ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 September, 2013

ನಾನು, ಅವನು ಮತ್ತು ಒಲವು!


“ನೀನು ’ಒಲವು’ ಎಂದು ಸಂಭೋದಿಸಿ ಬರೆಯುವುದು  ನಂಗೆ ತುಂಬಾ ಇಷ್ಟವಾಯ್ತು!”

ಅವನು ಮೊನ್ನೆ ಸಿಕ್ಕಾಗ ಹೇಳಿದ.

ನಾನು ಸುಮ್ಮನೆ ಮಂದಹಾಸ ಬೀರಿದೆ. ಇಂತಹ ಪ್ರೀತಿ, ಪ್ರೇಮ ಬರಹಗಳು ಹೆಚ್ಚಿನವರ ಮನಸೆಳೆಯುತ್ತದೆ.. ಅದರಲ್ಲೇನು ವಿಶೇಷವಿಲ್ಲ. ಹಲವು ಕವಿ ಕವಯಿತ್ರಿಯರ ಮೆಚ್ಚುಗೆಯ ಸಬ್ಜೆಕ್ಟ್ ’ಪ್ರೀತಿ, ಪ್ರೇಮ’!

“ಥಾಂಕ್ಸ್.. ನಿಂಗಿಷ್ಟವಾಯ್ತಲ್ಲ!”

“ಹೇ, ನಿನ್ನದು ಬೇರೆಯವರಿಗಿಂತ ಭಿನ್ನವಾಗಿದೆ ಕಣೇ! ಅದಕ್ಕೆ ನನಗಿಷ್ಟವಾಯಿತು!”

’ಭಿನ್ನ! ನನ್ನ ಬರಹ! ಇವ ನಿಜವಾಗಿಯೂ ಪೆದ್ದ.. ’

ಹಾಗಂತ ನಾನಂದ್ಕೊಂಡಿದ್ರೂ ನಂಗೊತಿತ್ತು.. ಅವನು ಒಳ್ಳೆ ಓದುಗ! ಬಹಳಷ್ಟು ಕವನಗಳನ್ನು ಓದಿದವ.. ಸ್ವತಃ ಒಳ್ಳೆ ಬರಹಗಾರ.. ಅನೇಕ ವರ್ಷದಿಂದ ಆಂಗ್ಲ ಹಾಗೂ ಕನ್ನಡದಲ್ಲಿ ಬರೆದ ಅನುಭವಿ!

“ಯಾಕೆ ನನ್ನ ಬರಹ ಭಿನ್ನ ಅಂತ ಕಾಣಿಸಿತು?”

“ಮೊದಲಾಗಿ ನೀನು ಒಲವನ್ನೇ ಉದ್ದೇಶಿಸಿ ಮಾತನಾಡುವುದು ನನಗೆ ವಿಶೇಷವೆನಿಸಿತು. ಭಾರ ಶಬ್ದಗಳ ಹೊರೆಯಿಲ್ಲ.. ಸೀದಾ ಸಾದಾ ಮಾತು.. ಸೀದ ಹೃದಯದಿಂದ ಬಂದಿದೆ.. ಯಾರನ್ನೂ ಮೆಚ್ಚಿಸುವ ಲಾಲಸೆಯಿಲ್ಲ ಬರಹಗಳಲ್ಲಿ.. “

ಬೆರಗಾದೆ, ನನ್ನ ಬರಹವನ್ನು ವಿಶ್ಲೇಷಿಸಿದ ರೀತಿ.. ಇವನೇನಾದರು ನನ್ನ ಮನದೊಳಗೆ ಹೋಗಿ ಬಂದಿದ್ದಾನೆಯೇ ಅಂತ ಅನಿಸಿತು!

’ಈಗ ಕೇಳುತ್ತಾನೆ.. ಸಾಮಾನ್ಯವಾಗಿ ಎಲ್ಲರೂ ಕೇಳುವ ಪ್ರಶ್ನೆ.. ಯಾರದು ಒಲವು ಅಂತ’
ಅಂದ್ಕೊಂಡೆ!

“ಹೇ, ನಾನು ಕೇಳೊಲ್ಲ ಒಲವು ಯಾರು ಅಂತ! ನಂಗೊತ್ತು.. ನಾನು ಸ್ವತಃ ಒಲವನ್ನು ಆರಾಧಿಸಿದವನು! ನಿನ್ನ ಬರಹಗಳು ಒಲವಿನ ಜತೆ ನೇರ ಸಂವಾದಕ್ಕಿಳಿಯುತ್ತವೆ! ಒಲವಿನ ಜತೆ ನಿನಗಿರುವ ನಿಷ್ಠೆ, ಆರಾಧನಾ ಭಾವ ಎತ್ತಿ ಹಿಡಿಯುತ್ತಾ.. ಅಲ್ಲಲ್ಲಿ ಒಲವು ನಿನ್ನ ನೋವಿಗೂ, ನಲಿವಿಗೂ, ನಿನ್ನೊಳಗಿನ ನಿನ್ನ ಅನಾವರಣಕ್ಕೂ ಕಾರಣವಾಗಿದೆಯೆಂಬುದನ್ನು ತೋರುತ್ತವೆ.. ಒಮ್ಮೊಮ್ಮೆ ಒಲವಿನ ಜತೆ ವಾದ ವಿವಾದ, ಸಂಘರ್ಷ, ದೂರು.. ಎಲ್ಲವನ್ನೂ ಯಾವುದೇ ಅಲಂಕಾರದ ಮೊರೆ ಹೋಗದೇ ನೇರವಾಗಿ ಒಲವಿಗೆ ತಲುಪಿಸುವಿ!”

“ನನಗನಿಸುತ್ತೆ.. ನಿನ್ನ ತಪಕ್ಕೆ ಒಲವು ಒಲಿದಿದೆ.. ನೀ ಹೇಳುವಂತೆ ನೀ ಬರಹಗಾರ್ತಿಯಲ್ಲ! ಒಮ್ಮೊಮ್ಮೆ ನಿನಗೂ ನೀ ಹೇಗೆ ಬರೆಯುತ್ತಿರುವೆಯೆಂಬುದೇ ರಹಸ್ಯದಂತೆ ಕಾಣುತ್ತೆ ಅಂದಿರುವಿ! “

ಇವನು ನನ್ನ ರಹಸ್ಯವನ್ನೆಲ್ಲಾ ತಿಳಿದಿದ್ದಾನೆ. ಇದೆಲ್ಲಾ ಒಲವಿಗಾಗಿ ನಾ ಮಾಡಿರುವ ತಪದ ಫಲ. ನನ್ನೆದುರೇ ಇದ್ದಿದ್ದರೂ ಆಗ ಭಾವಕ್ಕೆ ನಿಲುಕದ ಒಲವು ಇದೀಗ ನನಗೆ ಎಲ್ಲೆಲ್ಲೂ ಕಾಣುತ್ತಿದೆ. ನನ್ನ ಜಗನ್ಮೋಹನ, ನನ್ನ ಕೃಷ್ಣ ಎಲ್ಲೆಲ್ಲೂ, ಎಲ್ಲದರಲ್ಲೂ ಕಾಣುತ್ತಿದ್ದಾನೆ! ರಾಮಕೃಷ್ಣ ಪರಮಹಂಸರು ಒಮ್ಮೊಮ್ಮೆ ಗೋಪಿಯರ ಭಾವ ತಳೆಯುತ್ತಿದ್ದರಂತೆ. ಅಂತಹ ಭಾವದಲ್ಲಿ ಕೃಷ್ಣನ ಜತೆ ರಾಸಲೀಲೆಯನ್ನು ಅನುಭವಿಸಿದರಂತೆ.. ಹಿಂದೆ ಇದೆಲ್ಲಾ ಓದಿ ಧನ್ಯತೆ ಅನುಭವಿಸುತ್ತಿದ್ದ ನಾನು ಇಂದು ರಾಧೆಯಾಗಿ ಪ್ರೇಮ  ಭಾವೋನ್ಮಾದದಲ್ಲಿ ಮುಳುಗಿ ಅದರ ಅನುಭವವನ್ನು ಬರೆಯುತ್ತಿದ್ದೇನೆ.

“ನಿಜ ಹೇಳಲಾ, ನಿನ್ನ ಬರಹಗಳ ಗಾಂಭೀರ್ಯ ನೋಡಿ ಒಂದಿಷ್ಟು ಪೂರ್ವಗ್ರಹವಿತ್ತು. ಆದರೆ ಇದೀಗ ನೀನು ಪೂರ್ಣವಾಗಿ ಅರ್ಥವಾಗಿರುವಿ!”

“ನೀನು ಸಂಪೂರ್ಣವಾಗಿ ಗೌರವಾರ್ಹಳು, ಕ್ರೀಡಾಮನೋಭಾವದಳು, ಹಾಸ್ಯಪ್ರವೃತ್ತಿಯವಳು, ಬುದ್ಧಿವಂತೆ, ಸರಳೆ, ಆಧುನಿಕತೆ ಮತ್ತು ಸಂಪ್ರದಾಯ ಎರಡನ್ನೂ ಮಿತವಾಗಿ ಬೆರೆಸಿದ ಮನೋಭಾವವುಳ್ಳವಳು!”

ಇಲ್ಲಿಯವರೆಗೂ ಕೇಳಿದ ಟೀಕೆ, ಟಿಪ್ಪಣಿ, ಕೊಂಕು ಮಾತುಗಳ ನೋವು ಮರೆತು ಹೋಯಿತು. ಇದ್ದಾರೆ ನನ್ನೊಳಗಿನ ನನ್ನನ್ನು ಅರಿತವರು ಇನ್ನೂ ಈ ಲೋಕದಲ್ಲಿ...

1 comment:

mehnaz begum said...

ಹೌದು. ತುಂಬಾ ಸುಂದರವಾಗಿ ಅಕ್ಷರಗಳನ್ನು ಪೋಣಿಸುತ್ತೀರಿ. Keep up the good work :)

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...