಗು ಎಂದು ಆಹ್ವಾನವನ್ನೂ ಕೊಟ್ಟಿದ್ದರು...ನಾನು ನನ್ನ ಚಿತ್ರಗಳನ್ನು ನೋಡಿ ಅಭಿಪ್ರಾಯ ಕೊಡಿ ಎಂದು ಕೇಳ್ಕೊಂಡಿದ್ದೆ...ಅಷ್ಟೇ ಮುಂದೆ ನಮ್ಮ ನಡುವೆ ಏನೂ ಬೆಳವಣಿಗೆ ನಡೆದಿರಲಿಲ್ಲ. ಆದರೆ ಇತ್ತೀಚೆಗೆ ನನ್ನ ಉಬ್ಬು ಚಿತ್ರಕ್ಕೆ ಚೌಕಟ್ಟು ಹಾಕಿಸಲು ತೊಂದರೆ ಬಂದಾಗ ಪುನಃ ಅವರಿಗೆ ಫೋನು ಹಚ್ಚಿ ವಿಚಾರಿಸಿದಾಗ, ಅವರು ತಮ್ಮ ಚಿತ್ರಗಳಿಗೆ ಚೌಕಟ್ಟು ಹಚ್ಚಿಸುವನ ಬಳಿ ಕೊಡುವಂತೆ ಹೇಳಿ ತಮ್ಮ ಡಿಸೆಂಬರ್ ೫ರಂದು ನಡೆಯುವ ಚಿತ್ರ ಪ್ರದರ್ಶನಕ್ಕೆ ಆಹ್ವಾನವನ್ನಿತ್ತರು. ಸರಿ, ಇದು ನನಗೆ ಬಂದ ಮೊದಲ ಆಹ್ವಾನ...ನೋಡೋಣ ಎಂದು ಕೊಂಡೆ...ಯಾಕೆಂದರೆ ಇಷ್ಟರವರೆಗೆ ಯಾವ ಗ್ಯಾಲರಿಗೂ ಕಾಲಿಡರಿರಲಿಲ್ಲವಾದುದರಿಂದ ಒಬ್ಬಳೇ ಹೋಗಲು ಮುಜುಗರವಾಗುತಿತ್ತು....ನಮ್ಮಲ್ಲಿ ಬೇರೆ ಯಾರಿಗೂ ಈ ಆರ್ಟ್ ಜಗತ್ತೆಂದರೆ ಅಷ್ಟೊಂದು ಇಷ್ಟವಿಲ್ಲವಾದುದರಿಂದ ನನಗೆ ಏನು ಮಾಡುವುದೆಂದು ತೋಚಿರಲಿಲ್ಲ. ಸಂಜೆ ಉದ್ಘಾಟನೆ ಹೊತ್ತಿಗೆ ಹೋಗುವುದು ಖಂಡಿತ ಸಾಧ್ಯವಿರಲಿಲ್ಲ...ಅದೇ ಸಮಯದಲ್ಲಿ ನನ್ನ ತರಗತಿ ನಡೆಯು ನಡೆಯುದರಿಂದ.
ಕೊನೆಗೂ ಮಂಗಳವಾರ ಬೆಳಿಗ್ಗೆ ಹೊರಟು ನಿಂತೆ...ಎಷ್ಟು ವೇಗವಾಗಿ ಕೆಲಸ ಮಾಡಿದರೂ ೧೧.೩೦ ಗಿಂತ ಮೊದಲು ಹೊರಡಲಾಗಲಿಲ್ಲ. ಪ್ರದರ್ಶನ ನಡೆಯಿತ್ತಿದ್ದದು ವೀಣಾ ಅವರದ್ದು..ಆದರೆ ನೋಡಲು ಹೋಗುತ್ತಿರುವ ನನ್ನೆದೆ ಢವ ಢವ ಎಂದು ಹೊಡೆದು ಕೊಳ್ಳುತಿತ್ತು. ಬಸ್ಸಿನಿಂದ ಇಳಿದು ಪ್ರಸಾದ್ ಆರ್ಟ್ ಗ್ಯಾಲರಿ ಹತ್ತಿರಬಂದಾಗ ಮೊದಲು ಕಂಡದ್ದು ಕೋಟಿ ಪ್ರಸಾದ್ ಆಳ್ವರನ್ನು..ನೋಡುತ್ತಲೇ ಮುಗುಳ್ನಗೆ ಚಿಮ್ಮಿಸಿದರು ಆಳ್ವರು. (ವರ್ಷದ ಹಿಂದೊಮ್ಮೆ ಅವರನ್ನು ಡ್ರೈವಿಂಗ್ ಕಲಿಯಬೇಕೆಂದು ವಿಚಾರಿಸಲು ಬಂದಿದ್ದಾಗ ಭೇಟಿಯಾಗಿದ್ದೆ..ಮಾತು ಮಾತಲ್ಲಿ ನಾನು ಸಹ ಕಲಿತದ್ದು ಅವರದೇ ಗುರುಗಳಾದ ಬಿ ಜಿ ಮೊಹಮ್ಮದ್ರಲ್ಲಿ ಎಂದು ಹೇಳ್ಕೊಂಡಿದ್ದೆ....ಮುಂದೆ ವಾಹನ ಕಲಿಯುವ ಹುರುಪು ಕಮರಿತು..ಹಾಗಾಗಿ ಮತ್ತೆ ಅವರನ್ನು ಭೇಟಿ ಸಹ ಆಗಿರಲಿಲ್ಲ...ಆದರೂ ಅವರು ಮುಖ ಪರಿಚಯವಿದ್ದ ಕಾರಣ ಮುಗುಳ್ನಕ್ಕರು) ಸರಿ, ಒಳ್ಳೆ ಶಕುನ ಎಂದು ಕೊಂಡು ನಿಧಾನವಾಗಿ ಗ್ಯಾಲರಿಯಲ್ಲಿ ಕಾಲಿಟ್ಟೆ...ವೀಣಾ ಅವರ ಮುಖ ಅರಳಿತು...ಎದ್ದು ಕೈ ನೀಡಿ ಸ್ವಾಗತಿಸಿದರು....ಚಿತ್ರಗಳನ್ನು ನೋಡಲು ಹೋಗು...ಸ್ವಲ್ಪ ಹೊತ್ತಲ್ಲೇ ಬಂದು ಸೇರುವೆ ಎಂದು ಸೂಚಿಸಿದರು. ಢವಢವಿಸುವ ಎದೆ ಶಾಂತವಾಗಿತ್ತು..ನಿಧಾನವಾಗಿ ಚಿತ್ರಗಳ ಸೌಂದರ್ಯವನ್ನು ಆಸ್ವಾದಿಸುತ್ತಾ ಆನಂದ ಪಡುತ್ತಿದ್ದೆ. ಅವರ ಒಂದು ಚಿತ್ರ ಹೃದಯವನ್ನು ತಟ್ಟಿತು....ಕಾಲ ಚಕ್ರ ಮಧ್ಯದಲ್ಲಿ ಸುತ್ತುತ್ತಿದೆ ಒಂದು ತುದಿಯಲ್ಲಿ ಕಣ್ಣಲ್ಲಿ ನೀರು ತೊಟ್ಟಕ್ಕುತ್ತಿರುವ ಬಾಲೆ ಇನ್ನೊಂದು ತುದಿಯಲ್ಲಿ ಯಮದೂತರ ಆಗಮನಕ್ಕಾಗಿ ಕಾದಿರುವ ಹಣ್ಣು ಹಣ್ಣು ಮುದುಕಿ! ಈ ಚಿತ್ರವು ಹೆಣ್ಣು ಮಕ್ಕಳ ಕಷ್ಟ ಕಾರ್ಪಣ್ಯವನ್ನು ಹೇಗೆ ಹಿಡಿದಿಟ್ಟು ಕೊಂಡಿದೆಯಲ್ಲಾ ಅಂದು ಕೊಂಡೆ! ಸ್ವಲ್ಪ ಹೊತ್ತಲ್ಲೇ ವೀಣಾ ಅವರು ಬಂದು ಕೂಡಿಕೊಂಡರು....ನನ್ನ ಮನದಲ್ಲಿದ್ದುದನ್ನು ಅವರಿಗೆ ಹೇಳಿದೆ. ಅವರು ಆ ಚಿತ್ರ ಅವರಿಗೂ ಕೊಟ್ಟ ಸಂತೃಪ್ತಿ ಹೇಳಿ...ಇನ್ನೂ ಅದರಲ್ಲಿ ಕೆಲಸ ಬಾಕಿಯಿದೆ ಅಂದರು. ಅಲ್ಲಿಂದ ನಮ್ಮ ಮಾತು ಕತೆ ಕಾವಿ ಕಲೆಯ ಬಗ್ಗೆ ತಿರುಗಿತು....ಆ ಬಗ್ಗೆಯೂ ಹೇಳಿಕೊಂಡರು. ಹೊನ್ನಾವರದಲ್ಲಿರುವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ಗೋಡೆಗಳಲ್ಲಿರುವ ಈ ಉಬ್ಬು ಚಿತ್ರಗಳ ಬಗ್ಗೆ ಹೇಳಿದರು. ದೇವಸ್ಥಾನದ ನವೀಕರಣ ಮಾಡುವ ಯೋಜನೆಯಲ್ಲಿ ನಾವು ಹಲವಾರು ಶತಮಾನಗಳ ಹಿಂದಿನ ಕಲೆಯಿಂದ ಕೊಂಡಿಗಳನ್ನು ಕಳಚಿಕೊಳ್ಳುತ್ತಿರುವ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು. ಅದರ ಪುನರುತ್ತಾನಕ್ಕಾಗಿ ತಾವು ದೇವಸ್ಥಾನದ ಆವರಣದಲ್ಲಿರುವ ಈ ಉಬ್ಬು ಚಿತ್ರಗಳ ಫೋಟೋ ತೆಗೆದು ಅದನ್ನು ಕ್ಯಾನ್ವಾಸಿನಲ್ಲಿ ಪುನಃ ರೂಪಿಸಿ ಜನರ ಗಮನ ಸೆಳೆಯುವ ಪ್ರಯತ್ನಕ್ಕೆ ತೊಡಗಿರುವುದನ್ನು ತಿಳಿಸಿದರು. ನಾನು ಬರುವಾಗಲೇ ಈ ನನ್ನ ಮೊದಲ ಗ್ಯಾಲರಿಯ ಭೇಟಿಯ ಬಗ್ಗೆ ಬ್ಲಾಗಿನಲ್ಲಿ ಬರೆಯಬೇಕೆಂದುಕೊಂಡಿದ್ದೆ..ಅದಕ್ಕಾಗಿ ಫೋಟೋ ತೆಗೆಯಲು ಹಿಂಜರಿಕೆಯಿಂದಲೇ ವೀಣಾ ಅನುಮತಿ ಕೇಳಿದೆ....ಬಹಳ ಸಂತೋಷದಿಂದಲೇ ಒಪ್ಪಿದರು. ಕಲಾವಿದರೆಂದರೆ ಅವರು ನಮ್ಮಂತಹ ಸಾಮಾನ್ಯರ ಜೊತೆಯಲ್ಲಿ ಬೆರೆಯುವುದಿಲ್ಲವೆಂದು ಅಂದುಕೊಂಡ ನನಗೆ ಇವರ ನಡವಳಿಕೆ ಬಹಳನೇ ಆಶ್ಚರ್ಯ ಆನಂದ ತಂದಿತು. ಅವರ ಬಯೋ ಡಾಟವೂ ಬೇಕೆಂದು ಹೇಳಿ ದೊಡ್ಡ ಸಂದರ್ಶನ ನಡೆಸುವವಳಂತೆ ಎಲ್ಲವನ್ನೂ ಕೇಳಿಕೊಂಡು ಬರೆದುಕೊಂಡೆ. ಇಷ್ಟೆಲ್ಲಾ ಆದ ನಂತರ ನನ್ನ ಗಮನ ಅಲ್ಲಿದ್ದ ಇಬ್ಬರು ಮಹನೀಯರ ಕಡೆ ತಿರುಗಿತು. ನೋಡಿದರೆ ಪರಿಚಿತರಂತೆ ತೋರುತ್ತಿದ್ದರು..ಇವರು ಕುದ್ರೋಳಿ ಗಣೇಶರಂತಿದ್ದಾರಲ್ಲವೇ ಎಂದು ...ಎರಡು ಮೂರು ಸಲ ಆಲೋಚಿಸುತ್ತಲೇ ನೀವು....ಗ...ಣೇಶ...ಕುದ್ರೋಳಿ....ಎಂದು ತಡವಡಿಸುತ್ತಲೇ ಅವರತ್ತ ನೋಡಿದಾಗ...ಅವರು ನಸುನಗುತ್ತಲೇ ಹೌದು ಅಂದರು. ಅಯ್ಯೋ ಇವರು ನನ್ನೊಂದಿಗೆ ಮಾತನಾಡುವುದು ಕನಸಾ ನನಸಾ? ಎಂದು ನನ್ನಲ್ಲೇ ಬಡಬಡಿಸಿದೆ. ಸರಾಗವಾಗಿ ನನ್ನನ್ನು ತಮ್ಮ ಮಾತುಕತೆಯಲ್ಲಿ ಸೇರಿಸಿಕೊಂಡರು ಅಲ್ಲದೆ ತಮ್ಮ ಜೊತೆಯಲ್ಲಿ ಫೊಟೋ ತೆಗೆಯಲು ಅನುಮತಿ ಕೊಟ್ಟರು ಮಾತ್ರವಲ್ಲದೆ, ತಾವೇ ವೀಣಾ ಮತ್ತು ನಾನು ಜೊತೆಯಲ್ಲಿ ನಿಂತ ಚಿತ್ರವನ್ನೂ ತೆಗೆದರು....ಮೊದಲೇ ಹೇಳಿದಂತೆ ಮತ್ತೊಬ್ಬರೂ ಅಲ್ಲಿದರು...ಈಗ ನನಗೆ ಬಹಳ ಧೈರ್ಯ ಬಂದಿತ್ತು. ಅವರನ್ನು ತಾವು ಸಹ ಕಲಾವಿದರೇ ಎಂದು ಪ್ರಶ್ನಿಸಿದೆ...ನಗುತ್ತಲೇ ಪ್ರಶಾಂತ್ ನಾನು...ನಿಮ್ಮ ಪರಿಚಯ ನನಗೆ ಚೆನ್ನಾಗಿ ಇದೆ....ನೀವು ಚಿಕ್ಕಂದಿನಿಂದ ನನ್ನನ್ನು ನೋಡಿದ್ದಿರಿ ಎಂದು ನನ್ನ ಹಳೆಯ ದಿನಗಳ ನೆನಪು ಕೊಟ್ಟ ಪ್ರಶಾಂತ್! ಒಟ್ಟಾರೆ ಡಿಸೆಂಬರ್ ೫ ನನ್ನ ಬಾಳಿನಲ್ಲಿ ಮತ್ತೊಂದು ತಿರುವಿಗೆ ನಾಂದಿ ಹಾಡಿತು. ವೀಣಾ ನನ್ನನ್ನು ಕಲಾವಿದರ ಕೂಟದಲ್ಲಿ ಸೇರಿಸಿ ಕೊಂಡರು ಮಾತ್ರವಲ್ಲದೆ ಡಿಸೆಂಬರ್ ೧೮ರಂದು ನಡೆಯುವ ಕಲಾಮೇಳದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.












ವೀಣಾ ಅವರು ಒಂದು ನಮ್ಮ ನಾಡಿನ ಅಪ್ರತಿಮ ಚಿತ್ರಕಲಾವಿದೆ ಖಂಡಿತ ಹೌದು...ಅದಕ್ಕಿಂತಲೂ ಅವರೊಳಗೆ ಇರುವ ಒಂದು ಅತ್ಯುತ್ತಮ ಚೇತನ, ಆತ್ಮವನ್ನು ಅನುಭವಿಸಿದೆ. ಅವರು ಮಹಿಳೆಯರು ಜೀವನದಲ್ಲಿ ಪ್ರತಿಯೊಂದು ಘಟ್ಟದಲ್ಲಿ ಪುರುಷನನ್ನೇ ಅವಲಂಬಿಸಿ ನಡೆಸುವ ಜೀವನದ ಬಗ್ಗೆ ಸ್ಪಂದಿಸುವ ರೀತಿ ನಿಜಕ್ಕೂ ಆಶ್ಚರ್ಯಕರವಾಗಿತ್ತು. ಮಹಿಳೆಯರ ಈ ರೀತಿಯ ಅವಲಂಬಿತ ಜೀವನ, ಪುರುಷರ ದಬ್ಬಾಳಿಕೆ ಇದರ ಬಗ್ಗೆ ಅವರ ಕಳಕಳಿ ಚಿತ್ರದಲ್ಲಿಯೂ, ಅವರ ಮಾತಿನಲ್ಲಿಯೂ ವ್ಯಕ್ತವಾಗುತಿತ್ತು. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಈ ಧ್ವನಿಗಳು ಅಡಗಿ ಹೋಗುತ್ತವೆ...
ವೀಣಾ ಶ್ರೀನಿವಾಸ್ ಅವರ ಕಿರು ಪರಿಚಯ!
ತಂದೆ ಯು. ಜೆ. ಕಾಮತ್ ಅವರು ನಿವೃತ್ತ ಬ್ಯಾಂಕ್ ಅಧಿಕಾರಿ. ತಾಯಿ ಸಖು ಕಾಮತ್...ಸರಳ, ಸದ್ಗುಣಗಳ ದಂಪತಿಗಳ ಸಂತಾನವಾದ ಇವರು ಸ್ವಾಭಾವಿಕವಾಗಿಯೇ ಈ ಉದಾತ್ತ ಗುಣಗಳನ್ನು ತಮ್ಮ ತಂದೆ ತಾಯಿಯರಿಂದ ಎರವು ಪಡಕೊಂಡಿದ್ದಾರೆಂದೆನಿಸುತ್ತದೆ. ತಂದೆಗೆ ಬ್ಯಾಂಕ್ನಲ್ಲಿ ಕೆಲಸವಿದ್ದುದರಿಂದ ಸಹಜವಾಗಿಯೇ ವೀಣಾ ಅವರು ತಮ್ಮ ವಿದ್ಯಾಭ್ಯಾಸವನ್ನು ಬೇರೆ ಬೇರೆ ಊರುಗಳಲ್ಲಿ ಪಡಕೊಂಡರು. ಪ್ರಾಥಮಿಕ ಕಲಿಕೆ ದೆಹಲಿಯ ಕನ್ನಡ ಶಾಲೆಯಲ್ಲಿ ನಡೆಯಿತೆಂದು ಅಭಿಮಾನದಿಂದ ಹೇಳ್ಕೊಂಡರು. ಹತ್ತನೇ ತರಗತಿ ಉಡುಪಿಯಲ್ಲಿ, ೧೧,೧೨ ನ್ನು ಪುನಃ ದೆಹಲಿಯಲ್ಲಿ ಮಾಡಿದರು. ಬೆಂಗಳೂರಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆಯುತ್ತಿರುವಾಗಲೇ ವಿವಾಹ ನಡೆಯಿತೆಂದರು. ಈ ಮಧ್ಯೆ ನನಗೆ ಅವರು ತಮ್ಮ ಬಾಲ್ಯದಿಂದಲೇ ಚಿತ್ರ ಕಲೆ ಕಲಿಯುತ್ತಿದ್ದರೇನೋ ಎಂದು ಕುತೂಹಲ..೯ನೇತರಗತಿಯಲ್ಲಿದ್ದಾಗ ಸ್ವಲ್ಪ ಸಮಯ ಕಲಿತ ಮಾಹಿತಿ ಕೊಟ್ಟರು. ಸರಿ, ಹಾಗಾದರೆ ಇವರು ಯಾವಾಗ ನುರಿತ ಕಲಾವಿದೆಯಾಗಿ ರೂಪುಗೊಂಡರು ಎಂದು ನನ್ನ ಪ್ರಶ್ನೆ! ಅವರ ಉತ್ತರ ನನ್ನನ್ನು ಅಚ್ಚರಿಗೆ ನೂಕಿತು. ಮದುವೆಯಾದ ಮೇಲೆ ತಮ್ಮ ಮಾವನರು ಎಂ ಆರ್ ಪಾವಂಜೆ ಬಳಿ ಕಳುಹಿಸಿದರು!!!! ಮದುವೆಯಾದ ಮೇಲೆ ನನ್ನ ಕಲಾಜೀವನಕ್ಕೆ ವಿರಾಮ ಚಿನ್ಹೆ! ಇವರ ಕಲಾಜೀವನಕ್ಕೆ ನಾಂದಿ. ವಿಶೇಷವೆಂದರೆ ಇವೆರಡೂ ೧೯೯೦-೯೧ರಲ್ಲಿ ನಡೆದದ್ದು...ನನ್ನ ವಿವಾಹ ’೯೦ರಲ್ಲಿ ನಡೆಯಿತು..ಅವರದು ’೯೧ರಲ್ಲಿ...ಹೋಗಲಿ, ಅವರವರು ಪಡಕೊಂಡು ಬಂದದ್ದು!
ವೀಣಾ ಅವರು ತಮ್ಮ ಅತ್ತೆ, ಮಾವ, ಪತಿ ಶ್ರೀನಿವಾಸ್ ಅವರ ಪ್ರೋತ್ಸಾಹದಿಂದ ಉತ್ತೇಜಿತರಾಗಿ ಕಲೆಯನ್ನು ಮತ್ತಷ್ಟು ಶ್ರೀಮಂತ ಮಾಡತೊಡಗುವುದರಲ್ಲಿ ಮಗ್ನರಾಗಿದ್ದಾರೆ. ಇವರ ಮಗಳು ತಪಸ್ಯಾತನ್ನ ತಾಯಿಯ ಹೆಜ್ಜೆಯಲ್ಲೇ ನಡೆಯುತ್ತಿದ್ದಾಳೆ ಅನ್ನುವುದು ಬಹಳ ಸಂತೋಷದ ಸಂಗತಿ!