ವಿಷಯ ಒಂದೇ. ಆಯಾಮ
ಎರಡು!!!
----------------------------
ಅವನು: ನೋಡೆ,
ಅಣ್ಣನ ಫೋನು ಬಂದಿತ್ತು. ಅತ್ತಿಗೆಗೆ ಇನ್ನು ಅಮ್ಮನನ್ನು ನೋಡಲು ಆಗುವುದಿಲ್ಲವಂತೆ. ನೀನು
ನೋಡಿಕೊಳ್ತಿಯಾ.. ಇಲ್ಲಾಂದ್ರೆ ಯಾವುದಾದರು ಅನಾಥಾಶ್ರಮದ ಬಗ್ಗೆ ವಿಚಾರಿಸು ಅಂದ್ರು. ಅಮ್ಮನನ್ನು
ಕರಕೊಂಡು ಬರ್ಲಾ! ಮಕ್ಕಳು ಇದ್ದವರನ್ನು ಅನಾಥಾಶ್ರಮದವರು ತೆಗೆದುಕೊಳ್ಳಲು ಒಪ್ಪುವುದಿಲ್ಲವಂತೆ,
ವಿಚಾರಿಸಿ ನೋಡಿದೆ.
ಅವಳು: ರೀ, ಬುದ್ಧಿ
ಗಿದ್ದಿ ಇದೇನ್ರಿ ನಿಮಗೆ? ನನ್ನನ್ನೇ ನನಗೆ ನೋಡಿಕೊಳ್ಳಲು ಕಷ್ಟ.. ಇನ್ನು ನಿಮ್ಮ ಅಮ್ಮನನ್ನು
ಯಾರು ನೋಡಿಕೊಳ್ಳುವುದು! ಏನೂ ಅಧಿಕಪ್ರಸಂಗ ಬೇಡ. ಸುಮ್ಮನೆ ಅನಾಥಾಶ್ರಮ ಸೇರಿಸಿ ಬಿಡಿ.
ಅವನು: ಅಲ್ವೇ ನಮ್ಮ
ಮನೆ ಎಷ್ಟು ದೊಡ್ಡದಿದೆ.. ಮೂರು ಬೆಡ್ ರೂಮು, ಒಂದರಲ್ಲಿ ಅಮ್ಮ ಇರಬಹುದಲ್ವಾ! ನಿಂಗೆ ಕಷ್ಟ
ಆದ್ರೆ ನರ್ಸ್ ಇಟ್ಟುಕೊಳ್ಳೋಣ! ದೇವರ ದಯದಿಂದ ನಮಗ್ಯಾವ ತೊಂದರೆನೂ ಇಲ್ಲವಲ್ಲ.
ಅವಳು: ಅದೆಲ್ಲ
ಸಾಧ್ಯವಿಲ್ಲ. ಮನೆಯಲ್ಲಿ ವಾಸನೆ.. ನಿಮಗೇನು ಗೊತ್ತು? ಬೇಕಾದ ಹಾಗೆ ಹೊರಗೆ ಹೋಗಲಿಕ್ಕಾಗೊಲ್ಲ.
ನನ್ನ ಮಾತನ್ನು ಮೀರಿ ಅಮ್ಮನನ್ನು ಕರಕೊಂಡು ಬಂದ್ರಿ ಅಂದ್ರೆ, ಮತ್ತೆ ನಾನೀ ಮನೆಯಲ್ಲಿ ಇರೊಲ್ಲ,
ಅಷ್ಟೇ!”
ಗಪಚುಪ್ ಆತ! ಕೊನೆಗೂ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇದ್ದೂ.. ಅನಾಥಳಂತೆ ಆಶ್ರಮ ಸೇರಿದ ಕೆಲವೇ ತಿಂಗಳಲ್ಲಿ
ಪ್ರಾಣಬಿಟ್ಟಿತು ಆ ಹಿರಿಯ ಜೀವ!
-------------------------------------------------------
-------------------------------------------------------
ಇವಳು: ಅಲ್ರೀ,
ಎಷ್ಟು ಮಾತಾಡೊದು ಅದು? ಫೋನು ಬಿಲ್ಲು ಎಷ್ಟು ಆಯಿತು ಅಂತ ಗೊತ್ತಾ? ಹೋಗ್ಲಿ ಅಂದ್ರೆ ಜತೆ ಅಮ್ಮ
ನೀನು ಯಾವಾಗ ಬರ್ತಿಯಾ ಅಂತ ಗೋಗೆರೆಯುತಿರಿ!
ಇವನು: ಅಲ್ವೇ,
ನ್ಯಾಯವಾಗಿ ಅವರು ನಮ್ಮ ಜತೆಲೇ ಇರಬೇಕಾಗಿತ್ತು. ನನ್ನ ವಿದ್ಯಾಭ್ಯಾಸಕ್ಕಾಗಿ ಅಮ್ಮ ಎಷ್ಟು ಕಷ್ಟ
ಪಟ್ಟಿದ್ದಾರೆಂದು ನನಗೇ ಗೊತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗಲೆಲ್ಲ ರಾತ್ರಿಯಿಡೀ
ನಿದ್ದೆಗೆಟ್ಟು ನನ್ನ ಬಳಿಯೇ ಕೂತುಕೊಳ್ತಿದ್ದರು. ಇವತ್ತು ನನಗಿರುವ ಹೆಸರು, ಸಂಪತ್ತು ಎಲ್ಲ ಅವರ
ತ್ಯಾಗದ ಫಲ!
ಅಷ್ಟು ಕರೆದ ಮೇಲೆ
ಕೊನೆಗೂ ಬರಲೊಪ್ಪಿದ್ದಾರೆ. ಅವರಿಗಾಗಿ ರೂಮನ್ನು ತಯಾರುಮಾಡಬೇಕು!
ಇವಳು:
ಅಯ್ಯೊಯ್ಯೋ.. ಒಪ್ಪಿಯೇ ಬಿಟ್ಟರೆ! ನಂಗಾಗೊಲ್ಲ. ಅವರಿದ್ದರೆ ನನಗೆ ಫ್ರೀಡಂ ಇರೊಲ್ಲ. ಬೇಡರಿ,
ಏನಾದರೂ ನೆವನ ಹೇಳಿ!
ಇವನು: ಇಲ್ವೇ,
ನಿಂಗೇನೂ ತೊಂದರೆ ಆಗೊಲ್ಲ.. ಅಮ್ಮ ಹೊಂದಿಕೊಂಡುಹೋಗುವವರು. ಅಂಧವಿಶ್ವಾಸ, ವಿಪರೀತ
ಮಡಿಗಿಡಿಯಿಲ್ಲ ಅವರಿಗೆ. ನನ್ನೀ ಉನ್ನತ ವಿಚಾರಗಳು ಅವರ ದೇಣಿಗೆ ತಾನೆ, ಅದರಿಂದಲೇ ತಾನೆ ನೀನು
ನನ್ನನ್ನು ಮೆಚ್ಚಿದ್ದು!
ಇವಳು: ಅದೆಲ್ಲಾ
ಹೇಳಲು ಕೇಳಲು ಚಂದ! ನೋಡಿ, ಸುಮ್ನೆ ನನ್ನ ಮಾತು ಕೇಳಿ.. ಇಲ್ಲಾಂದ್ರೆ!
ಇವನು: ನೋಡು ಅಮ್ಮ
ಬರ್ತಾರೆ ಮತ್ತು ನಮ್ಮ ಜತೆ ನಿಲ್ತಾರೆ. ಮತ್ತೆ ಬೇರೆ ಮಾತಿಲ್ಲ. ನಿಂಗೆ ಕಷ್ಟವಾದ್ರೆ ನೀನು
ಸ್ವತಂತ್ರಳು.. ನಿನ್ನ ತವರು ಮನೆಗೆ ನಾನೇ ಬಿಟ್ಟು ಬರ್ತೇನೆ. ಇನ್ನು ಚರ್ಚೆ ಬೇಡ!
ಅಮ್ಮ ಬಂದ್ರು ಇವನ
ಮನೆಗೆ. ಬೇರೆ ಉಪಾಯವಿಲ್ಲದೆ ಅತ್ತೆ ಜತೆ ಹೊಂದಿಕೊಂಡಳು ಇವಳು! ಮಗ, ಸೊಸೆ ಮೊಮ್ಮಕ್ಕಳೊಡನೆ ಹೊಸದಾಗಿ ಹಾಕಿಸಿದ ಹಲ್ಲು
ಸೆಟ್ಟು ಎಲ್ಲರಿಗೂ ತೋರಿಸುತ್ತಾ ನಗುತ್ತಿದ್ದಾರೆ ಆ ಅಮ್ಮ! ಬಹುಶಃ ನೂರು ವರ್ಷ ಬದುಕಬಹುದು!
No comments:
Post a Comment