ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
Showing posts with label ಸೃಷ್ಟಿ. Show all posts
Showing posts with label ಸೃಷ್ಟಿ. Show all posts

19 September, 2013

ದೂರದ ಸೈಬೇರಿಯದಿಂದ ನಮ್ಮಂಗಳಕ್ಕೆ ವಲಸೆ ಬಂದ ಪುಟ್ಟ ಹಕ್ಕಿ!

ಅವತ್ತು ಮಟಮಟ ಮಧ್ಯಾಹ್ನ.. ಕಣ್ಮುಚ್ಚಿಕೊಂಡು ಕಿಟಿಕಿಯ ಪಕ್ಕದಲ್ಲಿದ್ದ 

ಮಾವಿನಮರದಲ್ಲಿ ಕುಹೂ ಕುಹೂ.. ನಾದಕ್ಕೆ ತಲೆತೂಗುತ್ತಿದ್ದೆ, ಇದ್ದಕ್ಕಿದ್ದಂತೆ 

ಮತ್ತೊಂದು ನಾದ.. ಚಿಲಿಪಿಲಿ ಕೇಳಿಸಿತು. ಓಡಿದೆ ನನ್ನ ಮೂರನೆ ಕಣ್ಣು 

ಹಿಡ್ಕೊಂಡು. ವಸಂತಕಾಲವದು! ಅಪ್ಪೆಮಿಡಿ ಮಾವಿನ ಸಣ್ಣ ಸಣ್ಣ ಗೊಂಚಲು

 ನೇತಾಡುತ್ತಿದ್ದವು! ಎತ್ತರದಲ್ಲಿ ಈ ತನಕ ಕಾಣದ ಅತಿಥಿಗಳು ಚಿಲಿಪಿಲಿಗುಟ್ಟುತ್ತಾ 

ಗೆಲ್ಲಿನಿಂದ ಗೆಲ್ಲಿಗೆ ಸುತ್ತುತ್ತಿದ್ದವು. ಅಂತೂ ಕ್ಲಿಕ್ಕಿಸಿದ ಹತ್ತಹದನೈದು ಫೊಟೊಗಳಲ್ಲಿ

 ಎರಡೋ ಮೂರರಲ್ಲಿ ಮಾತ್ರ ಕಾಣಿಸಿಕೊಂಡಿವೆ. ಮತ್ತೆ ಗೂಗಲ್ ಮಾಡಿ ಮಾಡಿ

 ಸೋತು ಹೋದೆ. ಕೊನೆಗೂ ಡಾ|| ಕೃಷ್ಣ ಮೋಹನರ ಜಾಲತಾಣದಲ್ಲೂ 

ಕಾಣಿಸಿಕೊಂಡ ಮಾಹಿತಿಯಿಂದ ಈ ಹಕ್ಕಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ.


 ಇನ್ನು ಮುಂದಿನ ವಸಂತ ಮಾಸದಲ್ಲೂ ಕಾಣಿಸುವವೆಂಬ ನಿರೀಕ್ಷೆ!

ಇವತ್ತು ಮತ್ತೆ ಕಾಡಿತು ನೆನಪು ಈ ಪುಟ್ಟ ಸುಂದರಿಯ!

ದೂರದ ಸೈಬೇರಿಯದಿಂದ ನನ್ನ ಕೋಗಿಲೆಯ ಜತೆ ನಮ್ಮೂರಿನ ವಸಂತಮಾಸ


 ಸವಿಯಲು ಬಂದ ಸುಂದರಿ!



Asian Brown Flycatcher!




11 August, 2013

ಹೆಣ್ಣು ಹೊನ್ನು ಮಣ್ಣು- ಪುರುಷ ಸಂಪತ್ತು! ಹೆಣ್ಣೇ, ಅಷ್ಟೆಯೇ ನಿನ್ನ ಸ್ಥಾನ?

-
ಯುಗ ಯುಗಗಳಿಂದಲೂ
ಧರ್ಮ ಅಧರ್ಮ
ಬೆಳಕು ಕತ್ತಲೆ
ಸತ್ಯ ಅಸತ್ಯ
ನ್ಯಾಯ ಅನ್ಯಾಯ
ಜಾತಿ ವಿಜಾತಿ
ಸ್ತ್ರೀ ಪುರುಷ
ತಿಕ್ಕಾಟ...
ಪ್ರಕೃತಿಯಲಿ ಎಷ್ಟೊಂದು ವೈರುಧ್ಯ..
ನಲಿವಿನ ಸುಖ ಇನ್ನೂ ಅರಗಿಲ್ಲ..
ಹಿಂದೆಯೇ ನೋವಿನ ಅನುಭೂತಿ..
ಯಾಕೆ ಮುಂಜಾವೆ ಯಾಕೆ?
ಹನಿಗೂಡಿದ ಕಣ್ಣಲ್ಲೇ ಇನ್ನೂ ಬೆಳಕು ಮೂಡದ ಆಗಸದೆಡೆ ಪ್ರಶ್ನೆ ತೂರಿದೆ..
ದಪ್ಪನೆ ಬಳಿದ ಕಾಡಿಗೆಯಿಂದ ಮತ್ತಷ್ಟು ಪ್ರಜ್ವಲಿಸುವ ದೃಷ್ಟಿ..
ಬೆನ್ನ ತುಂಬಾ ಬಿಚ್ಚಿದ ಮುಡಿ..
ನೋವು, ಕೋಪ, ಅಸಹಾಯಕತೆಯ ಎತ್ತಿ ತೋರುವ ವದನ..
ಹಿಡಿತಕ್ಕಿಟ್ಟುಕೊಳ್ಳಲಾಗದೆ ಹೊರಬರಲು ತವಕಿಸುತ್ತಿರುವ ಭಾವಗಳು..
ಅದರುತ್ತಿರುವ ತುಟಿಗಳು..
ಮುಂಜಾವಿನ ರೂಪ ವರ್ಷ ಋತುವಿನ ರೌದ್ರರಮಣೀಯ
ಶರಧಿಯ ಆಗಸದೆತ್ತರ ಚಿಮ್ಮುವ ತೆರೆಗಳಂತೆ ಆಕರ್ಷಕ..
“ಹೆಣ್ಣೇ, ಕೇಳು..
ಜಗವನ್ನೇ ಗೆಲ್ಲಬಲ್ಲ ವೀರ ಪತಿಯರೈವರಿದ್ದೂ
ಸಕಲ ಶಾಸ್ತ್ರಪರಾಂಗತರಾದ ಭೀಷ್ಮ ವಿಧುರಾದಿ ಹಿರಿಯರಿದ್ದೂ
ತುಂಬಿದ ಸಭೆಯಲಿ ದ್ರೌಪದಿಯಂತ ಅಸಮಾನ್ಯ ಸ್ತ್ರೀಯೇ ತನ್ನ ಮಾನ ಕಾಪಾಡಲು ಹೆಣಗಿದಳು...
ಕ್ಷಣ ಮಾತ್ರಕೆ ಚಂಚಲಳಾಗಿ ಪತಿಯ ರೂಪದಲ್ಲಿದ್ದ ಇಂದ್ರಿನ ಮೋಹಿಸಿದ
ಅಹಲ್ಯೆ ಕಲ್ಲಾದಳು..
ಅಪರಾಧಿಯಲ್ಲದಿದ್ದರೂ ನಿರಪರಾಧಿ ಎಂದು ರೂಪಿಸಿಕೊಳ್ಳಲು ಹೆಣಗಾಡಿ
ಸೋತು ಭೂಮಿ ತಾಯಿಯ ಮಡಲಿಗೇ ಮರಳಿದಳು ಸೀತೆ..
ತನ್ನ ಪತಿಯ ನೂರಾರು ಪತ್ನಿರ ಮಧ್ಯೆ ತನ್ನ ಸ್ಥಾನವೇನೆಂದು  ಪ್ರತೀ ರಾಣಿ ಪಟ್ಟದ ಸ್ತ್ರೀಯರ ಉತ್ತರವಿಲ್ಲದ ಪ್ರಶ್ನೆ..
ಬರೇ ದೇಹಗಳು.. ರಾಜಕೀಯ ಪಗಡೆಗಳಾಗಿ ಅಲ್ಲಿಂದ ಇಲ್ಲಿಗೆ ಉರುಳುತ್ತ ಉಸಿರಾಡುತ್ತಿದ್ದ ಹೆಣ್ಣುಗಳು..
ಇತಿಹಾಸದ ಪುಟಗಳು ಮುಚ್ಚಿ ಹಾಕಿದ ಸ್ತ್ರೀ ಮನಗಳ ರೋಧನಗಳ ಪ್ರತ್ಯಕ್ಷ ಸಾಕ್ಷಿ ನಾನು..
ಯುಗ ಬದಲಾದರೂ ಅದೇ ಪಾಡು..
ಮುಖವಾಡಗಳ ಹಿಂದೆ ಬಚ್ಚಿಟ್ಟಿರುವ ಕಾಮುಕತೆ..
ಸ್ತ್ರೀ ಬರೇ ಭೋಗದ ವಸ್ತು..
ಸಮುದ್ರ ವಸನೆ ದೇವಿ..
ಪಾಡುತ್ತಾ ಕವಿ ತನ್ನ ಸೃಜನಶೀಲತೆ ತೋರುವನೇ,
ಇಲ್ಲಾ ರಸಿಕತೆಯನೇ..
ಒಂಟಿ ಹೆಣ್ಣನ್ನು ಮುಕ್ಕಿತಿನ್ನುವುದರಲ್ಲಿಯೂ..
ಪ್ರಕೃತಿ ಕೊಟ್ಟ ಬಲ ತೋರ್ಪಡಿಸುವಲ್ಲಿ ಹಿಂದೆ ಬೀಳದಿರುವಲ್ಲಿಯೂ...
ತನ್ನ ಅಂಕು ಡೊಂಕು ದೇಹವನ್ನೇ ಅಡವಿಗಿಟ್ಟು ಮೆರೆವರೂ..
ತನ್ನದೇ ಪಡಿಯಚ್ಚು, ತನ್ನದೇ ಭಾವ.. ಇನ್ನೂ ಕಣ್ಣು ಬಿಟ್ಟಿಲ್ಲ..
ಹೊಸಕಿ ಹಾಕುವವರೂ..
ಹಲವು ಕನಸ ಹೊತ್ತು ಹೊಸ್ತಿಲು ದಾಟಿ ಬಂದವಳ
ಭಾವಕೆ ಬೆಂಕಿ ಇಕ್ಕುವವರೂ..
ಒಂಟಿ ಭಾವಕೆ, ಕಪ್ಪು ಬಿಳುಪು ಕನಸುಗಳಿಗೆ ರಂಗನ್ನಿತ್ತು..
ಜತೆಯಾಗಿ ಹಾಡು ಹಾಡುತ್ತ..
ಇದ್ದಕ್ಕಿದ್ದಂತೆ ಅತ್ತೆತ್ತಲೋ ಆಕರ್ಷಿತರಾಗಿ ಮಾಯವಾಗುವವರೂ...
ಕೈಗೆಟುಕದಿದ್ದರೆ ಹುಳಿ.. ಹುಳಿ.. ನೀ ಅನ್ನುತ್ತಾ ದ್ವೇಷ ಸಾಧಿಸುವವರೂ..
ಬೆನ್ನುತಟ್ಟುತ್ತಲೇ ಮತ್ತೆಲ್ಲೋ ಕೈ ಆಡಿಸುವವರೂ..
ಇಲ್ಲ ಕಣೇ, ಇನ್ನೂ ದ್ವೇಷ ಅಸೂಯೆ ಅಸಹಾಯಕತೆಯ ಕಬಂದಬಾಹುವಿನ  ಹಿಡಿತ
ಬಿಡಿಸಕೊಳ್ಳದೇ ಹೆಣ್ಣು ಎಂದಿಗೂ ಉದ್ಧಾರವಾಗಳು..
ಹೆಣ್ಣಿಗೆ ಹೆಣ್ಣೇ ಶತ್ರುವಾಗಿ ಕಾಡುವ ತನಕ ಇತಿಹಾಸ ಮರುಕಳಿಸುತ್ತಲೇ..
ಇಲ್ಲ.. ಇಲ್ಲ.. ನಾವು ಬದಲಾಗೋಣ,
ಮುಂಜಾವಿಗೂ ಶುಭ್ರ, ಹೊನ್ನ ಮುಂಜಾವನ್ನು ಮೂಡಿಸೋಣ!
ಕೈಗೂಡಿಸಿ ಮುಂಜಾವಿಗರೇ..
ಯುಗಯುಗದಿಂದಲೂ ಸ್ತ್ರೀ ಜಾತಿಯ ಕಾಡುವ ಅಮಾನವೀಯತೆ ಕೃತ್ಯಗಳಿಗೆ ಮುಕ್ತಿವೀಯೋಣ..
ಸ್ತ್ರೀ ಶಕ್ತಿಯ ಪುನರುಜ್ಜೀವಗೊಳಿಸೋಣ!
ನಾನಿನ್ನೂ ಆಶಾವಾದಿ, ನೀವು?















-
ನಳನಳಿಸುವ ವದನವ ಪೊತ್ತು ಮುಂಜಾನೆಯ ಪ್ರಸಾದ ಹಂಚುತ್ತಾ ಅಸುರ ಶಕ್ತಿಗಳಿಗೆ ಮೋಕ್ಷ ಕೊಟ್ಟಿರುವ ಪರಮಾತ್ಮನು ಮುಖವಾಡಗಳ ಮರೆಯಲ್ಲಿ ಮೆರೆಯುತ್ತಿರುವ ಕಲಿಯುಗದ ಅಮಾನವೀಯರ ಲಂಪಟಕ್ಕೆ  ಮೋಕ್ಷ ತೋರಿ.. ಅನಿಷರ ಲೋಕದ ಬೆಳಕು ನಮ್ಮ ಮುಂಜಾನೆಗೂ ಸಿಗುವುದು ಯಾವಾಗ ಎಂದು ಕೇಳಿ... ನಾನದನ್ನು ನನ್ನ ಮುಂಜಾನೆಯೆಡೆ ತೂರಿದಾಗ..
ನಳಿನಿ ಪ್ರಸಾದ್ ಅವರ ಬರಹ!

ಹಿರಣ್ಯನಿಗೆ ಮುಸ್ಸಂಜೆಯ
ಹೊಸ್ತಿಲಲ್ಲಿ.....
ಕಲ್ಲಾಗಿದ್ದ ಅಹಲ್ಯೆಗೆ ಅಂಗುಲಿಯ 
ಸ್ಪರ್ಶದಲ್ಲಿ..
ಶಬರಿಗೆ ಸುಕ್ಕುಗಟ್ಟಿದ
ಎಂಜಲು ಬುಗರಿ ಹಣ್ಣುಗಳಲ್ಲಿ.
ದಶಶಿರನಿಗೆ 
ಅಳಿಲ ಸೇತು ಬಂಧದಲ್ಲಿ..
ಕಂಸನಿಗೆ ಕಾರಾಗೃಹದ 
ಗರ್ಭದಲ್ಲಿ...
ಬಕಾಸುರನಿಗೆ ಬಲಭೀಮನ
ಬಂಡಿ ಅನ್ನದಲ್ಲಿ.....
ಶಕುನಿಗೆ ದ್ಯೂತದ
ದಾಳದಲ್ಲಿ..
ಭೀಷ್ಮರಿಗೆ ಉತ್ತರಾಯಣದ
ಶರಶಯ್ಯೆಯಲ್ಲಿ...
ಪಾರ್ಥನಿಗೆ ಸಾರಥಿಯ
ವಿಶ್ವರೂಪದಲ್ಲಿ...
ರಾಧೇಯನಿಗೆ ಪಂಕದಲಿ ಹೂತ
ಚಕ್ರದಡಿಯಲ್ಲಿ..
ಭಸ್ಮಾಸುರನಿಗೆ ಮೋಹಿನಿಯ
ನೃತ್ಯದಲ್ಲಿ..

'
ಮುಂಜಾವು'!

ವಸುಧೆಯೊಳು
ಸೃಷ್ಟಿ - ಲಯ ಗಳ 
ನಾಂದಿಯ ಬ್ರಹ್ಮ..

ಆದರೆ ..
ಈ ಮುಂಜಾವನ್ನು,
ಸತ್ತ ಮಾತಿನ ಗೋರಿಗೆ ಬಣ್ಣ ಬಳಿಯುವ 
ನಪುಂಸಕರಿಂದ ..
ನೆತ್ತರು ನೆಕ್ಕಿ ಬದುಕುಳಿಯುವ 
ಜಿಗಣೆಗಳಿಂದ..
ಮಹಜರಿಗೆ ಮುನ್ನವೇ ಗಹಗಹಿಸುವ 
ನರಪಿಶಾಚಿಗಳಿಂದ..
ಈ ಡಾಂಭಿಕತೆ,ದಳ್ಳುರಿಯ 
ಕಾರ್ಮೋಡದಿಂದ

'
ಮುಕ್ತ'ಗೊಳಿಸಲಿ ಹೇಗೆ ?

ಮುಂಜಾವಿಗೂ ಒಂದು" ಮುಂಜಾವು"
ದೊರೆಯಲೆಂದೆನ್ನ ಹರಕೆ-ಹಾರೈಕೆ...!

10 May, 2013

ನಮ್ಮಿಬ್ಬರ ಹಂಬಲ!


ಮುಗಿಲೇ,
ನಮ್ಮೂರಲ್ಲಿ ಜಲ ಬತ್ತಿ
ನೆಲ ಬಿರಿದು
ಇಳೆ ನಿನ್ನೊಲವಿಗಾಗಿ
ಪರಿತಪಿಸುತಿಹಳು
ನನ್ನೊಲವೇ,
ನನ್ನ ಬರಡಾದ ಹೃದಯವೂ
ರಸ ಸಮಯಕಾಗಿ
ಪರಿತಪಿಸುವುದು
ನಮ್ಮಿಬ್ಬರ ಹಂಬಲ
ಎಂದು ಫಲ
ನೀಡುವುದೋ?

27 April, 2013

ಬಂದೇ ಬರುವನವನು, ಭಾಮೆಯ ತಣಿಸುವನವನು!


ವಸಂತ ಮಾಸ
ಮಾಮರದಲಿ ಕುಹೂ
ಕೆಂಪನೆಯ ಚಿಗುರು
ಸುಮವರಳಿ ದುಂಬಿಯ
ಝೇಂಕಾರ ನಾದ
ತಂಗಾಳಿಯ ಪಿಸುಮಾತು
ಮನ್ಮಥ-ರತಿಯ ಮಿಲನ
ಸಂಭ್ರಮ ಸಡಗರ
ಅವಳೂ ಹಂಬಲಿಸುವಳು
ಅವನೊಲವಿಗಾಗಿ ಕಾದು
ಬತ್ತಿ ಬೆಂಡಾಗುವಳವಳು
ಚಂಚಲಚಿತ್ತನಲ್ಲ ಅವನು
ಕಾಯುವನು ಸರಿ
ಸಮಯ ಬರಲೆಂದು
ಬಂದೇ ಬರುವನವನು
ಒಲವನ್ನೆಲ್ಲ ಹೊಸೆದು
ಕಡುನೀಲಿ ರಂಗಿನಿನಿಯ
ಭಾಮಿನಿಯ ಮುದ್ದಿಸಲು
ಬಂದನೇ  ನೋಡೇ ನೋಡಲ್ಲಿ
ಝಗಮಗ ಝಗಮಗ ಬೆಳಕು
ಕೇಳಿತೇ ತಾಳಮದ್ದಳೆ
ಸುರಿಸಿದನೋ ತನ್ನೊಲವ
ತಣಿಸಿದನೋ ತನ್ನರಸಿಯ
ತನ್ನಿನಿಯನ ಮೋಹ
ಅಡಗಿಸಲು ಶಕ್ಯಳಲ್ಲ
ಹಸಿರು ಹೆತ್ತು
ಹೆಮ್ಮೆ ತೋರಿ
ಮೆರೆಯುವಳಾ ಅರಸಿ!

07 March, 2013

ಹೀಗೊಂದು ಚಿಂತನೆ!

-
ನನ್ನದೊಂದು ಹಳೆಯ ಬರಹ

-
 ಹೀಗೊಂದು ಚಿಂತನೆ!

ಬದುಕೇ,
ನೀ ಬಲು ನಿಗೂಢ,  ದೊಡ್ಡ ಮಾಯಾವಿಯೇ ಸರಿ
ಕ್ಷಣಕ್ಕೊಂದು ನಿಲುವು, ಹಲವೊಮ್ಮೆ ನಿಲುಕದು ಯೋಚನೆಗೂ

ಅಲ್ಲಲ್ಲಿ ಮುಳ್ಳುಗಳು, ಅಲ್ಲಲ್ಲಿ ಹಸಿರು
ಅತ್ತಲಿಂದ ಬೈಗುಳ, ಇತ್ತಲಿಂದ ಮೆಚ್ಚುಗೆ

ಬಂದು ಹಿಂದಿರುವುದರೆಡೆ ಮಧ್ಯೆ ನಿತ್ಯವೂ ಮರಣ ಜನನ
ಮೂಳೆ ಮಾಂಸಗಳ ಬೆಳೆಸಲು ತತ್ವಗಳ ಅಡವು

ಹತ್ತಿಕ್ಕಿದಷ್ಟೂ ಮತ್ತಷ್ಟು ಬೆಳೆಯುವ ಕಾಮನೆಗಳು
ಕರ್ಮ-ಕರ್ತವ್ಯಗಳೆಡೆಯಲ್ಲಿ ಹೊರಗಿಣುಕುವ ಕನಸುಗಳು

ತಗ್ಗಿ ಬಗ್ಗಿ ನಡೆದರೆ ಗುದ್ದು, ತಲೆಯೆತ್ತಿ ನಡೆದರೆ ಸದ್ದು
ಸೊಲ್ಲೆತ್ತದೇ ಬದುಕು ಅಂದರೂ ಕೇಳದು ಮನದಳಲು

ಒಳಗೊಂದು ಬದುಕು, ಹೊರಗೊಂದು ಬದುಕು
ಯಾವುದು ಮಿತ್ಯ, ಯಾವುದು ಸತ್ಯ ತಿಳಿಯದಲ್ಲ

ಜಾತಿ ಮತ ಧರ್ಮಗಳ ಕಟ್ಟು ಪಾಡು
ಒಂದೇ ವದನ, ಮುಖವಾಡ ಹಲವು

ಹೊರಗೆ ಮಾನವ, ಆಗಾಗ ಇಣುಕುವ ದಾನವ
ಅವಕಾಶವಿದೆಯೇ ಮಾನವೀಯತೆಗೆ

ಒಳಗೆ ತಳಮಳ, ಹೊರಗೆ ಮಂದಹಾಸ
ತೋರುವರೇ ನಾಟಕೀಯತೆ

ಹೊರಗೆ ತಣ್ಣಗೆ, ಒಳಗೆ ಕೋಲಾಹಲ
ಉಕ್ಕುವುದೇ ಹಾಲಾಹಲ

ಹೊರಗೆ ಮಿನುಗುವ ಬಣ್ಣ, ಒಳಗೆ ಕರಿಕತ್ತಲು
ತೋರುವರೇ ದೀವಣಿಗೆಯ

ಚೂರಿ ಕತ್ತಿ ಬೇಕಿಲ್ಲವಲ್ಲ, ಮಾತೇ ಸಾಕಲ್ಲ
ಕೊಡುವರು ಮರಣವನಲ್ಲ

ಹಾವು ಏಣಿಯಾಟದ ನಿತ್ಯ ನಡೆ
ಕಾಲೆಳೆದು ಬೀಳಿಸುವಾಟದ ಕುಸ್ತಿ

ಎತ್ತರಕೇರಿದರೆ ಅಮಲು, 
ಕೆಳಗಿಳಿದರೆ ಸುಸ್ತು

ಆಗೊಮ್ಮೆ ಈಗೊಮ್ಮೆ ಆತ್ಮದೆಚ್ಚರ
ನಡೆ ನಡೆ ಆ ಧಾಮ, ಈ ಧಾಮ

ಮುಳುಗೇಳು ಗಂಗೆಯಲ್ಲಿ
ಕರಗುವುದೇ ಜನುಮ ಜನುಮಗಳ ಪಾಪದ ಅಂಟು

ತಪ್ಪುವುದೇ ವೈತರಿಣೀಯ ನಂಟು
ಮತ್ತೆ ಜನನ ಮರಣದ ಚಕ್ರದಾಟ

ಸದ್ಗತಿಗಾಗಿಲ್ಲವೇಕೆ ನಮ್ಮ ಹೋರಾಟ
ಎಲ್ಲವೂ ಸೂತ್ರದಾರನ ಇಚ್ಛೆಯಾಟ!

"ಇದೆಲ್ಲಾ ಕೇವಲ ನನ್ನಿಚ್ಛೆ- 
ಧರ್ಮ-ಅಧರ್ಮ, ಸತ್ಯ-ಮಿತ್ಯ, 
ಪ್ರೀತಿ-ದ್ವೇಷ, ಜನನ-ಮರಣ... ಎಲ್ಲವೂ ಬೇಕು
ಸುಸೂತ್ರವಾಗಿ ಸಾಗಬೇಕು ಗೊಂಬೆಯಾಟ
ಮಿಥ್ಯಾ ಸಂಸಾರದ ಕೊನೆಯೂ ನಾನಿಚ್ಛಿಸಿದಾಗಲೇ
ನಾನಿತ್ತದನ್ನೂ ಈಯದನ್ನೂ ಒಪ್ಪಿ
ನಡೆ ಮುಂದೆ ನಾ ತೋರುವ ಹಾದಿಯಲಿ 
ಪೊಂದುವೆ ನೀ ಸದ್ಗತಿ"
ಎಂದನಾ ಈ ಆತ್ಮದೊಳಗಿನ ಪರಮಾತ್ಮ!

10 August, 2012

ಏನನ್ನುವೆ....ಶೈಲೇಶ?




 ಡಬ್, ಡಬ್....ಮೆಲ್ಲನೆ  ಸಣ್ಣದಾಗಿ ಒದೆಯುತ್ತಿದ್ದಾನೆ....
 ಆಹ್.....ಮಧುರವಾದ ನೋವು...
 ಹೊಸ ಅನುಭವ...ಮನದಲ್ಲಿ ಹರುಷ ಉಕ್ಕಿ ಹರಿಯುತಿದೆ...
 ಎದೆಯೊಳಗೆ ನವಿರಾದ ಪುಳಕ....
 ಎದುರಿನಲ್ಲಿರುವ ನಿಲುವುಗನ್ನಡಿಯೊಳಗೆ ಇಣುಕಿದೆ...
 ಅರೆ, ಇದೇನಿದು....ನಾನೇ...ಹೌದು...ಇದು ನಾನೇ...
 ಮೃದುವಾಗಿ  ಹೊಟ್ಟೆಯನ್ನೊಮ್ಮೆ ಸವರಿದೆ...
 ವಸುದೇವ.....ವಸುದೇವ...ನನ್ನ ತುಟಿಯು....ಅಲ್ಲಾಡುತಿದೆ....
 ನೋವು...ಹಾ....ಅಲ್ಲೇ ಕುಸಿದು ಕುಳಿತೆ.
 ಬಂದವನು ಆಧರಿಸಿ....ಕಣ್ಣಲ್ಲೇ ಸಮಾಧಾನ, ಧೈರ್ಯ ಹೇಳಿದ.
 ಬೆಳಕಿನ ಪುಂಜವೊಂದು ಕಾಣಿಸಿದಷ್ಟೇ ಗೊತ್ತು.....
..............................................
ನೋಡೆ, ನೋಡೆ...ನಮ್ಮ ನಂದನ ಹಾಗೆ ಆ ತುಂಟಕಣ್ಗಳು....
ಹುಂ,  ಕಪ್ಪು ಕೂದಲ ರಾಶಿ  ನೋಡು...ನಮ್ಮ ಯಶೋಧೆಗೂ ಹೀಗೆ ಗೊಂಚಲು ಕೂದಲಿತ್ತು....
ಗೋಪಿಯರು...ತಮ್ಮ ತಮ್ಮಲ್ಲೇ ಮಾತುಕತೆ ನಡೆಸಿದ್ದಾರೆ...
ನಾ ಹೆಮ್ಮೆಯಿಂದ ನನ್ನ ಕೃಷ್ಣನ ಮುಖಾರವಿಂದ ಸವರಿದೆ....
ನನ್ನ ಕಣ್ಣು ನಂದನನ್ನು ಹುಡುಕುತಿತ್ತು.....ನಮ್ಮ ಪ್ರೀತಿಯ ಕುರುಹನ್ನು ನೋಡಿದ್ದಾನೆಯೇ?
ಅವನನ್ನೇ ಹೋಲುತ್ತಾನಲ್ಲ...ಈ ನಂದಕಂದ....
ಅಮ್ಮ,  ನಾ ಹಿಡಿಲಾ...ತಮ್ಮನಾ...ಪ್ಲೀಸ್...ನನ್ನ ಮಗಳು ಕೇಳುತ್ತಿದ್ದಾಳೆ....
ನಂದನ ಮುಖ ಹೆಮ್ಮೆಯಿಂದ ಅರಳಿತ್ತು..ಧನ್ಯತಾಭಾವವಿತ್ತು...
ಅದ ಓದಿದ ನನ್ನಲ್ಲಿ ಸಾರ್ಥಕ ಭಾವ ಅರಳಿತು....
ತಬ್ಬಿ ಹಿಡಿದೆ ನನ್ನ ಅರವಿಂದನಯನನ...
ನಿಜ, ಆ ಕಣ್ಗಳು ನನ್ನವನ ದೇಣಿಗೆ....
ನನ್ನ ಮನ ಓದಿದವನಂತೆ ಮನಮೋಹಕ ನಗೆ ಸೂಸಿದ ನನ್ನ ಮಗರಾಯ...
ನೋಡು ನೋಡುತ್ತಿದ್ದಂತೆಯೇ....ಎಲ್ಲರ ಮೋಡಿಮಾಡುತ್ತ ಬೆಳೆದ....
ಗೋಡೆಯಲೆಲ್ಲಾ ಚಿತ್ತಾರ......ಎಲ್ಲೆಲ್ಲೂ ಬಣ್ಣ....
ಹಾಳೆಗಳ ತುಂಬಾ ಬರಹಗಳು....
ಏನೇನೋ ಬರೆದು...ಮನಸೆಳೆಯುವ ಚಿತ್ತಾರಗಳ ಬಿಡಿಸಿ... ಬಣ್ಣಗಳ ಚೆಲ್ಲಿ...
ಎಲ್ಲರ ಶಹಭಾಸ್ ಗಿಟ್ಟಿಸುತ್ತಿದ್ದಾನೆ...
ಅಪ್ಪನ ಮುಖ ನೋಡಬೇಕು....ಏನೋ ಸಾಧಿಸಿದ ಹೆಮ್ಮೆ...
ಹುಂ, ನಾನೇನು ಕಡಿಮೆಯಿಲ್ಲ....ಹಿಮಗಿರಿಯನ್ನೇ ಏರಿದ ಭಾವನೆ.....
....................................................
ಸುಂದರ ಜಗತ್ತು ನನ್ನದಾಗಿತ್ತು....ನಾನು ನನ್ನ ಪುಟ್ಟ ಸಂಸಾರ....
....................................................................
ಕಣ್ಣು ಬಿಡಲೇ ಮನಸಿಲ್ಲ...ಈ ಸುಂದರ ಜಗತ್ತನ್ನು ಬಿಟ್ಟು...ಹೋಗಲಾಗುವುದಿಲ್ಲವಲ್ಲ....
ನಾ ಒಲ್ಲೆ...ಮತ್ತೆ ಈ ಕ್ರೂರ ಜಗದಲ್ಲಿ ಕಾಲಿಡಲಾರೆ ಅಂದೆನಲ್ಲ....
ತಟ್ಟಿ ಎಬ್ಬಿಸಿದ ಮಗ..ಅಮ್ಮ ಕಾಲೇಜಿಗೆ ಹೊತ್ತಾಗುತ್ತೆ...ಬೇಗಬೇಗ ...ತಿಂಡಿ ಮಾಡಿ ಕೊಡು....
...............................................................:-(((((((((
ವಾಹ್, ಎಂಥ ಸುಂದರ ಕನಸು!

ಕೃಷ್ಣನ ಹುಟ್ಟಿದ ಹಬ್ಬ ಮಾಡಿ ಮಲಗಿದವಳಿಗೆ ದೇವಕಿ, ಯಶೋಧೆಯಾದ ಕನಸು....
ಮತ್ತೆ ಅಮ್ಮನಾಗುವ ಹಂಬಲ....

ಅದನ್ನೇ ಅಪ್ಪನಲ್ಲಿ ಹೇಳಿದರೆ....ಮೌನವಾಗಿದ್ದಾನೆ.....
ನಾನಾಗುವೆ ಯಶೋಧೆ, ನೀನಾಗು ನಂದ....ಪ್ಲೀಸ್....ಪ್ಲೀಸ್....
ನಮ್ಮ ಕಂದನೂ ಕೃಷ್ಣನಂತೆ ಸಕಲಕಲಾ ಪರಿಣಿತನಾಗಲಿ....ಏನನ್ನುವೆ....ಶೈಲೇಶ?

08 August, 2012

ಹನಿ ಹನಿ ಚಿತ್ತಾರ!


   ಹನಿ ಹನಿ ಮುತ್ತುಗಳು  ಚೆಲ್ಲಾಡಿವೆ ತೋಟದ ತುಂಬಾ...
  ಆರಿಸಿ, ಮಾಲೆಯ ಕಟ್ಟಲು ಅನುವಾದರೆ.....
  ಇಗೋ, ಕುಸುಮಗಳ ಅಪ್ಪಣೆ....
  ತಡೆ, ಅಗೋ ನಮ್ಮೊಡೆಯನು ಹೊನ್ನ ತೇರನೇರಿ ಬರುತಿಹನು..
  ಈ ಮುತ್ತು, ರತ್ನಗಳು ಅವಗೇ ಅರ್ಪಣೆ..
  ತಡಮಾಡಬೇಡ..
  ನಿನ್ನ ಮನೆಯಂಗಳದಲಿ ಹರಡಿಹ ಮುತ್ತುರತ್ನಗಳ..
  ನಿನ್ನ ಮನದಂಗಳದಲಿ  ಶಾಶ್ವತವಾಗಿ ಸೆರೆಯಾಗಿಸು.....
  ಅಷ್ಟೇ ಪ್ರಾಪ್ತಿ ನಿನಗೆ!!! 













05 August, 2012

ಬಂಗಾರದ ಬಣ್ಣದ ಹೂವು!


ಮಿಠಾಯಿ ಹೂ ಅಂತ ಸಾಮಾನ್ಯವಾಗಿ ಕರೆಯುವ ಈ ಹೂವಿನ ಇಂಗ್ಲಿಷ್ ಹೆಸರು ಗೋಲ್ಡನ್ ಟ್ರಂಪೆಟ್ ಅಂತ. ಅಲ್ಲಮಂಡ ಕತಾರ್ಟಿಕ ಅಂತ ವೈಜ್ಞಾನಿಕ ಹೆಸರು. ಸಾಮಾನ್ಯವಾಗಿ ವರ್ಷವೆಲ್ಲ ಹೂ ಕೊಡುವ ಈ ಹೂವು ನನಗೆ ಬಹಳ ಇಷ್ಟ.  ಸಾಮಾನ್ಯವಾಗಿ ಹಳದಿ ಬಣ್ಣದ ಹೂವಿನ ಗಿಡ ಎಲ್ಲೆಡೆ ಕಾಣಬರುವುದಾದರೂ ಇತ್ತೀಚೆಗೆ ಇನ್ನೆರಡು ಬಣ್ಣಗಳು ಸೇರ್ಪಡೆಯಾಗಿವೆ.  ಇವತ್ತು ಪೂರ್ವಾಹ್ನ ಅಮ್ಮನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಹೂವಿನ ಮೇಲೆ ಚೆಲ್ಲಿಕೊಂಡಿದ್ದ ಹನಿಗಳು ಸ್ವಾಗತ ಕೋರಿದವು. ಮನ ಪ್ರಫುಲ್ಲಿತವಾಯಿತು. ಎಂದಿನಂತೆ ಆ ನೆನಪನ್ನು ಶಾಶ್ವತವಾಗಿರಿಸಲು ಸೆರೆಹಿಡಿದೆ.














22 March, 2012

ಶಿಶಿರನ ನಿರ್ಗಮನ-ವಸಂತನ ಆಗಮನ!!



ಶಿಶಿರನ ನಿರ್ಗಮನದ
ಕುರುಹೋ ಎಂಬಂತೆ
ಹರಡಿದ ಪೀತವರ್ಣದ
ಹಾಸುಗೆಯಲಿ ಮೆಲ್ಲನೆ
ಹೆಜ್ಜೆಯೂರುತ  ಸಾಗುತ್ತಿದ್ದಳು!

ತಂಗಾಳಿಯೊಂದು ಬಳಿ ಸಾರಿ,
ಮುಂಗುರುಳ ಸರಿಸಿ,
ಕಿವಿಯಲಿ ಪಿಸುನುಡಿಯ
ಉಸುರಿ ಕಪೋಲವ
ರಾಗರಂಜಿತ ಮಾಡಿತು!

ನಭದಲಿ ಝಗಮಗಿಸುತ್ತಿದ್ದ
ರವಿಯು ಕೋಮಲಾಂಗಿಯ
ಕ್ರಶಕಾಯ ನೋಡಿ ಮರುಗಿ
ಒಂದಿಷ್ಟು ಮರೆಯಾದ
ಜಲಧರನ ತೆರೆಗೆ!

ಕುಸುಮಗಳ ವಾಸನೆಯ
 ಆಘ್ರಾಣಿಸಿದ ಕನ್ಯೆಗೆ
ನಶೆಯ ಮತ್ತೇರಿತು!
ಬಿರಿದ ಅಧರಗಳು ಕರೆದವು,
ಅರಳಿದ ನಯನಗಳು ಅರಸಿದವು!

ವಸಂತನ ಆಗಮನ ಸಾರಿದ
ಪರಪುಟ್ಟ ಹಕ್ಕಿಯ ಗಾನ,
ಮತ್ತೇರಿದ ದುಂಬಿಗಳ ಝೇಂಕಾರ,
ಸಖಿಯ ಹೃದಯದಲಿ
ಮಧುರ ಕಂಪನ ಎಬ್ಬಿಸಿತು!

ಬಳಿ ಸಾರಿದ ಮನ್ಮಥ
ಬರಸೆಳೆದು ಬಿಗಿದಪ್ಪಿದ.
ವರುಷದ ವಿರಹದ
ತಾಪ ತಣಿಸಿದ
ಶಾಪಕೆ ಗತಿ ಕಾಣಿಸಿದ!

ಹಸಿರರಿವೆ ಧರಿಸಿ,
ನಿಸರ್ಗ ಓಕುಳಿ ಚೆಲ್ಲಿತು,
ಖಗಗಳ ವೃಂದದ ಓಲಗ,
ರತಿ-ಮದನರ ಮಿಲನದ
ಸಂಭ್ರಮ ಎಲ್ಲೆಡೆ!

17 March, 2012

ದೃಷ್ಟಿಯಿಂದ ಸೃಷ್ಟಿಯ ಸೆರೆ!!!

ಎಷ್ಟೊಂದು ವಿಸ್ಮಯ,
ಎಷ್ಟೊಂದು ಜಾದುಮಯ,
ಎಷ್ಟೊಂದು ಸೌಂದರ್ಯ, 
ನೋಡಿದಷ್ಟು, ತಿಳಿದಷ್ಟು, ಅನುಭವಿಸಿದಷ್ಟು ನಿಗೂಢವಾಗಿದೆ!
ಸೆರೆ ಹಿಡಿದಷ್ಟು ಉಳಿಯುತ್ತದೆ;
ಮತ್ತಿಷ್ಟು ಕಾಡುತ್ತದೆ,
ಎಲ್ಲವನ್ನೂ ತನ್ನೊಡಲಲ್ಲಿ ಬಚ್ಚಿಡುತ್ತದೆ;
ಒಂದಿಷ್ಟು ಬಿಚ್ಚಿಡುತ್ತದೆ;
ಸವಿದಷ್ಟು ಕ್ಷುಧೆ ಹೆಚ್ಚುತ್ತದೆ,
ಜೊತೆಗೆ ಗ್ಲಾನಿಯ ಹೃದಯಕ್ಕೀಯುತ್ತದೆ
ಒಂದಿಷ್ಟು ತಂಪು;
ಅದಕೆ ನೋಡಯ್ಯ ಬಂಧಿಸಿದೆ  ನಾ ಸೃಷ್ಟಿಯ 
ನನ್ನಯ ದೃಷ್ಟಿಯಲಿ! 






















ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...