ಒಲವೇ,
ಒಪ್ಪು ತಪ್ಪುಗಳ ಜಿಜ್ಞಾಸೆಗಳು
ಒಪ್ಪು ತಪ್ಪುಗಳ ಜಿಜ್ಞಾಸೆಗಳು
ಇರಲಪ್ಪ ಬುದ್ಧಿಜೀವಿಗಳಿಗೆ
ನಾ ಮಾಡಿದೆಲ್ಲವು ಒಪ್ಪು
ಅವನು ಮಾಡಿದೆಲ್ಲವು ತಪ್ಪು
ಲೋಕವೇ ಗೊಂದಲದ ಗೂಡು
ಬೆಳಕು ಕತ್ತಲೆಗಳಂತೆ ಸ್ಪಷ್ಟವೂ ಅಲ್ಲ
ಸರಿ ತಪ್ಪುಗಳನ್ನಳೆಯುವುದು ಸುಲಭವಲ್ಲ
’ನಾನು ನನಗೆ’ ಸ್ವಾರ್ಥಗಳೆಡೆಯಲಿ
ನಲುಗಿ ತಪ್ಪು ಒಪ್ಪಾಗುವುದು
ತ್ಯಾಗದ ನೇಣಿಗೆ ಸಿಲುಕಿದ
ಸರಿಯೂ ತಪ್ಪಾಗುವುದು
ಹಲವು ಕಣ್ಣುಗಳಲಿ
ನ್ಯಾಯ-ಅನ್ಯಾಯ; ಧರ್ಮ-ಅಧರ್ಮ
ಕೂದಲೆಳೆಯ ವ್ಯತ್ಯಾಸ
ಯುಗ ಯುಗಗಳಿಂದಲೂ
ಸರಿ ತಪ್ಪುಗಳ ವ್ಯಾಖ್ಯಾನ
ಹಿಡಿಯಲಾಗಿದೆಯೇ..
ಘಳಿಗೆ ಘಳಿಗೆಗೂ ಬದಲಾಗುತ್ತ
ಹೊಸ ರೂಪ, ಹೊಸ ಭಾಷ್ಯ
ಹೆಜ್ಜೆ ಹೆಜ್ಜೆಗೂ ಅಳುಕು
ಮಾತು-ನಡೆಯಲ್ಲಿ ನಡುಕ
ಸಾಕಪ್ಪಾ ಸಾಕು
ಅಂತರಂಗಕ್ಕಿನ್ನಿಲ್ಲ ಗೊಂದಲ
ಮನವಿಲ್ಲ ಚಂಚಲ
ಮನವಿಲ್ಲ ಚಂಚಲ
ಆ ಆ ಘಳಿಗೆಯಲಿ ಬಂದದನು
ಚಿಂತಿಸಿ ಮಂಥಿಸಿ
ಇಟ್ಟ ಹೆಜ್ಜೆಯನು ಹಿಂದಿಡದೆ
ಅವರಿವರ ನೋಯಿಸದೆ
ನಾನೂ ನೋಯದೆ ನಡೆಯಬೇಕಿನ್ನು
ಕಾಲನೇ,
ನೀನೇ ನಿರ್ಣಯಿಸು
ಈ ಒಲವಿನ ಮರುಳಳಿಗೆ
ಕಾದಿರುವುದು
ದುರ್ಗತಿಯೋ ಸದ್ಗತಿಯೋ..
No comments:
Post a Comment