ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 September, 2013

ಒಲವು, ಅಂದು-ಇಂದು..


ಅಂದು-

ಒಲವೇ,
ಕಸ ಕಡ್ಡಿ ತುಂಬಿದ
ಮನದಂಗಳಕೆ ನೀ
ನೀರ ಚಿಮುಕಿಸಿ,
ಕಸ ಹೊಡೆದು,
ಬೆನ್ನ ಬಗ್ಗಿಸಿ,
ಇಕ್ಕಿದೆ ಚುಕ್ಕಿಗಳ
ಜತನದಿ ನೀ
ಕೈ ಹಿಡಿದು
ರೇಖೆಗಳನೆಳೆದೆ
ಮಳೆಬಿಲ್ಲನೇ ಬಗ್ಗಿಸಿ
ತುಂಬಿದೆ ಬಣ್ಣ
ಕಂಪನಕದುರಿತು ಕಾಯ
ರಂಗೇರಿತು ಗಲ್ಲ!

ಇಂದು-

ಒಲವೇ,
ಕಸ ಕಡ್ಡಿಗಳಿಲ್ಲ
ಮನದಂಗಳದಿ
ಧೂಳು ಹಾರದು
ನಿತ್ಯ ಶುದ್ಧ
ಚುಕ್ಕಿಗಳ ನೆರವಿಲ್ಲದೆ
ಎಳೆಯಬಲ್ಲೆ ಗೆರೆಗಳ
ಅಂದು ರಂಗೇರಿದ
ಗಲ್ಲದ ಬಣ್ಣವೇ
ಈ ಚಿತ್ತಾರಗಳಿಗೀಗ
ನವುರಾದ ಕಂಪನ
ನೆನಪುಗಳ ಮರಳುವಿಕೆಯಿಂದ..




29 September, 2013

ಸ್ನೇಹ-3

ಕಷ್ಟ ಸುಖ ಹಂಚಿಕೊಳ್ಳಲೇಬೇಕೆ..
ಸಮಾನ ಮನಸ್ಕರದಾಗಿರಲೇಬೇಕೆ..
ಕರೆದಾಗಲೆಲ್ಲ ಓಗೊಡಲು ಮನಸಾಗದಿರಬಹುದೇ..
ಮನಸು ಬಂದಾಗ ಮಾತ್ರ ಸಂಹನವೇ..
ನನಗೋ ಗೊಂದಲ..
ಹೇಳು ಯಾವುದಕೆ ಸ್ನೇಹವೆನ್ನುವೆವು?
ಸ್ನೇಹ.. ಒಲವು.. ರಾಗ.. ಸೆಳೆತ..
ಎಲ್ಲವೂ ಮಿಳಿತ..
ಹೇಳು ಆತ್ಮವೇ, ಹೇಳು..
ಸ್ನೇಹಕೆ ಕಟ್ಟುಪಾಡುಗಳುಂಟೆ?
ಕುಳ್ಳಿರಿಸುವೆಯೋ ವ್ಯಾಖ್ಯಾನದ ಚೌಕಟ್ಟಿನೊಳಗೆ..
ರಕ್ತ ಸಂಬಂಧಗಳಂತೆ ಹಂಗಿಲ್ಲದ ಬಂಧ..
ನಾ ನಿನಗೆ ನೀ ನನಗೆ ಆಗುವೆನೆನ್ನುವ ಗೋಜಿಲ್ಲ..
ಅಜರಾಮರವೋ ನನ್ನ ನಿನ್ನ ಬಂಧ..
ನಾ ತಪ್ಪಿದರೆ ತಿದ್ದು..
ನನ್ನನೊಪ್ಪಿಸುವೆ ಈ ನಿನ್ನ ಕೈಗೆ..
ನೀನೊಪ್ಪಿದರೆ ನಾನೂ..
ಇರಲಿ ನಿತ್ಯ ಸಂವಹನ..
ಕಿವಿಯಾಗಬೇಕೆಂದಾಗಲೆಲ್ಲ ಕೂಗು ಬಿಡೊಮ್ಮೆ
ಬರದೆ ಇರಲಾರೆ ಕರೆದರೊಮ್ಮೆ..
ನಿತ್ಯ ಬದಲಾಗುತ್ತಿರುವ ಜಗದಲಿ
ಎಂದೂ ಬದಲಾಗದೇ ಇರಲಿ
ನಮ್ಮೀ ಸ್ನೇಹ ಸಂಬಂಧ

ಇರಲಿ ಸೂರ್ಯಚಂದ್ರರಂತೆ ಅಜರಾಮರ!

ಸ್ನೇಹ-2

ಸೂಜಿ ಮೊನೆಯ ಸೆಳೆತನವು ಇರಲಾ ಸ್ನೇಹದಲಿ
ಗುರುತ್ವಾಕರ್ಷಣೆ ಅನ್ನಬೇಕೆ.
ಮನಸಾರೆ ಒಪ್ಪಿ ಅಪ್ಪಿಕೊಳ್ಳುವುದೇ..
ಹೃದಯ ಒಪ್ಪಿತು,, ಬುದ್ಧಿ ಅಂಗೀಕರಿಸಿತು
ಮುಂದೆ ಯಾವ ಅಡ್ಡಿ ಆತಂಕಗಳಿಲ್ಲ..
ಗುಣ ಅವಗುಣನಳೆಯುವ ಗೋಜಿಲ್ಲವಲ್ಲ..
ಒಂದೇ ಒಂದು ಮಾತು,
ಕೇಳು  ನನ್ನ ಸ್ನೇಹವೇ
ನಾ ನಿನ್ನ ತೂಕಕ್ಕಿಡಲಾರೆ..
ನೀನೂ ನನ್ನ ಹಾಗೆ ಮಾಡಲಾರೆ
ಕಾಯಗಳ ಲೆಕ್ಕವೇ ಸಲ್ಲ..
ಆತ್ಮಗಳೇ ಒಪ್ಪಿ ಒಂದಾಗಿವೆ..
ರೂಪ, ಅಂತಸ್ತು, ಧರ್ಮ, ಜಾತಿ, ಲಿಂಗ, ವಯಸ್ಸು..
ಯಾವುದರ ಹೊದಿಕೆ ಸಲ್ಲ..
ನೀನೂ ನಾನೂ ಒಪ್ಪಿದೆವಲ್ಲ..


ಸ್ನೇಹ-1

ವ್ಯಾಖ್ಯಾನದ ಪರಧಿಯೊಳಗಿಡಲೇ..
ನನ್ನೊಲವ...
ನನ್ನ ಸ್ನೇಹವ,,
ಅಪರಿಮಿತ ಅವನು
ನೋಡಲೋ ವಾಮನ
ಹೆಜ್ಜೆಯಿಟ್ಟರೆ ವ್ಯಾಪಿಸುವ ಮೂರ್ಲೋಕ
ಸಮಾಯಾಸಮಯಗಳ ಪರಿವೆಯಿಲ್ಲ
ಕರೆದರೆ ಓಗೊಡದವನಲ್ಲ
ಪಡೆದ ನಾನು ಧನ್ಯಳೋ

ಸ್ನೇಹವೇ ಧನ್ಯವೋ?

28 September, 2013

ಹೆಣ್ಣು ಜನ್ಮ ಸಾಕಪ್ಪಾ ಸಾಕು..


ಹೆಣ್ಣು ಜನ್ಮ.. ಸಾಕಪ್ಪಾ ಸಾಕು!

ಅವಳು: ಕರ್ಮ ಕಣೆ! ಈ ಹೆಣ್ಣು ಜನ್ಮ ಸಾಕಪ್ಪಾ ಸಾಕು!

ಇವಳು: ಅದು ಗೊತ್ತಿದ್ದದ್ದೇ  ಅಲ್ವೆ! ಮತ್ತೇನಾಯ್ತು ಇವತ್ತು?

ಬೆಳಿಗ್ಗೆ ಹಾಲು ತರಲು ಹೋದವಳ ಕಿವಿಗೆ ಈ ಸಂಭಾಷಣೆ ಕೇಳಿಸಿತು.. ಹೆಚ್ಚು ಕಮ್ಮಿ ಪ್ರತೀದಿನ ಇವರಿಬ್ಬರನ್ನು ನೋಡುತ್ತಿರುತ್ತೇನೆ.. ಸಮವಸ್ತ್ರ ಧರಿಸಿ ಹೋಗುವವರನ್ನು ಕಂಡು ಇವರು ಆ ಕೋರಿಯರ್ ಕಂಪನಿಯಲ್ಲಿ ಕೆಲಸ ಮಾಡುವವರೆಂದು ಉಹೆಮಾಡಿದ್ದೆ. ಗುಸುಗುಸು ಮಾತಾಡಿಕೊಂಡು ತಮ್ಮದೇ ಲೋಕದಲ್ಲಿ ಕಳಕೊಂಡು ಹೋಗುತ್ತಿದ್ದವರ ಮುಖದಲ್ಲಿ ಚಿಂತೆ ತುಂಬಿರುತ್ತಿತ್ತು. 
 ಇವತ್ತಂತೂ ಸ್ಪಷ್ಟವಾಗಿ ಕೇಳಿಸುತ್ತಿದೆ.. ನಡಿಗೆಯ ಗತಿಯನ್ನು ಒಂಚೂರು ಕಡಿಮೆಮಾಡಿದೆ.. ಕೆಟ್ಟ ಕುತೂಹಲ, ಏನ್ ವಿಷಯವಿರಬಹುದು!

ಅವಳು: ಅದೇ, ಒಂದರಲ್ಲಿ ಚಾಗೆ ಇಟ್ಟು ಇನ್ನೊಂದರಲ್ಲಿ ಹಾಲಿಟ್ಟು ಅಡುಗೆ ಕೋಣೆ ಗುಡಿಸ್ತಿದ್ದೆ.. ಹೇಗೂ ಅಲ್ಲೇ ಇದ್ದೀನಲ್ಲಾ ಎಂದು ಗ್ಯಾಸ್ ಹೈ ಮಾಡಿದ್ದೆ.. ಕಸ ಬಿಸಾಡಲು ಹೊರಹೋದವಳು ಬೆಕ್ಕಿನ ಮರಿ ಕಂಡು ಮಾತಾಡಿಸ್ಲಿಕ್ಕೆ ನಿಂತೆ.. ಅಷ್ಟರಲ್ಲೇ ಅಡುಗೆ ಕೋಣೆಯಿಂದ ಗುಡುಗಿನ ಶಬ್ದ!

ಒಳ ಬಂದು ನೋಡಿದರೆ ಹಾಲು ಚೆಲ್ಲಿದೆ.. ನಿಂಗೆ ಬುದ್ಧಿ ಕಲಿಸ್ಬೇಕು ಅಂತಲೇ ಆಫ್ ಮಾಡ್ಲಿಲ್ಲ.. ನೀನು ಯಾವಾಗಲೂ ಹೀಗೆ.. ಬೈಗುಳದ ಮಳೆ ಇವರಿಂದ. ಮೊದಲೇ ಏಳುವರೆಯೊಳಗೆ ಮನೆಯಿಂದ ಹೊರಡ್ಬೇಕು.. ಇನ್ನು ಇದೆಲ್ಲಾ ಕ್ಲೀನ್ ಮಾಡಿ.. ಬರೀ ಅಸಹಾಯಕತೆ ಕಾಡಿತು ಕಣೇ.. ಕಣ್ಣೀರು ಮಾತ್ರ ನಮ್ಮ ಪಾಲಿಗೆ!

ಇವಳು: ಹೌದೇ, ಅದೇ ವಿಷಯಕ್ಕೆ ಇವತ್ತು ನಮ್ಮಿಬ್ಬರಲ್ಲಿ ಜಟಾಪಟಿಯಾಯ್ತು.. ಅವರೆಂದರು ಅಡುಗೆ, ಮನೆವಾರ್ತೆ ಎಲ್ಲ ನಿನ್ನ ಡ್ಯೂಟಿ.. ಕೆಲಸಕ್ಕೆ ಹೋಗುವವಳಾದರೂ ಅದನ್ನು ಪೂರ್ತಿಗೊಳಿಸಿಯೇ ಹೋಗಬೇಕು ನೀನು..

ನಾನೆಂದೆ, ಹಾಗಾದರೆ ನಮ್ಮ ಅಗತ್ಯಗಳನ್ನು ಪೂರೈಸುವುದೂ ನಿಮ್ಮ ಕರ್ತವ್ಯವಲ್ವಾ! ನಾನ್ಯಾಕೆ ಕೆಲಸಕ್ಕೆ ಹೋಗಬೇಕು? ಮನೆಯಲ್ಲೇ ಇದ್ದು ಇಲ್ಲಿನ ಕೆಲಸ ಚೆನ್ನಾಗಿ ಮಾಡ್ತೇನೆ.

ಅಷ್ಟಕ್ಕೆ ಕೆಂಡದಂತ ಕೋಪ.. ಅಲ್ವೇ ಪೈಪೋಟಿ ಮಾಡ್ತಿಯಾ? ನನಗೇ ಜವಾಬು ಕೊಡ್ತಿಯಾ?? ಕೈ ಎತ್ತಿದವರನ್ನು ಕಂಡು ಹೆದರಿಕೆಯಾಗಿ, ನನ್ನನ್ನು ಕ್ಷಮಿಸಿ, ತಪ್ಪಾಯ್ತು, ಇನ್ನು ಮುಂದೆ ಹಾಗೆಲ್ಲ ಜವಾಬು ಕೊಡೊಲ್ಲ ಅಂದೆ!


ಮುಂದೆ ನನ್ನ ನಡಿಗೆ ಬಿರುಸಾಯಿತು.. ಇನ್ನು ನನ್ನ ದಿನವೆಲ್ಲ ಕೆಟ್ಟಿತು, ಅದ್ಯಾಕೆ ನಾನಿವರ ಮಾತು ಕದ್ದಾಲಿಸಲು ಹೋದೆನಪ್ಪಾ.. ಪಶ್ಚಾತಾಪ ಪಟ್ಟೆ!!!

ಸ್ಫುಟ ಮತ್ತು ಪರಿಶುದ್ಧ..


ಒಲವೇ,
ನಿನ್ನರಿಯುವ ಯತ್ನದಲಿ ನಾ ನನ್ನರಿತೆ..
ನನ್ನೊಳಗಡಗಿರುವ ನಿನ್ನ ಬೆಂಬೆತ್ತಿದವಳ
ಒಳಮುಖ ನಡೆಯಲಿ ದಿವ್ಯಾನುಭವದ ಪ್ರಾಪ್ತಿ
ನೀನೇ ಪುಟವಿಟ್ಟ ಕನ್ನಡಿಯೊಳಗೆ ಕಂಡೆ
ಈಗ ಎಲ್ಲವೂ ಸ್ಫುಟ ಮತ್ತು ಪರಿಶುದ್ಧ!
-ಪ್ರೇರಣೆ ರೂಮಿ


ಎಂತಹ ಗೆಳೆಯ/ಗೆಳತಿ ಬೇಕು ನಮಗೆ....


ಇಂತಹ ಸಮಯಪ್ರಜ್ಞೆಯ ಜಾಣ್ಮೆಯುಳ್ಳ ಗೆಳಯ/ತಿ ಇದ್ದಿದ್ದರೆಷ್ಟು ಚೆನ್ನ ನಮಗೆಲ್ಲರಿಗೂ..

ಕೆಲವೊಮ್ಮೆ ಮೌನವಾಗಿದ್ದು ತನ್ನವನನ್ನು/ಳನ್ನು ಅವನ/ಳ ಗುರಿಯತ್ತ ಸಾಗಲು ನೆರವಾಗುತ್ತಿರುವಂತಿದ್ದರೆ..

ಅವರನ್ನವರಿಯುವ ಮಂಥನದಲಿ ಮೂಕ ವೀಕ್ಷಕರಾಗಿರುವಂತಿದ್ದರೆ..

ತನ್ನ ಭ್ರಮಾಲೋಕ ಸಂಚಾರ ಮುಗಿಸಿದ ಅವನನ್ನು/ಳನ್ನು ಬಯಸುವ ಮೊದಲೇ  ಜತೆಯಾಗಿ ಮತ್ತೆ ಕೈಹಿಡಿದು ಮುನ್ನಡೆಸುವಂತಿದ್ದರೆ...


-     - ಭಾವಾನುವಾದ (ಗ್ಲೋರಿಯ ನೇಲರ್

)“Sometimes being a friend means mastering the art of timing. There is a time for silence. A time to let go and allow people to hurl themselves into their own destiny. And a time to prepare to pick up the pieces when it’s all over.” — Gloria Naylor

27 September, 2013

ಆತ್ಮ ಗೆಳೆಯ/ತಿ...

ನಮ್ಮ ಹೃದಯದ ಬೀಗದ ಕೀಲಿ ಮತ್ತು ಬೀಗಕ್ಕೆ ಹೊಂದಿಕೊಳ್ಳುವ,  ಬೀಗ ಹಾಗೂ ಬೀಗದ ಕೀಲಿ ಇರುವವನೇ/ಳೇ  ಆತ್ಮದ ಗೆಳೆಯ/ತಿ.

 ಎಂದು ನಾವು ಯಾರ ಕೈಗೆ  ಬೀಗದ ಕೈಗೆ ಒಪ್ಪಿಸಿಕೊಳ್ಳುವುದರಿಂದ ಸುರಕ್ಷಿತವಾಗಿದ್ದೇವೆಯೆಂದು ಭಾವಿಸಿಕೊಳ್ಳುವೆವೋ,   ಅಂದೇ ನಮ್ಮಾತ್ಮವನ್ನು ನೋಡಬಲ್ಲೆವು, ಅನುಭವಿಸಬಲ್ಲೆವು.

ನಾನು ನಾವಾಗಿಯೇ ಬದಲಾಗುವೆವು..

ನಮ್ಮೊಳಗಿನ ಪರಮಾತ್ಮನ ಅರಿವನ್ನೂ ತಿಳಿಯುವೆವು.

ನಮ್ಮೊಲವು ನಮ್ಮನ್ನು ನಾವಾಗಿಯೇ ಒಪ್ಪಿಕೊಳ್ಳುವುದು.. ಹೊರತು ನಾವಲ್ಲದ ನಮ್ಮನಲ್ಲ.

ಅನುರಾಗ ಆಳವಾದಂತೆ ಅಲ್ಲಿಯ ತನಕ ಆವರಿಸಿದ ಪರದೆಗಳೆಲ್ಲಾ ಕಳಚಿಕೊಳ್ಳುವವು.

 ನಮ್ಮ ಸುತ್ತಲಿನ ಸಮಸ್ಯೆಗಳ ಪರಿವಿಲ್ಲದೆ, ನಾವು ನಮ್ಮತನದ ಸಗ್ಗದಲ್ಲೇ ತೇಲುವೆವು.

ಆತ್ಮ ಗೆಳೆಯ/ತಿ ಎಂದರೆ ನಮ್ಮೊಳಗಿನ ಭಾವಗಳ ಸಹಪಾಲುದಾರ/ಳು, ನಮ್ಮ ಭಾವಗಳ ಗತಿಯನರಿತವನು/ಳು!

ಒಲುಮೆಯ ಭಾವದ ಗಾಳಿಪಟಗಳು ವಿರುದ್ಧ ದಿಕ್ಕಿನಿಂದ ಹೊರಟರೂ  ಮುಗಿಲ ಅಂಗಣದಲಿ ಮಿಲನವಾಗದೇ ಇದ್ದಿತೇ!

 ಆತ್ಮ ಗೆಳೆಯ/ತಿ  ಬದುಕಿಗೆ ಉಸಿರು ನೀಡಿ ಬದುಕಿಸುವವನು/ಳು!
-ಭಾವಾನುವಾದ (ರಿಚಾರ್ಡ್ ಬಾಶ್)


“A soul mate is someone who has locks that fit our keys, and keys to fit our locks. When we feel safe enough to open the locks, our truest selves step out and we can be completely and honestly who we are; we can be loved for who we are and not for who we’re pretending to be. Each unveils the best part of the other. No matter what else goes wrong around us, with that one person we’re safe in our own paradise. Our soul mate is someone who shares our deepest longings, our sense of direction. When we’re two balloons, and together our direction is up, chances are we’ve found the right person. Our soul mate is the one who makes life come to life. ” ― Richard Bach

ನಾವ್ಯಾಕೆ ಹೀಗೆ???



ನಾವ್ಯಾಕೆ ಹೀಗೆ???

ಅದ್ಯಾಕೆ ನಾವು ಯಾವುದೇ ಟೀಕೆಯನ್ನು ಸ್ವೀಕರಿಸಲಾಗದ ಮನಸ್ಥಿತಿಯನ್ನು ಹೊಂದಿದ್ದೇವೆ! ಮಾಧ್ಯಮಗಳಲ್ಲಿ ಒಂದೇ ತುಣುಕು ಪ್ರಕಟವಾಗುವುದೇ ತಡ, ವಾಕ್ ಪ್ರಹಾರವು ಆರಂಭವಾಗುತ್ತದೆ. ಪ್ರತೀಯೊಂದು ಮಾತಿಗೂ ಹಲವು ಆಯಾಮಗಳಿವೆ.. ಆ ಆ ಸಂದರ್ಭಗಳಲ್ಲಿ ಒಂದೇ ಶಬ್ದ ಬೇರೆ ಬೇರೆ ರೂಪಕಗಳನ್ನು ಧರಿಸುತ್ತದೆ! ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ನಾವು ನಮ್ಮ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗಮಾಡಿಕೊಳ್ಳುತ್ತೇವೆ. ನಮ್ಮ ಮಾತು ನಮ್ಮ ಮಟ್ಟವನ್ನು ಎತ್ತಿ ಹಿಡಿದು ತೋರಿಸುತ್ತದೆ ಎಂಬ ಅಂಶವನ್ನು ಕೂಡ ಮರೆತು ವ್ಯಂಗ್ಯವಾಗಿಯೋ ಇಲ್ಲಾ ಮೊನಚಾದ ಶಬ್ದಗಳ ವರ್ಷವನ್ನೇ ಸುರಿಸುತ್ತೇವೆ.
   

ಟೀಕೆಗಳನ್ನು ಸ್ವೀಕರಿಸಿ, ನಮ್ಮ ಸರಿ ತಪ್ಪುಗಳನ್ನು ವಿಮರ್ಶಿಸುವ ಸಾವಧಾನತೆ ನಮಗ್ಯಾರಿಗೂ ಯಾಕೆ ಇಲ್ಲ. ಬೇರೆಯವರ ತಪ್ಪುಗಳಿಗೆ ಕಟು ವಿಮರ್ಶಕರಾಗುವ ಭರದಲ್ಲಿ ನಮ್ಮ ಮಾತಿನ ಮೇಲೆ ಹಿಡಿತಕಳಕೊಂಡು ಅದ್ಯಾಕೆ ಕುಲಗೆಟ್ಟ ಶಬ್ದಗಳನ್ನು ಬಳಸುತ್ತೇವೆ? ಪ್ರತಿಭಟನೆ ಚಂದ ರೀತಿಯಲ್ಲೂ ಮಾಡಬಹುದು.. ವ್ಯಕ್ತಿ ಪೂಜೆ ಮಾಡುವ ಭರದಲ್ಲಿ ಅರಾಜಕೀಯತೆಯನ್ನು ಹರಡುತ್ತಿದ್ದೇವೆ,, ನಾಗರೀಕತೆಯ ಪರಧಿಯನ್ನು ದಾಟಿಬಿಟ್ಟಿದ್ದೇವೆ!!!

ಜೋಗಿಯವರೂ ನನ್ನ ಮನದ ಮಾತು ಹೀಗೆ ಹೇಳ್ತಾರೆ...

ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು.. ಖಂಡಿತ, ಆದರೆ.. !!!

ಪ್ರತಿಭಟಿಸುವುದು ನಮ್ಮ ಮೂಲಭೂತ ಹಕ್ಕು.. ಖಂಡಿತ, ಆದರೆ.. !!!

ಎಂದಿನಂತೆ ಇಂದೂ ಬೆಳಿಗ್ಗೆ ಸರಿಸುಮಾರು  6.30ಕ್ಕೆ ಹಾಲು ತರಲು ಹೋಗುತ್ತಿದ್ದವಳಿಗೆ ನಿತ್ಯದಂತೆ ನಮ್ಮ ಓಣಿಯಿಂದ ಹೊರಬರುವಾಗ ಮೊದಲು ನೋಟಕ್ಕೆ ಸಿಗುವುದೇ ಕಸದ ತೊಟ್ಟಿ. ಒಂದು ಅರ್ಧ ಮೀಟರ್ ದೂರದಲ್ಲಿ ರಿಕ್ಷವೊಂದು ಬಂದು ನಿಂತಿತು.  ನಾನು ನೋಡು ನೋಡುತ್ತಿದ್ದಂತೆ ಆ ಡ್ರೈವರ್ ತನ್ನ ಕಾಲ ಬಳಿಯಲ್ಲಿದ್ದ ಬಾಲ್ದಿಯನ್ನು ಎತ್ತಿ ಅದರಲ್ಲಿದ್ದ ಕಸವನ್ನು ಹೊರಬಿಸುಟ.. ಪ್ಲಾಸ್ಟಿಕ್ ಚೀಲಗಳು, ಅನ್ನದ ಅಗುಳುಗಳು, ಬಹುಶಃ ಚಿಕ್ಕನಿನ ಎಲುಬುಗಳು.. ಎಲ್ಲಾ ಗಾಳಿಯಲ್ಲಿ ಕೆಲವು ಸೆಕಂಡುಗಳು ಹಾರಾಡಿ ಮತ್ತೆ ನೆಲಕ್ಕೆ ಮರಳಿದವು. ಆತ ಬುರ್ ಎಂದು ಮಿಂಚಿನಂತೆ ಅಲ್ಲಿಂದ ಮಾಯವಾದ. ನಾನು ಈ ದೃಶ್ಯವನ್ನು ನೋಡುತ್ತಾ ಸ್ತಬ್ಧಳಾಗಿ ಬಿಟ್ಟೆ. ನಾವು ನಾಗರಿಕರೇ!!! ನಾವು ಪ್ರತಿಭಟಿಸಬೇಕಾಗಿರುವುದು ಇಂತಹುದನ್ನು.. ನನಗದು ಮಾಡಲಾಯಿತೆ? ಅದೇನೂ ನಿರ್ಜನ ರಸ್ತೆಯಾಗಿರಲಿಲ್ಲ.. ವಾಕ್ ಹೋಗುವವರು, ನನ್ನಂತೆ ಹಾಲು ಪೇಪರ್ ತರಲೆಂದು ಬಂದವರೂ ಇದ್ದರು. ಯಾರೂ ಆತನನ್ನು ತಡಿಯಲಿಲ್ಲ.. ಈಮೊದಲೇ ಕಸದ ತೊಟ್ಟಿಗಿಂತ ಅದರ ಸುತ್ತಲೇ ಕಸದ ರಾಶಿ ಹರಡಿತ್ತು.. ಇನ್ನು ಅದು ಪುರಸಭೆಯ ಲಾರಿ ಬರುವವರೆಗೂ ವಾಹನಗಳ ಚಕ್ರಕ್ಕೆ ಸಿಲುಕಿ ಕೆಲವು ಮೀಟರ್ ವರೆಗೂ ಸಾಗುತ್ತದೆ.. ಪರಿಸರದಲ್ಲಿ ಪರಿಮಳ ಹರಡಿಸುತ್ತದೆ!

 ಅರಾಜಕೀಯತೆ ವಿರುದ್ಧದ ದನಿ ಈ ಪ್ರಾಥಮಿಕ ಹಂತದಿಂದಲೇ ಆರಂಭದಿಂದಲೇ ಆಗಬೇಕು.. ಮೊದಲು ನಾವು ನಮ್ಮ ಮನಸ್ಥಿತಿ ಶುದ್ಧವಾಗುತ್ತಲೇ ತನ್ತಾನೇ ಡೆಲ್ಲಿ ಬೆಂಗಳೂರಿನ ಗದ್ದುಗೆಗಳೂ ಶನಿಯ ಗ್ರಹಣದಿಂದ ಹೊರಬರುತ್ತವೆ!


26 September, 2013

ಮುಂಜಾವು ನಗೆ ಹೊನಲು..



-
ಗಣಕಯಂತ್ರದಲ್ಲಿ ಫೋಟೊಶಾಪ್ ನೊಂದಿಗೆ ಯುದ್ಧ ಮಾಡ್ತಿದ್ದೆ..  ನನ್ನ ಹತ್ತಿರ ಕುಳಿತುಕೊಂಡು ಅಮ್ಮ ಅಪ್ಪನ ದೂರು ಹೇಳ್ತಿದ್ರು, ಮಗಳು ಕಿವಿಗೆ ಸಿಕ್ಕಿಸಿಕೊಂಡು ತನ್ನಷ್ಟಕ್ಕೇ ಗುನುಗುತ್ತಿದ್ದಳು. ಮಗ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದ.

’ಪ್ಲೀಸ್ ಪ್ರಥು, ಒಮ್ಮೆ ಇಲ್ಲಿ ಬಾ. ಈ ಲೇಯರ್ ಏನೋ ಪ್ರಾಬ್ಲೆಮ್ ಕೊಡ್ತಿದೆ.. “

ನನ್ನ ಮಗ ಮಗಳದು ವಿಚಿತ್ರ ಹವ್ಯಾಸ! ಇಬ್ಬರಿಗೂ ಹಾಡು ಕೇಳದೇ  ಏನೂ ಮಾಡ್ಲಿಕ್ಕೆ ಗೊತ್ತಾಗೊಲ್ಲ. ಪರೀಕ್ಷೆ ಹೊತ್ತಿಗೂ ಒಂದೇ ಹಾಡನ್ನೇ ಕೇಳ್ತಾ ಕಲಿಯುವುದು.

ಈಗ್ಲೂ ಅಷ್ಟೇ, ಅವನಿಗೆ ನಾನು ಬಾಯಿ ಅಲ್ಲಾಡಿಸೋದು ಮಾತ್ರ ಕಾಣಿಸಿತು.. ಮತ್ತೆ ಕೈ ಬಾಯಿ ಸನ್ನೆ ಮಾಡಿ ಕರೆದೆ. ( ಈಗೀಗ ಸನ್ನೆ ಮಾಡಿ ಮಾತಾಡುವುದರಲ್ಲಿ ಎಕ್ಸ್ ಪರ್ಟ್ ಆಗಿಬಿಟ್ಟಿದ್ದೇನೆ.)

ಎದ್ದು ಬಂದವ ಗಣಕಯಂತ್ರ ನೋಡುತ್ತಲೇ,
“ಅಮ್ಮ, ಅದೇನು ಮಿದುಳು ಫಿಡ್ಜ್ ನೊಳಗೆ ಇಟ್ಟಿದ್ದಿಯಾ”

ಅನ್ನಬೇಕೆ.. ಅಮ್ಮನಿಗೆ ಕೆಂಡದಂತ ಕೋಪ..
“ಏನು ಶಿಕ್ಷಣ ಕೊಟ್ಟಿದಿಯಾ ಮಕ್ಕಳಿಗೆ! ಹಿರಿಯರು ಅಂತಾ ಮರ್ಯಾದೆನೂ ಇಲ್ಲ.. ಕಿವಿಯಿಂದ ಬಿದ್ದವರ ಹಾಗೆ ಮಾತನಾಡುತ್ತಾನೆ.. “

ಯಾರಮೇಲೆ ಅಂತಿರಾ, ಮತ್ಯಾರು ಬಡಪಾಯಿ ನಾನೇ ಎಲ್ಲರಿಗೂ ಕಾಣಿಸೋದು!

ಸಹಸ್ರನಾಮಾರ್ಚನೆ ನಂಗೆ.. ಅವರಿಬ್ಬರೂ ಮತ್ತೊಮ್ಮೆ ಕಿವಿಗೆ ಸಿಕ್ಕಿಸಿಕೊಂಡುಬಿಟ್ರು!

ನನ್ನ ಸೆನ್ಸ್ ಆಫ್ ಹ್ಯೂಮರ್ ಬೆಳಕಿಗೆ ಬಂದದ್ದೇ ಮಗನಿಂದ, ಅವನಿದ್ದಾಗಲೆಲ್ಲ ನಮ್ಮ ಮನೆಯಲ್ಲಿ ನಗೆ ಹೊನಲು. ಆಡಿದ ಮಾತಿನಲ್ಲೆಲ್ಲಾ ಏನಾದರೂ ಕುಟುಕಿ ತೆಗೆದು ನನಗೇ ನಗುಬರುವಂತೆ ಮಾಡುತ್ತಾನೆ..

ಇವನ ಸಹವಾಸ ದೋಷದಿಂದ ಮಗಳು ಶುರುಮಾಡಿದ್ದಾಳೆ..

ಕಾಮನ್ ಸೆನ್ಸ್ ನಲ್ಲೇ ಸೆನ್ಸ್ ಆಫ್ ಹ್ಯೂಮರ್ ಅಡಗಿದೆ...

ದೋಷಗಳನ್ನು ತಮಾಷೆಯಾಗಿಯೇ ಎತ್ತಿ ತೋರಿಸುವ ಜಾಣ್ಮೆ ಇರಬೇಕು.

ನಗುವಿಗೆ ಜಾತಿ ಮತ ಧರ್ಮಗಳ ಬಣ್ಣ ಹಚ್ಚಬಾರದು.

ಮಾನವೀಯತೆಯ ಲೇಪವಿರಬೇಕು.

ಊನವನ್ನು ಹೀನಮಾಡಿ ನಗುವ ಗುಣಕ್ಕಿಂತ ಹೀನಗುಣ ಯಾವುದೂ ಇಲ್ಲ.

ನಗು ಸಾಂಕ್ರಾಮಿಕವಾಗಿ ಹರಡಬೇಕು..

ಮನದ ನೋವು ಹರಿದುಹೋಗಬೇಕು.

ತನ್ನನ್ನೇ  ಹಾಸ್ಯಮಾಡಿಕೊಳ್ಳುವ ಜಾಣ್ಮೆ ಇರುವವನು ಅದನ್ನು ಹೊಟ್ಟೆಪಾಡಿಗೆ ಮಾಡುತ್ತಾನೆ,

ನಗುವ ಗುಣವೂ ಎಲ್ಲರಿಗೂ ದುರ್ಲಭ! ಕೆಲವರಿರ್ತಾರೆ, ಅದೇನೋ ಆಕಾಶ ತಲೆಗೆ ಬಿದ್ದವರ ಜಗತ್ತಿನ ಪ್ರಾಬ್ಲೆಮ್ ಎಲ್ಲಾ ಅವರದೇ ಅನ್ನೋ ಹಾಗೆ ಆಡ್ತಾರೆ, ತಾವೂ ನಗೊಲ್ಲ.. ನಗುವವರಿಗೂ ಅಡ್ಡಗಾಲು ಹಾಕ್ತಾರೆ.

ನಗೆಗಳಲ್ಲೂ ನವ ವಿಧಯಿವೆಯೇ.. ಇದೆ ಅನ್ನುತ್ತೇನೆ..

ನಳಿನಿ ತುಟಿಬಿಚ್ಚದೆ ಶಬ್ದವಿಲ್ಲದೆ.. ಆಹಾ! ಏನು ಚಂದದ ನಗು!

ಅನಿತಾಳದಂತೂ ಮುತ್ತಿನಂತ ಹಲ್ಲು, ಹವಳದಂತಹ ತುಟಿಯನ್ನು ಮೆಲ್ಲನೆ ಅರಳಿಸಿ ಅತೀ ಹೆಚ್ಚೂ ಅಲ್ಲ ಅತೀ ಕಡಿಮೆನೂ ಅಲ್ಲದ ಹೂನಗೆ!

ಅಪರ್ಣಾ, ಏನು ಚಂದ ಸ್ವರ! ರೇಡಿಯೋ ಲೋಕದಲ್ಲಿದ್ದಾಳೆಂದೋ ಏನೋ ನಂಗೆ ಅವಳ ನಗೆ ನೋಡುವುದಕ್ಕಿಂತ ಕೇಳುವುದಕ್ಕೆ ಖುಷಿ!

ಭಾರತಿ ಅಕ್ಕ, ಅವರು ನಮ್ಮಂತೆ ಉದ್ವೇಗದವರಲ್ಲ.. ಹಿಡಿತದಲ್ಲಿಟ್ಟುಕೊಂಡು ಮಲ್ಲಿಗೆಯ ಪರಿಮಳದಂತಹ ನಗೆ ಉಣ್ಣಿಸುವವರು!

ಮತ್ತೆ ನನ್ನ ವೀಣಕ್ಕ.. ಮನಬಿಚ್ಚಿ ನನ್ನಂತೆ ನಗುವವರು! ನಾವಿಬ್ಬರೂ ಸಶಬ್ದ ಹಲ್ಲು ಬಿಟ್ಟು ಯಾರ ಪರಿಯೇ ಇಲ್ಲದೆ ನಗುವ ಜಾತಿಯವರು!

ಸಾರಿ ಮನೋಹರ್, ಅನಿಲ್, ಅವಿನಾಶ್, ಹರ್ಷ, ಮೋಹನ್.. ನೆಕ್ಸ್ ಟೈಮ್ ನಿಮ್ಮ ನಗೆ ಸ್ಟಡಿ ಮಾಡ್ತೇನೆ... ಆಯ್ತಾ!

ಹರಿಯಲಿ ನಗೆ ಬುಗ್ಗೆ ನಮ್ಮ ಮುಂಜಾವಿನಲಿ ಸದಾ!

ನೋವೆಲ್ಲ ಮಾಯವಾಗಿ ನಲಿವು ಜಲಪಾತವಾಗಿ ನಮ್ಮೆಲ್ಲರ ಬದುಕಲಿ ಭೋರ್ಗೆರೆದು ವರ್ಷಪೂರ್ತಿ ಹರಿಯುತ್ತಲೇ ಇರಲಿ!
ಆಮೆನ್!!!




ವಿಷಯ ಒಂದೇ. ಆಯಾಮ ಎರಡು!!!
----------------------------

ಅವನು: ನೋಡೆ, ಅಣ್ಣನ ಫೋನು ಬಂದಿತ್ತು. ಅತ್ತಿಗೆಗೆ ಇನ್ನು ಅಮ್ಮನನ್ನು ನೋಡಲು ಆಗುವುದಿಲ್ಲವಂತೆ. ನೀನು ನೋಡಿಕೊಳ್ತಿಯಾ.. ಇಲ್ಲಾಂದ್ರೆ ಯಾವುದಾದರು ಅನಾಥಾಶ್ರಮದ ಬಗ್ಗೆ ವಿಚಾರಿಸು ಅಂದ್ರು. ಅಮ್ಮನನ್ನು ಕರಕೊಂಡು ಬರ್ಲಾ! ಮಕ್ಕಳು ಇದ್ದವರನ್ನು ಅನಾಥಾಶ್ರಮದವರು ತೆಗೆದುಕೊಳ್ಳಲು ಒಪ್ಪುವುದಿಲ್ಲವಂತೆ, ವಿಚಾರಿಸಿ ನೋಡಿದೆ.

ಅವಳು: ರೀ, ಬುದ್ಧಿ ಗಿದ್ದಿ ಇದೇನ್ರಿ ನಿಮಗೆ? ನನ್ನನ್ನೇ ನನಗೆ ನೋಡಿಕೊಳ್ಳಲು ಕಷ್ಟ.. ಇನ್ನು ನಿಮ್ಮ ಅಮ್ಮನನ್ನು ಯಾರು ನೋಡಿಕೊಳ್ಳುವುದು! ಏನೂ ಅಧಿಕಪ್ರಸಂಗ ಬೇಡ. ಸುಮ್ಮನೆ ಅನಾಥಾಶ್ರಮ ಸೇರಿಸಿ ಬಿಡಿ.

ಅವನು: ಅಲ್ವೇ ನಮ್ಮ ಮನೆ ಎಷ್ಟು ದೊಡ್ಡದಿದೆ.. ಮೂರು ಬೆಡ್ ರೂಮು, ಒಂದರಲ್ಲಿ ಅಮ್ಮ ಇರಬಹುದಲ್ವಾ! ನಿಂಗೆ ಕಷ್ಟ ಆದ್ರೆ ನರ್ಸ್ ಇಟ್ಟುಕೊಳ್ಳೋಣ! ದೇವರ ದಯದಿಂದ ನಮಗ್ಯಾವ ತೊಂದರೆನೂ ಇಲ್ಲವಲ್ಲ.

ಅವಳು: ಅದೆಲ್ಲ ಸಾಧ್ಯವಿಲ್ಲ. ಮನೆಯಲ್ಲಿ ವಾಸನೆ.. ನಿಮಗೇನು ಗೊತ್ತು? ಬೇಕಾದ ಹಾಗೆ ಹೊರಗೆ ಹೋಗಲಿಕ್ಕಾಗೊಲ್ಲ. ನನ್ನ ಮಾತನ್ನು ಮೀರಿ ಅಮ್ಮನನ್ನು ಕರಕೊಂಡು ಬಂದ್ರಿ ಅಂದ್ರೆ, ಮತ್ತೆ ನಾನೀ ಮನೆಯಲ್ಲಿ ಇರೊಲ್ಲ, ಅಷ್ಟೇ!”

ಗಪಚುಪ್ ಆತ! ಕೊನೆಗೂ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇದ್ದೂ..  ಅನಾಥಳಂತೆ ಆಶ್ರಮ ಸೇರಿದ ಕೆಲವೇ ತಿಂಗಳಲ್ಲಿ ಪ್ರಾಣಬಿಟ್ಟಿತು ಆ ಹಿರಿಯ ಜೀವ!

-------------------------------------------------------

ಇವಳು: ಅಲ್ರೀ, ಎಷ್ಟು ಮಾತಾಡೊದು ಅದು? ಫೋನು ಬಿಲ್ಲು ಎಷ್ಟು ಆಯಿತು ಅಂತ ಗೊತ್ತಾ? ಹೋಗ್ಲಿ ಅಂದ್ರೆ ಜತೆ ಅಮ್ಮ ನೀನು ಯಾವಾಗ ಬರ್ತಿಯಾ ಅಂತ ಗೋಗೆರೆಯುತಿರಿ!

ಇವನು: ಅಲ್ವೇ, ನ್ಯಾಯವಾಗಿ ಅವರು ನಮ್ಮ ಜತೆಲೇ ಇರಬೇಕಾಗಿತ್ತು. ನನ್ನ ವಿದ್ಯಾಭ್ಯಾಸಕ್ಕಾಗಿ ಅಮ್ಮ ಎಷ್ಟು ಕಷ್ಟ ಪಟ್ಟಿದ್ದಾರೆಂದು ನನಗೇ ಗೊತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗಲೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ನನ್ನ ಬಳಿಯೇ ಕೂತುಕೊಳ್ತಿದ್ದರು. ಇವತ್ತು ನನಗಿರುವ ಹೆಸರು, ಸಂಪತ್ತು ಎಲ್ಲ ಅವರ ತ್ಯಾಗದ ಫಲ!
ಅಷ್ಟು ಕರೆದ ಮೇಲೆ ಕೊನೆಗೂ ಬರಲೊಪ್ಪಿದ್ದಾರೆ. ಅವರಿಗಾಗಿ ರೂಮನ್ನು ತಯಾರುಮಾಡಬೇಕು!

ಇವಳು: ಅಯ್ಯೊಯ್ಯೋ.. ಒಪ್ಪಿಯೇ ಬಿಟ್ಟರೆ! ನಂಗಾಗೊಲ್ಲ. ಅವರಿದ್ದರೆ ನನಗೆ ಫ್ರೀಡಂ ಇರೊಲ್ಲ. ಬೇಡರಿ, ಏನಾದರೂ ನೆವನ ಹೇಳಿ!

ಇವನು: ಇಲ್ವೇ, ನಿಂಗೇನೂ ತೊಂದರೆ ಆಗೊಲ್ಲ.. ಅಮ್ಮ ಹೊಂದಿಕೊಂಡುಹೋಗುವವರು. ಅಂಧವಿಶ್ವಾಸ, ವಿಪರೀತ ಮಡಿಗಿಡಿಯಿಲ್ಲ ಅವರಿಗೆ. ನನ್ನೀ ಉನ್ನತ ವಿಚಾರಗಳು ಅವರ ದೇಣಿಗೆ ತಾನೆ, ಅದರಿಂದಲೇ ತಾನೆ ನೀನು ನನ್ನನ್ನು ಮೆಚ್ಚಿದ್ದು!

ಇವಳು: ಅದೆಲ್ಲಾ ಹೇಳಲು ಕೇಳಲು ಚಂದ! ನೋಡಿ, ಸುಮ್ನೆ ನನ್ನ ಮಾತು ಕೇಳಿ.. ಇಲ್ಲಾಂದ್ರೆ!

ಇವನು: ನೋಡು ಅಮ್ಮ ಬರ್ತಾರೆ ಮತ್ತು ನಮ್ಮ ಜತೆ ನಿಲ್ತಾರೆ. ಮತ್ತೆ ಬೇರೆ ಮಾತಿಲ್ಲ. ನಿಂಗೆ ಕಷ್ಟವಾದ್ರೆ ನೀನು ಸ್ವತಂತ್ರಳು.. ನಿನ್ನ ತವರು ಮನೆಗೆ ನಾನೇ ಬಿಟ್ಟು ಬರ್ತೇನೆ. ಇನ್ನು ಚರ್ಚೆ ಬೇಡ!

ಅಮ್ಮ ಬಂದ್ರು ಇವನ ಮನೆಗೆ. ಬೇರೆ ಉಪಾಯವಿಲ್ಲದೆ ಅತ್ತೆ ಜತೆ ಹೊಂದಿಕೊಂಡಳು ಇವಳು!  ಮಗ, ಸೊಸೆ ಮೊಮ್ಮಕ್ಕಳೊಡನೆ ಹೊಸದಾಗಿ ಹಾಕಿಸಿದ ಹಲ್ಲು ಸೆಟ್ಟು ಎಲ್ಲರಿಗೂ ತೋರಿಸುತ್ತಾ ನಗುತ್ತಿದ್ದಾರೆ ಆ ಅಮ್ಮ!  ಬಹುಶಃ ನೂರು ವರ್ಷ ಬದುಕಬಹುದು!




25 September, 2013

ಆರ್ದ್ರ ಮನದ ಮಾತು..

ಮನವನೊಮ್ಮೆ  ಬತ್ತಿಯನೊಮ್ಮೆ
ಉರಿಸುತ್ತಾ ಹನಿಗೂಡಿತು ಕಣ್ಣು
ಇರುಳ ಮಡಿಲಲಿ ನೆನಪುಗಳು
ಒದ್ದೆ ದಿಂಬು..

ಜಗವೆಲ್ಲ ಮಲಗಿರಲು
ಕಿಟಿಕಿಯಾಚೆ ನಗುತಿಹ
ಚಂದಿರನಲ್ಲಿ ಕಂಡೆ ಬಿಂಬ
ಒದ್ದೆ ಗಲ್ಲ...

24 September, 2013

ಶಾಯರಿ-4

ನನ್ನೊಲವೆ,
ನೂರಾರು ಹಾರೈಕೆಗಳ ನಡುವೆ ಇರಲಿ ನನ್ನದೂ ಒಂದು ನಿನಗಾಗಿ
ನಿನ್ನ ಪಾಲಿಗೆ ನಲಿವು ಸಂತಸ ಸದಾ ಇರಲೆಂದೇ ಬೇಡಿಕೆ ಅವನಲಿ
ನಿನ್ನ ಮನ ಅರಳಿ ಮುಖದಲಿ ನಗು ಹೊಮ್ಮಿದಾಗಲೆಲ್ಲ
ತಿಳಿದುಕೊಳ್ಳುವೆ ನಾ ನನ್ನ ಹಾರೈಕೆಯ ಫಲವಿದೆಂದು!

-ಧನ್ಯವಾದ ಮಿತ್ರ ಶಾಯರಿಗಾಗಿ (ಭಾವಾನುವಾದ)

23 September, 2013

ಸರಿ-ತಪ್ಪು.. ಮನವಾಗದಿರಲಿ ಗೊಂದಲಗಳ ಗೂಡು!

ಒಲವೇ,

ಒಪ್ಪು ತಪ್ಪುಗಳ ಜಿಜ್ಞಾಸೆಗಳು
ಇರಲಪ್ಪ ಬುದ್ಧಿಜೀವಿಗಳಿಗೆ
ನಾ ಮಾಡಿದೆಲ್ಲವು ಒಪ್ಪು
ಅವನು ಮಾಡಿದೆಲ್ಲವು ತಪ್ಪು
ಲೋಕವೇ ಗೊಂದಲದ ಗೂಡು

ಬೆಳಕು ಕತ್ತಲೆಗಳಂತೆ ಸ್ಪಷ್ಟವೂ ಅಲ್ಲ
ಸರಿ ತಪ್ಪುಗಳನ್ನಳೆಯುವುದು ಸುಲಭವಲ್ಲ
’ನಾನು ನನಗೆ’ ಸ್ವಾರ್ಥಗಳೆಡೆಯಲಿ
ನಲುಗಿ ತಪ್ಪು ಒಪ್ಪಾಗುವುದು

ತ್ಯಾಗದ ನೇಣಿಗೆ ಸಿಲುಕಿದ
ಸರಿಯೂ ತಪ್ಪಾಗುವುದು
ಹಲವು ಕಣ್ಣುಗಳಲಿ
ನ್ಯಾಯ-ಅನ್ಯಾಯ; ಧರ್ಮ-ಅಧರ್ಮ
ಕೂದಲೆಳೆಯ ವ್ಯತ್ಯಾಸ

ಯುಗ ಯುಗಗಳಿಂದಲೂ
ಸರಿ ತಪ್ಪುಗಳ ವ್ಯಾಖ್ಯಾನ
ಹಿಡಿಯಲಾಗಿದೆಯೇ..
ಘಳಿಗೆ ಘಳಿಗೆಗೂ ಬದಲಾಗುತ್ತ
ಹೊಸ ರೂಪ, ಹೊಸ ಭಾಷ್ಯ

ಹೆಜ್ಜೆ ಹೆಜ್ಜೆಗೂ ಅಳುಕು
ಮಾತು-ನಡೆಯಲ್ಲಿ ನಡುಕ
ಸಾಕಪ್ಪಾ ಸಾಕು
ಅಂತರಂಗಕ್ಕಿನ್ನಿಲ್ಲ ಗೊಂದಲ
ಮನವಿಲ್ಲ ಚಂಚಲ

ಆ ಆ ಘಳಿಗೆಯಲಿ ಬಂದದನು
ಚಿಂತಿಸಿ ಮಂಥಿಸಿ
ಇಟ್ಟ ಹೆಜ್ಜೆಯನು ಹಿಂದಿಡದೆ
ಅವರಿವರ ನೋಯಿಸದೆ
ನಾನೂ ನೋಯದೆ ನಡೆಯಬೇಕಿನ್ನು

ಕಾಲನೇ,  ನೀನೇ ನಿರ್ಣಯಿಸು
ಈ ಒಲವಿನ ಮರುಳಳಿಗೆ
ಕಾದಿರುವುದು
ದುರ್ಗತಿಯೋ ಸದ್ಗತಿಯೋ..

22 September, 2013

-
ಒಪ್ಪಲಿಲ್ಲ ಅವನು ಆಗಲು ನನ್ನ ದೊರೆ

ಆಗುವೆನಂತೆ ಅವನಿಗೆ ನಾನು ಹೊರೆ!-

21 September, 2013

ಶಾಯರಿ.. ಭಾವಾನುವಾದ-3

-
ನಾ

ಕೇಳಿದ್ದೇನೆನಲ್ಲ

ದೊರೆಯುವುದೆಲ್ಲವು

ಪ್ರಾರ್ಥಿಸುವುದರಿಂದ

ಆದರೂ

ಅದ್ಯಾಕೆ

ಕೊಡನವನು

ನಾ

ಬೇಡಿದುದನೆಲ್ಲ!
ಶಾಯರಿ..
Sunte hi ki

Mil jaati hai

Sab kuch duva se

Woh kyon

Nahi milta jo

manga tha khuda se

ಶಾಯರಿ.. ಭಾವಾನುವಾದ! -2

ಹಂಬಲಿಸಿ ಕಾದವನ ಒಲವು ದೊರೆಯಲಿಲ್ಲ

ವರುಷಗಳಿಂದ ಕಾದರೂ ಜೊತೆ ಸಿಗಲಿಲ್ಲ

ವಿಚಿತ್ರವಿದು ಒಲವಿನಾಟ

ಯಾರಿಗೋ ನಾ ದೊರೆಯಲಿಲ್ಲ


ಮತ್ತ್ಯಾರೋ ನನಗೆ ಸಿಗಲಿಲ್ಲ.. 


ಶಾಯರಿ:

Jiski aarzu thi usika hi pyar na mila.

 Barso jiska intazar kiya usika hi sath na mila.

Ajib khel hai ye mohabbt ka,

 kisiko hum na mile aur koi hume na mila..

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...