ಮುಂಜಾವು
ಮೆರವಣಿಗೆ-3
(ಇನ್ನೂ ಎರಡನೆಯ
ಕಂತು ಸಿದ್ಧವಾಗಿಲ್ಲ.. ಅದಕ್ಕಿಂತಲೂ ಮೊದಲು ಮೂರನೆಯ ಕಂತು ಹಾಕಲು ಕಾರಣ ನನಗೆ ಮತ್ತೆ ಮತ್ತೆ
ನಳಿನಿಯ ನೋವಿನ ಮುಖ ಕಾಡುತ್ತಿದೆ ಮತ್ತು ನಾನು ಅವಳನ್ನು ಬಿಟ್ಟು ಸೀದ ಮೇಲೆ ಊಟಕ್ಕೆ ಹೋದ
ತಪ್ಪಿಸ್ಥ ಭಾವ ಜತೆಗೆ ಮನೋಹರ್ ಅವರ ಭಾವುಕ
ಮನಸ್ಸಿನ ಅನುಭೂತಿ!)
ಈಗಲ್ ರಿಸಾರ್ಟ್ ನ
ಊಟದ ಕೋಣೆಯಲ್ಲಿ ತಡವಾಗಿ ಬಂದಿದ್ದ ನಳಿನಿಯ ಮುಖ ನೋಡಿದಾಗ ಧಸಕ್ಕಾಯಿತು.. ಮುಖ
ನಿಸ್ತೇಜವಾಗಿತ್ತು.. ಬಳಲಿಕೆಯಿಂದ ಏನೂ ತ್ರಾಣವಿರಲಿಲ್ಲವೆಂದು ಮುಖ ಸಾರಿ ಹೇಳುತಿತ್ತು.. ಮನ
ಬೆಳಿಗ್ಗಿನ ಪ್ರಯಾಣದ ನೆನಪು ಮಾಡಿತು!
ಅಯ್ಯೋ..
ಉಡುಪಿಯಿಂದ ಆಗುಂಬೆಗೆ ಬರುವಾಗಲೇ ತಿರುವುಗಳಲ್ಲಿ ನಮ್ಮ ಬಸ್ಸು ತಿರುಗಿದಾಗಲೆಲ್ಲ ಮುಖ
ಕಿವುಚಿಕೊಳ್ಳುತ್ತಿರುವುದು ನನ್ನ ಕಣ್ಣಿನಿಂದ ಅವಳಿಗೆ ಮುಚ್ಚಿಡಲಾಗಲಿಲ್ಲ. ನಿಜ ಹೇಳಬೇಕೆಂದರೆ
ನಮ್ಮಿಬ್ಬರ ನಿಜ ಪರಿಚಯ ಆ ದಿನವೇ ಆರಂಭವಾಗಿತ್ತು.. ನನಗಂತೂ vertigo, spondylitis ಕೇಳಿ ಗೊತ್ತಿತ್ತು.. ಓದಿ ಗೊತ್ತಿತ್ತು.. ಹೊರತು
ಇಷ್ಟು ಹೆಮ್ಮಾರಿಯಾಗಿ ಕಾಡ್ಬಹುದೆಂಬ ಕಲ್ಪನೆಯೇ ಇರಲಿಲ್ಲ. ಆ ನೋವಲ್ಲೂ ಜತೆಗಾರರ ಹಾಸ್ಯಗಳಿಗೆ
ಸಾಥಿ ನೀಡಿ ನಗುತ್ತಿದ್ದಳು. ಮನೋಹರ್ ದೃಷ್ಟಿ ಅವಳ ಮೇಲೆ ಇರ್ತಿತ್ತು.. ಒಂದು ಕಣ್ಣಿನ
ತುದಿಯಲ್ಲಿ ಇವಳ ನೋವು, ಇನ್ನೊಂದು ಕಣ್ಣ ತುದಿಯಲ್ಲಿ ಅವರ ಚಡಪಡಿಕೆ.. ನಾ ಏನೂ ಮಾಡಲು
ಸಾಧ್ಯವಿರಲಿಲ್ಲ, ನೋಡುವುದನ್ನು ಹೊರತು!
ಬಹುಷಃ ಆರನೆಯ ಅಥವಾ
ಏಳನೆಯ ತಿರುವಿನಲ್ಲೇ ಇರಬೇಕು, ಮುಗಿಲು ಮುಸುಕಿದ ಹಸಿರು ಗುಡ್ಡದ ಚೆಲುವು, ಝುಳು ಝುಳು ಬೀಳುವ
ಜಲಪಾತದ ಸದ್ದು.. ಸೊಬಗು ಮರುಳು ಮಾಡಿತ್ತು.. ಕೆರೆಹಾವಿನ ದರ್ಶನ ಎಲ್ಲರನ್ನೂ ಬೆಚ್ಚಿಸಿತಾದರೂ
ನನಗಂತೂ ಹೆಚ್ಚು ಕಡಿಮೆ ನಿತ್ಯದ ನೋಟವಾದುದರಿಂದ ಗಾಬರಿಯಿರಲಿಲ್ಲ.. ಹಾಗಿದ್ದರೂ ಇಲ್ಲಿಯ ತನಕ
ನನ್ನ ಕೆಮರಾ ಕಣ್ಣಿಗೆ ಸಿಕ್ಕಿಲ್ಲವಾದುದರಿಂದ ಒಂದು ಫೋಟೊ ಕ್ಲಿಕ್ಕಿಸಿಯೇಬಿಟ್ಟೆ. ನನ್ನ ಮುದ್ದು
ಕೆಮರಾದ ನೆನಪು ಕಾಡಿತು.. ಅದಿದ್ದರೆ ಈ ನೆನಪುಗಳನ್ನು ಮನಸ್ಸಿನಲ್ಲಿ ಬಂಧಿಸಿದ ಹಾಗೆ ನನ್ನ
ಗಣಕಯಂತ್ರದಲ್ಲೂ ಬಂಧಿಸಿ ಇಡ್ಬಹುದಾಗಿತ್ತು ಅಂತ ಅನಿಸಿದ್ದು ಖಂಡಿತ ಸತ್ಯರೀ!
ಆ ಮಣ್ಣಿನ ರಸ್ತೆಯಲ್ಲಿ ಪ್ರಶಾಂತಣ್ಣ ಹೇಳಿದಂತೆ
ಮೇಲೆರುವುದು ಕಷ್ಟ ಸಾಧ್ಯವೆಂದು ಡ್ರೈವರ್ ಮುಖದಲ್ಲಿನ ಆತಂಕ ತೋರಿಸಿತ್ತು.. ಒಮ್ಮೆಗೆ ರೀವರ್ಸ್
ತೆಗೆದುಕೊಂಡ ಅವನಿಂದ ನಳಿನಿ ನರಳಬೇಕಾಯಿತು.. ಒಂದಸಲ ಅವಳ ಮೇಲೆ ಜೋರು ಕೋಪ ಬಂತು.. ಸುಮ್ಮನೆ
ಕುತ್ತಿಗೆ ಬೆಲ್ಟ್ ತಂದಿದ್ದರೆ ಇಷ್ಟು ನೋವು ಅನುಭವಿಸಬೇಕಾತಿತ್ತಾ ಅಂತ! ಮನೋಹರ್ ಸರು ಮಧ್ಯ
ಮಧ್ಯ ಎದ್ದು ನಿಂತು ತಮ್ಮ ಸೊಂಟ ನೆಟ್ಟಗೆ ಮಾಡಿಕೊಳ್ತಿದ್ದರು.. ತಮಗಾಗಿ ತಂದ ದಿಂಬನ್ನು
ನಳಿನಿಗಾಗಿ ಕೊಟ್ಟರು. ಎಲ್ಲರ ನೋಟ ತನ್ನ ಮೇಲೆ ಬರುವುದನ್ನು ತಪ್ಪಿಸಲು ಆದಷ್ಟು ನೋವನ್ನು
ನುಂಗುತ್ತಿದ್ದದು ನನ್ನ ಗಮನಕ್ಕಿಂತ ಮನೋಹರ್ ಗಮನಕ್ಕೆ ಹೆಚ್ಚು ಬಂದಿತ್ತು. ಬಹುಶಃ ಅವರಿಗೆ ಈ
ನೋವಿನ ತೀವ್ರತೆಯ ಅನುಭವವಿತ್ತು.
ಕೊನೆಗೂ 20 ನಿಮಿಷದ ಹಾದಿಯೆಂದದನ್ನು ಮುಕ್ಕಾಲು ಗಂಟೆಯಲ್ಲಿ
ತಲುಪಿದ್ರೆ.. ಅಲ್ಲೂ ಇನ್ನೂ ನಡಿಬೇಕಿತ್ತು. ನಂಗೋ ಅದು ಏನೂ ಅಲ್ಲ.. ( ನಡಿಗೆಯಲ್ಲಿ
ಸ್ಪೆಷಲಿಸ್ಟ್ ನಾನು) ಹೆಜ್ಜೆ ಹಾಕಿದವರ ಜತೆ
ನಾನೂ ಸೇರಿದೆ.. ಮಧ್ಯದಲ್ಲಿ ನೋಡುವಾಗ ನಳಿನಿ ನಮ್ಮ ಜತೆಯಲಿಲ್ಲ.. ನಾವು ಮೇಲೆ ತಲುಪಿ ಊಟ
ತೆಗೆದುಕೊಂಡು ಶುರು ಮಾಡಿದ್ದರೂ ನಳಿನಿ, ಮನೋಹರ್, ಅವಿನಾಶ್, ಅಪರ್ಣಾ.. ಇವರ ಪತ್ತೆ ಇಲ್ಲ!
ಸಣ್ಣಗೆ ಆತಂಕವಾಯ್ತು..
ಕೊನೆಗೂ ಬಂದ್ರು..
ನನ್ನೆದುರು ಕೂತ ನಳಿನಿಯನ್ನು ಕಂಡು ತಪ್ಪಿಸ್ಥ ಭಾವನೆ ಕಾಡಿತು.. ಅದೇ ಕೊನೆ, ಮತ್ತೆ
ನಳಿನಿಯನ್ನು ನಾನು ನೋಡಿಕೊಳ್ಳುವ ಮಾತನ್ನು ಮನದಲ್ಲೇ ಇತ್ತೆ! ಮರುದಿನ ನಳಿನಿ ಕಿಣಿಯವರ
ಮನೆಯಲ್ಲಿ ನಮ್ಮದೇ (ವೀಣಕ್ಕ ಮತ್ತು ನಾನು) ಕೋಣೆಯಲ್ಲಿ ಉಳಿಯಲೆಂದು ಹರಪ್ರಯತ್ನ ಮಾಡಿದ್ದರೂ
ನಳಿನಿ ಮೇಲಿನ ಕೋಣೆಗೆ ಹೋದಾಗ ಮನಪೆಚ್ಚಾಯಿತು!
ಗಾಜಿನ ಕೋಣೆಯ
ಸೊಗಸು ನೋಡಿ ಮರುಳಾಗಿಬಿಟ್ಟೆ.. ಸಾಮಾನ್ಯವಾಗಿ ನಾನು ಐಷರಾಮಿ ಜೀವನವನ್ನು ಕಟುವಾಗಿ ಟೀಕಿಸುವ
ಜಾತಿ.. ಆಳೆತ್ತರದ ಕನ್ನಡಿ, ಈಜು ಕೋಳ.. ಮರುಳು ಮಾಡಿತು. ಮೆತ್ತಗಿನ ಹಾಸಿಗೆಯಲ್ಲಿ ಬಿದ್ದು
ಒಂದಷ್ಟು ಹೊತ್ತು ಮಾತುಕತೆ ಮಾಡುತ್ತಿದವರಿಗೆಲ್ಲ ಅನಿತನ ನೈಲ್ ಆರ್ಟ್ ಕೌಶಲ್ಯ! ಅಪರ್ಣನಿಗೆ
ತಪ್ಪಿತು.. ನಾವೆಲ್ಲ ಎಂಜಾಯ್ ಮಾಡಿದೆವು!
ಸಂಜೆ ಮೇಲಿನ
ಕೋಣೆಯಲ್ಲಿ ಈಜುಕೊಳದ ಬದಿಯ ಪಂಚಾದಿಕೆಯ ನೋಟವನ್ನೀಗಾಗಲೇ ಅವಿನಾಶ್ ಬಡಿಸಿದ್ದಾರೆ..ಅಲ್ಲಿಂದ
ಮತ್ತೆ ನಾವು ಹೆಂಗಸರು ಕೋಣೆಗೆ ಮರಳಿದಾಗ ಎಲ್ಲರಿಗೂ ಮನೋಹರ್ ಅವರ ಜನುಮದಿನವನ್ನು ಆಚರಿಸುವ
ಉತ್ಸಾಹ!
ಅನಿತ ತಾನು ಮನೋಹರ್
ಸರ್ ಗೆ ಮಾಡಿದ ಜನುಮದಿನದ ಕಾರ್ಡನ್ನು ತೋರಿಸಿದಾಗ ಈ ಹುಡುಗಿಯ ಉತ್ಸಾಹ ಕಂಡು ನಾ ಬೆರಗಾದೆ.. ನಳಿನಿನೂ
ತಾನು ತಂದಿರುವ ಬಾಲ ಕೃಷ್ಣನ ವಿಗ್ರಹದ ಬಗ್ಗೆ ಹೇಳಿದಾಗ.. ನಾನು ಒಂದಿಷ್ಟು ಪೆಚ್ಚಾದೆ. ನಿಜ
ಹೇಳಬೇಕೆಂದರೆ ನಾನವರಿಗೆ ನೂಲಹುಣ್ಣಿಮೆ ದಿನ ನನ್ನ ಹುಟ್ಟಿದ ದಿನ ಅದೇ ಆಗಸ್ಟ್ 20ರಂದೇ ಹಾರೈಸಿದ್ದೆ.. ಅಲ್ಲದೆ ನಮಗೆಲ್ಲ ಹೀಗೆ ಆಚರಣೆ ಮಾಡಿನೂ
ಅಭ್ಯಾಸವಿರಲಿಲ್ಲ.. ಅಪರ್ಣಾ ತಂದ ಕಾರ್ಡ್ ನೋಡಿ
ಮತ್ತಷ್ಟು ಮುಖ ಸಣ್ಣಗಾಯಿತು.
“ನೀವೆಲ್ಲ
ಮುನ್ನನಿಗಾಗಿ ಏನೆಲ್ಲ ತಂದಿದ್ದಿರಿ.. ನಾನೇನು ತಂದಿಲ್ವೆ!”
ವೀಣಕ್ಕನೂ ತುಸು
ಬೇಸರಮಾಡಿಕೊಂಡರು!
ಹೇಗೆ ಅಂತ
ನೆನಪಾಗ್ತಾ ಇಲ್ಲ.. ಆದ್ರೆ ನಾನು ಹಲ್ವಾ ತಂದ ವಿಷಯ ನೆನಪು ಮಾಡಿಕೊಂಡು ನಳಿನಿ ಕೇಕು ತಯಾರಿಸುವ
ಕಾರ್ಯ ಸುರುಮಾಡಿದರು.. ಹಲ್ವ ತುಂಡು ಮಾಡಿದಷ್ಟೆ ನನ್ನ ಕೆಲಸ.. ಎಷ್ಟು ಚಂದ ಮಾಡಿ ಕೇಕ್
ತಯಾರಿಸಿಬಿಟ್ರು ಅನಿತಾ ಮತ್ತು ನಳಿನಿ!
ಮತ್ತೆ ಕೆಳಗೆ
ಸುರಿಯುವ ಹನಿಯಲ್ಲೆ ಬೆಂಕಿಯ ಬಳಿ ಪ್ರಶಾಂತಣ್ಣನ ಲುಂಗಿ ಡ್ಯಾನ್ಸ್. ಒಂದಿಷ್ಟು ಮಾತು ಕತೆ..
ಮುಂದಿನ ಬರವಣಿಗೆಯ ಬೆಳವಣಿಗೆ.. ನವರಸಗಳ ಬಗ್ಗೆ ಚರ್ಚೆ, ಮಧ್ಯ ಮಧ್ಯ ಕರ್ಕಶ ಹಾಡಿನ ಕಿರಿಕಿರಿ..
ಒಂದಿಷ್ಟು ಡಿಂಗ್ ಡಾಂಗ್.. ಎಲ್ಲರಿಗೂ ಮೆರವಣಿಯ ಅಮಲು ಬಂದಿತ್ತೇನೋ!
ಊಟದ ನಂತರ ಮತ್ತೆ
ಕೋಣೆಗೆ ಮರಳಿದೆವು.. ಒಳಗೆ ಹೋಗದೆ ಮತ್ತೆ ಅಲ್ಲೇ ಕೋಣೆಯ ಹೊರಗೆ ಅನಿತಾಳ ಫೋನಿನ ಮಾತಿನ
ಹಾವಯವಯಗಳಲ್ಲೆ ಅವಳು ಯಾರ ಜತೆಗೆ ಮಾತನಾಡುತ್ತಾಳೆಂಬ ಊಹೆ.. ಅಲ್ಲಿ ಮಳೆಯ ಶಬ್ದಕ್ಕಿಂತ ನಗುವಿನ
ಜಲಪಾತದ ಬೋರ್ಗೆರೆತ ಹೆಚ್ಚಿತ್ತು.. ನಮ್ಮೆಲ್ಲ ನೋವುಗಳನ್ನು ಊರಲ್ಲೇ ಬಿಟ್ಟು ನಾವು
ಮನಃಪೂರ್ವಕವಾಗಿ ಗಂಡು ಹೆಣ್ಣು ಭೇದವಿಲ್ಲದೆ ಸಮಾನವಾಗಿ ಅಲೌಕಿಕ ಸುಖ ಅನುಭವಿಸಿದೆವು! ಹೆಚ್ಚು
ಕಡಿಮೆ ಮೂರು generationಗಳಿದ್ದವು ನಮ್ಮ
ಗುಂಪಿನಲ್ಲಿ.. ಆದರೆ ಮೊದಲ ಬಾರಿಗೆ ವಯಸ್ಸು ಲಿಂಗ ಭೇದವಿಲ್ಲದೆ ನಗೆಬುಗ್ಗೆಯಲ್ಲಿ ಪಾಲ್ಗೊಂಡ
ಅನುಭವ ಈ ಜನದಲ್ಲಿ ಮರೆಯಲಾರೆ!
ಇವತ್ತು ನಂಗೆ ಬೇಗ
ಮಲಬೇಕು ಅಂತ ಹೇಳ್ತಾ ಇದ್ದ ಅನಿತಾಳ ನಿದ್ದೆ ಎಲ್ಲಿ ಓಡಿತ್ತೇನೋ! ಅಂತೂ ಎಲ್ಲರೂ 12 ಆಗುದನ್ನೇ ಕಾದಿದ್ದರು..
ಇನ್ನು ಮೇಲೆ ಹೋದಾಗ
ನಡೆದುದನ್ನು ನೀವೀಗಾಗಲೇ ಅವಿನಾಶನ ಮಾತಲ್ಲಿ ಕೇಳಿದ್ದಿರಿ!
....ಇನ್ನೂ ಇದೆ!
No comments:
Post a Comment