ಗುರು ವೃಂದಗಳಿಗೊಂದು ಕೃತಜ್ಞಾಪೂರ್ವಕ ನಮನ!
-------------------------------------
“ಗುರು” ಇದು ಬರೇ ಶಬ್ದವಲ್ಲ.. ನನ್ನ ಬದುಕಿನ ಭಾರ ಈ ಶಬ್ದ ಹೊತ್ತುಕೊಂಡಿದೆ!
’ಗು’ ಅಂದರೆ ಅಂಧಕಾರ.. ’ರು’ ಅಂದರೆ ನಾಶಮಾಡುವವನು.. ಹೀಗೆಲ್ಲಾ “ಗುರು” ಶಬ್ದಕ್ಕೆ ಅಸಂಖ್ಯಾತ ವಾಖ್ಯಾನಗಳಿವೆ.. ಮತ್ತೂ ಕೊಡುತ್ತಲೇ ಹೋಗಬಹುದು ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ!
ನಿದ್ದೆಯಿಂದ ಏಳುವುದೆಂದರೆ ಮತ್ತೆ ಜನ್ಮ ಪಡೆಯುವುದೆಂದೇ ನಾನು ಅಂದ್ಕೊಂಡಿದ್ದೇನೆ.. ಮುಂದೆನೂ ಅಂದ್ಕೊಳ್ಳಬಹುದೇನೋ! ಹಾಗೆ ಎದ್ದಾಗ, ಅಭ್ಯಾಸದಂತೆ ಕರಗಳನ್ನು ಜೋಡಿಸಿ, “ಕರಾಗ್ರೇ ವಸತಿ... “ ಹೇಳುವುದರೊಂದಿಗೆ ನಿತ್ಯವೂ ನಮ್ಮ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಬಲಿಕೊಟ್ಟ ವೀರ ಯೋಧರ, ನಮ್ಮದೇ ಮಣ್ಣನ್ನು ನಮ್ಮಿಂದ ದೂರಮಾಡಲು ಹವಣಿಸಿದ ಆಂಗ್ಲರನ್ನು ಅತ್ತಟ್ಟಲು ತಮ್ಮ ಸುಖ ಸಂಪತ್ತನ್ನು ಬಲಿಕೊಟ್ಟ ಮಹಾತ್ಮರನ್ನು, ಜತೆಗೆ ನನ್ನ ಬಾಳಿನಲ್ಲಿ ಬೆಳಕನ್ನು ತಂದ ಸ್ನೇಹಿತ, ಬಂಧು ವರ್ಗವನ್ನು ಸ್ಮರಿಸುವುದನ್ನು ಅನೇಕ ವರ್ಷದಿಂದ ಪಾಲಿಸುತ್ತಾ ಬಂದಿದ್ದೇನೆ.
ಎಂದಿನಂತೆ ಇಂದೂ ಎದ್ದು ಸ್ಮರಿಸುತ್ತಿದ್ದಂತೆ ಅದೇಕೋ ಮತ್ತೆ ಹಳೆದಿನಗಳ ರೀಲು ಬಿಚ್ಚಿತು! ಅದಕ್ಕೆ ಸರಿಯಾಗಿ ಇಂದು ಮಹಾನ್ ಅಧ್ಯಾಪಕ ಶ್ರೀ ಸರ್ವಪಲ್ಲಿ ರಾಧಾಕೃಷ್ಣ ಅವರ ಜನುಮ ದಿನವೆಂದೂ ಜ್ಞಾಪಕಕ್ಕೆ ಬಂತು!
ಮೂಲತಃ ನಾನು ಒಂಟಿಯಾಗಿರಲು ಬಯಸುವವಳು; ಯಾವ ಗೆಳೆತನವನ್ನೂ ಅತ್ಯಂತ ಸಮೀಪಕ್ಕೆ ತಂದಿರಲಿಲ್ಲ.. ನನಗದು ಬೇಕೆಂದು ಎಂದೂ ಅನಿಸಿರಲಿಲ್ಲ.. ಆದರೆ, ವಿಧಿ ನಿಯಮ, ಇಚ್ಛೆ ಬೇರೆಯೇ ಇತ್ತು! ಬಯಸದೇ ಬಂದವು ಸ್ನೇಹ ಹಸ್ತಗಳು.. ಬಿಗಿದಪ್ಪಿ ಎದೆಗವುಚಿ ಒತ್ತಿಕೊಂಡೆ.. ದೂರಹೋಗಲು ಬಿಡಲು ಸಿದ್ಧಳಿಲ್ಲ ನಾನೀಗ!
ಮಳೆಬಿಲ್ಲಿನಂತೆ ನನ್ನ ಬದುಕಿನಲ್ಲಿ ಬಣ್ಣಗಳನ್ನು ಎರಚಿದವು ಈ ಸ್ನೇಹ ಹಸ್ತಗಳು! ಎಲ್ಲ ರಂಗು ಕೂಡಿ ಶ್ವೇತವಾಗಿ ನನ್ನನ್ನು ಪರಿಪೂರ್ಣಳನ್ನಾಗಿ ಮಾಡಿದೆ! ಪ್ರತೀಯೊಂದು ಹಸ್ತವೂ ಒಂದೊಂದು ಪಾಠ ಕಲಿಸಿದೆ.. ಬದುಕನ್ನು ಹಸನಾಗಿ ಮಾಡಿದೆ..
ಈ ಎಲ್ಲಾ ಸ್ನೇಹ ಹಸ್ತಗಳಿಗಿಂದು ನನ್ನ ಸಾಷ್ಟಾಂಗ ನಮನಗಳು!
ಪ್ರತ್ಯೇಕವಾಗಿ ಅವರಿವರನ್ನು ಹೆಸರಿಸಿಲ್ಲ ನಾನು.. ನನ್ನನ್ನು ಅರಿತವರಿಗೆ ನನ್ನೀ ನಮನಗಳು ಖಂಡಿತ ತಲುಪುವವೆಂಬ ಭರವಸೆಯಿದೆ ನನಗೆ!
ಹಿರಿಯ, ಕಿರಿಯರೆನ್ನದೆ ಎಲ್ಲರಿಂದಲೂ ಪಾಠ ಒಪ್ಪಿಸಿಕೊಂಡಿದ್ದೇನೆ.. ಮುಖ್ಯವಾಗಿ ನನ್ನ ಮುದ್ದು ಸೊಸೆ, ಅಳಿಯನಿಂದ ನಿಷ್ಕಲ್ಮಶ ಪ್ರೀತಿ ಧಾರೆಯೆರೆತರೆ ಸಿಗುವ ಸುಖದ ಪಾಠ, ಚಿತ್ರ ಕಲೆಯನ್ನು ಕಲಿಯುತ್ತ ಕಲಿಸಿದ ಆ ಪುಟಾಣಿಗಳು ..
ಪಾಠಗಳ ಮಧ್ಯೆ ಪ್ರವಚನ ಮಾಡಿಸುತ್ತ, ನನ್ನ ಧಾರ್ಮಿಕ ಗ್ರಂಥಗಳ ಓದನ್ನು ಮತ್ತೆ ಮೆಲುಕು ಹಾಕುವ ಹಾಗೆ ಮಾಡಿದ ಶಿಷ್ಯ ವೃಂದ..
ಛಾಯಾಗ್ರಹಣದ ಹವ್ಯಾವು ಮತ್ತಷ್ಟು ಹತ್ತಿರ ತಂದ ಪ್ರಕೃತಿಯಿಂದ ಇನ್ನೊಂದಿಷ್ಟು ಪಾಠ ಮನನ..
ಕಲಿತ ಪಾಠ ಲೆಕ್ಕವಿಟ್ಟಿಲ್ಲ...
ಕಲಿಸಿದ ಗುರುಗಳು ಅಸಂಖ್ಯಾತ..
ಮನದಲ್ಲಿ ನಿತ್ಯವೂ ಮಂಥನ ಇವರೆಲ್ಲರ ದಯೆಯಿಂದ!
ಎಲ್ಲರಿಗೂ ಈ ವಿಶೇಷ ದಿನದಂದು ಕೃತಜ್ಞತೆಗಳು ಹೃದಯಪೂರ್ವಕವಾಗಿ!
No comments:
Post a Comment