ನಾವಿಬ್ಬರೂ ಅಂದು
ಹೊಳೆಯ ದಡದಲಿ ನಿಂದು
ಮರಳುಮನೆಗಳ ಕಟ್ಟಿ
ಆಟವಾಡಿದ ದಿವಸ
ನೆನಪಿದೆಯೆ ನನಗೆ?
ಮುಂಗಾರುಮಳೆ ಹೊಯ್ದು
ನಾವಿಬ್ಬರೂ ತೊಯ್ದು
ನಿಂತಾಗ ಮರಳಮನೆ
ಕೊಚ್ಚಿಹೋದ ದಿವಸ
ನೆನಪಿದೆಯೆ ನಿನಗೆ?
ಈ ಮರುಳು ನನಗೆಂದು
ಆ ಮರುಳು ತನಗೆಂದು
ಹೊಡೆದಾಡಿ ಜತೆ ಬಿಟ್ಟು
ಆಟವಾಡಿದ ದಿವಸ
ನೆನಪಿದೆಯೆ ನಿನಗೆ?
ಮರುದಿವಸ ಒಂದಾಗಿ
ಮರುಳು ಮನೆಗಳ ಕಟ್ಟಿ
ಹಾಡಿಕುಣಿದಾ ದಿವಸ
ನೆನಪಿದೆಯೆ ನಿನಗೆ?
ಅಂದು ಹರಿದಾ ಹೊಳೆಯೆ
ಇಂದಿಗೂ ಹರಿಯುತಿದೆ:
ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ,
ಬಾಲ್ಯದುದ್ಯಾನವನು ಮರಳಿ ಕಟ್ಟೋಣ!
-
ಡಾ|| ಜಿ. ಎಸ್. ಶಿವರುದ್ರಪ್ಪ
-
ಅಶ್ರು ತರ್ಪಣದೊಂದಿಗೆ ನನ್ನ ನೆಚ್ಚಿನ ಕವಿಗೆ ನಮನ!
No comments:
Post a Comment