ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 February, 2014

ಸುಭಾಷಿತ

ಕೇಳು ಒಲವೇ,

ಬಿಳಿ ಹಳದಿ ಲೋಹದ ಕಡಗವಲ್ಲ,
ಕಂಠವನು ಸುತ್ತಿದ ಕೆಂಪು ನೀಲಿ ಕಲ್ಲಿನ ಕಂಠಿಯೂ ಅಲ್ಲ,
ಸುಗಂಧ ಸಾಬೂನಿನ ಜಳಕವೂ ಅಲ್ಲ,
ಮುಡಿಗೇರಿಸುವ ಮಲ್ಲಿಗೆಯ ಅಟ್ಟಿಯೂ ಅಲ್ಲ,
ಬಣ್ಣಬಳಿದು ಸಿಂಗರಿಸಿದ ಕೇಶವೂ ಅಲ್ಲ,
ಸುಂದರ ಪದಗಳ, ತನು ಮನಕೂ ಹಿತವೀವ ಮಾತುಗಳೇ ಎಲ್ಲ
ಬಾಹ್ಯ ಅಲಂಕಾರಗಳಿಗೂ ತೋರಣ
ಅಲಂಕಾರಗಳಾದರೋ ನಶಿಸಿಹೋಗುವವು ಕ್ರಮೇಣ!

ಕೇಯುರಾಃ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾ |
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂಘ್ರಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೆ |
ಕ್ಷೀಯಂತೆ~ಖಿಲಭೂಷಣಾನಿ ಸತತಂ ವಾಗ್ಭೂಷಂ ಭೂಷಣಮ್ ||

ಹರ ಹರ ಮಹಾದೇವ..


ನುಡಿ ಮನವೇ ಶಿವನ ನಾಮಾವಳಿ |
ಇದುವೆ ಪರಮ ತತ್ವದ ಸಾರವು ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

ದೇವನ ನಾಮವು ಹೃದಯದಿ ತುಂಬಿ |
ಚಿನುಮಯನಾದೆನು ನಿನ್ನನು ನಂಬಿ |
ಜನುಮ ಜನುಮಗಳ ಭವಣೆಯ ಬೇಗೆ |
ಮರಳಿ ಮರಳಿ ಬಾರದು ಬಳಿಗೆ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

ಚಂದ್ರಶೇಖರ ಸಲಹೋ ಎನ್ನುತ |
ವಂದಿಸಿ ಕೂಗಲು ಓಡುತ ಬರುವ |
ಭವಸಾಗರವ ದಾಟಿಸದಾವ |
ಮರಳಿ ಮರಳಿ ಬಾರದು ಬಳಿಗೆ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ ||
|| ಓಂ ನಮಃ ಶಿವಾಯ || ಪಲ್ಲವಿ ||

-      ಅಮ್ಮನ ಭಜನೆಗಳ ಸಂಗ್ರಹದಿಂದ


26 February, 2014

ವಚನ

ಕಡೆಗೀಲಿಲ್ಲದ ಬಂಡಿ ಹೊಡೆಗೆಡವುದ ಮಾಬುದೇ
ಕಡೆಗೀಲು ಬಂಡಿಗಾಧಾರ ಕಡುದರ್ಪವೇರಿದ ಒಡಲೆಂಬ
ಬಂಡಿಗೆ ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣ ರಾಮನಾಥ ||


|| ಓಂ ನಮಃ ಶಿವಾಯ ||

ಸುಭಾಷಿತ

ನಾವಾಡುವ ಭಾಷೆಯನೂ
ಪಶುಗಳು ಅರಿವುವು
ಪಾಲನೆ ಮಾಡುವುವು
ಹಾವಭಾವಗಳ ಫಲವದು!

ನಾವೇನೂ ಹೇಳದಿದ್ದರೂ
ಪಂಡಿತರು ಗ್ರಹಿಸುವರು
ಮನವನು ಓರೆಗ್ಹಚ್ಚುವವರು
ಜ್ಞಾನದ ಫಲವದು!

ಉದೀರಿತೋಖರ್ಥ ಪಶುನಾಪಿ ಗ್ರಹ್ಯತೆ |
ಹಯಾಶ್ಚ ನಾಗಾಶ್ಚ ವಹಂತಿ ದೇಶಿತಾಃ ||

ಅನುಕ್ತಮಪೂಹ್ಯತಿ ಪಂಡಿತೋ ಜನಃ |
ಪರೇಂಗಿತ ಜ್ಞಾನಫಲಾ ಹಿ ಬುದ್ಧಯಃ ||


ಅಧಿಕಪ್ರಸಂಗಿ ಕಿವಿ.. ನನ್ನದು!


“ಅಲ್ವೆ, ಅದ್ಯಾಕೆ ಸಹಸ್ರನಾಮ ಕೇಳ್ಕೊಂಡು ಸುಮ್ಮನಿರುತ್ತಿಯಾ? ನಿನ್ನ ಕಾರಣಗಳನ್ನು ಹೇಳ್ಬಾರ್ದಾ!”

ಇವಳ ಮುಖದಲ್ಲಿ ವಕ್ರನಗೆ..

“ಮೊದ್ಲು ಬರೇ ಶತನಾಮಾವಳಿ ಇತ್ತು.. ಕಾರಣ ಕೊಡಲು ಹೋದದಕ್ಕೆ ಈಗ ಸಹಸ್ರನಾಮ, ಈಗಲೂ ಅದೇ ತಪ್ಪನ್ನು ಪುನರಾವರ್ತಿಸಿದರೆ ಕೋಟಿನಾಮಾವಳಿ.. ಇದೆಲ್ಲಾ ಬೇಕಾ ನಂಗೆ !”

:-(

#ಅಧಿಕಪ್ರಸಂಗಿ_ಕಿವಿ_ಕೇಳಿದ್ದು

25 February, 2014


ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ?|
ದಿನಪನದೆ? ಚಂದ್ರನದೆ? ನೀರಿನದೆ? ನಿನದೆ? |
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ? ನೋಡು  |

ಗುಣಕೆ ಕಾರಣವೊಂದೆ? ಮಂಕುತಿಮ್ಮ ||

ಲೆಕ್ಕಮಾಡೊಲ್ಲೆ ನನ್ನ ನಿನ್ನ ಅಳತೆ ಮಟ್ಟ
ಅಂದವನು ಸರಿಸಮ ಪಾತ್ರೆಯನೂ ತರಲಿಲ್ಲ
ಅದ್ಹೇಕೆ ನನ್ನನು ದೊಡ್ಡ ಪಾತ್ರೆಯಲಿಟ್ಟೆ
ಮತ್ತು ನಿನ್ನನು ಚಿಕ್ಕ ಪಾತ್ರೆಯಲ್ಲಿಟ್ಟೆ
ನನ್ನತ್ತ ನೋಡಿ ಕಿರು ನಗೆ ನಕ್ಕೆ
ನಾನು ಬೆಪ್ಪು ಪೆಚ್ಚು ಎರಡೂ ಆದೆ!

24 February, 2014

ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ|
ಧರ್ಮ ಅರ್ಥ ಕಾಮ ಮೋಕ್ಷ ಪಥವ ಎಮಗೆ ತೋರಲಿ|| ಪಲ್ಲವಿ||

ಜ್ಞಾನದುದಯ ಭಾಗ್ಯದುದಯ ನಮಗೆ ನಿತ್ಯ ದೊರಕಲಿ|
ಸತ್ಯ ಧರ್ಮ ನ್ಯಾಯ ನಡತೆ ತಿದ್ದಿ ನಮ್ಮ ಬೆಳೆಸಲಿ||೧||

ಜಾತಿಮತದ ಬೇಧಭಾವ ಎಮ್ಮ ಬಿಟ್ಟು ತೊಲಗಲಿ|
ಒಂದೇ ತಾಯ ಮಕ್ಕಳೆಂಬ ಶುದ್ಧ ಭಾವ ಬೆಳೆಯಲಿ||೨||


ನನ್ನ ಪ್ರೈಮರಿ ಶಾಲೆಯಲ್ಲಿ ಹಾಡುತ್ತಿದ್ದ ಹಾಡು ಇದು. “ದೋಣಿ ಸಾಗಲಿ ಮುಂದೆ ಹೋಗಲಿ” ದಾಟಿಯಲ್ಲೇ ಹಾಡುತ್ತಿದ್ದೆವು! 

23 February, 2014

ಗೊರಕೆ ಹೊಡೆಯುವ ನಲ್ಲಿರುಳು!

ಗೊರಕೆ ಹೊಡೆಯುವ ನಲ್ಲಿರುಳು!
----------------------------

ಜೀಂವ್ ಜೀಂವ್..
ಜೀರುಂಡಿನ ಕೂಗು ಆತ್ಮ ಗೆಳತಿಗಾಗಿ

ಟಪ್ ಟಪ್..
ಬೆಳಕಿನ ಒಲವಿಗೆ ಹಂಬಲಿಸುವ ಪತಂಗ

ಕುಲು ಕುಲು..
ನಗುವ ಚುಕ್ಕಿಗಳ ಹಾಸ್ಯ ಗೋಷ್ಠಿ

ಪಿಸಿ ಪಿಸಿ..
ಚಂದ್ರನ ಕಿವಿಯಲಿ ಚಂದ್ರಿಕೆಯ ಬಯಕೆಗಳ ಧಾಳಿ

ಟೊರ್ ಟೊರ್..
ಕಪ್ಪೆಗಳ ಏಕತಾಳ ತಂಬೂರಿ

ಟಣ್ ಟಣ್..
ರಾಧಾ ಮೋಹನರ ಕೋಲಾಟ ನನ್ನಂಗಣದಲ್ಲಿ

ಝಳ ಝಳ..
ನೇತ್ರಾವತಿಯ ಸರಸಾಟ ದಡದಲಿರುವ ಬಿದಿರ ಕೋಲ ಜತೆ

ಜೋಜೋ ಜೋಜೋ..
ನನ್ನ ಹಾಡಿಗೆ ನಲ್ಲಿರುಳಿನ ಲಯಬದ್ದ ಗೊರಕೆ!

ಮನದ ಮಾತು..

ಮನದ ಮಾತು..
-------------

ಏನು, ಶಿವರಾತ್ರಿ ಗಾಳಿ ಜೋರು ಬೀಸ್ತಿದೆ! “
ಇವಳೊಬ್ಬಳದು ವ್ಯಂಗ್ಯ ಬಾಕಿ ಇತ್ತು. ಸರಿ, ನೀರಿಗಿಳಿದಾಗಿದೆ, ಇನ್ನು ಚಳಿ ಅಂತ ನೆವನ ಗಿವನ ಯಾಕೆ!
“ಹೌದು ಕಣೆ! ಇನ್ನೇನಾದ್ರು ಉಪದೇಶ?”
“ಅಲ್ವೇ, ಏನು ಗೊತ್ತಿದೆಯಂತ ಅವರಿವರ ಜತೆ ಪೈಪೋಟಿಗಿಳಿತಿಯಾ?”
“ಹ್ಮ್.. ನಿಂಗೆ ನಾ ಹೇಳೋದೆಲ್ಲ ಕೇಳುವಷ್ಟು ತಾಳ್ಮೆ ಇದೆಯಾ?”
“ಹೇಳ್ಲಿಕ್ಕೆ ಸುರು ಮಾಡು.. ನೋಡುವಾ!”
1. ನಾ ಬರೆದುದನ್ನು ಎಂದೂ ಸಾಹಿತ್ಯ ಅಂತ ಪರಿಗಣಿಸಿಲ್ಲ.. ಬರವಣಿಗೆ ನನಗೆ ಒಂದು ಥೆರಪಿ!
2. ಒಲವು.. ಪ್ರೀತಿ, ನದಿ, ಜಲಪಾತ, ಹಸುರು, ಕ್ರಿಮಿ, ಕೀಟ, ಮಿಗ, ಖಗ..  ಭಾವುಕತೆ.. ಜತೆಗೆ ನನ್ನ ಬದುಕಿನಲ್ಲಿ ಹಾಸುಕೊಕ್ಕಾದ ಆತ್ಮೀಯರು.. ಇವುಗಳ ಸುತ್ತಲೂ ನನ್ನ ಬದುಕು ಮತ್ತು ಅವರೆಲ್ಲ ನನಗೆ ಆಮ್ಲಜನಕದ ಹಾಗೆ.. ಒಮ್ಮೆ ಬದುಕಲ್ಲಿ ಪ್ರವೇಶಿಸಿದವರು ಮತ್ತೆ ಹೊರಹೋಗಲಾರರು..  ಹವಮಾನದ ಬದಲಾದಂತೆ ನಾ ಬದಲಾಗೊಲ್ಲ!
3. ಸಣ್ಣವಳಾಗಿನಿಂದಲೂ ಕೋಗಿಲೆ ಅತೀ ಪ್ರಿಯವಾಗಿದ್ದರೂ, ಕಳೆದ ವಸಂತ ಋತುವಿನಲ್ಲಿ ನನ್ನ ಬರವಣಿಗೆಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿತು.
4. ಬರೆಯುತ್ತಾ ಮನದೊಳಗಿನ ಸಾಂದ್ರತೆ ಕಡಿಮೆಯಾಯಿತು.. ಹರಳುಗಟ್ಟಿದ ಭಾವಗಳಿಗೆ ಇಲ್ಲಿನ ದಿನನಿತ್ಯದ ಓದಿನ ಬಿಸಿ.. ಮತ್ತೆ ಕರಗದೇ ಇದ್ದಿತೇ!
5. ಅಂತರ್ಜಾಲದ ಕಿಟಿಕಿಯ ಮೂಲಕ ಸಾಹಿತ್ಯದ ವಿವಿಧ ಪ್ರಕಾರ, ಉದ್ದಗಲ, ಆಳದ ಅನುಭೂತಿ ಸ್ವರ್ಗದ ಬಾಗಿಲಿಗೆ ತಲುಪಿಸಿತು.. ಆದರೆ ನನ್ನ ಬರವಣಿಗೆ ಸ್ವರ್ಗದ ಬಾಗಿಲನ್ನೇ ತೆರೆಸಿತು!
6. ಬಹುಶಃ ಆರೇಳು ತಿಂಗಳ ಹಿಂದೆ ಹೈಕು ಪರಿಚಯ.. ಮೊದಲ ನೋಟಕ್ಕೆ ಅನುರಾಗ.. ಅದು ಪ್ರಕೃತಿಗೆ ಅತೀ ಹತ್ತಿರವೆಂದು ಮತ್ತಿಷ್ಟು ಹೆಮ್ಮೆ.. ಆದರೆ ಅರ್ಥವಾಗಿರಲಿಲ್ಲ. ಬಿಟ್ಟು ಕೊಡುವ ಜಾತಿಯವಳಲ್ಲ.. ಓದುತ್ತಿದ್ದೆ.. ಬರೆಯುತ್ತಿದ್ದೆ.
7. ಬಹುಶಃ ಮುಖ ಪುಸ್ತಕದಲ್ಲಿ ವ್ಯಾಪಕವಾಗಿರುವ ಎಲ್ಲಾ ಪ್ರಕಾರದ ಸಾಹಿತ್ಯದಿಂದಲೇ ನಾನು ಹೆಚ್ಚಿನದನ್ನು ಕಲಿತೆ. ನನ್ನ ಅಂಬೆಗಾಲಿನ ಹೆಜ್ಜೆಗೆ ಬಹಳಷ್ಟು ಸ್ನೇಹಿತರ ಸಹಾಯ ಹಸ್ತದ ನೆರವನ್ನು ನಾನು ಯಾವತ್ತೂ ಮರೆಯಲಾರೆ.
8. ರೂಮಿ.. ನನ್ನ ಹರೆಯದ ದಿನಗಳಲ್ಲೇ ಹತ್ತಿರವಾದವ.. ಆದರೆ ಅವನನ್ನು ಅರ್ಥಮಾಡಿಕೊಂಡದ್ದು ಈಗ. “ಅರೇ, ಅದ್ಹೇಗೆ ನೀ ನನ್ನ ಮನ ಓದಿದಿಯಾ? “ ಅಂತ ನಾನೇ ಅವನಿಗೆ ಹೇಳ್ತಿರ್ತೇನೆ! ಆದರೂ ನನ್ನ ಬರಹಗಳಿಗೆ ಅವನು ಸ್ಫೂರ್ತಿ ಅಂತಲೇ ಹೇಳ್ತೇನೆ ಹೂರತು ಎಂದೂ ನನ್ನದೇ ಅಂತ ಡಂಗುರ ಹೊಡಿಯೊಲ್ಲ. ಬೇರೆಯವರ ಭಾವ, ಶಬ್ದ ಬಳಸಿ ಮೆಚ್ಚುಗೆ ಪಡೆಯುವ ಇರಾದೆ ನನ್ನಲ್ಲಿ ಇಲ್ಲ.
9. ಕೊನೆಯದಾಗಿ, ನನ್ನ ಕಾಗುಣಿತ ತಪ್ಪುಗಳನ್ನಾಗಲಿ, ಅಥವಾ ಅನರ್ಥವಾಗುವ ಶಬ್ದ ಬಳಕೆಯನ್ನಾಗಲಿ ತಿದ್ದಿಕೊಳ್ಳಲು ಯಾವತ್ತೂ ತಯಾರು... ಭಾವವನ್ನು ಅಲ್ಲ! ಇಷ್ಟು ಹೇಳಿಯೂ ನಿನಗೆ ನನ್ನ ಹೈಕು, ರೂಮಿ, ಒಲವು ಅಥವಾ ಸುಭಾಷಿತ ಕವನ.. ಅಸಮ್ಮತಿ ಇದ್ದರೆ.. ಒಂದೋ ನನ್ನ ಬರಹಗಳನ್ನು ಓದಬೇಡ. ಇಲ್ಲಾ ಕಾಣದಂತೆ ಇರುವ ಸೌಲಭ್ಯವನ್ನು ಪ್ರಯೋಗಿಸು!


ಎಲ್ಲವೂ ಒಲವಿನ ಪ್ರಭಾವ!

ಒಲವೇ,

ನಾ ನಿನ್ನ ಕೈಗೆ ಕೈ ಹೊಸೆದು ಕಾಲಿಟ್ಟ ಕ್ಷಣದಲಿ
ಬಾಡದ ಹೂಗಳ ನಗೆಯಬ್ಬರ ತೋಟದಲಿ
ಸತತ ಗಾನ ಮೇಳ ಹಸಿರು ತರುಗಳಲಿ

22 February, 2014

ಹಾಯ್ಕ


ಚಂದಿರ ನಕ್ಕ
ಸ್ತಬ್ಧ ದೋಣಿಯಲ್ಲೀಗ
ಆವೇಗದುಸಿರು!

21 February, 2014

ಹಾಯ್ಕ..


ವೈಶಾಖ ವರ್ಷ
ಮರೆಯಲಿಲ್ಲ ಭಾಷೆ
ನಕ್ಕಿತಾಗಸ!

ಹಾಯ್ಕ..

ಚಿನ್ನದ ಎಲೆ
ಅಪ್ಪಿದೆ ಶಿಶಿರನ
ಉದುರೊಲ್ಲವು!

ತನ್ಮಯತೆಗೆ ಸಾಕ್ಷಿ..

ಒಲವೇ,

ನನ್ನೊಳಗೊಂದು ಝುಳು ಝುಳು ಹರಿಯುವ ನದಿ
ನಿನಗೋಲೆಯನು ಬರೆಯುವಾಗಲೆಲ್ಲ ಉದ್ವೇಗವೇರಿ
ನೆತ್ತಿಗೇರಿ ನನ್ನೊಳಗಿನ ತನ್ಮಯತೆಗೆ ಆಗುವಳು ಸಾಕ್ಷಿ!

ಸ್ನೇಹದಲೂ ಬೇಧ.. !!!

ಪುಟ್ಟ ಹಣತೆಯಲಿ ಬೆಳಗುವ ಮಿಣಿ ಮಿಣಿ ಬೆಳಕಿನ ಸ್ವಗತ,

ಎಂಥ ಗೆಳೆಯನು ಇವನು, 
ಈ ಮರುತನು!
ಪುಟ್ಟ ಹಣತೆ ನಾ,
ಮನೆ-ಮನೆ ಬೆಳಗುವ
ನನ್ನ ಬದುಕನೇ ನಂದಿಸುವನು;
ಹಸಿರು ಕಬಳಿಸುವ ಬೆಂಕಿಗೋ 
ಮತ್ತಿಷ್ಟು ಜೀವ ತುಂಬುವನು!




ವನಾನಿ ದಹತೇ ವಹ್ನೇಃ ಸಖಾ ಭವತಿ ಮರುತಃ|

ಸ ಏವ ದೀಪನಾಶಾಯ ಕೃಶೇ ಕಸ್ಯ ಅಸ್ತಿ ಸಹೃದಂ||

20 February, 2014

ಸಂತೃಪ್ತಿ ಕೊಡುವ ಅನುಬಂಧ!

ಸಂತೃಪ್ತಿ ಕೊಡುವ ಅನುಬಂಧ!
----------------------------


“ಶೀಲಾ, ಆರಾಮಾಗಿದ್ದಿರಾ? ಏನು ನಿಮ್ಮ ಸುದ್ದಿಯೇ ಇಲ್ಲ.. ಸ್ಟೇಟಸ್‍ಗಳು ತುಂಬಾನೇ ಕಡಿಮೆಯಾಗಿವೆ! ಫೋಟೊಗಳೂ ಕಾಣ್ತಿಲ್ಲ.. ಪೈಂಟಿಂಗ್ ಇಲ್ಲ.. ಏನು ಕತೆ?”


ಹೀಗೇ ಒಂದೇ ಸಮನೆ ಉಸಿರುಬಿಡದೇ ಪ್ರಶ್ನೆಗಳ ಸುರಿಮರೆಗೈದರು ನನ್ನ ಫೇಸ್ ಬುಕ್ ಗೆಳತಿ!


’ಅರೇ, ಹೌದಲ್ಲ! ದಿನಕ್ಕೆ ಐದಾರು ಸ್ಟೇಟಸ್ ಹಾಕ್ತಿದ್ದವಳು.. ಆದರೆ ನನ್ನ ದಿನಚರಿ ಏನೂ ಬದಲಾಗಿಲ್ಲ. ಹಿಂದಿನ ಹಾಗೆ ಬೆಳಿಗ್ಗೆ ಹಿತ್ತಲು ಸುತ್ತುವುದು.. ಹ್ಮ್, ಚಿಟ್ಟೆಗಳ ಸೀಸನ್ ಅಲ್ಲ, ಆದರೂ ಇವತ್ತೇ ತಾನೇ ಕೋಗಿಲೆ ಜತೆಗೂ ಮಾತನಾಡಿದ್ದೆ. ಬುಲ್ ಬುಲ್, ರಾಬಿನ್, ಅಳಿಲು.. ಹೇಗೂ ಕಂಪನಿ ಕೊಡ್ತಿದ್ದಾರಲ್ಲ!

ಹಾ! ನನ್ನ ಸೋದರ ಸೊಸೆ! ಚಿಕಲ (ಶೀಲಕ್ಕ) ಅಂತ ನನ್ನನ್ನು ಅರೆ ಘಳಿಗೆ ಬಿಡಲು ಒಪ್ಪದ ನನ್ನ ಮುದ್ದು! ಬೆಳಗಿನ ಸುತ್ತು ಅವಳ ಜತೆಗೇ.. ಹಾಗಾಗಿ ಕೆಮರಾ ಕೊಂಡೊಯ್ಯೊಲ್ಲ! ಮತ್ತೆ ಅವಳನ್ನು ಅವಳಮ್ಮಳ ಕೈಗೆ ಒಪ್ಪಿಸಿ ತಪ್ಪಿಸಿಕೊಂಡು ಬರಲು ಹರಸಾಹಸ ಮಾಡಬೇಕು!’

ನಸುನಕ್ಕೆ,

“ಹೌದುರಿ, ನನ್ನ ಸೋದರ ಸೊಸೆಯ ಒಲವು ನನ್ನನ್ನು ಪೂರ್ಣವಾಗಿ ಕವಿದು ಮಂಕುಮಾಡಿದೆ! ಬರೆಯುತ್ತಿದ್ದೇನೆ, ಎಫ್ ಬಿ ಗೆ ಮಾತ್ರ ಹಾಕುವಾಗ ರಾತ್ರಿ ಎಂಟು ಗಂಟೆ! ಅದೇ ನಿನ್ನೆ ಹಾಕಿದ್ದು :ಗೂಡು ಕಟ್ಟಿದ ಕ್ಲೇಷಗಳು.. “ ಬರೆದದ್ದು ಮೊನ್ನೆ. ಹಾಕಿದ್ದು ನಿನ್ನೆ! ಹೌದು, ಹಿಂದೆಲ್ಲಾ ಬರೆದ ಕೂಡಲೇ ಹಾಕಿ ಮೆಚ್ಚುಗೆ ಗಳಿಸುವ ತವಕ, ಲೈಕುಗಳ ಹಂಬಲ! ಈಗಿಲ್ಲ, ಅಂತಹ ಆಸೆ, ಬಯಕೆ! ನನ್ನ ಮಕ್ಕಳ ಬಾಲ್ಯವನ್ನು ಮನಃಪೂರ್ತಿ ಅನುಭವಿಸಲಾಗಲಿಲ್ಲ. ಅದನ್ನು ಇವತ್ತು ಸಂಜನಾಳ ಮೂಲಕ ತೀರಿಸುಕೊಳ್ಳುತ್ತಿದ್ದೇನೆ! ಅದಕ್ಕಿಂತ ದೊಡ್ಡ ಸಂತೃಪ್ತಿ ಯಾವುದೂ ಇಲ್ಲ!”

ಶಬ್ದಗಳಿಲ್ಲದ ಸಂದೇಶ

ಶಬ್ದಗಳಿಲ್ಲದ ಸಂದೇಶ ವಸಂತನ ಬಾಣದ ತುದಿಯಲ್ಲಿ;
ಕಾಣುತಿದೆ ಒಲುಮೆ ಮರುತ ಚೆಲ್ಲಿದ ಪಾರಿಜಾತದಲ್ಲಿ!

19 February, 2014

ಮನ ಹೊಳೆಯಲಿ ದರ್ಪಣದಂತೆ..


ಒಲವೇ,
ತನು ಮನದ ಮೂಲೆಮೂಲೆಗಳಲಿ
ಗೂಡುಕಟ್ಟಿದ ಕ್ಲೇಷಗಳು ಬಿಡುಗಡೆಗೊಳಲಿ
ಒಲವಿನ ಜಲಪಾತದಲಿ ಒದ್ದೆಯಾಗಲಿ
ಎಂದೂ ಬಿಂಬ ಬಂಧಿಸಲೆತ್ನಿಸದಿರಲಿ
ನಿತ್ಯವೂ ದರ್ಪಣದಂತೆ ಹೊಳೆಯಲಿ!

ಸುಭಾಷಿತ



ಕಾಡುವ ನೋವಿಗೆ ಮದ್ದು
ಸ್ನೇಹದ ಅಪ್ಪುಗೆಯ ಮುದ್ದು;

ಶೂರತ್ವದ ಪರೀಕ್ಷೆ
ಆತ್ಮಸ್ಥೈರ್ಯದ ರಕ್ಷೆ;

ಆಜ್ಞಾ ಪರೀಕ್ಷೆಗೆ
ಸೇವಾ ದಕ್ಷತೆ;

ಒಣಗಿ ಬಿರುಕುಬಿಟ್ಟಿದೆ ನೆಲದಲ್ಲಿ
ಕರುಣೆಯ ಒಯಸಿಸ್ ಅಲ್ಲಲ್ಲಿ;


ವ್ಯಸನೆ ಮಿತ್ರಪರಿಕ್ಷಾ ಶೂರಪರಿಕ್ಷಾ ರಣಾಂಗಣೆ ಭವತಿ|
ವಿನಯೆ ಭೃತ್ಯಪರಿಕ್ಷಾ ದಾನಪರಿಕ್ಷಾ ದುರ್ಭಿಕ್ಷೆ||

18 February, 2014

ಜನನ- ಮರಣ..

ಹುಟ್ಟಿದವನು ಸಾಯಲೇಬೇಕು
ಸತ್ತವನು ಮತ್ತೆ ಹಿಂತಿರುಗಲೇಬೇಕು
ಬೊಮ್ಮನ ಚಳಕಕೆ ಮಣಿಯಲೇಬೇಕು
ಹರಿಯಾಡಿಸಿದಂತೆ ಕುಣಿಯಲೇಬೇಕು
ಹರನ ಪಾಶಕೆ ಕೊರಳನೊಡ್ಡಲೇಬೇಕು
ನಾಡಿಗೆ ಹಿತ, ಮಾನವತೆಗೆ ಮತ
ಇತ್ತವನ ಜನುಮ ಸಾರ್ಥಕ
ಸೂರ್ಯಚಂದ್ರರಂತೆ ಅಜರಾಮರ!

ಪರಿವರ್ತಿನಿ ಸಂಸಾರೆ ಮೃತಃ ಕೋವಾ ನ ಜಾಯತೆ|
ಸ ಜಾತೋ ಯೇನ ಜಾತೇನ ಯಾತಿ ದೇಶಃ ಸಮುನ್ನತಿಮ್||


ಅಗಲಿದ ಶ್ರೀಧರ ಮಾಮನಿಗೆ ಅಶ್ರುತರ್ಪಣ

16 February, 2014

ಹೆಣ್ಣು ಅಂದ್ರೆ ಇಷ್ಟೇನೆ..


ಒಂದು ಜಿಜ್ಞಾಸೆ..
--------------------

ದೂರ ಸರಿ ಗೆಳೆಯ!

ದಿಟದಿ ಚಂಚಲೆಯೀ
ಸೊಬಗಿನವಳು;
ಹೆಡೆಯನಾಡಿಸುವ
ಚೆಲುವ ನಾಗರವ
ಹೋಲುವಳು.

ದೂರದಿಂದಲೇ ತನ್ನ
ಕುಡಿ ನೋಟವೆನ್ನುವ
ವಿಷದ ಉರಿಯಲ್ಲೇ
ನಿನ್ನ ಸುಡಬಲ್ಲಳು!

ನಿನ್ನ ಕಚ್ಚಿದರೆ
ಬೇರೆ ಹಾವುಗಳು,
ಬದುಕಿಸಿಯಾರು
ನುರಿತ ವೈದ್ಯರು

ಚತುರೆ ಹೆಣ್ಣೆಂಬ
ಹಾವಿಗೆ ಸಿಲುಕಲು
ಉಳಿಸುವ ಆಸೆಯ
ತೊರೆದುಬಿಡುವರು!
- ಕವಿಯ ಹೆಸರು ತಿಳಿದಿಲ್ಲ

ಸಂಸ್ಕೃತ ಮೂಲ:

ಅಪಸರ ಸಖೇ ದೂರಾದಸ್ಮಾತ್ ಕಟಾಕ್ಷ ವಿಷಾನಲಾತ್
ಪ್ರಕೃತಿ ಕುಟಿಲಾದ್ಯೋಷಿತ್ಸರ್ಪಾದ್ವಿಲಾಸಫಣಾಭೃತಃ |
ಇತರ ಫಣಿನಾ ದಷ್ಟಃ ಶಕ್ಯಶ್ಚಿಕಿತ್ಸಿತುಮ್ ಔಷಧೈಃ
ಚತುರವನಿತಾ ಭೋಗಿಗ್ರಸ್ತಂ ತ್ಯಜಂತಿ ಹಿ ಮಂತ್ರಿಣಃ |



ಮಿತ್ರರ ಕುತೂಹಲ.. ಇಲ್ಲಿ ಹೆಣ್ಣನ್ನು ತೆಗಳಲಾಗಿದಿಯೆ, ಇಲ್ಲಾ ಹೊಗಳಲಾಗಿದೆಯೇ?
ಅದಕ್ಕೆ ನನ್ನ ಉತ್ತರ-

“ನಾರಿ ಮುನಿದರೆ ಮಾರಿ”

ಸ್ತ್ರೀ ಗುಲಾಬಿಯ ಪಕಳೆಗಳಂತೆ ಕೋಮಲ.. ಆದರೆ ವಜ್ರದಷ್ಟೇ ಕಠೋರಳೂ ಹೌದು. ತನ್ನವರಿಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಡುವವಳು, ವಾತ್ಸಲ್ಯದ ಗಣಿಯೂ ಹೌದು! ವಾತ್ಸಲ್ಯದ ಉಡುಗೊರೆ ಮಾತ್ರವಲ್ಲ, ಪ್ರಕೃತಿಯು ಅವಳಿಗೆ ತನ್ನ ಸೌಂದರ್ಯದ ಮಹತ್ತರ ಪಾಲನ್ನೂ ದಯಪಾಲಿಸಿದೆ.

ಪ್ರಕೃತಿಯ ನಂತರ ಸ್ತ್ರೀಯೇ ಎಲ್ಲಾ ಕಲಾಕಾರರಿಗೆ ನಿಕಟವಾದ ಸಬ್ಜೆಕ್ಟ್! ವಿದ್ಯೆಯ ಅಧಿಪತಿಯೂ ಒಬ್ಬ ಸ್ತ್ರೀಯೇ. ತೋಳಿನ ಬಲವಿಲ್ಲದೆಯೂ ಅವಳು ಬಲ ತೋರಬಲ್ಲಳು. ಒಬ್ಬ ಸ್ತ್ರೀ ಸಮರ್ಥವಾಗಿ ದೇಶವನ್ನೂ ಆಳಬಲ್ಲಳು.. ಅಂತೆಯೇ ಬಲಿಷ್ಠ ಪುರುಷನನ್ನೂ ತನ್ನ ಕಣ್ ನೋಟದಲ್ಲಿ ಕುಣಿಸಲೂ ಬಲ್ಲಳು!

ಮನೆ ಮಕ್ಕಳು ಜತೆ ಸಂಪಾದನೆಯನ್ನೂ ಮಾಡಿ ಸಂಸಾರ ಚಕ್ರವನ್ನು ಒಬ್ಬಳೇ ನಡೆಸಬಲ್ಲ ಚತುರೆಯೂ ಹೌದು!

ಇಷ್ಟೆಲ್ಲ ಇದ್ದೂ ಅವಳು ಬಲಹೀನಳು.. ಬರೇ ಭಾವನಾತ್ಮಕವಾಗಿ  ಆಲೋಚಿಸುವುದರಿಂದ ಸೋತುಬಿಡುತ್ತಾಳೆ! ತನ್ನವರ ಘನತೆಗಾಗಿ, ವಾತ್ಸಲ್ಯಕ್ಕಾಗಿ ಸೋಲನೊಪ್ಪಿಕೊಳ್ಳಲೂ ತಯಾರಾಗುತ್ತಾಳೆ.

ಇಲ್ಲಿ ಸೂಕ್ಷವಾಗಿ ಗಮನಿಸಿದರೆ ಕವಿ ಹೆಣ್ಣಿನ ಹಿರಿಮೆಯನ್ನು ಎತ್ತಿ ಹಿಡಿದು ಹೊಗಳಿದ್ದಾನೆ.. ಎಚ್ಚರಿಸಿದ್ದಾನೆ. ಅವಳ ತಾಳ್ಮೆಯ ಅಣೆಕಟ್ಟು ಒಡೆಯದಿರು.. ಹಾಗಾದರೆ ಮುಂದೆ ಆಗುವ ಅನಾಹುತಗಳನ್ನು ತಿಳಿಸಿದ್ದಾನೆ!

ಅವಳು,

ತಣ್ಣಗಿನ ಮಂಜೂ ಹೌದು,

ಭಗ ಭಗ  ಉರಿವ ಅಗ್ನಿಯೂ ಹೌದು,

ಅರ್ಥವಾಗದವಳು ಹೌದು,

ಅರ್ಥವಾಗುವವಳೂ ಹೌದು,

ಕಣ್ ನೋಟದಲ್ಲೇ ಆಡಿಸಬಲ್ಲ ಚತುರೆಯೂ ಹೌದು,

ಕಣ್ ಸನ್ನೆಗೆ ಮರುಳಾಗಿ ದಾಸಿಯೂ ಆಗಬಲ್ಲಳೂ ಹೌದು!    

15 February, 2014

ನಲ್ಲಿರುಳು..

ಕತ್ತಲೆಯ ಗರ್ಭವನು ಸೀಳಿ ಕುಲು ಕುಲು ನಗುತ ಕಣ್ಣು ಮಿಟುಕಿಸುವ ಚುಕ್ಕಿಗಳು,
ಮೋಡದ ಮರೆಯಲಿ ಅಡಗಿ ನಲ್ಲೆಯ ಓಲೆಯನೋದಿ ಕೆಂಪೇರುವ ಚಂದಿರ,
ಗೂಡಿಗೆ ಮರಳಿ ಮೌನ ಜೋಗುಳ ಹಾಡುತ ತರುಗಳ ತಬ್ಬಿ ಮಲಗುವ ಪಕ್ಕಿಗಳು,
ಮುಂಗುರುಳ ಜತೆ ಆಟವಾಡುತ್ತ ಅವನ ಸಂದೇಶ ಪಿಸುಗುಟ್ಟುತ ಮುದವೀವ  ತಂಗಾಳಿ,
ಅಂಗೈಯಲಿ ಮುಸುಮುಸು ನಗುತ ಕಂಪಿನ ನಶೆಯೇರಿಸುವ ಸಂಪಿಗೆ,
ಭಾವಲೋಕದಲಿ ನಲಿದಾಡಿಸಿ ಮಡಿಲಲಿ ಮಲಗಿಸಿ ಲಾಲಿ ಹಾಡುವ ನಲ್ಲಿರುಳು!

ಭಟ್ಟಂಗಿಗಳ ಮೆಚ್ಚುಗೆಗೆ ರಾಗರಂಜಿತನಾದವನು ಭಾಸ್ಕರ


ನನ್ನ ಸೆರಗಿನೆಡೆಯಲ್ಲಿ ಮುಖ ಮರೆಸಿಕೊಂಡಳವಳು ಮುಸ್ಸಂಜೆ!

14 February, 2014

ಅವಳ ವ್ಯಾಲಂಟೈನ್ ದಿನದ ಸಂಭ್ರಮ..


ಅವಳ ವ್ಯಾಲಂಟೈನ್ ದಿನದ ಸಂಭ್ರಮ..
-------------------------

“ಟ್ರೀಣ್ ಟ್ರೀಣ್.. ”

ಎತ್ತಿಕೊಳ್ಳಲು ಚಾಚಿದ ಮಗನ ಕೈ ಸರಿಸಿ ಅವಳೇ ಫೋನು ಎತ್ತಿಕೊಂಡಳು.

“ಸಾರಿ.. “

ಮರೆತಿಲ್ಲ ಅವಳು ಈ ಸ್ವರ, ಹೆಚ್ಚು ಕಮ್ಮಿ ಏಳು ವರ್ಷಗಳಾಗಿದ್ದವು! ಒಮ್ಮೆಲೆ ಮುಖ ಕೆಂಪೇರಿತು, ಬಿಸಿಗಾಳಿ ಸೋಂಕಿದ ಹಾಗೆ..  ಮೈ ಅದುರಿತು,. ಕಣ್ಣಂಚು ಒದ್ದೆಯಾಯಿತು!

ಟಪ್ಪನೆ ಇಟ್ಟುಬಿಟ್ಟಳು. ಆ ಎಳೆಯ ಮುಖಗಳ ಮೇಲೆ ಪ್ರಶ್ನೆಗಳು! ಸೆರಗನು ಜಗ್ಗಿ ಕೆಳಗೆ ಬಗ್ಗಿಸಿದನು. ಅಲ್ಲೆ ಕೂತವಳ ಮಡಿಲಲಿ ಮಗಳು, ಕೊರಳನಪ್ಪಿ ಮುದ್ದು ಮಾಡಿದಳು!

“ಟ್ರೀಣ್ ಟ್ರೀಣ್.. “

ಏಳಲೊಪ್ಪದ ಮಗಳನು ಸರಿಸಿ ಎದ್ದು ಫೋನು ಎತ್ತಿ ಹಾಗೆ ಇಟ್ಟಳು.

 ಉಹ್ಮೂಂ, ಅವನು ಕೇಳಲಿಲ್ಲ.. ಮತ್ತೆ ಟ್ರೀಣ್..

“ಏನು?”

“ಪ್ಲೀಸ್, ಕ್ಷಮಿಸು!”

“ಸರಿ!”

ಅಲ್ಲೇ ಕುಸಿದಳು!

ಏಳು, ಐದು ವರ್ಷದ ಮಕ್ಕಳಿಬ್ಬರೂ ಅಮ್ಮನ ಈ ಹೊಸ ವರಸೆಗೆ ತಬ್ಬಿಬ್ಬಾಗಿದ್ದವು! ಹತ್ತಿರ ಕರೆದು ಏನೋ ಸಬೂಬು ಹೇಳಿ ಅವಕ್ಕೆ ಆಡಲು ಹೇಳಿ ಅಡುಗೆ ಕೋಣೆಗೆ ಹಿಂದಿರುಗಿದವಳಿಗೆ ತಟ್ಟನೆ ಹೊಳೆಯಿತು! ಕಣ್ಣು ಬೆಳಗಿತು!

’ಕೊನೆಗೂ ಸತ್ಯ ಗೊತ್ತಾಯಿತು!’

 ಮನ ಕಾಲಚಕ್ರವನು ಹಿಂದಕ್ಕೆ ತಿರುಗಿಸಿತ್ತು!

 ’ಕನಸಗಳನು ಹುಟ್ಟಿಸುತಿರುವನೆ, ಇಲ್ಲಾ ತಾನೊಂದು ಬರೀ ತಮಾಷೆಯ ವಸ್ತುವೇ, ತನಗೆ ಅವನು ಎಂದೂ ಅರ್ಥವೇ ಆಗಿರಲಿಲ್ಲ. ಅವನು ಎಂದೂ ಎದುರು ಬಂದು ಏನೂ ಹೇಳಿರಲಿಲ್ಲ.. ಬಂದರೂ ತಾನು ಅವನನ್ನು ನಂಬುತ್ತಿದ್ದೆನೆ! ಹೆಚ್ಚು ಕಡಿಮೆ ತಾನು ಮತ್ತಿಷ್ಟು ಆಮೆಯ ಚಿಪ್ಪೆಯಂತೆ ಒಳಗೊಳಗೆ ಅಡಗಿದ್ದೆ. ಒಂದೆರಡು ವರ್ಷವಲ್ಲ.. ಹ್ಮೂಂ, ಕೊನೆಯ ದಿವಸಗಳಲಂತೂ ನರಕವನ್ನೇ ಸೃಷ್ಟಿಸಿದ್ದ! ಎಲ್ಲೋ ಇಲ್ಲ ಇಲ್ಲ ಎಂದರೂ ತಾನೂ ಕಾದಿದ್ದೆ ಅಂತ ಮತ್ತೆ ತಿಳಿದಿತ್ತು, ಮತ್ತು ಕಾಲ ಮೀರಿತ್ತು!’

ಅಜಾನಕ್ಕಾಗಿ ದೃಷ್ಟಿ ಕ್ಯಾಲೆಂಡರ್ ಮೇಲೆ ಬಿತ್ತು!

ಫೆಬ್ರವರಿ 14.. !

ಅವನೊಮ್ಮೆ ಸಿಕ್ಕಿದರೆ ಕೇಳಿ ಚೆನ್ನಾಗಿ ಚಚ್ಚಬೇಕು ಅಂತ ಅಂದುಕೊಂಡ ಪ್ರಶ್ನೆಗಳಿಗೆಲ್ಲ ಉತ್ತರ ಆ ತಾರೀಕಿನಲ್ಲೇ, ಅವನ “ಸಾರಿ”ಯಲ್ಲೇ ಅಡಗಿತ್ತು!

ಮತ್ತೆಂದೂ ಅವನ ಫೋನು ಬರಲಿಲ್ಲ!

ಆದರೆ ಅವನು ಆ ದಿನ, ಅದೇ ಫೆಬ್ರವರಿ 14ರಂದು ಫೋನು ಮಾಡಿ ಅವಳಲ್ಲಿ ಉಸಿರು ತುಂಬಿದ.. ಮತ್ತೆ ಬದುಕುವ ಕನಸು ಕೊಟ್ಟನು!

ಅವಳು ಈಗ ಪ್ರತಿವರ್ಷ ವ್ಯಾಲೆಂಟೈನ್ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾಳೆ!

ಕಾಲಚಕ್ರ ಉರುಳಿದೆ.. ಬೆಳ್ಳಿ ಕೂದಲು, ಮುಖದಲ್ಲಿ ನೆರಿಗೆ ಕಾಣಿಸುತ್ತಿದೆ. ಆ ಉದ್ದ ಸಂಪಿಗೆ ಮೂಗಿನ ವಜ್ರದ ನತ್ತು ಮತ್ತಷ್ಟು ಹೊಳಪಿನಿಂದ ಮಿಂಚುತ್ತಿದೆ. ಮಗ, ಮಗಳಿಗೂ ಮದುವೆಯಾಗಿ ಮನೆಗೆ ಸೊಸೆ, ಅಳಿಯ ಬಂದಿದ್ದಾರೆ, ತಮ್ಮ ಸಂಪ್ರದಾಯಸ್ತ ಅತ್ತೆಯ ಈ ವ್ಯಾಲಂಟೈನ್  ದಿನದ ಸಂಭ್ರಮ ಅವರಿಗೆಲ್ಲ ಒಂದು ಅಚ್ಚರಿಯೇ ಆಗಿ ಉಳಿದಿದೆ!



13 February, 2014

ಕನಸುಗಳ ಕೊನೆಯುಸಿರು..

ಅವನಿತ್ತ ಕನಸುಗಳೆಲ್ಲ ಪಾರಿಜಾತದಂತೆ ಅರಳಿ ನಗುತ್ತಿದ್ದವು
ದಿಂಬಿನಡಿಯಿಂದ ತೆವಳಿ ಬೆಳಕ ಕಾಣುವ ತವಕದಲ್ಲಿದ್ದವು
ವಸಂತನ ಕರೆಗೆ ಓಗೊಟ್ಟು ಹಾದಿಯಲಿ ಹರಡಿ ಕಾದಿದ್ದವು
ಕನಸಿತ್ತವನ ಗಂಧ ಹೊತ್ತು ತಂದ ತಂಗಾಳಿಗೆ ಮುತ್ತಿಟ್ಟವು
ಬೆಚ್ಚನೆಯ ಮುತ್ತಿನಲಿ ಉಸಿರಾಡಲು ಬಯಸಿದ ಅವುಗಳು
ನೋಟಕೂ ಕಾಣಿಸದವನ ಹೆಜ್ಜೆ ಸದ್ದಿಗೆ ಕೊನೆಯುಸಿರೆಳೆದವು.

ಶಾಯರಿ


ಅಂದೆಂದು ಒಲವಿನ ವರ್ಷಧಾರೆಯಡಿ ಒದ್ದೆಯಾದೆನೋ ನೆನಪೇ ಇಲ್ಲವಲ್ಲ
ಅದ್ಯಾಕೆ ಹಿಂಜರಿಕೆಯ ಭೇಟಿಯಾಯಿತದು, ಅದೂ ಅರ್ಥವಾಗಲೇ ಇಲ್ಲವಲ್ಲ
ಅದ್ಯಾವ ರೀತಿಯಲಿ ಒಲವಿನ ನಶೆಯೇರಿದ್ದೂ ತಿಳಿಯಲೇ ಇಲ್ಲವಲ್ಲ
ಅದೆಂದು ಜತೆ ಕಳಚಿ ಅತ್ತ ನಡೆದನು, ಅದೂ ಅರಿವಾಗಲೇ ಇಲ್ಲವಲ್ಲ!


Kab Huyi pyar ki Barsat Mujhe Yaad Nahi

, Khauff me doobi mulaqat Mujhe Yaad Nahi,

Mein to Madhosh tha kuch itna Uski Chahat Me,

Us Ne Kab Chhod Diya Sath Mujhe Yaad Nahi. 

ಕನಸುಗಳು.. ಗಾಳಿಪಟವಾಗಿ!

 ಒಲವೇ,

ಅವಳು ಕಡೆಗಣಿಸಿದ ಕನಸುಗಳನು ಸುರಿದವನವನು ಇವಳ ಸೆರಗಿನಲಿ
ಜತನದಿಂದ ಕಟ್ಟಿಕೊಂಡವುಗಳನು ಹಾರಲು ಬಿಟ್ಟಳು ಒಂದೊಂದಾಗಿ ದಾರಕಟ್ಟಿ
ಅವನ ಅವಳ ಹೆಸರು ಹೊತ್ತು ಹಾರುತಿವೆ ನೀಲ ಮುಗಿಲಲಿ ಗಾಳಿಪಟಗಳಾಗಿ!

11 February, 2014

ಶಾಯರಿ..

ಒಲವೇ,

ಹಂಚಿಕೊಳ್ಳು ಆಗಲೇ ಕಡಿಮೆಯಾಗುವುದು ನೋವು,

ಹೀಗನ್ನುತ್ತಾರೆ ಅವರು ಇವರು ಇನ್ನೂ ಹಲವರು

ನಿನ್ನಗಲಿಕೆಯ ವೇದನೆಯೇ ನನ್ನ ಒಲವಿನ ಗುರುತು

ಮತ್ತೇನು ಉಳಿದಿದೆ ಹೇಳು ಅದರ ಹೊರತು

ಹಂಚಿಕೊಂಡು ಹೇಗೆ ಬದುಕಲಿ ಎಲ್ಲವನು ಮರೆತು! 



Kehte hai Gam baatane se hota hai kam,
 Aisa hi kabhi pehle maante the Hum,
Tere Pyar ki nishani Tera Gam hi tho hai
Mere Paas, Woh bhi baata du tho
 rahega kya Mere Paas...



|| ನನ್ನ ಬೆನ್ನ ವಕ್ರತೆ ಬಣ್ಣಿಸಿದೆ ನೀ;
ನಾ ಕನ್ನಡಿಯಲ್ಲಿ ಕಾಣದನೂ ನೀ ಕಂಡೆ ಎಂದರೆ,
ಯಾವ ಸಮಜಾಯಿಸಿ ಕೊಡುವ ಅಗತ್ಯ ನನಗಿನ್ನು ಇಲ್ಲ ||


ಹೀಗೊಂದು ಕನಸು; ಅಮ್ಮನಾದೆ ಸೂರ್ಯನಿಗೆ!




ತೆಳ್ಳಗಿನ ಮಂಜಿನ ತೆರೆಯೊಳಗೆ
ಬೆಚ್ಚನೆ ಮುಗಿಲ ತೊಟ್ಟಿಲೊಳಗೆ
ನಲ್ಲಿರುಳ ಬೆಚ್ಚನೆಯ ಹೊದಿಕೆಯೊಳಗೆ

ಉಂಗುಷ್ಟ ಚೀಪುತಾ ಕಣ್ಣೆವೆಗಳ
ಬಿಗಿಯಾಗಿ ಬೆಸೆದು ನಿದ್ದೆಯ
ನಾಟಕವಾಡುವ ಬಾಲರವಿಯೇ,

ಏಳಯ್ಯ ನನ್ನರಸ, ನನ ಕಂದ,
ಬೆಳ್ಳಿಯ ಲೋಟದಲಿ ನೊರೆಚೆಲ್ಲುತ್ತಿದೆ
ಕಪಿಲೆಯ ಹಾಲು ಕುಡಿಯಂತೆ

ಅವಲಕ್ಕಿ-ಕಡಲೆ ಬುತ್ತಿ ಕಟ್ಟಿಕೊಡುವೆ
ಏಳಯ್ಯ ಮುದ್ದು, ಲೋಕವ ಬೆಳಗು
ಕಣ್ಣುಜ್ಜುತ್ತಾ ಆಕಳಿಸುತಾ ಬಾಯ್ದೆರೆವನ

ಬಾಯಿಯೊಳಗೆ ನನ್ನಂತಹ
ಲಕ್ಷ ಲಕ್ಷ ಅಮ್ಮಂದಿರು
ಬುತ್ತಿ ಹಿಡಿದು ನಿಂತಿಹರು!

(ಮುಂಜಾನೆ ಹಾಲು ತರಲು ಹೋದವಳಿಗೆ ಮಂಜಿನ ಮುಸುಕಿನಲಿ ಮರೆಯಾದವನಡೆ ಮಾತೆಯ ಮಮತೆಯ ಮಾಯಾಜಾಲ)

10 February, 2014

ಒಲವೇ..

ಒಲವೇ,

ಹರಿತವಾದ ಬರಹವೇ ಸಾಕು, ನೂರಾರು ಹೋಳು ಆತ್ಮವದು..
ತೀಕ್ಷ್ನವಾದ ಮಾತೇ ಸಾಕು, ಬೂದಿ ಮಾತ್ರ ಉಳಿಯುವುದು..
ಭಾವವಿಲ್ಲದ ನೋಟವೇ ಸಾಕು, ಕಣ್ಣು ಒದ್ದೆಯಾಗಲು..
ಬಿಸಿಯಿಲ್ಲದ ಸ್ಪರ್ಶವೇ ಸಾಕು, ಒಣಗಿ ಹೋಗಲು!

09 February, 2014

ಮನೆ ಮದ್ದು

“ ಢಣ್ ಢಣ್.. !”

ಭೀಮಸೇನ ಜೋಶಿಯವರ “ಕರುಣಿಸೋ ರಂಗ.. “ ದಲ್ಲಿ ಲೀನವಾಗಿದ್ದವಳನ್ನು ಎತ್ತಿ ಬಿಸಾಡಿದಂತಾಯಿತು!

ನಾ ಪೂರ್ತಿ ಬಾಗಿಲು ತೆರೆಯುವ ಮೊದಲೇ ಎರಡು ತುಂಬಿದ ಪ್ಲಾಸ್ಟಿಕ್ ಚೀಲಹಿಡಿದ ದಡೂತಿ ಹೆಂಗಸಳೊಬ್ಬಳು ಒಳನುಗ್ಗಿದಳು.

“ ಅರೇ ಸುಧಾ.. ಏನೇ? ಏನಾಯ್ತು? “

“ಮೊದಲು ಫ್ಯಾನು ಹಾಕು! ಲಿಂಬೆ ಶರಬತ್ತು ಮಾಡಿ ತಾ.. “

ಮರುಮಾತಾಡದೆ ಮೊದಲು ಫ್ರಿಡ್ಜ್ ನಲ್ಲಿ ಲಿಂಬೆ ಇದೆಯೇ ಅಂತ ನೋಡಿದರೆ ಇವಳ ಪುಣ್ಯ... ಅರ್ಧ ಕಾಯಿ ಇತ್ತು! ಐಸ್ ಹಾಕಿ ತಂದುಕೊಟ್ಟದನ್ನು ನಿಧಾನವಾಗಿ ಸಿಪ್ ಮಾಡುತ್ತಿದವಳು,

“ಅದೇನು ಜಾದು ಮಾಡ್ತಿಯಾ! ಪರ್ಫೆಕ್ಟ್ ರುಚಿ! ನಾ ಪ್ರತಿಸಲ ಮಾಡಿದಾಗ ಇಲ್ಲ ಸಕ್ಕರೆ ಹೆಚ್ಚು, ಅಥವಾ ಹುಳಿ.. ಮೊನ್ನೆಯಂತೂ ಉಪ್ಪು ಹೆಚ್ಚಾಯ್ತಂತ ಇವರ ಹತ್ತಿರ ಜ್ಯೂಸಿಗೆ ಉಪ್ಪು ಹಾಕಿದೆ ಅಂತ ಸಹಸ್ರನಾಮ ಅರ್ಚನೆ ಕೇಳಿಸ್ಕೊಳ್ಳಬೇಕಾಯಿತು!”

“ಅದ್ ಸರಿ.. ಇದೇನು ಇಷ್ಟು ಮಾತ್ರೆಗಳು? ತರಕಾರಿಗಿಂತ ಮಾತ್ರೆಗಳೇ ಹೆಚ್ಚಿವೆ!”

“ಅದು ಇದ್ದದೇ ಅಲ್ವೆ! ಬಿಪಿ, ಡಯಬಿಟಿಸ್.. ಇದೆಯಲ್ವಾ ಇಬ್ಬರಿಗೂ. ಶೃತಿಗೆ ವಾಂತಿ.. “

ಸುಧಾ ನನ್ನದೇ ಪ್ರಾಯದವಳು. ಒಬ್ಬಳೆ ಮಗಳು! ಆರ್ಥಿಕವಾಗಿ ಚೆನ್ನಾಗಿದ್ದಾರೆ. ಸ್ವಂತ ಫ್ಲಾಟು.. ಸ್ವಂತ ಕಾರೋಬಾರು!

“ಶೃತಿಗೆ ಏನಾಯ್ತು?”

“ಪ್ರತಿಸಲ ಎಕ್ಸಾಮ್ ಬಂದಾಗ ಇದೇ ಅವಸ್ಥೆ!“

“ಅರೇ ಮರತೇ ಹೋಗಿತ್ತು.. ನೀನು ನೆನಪು ಮಾಡಿಸಿದು ಒಳ್ಳೆದಾಯ್ತು.”

ಅಂದವಳು ಅಡುಗೆ ಕೋಣೆಗೆ ಹೋಗಿ ಹೊರಬಂದವಳ ಕೈಯಲ್ಲಿ ಕತ್ತಿಯಿದ್ದದನ್ನು ನೋಡಿ ಸುಧಾ ನಡುಗಿದಳು!

“ಅಲ್ವೇ, ನಾನೇನು ಮಾಡಿದೆ ನಿಂಗೆ? ಬಿಸಿಲಲ್ಲಿ ಬಾಯಾರಿತ್ತು.. ಜ್ಯೂಸು ಕೇಳಿದ್ದೂ ತಪ್ಪಾ?”

’ಅಯ್ಯೋ ನಿಂಗಲ್ವೇ ಮಾರಾಯ್ತಿ. ನೀ ಕೂತಿರು ಈಗ ಬಂದೆ!”

ಹೊರಹೋಗಿ ಬಂದವಳ ಕೈಯಲ್ಲಿ ಮರದ ತೊಗಟೆ, ಸಣ್ಣ ಸಣ್ಣ ಗೆಲ್ಲುಗಳು..

“ಇದೆಲ್ಲಾ ಏನು?”

“ನನ್ನ ಮಗಳಿಗೂ ಎಕ್ಸಾಮ್.. ಈಗಿನ ಮಕ್ಕಳು ಹಾಗೇ ಅಲ್ವಾ! ಪರೀಕ್ಷೆ ಹತ್ತಿರ ಬರುವ ತನಕ ಬುಕ್ ಮುಟ್ಟಲಿಕ್ಕಿಲ್ಲ.. ಮತ್ತೆ ರಾತ್ರಿ ಪೂರಾ ಕುಳಿತು ಬೆಳಿಗ್ಗೆ ತಲೆ ತಿರುಗ್ತದೆ.. ವಾಂತಿ! ಪಿತ್ತ ಕೆದರುತ್ತೆ!

ಅದಕ್ಕೆ ಅಮ್ಮ ಅತ್ತಿ ಮರದ ಕೆತ್ತೆಯ ಕಷಾಯ ಮಾಡಿ ಕೊಡು ಅಂದ್ರು. ಈವಾಗ ವಾರಕ್ಕೊಮ್ಮೆಯಾದರೂ ಮಾಡಿಕೊಡ್ತೇನೆ. ನಾನೂ ನನ್ನ ಗಂಡನೂ ಕುಡಿಯುತ್ತೇವೆ.. ಉಷ್ಣ ದೇಹಕ್ಕೂ ಒಳ್ಳೆಯದು!”

’ಈಗ್ಲೆ ಮಾಡ್ತಿಯಾ?’

ಆಸೆಯಿಂದ ಕೇಳಿದ್ಳು ಸುಧಾ!

’ನೋಡಮ್ಮ, ದೇಹ ಪ್ರಕೃತಿ ಗೊತ್ತಿರಬೇಕು! ನಂಗೆ ನನ್ನದು ನನ್ನ ಮಕ್ಕಳದು ನನ್ನ ಪತಿಯದ್ದು ಚೆನ್ನಾಗಿ ಗೊತ್ತಿದೆ! ಅದರ ಪ್ರಕಾರ ಈ ಸೊಪ್ಪಿದು ಕಷಾಯ ಮಾಡ್ತೇನೆ. ಆದರೆ ನಿಂದು ಹೇಗಂತ ಗೊತ್ತಿಲ್ಲ. ಈ ಹಿಂದೆನೂ ನಿಂಗೆ ನಾನು ಅಮೃತ ಬಳ್ಳಿ ಎಲೆಗಳನ್ನು ತಿನ್ನು ಅಂತ ಹೇಳಿ ಕೊಟ್ಟಿದ್ದೆ. ನೀ ತೆಗೆದುಕೊಂಡು ಹೋದವಳು ಅಲ್ಲೇ ಅಡುಗೆ ಮನೆಯಲ್ಲಿ ಬಿಸಾಕಿದಿಯ! ಕೇಳಿದಕ್ಕೆ ರುಚಿಯಿಲ್ಲ.. ಕಹಿ , ಬಾಯಿ ಒಗರು ಅಂತೆಲ್ಲ ಹೇಳ್ತಿಯಾ!

ಬಾಯಿಗೆ ಕಹಿಯಾದರೂ ಕಾಯಕ್ಕೆ ಒಳ್ಳೆಯದಮ್ಮ! ಒಂದಿಷ್ಟು ಮೈ ಬಗ್ಗಿಸಿ ಕೆಲಸ ಮಾಡು. ನಿತ್ಯ ಜೀವನದಲ್ಲಿ ಉಲ್ಲಾಸ ಉತ್ಸಾಹಗಳನ್ನು ತುಂಬುವಂತ ಬರಹಗಳನ್ನು ಓದು. ಸಂಜೆ ಗಾಂಧಿ ಪಾರ್ಕಿನಲ್ಲಿ ಮಕ್ಕಳು ಜೋಕಾಲಿಯಲ್ಲಿ ಆಡುವುದನ್ನು ನೋಡುತ್ತಾ ಒಂದು ಐದಾರು ಸುತ್ತು ಹಾಕು. ಹದಿನೈದು ದಿನದಲ್ಲಿ ಬದಲಾವಣೆ ಕಾಣದಿದ್ದರೆ ನನ್ನ ಹೆಸರನ್ನೇ ಬದಲಿಸ್ತೇನೆ.”

“ಇಲ್ವೆ, ಇನ್ನು ಮುಂದೆ ನೀ ಹೇಳಿದ ಹಾಗೆ ಅಮೃತ ಬಳ್ಳಿ ಎಲೆ ದಿನಾ ತಿನ್ತೇನೆ. ಬೆಳಿಗ್ಗೆ ನಿಮ್ಮಮನೆ ಕಡೆಯಿಂದಲೇ ವಾಕಿಗೆ ಹೋಗುವಾಗ ತಿಂದು ಹೋಗ್ತೇನೆ. ಪ್ಲೀಸ್ ಕಣೆ, ಈಗ ಕೋಪ ಮಾಡದೇ ಕಷಾಯ ಮಾಡು.. ನನ್ನ ಮಗಳಿಗೆ ಕೊಡ್ತೇನೆ. ಅವಳ ಅವಸ್ಥೆ ನೋಡ್ಲಿಕ್ಕೆ ಆಗೊಲ್ಲ.”

ನಂಗೆ ಹೇಳ್ಬೇಕಾ.. ಪ್ರವಚನ ಮಾಡ್ಲಿಕ್ಕೆ..
ಹಿರಣ್ಯಕಶ್ಯಪುವಿನ ಹೊಟ್ಟೆ ಬಗೆದು ಕರುಳನ್ನು ಮಾಲೆಯಾಗಿ ಹಾಕಿಕೊಂಡ ನರಸಿಂಹನಿಗೆ ಹಿರಣ್ಯಕಶ್ಯಪನ ಹೊಟ್ಟೆಯಲ್ಲಿದ್ದ ವಿಷದ ಪರಿಣಾಮವಾಗಿ ಉರಿಯಲಾರಂಭಿಸಿತಂತೆ. ಆಗ ಮಾಹಾಲಕ್ಷಿ ಇದೇ ಅತ್ತಿ ಹಣ್ಣಿನ ಲೇಪ ಮಾಡಿ ಉರಿತಣಿಸಿದಳಂತೆ..

 ಮಾತಾಡ್ತಾ ಎಲೆ ಸಿಪ್ಪೆಗಳನ್ನು ದೊಡ್ಡ ತಪಲೆಯಲ್ಲಿ ಮುಕ್ಕಾಲು ನೀರು ಇಟ್ಟು ಗ್ಯಾಸ್‍ನಲ್ಲಿ ಕಾಯಿಸ್ಲಿಕ್ಕೆ ಇಟ್ಟೆ. ಒಳ್ಳೆ ಕುದಿ ಬಂದ ನಂತರ ತಣಿಸಿ ಬಾಟ್ಲಿಯಲ್ಲಿ ಹಾಕಿ ಮೊದಲು ಖಾಲಿ ಹೊಟ್ಟೆಯಲ್ಲಿ ಮಗಳಿಗೆ ಕುಡಿಯಲು ಕೊಡು ಮತ್ತು ವಾಂತಿಗೆ ಒಂದಿಷ್ಟು ಏಳಕ್ಕಿ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಆ ನೀರು ಕುಡಿಯಲು ಕೊಡು ಎಂದು ಹೇಳಿದ್ದೆ.  ಮತ್ತೆ ಫೋನು ಬಂದಿತ್ತು. ಹಾಗೆ ಮಾಡಿದ್ದಾಳಂತೆ. ಮಗಳು ಆರಾಮಾಗಿದ್ದಾಳೆ ಅಂತೆ!

ಅತ್ತಿ ಮರದ ಸಿಪ್ಪೆ ಪಿತ್ತಕ್ಕೆ ರಾಮಬಾಣ! ಅದರ ಎಲೆ ಮತ್ತು ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಅರ್ಧಕ್ಕೆ ಇಳಿಸಿ ಕಷಾಯ ಮಾಡಿ ಕುಡಿದರೆ ಉಷ್ಣಕ್ಕೂ ಪಿತ್ತಕ್ಕೂ ಸಕ್ಕರೆ ಖಾಯಿಲೆಗೂ ಒಳ್ಳೆಯದು. ಸ್ವತಃ ಉಷ್ಣ ಬಾಧೆಯಿಂದ ಮುಕ್ತಳಾಗಿದ್ದೇನೆ. ಆದರೂ ಯಾವುದಕ್ಕೂ ಆಯುರ್ವೇದಿಕ ವೈದ್ಯರ ಸಲಹೆಯಿಲ್ಲದೆ ಮತ್ತು ದೇಹ ಪ್ರಕೃತಿ ಗೊತ್ತಿಲ್ಲದೆ ಮದ್ದು ಮಾಡುವುದು ಒಳ್ಳೆಯದಲ್ಲ!

07 February, 2014

ದಾಸ ಸಾಹಿತ್ಯ!

ಅಮ್ಮ ಹೇಳುತ್ತಿದ್ದರು, ಕೈತಟ್ಟಿ, ತಾಳ ಹಾಕಿ ಹರಿನಾಮ ಹೇಳುವ, ಹಾಡುವ ಪರಂಪರೆ ಪ್ರಹ್ಲಾದನಿಂದ ಮೊದಲುಗೊಂಡಿತು!

ಅದರಲ್ಲೂ ಸಾಮೂಹಿಕವಾಗಿ ಎಲ್ಲರೂ ಕೈತಟ್ಟಿ “ಹೇ ಶ್ರೀನಿವಾಸ ಹೇ ವೆಂಕಟೇಶ” ಅಂತ ದ್ವನಿಗೂಡಿಸುತ್ತಿದ್ದರೆ ಅದ್ಹೇಗೆ ಕಲಿಗೆ ತನ್ನ ಮಹಿಮೆ ತೋರಲು ಸಾಧ್ಯವಾದಿತು ಅಂತ ಅನಿಸಿತು!
ಮತ್ತೆ ಮತ್ತೆ ಕೇಳಿದರೂ ತೃಪ್ತಿಯಾಗುತ್ತಿಲ್ಲ ದಾಸಶ್ರೇಷ್ಟರ ಈ ರಚನೆ.. ಅದೆಷ್ಟು ಸರಳವಾಗಿದೆ! ಬಾರಿ ಬಾರಿ ಪುರಂದರದಾಸರನ್ನು ವಂದಿಸಿತು ಮನ!


|| ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

ಹೇ ಶ್ರೀನಿವಾಸ.. ಹೇ ವೆಂಕಟೇಶ..
ನಿನ್ನ ನೋಡಿ ಧನ್ಯನಾದೆನೋ
ನಿನ್ನ ನೋಡಿ ಧನ್ಯನಾದೆನೋ ||ಪಲ್ಲವಿ||

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷವಿಟ್ಟು ನೋಡು ಪಾಂಡವ ಪಕ್ಷ
ದೈತ್ಯಶಿಕ್ಷ ರಕ್ಷಿಸೆನ್ನ ಕಮಲಾಕ್ಷ||ಧನ್ಯನಾದೆನೋ||

ದೇಶ ದೇಶ ತಿರುಗಿ ನಾನು
ಆಶಾಬದ್ಧನಾದೆನು ಸ್ವಾಮಿ
ದಾಸನು ನಾನಲ್ಲವೆ ಜಗದೀಶ
ಶ್ರೀಶ ಶ್ರೀನಿವಾಸ|| ಧನ್ಯನಾದೆನೋ ||

ಕಂತುಜನಕ ಕೇಳೋ ಎನ್ನ
ಅಂತರಂಗದ ಆಸೆಯನ್ನು
ಅಂತರವಿಲ್ಲದೆ ಪಾಲಿಸೊ

ಶ್ರೀಕಾಂತ ಪುರಂದರವಿಠ್ಥಲ||ಧನ್ಯನಾದೆನೋ ||ಅಮ್ಮ ಹೇಳುತ್ತಿದ್ದರು, ಕೈತಟ್ಟಿ, ತಾಳ ಹಾಕಿ ಹರಿನಾಮ ಹೇಳುವ, ಹಾಡುವ ಪರಂಪರೆ ಪ್ರಹ್ಲಾದನಿಂದ ಮೊದಲುಗೊಂಡಿತು!

ಅದರಲ್ಲೂ ಸಾಮೂಹಿಕವಾಗಿ ಎಲ್ಲರೂ ಕೈತಟ್ಟಿ “ಹೇ ಶ್ರೀನಿವಾಸ ಹೇ ವೆಂಕಟೇಶ” ಅಂತ ದ್ವನಿಗೂಡಿಸುತ್ತಿದ್ದರೆ ಅದ್ಹೇಗೆ ಕಲಿಗೆ ತನ್ನ ಮಹಿಮೆ ತೋರಲು ಸಾಧ್ಯವಾದಿತು ಅಂತ ಅನಿಸಿತು!
ಮತ್ತೆ ಮತ್ತೆ ಕೇಳಿದರೂ ತೃಪ್ತಿಯಾಗುತ್ತಿಲ್ಲ ದಾಸಶ್ರೇಷ್ಟರ ಈ ರಚನೆ.. ಅದೆಷ್ಟು ಸರಳವಾಗಿದೆ! ಬಾರಿ ಬಾರಿ ಪುರಂದರದಾಸರನ್ನು ವಂದಿಸಿತು ಮನ!


|| ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ
ಶ್ರೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||

ಹೇ ಶ್ರೀನಿವಾಸ.. ಹೇ ವೆಂಕಟೇಶ..
ನಿನ್ನ ನೋಡಿ ಧನ್ಯನಾದೆನೋ
ನಿನ್ನ ನೋಡಿ ಧನ್ಯನಾದೆನೋ ||ಪಲ್ಲವಿ||

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷವಿಟ್ಟು ನೋಡು ಪಾಂಡವ ಪಕ್ಷ
ದೈತ್ಯಶಿಕ್ಷ ರಕ್ಷಿಸೆನ್ನ ಕಮಲಾಕ್ಷ||ಧನ್ಯನಾದೆನೋ||

ದೇಶ ದೇಶ ತಿರುಗಿ ನಾನು
ಆಶಾಬದ್ಧನಾದೆನು ಸ್ವಾಮಿ
ದಾಸನು ನಾನಲ್ಲವೆ ಜಗದೀಶ
ಶ್ರೀಶ ಶ್ರೀನಿವಾಸ|| ಧನ್ಯನಾದೆನೋ ||

ಕಂತುಜನಕ ಕೇಳೋ ಎನ್ನ
ಅಂತರಂಗದ ಆಸೆಯನ್ನು
ಅಂತರವಿಲ್ಲದೆ ಪಾಲಿಸೊ
ಶ್ರೀಕಾಂತ ಪುರಂದರವಿಠ್ಥಲ||ಧನ್ಯನಾದೆನೋ ||

06 February, 2014

“ಎಲ್ಲಾ ಫೇಸ್ ಬುಕ್ ಮಹಿಮೆ!”

“ಎಲ್ಲಾ ಫೇಸ್ ಬುಕ್ ಮಹಿಮೆ!”
---------------------------


ಪ್ಲೀಸ್ ಕಣೇ, ಅದೆಷ್ಟು ಹೊತ್ತು ತೆಗಿತಿಯಾ? ನಂಗೆ ಸ್ವಲ್ಪ ಪ್ಲಾಸ್ಟಿಕ್ ಐಟಮ್ ಗಳು ಬೇಕಿತ್ತೇ! ಲೇಟ್ ಆಗುತ್ತೆ!“

ಅಷ್ಟು ಹೇಳಿದವಳ ಮುಖದಲ್ಲಿ ಈಗ ಪರಮಾಶ್ಚರ್ಯ! ಕುಮಾರವ್ಯಾಸರ “ಗದುಗಿನ ಭಾರತ”ದ ಮೇಲಿನ ಟಿಪ್ಪಣಿ ಪುಸ್ತಕ ನನ್ನ ಕೈಯಲ್ಲಿ ನೋಡಿದಾಗ!

“ಏನೇ, ಏನೋ ಫೇಸ್ ಬುಕ್‍ನಲ್ಲಿ ಕವನ ಗೀಚೊದ್ದು ನೋಡಿದ್ದೆ, ಅದ್ಯಾವಾಗದಿಂದ ಹಳೆಗನ್ನಡ ಓದೋ ಅಭ್ಯಾಸ ಮಾಡಿದಿ? ನಂಗಾದ್ರೂ ಒಂಚೂರು ಗೊತ್ತಿತ್ತು, ಆದ್ರೆ ನೀನು ಬರೇ ಸಂಸ್ಕೃತ ಓದಿದೋಳು!”

ಎಂದಿನಂತೆ ಬಾಯಿ ಅಗಲವಾಗಿ ಬಿಡಿಸಿ ಪಕಪಕ ನಕ್ಕೆ!

“ನೋಡು ಇಪ್ಪತ್ತಮೂರು ವರ್ಷದ ನಂತರ ಸಿಕ್ಕಿದ್ದಿ, ಆದ್ರೂ ನಿನ್ನ ಮಂಕು ಅನ್ಲೇ ಬೇಕಾಗುತ್ತೆ ನೋಡು! ಬುಕ್ಸ್ ತೆಕೊಂಡ ಮಾತ್ರಕ್ಕೆ ಓದ್ಲೇಬೇಕಂತ ರೂಲ್ ಇದೆನಾ? ಓಹೋ, ಹಂಗಾರೆ ನನ್ನ ಪೋಸ್ಟ್‌ಗಳನ್ನೆಲ್ಲಾ ನೋಡ್ತಿ,, ಮತ್ತೆ ಒಂದಿನಾದ್ರೂ ಲೈಕ್ ಬಿಸಾಕಿಲ್ಲ!

ಹ್ಮೂಂ, ನಿಮ್ಗೆಲ್ಲಾ ಹೊಟ್ಟೆಕಿಚ್ಚು! ಹ್ಮ್ ನೀವೂ ಇದ್ದಿರಾ.. ಫ್ರೆಂಡ್ಸ್ ಗಳಂತೆ..

ನೀನು, ಕುಮುದ, ಸುಮನ, ಪಲ್ಲವಿ, ಮಾಧವದಾಸ್, ರಘುವೀರ್, ದಾಮೋದರ್.. ಎಲ್ಲರೂ ದಂಡ ಪಿಂಡ! ಆ ಮುಕ್ತ ಒಬ್ಬಳೇ ಆಗ್ಬಹುದು.. ಅಪರೂಪಕ್ಕೆ ಬಂದು ಲೈಕ್ ಹಾಕಿ ಹೋಗ್ತಾಳೆ!"

ಶೈಲಾ ನನ್ನ ಕಾಲೇಜುಮೇಟ್! ಇಪ್ಪತ್ತೆರಡು ವರ್ಷದ ನಂತರ ಅಜಾನಕ್ಕಾಗಿ ಜಾತ್ರೆಯಲ್ಲಿ ಸಿಕ್ಕಿದಳು. ಬುಕ್ ಸ್ಟಾಲ್ ನೋಡಿ ಅವಳನ್ನು ಎಳೆದು ಅಲ್ಲಿಗೊಯ್ದಿದ್ದೆ.

“ಅಲ್ವೇ, ಸಪ್ನ ಬುಕ್‍ನವರದು ಡಿಸ್ಕೌಂಟ್ ಇತ್ತಲ್ವಾ?”

“ಬಿಡೆ, ಪುರುಸೊತ್ತಾಗಲಿಲ್ಲ.. ನೋಡು ಇವ್ನ ಹತ್ತಿರ ಅದಕ್ಕಿಂತಲೂ ಹೆಚ್ಚು ಡಿಸ್ಕೌಂಟ್‍ನಲ್ಲಿ ತಕ್ಕೊಳ್ತೇನೆ.”

“ಮೇಡಂ.. “

ಕತ್ತು ತಿರುಗಿಸಿದವಳಿಗೆ ಕಂಡಿದ್ದು ಚಂದನ ಹೆಸರು ಬರೆದಿದ್ದ ಮೈಕು!

ಹರೆಯದ ಹುಡುಗನೊಬ್ಬ ನನ್ನ ಮೂಗಿನ ಹತ್ತಿರ ಮೈಕು ತಂದು,

“ಮೇಡಂ, ಕುಪ್ಪಳ್ಳಿಯಲ್ಲಿ ನಡೆದಿದ್ದ ಕಾವ್ಯ ಕಮ್ಮಟಕ್ಕೆ ಹೋಗಿದ್ರಾ?”

’ಅಯ್ಯೋ, ಇವತ್ತು ಹೆಚ್ಚೇ ಪೌಡರ್ ಹಾಕ್ಬೇಕಿತ್ತು! ಈ ಮಂಗ್ಳೂರಿನ ಬಿಸಿಲಿಗೆ ಬಿಸ್ಕುಟ ಅಂಬಡೆಯನ್ನೂ ಕಾಯಿಸುವಷ್ಟು ಎಣ್ಣೆ ಮುಖದ ಮೇಲೆ ಶೇಖರವಾಗ್ತದೆ. ಲಿಪ್‍ಸ್ಟಿಕ್ ಒಣಗಿದೆಯೇನೋ, ಶೈಲನ ಹತ್ತಿರ ಹೆಚ್ಚು ಮಾತಾಡ್ಬಾರದಿತ್ತು! ಈ ಇಂಟರ್ನಾಷನಲ್ ಕಂಪನಿಯವರು ಮುನ್ನೂರು ರೂಪಾಯಿಗೂ ಬಣ್ಣ ಹಾಕಿದ ವ್ಯಾಕ್ಸ್ ಕಡ್ಡಿ ಕೊಡೊದು.. ಇತ್ತೀಚೆಗೆ ಇವ್ರ ವಾಲೆಟ್ ಇತ್ತೀಚೆಗೆ ಸಿಗುದೇ ಕಷ್ಟವಾಗಿದೆ..  ಹತ್ತಹತ್ತು ಎಗರಿಸಿಯೂ ಸಿಕ್ಕಿಬೀಳ್ತೇನೆ!

ಅಯ್ಯೋ ಕರ್ಮ, ಹೋಗಿದ್ದೆ ಅಂತ ಹೇಳ್ಲಾ, ಬೇಡ ಬೇಡ, ಸುಳ್ಳು ಹೇಳಿ ಇದ್ದ ಮರ್ಯಾದೆಯನ್ನೂ ಮೂರು ಕಾಸಿಗೆ ಹರಾಜು ಮಾಡೋದು ಬೇಡ!’

“ಇಲ್ಲರೀ, ನಂಗೆ ಆಮಂತ್ರಣನೂ ಬಂದಿತ್ತು.. ನಾನು ಹೋಗಿಲ್ಲ ಅಂತ ಎಲ್ರೂ ಬೇಜಾನ್ ಬೇಜಾರಾಗಿದ್ರು! ಯು ಸೀ, ನಾನು ಸ್ವಲ್ಪ ಬಿಜಿ! ಆದ್ರೆ ನಿಮ್ಗೆ ಅಲ್ಲಿ ನಡೆದುದನೆಲ್ಲಾ ಹೇಳ್ಬಲ್ಲೆ!”

“ಏಯ್ ಹೇಗೂ ಮೇಡಂ ಅಲ್ಲಿ ನಡೆದುದನೆಲ್ಲಾ ಹೇಳ್ತಾರಂತಲ್ಲ.. ಇನ್ನು ಯಾರನ್ನು ಹುಡುಕೊಂಡು ಹೋಗೋದು! ಇವ್ರ ಸಂದರ್ಶನನೇ ತಕ್ಕೊ!”

ಹಿಂದಿನಿಂದ ಆದೇಶ ಬಂತು!

ಗಂಟಲು ಸರಿಮಾಡ್ಕೊಂಡೆ!

“ಮೇಡಂ ಕವನ, ಕಾವ್ಯ, ಗದ್ಯ್ .. ಹೀಗೆ ಯಾವುದೇ ಪ್ರಕಾರವಿರಲಿ, ಇವನೆಲ್ಲಾ ರಚಿಸ್ಲಿಕ್ಕೆ ಬೇಕಾದ ಮುಖ್ಯ ಅರ್ಹತೆ ಏನು?”

ಮೂರು ನಾಲ್ಕು ದಿನಗಳಿಂದ ರೂಪಲಕ್ಷ್ಮಿಯವರ ಸ್ಟೇಟಸ್ ಓದಿದ್ದ ನಂಗೆ ಮೂಗಿಗೆ ವಾಸನೆ ಬಡಿಯಿತು.. ಆಹ್! ಮತ್ತಿಷ್ಟು ಗೊಜಲು ಗೊಂದಲ!

“ಅಯ್ಯಾ ಹುಡುಗಾ, ನಿಂಗೆ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಗೊತ್ತಾ?”

ಹುಡುಗನ ಮುಖದಲ್ಲಿ ಗಲಿಬಿಲಿ..

“ಇವ್ರೆಲ್ಲಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳೇನು?”

’ಓಹೋ ಈ ಬೆಪ್ಪುತಕ್ಕಡಿಗೆ ಏನೂ ಗೊತ್ತಿಲ್ಲ.

ತಕ್ಷಣ ಈಶ್ವರಕಿರಣ್ ಭಟ್ ಮತ್ತು ರಾಧಾಕೃಷ್ಣ ಹಾಕ್ತಿದ್ದ ಕುಮಾರವ್ಯಾಸರ ನಾಲ್ಕು ಲೈನುಗಳನ್ನು ರೈಲಿನಂತೆ ಬಿಟ್ಟೆ!

’ಹೋಗ್ಲಿ, ನಿಂಗೆ ದಲಿತ ಕಾವ್ಯ ಗೊತ್ತಾ’

ಮಹಾದೇವ ಅವರದ್ದು ಬಸೂ ಅವ್ರ ಬ್ಲಾಗ್ ನಲ್ಲಿ ಓದಿದ್ದು ನೆನಪಿತ್ತು..

’ಪಾಪ, ನವ್ಯ ಕಾವ್ಯ ಗೊತ್ತಿರ್ಬೇಕು ಅಲ್ವಾ?

ಕಾವ್ಯ ಕಾರಣದ ನನಪು ಬಂತು.. ಮತ್ತಷ್ಟು ಬುರುಡೆ ಬಿಟ್ಟೆ. (ಯಪ್ಪಾ ಪ್ರವರನ ಫ್ರೆಂಡ್ ರಿಕ್ವೆಸ್ಟ್ ಒಪ್ಪಿದ್ದು ಒಳ್ಳೆದಾಯ್ತು!)

“ಸಖೀಗೀತೆ, ದಾಸ ಸಾಹಿತ್ಯ.. ಏನಾದ್ರೂ..”

ಹುಡುಗನ ಮುಖದ ಮೇಲೆ ಸ್ವಲ್ಪ ಕಳೆ..

ಮಲ್ಲಿಗೆ ಕವಿ ಗೊತ್ತು ಮೇಡಂ, ಅದೇ ಪ್ರೇಮಕವಿ- ಕೆ ಎಸ್ ನ, ಆದ್ರೆ ಸಖಿ..

ತಟ್ಟನೆ ಆಸು ಮತ್ತು ಗಂಗಾಧರರನ್ನು ಉದ್ಧರಿಸಿದೆ!

ಮತ್ತೆ ಚುಟುಕು ಸಾಹಿತ್ಯ..

ದಿನಕರ ದೇಸಾಯಿಗಿಂತ  ಪರೇಶ್ ಮತ್ತು ಗುರುನಾಥ್ ಬೋರಗಿ ಅಣ್ಣ ಅವರ ಬರಹಗಳ ನೆನಪು ಚೆನ್ನಾಗಿತ್ತು..

ಸಿನೆಮಾ ಸಾಹಿತ್ಯ, ಹಾಯ್ಕು, ದ್ವಿಪದಿ, ತ್ರಿಪದಿ.. ನೆನಪಾದ ಷಟ್ಪದಿ..

ಜಯಂತ್ ಕಾಯ್ಕಿಣಿ, ವಿವೇಕಾನಂದ ಕಾಮತ್.. ಬಸು, ಪ್ರಕಾಶ್ ಖಾಡೆ..

ರಾಘವೇಂದ್ರ ಜೋಷಿಯವರ ಕೈಬರವಣಿಗೆಯ ಹಾಯ್ಕ ಓದಿದ್ದು ಸಾರ್ಥಕವಾಯ್ತು,.. ಮಧ್ಯದಲ್ಲಿ ಆಜಾದಣ್ಣನೂ ನೆನಪಿಗೆ ಬಂದ್ರು.

ಅದು ಹೇಗೋ ಕೈಲಾಸಂ ಅವ್ರೂ ನೆನಪಿಗೆ ಬಂದ್ರು, ಲಂಕೇಶ್ ಅವ್ರ ನೀಲು.. ನಮ್ಮ ಬ್ಲಾಗ್ ಮಿತ್ರ ಡಾ|ಕೇಶವ ಕುಲಕರ್ಣಿಯವರ ಕೃಪೆಯಿಂದ!

ಹೀಗೆ ನನಗೂ ಕನ್ಫ್ಯೂಜನ್ ಆಗುವಷ್ಟು ಭಾಷಣ  ಮಾಡಿದೆ!

“ಮೇಡಂ, ಕಾವ್ಯ ರಚಿಸಬೇಕಾದ್ರೆ ಇದೆಲ್ಲಾ ಓದುವುದು ಕಂಪಲ್ಸರಿನಾ?”

“ಹೌದಪ್ಪಾ, ನೋಡು ಈಗ ನೀನು ಬರೆಯುವುದು ಯಾರಿಗಾಗಿ.. ಹಾಗೆ ಅವರು ಬರೆದದ್ದು ನಿಮಗೆ ಓದಲಿಕ್ಕಾಗದಿದ್ರೆ ಮತ್ತೆ ನೀವು ಹೇಗಪ್ಪಾ ಕಾವ್ಯವನ್ನು ರಚಿಸ್ತಿರಿ?”

ಕೆಮರಾ ಮ್ಯಾನಿನಿಂದ ಹಿಡಿದು ಅಲ್ಲಿ ಸೇರಿದವರೆಲ್ಲಾ ದಂಗಾಗಿದ್ರು.

ಎಲ್ಲಾ ಪ್ರಕಾರಗಳ ಚಿತ್ರಣ ಕೊಟ್ಟ ಈ ಹೆಂಗಸು ಅವರಿಗೆಲ್ಲಾ ಒಂದು ವಿಚಿತ್ರ ಪ್ರಾಣಿಯಂತೆ ಕಂಡಿರಬೇಕು.. ಅದರಲ್ಲೂ ಮಂಗಳೂರಿಗೂ ಸಾಹಿತ್ಯಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ!

“ಯಪ್ಪಾ ಯಾವಾಗ ಬರುತ್ತೆ ಈ ಸಂದರ್ಶನ?”

 ಇತ್ತೀಚಿಗಂತೂ ಎಲ್ಲರೂ “ಥಟ್ ಅಂತ ಹೇಳಿ”ಯಲ್ಲಿ ಭಾಗವಹಿಸಿ ನನ್ನ ಹೊಟ್ಟೆ ಉರಿಸ್ತಿದ್ರು! ಈವಾಗ ನಾನು ಹೇಳ್ಬಹುದು! ನಂದೂ ಸಂದರ್ಶನ ಚಂದನದಲ್ಲಿ ಅಂತ! ಸುವರ್ಣ ಅಥವಾ ಈಟಿವಿಯಾಗಿದ್ರೆ ಇನ್ನೂ ಚೆನ್ನಾಗಿರುತಿತ್ತು! ಪರವಾಗಿಲ್ಲ, ಇಷ್ಟಾದರೂ ಭಾಗ್ಯ ಸಿಕ್ಕಿತ್ತಲ್ಲ.

“ನಾಳೆನೇ ಮೇಡಂ, ಪ್ರೈಮ್ ಟೈಮ್ ನಲ್ಲಿ! ತಪ್ಪದೇ ನೋಡಿ ಮೇಡಂ! ತುಂಬಾ ಚೆನ್ನಾಗಿ ಮಾತಾಡಿದ್ರಿ ಮೇಡಂ”

ಎಲ್ಲರೂ ಜಾಗೆ ಖಾಲಿ ಮಾಡಿದ ನಂತರ ಶೈಲಾ,

“ಅಲ್ವೇ, ನಂಗೊತ್ತಿದ್ದ ಹಾಗೆ ನೀನು ಓದಿದ್ದು ಬರೇ ಕಾದಂಬರಿಗಳು! ಅದೂ ಹತ್ತನೇ ತರಗತಿಯ ನಂತರ ಓದಿದ್ದೇ ಕಮ್ಮಿ. ಮದುವೆಯಾದ ಮೇಲೆ ಓದಿದಂದ್ರೆ ಬರೇ ಬಿಲ್‍ಗಳು,  ರಿಸೀಟುಗಳು, ರೇಶನ್ ಕಾರ್ಡ್, ಮತ್ತು ರೆಸಿಪಿ ಬುಕ್! ಎಲ್ಲೋ ಮಕ್ಕಳಿಗೆ ಕಲಿಸುವಾಗ ಅದೂ ಐದನೆಯ ತರಗತಿಯವರೆಗೆ ಓದಿದ್ದು ಮಕ್ಕಳ ನೋಟ್ಸ್! ಆದ್ರೂ ಇದೆಲ್ಲ ಹೇಗೆ ಹೇಳಿದ್ದಿಯೇ?”

ವಿಜಯದ ನಗೆ ನನ್ನ ಮುಖದಲ್ಲಿ!

“ಎಲ್ಲಾ ಫೇಸ್ ಬುಕ್ ಮಹಿಮೆ!”

“ಒಂದು ಕೇಳ್ಲಾ? ನೀನು ಈಗ ಹೇಳಿದ ಹೆಸರುಗಳಲ್ಲಿ ಒಂದೂ ಹೆಂಗಸರದ್ದು ಇಲ್ವೆ? ಅದ್ಯಾಕೆ ಹೆಂಗಸರು ಪ್ರತಿಭಾಶಾಲಿಗಳಲ್ವೆ? ಕವನ ಕಾವ್ಯ ರಚಿಸ್ತಾರಲ್ವಾ!”

“ಅಯ್ಯೋ ಬೆಪ್ಪೇ, ಅದು ಫೇಸ್ ಬುಕ್ಕಿದು ಅನ್‍ರಿಟರ್ನ್ಡ್ ರೂಲ್! ಹೆಂಗಸರಿಗೆ ಗಂಡಸರು ಫ್ಯಾನುಗಳು ಮತ್ತು ವೈಸ್ ವರ್ಸಾ! ನಾನೂ ಅದನ್ನೇ ಫೊಲೊ ಮಾಡ್ಬೇಕಾಗುತ್ತೆ ತಾನೆ!”

ಮತ್ಸರ ಭರಿತ ಮೆಚ್ಚುಗೆ ಶೈಲಳ ಮುಖದಲ್ಲಿ..

ಜತೆಗೆ ಬೆನ್ನಿಗೆ ಜೋರು ಗುದ್ದು ಬಿತ್ತು!

 “ಅದ್ಯಾಕೆ ಗುದ್ದು ಮಾರಾಯ್ತಿ?”

“ಮತ್ತಿನ್ನೇನು, ಆಗದಿಂದ ಅಲ್ರಾಂ ಕಿರುಚುತಿದ್ರೆ ನೀನು ಥಾಂಕ್ಸ್ ಥಾಂಕ್ಸ್ ಅನ್ತಾ ನಗ್ತಿದ್ದೆ! ಅದೇನೋ ನೀನೋ ನಿನ್ನ ಕವಿತೆಗಳೊ, ಫೇಸ್‍ಬುಕ್ಕೋ.. ನನ್ನ ತಲೆ ಕೆಟ್ಟು ಹೋಗದಿದ್ರೆ ಸಾಕು!”

ಇವರ ದೊಂಡೆ ಕೇಳಿ ಕಣ್ಬಿಟ್ಟು ನೋಡಿದ್ರೆ ಬೆಳ್ಳನೆ ಬೆಳಗಾಗಿತ್ತು!




ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...