ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 October, 2011

ಉಜ್ವಾಡು- ಒಂದು ವಿಮರ್ಶೆಯ ಯತ್ನ!



      ಯಾಕೋ ಏನೋ ಅನೇಕ ದಿನದಿಂದ ಈ "ಉಜ್ವಾಡು"- ಕೊಂಕಣಿ ಚಲನ ಚಿತ್ರದ ಬಗ್ಗೆ ಬರೆಯಬೇಕೆನಿಸುತಿತ್ತು...ಸುಮಾರು ೨೫ ವರ್ಷಗಳ ನಂತರ ಚಿತ್ರಮಂದಿರಕ್ಕೆ ನನ್ನ ಭೇಟಿ! ೩ ಗಂಟೆಯನ್ನು  ಕತ್ತಲ ಕೋಣೆಯಲ್ಲಿ ಕಳೆಯುವುದು ನನ್ನ ಪಾಲಿಗೆ ಶಿಕ್ಷೆಯಂತೆ ಕಾಣುತಿತ್ತು....ಸಮಯವೂ ವ್ಯರ್ಥವಾದಂತೆ ಅನಿಸುತಿತ್ತು. ಆದರೆ ನಮ್ಮ ಮಾತೃ ಭಾಷೆಯಲ್ಲಿ ತಯಾರಾದ ಚಿತ್ರ ನೋಡಿ ಪ್ರೋತ್ಸಾಹಿಸುವುದು ನನ್ನ ಕರ್ತವ್ಯವೆಂದೆನಿಸಿ....ನನ್ನ ಸ್ನೇಹಿತೆಯ ಬಳಿ ಮಾತಾಡಿ ಜೊತೆಯಲ್ಲೇ ನೋಡುವ ಆಲೋಚನೆ ಮಾಡಿದೆವು. ರಮೇಶ್ ಭಟ್‍ನವರು ಬಹುಶಃ ೩೦ ವರ್ಷಗಳ ಹಿಂದೆ ತಯಾರಿಸಿದ "ಜನಮನ" ನೋಡಿದ್ದು ನೆನಪಿನಲ್ಲಿದೆಯಾದರೂ ಕತೆಯ ಸ್ಮೃತಿ ಮಸುಕಾಗಿ ಉಳಿದಿದೆ...ಚಿತ್ರದ ನಾಯಕಿ ನೇಣು ಹಾಕಿಕೊಳ್ಳುವ ದೃಶ್ಯ ಮಾತ್ರ  ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ...


    ಒಂದು ಚಲನಚಿತ್ರವನ್ನು ವಿಶ್ಲೇಷಿಸುವಷ್ಟು ಯೋಗ್ಯತೆ ನನ್ನಲ್ಲಿ ಇದೆಯೋ ತಿಳಿದಿಲ್ಲ..ಆದರೆ  ನನ್ನ ಮನದ ಪುಟದಲ್ಲಿ ಮೂಡಿದ ಭಾವನೆಗಳನ್ನು ಇದರಲ್ಲಿ ಬಟ್ಟಿಗಿಳಿಸಲು ಯಾರಪ್ಪಣೆಗಾಗಿ ನಾನು ಕಾಯಬೇಕಿಲ್ಲವಾದ್ದರಿಂದ ನನ್ನ ಅನಿಸಿಕೆಗಳಿಗೆ ಅಕ್ಷರರೂಪವನ್ನು ಕೊಡುವ ಯತ್ನ ಮಾಡಿದ್ದೇನೆ.


ಚಿತ್ರಗಳು ಅಂತರ್ಜಾಲದಿಂದ ಎತ್ತಿದ್ದು!








      "ಉಜ್ವಾಡು"- ಇದರ ಬಗ್ಗೆ ಗೊತ್ತಿಲ್ಲದವರಿಗೆ ಒಂದು ಪುಟ್ಟ ಮಾಹಿತಿ. ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ನಿಯುಕ್ತರಾದ ಕಾಸರಗೋಡು ಚಿನ್ನಾನವರ ( ಶ್ರೀನಿವಾಸ ರಾವ್) ಕತೆ, ನಿರ್ದೇಶನ;  ಪ್ರಶಸ್ತಿ ವಿಜೇತ- ಪೆರ್ಲ ಗೋಪಾಲಕೃಷ್ಣ ಪೈನವರ ಸಂಭಾಷಣೆ;  ಚಿತ್ರ ಕತೆ; ಜಯಂತ ಕಾಯ್ಕಿಣಿಯವರ ಸುಮಧುರವಾದ ಗೀತೆ; ಹರಿಕಥಾ ಶಿರೋಮಣಿ ಅಚ್ಚುತದಾಸರ ಗೀತೆ; ಪುತ್ತೂರು ನರಸಿಂಹ ನಾಯಕ್‍ನವರ ಗಾನ...ಅಲ್ಲದೆ ಕನ್ನಡ ನಟಿ ಉಮಾಶ್ರಿ, ಶಿವಧ್ವಜ್, ತರಂಗ ವಾರ ಪತ್ರಿಕೆಯ ಸಂಪಾದಕಿ ಸಂಧ್ಯ ಪೈ, ಓಂ ಗಣೇಶ್, ನೀತು, ಪ್ರಮಿಳಾ ನೇಸರ್ಗಿ, ಸದಾಶಿವ ಬ್ರಹ್ಮಾವರ್ ಮೊದಲಾದ ಪ್ರಸಿದ್ಧ ಕಲಾವಿದರು ನಟಿಸಿದ್ದಾರೆ.


ಸೈಕಲ್ ಗಣ್ಣು- ಅತ್ಯುತ್ತಮ ಅಭಿನಯ! ಶಿವದ್ವಜ್, ನೀತು, ಓಂ ಗಣೇಶ...


             












     ಮೊದಲಾಗಿ ಕತೆಯ ಬಗ್ಗೆ....ಬೇಸರದ ವಿಷಯವೇನೆಂದರೆ ಇದರಲ್ಲಿ ಕತೆಗಿಂತ ಕೊಂಕಣಿ ಜನರ ಸಂಪ್ರದಾಯದ ಬಗ್ಗೆ ಒತ್ತುಕೊಡಲಾಗಿದೆ. ಎಲ್ಲವನ್ನೂ ಈ ೨ ೧/೨ ಗಂಟೆಯಲ್ಲಿ ತುರುಕುವ ಯತ್ನ ಮಾಡಲಾಗಿದೆ. ಅದಕ್ಕಿಂತ ಈ ಬಾಲ ಕಲಾವಿದ ಗಣ್ಣು...-ಇವನ ಕತೆಯನ್ನೇ ಹೇಳಬಹುದಿತ್ತು. ಸಾಮಾನ್ಯವಾಗಿ ಎಲ್ಲಾ ಚಿತ್ರಗಳಲ್ಲಿರುವ ಮಸಾಲೆಯನ್ನು ಇದರಲ್ಲಿ ತುರುಕಲಾಗಿದೆ..ಯಾಕೆ ಈ ಪ್ರೀತಿ, ಪ್ರೇಮ ಹೊಡೆದಾಟ, ರೌಡಿಗಿರಿ....ಇದಿಲ್ಲದೆ ಚಲನ ಚಿತ್ರವನ್ನು ಮಾಡಲಾಗುವುದಿಲ್ಲವೇ?  ಸಂಕ್ಷಿಪ್ತವಾಗಿ ಕತೆ ಹೇಳುವುದಾದರೆ- ಒಂದು ಅನಾಥ ಹುಡುಗನಿಂದ ಚಿತ್ರ ಪ್ರಾರಂಭವಾಗುತ್ತದೆ...ಸೈಕಲಿನಲ್ಲೇ ತಿರುಗುವ ಗಣ್ಣು ಊರಿನ ಎಲ್ಲರ ಬಿಟ್ಟಿ ಕೆಲಸಗಾರ.....ಮತ್ತು ಊರಿನವರು ಗೌರವಿಸುವ ಮಾಸ್ತರ ಮನೆಯಲ್ಲಿ ಇವನ ವಾಸ. ಕಥಾನಾಯಕ ಶಿವದ್ವಜ ಊರಿನ ಕಾಲೇಜಿನಲ್ಲಿ ಇಂಗ್ಲಿಷ್ ಲೆಕ್ಚರಾಗಿ ಎಂಟ್ರಿ ಕೊಡುತ್ತಾರೆ...ಇಲ್ಲಿ ಸರ ಕಳುವಾಗುವ ದೃಶ್ಯ ತೋರಿಸಲಾಗುತ್ತದೆ...ಅಷ್ಟೆ, ನಂತರ ಈ ಬಗ್ಗೆ ಏನೂ ತೋರಿಸಲಾಗುವುದಿಲ್ಲ...ಇದು ಸಂಕಲನದ ಪ್ರಭಾವವೋ ಏನೋ?   ಮಾಸ್ತರ ಹೆಂಡತಿಯ ದೇಹಾಂತ್ಯವಾಗಿದ್ದರೂ ಅವರು ಪ್ರತಿಯೊಂದಕ್ಕೂ ತಮ್ಮ ಪತ್ನಿಯ ಚಿತ್ರಪಟದ ಒಪ್ಪಿಗೆ ಕೇಳುವ ಕೊನ್‍ಸೆಪ್ಟ್ ಬಹಳ ಮುದ ನೀಡುತ್ತದೆ.  ನಾಯಕನಿಗೆ ಮಾಸ್ತರ ಅನಾಥಾಶ್ರಮದಲ್ಲಿ ವೃದ್ಧರ ಸೇವೆ ಮಾಡುವ ನಾಯಕಿಯಲ್ಲಿ ಪ್ರೇಮ ಮೂಡುತ್ತದೆ. ಪುಣ್ಯಕ್ಕೆ ಇಲ್ಲೊಂದು ಡ್ಯುಯೆಟ್ ತುರುಕಲಿಲ್ಲ. ಇದೆಲ್ಲವೂ ಸರಿಯೇ ಇದೆ..ಆದರೆ ಇಲ್ಲೊಂದು ಪ್ಯಾರಲಲ್ ಪ್ರೀತಿಯ ಕತೆಯಿದೆ...ನಾಯಕಿಯ ಸ್ನೇಹಿತೆಗೆ ಅದೇ ಊರಿನಲ್ಲಿ ದೊಡ್ಡ ಕುಟುಂಬದಲ್ಲಿ ವಾಸ ಮಾಡುತ್ತಿರುವ ವ್ಯಾಪಾರಿಯ ಮಗನಿಗೂ ಪ್ರೀತಿ ಹುಟ್ಟುತ್ತದೆ. ಗುಟ್ಟಾಗಿ ಭೇಟಿಗಳೂ ನಡೆಯುತ್ತಿರುತ್ತದೆ...ಊರಿನ ಕಟ್ಟೆಯಲ್ಲಿ ಕುಳಿತುಕೊಳ್ಳುವ ಹುಡುಗರಿಗೆ ಇದು ತಮಾಶೆಯ ವಿಷಯವಾಗುರುತ್ತದೆ. ಇದಕ್ಕೊಂದು ಟ್ವಿಸ್ಟ್...ಈ ಹುಡುಗಿಯನ್ನು ನೋಡಲು ವಿದೇಶದ ವರ ಬರುತ್ತಾನೆ...ಇಲ್ಲೊಂದು ಮಾತು ಹೇಳಬೇಕು. ಈ ಹುಡುಗಿಯ ತಾಯಿಯಾಗಿ ಉಮಾಶ್ರಿಯ ಅಭಿನಯ ಮೆಚ್ಚುವಂತದ್ದು... ಅಪ್ಪಟ ಕೊಂಕಣಿ ಹೆಂಗಸಿನ ಅಭಿನಯ! ಹಾಗೆಯೇ ಚಿಕ್ಕದಾಗಿದ್ದರೂ ಸಂಧ್ಯಾ ಪೈ ಅವರೂ ವರನ ತಾಯಿಯಾಗಿ ನುರಿತ ಅಭಿನೇತ್ರಿಯಂತೆ ನಟಿಸಿದ್ದಾರೆ. ಆಕ್ಷೇಪಣೆಯಿರುವುದು ವರನ ವಿಷಯದಲ್ಲಿ ಮತ್ತು ಈ ವಿಷಯದ ನಿರೂಪಣೆಯಲ್ಲಿ- ವರನ ಪಾತ್ರ ನಟಿಸಿದ ವರನ ಮುಖ ಭಾವ ರಹಿತವಾಗಿತ್ತು...ಮತ್ತು ಅದಾಗಲೇ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ಹುಡುಗಿ ಅಂತಹ ಯಾವುದೇ ಭಾವನೇ ಇಲ್ಲವೆಂಬಂತೆ ವರನ ಹಾಗೂ ಅವನತಂದೆ ತಾಯಿಯರ ಜೊತೆ ನಗುತ್ತಾ ಇರುತ್ತಾಳೆ. ಇದಕ್ಕೆ ನನ್ನ ಸ್ನೇಹಿತೆಯ ಸಮರ್ಥನೆ- ನಮ್ಮ ಹುಡುಗಿಯರು ತಮ್ಮ ಮನೆತನಕ್ಕಾಗಿ ಎಲ್ಲವನ್ನು ತ್ಯಾಗ ಮಾಡುತ್ತಾರೆ! ಹಾಗಾದರೆ ಪ್ರೀತಿಯಲ್ಲಿ ಯಾಕೆ ಬೀಳಬೇಕಾಗಿತ್ತು? ನನ್ನ ಪ್ರಶ್ನೆ! ಇಲ್ಲೊಂದು ದೃಶ್ಯ- ಹುಡುಗ  ಹುಡುಗಿಗೆ ಮಾತಾಡಲು ಕಳುಹಿಸಲಾಗುತ್ತದೆ...ಆದರೆ ಆ ದೃಶ್ಯವನ್ನು ತೋರಿಸುವುದಿಲ್ಲ. ಹುಡುಗಿ ಮದುವೆಗೆ ಒಪ್ಪಿಗೆ ಕೊಡುತ್ತಾಳೆ...ಅದ್ಯಾಕೆ ಅವಳು ತನ್ನ ಭಾವನೆ ಹೇಳಿಕೊಳ್ಳುವುದಿಲ್ಲ...ಬಹುಶಃ ಸುಮಾರು ಹತ್ತು ವರ್ಷಗಳ ಹಿಂದೆಯೇ ಮಗಳ ಒಪ್ಪಿಗೆಯೂ ನಮ್ಮಲ್ಲಿ ಕೇಳುವುದು ಶುರುವಾಗಿದೆ ಅನಿಸುತ್ತದೆ. ಹಾಗಾಗಿ ಚಿತ್ರದಲ್ಲಿಯೂ ಇದನ್ನು ತೋರಿಸಲಾಗಿದೆ. ಆಧುನಿಕ ಹುಡುಗಿಯಾಗಿದ್ದರೂ ಯಾಕೆ ಅವಳು ತನ್ನ ಪ್ರೀತಿ ಬಗ್ಗೆ ಹೇಳಿಕೊಳ್ಳದೆ ಬೇರೊಂದು ಮಾತಿಗಾಗಿ ತಾಯಿ ಮೇಲೆ ಕೋಪಗೊಳ್ಳುತ್ತಾಳೆ?






















     ಹುಡುಗಿ ಬಗ್ಗೆ ಏನಾದರೂ ಕೊಕ್ಕೆ ಹೇಳುವುದು ಬಹುಶಃ ಎಲ್ಲಾ ವರ್ಗ ಜಾತಿಯಲ್ಲೂ  ಇರುವುದು...ಹಾಗೆ ಚಿತ್ರದಲ್ಲಿಯೂ ಮರ್ತುವಿನ ರೂಪದಲ್ಲಿ ಅದನ್ನು ಹೇಳಿದ್ದಾರೆ ನಿರ್ದೇಶಕರು. ಆದರೆ ವರನ ತಾಯಿ ತಂದೆ ಅದಕ್ಕೆ ಹೆಚ್ಚು ಗಮನ ಕೊಡದಿದ್ದರೂ ವರ ಅದನ್ನೇ ದೊಡ್ಡದಾಗಿ ಮಾಡಿ ಮದುವೆ ನಿರಾಕರಿಸುತ್ತಾನೆ. ಆಧುನಿಕ ಹುಡುಗರು ಅದರಲ್ಲೂ ಅಮೇರಿಕಾದಲ್ಲಿರುವನ ಮನಸ್ಥಿತಿ ಹೀಗಿರುತ್ತದೆಯೇ? ನಿರಾಕರಿಸಬೇಕಾಗಿದ್ದ ಹುಡುಗನ ಪೋಷಕರಿಗೆ  ಒಪ್ಪಿಗೆ ಇರುತ್ತದೆ. ಮಹಾ ಆಶ್ಚರ್ಯ!
   ಇದರಲ್ಲಿ ನಮ್ಮ ಸಮಾಜದ ಹುಡುಗಿಯರ ತಾಯಿಯಂದಿರ ಅಭಿಪ್ರಾಯವನ್ನು ಒತ್ತು ಕೊಟ್ಟು ಹೇಳಲಾಗಿದೆ...ಇದು ೧೦೦% ನಿಜವೂ ಹೌದು. ಮದುವೆಗೆ ವರ ಹುಡುಕುವಾಗ ತಮ್ಮ ಮಗಳಿಗೆ ಅತ್ತೆ ಮಾವಂದಿರು ಇಲ್ಲದ ಮನೆಯನ್ನೇ ಹುಡುಕುವ ಪರಿಪಾಟವು ಆರಂಭವಾಗಿದೆ. ಇಲ್ಲಾ ಹುಡುಗ ಪರ ಊರಿನಲ್ಲಿರಬೇಕು ಅಥವಾ ಬೇರೆ ಮನೆ ಮಾಡಬೇಕು...ಅಲ್ಲಾ ಇವರ ಮಗನಿಗೆ ಹೆಣ್ಣು ಕೊಡುವವರೂ ಹೀಗೆ ಆಲೋಚಿಸುವುದಿಲ್ಲವೇ? ಬಿಡಿ, ನಾನು ಇಲ್ಲಿ ವಿಷಯಾಂತರ ಮಾಡಲು ಹೋಗುವುದಿಲ್ಲ.


    ಚಿತ್ರದಲ್ಲಿ ಕೊಂಕಣಿ ಸಮಾಜದ ಶ್ರಾವಣ ಮಾಸ ಮತ್ತು ರಥೋತ್ಸವವನ್ನು ವೈಭವಿಕರಿಸಲಾಗಿದೆ. ಬಹುಶಃ ರಥೋತ್ಸವದ ಊಟ ನಮ್ಮವರ ವೀಕ್‍ನೆಸ್...ಇದನ್ನು ಇದರಲ್ಲಿ ಮಾಲತಿ ಮಾಯಿಯ ಮೂಲಕ ತೋರಿಸಲಾಗಿದೆ!  ದಾಳಿತೋವೆ  ಕೊಂಕಣಿ ಸಮಾಜದ ದೌರ್ಬಲ್ಯ!


   ಒಕ್ಕುಳಿ ನಡೆಯುತ್ತಿರುವ ದೃಶ್ಯ..ಮಗು ನೀರಿಗೆ ಬೀಳುವುದು...ಮಗುವನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಗಣ್ಣುವಿನ ಅಂತ್ಯ...ಯಾಕೋ ಕತೆಯಲ್ಲಿ ಗಣ್ಣುವಿನ ಅಂತ್ಯ ಅಗತ್ಯವಿಲ್ಲವಿತ್ತು ಅನಿಸುತ್ತದೆ...ಒಂದು ಬೆಳಕು ನಂದಿಹೋಗುತ್ತದೆ ಮತ್ತೊಂದು ಬೆಳಕು ಹುಟ್ಟುತ್ತದೆ!


     ಛಾಯಾಚಿತ್ರಗಾಹಿ-ಉತ್ಪಲ್ ನಯನಾರ್ ಕೆಲವೊಮ್ಮೆ ಅವಸರ ಮಾಡಿದ್ದಾರೆನೆಸುತ್ತದೆ...ಪ್ರಸಿದ್ಧ ಸುರೆಶ್ ಅರಸ್ -ಸಂಕಲಕಾರರು....ಯಾಕೋ ಅಲ್ಲಲ್ಲಿ ಎಳೆ ತಪ್ಪಿದಂತೆ ಕಾಣುತ್ತದೆ. ಕತೆ ನಿರೂಪಣೆ ಸಾಧಾರಣ. ನಿರ್ದೇಶನ ಸಾಧಾರಣ. ನಟನೆ ಅತ್ಯುತ್ತಮ..ಬಾಲ ನಟ ಗಣ್ಣು ಸಹಜವಾದ ಅಭಿನಯ! ತುಂಬಾ ಕಾಲ ನೆನಪಿನಲ್ಲಿ ಉಳಿಯುವ ಪಾತ್ರ. ಶಿವಧ್ವಜ- ಉತ್ತಮವಾಗಿ, ಕೊಂಕಣಿಯವರ ಸಹಜ ನಟನೆ, ನೀತು- ತಮ್ಮ ಪಾತ್ರವನ್ನು ಅಚ್ಚುಕಾಟ್ಟಗಿ ಮಾಡಿದ್ದಾರೆನ್ನಲಡ್ಡಿಯಿಲ್ಲ.  ಸತೀಶ್ ನಾಯಕ್, ಓಂ ಗಣೇಶ್, ಮತ್ತು ಕಟ್ಟೆ ಹುಡುಗರು, ಮರ್ತುವಿನ ಪಾತ್ರಧಾರಿ ಬಹಳ ಸಹಜ ನಟನೆ..ಅತ್ಯುತ್ತಮ ಅಭಿನಯ.
ಬಿಡುಗಡೆಯ ದಿನದ ನೆನಪು!


ಬಿಡುಗಡೆಯ ದಿನದ ನೆನಪು!


















   ಒಟ್ಟಾರೆ ಈ ಚಿತ್ರ ಮನೆ ಮಂದಿಲ್ಯೆಲ್ಲ ಕುಳಿತು ನೋಡಲು ಅಡ್ಡಿಯಿಲ್ಲ...ಬಹುಶಃ ವಿಷ್ಣುವರ್ಧನವರ ಯಜಮಾನ ಚಿತ್ರದಂತೆ ಮತ್ತೆ ಮತ್ತೆ ನೋಡಬಹುದಾದ ಚಿತ್ರ. ಕೊಂಕಣಿ ಭಾಷಿಗರು ಒಮ್ಮೆಯಾದರೂ ನೋಡಲೇಬೇಕು...ಕಡಿಮೆಪಕ್ಷ ಚಿನ್ನನವರನ್ನು ಪ್ರೋತ್ಸಾಹಿಸಲಿಕ್ಕಾದರೂ!


   ಭವಿಷ್ಯದಲ್ಲಿ ಚಿನ್ನನವರಿಂದ ಮತ್ತು ನಟನಾವರ್ಗಗಳಿಂದ ಇನ್ನೊಂದು ಕೊಂಕಣಿ ಚಿತ್ರದ ನಿರೀಕ್ಷೆ ಹುಟ್ಟಿಸಿದೆ ಈ ಉಜ್ವಾಡು ಚಿತ್ರ!


ಏನೇ ಆದರೂ ನಮ್ಮ ಭಾಷೆಯ ಚಿತ್ರ....ಆದುದರಿಂದ ಇದನ್ನು ನೋಡಲು ಚಿತ್ರ ಮಂದಿರಕ್ಕೆ ಹೋಗಿ ಎಂದು ಸಮಸ್ತ ಕೊಂಕಣಿ ಮತ್ತು ತುಳು ಬಾಂಧವರಲ್ಲಿ ವಿನಂತಿಸಿಕೊಳ್ಳುತ್ತೇನೆ. ರಾ- ೧ಗಿಂತ ಉತ್ತಮವಾಗಿದೆ ಎಂದು ಸರ್ಟಿಫಿಕೇಟ್ ಸಹ ಕೊಡುತ್ತಿದ್ದೇನೆ!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...