“ಆಗ ಅದೇ ಕಾಲೇಜು
ದಿನಗಳಲ್ಲಿ ಹೇಗಿದ್ದಿಯೋ ಈಗ್ಲೂ ಹಾಗೆ ಇದ್ದಿಯಾ”
ಅವಳ ಮೆಸೇಜು!
ತುಂಬಾ ಹೆಮ್ಮೆ
ಅನಿಸದೇ ಇದ್ದಿತೇ.. ಎದ್ದು ಕನ್ನಡಿಯಲೊಮ್ಮೆ ಸರಿಯಾಗಿ ನೋಡ್ಕೊಂಡೆ. ಹೌದಲ್ವ! ಬೆಳ್ಳಿ ಕೂದಲು ಅಲ್ಲಲ್ಲಿ ಎದ್ದು ಕಾಣ್ತಿತ್ತು.. ಮೈ
ಒಂದಿಷ್ಟು ಅಗಲವಾಗಿದೆ. ಅದು ಬಿಟ್ರೆ ಮತ್ಯಾವ ವ್ಯತ್ಯಾಸ ಕಾಣದುದರಿಂದ ಖುಷಿಯಾಯ್ತು.
“ಥಾಂಕ್ಸ್..
ಒಂಚೂರು ದಪ್ಪ ಆಗಿದ್ದೇನೆ ಕಣೇ!”
ನನ್ನ ಉತ್ತರ.
“ಅರೇ, ನಿನ್ನ ರೂಪದ
ಬಗ್ಗೆ ಹೇಳಿದಲ್ಲ.. ನಿನ್ನ ಸ್ವಭಾವದ ಬಗ್ಗೆ.. “
ಟುಸ್ ಆಯ್ತು ನನ್ನ
ಖುಷಿಯ ಫುಗ್ಗೆ!
ನಾನು
ಉತ್ತರಿಸಲಿಲ್ಲ..
“ನೀನು ಹೋಗ್ತಿಯಲ್ಲ
ಕೆಲವೆಲ್ಲ ಸಮಾಜ ಉದ್ಧಾರ ಕಾರ್ಯಗಳಿಗೆ.. ಅಲ್ಲಿಗೆ ನಾನೂ ಬರ್ತಿದ್ದೆ. ನೀನೊಂದು ಮೂಲೆಯಲ್ಲಿ
ದಪ್ಪ ಮುಖ ಮಾಡ್ಕೊಂಡು ಕುತ್ಕೊಂಡಿದನ್ನು ನೋಡ್ಕೊಂಡು ನಂಗೆ ಹಳೇ ದಿನಗಳು ಜ್ಞಾಪಕ್ಕೆ ಬಂದವು!”
ಯಪ್ಪಾ! ಯಾರೆಲ್ಲ
ನನ್ನನ್ನು ಹೀಗೆ ಗಮನಿಸ್ತಾರೋ ಅಂತ ಅನಿಸಿ ಮುಜುಗರವಾಯ್ತು! ಈ ಗೆಳತಿ ನನ್ನ ಜೂನಿಯರ್ ಆಗಿದ್ಲು.
ಬರೇ ಮುಖ ನೋಡಿ ಅರಳಿಸುವಷ್ಟು ಪರಿಚಯವೇ ಹೊರತು ಮಾತನಾಡಿರಲಿಲ್ಲ.. ಸರಿ ಸಮಾರು ಎಂಟು ವರ್ಷಗಳು
ಅದೇ ಸ್ಕೂಲು ಕಾಲೇಜಿನಲ್ಲಿ ಕಲ್ತೂ!
“ನಂಬ್ತಿಯೋ
ಬಿಡ್ತಿಯೋ ನಿಂಗೆ ಬಿಟ್ಟಿದ್ದು, ನಾನು ನಿನ್ನ ನೋಡಿದಾಗಿನಿಂದ ನಿನ್ನ ಅಭಿಮಾನಿಯಾಗಿದ್ದೆ! ನಿನ್ನ
ಉದ್ದ ಜಡೆ, ಗಂಭೀರ ನಡೆ.. ಅದೇ ಏನ್ ಸ್ಪೀಡ್ ನಲ್ಲಿ ನಡಿತಿದ್ದಿಯೋ ಮಹರಾಯ್ತಿ! 100 ಮೀಟರ್ ಸ್ಪರ್ಧೆಗೆ ಓಡುವಂತೆ ನಡೆಯುವುದಿತ್ತು ನೀನು..
ಈಗಲೂ ಹಾಗೆ ನಡಿತಿಯಲ್ವಾ!“
“ನೀನು
ಹಾಕುತ್ತಿದ್ದ ಅದೇ ಪ್ಯಾರಚೂಟ್ ಅಂತ ನಾನು ನನ್ನ ಫ್ರೆಂಡ್ಸು ಕರಿತಿದ್ವಿ.. ತುಂಬಾ
ನೆರಿಗೆಗಳಿರುತ್ತಿದ್ದ ಉದ್ದ ಅಂಗಿ... ನಂಗಿನ್ನೂ ಬಣ್ಣನೂ ಜ್ಞಾಪಕಕ್ಕಿದೆ!”
ದಂಗಾಗಿಬಿಟ್ಟೆ!
ಆಗಿನ ಅವಳ ಮುಖ ನನ್ನೆದುರಿಗೆ ತೇಲಿತು! ಹಾ! ಇವಳು ಅಷ್ಟೇನು ಬದಲಾಗಿಲ್ಲ. ಎರಡು ವರ್ಷದ ಹಿಂದೆ
ಸಿಕ್ಕಿದಾಗ ನಾನು ಇವಳನ್ನು ಸುಲಭವಾಗಿ ಗುರುತಿಸಿದ್ದೆ.
ಮುಖ ತುಂಬಾ ನಗೆ ಹರಡಿ ನನ್ನ ಬಳಿ ಬಂದು ಬಾಯಿ ತುಂಬಾ ಮಾತನಾಡಿ ನಂಬ್ರ ಪಡೆದಿದ್ದಳು!
ಆಪಾದನೆಗಳು
ಸುರಿದವು ನನ್ನ ಮೇಲೆ.. ಹೌದು, ಅಲ್ಲಗಳೆಯೊಲ್ಲ ನಾನು! ಒಂಟಿ, ಮೌನಿಯಾಗಿದ್ದೆ ನಾನು.
ಕಾರಣಗಳಿದ್ದವು.. ಅವೆಲ್ಲವನ್ನೂ ನಾನು ಯಾರಿಗೂ ಅರ್ಥಮಾಡಿಸಲಾರೆ.
“ಲೇ, ನಾನೂ
ಬದಲಾಗಿದ್ದೇನೆ ಕಣೇ! ಈಗಂತೂ ತುಂಬಾ ಮಾತನಾಡುತ್ತೇನೆ.. ಬಾಯಿ ತುಂಬ ನಗುತ್ತೇನೆ.. ಬದುಕನ್ನು ಬಹಳಷ್ಟು ಎನ್ ಜಾಯ್ ಮಾಡುತ್ತಿದ್ದೇನೆ!”
“ಬಹಳಷ್ಟು ಬದಲಾಗಿದೆ
ನನ್ನ ಲೋಕ.. ನನ್ನ ಬದುಕಿನಲ್ಲಿ ಸಹಮನಸ್ಕರ ಆಗಮನವಾಗಿದೆ. ನಾನೀಗ ಹೊಸ ಭಾವ ಲೋಕದಲ್ಲಿದ್ದೇನೆ.
ಅಲ್ಲಿ ಮೌನಕ್ಕೆ ಆಸ್ಪದವಿಲ್ಲ.. ಮಾತುಗಳ ವರ್ಷ, ನಗೆ ಬುಗ್ಗೆ ಚಿಮ್ಮುತಿದೆ ನನ್ನ ಬದುಕಲ್ಲೀಗ!”
“ನೋಡಿರುವಿಯಲ್ಲಾ
ನನ್ನೀ ಹವ್ಯಾಸಗಳು ಆಮ್ಲಜನಕವೀಗ.. ನನ್ನ ಭಾವಗಳ ಮಸಾರೆ ಒಪ್ಪಿ ಚಾಚಿ ಬಂದಿರುವ ಬಾಹುಗಳಲ್ಲಿ
ನಾನಡಗಿರುವೆನೀಗ! ನೀನ್ಹೇಳಿದ ಹಾಗೆ ಮೌನ ಯುದ್ಧ; ಮಾತು ಶಾಂತಿ!”
ನಗೆ ಮುಖಗಳನ್ನು ಗಾಳಿ ಹೊತ್ತು ತಂದಿತು! ಮನದಂಗಳದಲ್ಲಿ
ಪಾರಿಜಾತ ಚೆಲ್ಲಾಡಿತು!
No comments:
Post a Comment