ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 September, 2013

ಮುಂಜಾವು ಮೆರವಣಿಗೆಯ ಮೊದಲ ಕಂತು!


       
         ಮತ್ತೆ ಮತ್ತೆ ಮೊಬೈಲ್ ಜೇಬಿನಿಂದ ತೆಗೆದು ನೋಡುತ್ತಾ ಇದ್ದೇನೆ..  ಗಂಟೆ 11 ಆಗಲಿಕ್ಕಾಗಿದೆ! ಇದಾಗಲೇ ವಿಮಾನ ಕೆಳಗಿಳಿದಿದೆ.. ಎಲ್ಲರೂ ಹೊರಬಂದಾಗಿದೆ! ಈ ಮುಂಜಾವಿಗರ ಸುದ್ದಿನೇ ಇಲ್ಲ. ಇದ್ದ ಬದ್ದ ಧೈರ್ಯ ಕರಗಲು ಪ್ರಾರಂಭವಾಯಿತು. ಫೋನು ಮಾಡಲೇ ಮನೋಹರ್ ಅವರಿಗೆ!

        ’ಅಲ್ಲಾ, ವಾಟ್ಸ್ ಆಪ್ ನಲ್ಲಿ ನಾವೀಗಾಗಲೇ ಲಾಂಡ್ ಆಗಿದ್ದೇವೆ ಅಂತ ಹೇಳಿದ್ದಾರಲ್ಲ! ಸುಮ್ಮನೆ ಒಂದು ಕಾಲ್ ವೇಸ್ಟ್ ಯಾಕೆ ಮಾಡೋದು! ಇನ್ನೂ ಒಂದೈದು ನಿಮಿಷ ನೋಡೋಣ... ಎಲ್ಲೋ ಪ್ರಾಂಕ್ ಮಾಡಿದ್ರೆ??? ಅಯ್ಯೋ, ಮನೆಗೆ ಫೋನು ಮಾಡಿ ತಮ್ಮನನ್ನು ಕರೆಯಬೇಕೆ! ಇನ್ನಿದೆ ನನಗೆ ಅಮ್ಮ, ಅಪ್ಪ, ಪತಿ, ತಮ್ಮ, ಮಗ, ಮಗಳ ಮಂಗಳಾರತಿ... ಅಲ್ವಾ! ನನ್ನ ಸೊಕ್ಕಲ್ವಾ! ಅವ್ರು ಕರೆದ್ರು ಅಂತ ಹೊರಟೇ ಬಿಡೋದ? ’

          ಮತ್ತೆ ನೆನಪಾಯಿತು ಒಂದು ವಾರದ ಹಿಂದೆ.. ಅದೇ, ಭಾನುವಾರ ಧುರಿಂದರ್ ಸಿಂಗ್ ಭಟವ್ಡೆಕರ್ ಅವರ ಫೋನು..

ತಲೆಗೆ ಮೆಹಂದಿ ಹಚ್ಚಿಕೊಂಡಿದ್ದು ಒಣಗಿತ್ತು.. ಸ್ನಾನ ಮಾಡಲು ಹೋಗುವವಳಿದ್ದೆ.. ಅಪರಿಚಿತ ಅಂಕೆಯಿಂದ ಕಾಲ್! ಎತ್ತಿದರೆ, 

         “Hello, this is Dhurindar singh Bhatavdekar speaking from Lingo ltd on behalf of Manohar Nayak! I am supposed to ask you to join Munjavu meravanige organized by him! “

         
           ನಾನೋ ಬೆಪ್ಪಿ, ಕೆಪ್ಪಿ ಎರಡೂ ಆಗಿಬಿಟ್ಟೆ.. ಒಂದು ಕ್ಷಣ ನಂಬಲಾಗಲಿಲ್ಲ.. ಅದೇ ಕಾರಣದಿಂದಲೇನೋ ನನಗೆ ಸರಿಯಾಗಿ ಮಾತೂ ಕೇಳುತ್ತಿರಲಿಲ್ಲ. ಇಷ್ಟಂತೂ ಗೊತ್ಯಾತು.. ಮನೋಹರ್, ಸಿಂಗ್ ಅವರಿಗೆ ನಾನು ಬರುತ್ತಿದ್ದೇನೆ ಎಂಬ ಮಾತು ಹೇಳಿಸುವಂತೆ ಮಾಡಲಂದಿದ್ದಾರೆ.. ಇಲ್ವೋ, ಅವರು ಕೆಲಸ ಕಳೆದುಕೊಳ್ಳಲಿದ್ದಾರೆ... ಮಧ್ಯದಲ್ಲಿ ಹಿಂದಿ ನುಸುಳಿತು.. ಚಲೋ, ಮುಝೆ ಭೀ ಹಿಂದಿ ಆತಿ ಹೈ.. ಅಂತ ನಾನೂ ಉತ್ತರಿಸಿದೆ.. ಅರೇ! ಮತ್ತೆ ಕೊಂಕಣಿ.. ಬಹುಶಃ ಇವರು ಭಟವ್ಡೆಕರ್ ಅಂದ್ರಲ್ಲ.. ಎಲ್ಲೋ ಮರಾಠಿ ಪಂಜಾಬಿ ದಂಪತಿಗಳ ಕೂಸೇನೋ ಅಂದ್ಕೊಂಡೆ!

        ಅವರ ಒತ್ತಾಯ ಯಾವ ಮಟ್ಟಕ್ಕಿತ್ತೆಂದರೆ ನಾನು ತಯಾರಾಗಿಬಿಟ್ಟೆ.. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು! ಮನೆಯವರಿಂದ ಒಪ್ಪಿಗೆ ಸಿಗುವುದು ಕಷ್ಟವಾದರೂ ಅವರನ್ನು ಒಲಿಸಿಕೊಳ್ಳುವುದು ಸಾಧ್ಯವಿತ್ತು.. ಒಂದೇ ಯೋಚನೆ ಮಗಳು! Physiotherapy  ಓದುವ ಅವಳಿಗೀಗ ಇದೀಗ ಆಸ್ಪತ್ರೆಗಳಲ್ಲಿ ಡ್ಯೂಟಿ ಇದೆ.. ಬೆಳಿಗ್ಗೆ 8, 8.30ರ ಒಳಗೆ ಓಡಬೇಕು. ಏನು ಮಾಡುವುದು? ಅವಳನ್ನೂ ಕರಕೊಂಡು ಹೋದರೆ ಹೇಗೆ? ಹೆಚ್ಚು ತಲೆಕೆಡಿಸಲಿಲ್ಲ.. ಮತ್ತೆ ಧುರಿಂದರ್ ಹೇಗೋ ಫೋನ್ ಮಾಡ್ತೇನೆ ಅಂದಿದ್ದಾರಲ್ವಾ! ಆಗ ದೇವರು ಹೇಗೆ ಆಡಿಸ್ತಾನೋ ಹಾಗೆ ಆಡೋದು!

          ಮರುದಿನ ಎಂದಿನಂತೆ ನನ್ನ ಮನೆಪಾಠ, ಕಾಲೇಜು, ಕೆಲಸಗಳಲ್ಲಿ ಈ ವಿಷಯವನ್ನು ಮನೆಯವರ ಹತ್ತಿರ ಪ್ರಸ್ತಾಪಿಸಲೂ ಮರೆತೇ ಬಿಟ್ಟೆ. ಅಪರಾಹ್ನ ನೆನಪಿಗೆ ಬಂತು. ಅರೇ, ಅಪರ್ಣನ ಮೆಸೇಜು ಸರಿಯಾಗಿ ಓದಿಲ್ಲ.. ಮೇಲೆ ಮೇಲೆ ಸೀತಾನದಿ.. ಅಬ್ಬಿ ಫಾಲ್ಸ್.. ಕುಪ್ಪಳ್ಳಿ.. ಓದಿ ನಿಲ್ಲಿಸಿದ್ದೆ. ನನ್ನ ಕನಸಿನ ಲೋಕಗಳು ಅವು.. ಎಂದೂ ಸಾಧ್ಯವಾಗದ ಕನಸಂತ ಅಂದ್ಕೊಂಡ ಜಾಗಗಳಿಗೆ ಇವರೆಲ್ಲ ಹೋಗ್ತಿದ್ದಾರೆಂದು ಹೊಟ್ಟೆ ಉರಿ ಬಂದು ಮುಂದೆ ಓದಿರಲಿಲ್ಲ.. ತಾರೀಕುಗಳನ್ನು ಸರಿಯಾಗಿ ಗಮನಿಸಿರಲಿಲ್ಲ.

         ’ಈಗ ಅದ್ಯಾಕೆ ಸರಿಯಾಗಿ ಓದ್ಬಾರದು..’
           
         ಟ್ಯೂಷನ್ ಮಧ್ಯದಲ್ಲೇ ಎದ್ದು ಬಂದು ಲ್ಯಾಪ್ ಟಾಪ್ ತೆಗೆದೆ! ನಿಧಾನವಾಗಿ ಓದಿದೆ.. ಹೂಂ, ನಾಲ್ಕು ದಿನಗಳು! ನನ್ನ ಮನೆಪಾಠ.. ಕಾಲೇಜು.. ಹೇಗಪ್ಪಾ ಸುಧಾರಿಸುವುದು! ಹೊಯ್ದಾಟ.. ಇಲ್ಲ ಆಗೊಲ್ಲ ಅಂತಾನೇ ಅನ್ನೋದು.. ವಾಟ್ಸ್ ಆಪ್ ನಲ್ಲಿ ಮೆಸೇಜ್ ಕಳುಹಿಸಿದೆ, ಭಟವ್ಡೆಕರ್ ಅವರಿಗೆ.. ಫೋನ್ .. ನಡುಗಿತು! ಎತ್ತಿದರೆ ಧುರಿಂದರ್..

“ಹಲೋ..”
ನನಗೀಗಾಗಲೇ ಇವರು ಮನೋಹರ್ ಅವರೇ ಎಂಬ ಅನುಮಾನ ಬಂದಿತ್ತು.. ಅವರೋ ಸೀದ ಕೊಂಕಣಿಯಲ್ಲೇ ಶುರು ಮಾಡಿದರು.. ಮುಂದಿನ ಮಾತುಕತೆ ನಾನು ಹೊರಡುವುದನ್ನು ಧೃಡಪಡಿಸಿತ್ತು.

ಮನೆಯವರನ್ನು ಒಪ್ಪಿಸಲು ಕಷ್ಟವಾಗಲಿಲ್ಲ. ಅಮ್ಮ ಮಗಳನ್ನು ನೋಡಿಕೊಳ್ಳುತ್ತೇವೆಂದರು. ಇದೀಗ ಮುಂಬೈ ಮುಂಜಾವಿಗರನ್ನು ಸೇರಿಕೊಳ್ಳುವುದು ಹೇಗೆಯೆಂಬ ಚಿಂತೆ! ಸಂಜೆ ತಮ್ಮ ಬಂದು.. ಎಲ್ಲೋ ಹೋಗಲಿಕ್ಕುಂಟಂತಲ್ಲ.. ತಾನು ಬಿಡುತ್ತೇನಂದ.

“ಬಜ್ಪೆ ವಿಮಾನ ನಿಲ್ದಾಣಕ್ಕೆ ನಿಂಗೆ ಬಿಡಲಿಕ್ಕಾಗ್ತದಾ?”

“ಸರಿ.. ಆದರೆ ಬೈಕಿನಲ್ಲಿ! ಆದಿತಾ?”

No problem!”

ಕೊನೆಗೂ ಶುಕ್ರವಾರ ರಾತ್ರಿ ತುಂತುರು ಮಳೆಯಲ್ಲಿ ಬೈಕಿನಲ್ಲಿ ಪಯಣಿಸಿ 9.30ರ ಹೊತ್ತಿಗೆ ಬಜ್ಪೆಗೆ ಬಿಟ್ಟು ಹೋದ ತಮ್ಮ.

“ನಾನು ನಿಲ್ಬೇಕಾ.. “ ಅಂದಾಗ ನಾನು ಸುಮ್ಮನೆ ನಕಾರಾತ್ಮಕವಾಗಿ ತಲೆ ಅಲ್ಲಾಡಿಸಿದೆ.

“ಸರಿ, ಏನಾದರೂ ಪ್ರಾಬ್ಲೆಮ್ ಬಂದ್ರೆ ಫೋನು ಮಾಡು”

ಪ್ರಯಾಣಿಕರು ಹೊರ ಬರುವ ದ್ವಾರದಲ್ಲಿ ಕಾದವಳಿಗೆ ಕಣ್ಣು ಕೂರುತಿತ್ತು.. 10.10ಕ್ಕೆ ಬರಬೇಕಾದ ವಿಮಾನ ಕೊನೆಗೂ 10.45ರ ಹೊತ್ತಿಗೆ ಮಂಗಳೂರಿನ ನೆಲ ಸ್ಪರ್ಶಿಸಿದರೂ ಮುಂಜಾವಿಗರ ಪತ್ತೆನೇ ಇಲ್ಲ.. ಕುತ್ತಿಗೆ ಉದ್ದ ಮಾಡಿ ಮುಖದ ತುಂಬಾ ಆತಂಕ ಹೊತ್ತುಕೊಂಡಿದ್ದ ನನ್ನನ್ನು ಮೋಹನ್ ಒಳಗೆ ಕನ್ನಡಿ ಮೂಲಕ ನೋಡುತ್ತಲೇ ಮುಸುಮುಸು ನಗುತ್ತಿದ್ದರು.. ನನಗೆ ಇವರು ಮುಂಜಾವಿಗರಿರಬಹುದೇ ಅಂತ ಅನುಮಾನವಿದ್ದರೂ.. ಖಚಿತವಿರಲಿಲ್ಲ. ಮೋಹನ್ ಮುಖ ಮಸುಕಾಗಿ ಮಾತ್ರ ಗೊತ್ತಿತ್ತು.. ಅಯ್ಯಪ್ಪಾ!!!  ಆ 10, 15 ನಿಮಿಷಗಳನ್ನು ಗಂಟೆಗಳಂತೆ ಕಳೆದ ನನ್ನ ಪಾಡು ಪರಮಾತ್ಮನಿಗೇ ಗೊತ್ತು!
 ಕೊನೆಗೂ ಹೊರಬಂದ ಮೋಹನ ಮುಖ ತುಂಬಾ ನಗು ಹರಡಿ.. “ಹೆದರಿ ಬಿಟ್ರಾ! ನಿಮ್ಮ ಚಡಪಡಿಕೆಯೆಲ್ಲಾ ನೋಡ್ತಿದ್ದೆ... “
ಅಂದಾಗ, ನಾನೂ ಬಾಯಿ ಉಪಚಾರಕ್ಕೆ ಹಾಗೇನಿಲ್ಲ ಅನ್ನಲೇಬೇಕಿತ್ತು.. ಸಣ್ಣಗೆ ಕೋಪ ತಾಪ ಬಂದಿದ್ದರೂ..

          ನಿಜ ಹೇಳಲಾ! ಅದೇ ಕೊನೆ, ಮತ್ತೆ ನಾಲ್ಕು ದಿನ ನನ್ನ ಮುಖ ಅರಳಿಯೇ ಇದ್ದು ( ಎಲ್ಲಾ ಹಲ್ಲುಗಳು ಕಾಣುವ ಹಾಗೆ) ಮುದುಡಿದ್ದು ಅವರೆನ್ನೆಲ್ಲಾ ಬೀಳ್ಕೊಡುವ ಸಮಯ ಬಂದಾಗಲೇ! ಲ್ಯಾಂಡ್ಸ್ ಫೇವರ್ ನಲ್ಲಿ ಅವರನ್ನೆಲ್ಲ ವಿಮಾನ ನಿಲ್ದಾಣ ತನಕ ಬೀಳ್ಕೊಡುವ ತನಕ ಅಗಲಿಕೆಯಿಲ್ಲವೆಂಬ ಭಾವವೇ ನನ್ನ ಮುಖದ ನಗುವನ್ನು ಹಾಗೇ ಉಳಿಸಿತ್ತು.. ಆದರೆ ಕೊನೆ ಘಳಿಗೆಯಲ್ಲಿ ಗಿರಿಯ ಜತೆ ನಾನು ಹೊರಡುವುದೆಂಬ ಮಾತಾಗಿ ನನ್ನ ತಲೆ ಕೆಲಕಾಲ ಕೆಲಸ ಮಾಡಲಿಲ್ಲ.. ( ಮನೋಹರ್ ಅಂತೂ ಆಗ ನನ್ನ ತಲೆ ಹೆಚ್ಚು ಕೆಲಸ ಮಾಡಿತೆನ್ನುವ ಅಪವಾದ ಹೊರಿಸಿದ್ದಾರೆ.. ) ಕೊನೆಗೂ ಮತ್ತೊಮ್ಮೆ ನನ್ನ ಬ್ಯಾಗು ನನ್ನನ್ನು ಮುಂಜಾವಿಗರನ್ನು ನಿಲ್ದಾಣದಲ್ಲಿ ಭೇಟಿ ಮಾಡಿಸಿತು.. ಎಲ್ಲಕ್ಕಿಂತ ನಳಿನಿಯನ್ನು ಮತ್ತೊಮ್ಮೆ ಗಟ್ಟಿಯಾಗಿ ಅಪ್ಪಿ.. ಆ ನೆನಪನ್ನು ಮನೆ ಮನದಲ್ಲಿ ಹೊತ್ತು ಭಾರವಾದ ಹೃದಯದಲ್ಲಿ ಮರಳಬೇಕಾಯಿತು!

         ನಿಜ ಹೇಳಬೇಕೆಂದರೆ ಮೊದಲ ಬಾರಿಗೆ ನನ್ನ ಮನದ ಕೊಡ ತುಂಬಿದೆ.. ಇನ್ನು ತುಳುಕಾಟವಿಲ್ಲ ಅನ್ನಿಸಿದೆ. ಹಾಗಾಗಿ ಬರೆಯುವುದು ಬಹಳ ಕಷ್ಟ ಅಂತನಿಸಿದೆ. ಈ ಸವಿ ನೆನಪುಗಳು ನನ್ನ ಬದುಕಿನ ದೃಷ್ಟಿಯನ್ನು ಬದಲಿಸಿದೆ... ಮತ್ತೆ ಮಾನವೀಯತೆಯಲ್ಲಿ ನಂಬಿಕೆ ಬಂದಿದೆ!

ಒಂದು ಕೊನೆಯ ಮಾತು..
My salutes to Manohar, Veenakka and Prashanth anna’s parents! Also to Sheela Nayak and Kini family!
 ಎಂಬಲ್ಲಿಗೆ ಮುಂಜಾವು ಮೆರವಣಿಗೆಯ ಮೊದಲ ಕಂತು ಮುಕ್ತಾಯ!



1 comment:

Anonymous said...

superb...!!! Waiting....for the next episode

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...