ಪಾರಿಜಾತ ತರುವಿನಡಿ
ಕಾಯುತ್ತಿದ್ದಳು ಅವಳವನ
ಕುತೂಹಲಿ ಲೋಕವು
ಕೇಳಿತು ತಡೆಯಲಾಗದೇ
ನೀ ಶಬರಿಯೇ..
ಬುಗುರಿ ಹಣ್ಣಿಲ್ಲವಲ್ಲ
ಮೂಗು ಮುರಿದಳು
ನೀ ಅಹಲ್ಯೆಯೇ..
ಶಿಲೆಯಲ್ಲ ನಾ
ಬುಸುಗುಟ್ಟಿದಳು
ನೀ ಕುಬ್ಜೆಯೇ..
ಬೆನ್ನು ನೆಟ್ಟಗಿದೆ
ದಿಟ್ಟತನದಿಂದಳು
ನೀ ಸೀತೆಯೇ..
ಲಂಕೆಗೆ ಹೋಗಿಲ್ಲವಲ್ಲ
ಲೊಚಗುಟ್ಟಿದಳು
ನೀ ಸತ್ಯಭಾಮೆಯೇ..
ನನ್ನಪ್ಪನ ಬಳಿ ಶ್ಯಮಂತಕ ಮಣಿಯಿಲ್ಲವಲ್ಲ
ಕತ್ತು ಕೊಂಕಿಸಿದಳು
ನೀ ಸತಿಯೇ..
ನನ್ನವನು ಭಸ್ಮಧಾರಿಯಲ್ಲವಲ್ಲ
ಪ್ರಶ್ನೆಯಾದಳು
ನೀ ಮೀರಳೇ..
ನನ್ನ ಹಾಡುಗಳಲ್ಲಿ ’ಗಿರಿಧರ’ ಕಂಡಿರಾ
ಕಣ್ಣುಮುಚ್ಚಿದಳು
ನೀ ಅಕ್ಕಮಹಾದೇವಿಯೇ..
ನಾ ಬರೆದುದೆಲ್ಲವು ಬರೇ ಶಬ್ದಗಳಲ್ಲವೆ
ಗಲ್ಲ ಒದ್ದೆಯಾಯಿತು
ಪ್ರಶ್ನೆಗಳ ಸುರಿಮಳೆ ಕೇಳಲಾಗದೆ
ಉಡಿಯಲಿದ್ದ ಕೊಳಲು ಉಲಿಯಿತು
ಅವಳು ಮಾಧವನ "ರಾಧೆ"!
No comments:
Post a Comment