ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ಅಡುಗೆ. Show all posts
Showing posts with label ಅಡುಗೆ. Show all posts
27 July, 2015
28 November, 2012
ವಲ್ವಲ್(ಅಡುಗೆ)
ತೆಂಗಿನಕಾಯಿಯ ರಸದಿಂದ ಮಾಡುವ ಈ ಪದಾರ್ಥ ಹೆಚ್ಚು ಖಾರವಿರುವುದಿಲ್ಲ. ಬಹಳಷ್ಟು ತರಕಾರಿಗಳನ್ನು ಬಳಸುವುದರಿಂದಲೂ, ತುಪ್ಪದಲ್ಲಿ ಜೀರಿಗೆ ಮತ್ತು ಸಾಸಿವೆ ಒಗ್ಗರಣೆ ಕೊಡುವುದರಿಂದಲೂ ಆರೋಗ್ಯಕ್ಕೂ ಒಳ್ಳೆಯದು. ಕೆಲವರಿಗೆ ತೆಂಗಿನಕಾಯಿಯ ಹಾಲಿನಿಂದ ಸ್ವಲ್ಪ ಅಮಲು ಬರುವುದೆಂದು ಕೇಳಿದ್ದೇನೆ. ನನಗೂ ನನ್ನ ಮಕ್ಕಳಿಗೂ ಆ ಅನುಭವ ಸಿಕ್ಕಿಲ್ಲ.
ಸಾಮಾಗ್ರಿಗಳು
ತೆಂಗಿನಕಾಯಿ-೧
ತರಕಾರಿ- ಕುಂಬಳ ಕಾಯಿ, ಚೀನಿಕಾಯಿ, ಅಲಸಂಡೆ, ಗೆಣಸು...ಇತ್ಯಾದಿ
ಹಸಿರು ಮೆಣಸಿನಕಾಯಿ- ೩,೪
ಅಲಂಕಾರಕ್ಕೆ ಮತ್ತು ರುಚಿಗೆ- ದ್ರಾಕ್ಷೆ ಮತ್ತು ಗೇರು ಬೀಜ
ಕರಿಬೇವು- ೬,೭ ಎಲೆ
ಜೀರಿಗೆ- ೧/೨ ಚಮಚ
ತುಪ್ಪ- ೨ಚಮಚ
ತೆಂಗಿನಕಾಯಿ ತುರಿದು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿ ಹಾಲನ್ನು ಹಿಂಡಿ ತೆಗೆಯಿರಿ. ಈ ದಪ್ಪ ಹಾಲನ್ನು ದೊಡ್ಡ ಪಾತ್ರೆಯಲ್ಲಿ ಹಾಕಿರಿ. ಈಗ ಮತ್ತೊಮ್ಮೆ ಪಾತ್ರೆಗೆ ನೀರನ್ನು ಹಾಕಿ ಬಟ್ಟೆಯಲ್ಲಿದ್ದ ರುಬ್ಬಿದ ತೆಂಗಿನ ತುರಿಯನ್ನು ಮತ್ತೊಮ್ಮೆ ಅದ್ದಿ ಹಿಂಡಿರಿ. ಆ ತೆಳು ನೀರನ್ನು ಹಾಗೆ ಕಾದಿರಿಸಿ.
ತರಕಾರಿಗಳನೆಲ್ಲ ಉಪ್ಪುನೀರಿನಲ್ಲಿ ತೊಳೆದು ಸ್ವಚ್ಛ ಮಾಡಿ ದೊಡ್ಡ ದೊಡ್ಡ ಹೋಳುಗಳನ್ನಾಗಿ ತುಂಡು ಮಾಡಿ ಕುಕ್ಕರಿನಲ್ಲಿ ಬೇಯಿಸಿ. ಈ ಹೋಳುಗಳನ್ನು ದಪ್ಪ ತೆಂಗಿನ ಕಾಯಿಯ ಹಾಲಿನಲ್ಲಿ ಹಾಕಿ ಕುದಿಯಲು ಗ್ಯಾಸಿನ ಮೇಲೆ ಇಡಿರಿ. ಹಸಿರು ಮೆಣಸಿನಕಾಯಿಯನ್ನು ಅಡ್ಡ ಸೀಳಿ ಅದರಲ್ಲಿ ಸೇರಿಸಿ. ರುಚಿಗೆ ತಕ್ಕಷ್ಟು ತಕ್ಕಷ್ಟೇ ಉಪ್ಪು, ಸಕ್ಕರೆ ಹಾಕಿ. ತೆಳ್ಳನೆಯ ಹಾಲಿಗೆ ಕೋರ್ನ್ ಫೋರ್ಲ್ ಅಥವಾ ಮೈದಾ ( ೪ ಚಮಚ) ಹಾಕಿ ಚೆನ್ನಾಗಿ ಗುಳಿ ಬರದ ಹಾಗೆ ಕಲಸಿ. ನಂತರ ಇದನ್ನು ಕುದಿ ಬರುತ್ತಿರುವ ಪದಾರ್ಥಕ್ಕೆ ಸೇರಿಸಿ. ದಪ್ಪವಾಗಿ ಬರುತ್ತಿದ್ದ ಹಾಗೆ ಗ್ಯಾಸನ್ನು ಆಫ್ ಮಾಡಿ. ಗೇರುಬೀಜ ಮತ್ತು ದ್ರಾಕ್ಷೆ ಹಣ್ಣನ್ನು ಸೇರಿಸಿ. ಈಗ ಸಣ್ಣ ಕಾವಲಿಯಲ್ಲಿ ತುಪ್ಪ ಬಿಸಿ ಮಾಡಲು ಇಡಿರಿ. ಸಾಸಿವೆ ಹಾಕಿ. ಅದು ಸಿಡಿಯುತ್ತಿರುವಾಗ ಜೀರಿಗೆ, ಕರಿಬೇವು ಸೇರಿಸಿ. ಸೌಟಿನಿಂದ ಒಮ್ಮೆ ಆಚೆ ಈಚೆ ಮಾಡಿ ಒಗ್ಗರಣೆಯನ್ನು ಪದಾರ್ಥಕ್ಕೆ ಹಾಕಿ ಬಿಡಿ.
23 November, 2012
ಕುಂಬಳ ಕಾಯಿಯ ಹಲ್ವ( ಕಾಶಿ ಹಲ್ವ)
ಸೆಮಿಸ್ಟರ್ ಪರೀಕ್ಷೆಯ ತಯಾರಿಗಾಗಿ ಮಗ ಮನೆಗೆ ಬಂದಿದ್ದಾನೆ. ಅವನಿಲ್ಲದಿದ್ದಾಗ ಸ್ಪೆಷಲ್ ತಿಂಡಿ ಮಾಡಲು ಮನಸ್ಸಿರುವುದೇ ಇಲ್ಲ. ಮೊನ್ನೆ ದೀಪಾವಳಿಗೂ ಅವನಿರಲಿಲ್ಲ. ಈಗ ಏನಾದರೂ ಮಾಡಿ ಕೊಡಬೇಕೆಂದು ೩,೪ ದಿನದಿಂದ ಯೋಚನೆ ಮಾಡುತ್ತಿದ್ದೆ...ಆದರೆ ಏನು ಮಾಡಲಿ, ಕಾಲೇಜು, ಮನೆಪಾಠ, ಮನೆ ಕೆಲಸ ಇವುಗಳ ಮಧ್ಯೆ ಬಿಡುವು ಇಲ್ಲ.. ದಿನವಿಡೀ ದುಡಿತದಿಂದ ಆಯಾಸನೂ ಆಗುತ್ತದೆ.. ಹುಡುಗ ಇನ್ನೊಂದು ವರ್ಷ ಕೆಲಸಕ್ಕೆ ಅಂತ ಪರಊರಿಗೆ ಹೋಗುತ್ತಾನೆ..ಹಾಗಾಗಿ ನನ್ನೆಲ್ಲ ನೆವನಗಳನ್ನು ಬದಿಗಿಟ್ಟು ಏನಾದರೂ ಮಾಡಬೇಕೆಂದು ನಿನ್ನೆ ನಿರ್ಧರಿಸಿದೆ. ಕಾಲೇಜಿನಿಂದ ಬರುತ್ತಿರುವಾಗ ಮಾರ್ಗದ ಬದಿಯಲ್ಲಿ ಬೂದುಗುಂಬಳ ಕಾಯಿ ಮಾರಾಟಕ್ಕೆ ಇಟ್ಟುದನ್ನು ನೋಡಿ ಕೊಂಡೆ. ಇವತ್ತು ಅದರ ಸಾಂಬಾರ್ ಮಾಡಿದೆ.... ಹಾಗೆ ಹಲ್ವನೂ ಮಾಡಿದೆ.
ಸಾಮಾಗ್ರಿಗಳು
೧/೨ ಕಿಲೊ ಕುಂಬಳ ಕಾಯಿ ಕಾಯಿ
೨ ಕಪ್ ಸಕ್ಕರೆ
೧ ಕಪ್ ತುಪ್ಪ
೧/೨ ಚಮಚ ಕೇಸರಿ
೪,೫ ಏಲಕ್ಕಿ
೮,೧೦ ಒಣಗಿದ ದ್ರಾಕ್ಷೆ ಹಣ್ಣು
೮,೧೦ ಗೇರುಬೀಜದ ತುಂಡುಗಳು
ಮೊದಲು ಕುಂಬಳ ಕಾಯಿಯ ಸಿಪ್ಪೆಯನ್ನು ತೆಗೆದುಬೀಜ, ತಿರುಳನ್ನು ಬೇರ್ಪಡಿಸಿ, ಸಣ್ಣ ಸಣ್ಣ ಹೋಳಾಗಿ ತುಂಡು ಮಾಡಿ ಇಡಿ. ನಂತರ ತುರಿಯುವ ಮಣೆಯಲ್ಲಿ ತುರಿಯಿರಿ. ಹೀಗೆ ತುರಿದು ಮುಗಿಸಿದಾಗ ಕುಂಬಳಕಾಯಿ ಬಹಳಷ್ಟು ನೀರು ಬಿಡುತ್ತದೆ. ಸ್ವಲ್ಪ ಹಿಂಡಿ ತೆಗೆದು ಪ್ರೆಶರ್ ಕುಕ್ಕರಿನಲ್ಲಿ ಒಂದು ೫ ನಿಮಿಷ ಬೇಯಿಸಿ. ಅದು ಬೇಯುತ್ತಿರುವಾಗಲೇ ಅರ್ಧ ಕಪ್ ನೀರಿನಲ್ಲಿ ಸಕ್ಕರೆ ಕುದಿಯಲು ಇಡಿರಿ. ಅದು ಚೆನ್ನಾಗಿ ಕುದಿ ಬಂದು ಪಾಕವಾಗುವ ತನಕ ಹಾಗೆ ಇರಲಿ. ನಂತರ ಬೇಯಿಸಿದ ಕುಂಬಳ ಕಾಯಿಯ ತುರಿಯನ್ನು ಈ ಸಕ್ಕರೆ ಪಾಕದಲ್ಲಿ ಹಾಕಿ. ಕುಂಬಳ ಕಾಯಿ ಬೇಯಿಸಿದಾಗಲೂ ನೀರು ಬಿಡುವುದರಿಂದ ಅದನ್ನು ಸಕ್ಕರೆ ಪಾಕದಲ್ಲಿ ಹಾಕುವಾಗ ಆದಷ್ಟು ಹಿಂಡಿ ಹಾಕಿ. ಹೀಗೆ ಮಾಡಿದರೆ ಒಂದಷ್ಟು ಗ್ಯಾಸಿನ ಉಳಿತಾಯವಾಗುತ್ತದೆ. ಒಂದರ್ಧ ಗಂಟೆ ಬೇಯಿಸಿದ ನಂತರ ತುಪ್ಪ ಸೇರಿಸಿ ಕೆದಕಿರಿ. ಕೇಸರಿಯನ್ನು ನೀರಿನಲ್ಲಿ ಕರಗಿಸಿ ಸೇರಿಸಿ. ದಪ್ಪವಾಗುತ್ತ ಬಂದಿದೆ ಎಂದೆನಿಸಿದಾಗ ಹುಡಿ ಮಾಡಿದ ಏಲಕ್ಕಿ ಸೇರಿಸಿ ಗ್ಯಾಸ್ ಆಫ್ ಮಾಡಿಬಿಡಿ. ನಂತರ ತುಪ್ಪದಲ್ಲಿ ಹುರಿದ ಗೋಡಂಬಿ ಬೀಜ ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇರಿಸಿ.
01 October, 2012
ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)
ಫೋವ ಚಟ್ನಿ ಅನಿ ಬಟಾಣಿ (ಅವಲಕ್ಕಿ ಮತ್ತು ಬಟಾಣಿ)
ವಾರದಲ್ಲಿ ಹೆಚ್ಚು ಕಡಿಮೆ ಪ್ರತಿ ಮಂಗಳವಾರ ಬಟಾಣಿ ಮತ್ತು ಶುಕ್ರವಾರ ಕಡಲೆ..ಇದು ನಮ್ಮ ಕಾಲದ ಕೊಂಕಣಿಯ ಮನೆಯವರ ಮೆನುವಾಗಿರುತ್ತಿತ್ತು. ಈ ರೀತಿಯ ಅವಲಕ್ಕಿ ತಯಾರಿಸುವುದು ನಾಲಗೆಯ ರುಚಿಗೂ, ಆರೋಗ್ಯಕ್ಕೂ ಸರಿಹೋಗುತ್ತೆ. ಬಹುಶಃ ಸಂಪ್ರದಾಯಸ್ತರ ಮನೆಯಲ್ಲಿ ಬೆಳೆದ ಕಾರಣವೇನೋ ಈಗಲೂ ನನಗೆ ಅದೇ ರೂಢಿಯಾಗಿಬಿಟ್ಟಿದೆ. ನನ್ನ ಮನೆಯಲ್ಲೂ ಅಂತಹ ತಿಂಡಿಗಳಿಗೆ ಹೆಚ್ಚಿನ ಅಭ್ಯಂತರವಿರುವುದಿಲ್ಲ. ಅದರಲ್ಲೂ ಅವಲಕ್ಕಿಯ ಜೊತೆಗೆ ಹಸಿರು ಬಟಾಣಿಯ ಉಪ್ಕರಿ ಮಾಡಿದರೆ ಆ ದಿನ ನನ್ನ ಮಗ ಒಂಚೂರು ಹೆಚ್ಚೇ ತಿನ್ತಾನೆ. ನನಗಂತೂ ಆ ಒದ್ದೆ ಮಾಡಿ ತಯಾರಿಸುವ ಅವಲಕ್ಕಿ ಅಷ್ಟು ಹಿಡಿಸುವುದಿಲ್ಲ. ಅಲ್ಲದೆ ಇದು ಖಾರ ಸಿಹಿ ಎರಡು ಸಮಮಿಶ್ರಿತವಾಗಿದ್ದು ಆರೋಗ್ಯಕ್ಕೋ ಒಳ್ಳೆಯದೇ ಆದುದರಿಂದ ಸಾಧಾರಣವಾಗಿ ೧೫ ದಿನಕ್ಕೊಮ್ಮೆ ನನ್ನ ಮೆನುವಿನಲ್ಲಿ ತನ್ನ ಸರದಿಯಲ್ಲಿ ಬರುತ್ತಿರುತ್ತದೆ.
ಫೋವ ಚಟ್ನಿ:
೧. ಅರ್ಧ ತೆಂಗಿನ ಕಾಯಿ ತುರಿ
೨. ೧ ದೊಡ್ಡ ಚಮಚ ಕೊತ್ತಂಬರಿ
೩. ದೊಡ್ಡ ಚಮಚ ಜೀರಿಗೆ
೪. ೨ ಕೆಂಪು ಮೆಣಸು( ಹುರಿದದ್ದು)
೫. ೩೦ಗ್ರಾಮಿನಷ್ಟು ಬೆಲ್ಲ
೬. ರುಚಿಗೆ ತಕ್ಕಷ್ಟು ಉಪ್ಪು
೭. ಅವಲಕ್ಕಿ
೮. ಕಾಲು ಚಮಚದಷ್ಟು ಹುಣಸೆಕಾಯಿ
ಮೊದಲಿಗೆ ಜೀರಿಗೆ, ಕೊತ್ತಂಬರಿ, ಮೆಣಸು ಮತ್ತು ಹುಣಸೆ ಹಾಕಿ ಮಿಕ್ಸಿಯಲ್ಲಿ ತರಾತುರಿಯಾಗಿ ರುಬ್ಬಿ. ೨,೩ ಸುತ್ತು ತುರುಗಿದರೆ ಸಾಕು..ತುಂಬಾ ನಯವಾಗಬಾರದು. ಬೆಲ್ಲವನ್ನು ಚೆನ್ನಾಗಿ ಗುದ್ದಿ ಈ ಕೊತ್ತಂಬರಿ ಜೀರಿಗೆ ಹುಡಿಯಲ್ಲಿ ಬೆರೆಸಿ. ನಂತರ ತೆಂಗಿನ ತುರಿಯನ್ನು ಚೆನ್ನಾಗಿ ಬೆರಸಿ. ರುಚಿ ನೋಡಿ ಬೇಕಾದರೆ ಉಪ್ಪು ಹಾಗೂ ಬೆಲ್ಲ ಸೇರಿಸಿ. ಕೊನೆಗೆ ಅವಲಕ್ಕಿಯನ್ನು ಸೇರಿಸಿ...ಚೆನ್ನಾಗಿ ಬೆರೆಸದಿದ್ದರೆ ಅಲ್ಲಲ್ಲಿ ಹಸಿ ಅವಲಕ್ಕಿ ಬಾಯಿಗೆ ಸಿಕ್ಕಿ ರುಚಿ ಹಾಳುಮಾಡುತ್ತದೆ. ಕೆಲವರು ಇದಕ್ಕೆ ನೀರುಳ್ಳಿಯನ್ನು ಹಾಕುತ್ತಾರೆ. ಅದು ಸಹ ಬಹಳ ರುಚಿಯಾಗುತ್ತೆ. ಕೊನೆಗೆ ಕರಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟರೆ ನಿಮ್ಮ ಫೋವ ಚಟ್ನಿ ರೆಡಿ.
ಬಟಾಣಿ ಉಪ್ಕರಿ:
೧.ಹಸಿರು ಬಟಾಣಿ
೨.ಕೆಂಪುಮೆಣಸಿನ ಕಾಯಿ ೪.೫
೩. ಹಸಿಮೆಣಸಿನ ಕಾಯಿ ೨,೩
೪. ಗರಮ ಮಸಾಲೆ ಹುಡಿ ೨,೩ ಚಮಚ
೫. ಉಪ್ಪು
ಮೊದಲು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ. ನಂತರ ಒಂದು ಕಾವಲಿಯಲ್ಲಿ ಒಗ್ಗರಣೆಗೆ ಇಡಿ. ಸಾಸಿವೆ ಸಿಡಿದ ಮೇಲೆ ಗರಮ ಮಸಾಲೆ ಹುಡಿ ಹಾಕಿ. ನಂತರ ಬೇಯಿಸಿದ ಬಟಾಣಿಯನ್ನು ಸೇರಿಸಿ ಕುದಿಸಿ, ಕಾವಲಿಯಿಂದ ಕೇಳಗಿಳಿಸಿ. ಈಗ ಬಟಾಣಿ ಮತ್ತು ಅವಲಕ್ಕಿಯನ್ನು ತಟ್ಟೆಯಲ್ಲಿ ಹಾಕಿ ಸೇವಿಸಿ. ನೆನಪಿಡಿ, ಕೆಲವರು ಅವಲಕ್ಕಿ ಮತ್ತು ಬಟಾಣಿಯನ್ನು ಬೆರೆಸಿ ತಿನ್ನುತ್ತಾರಾದರೆ ಮತ್ತೆ ಕೆಲವರು ( ನನ್ನಂತವರು) ಬೇರೆ ಬೇರೆಯಾಗಿ ತಿನ್ನುತ್ತಾರೆ.
15 September, 2012
ಮೆಂತ್ಯ ಸೊಪ್ಪಿನ ವಡೆ!
ಮೆಂತ್ಯ ಸೊಪ್ಪಿನ ವಡೆ!
ಸಾಮಾಗ್ರಿಗಳು
೧. ಮೆಂತ್ಯ ಸೊಪ್ಪು ೨,೩ ಕಟ್ಟು
೨. ೧ ನೀರುಳ್ಳಿ
೪. ಕಡಲೆ ಹುಡಿ
೫. ೨,೩ ಚಮಚ ದಪ್ಪ ಮೊಸರು
೬. ೩ ಹಸಿ ಮೆಣಸು
೭. ರುಚಿಗೆ ತಕ್ಕಷ್ಟು ಉಪ್ಪು
೮. ಕರಿಯಲು ಎಣ್ಣೆ
ಮೆಂತ್ಯ ದೇಹಕ್ಕೆ ತಂಪು. ಅಲ್ಲದೆ ಸಕ್ಕರೆ ಅಂಶ ಹೆಚ್ಚಿದ್ದವರಿಗೆ ಅದನ್ನು ಹಿಡಿತಕ್ಕೆ ತರಲು ಮೆಂತ್ಯದ ಹುಡಿ ಸಹಾಯಕ. ಮೆಂತ್ಯದ ಸೊಪ್ಪಿನ ಪರಾಟ ಆರೋಗ್ಯಕ್ಕೂ ಸೈ ರುಚಿಗೂ ಸೈ!
05 September, 2012
ಹೀರೆಕಾಯ ಸಿಪ್ಪೆಯ ಚಟ್ನಿ!
ದಪ್ಪ ಚರ್ಮದಂತಿರುವ ಹೀರೆಕಾಯಿಯ ಸಿಪ್ಪೆಯನ್ನು ತೆಗೆದೇ ಅದರ ಉಪ್ಕರಿ ಅಥವಾ ಸಾಂಬಾರನ್ನು ತಯಾರಿಸಬೇಕಾಗುತ್ತೆ. ಹೆಚ್ಚಿನವರು ಅದರ ಸಿಪ್ಪೆ ಸತ್ವಯುಕ್ತವಾಗಿದೆ ಎಂದು ಅರಿತರೂ ಹೇಗೆ ಏನು ತಯಾರಿಸಬೇಕೆಂಬ ಅರಿವಿಲ್ಲದೆ ಅದನ್ನು ಬಿಸಾಡಿಬಿಡುತ್ತಾರೆ. ಹಳೆಜಮಾನದವರು ತಂಬಳಿ, ಚಟ್ನಿ ತಯಾರಿಸುತ್ತಾರೆ. ನಮ್ಮ ಅಮ್ಮನೂ ಅದರ ಚಟ್ನಿ ತಯಾರಿಸುತ್ತಾರೆ..ಈವಾಗ ನಾನೂ...ಬೇರೆಯವರು ಚಟ್ನಿಯನ್ನು ಹೇಗೆ ತಯಾರಿಸುತ್ತಾರಪ್ಪಾ ಅಂತ ಕುತೂಹಲದಿಂದ ಗೂಗಲ್ ಮಾಡಿದರೆ ಹತ್ತು ಹಲವು ಬಗೆಯ ನಮೂನೆಗಳು ದೊರೆತರೂ ನಮ್ಮ ಅಮ್ಮನ ಹಾಗೆ ಬೆಲ್ಲ ಹಾಕಿ ಮಾಡುವ ನಮೂನೆ ಕಾಣಲಿಲ್ಲ..ಸರಿ ಹೇಗೂ ಅಡುಗೆ ಅಂತ ಪೋಸ್ಟ್ ಸುರುಮಾಡಿದ್ದೇನಲ್ಲವೆ..ಅದರಲ್ಲಿ ಇದನ್ನೂ ಹಾಕಿಬಿಡುವ..ಅಲ್ಲದೆ ಇವತ್ತು ಶಿಕ್ಷರ ದಿನಾಚರಣೆ ಅಂತ ಕಾಲೇಜಿನಲ್ಲಿ ಏನೋ ಸಮಾರಂಭವಿರುವುದರಿಂದ ರಜೆನೂ ಇದೆ...
| ಚಿತ್ರ ಕೃಪೆ: ಅಂತರ್ಜಾಲ |
![]() |
| ಚಿತ್ರ ಕೃಪೆ: ಅಂತರ್ಜಾಲ |
ಸಾಮಾಗ್ರಿಗಳು:
ಹುಂ, ಹೀರೆಕಾಯಿ ಚಟ್ನಿ ಅಂದ ಮೇಲೆ ಹೀರೆಕಾಯಿ ಬೇಕೇ ಬೇಕಲ್ವಾ...
ಚಿಟಿಕೆ ಹಿಂಗು
ರುಚಿಗೆ ತಕ್ಕಷ್ಟು ಬೆಲ್ಲ
ತೆಂಗಿನಕಾಯಿ ತುರಿ ( ನಾಲ್ಕೈದು ಚಮಚ)
ಕೆಂಪು ಮೆಣಸಿನಕಾಯಿ( ೪,೫)
ಹುಣಸೆ ಹಣ್ಣು
ಉಪ್ಪು
ತಯಾರಿಕಾ ವಿಧಾನ:
ಮೊದಲು ಸಿಪ್ಪೆಯನ್ನು ಹುರಿದು ಬಾಡಿಸಿಕೊಳ್ಳಿ. ಸಿಪ್ಪೆ ಇದೆ ಅಂತ ತುಂಬಾ ಸಿಪ್ಪೆ ಹಾಕಬೇಡಿ...ರುಚಿ ಕೆಡುತ್ತೆ. ಹಾಗೆ ಫಿಜ್ನಲ್ಲಿ ತೆಗೆದಿಟ್ಟು ಇನ್ನೊಂದು ದಿನ ತಂಬುಳಿ ಮಾಡಿ. ಹಾಗೆಯೇ ತೆಂಗಿನ ತುರಿಯನ್ನು ಒಂಚೂರು ಹುರಿಯಿರಿ. ಹಿಂಗನ್ನು ಎಣ್ಣೆಯಲ್ಲಿ ಒಂದಿಷ್ಟು ಆಚೆ ಇಚೆ ಮಾಡಿ ಹುರಿಯಿರಿ. ನಂತರ ಎಲ್ಲಾ ಸಾಮಾಗ್ರಿಯನ್ನು ಮಿಕ್ಸಿಯಲ್ಲಿ ಹಾಕಿ...ಸ್ವಲ್ಪ ಸ್ವಲ್ಪವೇ ನೀರು ಹಾಕಿ ರುಬ್ಬಿ. ನಯವಾದ ನಂತರ ರುಚಿ ನೋಡಿ, ಉಪ್ಪು, ಬೆಲ್ಲ, ಖಾರ ಬೇಕಾದರೆ ಸೇರಿಸಿ. ನಮ್ಮ ಮನೆಯಲ್ಲಿ ಒಂದಿಷ್ಟು ಖಾರ ಹೆಚ್ಚು ಬೇಕು..ನಿಮ್ಮ ನಿಮ್ಮ ಮನೆಯವರ ರುಚಿ ನೋಡಿ ತಯಾರಿಸಿ. ಇವತ್ತು ನಮ್ಮ ಮನೆಯಲ್ಲಿ ಹೀರೆಕಾಯಿ ಚಟ್ನಿ...ನನಗೆ ತುಂಬಾನೆ ಇಷ್ಟ! ನಾಲಗೆಗೂ ರುಚಿ, ಜೀವಕ್ಕೂ ಹಿತ!
12 August, 2012
ಅಡುಗೆ-೧
ನನ್ನ ಮಟ್ಟಿಗೆ ತಿನ್ನುವುದೆಂದರೆ ಬದುಕಲು ಮಾತ್ರ...ಹೇಗೆ ನಮಗೆ ಶುದ್ಧ ಆಮ್ಲಜನಕ ಬೇಕೋ ಹಾಗೆ ಆರೋಗ್ಯವಾಗಿ ಜೀವಿಸಲು ಬೇಕಾದ ಪೋಷಕವಸ್ತುಗಳು ನಮ್ಮ ಆಹಾರದಲ್ಲಿರಬೇಕು..ಹೊರತು ರುಚಿಯ ಬಗ್ಗೆ ನಾನು ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ನಮ್ಮ ಅಮ್ಮ ಇಂದಿಗೂ ಹೆಮ್ಮೆಯಿಂದ ಹೇಳುತಿರುತ್ತಾರೆ- ನನ್ನ ಮಕ್ಕಳು ಎಂದೂ ನಾಲಿಗೆಯ ದಾಸರಾಗಿರಲಿಲ್ಲ ಎಂದು. ನನ್ನ ಇಬ್ಬರು ತಮ್ಮಂದಿರೂ ತಮ್ಮ ರುಚಿಯನ್ನು ಬದಲಿಸಿದ್ದರೂ ನಾನು ಇಂದಿಗೂ ನನ್ನ ಹಳೆಯ ನಮೂನೆಯೊಂದಿಗೆ ಬದುಕಿದ್ದೇನೆ. ಕಾಫಿ, ಟೀ ಕೂಡ ಮಾಡ್ಲಿಕ್ಕೆ ಬರುತ್ತಿರಲಿಲ್ಲ ನನಗೆ..ಅಡುಗೆ ಮಾಡಬಾರದು ಅಂತಲ್ಲ..ಬೆಂಕಿಯ ಹೆದರಿಕೆ..ಕಾಲೇಜಿನಲ್ಲೂ ಲ್ಯಾಬನಲಿ ನನ್ನ ಮಿತ್ರರೇ ಬೆಂಕಿ ಹಚ್ಚಿಕೊಡುತ್ತಿದ್ದರು...ಎಲ್ಲರೂ ಹಾಸ್ಯಮಾಡುತ್ತಿದ್ದರೂ ನಾನು ಕೇರೇ ಮಾಡುತ್ತಿರಲಿಲ್ಲ..ಆದರೆ ಮದುವೆಯಾದದ್ದೇ ತಡ ಅತ್ತೆಯ ಎದುರು ಬೆಂಕಿ ತುಂಬಾ ಬೆಟರ್ ಅಂತ ಗೊತ್ತಾಯಿತು...ಈಗಂತೂ ಬೆಂಕಿಯೊಂದಿಗೆ ಸರಸವಾಡುತ್ತೇನೆ.
ನಿಧಾನವಾಗಿ ಅಡುಗೆ ಮಾಡಲು ಕಲಿತೆ....ನನ್ನ ಮಕ್ಕಳಿಗೋಸ್ಕರ ಹೊಸ ರುಚಿ, ನಮ್ಮ ಸಂಪ್ರದಾಯದ ಅಡುಗೆ, ಹಬ್ಬದಡುಗೆ..ಉತ್ತರಭಾರತದಡುಗೆ...ಹೀಗೆ ನಮೂನೆ ನಮೂನೆ ಅಡುಗೆ ರುಚಿಪ್ರಿಯ ನನ್ನ ಮಕ್ಕಳಿಗಾಗಿ....ಅಲ್ಲದೆ ಅಡುಗೆ ಮಾಡುವುದು ಸಹ ಒಂದು ಕಲೆ ಅಂತ ನನ್ನ ಅಭಿಪ್ರಾಯ. ಆವಾಗ ನಾನು ಬ್ರಶ್ನ ನನ್ನಿಂದ ದೂರ ಇಟ್ಟಿದ್ದೆ. ಎಷ್ಟು ಎಕ್ಸ್ ಪರ್ಟ್ ಆಗಿಬಿಟ್ಟೆ ಅಂದ್ರೆ ಅಡುಗೆ ಕಲೆಯಲ್ಲಿ ವಿಶಾರದಳಾದ ನನ್ನ ಅಜ್ಜಿಯ ಕೈಯಲ್ಲಿ ಶಹಭಾಸ್ ಕೂಡ ಸಿಕ್ಕಿತು. ನನ್ನ ಬ್ಲಾಗ್ನಲ್ಲಿ ನಮ್ಮ ಸಂಪ್ರದಾಯದ ತಿಂಡಿ ತಿನಿಸುಗಳ ತಯಾರಿಕೆ ಬಗ್ಗೆ ಹಾಕಬೇಕು ಅಂತ ಅನಿಸಿದ್ರೂ, ಹಾಕಲಿಕ್ಕೆ ಹೋಗಿರಲಿಲ್ಲ...ಸಮಯದ ಅಭಾವ ಒಂದು ಕಾರಣವಾದರೆ..ಈಗಾಗಲೇ ನಮ್ಮ ಕೊಂಕಣಿ ಅಡುಗೆಗಳ ಬಗ್ಗೆ ಇರುವ ಅನೇಕ ಜಾಲವು ಹುಟ್ಟಿಕೊಂಡಿದ್ದು ಇನ್ನೊಂದು ಕಾರಣ. ಆದರೆ ಈಗ ಕಿರಣ ನನ್ನ ಬಳಿ ನಮ್ಮ ಸ್ಪೆಶಲ್ ಮತ್ತು ಸುಲಭ ಅಡುಗೆಗಳ ಬಗ್ಗೆ ಬರೀರಿ ಅಂತ ಬೇಡಿಕೆ ಇಟ್ಟ ಕಾರಣ ಸರಿ..ಅದೂ ಇರಲಿ ತೆರೆದ ಮನಸಿನ ಪುಟದಲಿ ಅಂತ ಇದೀಗ ಮೊದಲ ಕಂತು ಪ್ರಾರಂಭ ಮಾಡ್ತಿದ್ದೇನೆ.
೧. ಕಿಸ್ಮುರಿ:
________________
ಹಾಗಲಕಾಯಿಯ ಕಿಸ್ಮುರಿ ಅಂತ ನಮ್ಮಲ್ಲಿ ಮಾಡ್ತೇವೆ. ಆದರೆ ಇದು ಜಟ್ ಪಟ್ ತಯಾರಾಗುವ ಕಿಸ್ಮುರಿ. ಹೆಸರು ಕೇಳಿದ್ರೆ ನಗು ಬರುತ್ತೆ ಅಲ್ವಾ...ಆದರೆ ನಮಗೆಂದೂ ಇದು ವಿಚಿತ್ರ ಅಂತ ಅನಿಸ್ತಿರಲಿಲ್ಲ..ಬಹುಶಃ ಸಣ್ಣವರಿದ್ದಾಗದಿಂದಲೂ ಕೇಳುತ್ತಾ ಬಂದುದರಿಂದ ಕಾಣುತ್ತೆ!
ಸಾಮಾಗ್ರಿಗಳು
೧. ೪,೫ ಖಾರದ ಉದ್ದಿನ ಹಪ್ಪಳ
೨. ೨ ಸಾದಾ ಉದ್ದಿನ ಹಪ್ಪಳ
೩. ಒಂದೆರಡು ಹಸಿಮೆಣಸು ರುಚಿಗೆ ತಕ್ಕಂತೆ
೪. ೨ ಟಿ ಚಮಚ ತುರಿದ ತೆಂಗಿನ ಕಾಯಿ
೫. ಸಣ್ಣಗೆ ಕತ್ತರಿಸಿದ ಒಂದು ಸಣ್ಣ ನೀರುಳ್ಳಿ
ಮೊದಲು ಹಪ್ಪಳವನ್ನು ಕರಿಯಿರಿ. ಕೈಯಿಂದ ಒತ್ತಿ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ. ಕತ್ತರಿಸಿದ ಹಸಿಮೆಣಸನ್ನೂ, ತೆಂಗಿನ ಕಾಯಿಯನ್ನೂ, ಈರುಳ್ಳಿಯನ್ನು ಅದರಲ್ಲಿ ಬೆರೆಸಿ. ಕಿಸ್ಮುರಿ ತಯಾರು. ವಿ.ಸೂ- ಇದನ್ನು ಊಟದ ಹೊತ್ತಿಗೆ ತಯಾರಿಸಬೇಕು. ಹಾ, ಹಪ್ಪಳವನ್ನೂ ಮೊದಲೇ ಕರಿದಿಡಬಹುದು. ಗಾಳಿಯಾಡದ ಡಬ್ಬಿಯಲ್ಲಿ ಇಟ್ಟು ಬೇಕಾದಾಗ ಕಿಸ್ಮುರಿಯನ್ನು ತಯಾರಿಸಬಹುದು. ನನ್ನ ಮಗನಿಗೆ ಇದು ಬಹಳ ಇಷ್ಟ. ಎಲ್ಲಿಯಾದರೂ ಮಾಡಿದ ಪದಾರ್ಥ ಅವನಿಗೆ ಇಷ್ಟವಾಗಲಿಲ್ಲವಾದರೆ ಕಿಸ್ಮುರಿ ಮಾಡು ಅಂತ ಬೇಡಿಕೆ ಇಡುತ್ತಾನೆ.
Subscribe to:
Posts (Atom)



