ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ಅವಕಾಶ. Show all posts
Showing posts with label ಅವಕಾಶ. Show all posts
20 January, 2013
ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!
ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!
+++++++++++++++++++++++++++++++++++++++++
ಹಿಂದಿನ ಶನಿವಾರ ಬಸ್ಸು ಅಫಘಾತಕ್ಕೊಳಗಾಗಿ ನನ್ನ ಮಗನಿಗೆ ಒಂದಿಷ್ಟು ತರಚಿದ ಗಾಯಗಳಾಗಿತ್ತು. ಆದರೆ ಮರುದಿನ ಮೂಗಿನಲ್ಲಿ ರಕ್ತ ಬಂದಾಗ ಒಂದಿಷ್ಟು ಹೆದರಿ ಆಸ್ಪತ್ರೆಗೆ ಹೋದರೆ ಮೂಗಿನ ಎಲುಬು ಬಿರುಕು ಬಿಟ್ಟಿರಬಹುದು..ಯಾವುದಕ್ಕೂ ಕ್ಷ-ಕಿರಣ ಮಾಡಿಸುವುದು ಒಳ್ಳೆಯದೆಂದಾಗ, ಸಾಧಾರಣವಾಗಿ ಯಾವುದಕ್ಕೂ ಹೆದರದ ಅವನು ತುಂಬಾ ಗಾಬರಿಯಾಗಿದ್ದ. ಯಾಕೆಂದರೆ ಮುಂದಿನ ವಾರದಲ್ಲಿ ಸಿಮೆನ್ಸ್ ಕಂಪನಿ ಅವನ ಕಾಲೇಜಿಗೆ ಬರಲಿತ್ತು. ಈಗಾಗಲೇ ವಿಪ್ರೊದಲ್ಲಿ ಆಯ್ಕೆಯಾಗಿದ್ದರೂ ಸಿಮೆನ್ಸ್ ಸೇರುವುದು ಅವನ ಕನಸಾಗಿತ್ತು. ಅದರಲ್ಲಿ ಆಯ್ಕೆಯಾಗುದು ಸಹ ಸುಲಭವಾಗಿರಲಿಲ್ಲ. ಜೆತೆಗೆ ಈ ಮೂಗಿನ ಎಲುಬಿನಲ್ಲಿ ಏನಾದರೂ ತೊಂದರೆಯಾದರೆ ಅವನು ಆಸ್ಪತ್ರೆಗೆ ಸೇರಬೇಆಗುತ್ತಿತ್ತು. ಮತ್ತು ಅಪರೇಷನ್ ನಂತರ ಅವನಿಗೆ ಕಾಲೇಜಿಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವನು ಒಂದು ಚೂರು ಧೃತಿಗೆಟ್ಟಿದ್ದನು. ಅದು ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ನನ್ನ ಮಂತ್ರ ಒಂದೇ..ಯಾವುದು ನಮ್ಮ ಕೈಯಲ್ಲಿ ಇಲ್ಲ. ನಮಗೆ ಸಾಧ್ಯವಿರುವುದು ಒಂದೇ ಅವನಲ್ಲಿ ವಿಶ್ವಾಸವಿಡುವುದು ಮತ್ತು ಅವನ ಆದೇಶ ಪಾಲಿಸುವುದು. ಪವಾಡ ನಡೆಯಿತು. ವೈದ್ಯರು ಕ್ಷ-ಕಿರಣ ತೆಗೆಸಿದಾಗ ಮೂಗಿನ ಎಲುಬಿಗೆ ಯಾವುದೇ ಹಾನಿಯಾಗಿಲ್ಲವೆಂದು ತಿಳಿಸಿದರು. ಅದೇ ದಿನ ಅಪರಾಹ್ನ ಅವನು ನಿಟ್ಟೆಗೆ ಹೋದನು. ಶುಕ್ರವಾರ ಅಪರಾಹ್ನ ಅವನ ಫೋನು. ಅಮ್ಮ ನಾನು ಸಿಮೆನ್ಸ್ ಕಂಪನಿಯಲ್ಲಿ ಆಯ್ಕೆಯಾದೆನು, ಎರಡನೆಯ ಸುತ್ತಿನಲ್ಲಿ ಮೊದಲಿಗನಾಗಿ!
ಇದು ನನ್ನ ಮಟ್ಟಿಗೆ ಮಾತ್ರವಲ್ಲ ಅವನ ಮಟ್ಟಿಗೂ ಒಂದು ಪವಾಡವೇ ಎನ್ನಬಹುದು. ಇಡೀ ಕಾಲೇಜಿನಲ್ಲಿ ಕೇವಲ ನಾಲ್ಕು ಮಂದಿ ಆಯ್ಕೆಗೊಂಡಿದ್ದಾರೆ. ಅದರಲ್ಲೂ ಇಲೆಕ್ಟ್ರಿಕಲ್ ಡಿಪಾರ್ಟ್ಮೆಂಟಿನಿಂದ ಇವನೊಬ್ಬನೇ ಅದರಲ್ಲೂ R &D ಗೆ ಆಯ್ಕೆಯಾದನು. ಅವನ ಪ್ರತಿಭೆಗೆ ಇಂತಹುದೇ ಒಂದು ಕಂಪನಿಯ ಅಗತ್ಯವಿತ್ತು.
ಈಗಾಗಲೇ ನನ್ನ ಒಡೆಯನಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸಿದ್ದೇನೆ..ಎಂದಿನಂತೆ! ನನ್ನ ಖುಷಿ ತಮ್ಮೆಲ್ಲರೊಂದಿಗೂ ಹಂಚಿಕೊಂಡು ಇಮ್ಮಡಿ ಮಾಡಿಕೊಳ್ಳೋಣವೆಂದೆನಿಸಿತು
24 December, 2012
ಛಲವಿದ್ದಲ್ಲಿ ಬಲಕ್ಕೆ ಬರವಿಲ್ಲ!
"ಮೇಡಂ, ಭಗತ್ ಚೇತನ್ ಹೇಳಿದ ಹಾಗೆ ಜೀವನದ ಎಲ್ಲಾ ಹಾಳೆಗಳಲ್ಲಿ ಎ ಪ್ಲಸ್ ಬೇಕೆಂದು ನಿರೀಕ್ಷೆ ಮಾಡಬೇಡಿ. ನೀವು ಪರೀಕ್ಷೆಗೆ ಕುಳಿತುಕೊಳ್ಳುತ್ತಿಲ್ಲ. ನಿಮಗೆ..ನಿಮಗೇನೂ ಯಾರಿಗೂ ನೂರಕ್ಕೆ ನೂರು ಗಳಿಸಲು ಸಾಧ್ಯವೂ ಇಲ್ಲ. ಈ ಸತ್ಯವನ್ನು ಸಂತೋಷದಿಂದ ಒಪ್ಪಿಕೊಳ್ಳಿ. ರಾತ್ರಿ ಊಟಕ್ಕೆ ನಾಲ್ಕು ಬಗೆ ಮಾಡಲಾಗದಿದ್ದರೆ ಪರವಾಗಿಲ್ಲ..ಒಂದರಲ್ಲಿ ಖಂಡಿತಾ ಹೊಟ್ಟೆ ತುಂಬಿಸಿಕೊಳ್ಳಬಹುದಲ್ವಾ? ರಾತ್ರಿವರೆಗೆ ಕೆಲಸ ಮಾಡಲಾಗದೆ ಪ್ರಮೋಶನ್ ಸಿಕ್ಕಿಲ್ಲವಾ.. ಅದೂ ಪರವಾಗಿಲ್ಲ...ಜೀವನದ ಎಲ್ಲಾ ಹಂತಗಳಲ್ಲೂ ಹುದ್ದೆಗಳು ಯಾರಿಗೂ ನೆನಪಾಗದು.....ಸಾಧ್ಯವಾದಷ್ಟುಮಟ್ಟಿಗೆ ಉತ್ತ ಮವಾದುದನ್ನು ಕೊಡಲು ಪ್ರಯತ್ನಿಸಿ...ಆದರೆ ರಿಪೋರ್ಟ್ ಕಾರ್ಡ್ ನೋಡುತ್ತಾ ಕೂಡಬೇಡಿ. ಕ್ಲಾಸಿನಲ್ಲಿ ಮೊದಲ ರ್ಯಾಂಕು ಖಂಡಿತಾ ನಿರೀಕ್ಷಿಸಬೇಡಿ....." ಹೇಳುತ್ತಾ ಹೋದಂತೆ ದೇವಕಿಗೆ ತಾನು ತನ್ನನ್ನೇ ಉದ್ದೇಶಿಸುತ್ತಾ ಹೋದಂತೆ ಅನಿಸತೊಡಗಿತು."-----------------
-ನವೆಂಬರ್ ತಿಂಗಳ ತರಂಗದಲ್ಲಿ "ಪೂಂಗಡಿ"- ಭಾಗ್ಯಶ್ರಿ ಶರತ್ ಬರೆದಿರುವ ಕತೆಯಲ್ಲಿ ಬರುವ ದೇವಕಿ ಉಡುಪಳ ಮಾತಿದು. ಅದೇಕೋ ಓದುತ್ತಿದ್ದಂತೆ ದೇವಕಿ ನನ್ನಲ್ಲಿ ಆವ್ಹಾನಿತಳಾದ ಹಾಗೆ ಅನಿಸತೊಡಗಿತು...ನನ್ನ ಮಾತನ್ನೇ ಹೇಳುತ್ತಿದ್ದಾಳೆ ಆಕೆ....ಹೌದು, ಒಂದು ಕಾಲದಲ್ಲಿ, ಅದೇ ೧೫ ವರ್ಷದ ಕೆಳಗೆ ಏನೂ ಅಲ್ಲದವಳಾಗಿದ್ದೆ...ಬರೇ ಧೂಳು ಹೊಡೆಯುವುದು, ಮನೆಯನ್ನು ಚೊಕ್ಕವಾಗಿಡುವುದು, ಬಂದವರಿಗೆಲ್ಲ ನಗು ಮುಖವನ್ನು ತೋರುತ್ತಾ ಉಪಚಾರ ಮಾಡುತ್ತಾ ಅವರ ಮಾತಿಗೆಲ್ಲ ಹೂಂಗುಟ್ಟುವುದು...ಮಕ್ಕಳ ಶಾಲೆ, ಊಟ, ತಿಂಡಿ...ಎಲ್ಲೋ ಕಳೆದು ಹೋಗಿದ್ದೆ...perfectionist- ಬಿರುದು ಹೊತ್ತು ನಾನಲ್ಲದ ನನ್ನನ್ನು ಕನ್ನಡಿಯಲ್ಲಿ ನೋಡುತ್ತಿದ್ದೆ..ನನಗೆ ನನ್ನದೇ ಆದ ವ್ಯಕ್ತಿತ್ವವಿತ್ತೇ...ಒಂದೊಮ್ಮೆ ಸ್ತ್ರೀ ಶಕ್ತಿಯ ಬಗ್ಗೆ ದೊಡ್ಡ ದೊಡ್ಡಮಾತುಗಳನ್ನು ಆಡುತ್ತಿದ್ದವಳು ನಾನೆ! ಖಾಲಿಯಾಗಿದ್ದೆ...ನನ್ನಲ್ಲಿ ನನಗೇ ನಂಬಿಕೆಯಿರಲಿಲ್ಲ...ಏನೂ ಗೊತ್ತಿಲ್ಲವೆಂಬ ಕೀಳುರಿಮೆ ಕಾಡುತಿತ್ತು...
ಆದರೆ, ಕೊನೆಗೂ ಆ miracle....happened in my life too. ಕೊನೆಗೂ ನನ್ನನ್ನು ನಾನು ಕಂಡುಕೊಂಡೆ. ಆತ್ಮವು ಜಾಗ್ರತವಾಯಿತು. ಹಳೆಯ ಛಲ ಮತ್ತೆ ನನ್ನೊಳು ಮೂಡಿತು. ಆ ಹಳೆಯ ದಿನಗಳು- ಹೌದು ಬರೇ a for apple, b for ball...ಕಲಿಯುತ್ತಿದ್ದಾಗ ಹಠ ಮಾಡಿ ನನ್ನತ್ತೆಯಂದಿರ, ಚಿಕ್ಕಪ್ಪಂದಿರ, ಮಾಮಂದಿರ ಮಕ್ಕಳ ಹಾಗೆ ಆರನೆಯ ತರಗತಿಗೆ ಇಂಗ್ಲಿಷ್ ಮಾಧ್ಯಮ ಸೇರಿಕೊಂಡ ದಿನಗಳವು. ಕಲಿತ ಚಿಕ್ಕಪ್ಪನು ಅದ್ಯಾವುದೋ ಹಿಂದಿನ ದ್ವೇಷದ ಕಾರಣಕ್ಕಾಗಿ ಸಹಾಯ ಮಾಡಲು ತಯಾರಿರಲಿಲ್ಲ...ಅಮ್ಮ ಅಪ್ಪನಿಗೆ ಕಲಿಸುವ ಸಾಮರ್ಥ್ಯವಿರಲಿಲ್ಲ..ಮಾಮಂದಿರು ದೂರವಿದ್ದರು..ಆಗ ಏಕಲವ್ಯನಂತೆ ಗುರುಗಳಿಲ್ಲದೆ ಕಲಿತ ದಿನಗಳು....ಅರ್ಥ ಗೊತ್ತಿಲ್ಲದೆ ತಿಣುಕಾಡಿದ, ಶಾಲೆಯಲ್ಲಿ ಅವಮಾನದಿಂದ ಅತ್ತ ದಿನಗಳು....ಬೇಕಂತಲೇ ಇಂಗ್ಲಿಷ್ನಲ್ಲಿ ಮಾತನಾಡಿಸಿ ಹೀಯಾಳಿಸುವ ಸಹಪಾಠಿಗಳು..ಮರೆಯಲಾರೆ ಆ ದಿನಗಳನ್ನು... ಹೌದು, ದೈವದ ಬೆಂಬಲ, ಮನದಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಏಕಾಂಗಿಯಾಗಿದ್ದರೂ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು..
ಹುಂ, ಕತೆಯಲ್ಲಿ ಭಾಗ್ಯಶ್ರಿ ಬರೆದಂತೆ ನನಗೀಗ ಧೂಳು ಹೊಡೆಯಲು ಪುರುಸೊತ್ತು ಇಲ್ಲ....ನಾನೇ ಬೆಳೆಸಿದ ಹೂಗಿಡದಲ್ಲಿ ಆದ ಹೂಗಳನ್ನು ನೆರೆಮನೆಯವರು ಒಯ್ದರೆ ಅವರ ಜೊತೆ ಜಗಳವಾಡುವಷ್ಟು ತಾಳ್ಮೆನೂ ಇಲ್ಲ.....ನೆಂಟರು ಸಮಾರಂಭಗಳಿಗೆ ಕರೆಯದಿದ್ದರೂ ತಲೆಬಿಸಿ ಇಲ್ಲ..ಆಗಾಗ ಮನೆಗೆ ಬಂದು, ತಿಂದು ಮತ್ತೆ ಮರುದಿನ ಕಿರಿಕಿರಿ ಮಾಡುತ್ತಿದ್ದ ಅತ್ತೆ ಮನೆಯವರು ಈಗ ನನಗೆ, ನಾನು ಗಳಿಸಿದ ಹೆಸರಿಗೆ ಹೆದರುತ್ತಿದ್ದಾರೆ......ಹೊರಗಿನ ಚಲವಲನ ಒಳಗೂ ಸಂಚಲನವನ್ನು ಉಂಟುಮಾಡಿದೆ. ನನ್ನಲ್ಲಿ ಮತ್ತೆ ಜೀವ ಸಂಚಾರವಾಗಿದೆ!
13 November, 2012
ಮಗಳ ಘನಕಾರ್ಯ....
ಮಗಳ ಘನಕಾರ್ಯ....
ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}
ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!
ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.
ಅದೇನೋ ನಿನ್ನೆ ಬೆಳಿಗ್ಗೆಯಿಂದ ಬಿಡಿಸುತ್ತಾ ಕೂತಿದ್ದಾಳೆ ನನ್ನ ಮಗಳು...ಅಪರೂಪವಾದ ಈ ನೋಟ....ಕೇಳಿದೆ ಮಗಳ ಬಳಿ....ಹುಂ, ಏನು ಚಿತ್ರ ಗಿತ್ರ...ಏನು ವಿಶೇಷ???? ನಿಧಾನವಾಗಿ ಬಾಯಿಬಿಟ್ಟಳು, ತನ್ನ ಸ್ನೇಹಿತನ ಜಾಲದಲ್ಲಿ ಹಾಕಲು ಚಿತ್ರ ಮಾಡ್ತಿದ್ದೇನೆ..ಕೇಳಿದ ತಪ್ಪಿಗೆ ಒಂದಿಷ್ಟು ಸಲಹೆನೂ ಉಚಿತವಾಗಿ ಕೊಡಬೇಕಾಯಿತು. ಸ್ಕಾನಿಂಗ್ ಕೆಲಸನೂ ಅಮ್ಮನಿಗೇ ಅಂಟಿಸಿದಳು...ಜೊತೆಗೆ ವಾರ್ನಿಂಗ್- ಫೇಸ್ ಬುಕ್ಕಿನಲ್ಲಿ ಹಾಕಿದರೆ ನೋಡು!!! ಹೋಗೆ ನಿಂಗೆ ಹೆದರ್ತೇನೆಯಾ ...ಆದರೂ ಹಾಕಲಿಕ್ಕೆ ಹೋಗಲಿಲ್ಲ...ನನ್ನ ಬ್ಲಾಗ್ ಇದೆಯಲ್ಲವಾ...ಅದರಲ್ಲಿ ಹಾಕ್ತೇನೆ...{ ನನ್ನ ಮಕ್ಕಳು ಏನು ಮಾಡಿದರು ನನಗದು ಘನಕಾರ್ಯನೇ...:-)}
ಅಂದ ಹಾಗೆ ಈ Beat Beans....ಈ ಲೋಗೋ ಮಾಡಿದ್ದು ಕೂಡ ನನ್ನ ಮಗ ಪಿಕಾಸು!
ಇಲ್ಲಿ ವಿಶೇಷವೇನೆಂದರೆ ನೋಡಲು ಚಿತ್ರ ಕಡ್ಡಿ ಮನುಷ್ಯರಂತೆ ಕಂಡರೂ..ಇದೆಲ್ಲಾ ಕಾಪಿ ಮಾಡಿದಲ್ಲ..ಅವಳದೇ ಐಡಿಯಾ!!! ಅದು ನನಗೆ ಬಹಳ ಖುಶಿ ಕೊಟ್ಟಿತು.
05 September, 2012
ಶ್ರೀ ಗುರವೇ ನಮಃ
ಒಂದು ವಾರದಿಂದ ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳಿಗೆ ತಮ್ಮ ತಮ್ಮ ಗುರುಗಳಿಗೆ ಟೀಚರ್ಸ್ ಡೇಗಾಗಿ ಗಿಫ್ಟ್ ತಯಾರಿಸುವ ಸಂಭ್ರಮ. ಅಂತೂ ಅಪ್ಪನ ಜೇಬಿಗೆ ತೂತು ಮಾಡಿಸ್ತಾರಪ್ಪಾ ಈ ಮಕ್ಕಳು...ಅವರಲ್ಲೇ ಪೈಪೋಟಿ..ಯಾರು ಬೆಸ್ಟ್ ಗಿಫ್ಟ್ ಕೊಡ್ತಾರಂತ...ನನ್ನದು ಒಂದೇ ಮಾತು..ನನಗೆ ಗಿಫ್ಟ್ ಬೇಡ..ನೀವೇ ಕಾರ್ಡ್ ತಯಾರಿಸಿದರೆ ಮಾತ್ರ ತಕ್ಕೊಳ್ತೇನೆ..ಇಲ್ಲ ಏನೂ ಬೇಡ...ಹಾಗಾಗಿ ನಿನ್ನೆಯೆಲ್ಲ ಗುಸುಗುಸು ಮಾತಾಗ್ತಿತ್ತು..ಇವತ್ತು ಬೆಳ್ಬೆಳಿಗ್ಗೆನೇ ಮೈಸೂರಿನಿಂದ ಹಳೆ ಶಿಷ್ಯೆಯ ದೂರವಾಣಿ! ಅರೇ ಈ ಹುಡುಗಿ ಇನ್ನೂ ನನ್ನನ್ನ ಮರಿಯಲಿಲ್ಲವಲ್ಲ...ಕೇಳಿದೆ ಏನಮ್ಮಾ ಹಳೆ ಗೆಳತಿಯರ ಒಡನಾಟ ಇನ್ನೂ ಇದೆಯೇನು...ಪಟ್ ಅಂತ ಉತ್ತರ ಬಂತು...ಐ ಹಾವ್ ಲಿಟರಲೀ ಲಾಸ್ಟ್ ಆಲ್ ಮೈ ಓಲ್ಡ್ ಕಾಂಟಾಕ್ಟಸ್!!! ಮತ್ತೆ ನನ್ನದು??? ಈ ಹುಡುಗಿ ನನ್ನ ಕೆಳಗೆ ಪಳಗಿದ ನನ್ನ ಪಟ್ಟ ಶಿಷ್ಯೆ!....ಅವಳ ತಂದೆ ತಾಯಿ..ಮಾತ್ರವಲ್ಲ..ದೂರದೂರಿನಲ್ಲಿರುವ ಅಜ್ಜಿಗೂ ನಾನಂದ್ರೆ ತುಂಬಾನೆ ಇಷ್ಟ!
ಇವತ್ತು ೬.೪೫ಕ್ಕೆ ಪಾಠಕ್ಕೆ ಬಂದ ಹುಡುಗರು..ಎಂದಿನಂತೆ ತಮ್ಮತಮ್ಮ ಓದಿನಲ್ಲಿ ಮಗ್ನರಾದರು..ಆದರೆ ಹುಡುಗಿಯರು..ಬರುವಾಗಲೇ ಗಲಗಲ..ರೋಸ್..ಚಾಕ್ಲೇಟ್...ಮತ್ತು ಮೇಡಂಗೋಸ್ಕರ ಪೆನ್ನುಗಳ ಉಡುಗೊರೆ! ಇದಕ್ಕೆಲ್ಲಾ ಬೆಲೆಕಟ್ಟಲಾಗುವುದೇ! ನನಗೆ ನನ್ನ ಹಳೆದಿನಗಳು ಕಾಡತೊಡಗಿದವು..ನನ್ನ ಬದುಕಿನಲ್ಲಿ ನನಗೆ ಬರೇ ಪಾಠ ಕಲಿಸಿದ ಮಾತ್ರವಲ್ಲ...ಜೀವನದ ಪ್ರತಿ ಹಾದಿಯನ್ನು ನಿಭಾಯಿಸಲು, ಮನಸು ಸದೃಢವಾಗಿಸಲು ದಾರಿದೀಪವಾದ ಅನೇಕ ಮಹಾನ್ ಆತ್ಮಗಳ ಪುನಃ ಸ್ಮರಣೆ ಮಾಡಿದೆ. ಹಾಂ, ಪ್ರತೀದಿನ ಬೆಳಿಗ್ಗೆ ಏಳುವಾಗ ಮತ್ತು ಮಲಗುವ ಮೊದಲು ನನ್ನೊಡೆಯ ನಾಮದ ಜೊತೆಗೆ ಇವರನ್ನೂ ಸ್ಮರಿಸುವುದನ್ನು ತಪ್ಪಿಸುವುದಿಲ್ಲವಾದರೂ ಇವತ್ತಿನ ದಿನ ಇನ್ನೊಮ್ಮೆ ಹಳೆದಿನಗಳನ್ನು ಮೆಲುಕಿಸುವಂತೆ ಪ್ರೇರೇಪಿಸಿತು. ಬದುಕಿನ ಮೊದಲ ೧೧ ವರ್ಷ...ಇಂದಿನ ನನ್ನ ನಿಲುವಿಕೆಗೆ, ನನ್ನ ತತ್ವಗಳಿಗೆ ಆಧಾರ. ಮತ್ತೆ ೩೩ ವರ್ಷ ಬರೇ ಉಸಿರಾಟವಾಡಿದ್ದು...ಕೆಲವೊಂದು ಸಿಹಿನೆನಪುಗಳ ಹೊರತು,,,,, ಬಾಳಿನ ಪುಟಗಳು ಬರೇ ಖಾಲಿ..ಮತ್ತೆ ಆ ಸುವರ್ಣ ದಿನಗಳು ಮರಳಿ ಬಂದದ್ದು ಈ ೨,೩ ವರ್ಷದಲ್ಲೇ!!!
ಬದುಕಿನ ಪ್ರತಿಯೊಂದು ಹಾದಿಯಲ್ಲಿ ದಾರಿದೀಪವಾದ ಹಲವು ಜ್ಯೋತಿಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು!
ಈ ಬರಹಗಳು ನಾನು ೨೦೦೭ ಮತ್ತು ೨೦೧೧ರಲ್ಲಿ ಸಂಪದದಲ್ಲಿ ಪ್ರಕಟಿಸಿದವುಗಳು...ಇಂದಿಗೂ ಪ್ರಸ್ತುತವೆನಿಸಿ ಹಾಕುತ್ತಿದ್ದೇನೆ!
2007
-ಮತ್ತೆ ಸೆಪ್ಟೆಂಬರ್ ೫ ಬಂತು.ಮಕ್ಕಳೆಲ್ಲಾ ನಿನ್ನೆನೇ ತಮ್ಮ ತಮ್ಮ ಟೀಚರ್ ಗೋಸ್ಕರ ತಂದ ಹೂ, ಕಾರ್ಡ್, ಉಡುಗೊರೆಗಳನ್ನು ಹಿಡಿದುಕೊಂಡು ಸ್ಕೂಲಿಗೆ ಹೊರಟಿದ್ದಾರೆ. ಈ ಮಕ್ಕಳ್ಳನ್ನು ನೋಡಿ ನನಗೆ ನನ್ನ ಶಾಲೆಯ ದಿನಗಳು ನೆನಪಿಗೆ ಬಂತು. ನಾವೆಲ್ಲಾ ಈಗಿನ ಮಕ್ಕಳ ಹಾಗೆ ನಮ್ಮ ಟೀಚರ್ ಗೆ ಏನೂ ತೆಗೆದುಕೊಂಡು ಹೋದ ನೆನಪಿಲ್ಲ ನನಗೆ! ಈಗಿನ ಮಕ್ಕಳ ಉತ್ಸಾಹ ನೋಡಿ ಸಂತೋಷವಾಗುತ್ತದೆ ಜೊತೆಗೆ ಆಶ್ಚ್ರರ್ಯವೂ ಆಗುತ್ತದೆ, ಈಗಿನ ಮಕ್ಕಳಿಗೆ ನಿಜವಾಗಿಯೂ ತಮ್ಮ ಟೀಚರ್ ಮೇಲೆ ಪ್ರೀತಿಯಿದೆಯೇ ಎಂದು.ನಮ್ಮ ಗುರುಗಳು ಹಾಗು ನಮ್ಮ ಮಧ್ಯೆಯಿದ್ದ ಆ ಸುಮಧುರ ಸಂಬಂಧ ಈಗಿನ ಮಕ್ಕಳು ಗುರುಗಳಲ್ಲಿಯಿದೆಯೇ? ಇದ್ದರೂ ಇರಬಹುದು......ಏನಿದ್ದರೂ ಈ ಮಕ್ಕಳು ನನ್ನಲ್ಲಿ ಸುಪ್ತವಾಗಿದ್ದ ನನ್ನ ಗುರುಗಳ ಮೇಲಿನ ಭಕ್ತಿ, ಗೌರವ ಹಾಗೂ ಕೃತಜ್ಞತೆಯನ್ನು ಈ ಮೂಲಕ ಅರ್ಪಿಸಲು ಪ್ರೇರಣೆಯಾಗಿದ್ದರೆ! ಪ್ರಪಂಚದ ಎಲ್ಲಾ ಗುರುಗಳಿಗೆ ನನ್ನ ವಂದನೆಗಳು. ವಿಶೇಷವಾಗಿ ನನಗೆ ಕಲಿಸಿದ ಗುರುಗಳನ್ನು ನಾನು ಈದಿನ ಸ್ಮರಿಸಿ ನನ್ನ ಕೃತಜ್ಞತೆಯನ್ನು ಈ ಮೂಲಕ ತೋರಿಸಲು ಆಶಿಸುತ್ತೇನೆ. ಬಾಲವಾಡಿಯಿಂದ ೫ನೇ ತರಗತಿಯವರೆಗೆ ಕಲಿಸಿದ ಸುಶೀಲಾ, ರತ್ನ ಟೀಚರ್ ಇವರಿಂದ ಕಲಿತ ಪಾಠ ಪ್ರೈಮರಿ ತರಗತಿಯಲ್ಲಿ ಕಳೆದ ಕಾಲವನ್ನು ಇನ್ನೂ ಹಸಿಯಾಗಿಡಲು ಕಾರಣವಾಯಿತು. ಇವರಿಬ್ಬರ ಜೊತೆಗೆ ನನಗೆ ಹೈಸ್ಕೂಲಿನಲ್ಲಿ ಕಲಿಸಿದ ಮುಕ್ತಾ, ರಾಧ, ದಮಯಂತಿ, ಶಾರ್ಲೆಟ್, ರಾಮಪ್ಪ, ನಾರಾಯಣ ತಂತ್ರಿ,ಮೊದಲಾದವರೂ ನನ್ನ ಮುಂದಿನ ಶಿಕ್ಷಣಕ್ಕೆ ಹಾಕಿಕೊಟ್ಟ ಅಡಿಪಾಯವನ್ನು ನಾನೆಂದಿಗೂ ಮರೆಯಲಾರೆ. ಪಿಯುಸಿ ಹಾಗು ಕಾಲೇಜಿನಲ್ಲಿ ಕಲಿಸಿದ ಬಾಲಚಂದ್ರ ರಾವ್, ಚಂದ್ರಶೇಖರ್, ಶೆಣೈ ಸರ್, ಸ್ವರ್ಣಾ ಮೇಡಮ್, ಮುಡಿತಾಯಾ ಸರ್, ಆಚಾರ್ಯ ಸರ್, ....... ಇನ್ನೂ ಪ್ರತ್ಯೇಕ್ಷವಲ್ಲದೇ ಅನೇಕ ಪರೋಕ್ಷ ಗುರುಗಳನ್ನು ಸ್ಮರಿಸಿ, ಈ ದಿನವನ್ನು ಶಿಕ್ಷರಿಗೆ ಅರ್ಪಿಸಿದ ರಾಧಾಕೃಷ್ಣರಿಗೆ ನನ್ನ ಹಾರ್ಧಿಕ ಅಭಿನಂದನೆಗಳನ್ನು ಮತ್ತು ಕೃತಜ್ಞತೆಯನ್ನು ಆರ್ಪಿಸುತ್ತೇನೆ! ಗುರು--- ಈ ಶಬ್ದಕ್ಕೆ ಎಷ್ಟು ಮಹತ್ವವಿದೆಯಲ್ಲವೇ? ಗು ಅಂದರೆ ಕತ್ತಲೆ, ರು ಅಂದರೆ ಕತ್ತಲೆಯನ್ನು ದೂರಮಾಡುವವ. ಅಂದರೆ ಬೆಳಕನ್ನು ತೋರಿಸುವವ. ತಾಯಿಯ ನಂತರ ಪ್ರತಿಯೊಬ್ಬರ ಬಾಳಿನಲ್ಲಿ ಪ್ರಮುಖವಾದ ಪಾತ್ರವನ್ನು ಗುರು ವಹಿಸುತಾನೆ! ನಮ್ಮ ಮುಂದಿನ ಜೀವನಕ್ಕೆ ನಾಂದಿಯನ್ನು ಹಾಕುತ್ತಾನೆ. ಭದ್ರವಾದ ಅಡಿಪಾಯವಾದರೆ ಮುಂದಿನ ಜೀವನದಲ್ಲಿ ಬರುವ ಎಲ್ಲಾ ಅಡೆಚಡೆಗಳನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ.
तस्मै श्री गुरुभ्यॊ नमः||
20011
तस्मै श्री गुरुभ्यॊ नमः||
20011
- ಮತ್ತೆ ಬಂದಿದೆ ಗುರುಗಳ ದಿನ! ನನ್ನಲ್ಲಿ ನನ್ನ ಗುರುಗಳ ಬಗ್ಗೆಯ ಕೃತಜ್ಞತಾ ಭಾವ ಇನ್ನು ಇನ್ನು ಹೆಚ್ಚಾಗುತಿದೆಯೇ ಹೊರತು ಒಂಚೂರು ಕಮ್ಮಿಯಾಗಿಲ್ಲ. ಕಾರಣ ನನ್ನ ಇಂದಿನ ಏಳಿಗೆಗೆಯ ಸಂಪೂರ್ಣ ಶ್ರೇಯ ನನ್ನ ಗುರುಗಳಿಗೇ ಸಲ್ಲುತ್ತದೆ. ಮತ್ತೆ ಗುರು ಚರಣಗಳಿಗೆ ನನ್ನ ದೀರ್ಘ ಪ್ರಣಾಮಗಳು! ಅದರಲ್ಲೂ ಬಿ. ಜಿ. ಮೊಹಮ್ಮದ್ ಮಾಸ್ಟ್ರು ಅತ್ಯಂತ ಅಲ್ಪ ಸಮಯದಲ್ಲಿ ಚಿತ್ರಕಲೆಯ ರಹಸ್ಯವನ್ನು ತಿಳಿಸಿ ಅವರಿಗೆ ಚಿರಋಣಿಯಾಗಿರುವಂತೆ ಮಾಡಿದ್ದಾರೆ. ಇಂದು ನಾನು ಅವರದೇ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದ್ದೇನೆ. ಚಿತ್ರ ಕಲೆಯನ್ನು ಕಲಿಸುವ ರೀತಿ ಅವರಿಗೆ ಚೆನ್ನಾಗಿ ಕರಗತವಾಗಿತ್ತು.....ಎಷ್ಟೋ ಮಂದಿ ಸೂಪರ್ ಪೈಂಟಿಗ್ ಮಾಡುತ್ತಾರೆ...ಆದರೆ ಕಲಿಸಲು ಬರುವುದಿಲ್ಲ...ನನಗೆ ತಿಳಿದ ಹಾಗೆ ಅವರು ಅಜಾತ ಶತ್ರುಗಳಾಗಿದ್ದರು...ಬಹಳ ಜನಪ್ರಿಯರಾಗಿದ್ದರು...ಎಂದಿಗೂ ಪ್ರಶಸ್ತಿಗಳಿಗಾಗಿ ಲಾಬಿ ಮಾಡಿರಲಿಲ್ಲ...ಅದರಿಂದ ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಮಾನ ಸಮ್ಮಾನಗಳು ದೊರಕಿಲ್ಲ....ಆದರೂ ಅವರ ಶಿಷ್ಯರು ಅವರಿಗೆ ತಮ್ಮ ಚಿತ್ರಗಳ ರೂಪದಲ್ಲಿ ನ್ಯಾಯ ಸಲ್ಲಿಸಿದ್ದಾರೆ...ಸಲ್ಲಿಸುತ್ತಿದ್ದಾರೆ... ಮತ್ತು ಸಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ...ಅವರ ಜೀವಿತದ ಕೊನೆಯ ಕಾಲದಲ್ಲಿ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು.
ಮಷ್ಟ್ರಾ ನಮಸ್ಕಾರು!!!! ಕೃತಜ್ಞತೆಯನ್ನು ನನ್ನ ಈ ಚಿತ್ರದ ಮೂಲಕ ಸಲ್ಲಿಸುತ್ತೇನೆ.
20 February, 2012
ವಿನೂತನ ಅನುಭವ- ಗಾಂಧಿ ಪಾರ್ಕಿನಲ್ಲಿ!-2
ಮೈಯೆಲ್ಲಾ ಪುಳಕ! ಮೊದಲ ಬಾರಿಗೆ ಸಾರ್ವಜನಿಕರ ಎದುರು ನನ್ನ ಕಲೆ ಅನಾವರಣಗೊಳ್ಳಲಿದೆ....ಹೇಗಾಗುವುದೋ ಏನೋ, ಮನಸಿನಲ್ಲಿ ಹತ್ತಾರು ಪ್ರಶ್ನೆಗಳು! ಅಂತೂ ಐದು ನಿಮಿಷದಲ್ಲಿ ಆಟೋನವನು ನನ್ನನ್ನು ನನ್ನ ಗಮ್ಯ ಸ್ಥಾನಕ್ಕೆ ತಲುಪಿಸಿದ. ಆದರೆ ವೇದಿಕೆಯ ತಯಾರಿ ನಿಧಾನವಾಗಿ ನಡೆದಿತ್ತು. ಕೊನೆಗೂ ಕಾರ್ಯಕ್ರಮ ಪ್ರಾರಂಭವಾಗುವಾಗ ೧೦ ಗಂಟೆ ದಾಟಿತ್ತು. ನನ್ನ ಕೈಗೆ ಆಹ್ವಾನ ಪತ್ರಿಕೆ ಸಿಕ್ಕಿದ್ದು ತಡವಾಗಿ! ಅದರಲ್ಲಿದ್ದ ಉದ್ಘಾಟಕರ, ಅತಿಥಿಗಳ ಹೆಸರುಗಳನ್ನು ನೋಡಿಯೇ ದಂಗಾಗಿಹೋಗಿದ್ದೆ.. ಈಗ ಅಲ್ಲಿದ್ದ ಪತ್ರಕರ್ತರು ಮತ್ತು ಕೆಮರಾಗಳನ್ನು ನೋಡಿ ಮೂಕಳಾಗಿ ಬಿಟ್ಟೆ..ವರ್ಣ ವನಿತೆಗೆ ಎಂತಹ ಪ್ರಚಾರ..ದುರಾದೃಷ್ಟದಿಂದ ಜನರ ಉಪಸ್ಥಿತಿ ಬಹಳ ಕಮ್ಮಿಯಿತ್ತು. ನನ್ನ ಅನುಭವಕ್ಕೆ ಬಂದ ಹಾಗೆ ನಮ್ಮೂರಿನಲ್ಲಿ ಕಲೆಯ ಬಗ್ಗೆ ಅನಾದರ ಹೆಚ್ಚು..ಮಂಗಳೂರಿನ ಜನರು ವ್ಯಾಪಾರಕ್ಕೆ, ಅಂತಸ್ತಿಗೆ, ಧನ ಬಲಕ್ಕೆ ಹೆಚ್ಚು ಬೆಲೆ ಕೊಡುವವರು. ಈಗೀಗ ತಮ್ಮ ಮಕ್ಕಳನ್ನು ಕಲೆಗೆ ಸಂಬಂಧಪಟ್ಟ ತರಗತಿಗೆ ಕಳುಹಿಸುವವರಾದರೂ ಅದೂ ಕೂಡಾ ವ್ಯಾಪಾರ ದೃಷ್ಟಿಯಿಂದಲೇ!!
ಉದ್ಘಾಟಕರಾದ ವನಿತಾಜಿ ಪೈಯವರು ರೇಷ್ಮಾ ಅವರು ರಚಿಸಿದ ಕೊಲಾಜ್ ಮಹಿಳೆಯ ಹಣೆಗೆ ತಿಲಕವಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು! ರಾಜಲಕ್ಷ್ಮಿ ಅವರು ಕನ್ನಡದಲ್ಲಿ ಮಹಿಳೆಯ ಪಾತ್ರದ ಬಗ್ಗೆ ತಮ್ಮ ಕಳಕಳಿ ವ್ಯಕ್ತಪಡಿಸಿದರು....ಮರಗಿಡಗಳು ಬೆಳೆದಂತೆಯೇ ತಮ್ಮ ಮೂಲಸ್ವರೂಪವನ್ನೆ ತೋರುತ್ತವೆ...ಪ್ರಕೃತಿಯ ಏಳಿಗೆಗೆ ತಮ್ಮ ದೇಣಿಗೆಯನ್ನು ಕೊಡುತ್ತವೆ ಆದರೆ ಮಾನವ ಬೆಳೆದಂತೆಯೇ ಮಾನವನಾಗುತ್ತಾನೆಯೇ! ಲೋಕನಾಶಕ್ಕೆ ಕಾರಣ ವಾಗುತ್ತಾನೆ, ಸ್ವಾರ್ಥದಿಂದ ಪ್ರಕೃತಿಗೆ ಕಂಟಕಗಳ ಸರಮಾಲೆಯನ್ನೇ ಕೊಡುತ್ತಾನೆ. ವಿದ್ಯಾ ದಿನಕರ್ ಅವರೂ ಮಂಗಳೂರಿನ ರಸ್ತೆಯ ಅವ್ಯವಸ್ತೆ, ಇತ್ಯಾದಿಗಳ ಬಗ್ಗೆ ಮಾತನಾಡುತ್ತ ಪಾರ್ಕಿನ ಉದ್ಧಾರಕ್ಕೆ ಕಾರಣಕರ್ತರಾದವರನ್ನು ನೆನಪಿಸಿಕೊಂಡರು. ವನಿತಾ ಪೈಯವರು ತಮ್ಮ ಚಿಕ್ಕ ಚೊಕ್ಕ ಮಾತಿನಲ್ಲಿ ಕಾರ್ಯಕ್ರಮ ನಿರ್ವಾಹರನ್ನು ಅಭಿನಂದಿಸಿದರು.
ಅಂತೂ ೧೧ಕ್ಕೆ ನಮ್ಮ ಕೆಲಸ ಪ್ರಾರಂಭವಾಯಿತು. ಮಾಡುತ್ತಿದ್ದಂತೆಯೇ ಅಲ್ಲಲ್ಲಿ ಪತ್ರಕರ್ತರು ಮಹಿಳೆಯರ ಗಳಿ ನಿಂತು ಅವರ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು. ಅವರ ಕೆಲಸ, ಅವರ ಕಲಿಕೆ ಆಸಕ್ತಿ....ಇತ್ಯಾದಿ ಇತ್ಯಾದಿ... ಕೆಲ ಪತ್ರಕರ್ತರಿಗೆ ಕಲೆಯ ಬಗ್ಗೆ ತಿಳಿದಿರಲಿಲ್ಲ...ಸಾಂಪ್ರದಾಯಿಕ, ಅಮೂರ್ತ, ಕೊಲಾಜ್, ಹೀಗೆ ಅನೇಕ ಕಲೆಯ ಭಿನ್ನ ಆಯಾಮಗಳ ತಿಳುವಳಿಕೆಗಳನ್ನು ಪಡೆಯುತ್ತಿದ್ದರು. ಸುವರ್ಣ, ನಮ್ಮ, ದೈಜಿ, ಮಾಂಗಲೂರಿಯನ್.ಕಾಮ್, ಮೊದಲಾದ ಅನೇಕ ವಾಹಿನಿಯವರು, ಹೆಸರಾಂತ ಪತ್ರಿಕೆಯವರು ಬಂದಿದ್ದರು. ಹಾಗೆಯೆ ಮಧ್ಯಾಹ್ನದ ಹೊತ್ತಿಗೆ ನನ್ನ ಬಳಿ ವೀಣಾ ಅವರು ಅಕ್ಷತಾ ನಮ್ಮೆಲ್ಲ ಬಳಿ ಮಾತನಾಡಲು ಬಂದಿದ್ದಾಳ...ದಯವಿಟ್ಟು ಅವಳಿಗೆ ಬೇಕಾದ ಮಾಹಿತಿ ಕೊಟ್ಟು ಸಹಕರಿಸಿ ಎಂದರು..ಅಂತೆಯೇ ನನ್ನ ಜಾಗಕ್ಕೆ ಬರುವಾಗ ಅಕ್ಷತಾ ಅಲ್ಲಿಯೇ ಕುಳಿತಿದ್ದಳು..ಕಾಕತಾಳೀಯವಾಗಿ ನನ್ನದು ಮೊದಲನೆಯ ಸಂದರ್ಶನವಾಯಿತು..ಯಾವುದೇ ಹೆಚ್ಚಿನ ತರಬೇತಿ ಪಡೆಯದ, ಸುಮಾರು ಇಪ್ಪತ್ತು ವರ್ಷಗಳ ಅನಂತರ ತನ್ನ ಹೃದಯದ ಕರೆಗೆ ಓಗೊಟ್ಟು ಕಲಾಜೀವನಕ್ಕೆ ಹಿಂದಿರುಗಿದ ನನ್ನ ಕತೆ ಅವಳಿಗೆ ವಿಚಿತ್ರವಾಗಿ ಕಂಡಿತ್ತು. ನನ್ನ ಓಗೆರೆಯವರು ಇನ್ನೂ ಈ ಅಂತರ್ಜಾಲ ಕ್ಷೇತ್ರದಲ್ಲಿ ಅ ಆ ...ಕಲಿಯುತ್ತಿರುವಾಗ ನಾನು ಸ್ವಪ್ರಯತ್ನದಿಂದ ೨೦೦೪ರಿಂದ ಇಂಟರ್ನೆಟ್ ಲೋಕದಲ್ಲಿ ಜಾಲಾಡಿ ಮಾಹಿತಿಗಳನ್ನು ಶೇಖರಿಸಿ ಅದರಿಂದ ಕಲೆಯನ್ನು ಉತ್ತಮಪಡಿಸಿದೆನೆಂದಾಗ ಅವಳಿಗೆ ಆಶ್ಚರ್ಯ! ನಿಮ್ಮಲ್ಲಿ ತನಗೆ ತುಂಬಾ ಮಾತನಾಡಲಿದೆಯೆಂದು ನನ್ನ ದೂರವಾಣಿಯ ಅಂಕೆಯನ್ನು ತೆಗೆದುಕೊಂಡಳು. ಸರಿ , ನಾನು ಕೊಟ್ಟೆ. ಆದರೆ ದೇವರಾಣೆಗೂ ಆಕೆ ನನ್ನ ಸಂದರ್ಶ ತೆಗೆದು ಕೊಳ್ಳಲು ಬರುವಳೆಂದು ಅಂದುಕೊಂಡಿರಲಿಲ್ಲ.....
ಸಂಜೆ ಜನ ಸಂದಣಿ ಹೆಚ್ಚಿತ್ತು..ಪಾರ್ಕಿಗೆ ಆಡಲು ಬರುವ ಮಕ್ಕಳು, ನಿತ್ಯವೂ ವಾಕ್ಗೆ ಬರುವ ದಂಪತಿಗಳು, ಸ್ನೇಹಿತೆಯರು ಕುತೂಹಲದಿಂದ ಹತ್ತಿರ ಬಂದು ಇಣಿಕಿ ಹೋದರು. ಹೆಚ್ಚಿನವರಿಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಇರಲಿಲ್ಲ....ಆದರೂ ಕೆಲ ಸಹೃದಯದ ಕೆಲವರು ಪ್ರೋತ್ಸಾಹದ ಮಾತುಗಳಿಂದ ವನಿತೆಯರನ್ನು ಕುಶಿ ಪಡಿಸಿದರು. ಅಲ್ಲಿ ಆಡುತ್ತಿದ್ದ ಮಕ್ಕಳು ಬಂದು ಕಲೆಯನ್ನು ಆಹ್ವಾದಿಸಿ ಆನಂದ ಪಟ್ಟರು..ಕಮೆಂಟು ಉದುರಿಸಿದರು! ಅವರ ಕಮೆಂಟು ನೇರವಾಗಿತ್ತು..ಕಪಟವಿರಲಿಲ್ಲ, ತೋರಿಕೆಯದಾಗಿರಲಿಲ್ಲ...ಏನೋ ಬಹುಶಃ ನನಗೆ ಮಕ್ಕಳ ಮೇಲಿರುವ ಅತಿಯಾದ ವಾತ್ಸಲ್ಯದಿಂದಲೋ ಏನೋ, ಈ ಬಾಲರ ಮಾತುಗಳು ಹಿತವಾಗಿ ತೋರಿತ್ತು. ಹಾಂ, ಮರೆತಿದ್ದೆ..ನಮ್ಮ ಚಾವಡಿಯ ಸದಸ್ಯರೂ ಆಗಮಿಸಿ ಎಲ್ಲರ ಬಳಿ ನಿಂತು ಸಲಹೆ, ಪ್ರೋತ್ಸಾಹ ಕೊಡುವ ದ್ರಶ್ಯ ಮನ ಪಟಲದಲ್ಲಿ ಭದ್ರವಾಗಿ ಕುಳಿತಿದೆ..ಜುಟ್ಟು ಹಾಕಿದ, ಪತ್ರಿಕೆಗಳಲ್ಲಿ ಮಾತ್ರನೋಡಿದ ಪರಿಚಿತರೊಬ್ಬರನ್ನು ನೋಡಿ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ....ನನ್ನ ಬಾಯಿಯಿಂದ ಅಪ್ರಯತ್ನವಾಗಿ ಹೊರಬಿತ್ತು " ಪುರುಷೋತ್ತಮ ಅಡ್ವೆ!" ಎಲ್ಲರೂ ನಕ್ಕರು..ಅವರ ಜುಟ್ಟು ಅವರ ಗುರುತೆಂದು ಭಾವಿಸಿ..ಆದರೆ ನನ್ನ ಚಿತ್ತದಲ್ಲಿ ಅವರ ಕೃಷ್ಣನ ಚಿತ್ರಣ ಹಾಗೂ ಅವರ ಬಗ್ಗೆ ಓದಿದ ಲೇಖನ ಅವರ ಗುರುತನ್ನು ಸುಲಭವಾಗಿ ಕಂಡು ಹಿಡಿದಿತ್ತು. ಈ ಕ್ಯಾಂಪು ನನಗೆ ನಮ್ಮಲ್ಲಿನ ಅತ್ಯುತ್ತಮ ಕಲಾಕಾರರನ್ನು ಹತ್ತಿರದಿಂದ ನೋಡುವ ಸುವರ್ಣಾವಕಾಶ ಒದಗಿಸಿತ್ತು.
ಅಂತೂ ಮೊದಲನೆಯ ದಿನ ಕಳೆಯಿತು....ಮರುದಿನ ಆದಿತ್ಯವಾರ, ಬೇಗನೇ ಎದ್ದು ದೋಸೆಗಳನ್ನು ತೆಗೆದು ಚಟ್ನಿ ತಯಾರಿಸಿ ಲೆಕ್ಕ ಹಾಕಿದಂತೆ ಮಾಡುವ ಕೆಲಸ ಮಾಡಿ, ೯.೦೦ಕ್ಕೆ ಗಾಂಧಿ ಪಾರ್ಕ್ ತಲುಪಿದೆ. ಆದಿತ್ಯವಾರವಾದುದರಿಂದ ಅಲ್ಲೇ ಸುತ್ತಮುತ್ತ ಇದ್ದವರು, ಹಿಂದಿನ ದಿನ ಮಾಹಿತಿ ಸಿಕ್ಕಿದವರು ಬಂದು ಕುತೂಹಲದಿಂದ ವನಿತೆಯರ ಚಿತ್ರಗಳನ್ನು ನೋಡುತ್ತಿದ್ದರು. ಬಂಟ್ವಾಳದಿಂದ ನನ್ನ ಕಾಲೇಜಿನ ಭಾರತಿ ಮೇಡ್ಂ ತಮ್ಮ ಕೆಮರಾ ಹಿಡಕೊಂಡು ನನ್ನ ಚಿತ್ರ ತೆಗೆಯುತ್ತಿದ್ದಾರೆ..ಹೃದಯ ತುಂಬಿ ಬಂತು ಕದ್ರಿಯ ಕಲಾಮೇಳದಲ್ಲಿ ಅದು ಸಹ ೨೧ ವರುಷಗಳ ನಂತರ ಅವ್ರ ದರ್ಶನ...ಅಲ್ಲಿ ನಮ್ಮ ದೂರವಾಣಿಯ ಸಂಖ್ಯೆಗಳನ್ನು ಬದಲಾಯಿಸಿಕೊಂಡಿದ್ದೆವು.. ಆದುದರಿಂದ ನಮ್ಮ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ಕೊಟ್ಟಿದ್ದೆ. ಬರಲು ಸಾಧ್ಯವಾಗಲಿಕ್ಕಿಲ್ಲ ಆದರೆ ತಮ್ಮ ಮತ್ತು ಕೆನರಾ ಕಾಲೇಜಿನ ಪ್ರಿನ್ಸಿಪಾಲರಾಗಲಿರುವ ತಮ್ಮ ಪತಿ ಇಬ್ಬರ ಆಶೀರ್ವಾದವು ನಿನ್ನ ಮೇಲಿದೆಯೆಂದು ನನಗೆ ದೂರವಾಣಿ ಮಾಡಿ ಹೇಳಿದ್ದರು. ಆದಾಗ್ಗಿಯೂ ಅವರು ಖುದ್ದ ಬಂದುದು ನನಗೆ ಬಹಳ ಸಂತಸ ತಂದಿತು. ನಮ್ಮ ವನಿತೆಯರ ಮಧ್ಯೆ ಅಷ್ಟೊಂದು ವಿಚಾರ ವಿನಿಮಯವಾಗದಿದ್ದರೂ ನನ್ನ ಕೆಲ ಸ್ನೇಹಿತರ ಆಗಮನವು ನನಗೆ ಸಹಸ್ರ ಭುಜಬಲವನ್ನು ಕೊಟ್ಟಿತೆಂದರೆ ಅದು ಖಂಡಿತ ಉತ್ಪ್ರೇಕ್ಷೆಯಲ್ಲ! ..೧೨.೩೦ ಹೊತ್ತಿಗೆ ನನ್ನ ಉಮೇದು ಕಮ್ಮಿಯಾಗಿತ್ತು... ಎಲ್ಲರೂ ತಮ್ಮ ಪೈಂಟಿಂಗ್ ಮುಗಿಸಿದ್ದರು...ನನ್ನದೂ ಇನ್ನೂ ಕೆಲಸ ಉಳಿದಿತ್ತು..ಅಷ್ಟು ಹೊತ್ತಿಗೆ ಯಾಕೋ ತಲೆಯೆತ್ತಿ ನೋಡುವಾಗ...ಶೀಲಾ... ನನ್ನ ಬಾಯಿಯಿಂದ ಉದುರಿತು ಅಪ್ರಯತ್ನವಾಗಿ! ೨೧ ವರುಷಗಳ ನಂತರ ನಮ್ಮ ಭೇಟಿ!!! ಈ ದಿನ ನನ್ನ ಪಾಲಿಗೆ ಸುದಿನ...ಆಕೆ ಮತ್ತು ನಾನು ೮೯ರಲ್ಲಿ ಜೊತೆಯಾಗಿ ಬಿ ಜಿ ಎಮ್ ಗೆ ಹೋಗುತ್ತಿದ್ದೆವು. ಶೀಲಾ ಜೆ ಜೆ ಆರ್ಟ್ಸ್ನಲ್ಲಿ ಕಮರ್ಷಿಯಲ್ ಆರ್ಟ್ನಲ್ಲಿ ತರಬೇತಿಪಡೆದವಳಿದ್ದಳು...ಜೆ ಜೆ ನನ್ನ ಕನಸಾಗಿತ್ತು...ಹಾಗಾಗಿ ನನಗೆ ಅವಳು ಆದರ್ಶವಾಗಿದ್ದಳು...ಪೇಪರಿನಲ್ಲಿ ಅವಳ ( ನನ್ನ ) ಹೆಸರನ್ನು ನೋಡಿದ ನೆಂಟರಿಂದ ಫೋನ್ ಬಂದ ಕಾರಣ ಯಾರಪ್ಪಾ ತನ್ನ ಹೆಸರಿನವಳು ಚಿತ್ರಗಾರ್ತಿ! ಎಂದು ಕುತೂಹಲದಿಂದ ನೋಡಲು ಬಂದಿದ್ದೇನೆ ಎಂದಳು..ನನ್ನನ್ನು ನೋಡಿ ಆಶ್ಚರ್ಯಪಟ್ಟಳು...ಕುಂಚಗಳ ಜತೆಗಿನ ಸಂಬಂಧ ಕಡಿದಿರುವ ವಿಷಯ ತಿಳಿಸಿ ಚಕಿತಗೊಳಿಸಿದಳು...ಸರಿ ಇನ್ನು ಪೈಂಟಿಂಗ್ ಮುಂದುವರಿಸಲು ಇಚ್ಛೆಯಿರಲಿಲ್ಲ...ಮನೆಗೆ ಬರುವ ಆಶಯ ವ್ಯಕ್ತಪಡಿಸಿದಾಗ ಬಹಳ ಸಂತೋಷದಿಂದ ಕರೆದುಕೊಂಡು ಹೋಗಿ ನನ್ನ ಮಕ್ಕಳ ಪರಿಚಯ ಮಾಡಿಕೊಟ್ಟೆ. ಸರಿ ಇನ್ನು ಮುಂದೆ ಸಂಜೆಯ ಕಾರ್ಯಕ್ರಮ... ೩.೩೦ ಹೊತ್ತಿಗೆ ಹಾಜರಿ ಕೊಟ್ಟೆ. ೩.೪೫ಕ್ಕೆ ಪ್ರಾರಂಭವಾಗಬೇಕಿದ್ದ ಹರಿಕತೆ ಕಾರ್ಯಕ್ರಮ ಕೆಲ ಕಾರಣಗಳಿಂದ ತಡವಾಗಿ ಪ್ರಾರಂಭವಾಯಿತು...ಇನ್ನೂ ಎಳಸಾಗಿದ್ದರೂ ತನ್ನ ಸುಮಧುರ ಕಂಠದಿಂದ ನಯನ ಗೌರಿ ಅಲ್ಲಿ ನೆರೆದಿದ್ದ ವೀಕ್ಷಕರ ಮನಸೆಳೆದಳು. ಆದರೆ ತನ್ನ ಹಾಸ್ಯ ಮಾತುಗಳಿಂದ ಸಂಧ್ಯಾ ಶೆಣೈ ನೆರೆದಿದ್ದವರ ಹೊಟ್ಟೆಹುಣ್ಣಾಗುವಂತೆ ನಗಿಸಿದರು. ಅಂತೂ ವರ್ಣ ವನಿತಾ ಸ್ವಲ ದಿನಗಳ ಕಾಲ ಬಂದವರ ಮನದಲ್ಲಿ ಉಳಿಯುವ ವಿಚಾರದಲ್ಲಿ ಸಂಶಯವಿಲ್ಲ!
Location: ಭಾರತ
Gandhi Park, Gandhinagar, Mangalore, Karnataka, India
13 February, 2012
ವಿನೂತನ ಅನುಭವ- ಗಾಂಧಿ ಪಾರ್ಕಿನಲ್ಲಿ!-1
ಜೀವನವು ಯಾವಾಗ, ಹೇಗೆ, ಎಲ್ಲಿ, ತನ್ನ ತಿರುವು ತೆಗೆದುಕೊಳ್ಳುತ್ತದೆಯೋ ಎಂದು ಯಾರು ತಿಳಿಯರು! ಹೆದರಿದ ಆಮೆಯಂತೆ ಚಿಪ್ಪಿನಲ್ಲಿ ಅಡಗಿದ್ದ ನಾನು ಈಗ ಜಗತ್ತಿಗೆ ತೆರೆದು ನಿಂತಿದ್ದೇನೆ. ಅಥವಾ ಜಗತ್ತೇ ನನಗಾಗಿ ಬಾಗಿಲನು ತೆರೆದಿದೆಯೇ? ಏನೋ ತಿಳಿದಿಲ್ಲ. ಒಂದಂತೂ ನಿಜ..ಬಹಳಷ್ಟು ಬದಲಾವಣೆಗಳನ್ನು ನೋಡಿದ್ದೇನೆ..ನೋಡಲಿರುತ್ತೇನೆ..ಇದಂತೂ ಸ್ಪಷ್ಟವಾಗಿದೆ.
ಕೊನೆಗೂ ಎಲ್ಲವೂ ಕನಸಿನಂತೇ ನಡೆದಿದೆ...ಹಿಂದಿನ ಆದಿತ್ಯವಾರ ಇದೇ ಸಮಯದಲ್ಲಿ ನಾನು ನಮ್ಮ ಗಾಂಧಿ ಪಾರ್ಕಿನಲ್ಲಿ ನಮ್ಮ ವರ್ಣ ವನಿತಾ ಕಾರ್ಯಕ್ರಮದಲ್ಲಿ ವ್ಯಸ್ತಳಾಗಿದ್ದೆ. ಆದರೆ ಇವತ್ತು ನನ್ನ ಬಗ್ಗೆ ಡೆಕ್ಕನ್ ಹೆರಾಲ್ಡನಲ್ಲಿ ಬಂದ ಲೇಖನಕ್ಕೆ ಪ್ರತಿಕ್ರಿಯೆ ಕೊಡುವುದರಲ್ಲಿ ಬಿಸ್ಸಿಯಾಗಿದ್ದೇನೆ. ಹಾಂ! ಈ ಪ್ರತಿಕ್ರಿಯೆ ಬಂದಿದರಲ್ಲೂ ಬಹಳ ಸ್ವಾರಸ್ಯರಕರ ಸಂಗತಿಗಳಿವೆ. ಪ್ರತಿಯೊಬ್ಬರ ಒಳಗಿನ ಮುಖವಾಡಗಳನ್ನು ಕಳಚಿದೆ. ಆದರೆ ಈ ಲೇಖನ ಪ್ರಕಟವಾದ ನಂತರ ಅಂತಲ್ಲ...ಈ ಮೊದಲೇ ಗಣ್ಯ, ಪ್ರೌಢ, ಗಂಭೀರ ವ್ಯಕ್ತಿಗಳೆಂದು ನಾನು ಅಭಿಮಾನದಿಂದ ಸ್ನೇಹ ಬಯಸಿದ ವ್ಯಕ್ತಿಗಳು ತಮ್ಮ ಕೆಲವೊಂದು ನಡವಳಿಕೆಯಿಂದ ನನ್ನನ್ನು ನಿರಾಸೆಗೊಳಿಸಿದ್ದಾರೆ. ಇದೆಲ್ಲಾ ಬರೆಯುವ ಮೊದಲು ನನ್ನ ಮೊದಲ ಕಲಾ ಶಿಬಿರದ ಅನುಭವವನ್ನು ನಾನು ಇಲ್ಲಿ ದಾಖಲಿಸಬೇಕು. ಸಿಹಿ ಕಹಿ ಎರಡರ ಅನುಭವನ್ನು ತಂದಿತು ಈ ಶಿಬಿರ. ಮೊದಲಾಗಿ ಪ್ರಕೃತಿಯ ಮಧ್ಯದಲ್ಲಿ, ಪಕ್ಷಿಗಳ ಕಲರವಗಳ ಮಧ್ಯದಲ್ಲಿ...ತಂಪು ಹುಲ್ಲಿನ ಮೇಲೆ ಕುಳಿತು ಬಿಡಿಸುವ ಅನುಭವವನ್ನು ಜೀವಮಾನದಲ್ಲಿ ಮರೆಯಲಾರೆ...ಅಲ್ಲದೆ ಕಲೆಯ ಬಗ್ಗೆ ಕುತೂಹಲದಿಂದ, ಅಭಿಮಾನದಿಂದ ಇಣುಕಿ ನಾಡಲು ಬಂದ ಕೆಲವೇ ಕಲಾಪ್ರಿಯರೂ ನನ್ನಲ್ಲಿ ಉತ್ಸಾಹ ತುಂಬಿದರು. ಅದರಲ್ಲೂ ಒಬ್ಬ ಪೋರ " ನನಗೆ ಎಲ್ಲಾ ಚಿತ್ರಕಿಂತಲೂ ಈ ಬುದ್ಧ ಬಹಳ ಹಿಡಿಸಿದನು" ಎಂದಾಗ ನನ್ನ ಪ್ರಯತ್ನ ಸಾರ್ಥಕವಾಯಿತೆಂದು ಅನಿಸದೇ ಹೋಯಿತೇ! ಮತ್ತೊಬ್ಬ ಮಹಿಳೆ ನನ್ನ ಬಳಿಯೇ ಕುಳಿತುಕೊಂಡಿದ್ದಳು....ಬಹುಶಃ ಊಟಕ್ಕೂ ಹೋಗದೇ....ಅವಳು ನನ್ನ ಗುರುಗಳಾದ ಬಿ ಜಿ ಮೊಹಮ್ಮದರ ಬಳಿ ಬಹಳ ಕಾಲ ಕಲಿತಿದ್ದಳೆಂದು ಹೇಳಿಕೊಂಡಳು. ಮತ್ತೊಂದು ಚಿಕ್ಕ ಮಗು " ಅಪ್ಪಾ, ನೋಡು...ಅಲ್ಲಿರುವ ಪ್ರತಿಮೆಯನ್ನೇ ಆಕೆ ಬಿಡಿಸುತ್ತಿದ್ದಾರೆ...ನೋಡಪ್ಪಾ." ಎಂದಾಗ ನನ್ನ ಹೃದಯ ತುಂಬಿ ಬಂದಿತು..ಅಲ್ಲಿದ್ದ ಬುದ್ಧನ ಪ್ರತಿಮೆಯನ್ನು ನನ್ನ ಚಿತ್ರಕ್ಕೆ ಹೋಲಿಸುವಷ್ಟೂ ಪ್ರಾಯವಲ್ಲ ಮಗುವಿದು. ಆದರೆ ನಮ್ಮ ಶಿಬಿರದ ೧೨ಮಂದಿ ಕಲಾಕಾರರಲ್ಲಿ ಏಕತೆಯಿರಲಿಲ್ಲ...ನಾನಂತೂ ಇದ್ದುದರಲ್ಲಿ ಹೆಚ್ಚಿನ ಪ್ರಾಯದವಳು ಅಲ್ಲದೆ ಕನಿಷ್ಟ ಅರ್ಹತೆಯುಳ್ಳವಳು. ನನಗಿಂತ ಒಂದೆರಡು ವರುಷ ಚಿಕ್ಕವಳಗಿರುವ ವೀಣಾ ಮತ್ತು ಲಕ್ಷ್ಮಿ ಎಲ್ಲರೊಡನೆ ಒಂದಾಗಿ ಬೆರೆಯುತ್ತಿದ್ದರು... ಅತೀ ಹೆಚ್ಚಿನ ಅರ್ಹತೆಯುಳ್ಳ ವೀಣಾ ತಮ್ಮ ಭೂಮಿ ತೂಕದ ನಡವಳಿಕೆಯಿಂದ ನನ್ನ ಮನವನ್ನು ಗೆದ್ದರು. ಅಲ್ಲಿರುವ ನಮ್ಮ ಚಾವಡಿಯ ಕೆಲ ಪುರುಷರು ಎಲ್ಲಾ ಮಹಿಳೆಯರ ಬಳಿ ಹೋಗಿ ಪ್ರೋತ್ಸಾಹದ ಮಾತುಗಳಿಂದ ಹುರಿದುಂಬಿಸುತ್ತಿದ್ದರು! ಅದ್ಯಾಕೆ ಹೆಣ್ಣು ಮಕ್ಕಳು ತಮಗಿರುವ ಮಾತ್ಸರ್ಯದ ಅಪವಾದ ಹಾಳಬಾರದಂತೆ ನಡಕೊಳ್ಳುತ್ತಾರ್ಯಾಕೋ? ಅಲ್ಲಲ್ಲ ಮಾತ್ಸರ್ಯವಲ್ಲ...ಮತ್ತೇನೋ...ಮಾತನಾಡಲು ಅಷ್ಟೊಂದು ಉತ್ಸಾಹವಿಲ್ಲ...ತಮ್ಮ ಕೆಲಸ ಪೈಂಟಿಂಗ್ ಮಾಡುವುದು..ಹೊರತು ಉಳಿದವರ ಬಳಿ ಮಾತ್ಯಾಕೆ? ಕತೆಯಾಕೆ? ಇನ್ನು ಕೆಲವರು ಎರಡು ದಿನದ ಕೆಲಸವನ್ನು ಒಂದರ್ಧ ಗಂಟೆಯಲ್ಲಿ ಮುಗಿಸಿದರು! ಅಯ್ಯೋ ರಾಮ! ನನಗಂತೂ ಢವಢವ..ನನ್ನ ಕೆಲಸ ಮುಗಿಯದೇ ಮರ್ಯಾದೆ ಹೋದಿತೇ? ಅಥವಾ ಎಲ್ಲಿ ಬಣ್ಣ ಹಾಕುವಾಗ ಹಾಳಾದಿತೋ ಎಂದು. ಕೊನೆಗೂ ನನ್ನ ಚಿತ್ರ ತುಂಬಾ ಅಂತಲ್ಲ..ಆದರೂ ಸರಿಸುಮಾರಾಗಿ ಬಂತು..ಅಂತೂ ಮೊದಲ ಸಲ ಒಂದು ಶಿಬಿರದ ಅನುಭವ ಪಡೆದೆ...
೩ನೇ ಫೆಬ್ರವರಿ , ಶುಕ್ರವಾರ ಸಂಜೆ ವೀಣಾ ಅವರ ದೂರವಾಣಿ...ಎಲ್ಲರೂ ತಮ್ಮ ತಮ್ಮ ಕಲಾಕೃತಿಯನ್ನು ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಂದೊಪ್ಪಿಸಿದ್ದಾರೆ..ನೀನು ಮಾತ್ರ ತಂದಿಲ್ಲವೆಂದು..ಅರೇ....ನನಗೆ ಈ ವಿಷಯವೇ ತಿಳಿದಿರಲಿಲ್ಲವೆಂದಾಗ, ಸರಿ ಮರುದಿನ ಬೆಳಿಗ್ಗೆ ೮ಗಂಟೆಯೊಳಗೆ ತಂದೊಪ್ಪಿಸಬೇಕೆಂದರು. ಅಯ್ಯೋ, ಮೊದಲೇ ಸಿದ್ಧ ಪಡಿಸಿದ್ದ ನನ್ನ ಮರುದಿನ ಬೆಳಿಗ್ಗಿನ ನಕಾಶೆಯಲ್ಲಿ ಈ ಹೊತ್ತಿನಲ್ಲಿ ಬದಲಾವಣೆ!!! ೧ ಗಂಟೆಯ ಹೊಂದಾಣಿಕೆ!!!! ಹಾಗಾದರೆ ಎಷ್ಟು ಹೊತ್ತಿಗೆ ಏನಾಗಬೇಕೆಂಬ ಪ್ಲಾನು ಮತ್ತೊಮ್ಮೆ ತಲೆಯಲ್ಲಿ ಮಥಿಸಲು ಶುರುವಾಯಿತು. ಯಾಕೆಂದರೆ ಆದಿತ್ಯವಾರ ಬೆಳಗಿನ ಉಪಹಾರಕ್ಕೆಂದು ದೋಸೆ ಹಿಟ್ಟುಸಹ ನಾನು ಹೊರಡುವ ಮೊದಲು ಮಧ್ಯಾಹ್ನದ ಊಟದ , ಬೆಳಿಗ್ಗಿನ ಉಪಹಾರದ ತಯಾರಿಯೊಂದಿಗೆ ನಡೆಯ್ಬೇಕು...ಮನೆ ಗುಡಿಸಬೇಕು. ಬಟ್ಟೆ ಸಂಜೆ ಬಂದಮೇಲೆ.....ಯಾಕಪ್ಪಾ ನನಗಿದೆಲ್ಲಾ..ಸುಮ್ಮನೆ ಕಲೆಗಿಲೆ..ನನ್ನಿಂದಾದಿತೇ ಎಂದೂ ಮನಸ್ಸಿಗೆ ಬಂತು...ಆದರೂ ಆದಷ್ಟು ಬೇಗನೆ ಎದ್ದು ಗಡಿಯಾರದೊಂದಿಗೆ ನನ್ನ ಓಟ ಪ್ರಾರಂಭವಾಯಿತು....ನೆನೆದಂತೆ ೮ಕ್ಕೆ ಮನೆಯಿಂದ ಹೊರಬಿದ್ದೆ.... ಮರೆತೇ ಬಿಟ್ಟಿದ್ದೆ...ಬಂದ ಅತಿಥಿಗಳಿಗೆ ಕೊಡಬೇಕೆಂದು ನೆನಪಿನ ಕಾಣಿಕೆ ಕೂಡ ತರಬೇಕೆಂದು ವೀಣಾ ತಿಳಿಸಿದಾಗ ನನ್ನೆದೆ ಜೋರಾಗಿ ಹೊಡೆದು ಕೊಡಲು ಶುರುಮಾಡಿತು. ಹೇ ರಾಮ್ ನನಗ್ಯಾಕೆ ಈ ರೀತಿ ಶಿಕ್ಷೆಯನ್ನು ಕೊಡುವಿಯಾ! ಇನ್ನೂ ಎಷ್ಟು ಪರೀಕ್ಷೆಗಳಿವೆಯೋ..ಅಪ್ಪಾ ಎಲ್ಲವೂ ನಿನ್ನ ಇಚ್ಛೆಯಂತಾಗಲಿ ಎಂದು ವೀಣಾನ ಬಳಿ ನಡುಗುವ ಸ್ವರದಿಂದ ನನಗೆ ಈ ವಿಷಯಗಳೇನು ಹೇಳಿಲ್ಲವೆಂದಾಗ..ಪರವಾಗಿಲ್ಲ..ಹೇಗು ನಾವೆಲ್ಲಾ ಕೊಡುತ್ತೇವಲ್ಲವಾ ಅಂದರು. ಬಚಾವ್ ಆದೆ.
ಸರಿ ಶುಕ್ರವಾರ ರಾತ್ರಿ ಮಲಗಿದವಳಿಗೆ ನಾಳಿನ ಚಿತ್ರ ಬಿಡಿಸುವಿಕೆಗಿಂತಲೂ ಬೆಳಗ್ಗಿನ ಸಮಯದ ಹೊಂದಾಣಿಕೆಯ ಬಗ್ಗೆ ಯೋಚನೆ...ಅಂತೂ ಮಲಗಿದಲ್ಲೇ ಒಂದು ಟೈಮ್ ಟೇಬಲ್ ತಯಾರಾಯಿತು. ಯಾವಾಗಲೂ ರಾತ್ರಿ ಸತ್ತು ಮತ್ತೊಮ್ಮೆ ಬೆಳಗೆ ಜೀವ ಪಡೆಯುವವಳಾದ ನಾನು ಆ ರಾತ್ರಿ ಸಾಯಲೇ ಇಲ್ಲ...ಮಂಪರು ನಿದ್ರೆಯಲ್ಲೇ ಕಳೆದೆ..ಬೆಳಗಿನ ಜಾವ ನಾಲ್ಕಕ್ಕೆ ಅಲರಾಮ್ ನಿಷ್ಠೆಯಿಂದ ಗಲಾಟೆ ಮಾಡುವಾಗ...ಏಳಲೇಬೇಕಲ್ಲವ...ರೆಪ್ಪೆಗಳು ಗಟ್ಟಿಯಾಗಿ ಕಣ್ಣನ್ನು ತಬ್ಬಿ ಕೊಂಡಿದ್ದವು..ಮುಷ್ಕರ ಮಾಡಿಕೊಂಡಿದ್ದವು...ಇನ್ನೊಂದು ಭಾನುವಾರ ೭.೩೦ ತನಕ ನಿಮ್ಮನ್ನು ಅಗಲಿಸುವುದಿಲ್ಲ ಎಂದು ಪ್ರಾಮಿಸ್ ಸಿಕ್ಕಿದ ಮೇಲೆಯೇ ನಾನು ಸೀದಾ ಅಡುಗೆ ಕೋಣೆಗೆ ಹೋಗಲಿಕ್ಕೆ ಬಿಟ್ಟದ್ದು. ಒಂದು ಕಣ್ಣು ಗಡಿಯಾರ ಮೇಲಿಟ್ಟು ಉಡುಪಿ ಎಕ್ಸಪ್ರೆಸ್ಸ್ ಬಸ್ಸಿನಂತೆ ಓಟ ಪ್ರಾರಂಭವಾಯಿತು! ಮಧ್ಯ ಮಧ್ಯ ದಲ್ಲಿ ಸುಸ್ತು...ನನಗೆ ಬೇಡವಿತ್ತಪ್ಪಾ ಈ ಆರ್ಟ್ ಶಿಬಿರ!!! ಅಂತೂ ನನ್ನೆಣಿಕೆಯಂತೆ ಸ್ನಾನಕ್ಕೆ ಹೊರತಾಗ ೭.೪೫..ಈ ದಿನ ಮಕ್ಕಳ ಕೈಯಿಂದ ಬಚಾವ್...ಯಕೆಂದರೆ ಇಬ್ಬರಿಗೂ ಕಾಲೆಜಿ ಹೋಗಬೇಕಿದ್ದ ಕಾರಣ ಹೆಚ್ಚಿನ ತೊಂದರೆ ಇರಲಿಲ್ಲ..ಆದರೂ ನಾಳೆಗೆ ಉಂಟು ಇವರಿಂದ ನನಗೆ ಎಂದು ಕೊಳ್ಳುತ್ತಾ ಮೊದಲೇ ತಯಾಮಾಡಿಕೊಂಡಿದ್ದ ಪೈಂಟಿಂಗ್ಗಳನ್ನು ಪಕ್ಕದ ಮನೆಯವರ ಸಹಾಯದಿಂದ ರಿಕ್ಷಾಗೆ ಹಾಕಿಸಿ ಗಾಂಧಿ ಪಾರ್ಕ್ ತಲುಪಿದೆ.
ಹುಡುಕು
ಅವಕಾಶ,
ಆಧ್ಯಾತ್ಮಿಕ ಅನುಭೂತಿ,
ಕಲೆ,
ಬದಲಾವಣೆ,
ವೀಣಾ ಶ್ರೀನಿವಾಸ್
Location: ಭಾರತ
Mannagudda Rd, Mangalore, Karnataka, India
28 January, 2012
ಒಂದು ಆತ್ಮೀಯ ಕರೆಯೋಲೆ!
ಮಂಗಳೂರಿನ ಜನರಿಗೆ ತಿಂಗಳೊಂದಿನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸುಗ್ಗಿಯೋ ಸುಗ್ಗಿ! ಆಳ್ವರ ವಿರಾಸತ್, ಯುವಜನೋತ್ಸವ, ಬಾಲ ಸ್ರಜನೋತ್ಸವ, ವೀರ ವೆಂಕಟರಮಣನ ಪುನರ್ಪ್ರತಿಷ್ಟೋತ್ಸವ...ಮತ್ತೆ ಈಗ ವರ್ಣ ವನಿತ- ಎರಡು ದಿನಗಳ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮ! ದಯವಿಟ್ಟು ನೀವು ನಿಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಮಣ್ಣಗುಡ್ಡೆಯ ಇತ್ತೀಚಿಗೆ ನವೀಕರಿಸಿದ ಗಾಂಧಿ ಪಾರ್ಕಿಗೆ ಬಂದು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಮಹಿಳೆಯರಿಗೆ ಪ್ರೋತ್ಸಾಹ ಕೊಡಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ಕಾರ್ಯಕ್ರಮಗಳ ವಿವರ:-
ಮಹಿಳಾ ಉದ್ಯಮಿ ವನಿತಾ ಜಿ ಪೈಯವರು ಫ಼ೆಬವರಿ ೩ ಶನಿವಾರದಂದು ಉದ್ಘಾಟನೆ ಮಾಡಲಿದ್ದಾರೆ. ಸಬ್ ಇನ್ಸ್ಪೆಕ್ಟರ್ ಭಾರತಿ, ಉಪ ಮೇಯರ್ ಗೀತಾ ನಾಯಕ್, ವಿದ್ಯಾ ದಿನಕರ್ ಇವರೆಲ್ಲಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫ಼ೆಬ್ರವರಿ ೫ರಂದು ಆದಿತ್ಯವಾರ ಮಧ್ಯಾಹ್ನ ೩ರಿಂದ ೩.೪೫ರ ವರೆಗೆ ನಯನಗೌರಿ ಹರಿಕತೆ ನಡೆಸಿಕೊಡಲಿದ್ದಾರೆ. ಪ್ರಸಿದ್ಧ ಹಾಸ್ಯ ಬರಹಗಾರ್ತಿ ಭವನೇಶ್ವರಿ ದೇವಿ "ನಗು ಸೊಬಗು" ಎಂಬ ಹಾಸ್ಯ ಕಾರ್ಯಕ್ರಮವನ್ನು ೪ರಿಂದ ೪.೪೫ರ ವರೆಗೆ ನಡೆಸಿ ಕೊಡುವರು. ಎಮ್ ಆರ್ ಪಿ ಎಲ್ನ ಡಿಜಿಎಮ್ ಲಕ್ಷಿ ಕುಮಾರನ್ ಕಾರ್ಯಕ್ರಮ ಮುಕ್ತಾಯದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬರಹಗಾರ್ತಿ ಚಂದ್ರಕಲಾ ನಂದಾವರ್, ಸಾಹಿತಿಗಳಾದ ಪರಮೇಶಿ ಲೋಕೇಶ್ವರ್, ಕೊಡಿಬೆಟ್ಟು ರಾಜಲಕ್ಷ್ಮಿ, ಮತ್ತು ಕಲಾವಿದೆ ಶಶಿ ವಿ ಶೆಟ್ಟಿಯವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಚಿತ್ರ ಕಲಾವಿದರಾಗಿ ಸ್ಥಳದಲ್ಲಿಯೇ ಚಿತ್ರ ಬಿಡಿಸಿ ತಮ್ಮ ಪ್ರತಿಭೆ ತೋರಲು ಚಿತ್ರಕಲಾ ಚಾವಡಿಯ ಸದಸ್ಯರಾದ ವೀಣಾ ಶ್ರೀನಿವಾಸ್, ಸಪ್ನಾ ನೊರೊಹ್ನ, ಆಶಾ ಶೆಟ್ಟಿ, ಸುಧಾ ನಾಯಕ್, ರೆಶ್ಮಾ ಶೆಟ್ಟಿ, ವಿದ್ಯಾ ಕಾಮತ್, ವೀಣಾ ಮಧುಸೂಧನ್, ರೇಣುಕಾ, ಲಕ್ಷ್ಮಿ ಬಿಜಿಲಿ, ನಿಶಾ ಬಂಗೆರ ಮತ್ತು ಶೀಲಾ ನಾಯಕ್ ಬರುವರು. ದಯವಿಟ್ಟು ತಾವೆಲ್ಲರೂ ಕುಟುಂಬ ಮತ್ತು ಮಿತ್ರ ಬಾಂಧವರೊಂದಿಗೆ ಹೆಚ್ಚಿನ ಸಂಖೆಯಲ್ಲಿ ಬಂದು ಕಲಾವಿದರಿಗೆ ಪ್ರೋತ್ಸಾಹ ಕೊಡಬೇಕೆಂದು ನಮ್ರತೆಯಿಂದ ವಿನಂತಿಸಿ ಕೊಳ್ಳುತ್ತೇನೆ.
ಹುಡುಕು
ಅವಕಾಶ,
ಕರೆಯೋಲೆ,
ಕಲೆ,
ಗಾಂಧಿ ಪಾರ್ಕ್,
ಸಾಂಸ್ಕೃತಿಕ ಪ್ರದರ್ಶನ
Location: ಭಾರತ
Matadakani Rd, Gandhinagar, Mangalore, Karnataka, India
28 December, 2011
ಕಲಾ ಜೀವನದಲ್ಲೊಂದು ತಿರುವು! ಹೊಸ ಬೆಳಕು, ಹೊಸ ಹುರುಪು!
೧೯೮೯ರಲ್ಲಿ ಬಿ. ಜಿ. ಎಮ್ನಲ್ಲಿ ಜೂನ್ ತಿಂಗಳಲ್ಲಿ ನನ್ನ ಚಿಕ್ಕಮ್ಮನ ಮೂಲಕ ಸೇರ್ಪಡೆಗೊಂಡಾಗ ನನ್ನ ಬದುಕು ಈಗ ನಿಜವಾಗಿ ಪ್ರಾರಂಭಗೊಂಡಿತೆಂದೆನಿಸಿತ್ತು. ಬೆಳಿಗ್ಗೆ ಸಾಧಾರಣ ೯.೩೦ಕ್ಕೆ ಚಿತ್ರ ಮಾಡಲು ಕುಳಿತರೆ ನನಗೆ ಮನೆಗೆ ತಿರುಗಿ ಹೋಗಲು ಮನಸ್ಸು ಬರುತ್ತಿರಲಿಲ್ಲ...ಆಗ ನನಗೆ ನನ್ನೊಳಗೆ ಕಲಾದಾಹ ಎಷ್ಟಿದೆಯೆಂಬುದು ಅರಿವಿಗೆ ಬಂತು. ಅದಕ್ಕಿಂತ ಮುಂಚೆ ನನ್ನಷ್ಟಕ್ಕೆ ಚಿತ್ರಗಳನ್ನು ಬಿಡಿಸುತ್ತಿದ್ದೆನಾದರೂ ನಿಯಮಗಳ ಅರಿವಿರಲಿಲ್ಲ..ಚಿತ್ರ ಪರಿಕರಣೆಗಳ ಬಗ್ಗೆ ಏನೂ ಪ್ರಾಥಮಿಕ ಜ್ಞಾನವಿರಲಿಲ್ಲ..ಆದರೂ ಬಚ್ಚಲು ಗೋಡೆಗಳ ಮೇಲೆ ಆಗಿನ ಡಿಸ್ನಿ ವರ್ಲ್ಡ್ನ ಎಲ್ಲಾ ಕಾರ್ಟೂನ್ಗಳು ಸುಣ್ಣದಲ್ಲಿ ರರಾಜಿಸುತ್ತಿದ್ದವು. ಅವುಗಳು ಚೆನ್ನಾಗಿರುತ್ತಿದ್ದವೂ ಕೂಡಾ. ಆದರೂ ಮನೆಯಲ್ಲಿ ನನಗೆ ಎಂದೂ ಪ್ರೋತ್ಸಾಹದ ಮಾತುಗಳು ಬಂದಿರಲಿಲ್ಲ. ಇದರಿಂದಲೋ ಏನೋ ನಾನು ಇಂದಿಗೂ ಸಹ ಪ್ರೋತ್ಸಾಹದ ಮಾತುಗಳ ನಿರೀಕ್ಷೆ ಮಾಡುವುದಿಲ್ಲ. ಸರಿ, ಬಿ. ಜಿ.ಮೊಹಮ್ಮದರ ಕೈಕೆಳಗೆ ನನ್ನ ತರಬೇತಿ ಪ್ರಾರಂಭವಾಯಿತು...ಬೇಸಿಕ್ ತಂತ್ರಗಳನ್ನು ಬಲು ಬೇಗ ದಾಟಿ, ಇದ್ದಿಲಿನ (ಚಾರ್ಕೋಲ್) ಮೂಲಕ ಬಿಡಿಸಲು ಕಲಿಕೆ ಪ್ರರಂಭವಾದ ದಿನದಿಂದ ನನ್ನ ಕನಸುಗಳಿಗೆ ರೆಕ್ಕೆಗಳು ಮೂಡಲು ಪ್ರಾರಂಭವಾಯಿತು. ಜೆ ಜೆ ಆರ್ಟ್ ಸ್ಕೂಲ್ನಲ್ಲಿ ಕಲಿಯುವ ನನ್ನ ಮಹತ್ವಾಕಾಂಕ್ಷೆಗೆ ಇಂಬು ನೀಡುವಂತೆ ಗುರುಗಳ ಮೆಚ್ಚುಗೆ, ನನ್ನ ಸಹಪಾಠಿಗಳ ಪ್ರೋತ್ಸಾಹದ ಮಾತುಗಳು ಕೇಳಿಬಂದವು. ನಾನು ಮೂರು ತಿಂಗಳಲ್ಲೇ ನನ್ನೆಣಿಕೆಗೆ ಮೀರಿ ಬೆಳೆದೆ...ಚಿತ್ರ ಕಲೆಯಲ್ಲಿ ಮೇಲಿಂದ ಮೇಲೆ ಪದೋನ್ನತಿ ಸಿಕ್ಕಿತು...ಅಲ್ಲಿಗೆ ಬರುತ್ತಿದ್ದ ಅನೇಕರಿಗೆ ಆಶ್ಚರ್ಯ! ಆದರೆ ಇದು ಸಾಧ್ಯವಾದದ್ದು ನನ್ನೊಳಗಿನ ಕಲಾವಿದೆಯ ಹಠ ಮತ್ತು ನಿರಂತರ ಪ್ರಯತ್ನದಿಂದ. ಮನೆಯಲ್ಲಿ ಮದುವೆಯ ಮಾತು ಕತೆ ನಡೆಯುತಿತ್ತು...ನನ್ನ ಕಲಿಕೆಯು ಪೂರ್ಣವಾಗುವುದೇ, ನನ್ನ ಪತಿ ಮತ್ತು ಅವನ ಮನೆಯವರು ನನಗೆ ಮುಂದೆ ಕಲಿಯಲು ಅನುಕೂಲ ಮಾಡಿಕೊಡುವರೇ, ಇದೆಲ್ಲಾ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿರಲಿಲ್ಲ...ಬಹುಶಃ ಕಲಾ ಜೀವನದ ಹಾದಿ ಹಿಡಿದ ನಾನು ಇನ್ನೆಂದೂ ಹಿಂದೆ ತಿರುಗಿ ಬರುವುದಿಲ್ಲ..ಅದೇ ದಾರಿಯಲ್ಲಿ ನಡೆದು ಮುಂದೊಂದು ದಿನ ದೇಶದ ಅತ್ಯುನ್ನತ ಕಲಾವಿದರಲ್ಲಿ ಒಬ್ಬಳಾಗುವೆ ಎಂಬ ವಿಶ್ವಾಸವಿತ್ತು ನನ್ನಲ್ಲಿ. ಬೇಗನೇ ಕಪ್ಪು ಬಿಳಿ ಜಲ ಚಿತ್ರ..ಅಲ್ಲಿಂದ ಜಲ ವರ್ಣ....ಅದರಲ್ಲಿಯೂ ನಾನೊಂದು ಬಿಡಿಸಿದ ಸ್ಟಿಲ್ ಲೈಫ಼್ ಚಿತ್ರ- ಹಸಿರು ಬಣ್ಣದ ಗಾಜಿನ ಬಾಟ್ಲಿ ಮತ್ತು ಅದರ ಜೊತೆ ಹಣ್ಣುಗಳು ಬಹಳ ಸುಂದರವಾಗಿ ಮೂಡಿ ಬಂದಿತ್ತು.( ಈ ಚಿತ್ರ ಮದುವೆಯಾದ ಹೊಸತರಲ್ಲಿ ನನ್ನ ಓರಗಿತ್ತಿ ತನಗೆ ಬೇಕೆಂದು ತೆಗೆದುಕೊಂಡು ಹೋಗಿದ್ದಳು...ಅದು ಈವಾಗ ಅವಳ ಬಳಿ ಸಹ ಇಲ್ಲ.) ಒಂದು ದಿನ ಮಾಸ್ಟ್ರು ತೈಲ ವರ್ಣಗಳಿಗೆ ಬೇಕಾದ ಸಲಕರಣೆಗಳನ್ನು ತರಲು ಹೇಳಿದಾಗ ಆನಂದ ಆಶ್ಚರ್ಯ ಉಂಟಾಯಿತು. ಇವುಗಳ ಮಧ್ಯೆ ಗುರುಗಳ ಪತ್ನಿಯವರಿಂದ ಎರಡು ತಗಡಿನ ಮೇಲೆ ಉಬ್ಬು ಚಿತ್ರ ಬಿಡಿಸುವುದನ್ನು ಸಹ ಕಲಿತೆ. ಮಾರ್ಚ್ ತಿಂಗಳ ಮೊದಲವಾರ ಅದು.... ನನ್ನ ತಾಯಿಯವರು ಹುಡುಗ ಮತ್ತು ಮನೆಯವರು ನೋಡಲು ಬರುವ ವಿಷಯ ತಿಳಿಸಿದರು. ಮುಂದೆ ಎಲ್ಲವೂ ಬೇಗ ಬೇಗನೇ ನಡೆಯಿತು...೧೫ನೇ ತಾರೀಕು ನಿಶ್ಚಯ ತಾಂಬೂಲ...೨೪ ಜೂನ್ರಂದು ಮದುವೆಯೂ ಆಯಿತು. ಅದರ ಜೊತೆ ನನ್ನ ಕನಸಿನ ಸೌಧವೂ ಕುಸಿಯುತು. ಮೊದಮೊದಲು ಸಿಡುಕುತಿದ್ದ ನಾನು ಜೀವನದೊಂದಿಗೆ ಬಲು ಬೇಗ ರಾಜಿ ಮಾಡಿಕೊಂಡು ಬಿಟ್ಟೆ...ಮಕ್ಕಳಿಗಾಗಿ ಹೊಸ ಕನಸ ನೇಯುವುದು ಪ್ರಾರಂಭವಾಯಿತು! ನನ್ನ ಕನಸಿನಂತೆ ನನ್ನ ಮಗ ಮಗಳು ಇಬ್ಬರೂ ಚಿತ್ರ ಬಿಡಿಸುವುದರಲ್ಲಿ ನುರಿತರಾದರು. ಇಷ್ಟೆಲ್ಲ ನನ್ನೊಳಗಿನ ಕಲಾವಿದೆಯ ಧ್ವನಿ ಇನ್ನೂ ಕ್ಷೀಣವಾಗಿ ಮೊರೆಯಿಡುತಿತ್ತು....ಹೃದಯವು ಕೂಗುತಿತ್ತು. ಮುಂದೆಂದೂ ಕುಂಚವನ್ನು ಕೈಗೆತ್ತುವ ಆಸೆಯನ್ನೇ ಬಿಟ್ಟಿದ್ದೆ. ಆದರೆ ೨೦೦೭ರಲ್ಲಿ ನನ್ನ ಜೀವನದಲ್ಲಿ ಮತ್ತಿನ್ನೊಮ್ಮೆ ಬೆಳಕಿನ ಕಿರಣಗಳು ಕಾಣಹತ್ತಿದವು. ಬರಡಾದ ಬೆಂಗಾಡಿನಲ್ಲಿ ವೃಕ್ಷಗಳ ಮೇಲೆ ಮತ್ತೆ ಹಸಿರೆಲೆ ಕಾಣಿಸಿಕೊಂಡವು. ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಮನೆ ಪಾಠ ಪ್ರಾರಂಭಿಸಿದೆ...ನಿಧಾನವಾಗಿ ಮಕ್ಕಳ ಸಂಖ್ಯೆ ಹೆಚ್ಚಾಯಿತು..ಕೈಯಲ್ಲಿ ಬಂದ ಕಾಸು ಆತ್ಮವಿಶ್ವಾಸವನ್ನೂ ತಂದಿತು. ಬಂದ ಮಕ್ಕಳಲ್ಲಿ ಕೆಲವರಿಂದ ಚಿತ್ರ ಕಲಿಸಿ ಎಂಬ ಬೇಡಿಕೆಯೂ ಬಂತು...ಇಲ್ಲಿಯೂ ಒಳ್ಳೆಯ ಬೆಳವಣಿಗೆ ಕಾಣ ಬಂತು..
ಅಂತೂ ೨೦೧೦ರಲ್ಲಿ ಮತ್ತಿನ್ನಷ್ಟು ಬೆಳವಣಿಗೆ ಜೀವನದ ನಡೆಯನ್ನೂ, ಅರ್ಥವನ್ನೂ ಬದಲಾಯಿಸಿತು. ಸಂಬಂಧಗಳ ವ್ಯಾಖ್ಯಾನವನ್ನೆ ಬುಡಮೇಲು ಮಾಡಿತು! ನಾ ಆರಾಧಿಸುತ್ತಿದ್ದ ಆ ಅದೃಶ್ಯ ಶಕ್ತಿ, ಮಾಟಗಾರ ತನ್ನ ಕಣ್ಕಟ್ಟನ್ನು ತೋರಿಸಿದ. ನನ್ನ ನಂಬಿಕೆ ನಿಜವೆಂದು ನಿರೂಪಿಸಿ ತೋರಿದ ಕಪಟನಾಟಕ ಸೂತ್ರಧಾರಿ! ತಾಳ್ಮೆಯಿಂದ ಅವನ ಪರೀಕ್ಷೆಗಳನ್ನು ಎದುರಿಸಿದ ನಾನು ಅದರ ಫಲವನ್ನು ಪಡೆದೆ. ಅದೊಂದು ದಿನ ನನ್ನ ಜೀವನವೆಂಬ ನೌಕೆಯು ಬೀಸಿದ ಬಿರುಗಾಳಿಗೆ ಸಿಕ್ಕಿ ಹೊಯ್ದಾಡುತ್ತಿದ್ದಾಗ ಜೀವ ಕಳೆಯಲು ಹೊರಟಿದ್ದ ನನ್ನನ್ನು ನನ್ನೊಳಗಿನ ಹೋರಾಟಗಾರ್ತಿಯೇ ತಡೆದು ನಿಲ್ಲಿಸಿದ್ದಳು! ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟಾಗಲೂ ಕಹಿಯನ್ನೇ ಉಣಬಡಿಸಿದ ವಿಧಿಯು, ಕಣ್ಣಿನ ನೋಡುವ ಶಕ್ತಿಗೆ ಹಾನಿಯುಂಟು ಮಾಡಿತ್ತು. ಇವೆಲ್ಲಾ ನನ್ನ ಪಾಪ ಕರ್ಮಗಳ ಫಲವೆಂದು ದಿನ ಕಳೆದಂತೆ ಅರ್ಥಮಾಡಿಕೊಂಡ ನಾನು ಮತ್ತ್ಯಾವುದೇ ಒಳ್ಳೆಯದರ ನಿರೀಕ್ಷೆಯಲ್ಲಿರಲಿಲ್ಲ! ಆದರೂ ಬಹುಶಃ ನನ್ನ ತಪಸ್ಸು ಅವನ ಮನಸನ್ನು ತಟ್ಟಿರಬೇಕು! ಅನಿತಾಳನ್ನು ನನ್ನ ಬಳಿ ಕಳುಹಿಸಿದ. ಬಹುಶಃ ಅನಿತಾಳು ಇಂದಿಗೂ ವಿಸ್ಮಿತಳಾಗುತ್ತಿದ್ದಿರಬಹುದು. ಅದ್ಯಾಕೆ ನಾನು ಇವಳನ್ನು (ನನ್ನನ್ನು) ಆಯ್ಕೆ ಮಾಡಿದೆಯೆಂದು! ಜಗನ್ನಾಥನ ಲೀಲೆಯನ್ನು ಅರಿತವರಾರು? ಅನಿತಾಳ ಬೇಡಿಕೆಯಂತೆ ಮಾಡಿದ ೬ ಹೂಗೊಂಚಲುಗಳ ಜಲವರ್ಣ ಇನ್ನೂ ಕೈಗಳಲ್ಲಿ ಶಕ್ತಿಯಿದೆ ಎಂಬುದನ್ನು ನಿರೂಪಿಸಿತು. ನಿಧಾನವಾಗಿ ಬಂದ , ಬೇಡಿಕೆಯಂತೆ ಮಾಡಿಕೊಟ್ಟ ಮತ್ತೆರಡು ಚಿತ್ರಗಳ ಕೆಲಸವು ಮತ್ತಿಷ್ಟು ಹರುಪು ತುಂಬಿತು ವಿನಾ ಇನ್ಯಾವುದೇ ನಿರೀಕ್ಷೆಯನ್ನು ತರಲಿಲ್ಲ. ಆದರೆ ವೀಣಾ ಶ್ರೀನಿವಾಸ್ ಅವರ ಕಲಾಪ್ರದರ್ಶನ ನನ್ನ ಜೀವನದಲ್ಲಿ ಹೊಸ ತಿರುವುವನ್ನು ಪಡೆಯುವುದು ಎಂದೂ ಅನಿಸಿರಲಿಲ್ಲ. ನನ್ನನ್ನು ಕಲಾವಿದರ ಚಾವಡಿಯ ಸದಸ್ಯಳಾಗಿ ಮಾಡಿಕೊಂಡಾಗಲೂ ನಾನು ಅವರಂತಹ ನುರಿತ ಕಲಾವಿದರ ಮಧ್ಯೆ ಗುರುತಿಸಿಕೊಳ್ಳುವಷ್ಟು ಯೋಗ್ಯತೆ ಪಡೆದಿಲ್ಲವೆಂದೂ ಸ್ಪಷ್ಟವಾಗಿ ತಿಳಿಸಿದ್ದೆ. ಆದರೆ ಆ ಗತಿಯಲ್ಲಿ ಸಾಗಬೇಕೆಂಬ ಬಲು ಆಸೆಯಿದೆ...ಅದಕ್ಕಾಗಿ ಮಾರ್ಗದರ್ಶನ ನೀಡಬೇಕೆಂದು ಕೋರಿದ್ದೆ. ಆದರೆ ಅದು ಇಷ್ಟು ಬೇಗನೆ ಸಿಗುವುದೆಂದು ಕನಸು ಮನಸಿನಲ್ಲಿ ಎಣಿಸರಿರಲಿಲ್ಲ. ೧೮ನೇ ಡಿಸೆಂಬರ್ನಲ್ಲಿ ನಡೆದ ಕಲಾಮೇಳದಲ್ಲಿ ಪ್ರಸಿದ್ಧ ಕಲಾವಿದರ ಕೃತಿಗಳ ಜೊತೆ ನನ್ನ ಚಿತ್ರ ಪ್ರದರ್ಶನ ನಡೆಯಿತು. ನನ್ನ ಸೌಭಾಗ್ಯವೇ ಸರಿ. ಜೊತೆಗೆ ಅನೇಕ ಕಲಾವಿದರ ಒಡನಾಟದ ಭಾಗ್ಯವೂ ಪಡೆದೆ. ನನ್ನ ಜೀವನದ ಸುದಿನವದು.
ಇಷ್ಟೇ ಅಲ್ಲ..ಈಗ ಇನ್ನೊಂದು ಸುವರ್ಣಾವಕಾಶ ಬಾಗಿಲನ್ನು ತಟ್ಟಿದೆ. ಫೆಬ್ರವರಿ ೫ರಂದು ಮಹಿಳೆಯರು ಪ್ರದರ್ಶಿಸುವ "ವರ್ಣ ವನಿತೆ" ಎಂಬ ಮಹಿಳೆಯರು ಮಾತ್ರ ನಡೆಸುವ ಶಿಬಿರದಲ್ಲಿ ಚಿತ್ರ ಬಿಡಿಸುದಕ್ಕೆ ೧೭ ಮಹಿಳೆಯರಲ್ಲಿ ಒಬ್ಬಳಾಗಿ ಆಯ್ಕೆಯಾಗಿದ್ದೇನೆ. ಅನನುಭವಿಯಾದ ನನಗೆ ನನ್ನ ಗೆಳೆಯ, ಒಡೆಯನಾದ ಶ್ರೀರಾಮನು ಹನುಮನೊಂದಿಗೆ ಸಹಾಯ ಮಾಡುವನು ಎಂದು ನಂಬುತ್ತೇನೆ. ನನ್ನ ಓದುಗರ ಪ್ರೋತ್ಸಾಹದ ಮಾತುಗಳು ಶ್ರೀರಕ್ಷೆಯನ್ನು ನೀಡುವುದು!
ಹುಡುಕು
ಅವಕಾಶ,
ಆಧ್ಯಾತ್ಮಿಕ ಅನುಭೂತಿ,
ಕಲೆ,
ಚಿತ್ರ,
ಪ್ರಸಾದ್ ಆರ್ಟ್ ಗ್ಯಾಲರಿ
Subscribe to:
Posts (Atom)






