ಪ್ರಾಸ ಪದಗಳ ಜೋಡನೆ, ಮಾತ್ರೆ, ಛಂದಸ್ಸು ಅಲಂಕಾರಗಳ
ಲೇಪನ.. ಕವಿತೆಯೆಂದರೆ ಹೀಗೇ ಇರಬೇಕೆಂದು ನನ್ನ
ಕಲ್ಪನೆಯಾಗಿತ್ತು. ಪ್ರಾಯಶಃ ಸುಮಾರು 5,6 ವರ್ಷಗಳಿಂದ ಅಂತಹುದೇ ಮಾದರಿಯ ಕವನಗಳನ್ನು ಓದುತ್ತಿದ್ದೆನಾದ್ದರಿಂದಲೂ
ಇರಬಹುದು. 2004ರಿಂದ ಬ್ಲಾಗ ಲೋಕದಲ್ಲಿ
ನನ್ನ ಅಜ್ಞಾತ ಸಂಚಾರದಲ್ಲಿ ನಾನು ಕವನ, ಕವಿತೆ, ಕತೆ, ರಾಜಕೀಯ, ಸಮಾಜಕೀಯ ವಿಢಂಬನೆಯ
ಬರಹಗಳನ್ನು ಓದುತ್ತಾ ಬರಹಗಳ ಬಗ್ಗೆ ನನ್ನ ಅಜ್ಞಾನವನ್ನು ಕಡಿಮೆಮಾಡಿಕೊಳ್ಳುತ್ತಾ
ಬಂದಿದ್ದೆ. ಫೇಸ್ ಬುಕ್ಕಿನಲ್ಲಿ ಮೊದ ಮೊದಲು
ಕ್ರಿಯಾಶೀಲಳಾಗಿರಲಿಲ್ಲ.. ನಿಧಾನವಾಗಿ ಬರಹಗಾರರ,
ಚಿತ್ರಕಾರರ ಸ್ನೇಹವಾಗುತ್ತಿದ್ದ ಹಾಗೆ ನನ್ನ ಪ್ರಪಂಚ ವಿಶಾಲವಾಗತೊಡಗಿತು. ಫೇಸ್ ಬುಕ್ ಎಂದರೆ
ನನಗೆ ಬರಹದ ಲೋಕ.. ಕೋಮಾದಲ್ಲಿದ್ದ ನನ್ನೊಳಗಿನ ಬರಹಗಾರ್ತಿಗೆ ಬಹುಶಃ ಆಮ್ಲಜನಕ
ದೊರೆತಂತಾಗಿರಬೇಕು. ನನ್ನ ಬೆರಳು ಕೀ ಬೋರ್ಡಿನ ಮೇಲೆ ಅತ್ತಿಂದಿತ್ತ ನರ್ತಿಸತೊಡಗಿದವು.. ಭಾವ
ಸ್ಫೋಟವೂ ಒಂದು ಕಾರಣವು ಹೌದು. ಈಶ್ವರ್ ಕಿರಣ್ ಭಟ್ ನನ್ನನ್ನು ಕನ್ನಡ ಬ್ಲಾಗ್ ಲೋಕಕ್ಕೆ
ಪರಿಚಯಿಸಿದ ನಂತರವಂತೂ ಅಕ್ಷರಃ ನಾನು ಅಕ್ಷರ ಲೋಕದಲ್ಲಿ ಮುಳುಗೇಳಿ ಆನಂದಪಟ್ಟೆ. ಸತ್ಯ
ಹೇಳಬೇಕೆಂದರೆ ನಾನು ಖುಷಿಪಟ್ಟೆನಾದರೂ ನನ್ನನ್ನು ಬಹಳಷ್ಟು ಸೆಳೆದದ್ದು ಒಳಗೆ ಇಳಿದದ್ದು ಕೆಲವೇ
ಕೆಲವು!
ಬಹುಶಃ ೪,೫ ತಿಂಗಳ ಹಿಂದಿರಬೇಕು.. ಅನುರಾಧ ಪಿ ಸಾಮಗ
ಅವರ ಕವನ ಓದಲು ಸಿಕ್ಕಿತು ಕನ್ನಡ ಬ್ಲಾಗಿನಲಿ. ಸ್ವಲ್ಪ ಕ್ಲಿಷ್ಟವೆನಿಸಿತು.. ಸೀದ ಓದಿಗೆ
ತೆರೆದುಕೊಳ್ಳದಿದ್ದರೆ ಮತ್ತೊಮ್ಮೆ ಓದುವ ಗೋಜಿಗೆ ಹೋಗದವಳು ಈ ಕವನದ ಸೆಳೆತಕ್ಕೆ ಒಳಗಾಗಿ ಮತ್ತೆ
ಮಗದೊಮ್ಮೆ.. ಹೀಗೆ ಓದುತ್ತಾ ಹೋದೆ.. ಹೊಸ ಲೋಕವೇ ನನ್ನೆದುರು ತೆರೆದುಕೊಂಡಿತು. ಕೂಡಲೇ ಅವರ
ಸ್ನೇಹ ಹಸ್ತಕೆ ಕೈಚಾಚಿದೆ. ಅವರ ಕವನಗಳನ್ನೆಲ್ಲ ಬಿಡದೇ ಹೋದುತ್ತಾ ಹೋದೆ.. ನನ್ನ ಇತ್ತಿಚಿನ
ಕವನಗಳ ಮೇಲೆ ಅವರ ಪ್ರಭಾವ ತುಂಬಾನೆ ಇದೆ. ಸಾಮಾನ್ಯವೆಂದು ತೋರುವ ವಿಷಯಗಳಲ್ಲಿ ಅಡಗಿರುವ ನಿಗೂಢವನ್ನು ಅವರ ಕವನ ತೆರೆದಿರಿಸುತ್ತದೆ,
ಓದುಗನಿಗೆ ನಿಧಾನವಾಗಿ ಓದುವ ತಾಳ್ಮೆ ಇದ್ದರೆ.
ನಾನೆಂದೂ
ನನ್ನ ಅನುಭವದ ಪರಧಿಯಾಚೆಯ ಲೋಕದ ಬಗ್ಗೆ ಬರೆಯುವ ಸಾಹಸ ಮಾಡಿಲ್ಲ.. ಅಂತೆಯೇ ನನಗೆ ಯಾವಾಗಲೂ
ಕುತೂಹಲ; ಈ ಕವಿಗಳು ತಮ್ಮ ಅನುಭವವನ್ನೇ ಕವಿತೆಯಾಗಿಸುತ್ತಾರೋ, ತಮ್ಮ ಬರಹಗಳು ಪ್ರತಿಪಾದಿಸುವ
ನೀತಿಯನ್ನು ತಮ್ಮ ಜೀವನದಲ್ಲೂ ಅಳವಡಿಸುತ್ತಾರೋ..
ನಿಧಾನವಾಗಿ ಬರಹಗಾರರು ತಮ್ಮ ಬರವಣಿಗೆಯ ಮೂಲಕ, ಸ್ನೇಹದ ಮೂಲಕ ಅವರಿಗೇ ಗೊತ್ತಿಲ್ಲದೇ
ನನ್ನ ಸಂಶಯವನ್ನು ನಿವಾರಿಸಿದರು.. ಬರಹವೇ ಬೇರೆ, ಬದುಕೇ ಬೇರೆ! ತಾವು ಕವನದಲ್ಲಿ ಚಿತ್ರಿಸುವ
ಭಾವವು ತಮ್ಮದೇ ಆಗಿರಬೇಕೆಂದು ಇರಬೇಕಿಲ್ಲ.. ತಮ್ಮ ಅಪರಿಮಿತ ಕಲ್ಪನಾ ಶಕ್ತಿಯಿಂದ, ತಮಗೆ ಒಲಿದ
ಶಬ್ದ ಭಂಡಾರಗಳ ನೆರವಿನಿಂದ ಕವನಗಳು ಹುಟ್ಟಿತ್ತವೆ.. ಅಂತಹುದರಲ್ಲಿ ಅನುರಾಧಾನೂ ಹೀಗೆನಾ?
ಅವರನ್ನೇ ಪ್ರಶ್ನಿಸಿದೆ. ಇಲ್ಲ, ತಮ್ಮ ಸುತ್ತಮುತ್ತಲಿನ ಪ್ರತಿಯೊಂದು ಚಲನ ಅವರಲ್ಲಿನ
ಬರಹಗಾರ್ತಿಯನ್ನು ಎಬ್ಬಿಸುತ್ತದೆ.. ಬರೆಸುತ್ತದೆ! ಸಂತೃಪ್ತಿಯಾಯಿತು.
ಅನುರಾಧ, ಅವರ ಕವನಗಳು ಬರಹಗಳು ನನ್ನ ನಲಿವಿಗೆ
ನೋವಿಗೆ ಕಿವಿಯಾದವು.. ರಾಮಕೃಷ್ಣ ಪರಮಹಂಸರ ವಚನವೇದದಷ್ಟೇ ಆತ್ಮೀಯವಾದವು. ಭೌತಿಕ ಶಬ್ದಗಳಲ್ಲಿ
ಆಧ್ಯಾತ್ಮಿಕತೆಯು ನನಗೆ ಗೋಚರಿಸಿದವು. ಅಶಾಂತಿಯನ್ನು ಕಿತ್ತು ಮನಸ್ಸಿಗೆ ಪರಮಶಾಂತಿಯನ್ನು ಇತ್ತವು. ನಾನದನ್ನು ಅವರಿಗೆ
ಅರುಹಿದಾಗ ಅವರಾದರೋ ನನಗೆ ಮತ್ತೊಂದು ಕವತೆಯ ಮುಖವನ್ನೇ ತೋರಿಸಿದರು. ಅದೇ ಬಸವರಾಜ ಸುಳಿಭಾವಿ
ಅವರ ದ್ವಿಪದಿಗಳು! ಲಡಾಯಿ ಪ್ರಕಾಶನ ಬ್ಲಾಗನ್ನು ಅನುಸರಿಸುತ್ತಿದ್ದೆನಾದರೂ ಅವರ ದಿನದ ಸಾಲುಗಳು
ನನ್ನ ಕಣ್ಣಿಗೆ ಬಿದ್ದಿರಲಿಲ್ಲ.. ಎಂತಹ ಚಂದದ ಸಾಲುಗಳು ಕಡಿಮೆ ಮಾತು ಕಡಲಿನಷ್ಟು ವಿಸ್ತಾರದ
ಅರ್ಥ! ಹೌದು, ಅನುರಾಧ ಅವರು ಹೇಳಿದುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇರಲಿಲ್ಲ. ಇಂದು ಅನುರಾಧ
ಅವರು ನನಗೆ ಅವರ ಮೂರು ಪ್ರಕಟಿತ ಕವನ ಸಂಕಲಗಳನ್ನು ಕಳುಹಿಸಿದ್ದಾರೆ.” ಬಟ್ಟೆಯೆಂಬುದು ಬೆಂಕಿಯ
ಹಾಗೆ” – ಓದುತ್ತಿದ್ದೇನೆ, ಮುನ್ನುಡಿಯಲ್ಲಿ ನುಡಿದ ಎಚ್ಚೆಸ್ಸಾರ್ ಮತ್ತು ಅನುಪಮಾ ಅವರ ಮಾತುಗಳು
ನಿಜ! ನನ್ನ ಅನುಭವಕ್ಕೂ ಬಂದಿದೆ. ಅವರ ನೋವುಗಳು ಮತ್ತು ಅನುಭವಗಳನ್ನು ಶಬ್ದಗಳಲ್ಲಿ
ಕೆತ್ತಿದ್ದಾರೆ.. ಈ ಕೃತಿಯ ಬಗ್ಗೆ ಇನ್ನೇನೂ ಹೇಳಲು ನಾನು ಅರ್ಹಳಲ್ಲ. ಮನಸಾರೆ ಮೆಚ್ಚಿದ್ದೇನೆ..
ಕಣ್ಣಿನಿಂದ ಹನಿಗಳು ಉದುರಿವೆ. ಇವರ ಬಗ್ಗೆ
ಅನುರಾಧ ತಮ್ಮ ಬ್ಲಾಗಿನಲ್ಲಿ ಹಾಕಿದ ಬರಹದ ಲಿಂಕ್ ಇಲ್ಲಿದೆ.
No comments:
Post a Comment