ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 December, 2013

ಒಲವು- ಓಶೋ ಹೇಳಿದರು, ನಾ ಬರೆದೆ ನನಗರ್ಥವಾದಂತೆ!

ಕಲ್ಲುಗಳಲ್ಲ ಭಾವಗಳು..  ಗುಲಾಬಿಯ ಪಕಳೆಗಳಂತೆ!
-------------------------------------------

ಒಲವು ಮೂರು ಪದರಗಳಲ್ಲೂ ಹರಡಬಹುದು- ಬಾಹ್ಯದೇಹ, ಅಂತರಂಗ ಅಥವಾ ಮನಸ್ಸು, ಒಳಾತ್ಮ(ತನ್ನಿರುವಿಕೆ)!

ಬಾಹ್ಯ ದೇಹಕ್ಕೆ ಒಲವು ಬರೇ ಕಾಮ.. ಇದನ್ನೇ ಒಲವೆಂದು  99% ಲೌಕಿಕವಾಗಿ ತಿಳಿಯಲಾಗಿದೆ!

ಬರೇ 1% ಇನ್ನೂ ಒಳಗೆ ತೆವಳಿ ನಡೆಯುತ್ತಾರೆ.  ಕಲಾವಿದರು, ಕವಿಗಳು, ಗಾಯಕರು, ನೃತ್ಯ ಪರಾಂಗತರು.. ಬಾಹ್ಯ ಇಂದ್ರಿಯಗಳನ್ನು ಮೀರಿ ಒಳ ಅಂತರಂಗದ ಮೂಲಕ ಒಲವಿನ ಇರುವಿಕೆಯ ಅನುಭೂತಿಯನ್ನು ಭೋಗಿಸುವರು. ಇವರೆಲ್ಲ ಚಿಂತಕರಲ್ಲ.. ಅನುಭಾವಿಗಳು. ಇವರ ಚಿಂತನೆಯ ಸ್ತರ ಮೇಲ್ಮಟ್ಟದ್ದು.. ಮಿದುಳಿಗಿಂತ ಹೃದಯ, ಮನಸು ಸ್ಪಂದಿಸುತ್ತದೆ.. ಅಲ್ಲದೆ ಒಲವಿನ ತರಂಗಗಳನ್ನು ಸ್ವೀಕರಿಸಲೂ ಕಳುಹಿಸಲೂ ಶಕ್ತ! ಬಹಳ ಗಹನವಾಗಿ ಒಳಗಿಳಿದವರಿಗೆ ಮಾತ್ರ ಶಕ್ಯವದು!

ಇಂತಹ ಪದರದೊಳಗೆ ಇಳಿಯುವಿಕೆ ಅನೇಕರಿಗ್ಯಾಕೆ ಸಾಧ್ಯವಿಲ್ಲ?

 ಒಲವು ಅತ್ಯಂತ ಚೆಲುವ/ಚೆಲುವೆ! ಹ್ಮೂಂ, ಸೌಂದರ್ಯವಿದ್ದಲ್ಲಿ ನಾಜೂಕುತನವಿದ್ದೇ ಇರುತ್ತದೆ.  ಅದು ಲೋಹವಲ್ಲವಲ್ಲ.. ನಾಜೂಕು ಗಾಜು. ಒಡೆದರೆ ಚೂರು ಚೂರು, ಮತ್ತೆ ಜೋಡಿಸಿದರೂ ಗಾಯಗಳು ಹಾಗೇ ಕಾಣುತ್ತವೆ.. 

ಒಲವು ದಾಸ್ಯತನವನ್ನು ಬೇಡುತ್ತದೆ, ಪೂರ್ಣ ಅರ್ಪಣೆ ಅಗತ್ಯ, ಅಹಂಮಿಕೆಯ ಲವಲೇಶವೂ ಇರಬಾರದು, ಐಕ್ಯವಾಗಬೇಕು!

ಈ ಹೆದರಿಕೆಯೇ ನಮ್ಮನ್ನೆಲ್ಲಾ ಕಾಡುತ್ತದೆ.. ಅಂತರಂಗದಲಿ ಒಲವಿನ ಹರಿವು ಹರಿಯದಂತೆ ಇಂದ್ರಿಯಗಳು ಅಣೆಕಟ್ಟು ಕಟ್ಟಿಬಿಡುತ್ತೇವೆ!  ಎಲ್ಲಿ ತನ್ನತನ ಕಳೆದುಕೊಳ್ಳುವೆವೆಯೋ ಎಂಬ ಭಯ ಕಾಡುತ್ತದೆ.. ಅಹಂಮಿಕೆಯು ಅಡ್ಡಬರುತ್ತದೆ!

ಒಳಪದರವನ್ನು ಒಲವು ಆವರಿಸಿದಂತೆಲ್ಲಾ ನವಿರುಗಂಪನ.. ಅಲೌಕಿಕ ಸೌಂದರ್ಯದ ಜತೆ ಬದಲಾವಣೆಗಳ ಭಯ.. ಅದು ಲೋಹವಲ್ಲವಲ್ಲ.. ಗುಲಾಬಿಯ ನಾಜೂಕು ಪಕಳೆ! ಒಂದಿಷ್ಟು ಜೋರಾಗಿ ಒತ್ತಿದರೂ ಛಿದ್ರ!

ಕವಿಗಳು, ಕಲಾವಿದರು ಒಲವಿಗೆ ಸೋಲುತ್ತಾರೆ.. ಹೆಚ್ಚು ಕಡಿಮೆ ಪ್ರತೀದಿನ ಪ್ರೀತಿಸುತ್ತಾರೆ. ಅವರ ಒಲವು ಅವತ್ತಿಗೆ ಅರಳಿದ ಗುಲಾಬಿಯಂತೆ.. ಭಾನುವಿನ ಕಿರಣ ಪ್ರಕರವಾದಂತೆ ಮೆಲ್ಲಮೆಲ್ಲನೆ ಇಬ್ಬನಿಯ ಹನಿಯನ್ನತ್ತ ಒಗೆದು, ಒಂದೊಂದೆ ಪಕಳೆಯನ್ನು ಅರಳಿಸಿ, ತನ್ನ ಮಕರಂದದ ಹೊದಿಕೆಯನ್ನು ಎಳೆವ ದುಂಬಿಗಳತ್ತ ಸ್ವಾಗತದ ಮುಗುಳ್ನಗೆ ಚೆಲ್ಲಿ, ತನ್ನ ಸೊಗಸಿನಿಂದ ವೀಕ್ಷಕರ ತನು ಮನಗಳಿಗೆ ಧನ್ಯತೆ ಉಣಿಸಿ, ಭಾನುವಿನ ನಿಷ್ಕ್ರಮಣವಾದಂತೆ ಕೊನೆಯುಸಿರು ಎಳೆವ ಹೂವಿನಂತೆ ಇವರ ಒಲವು. 

ಒಲವು ಕ್ಷಣಿಕವಾಗಿ ಅನುಭೂತಿ ಉಣಿಸಿ ಮಾಯವಾಗುತ್ತದೆ, ಮತ್ತೆ ಮತ್ತೊಂದು ರೂಪದಲಿ ಸೆಳೆಯುತ್ತದೆ.. 

 ರೋಮಗಳನು ಎಬ್ಬಿಸಿ ನವಿರೇಳಿಸುವ, ಕಂಪಿನ ತಂಗಾಳಿ ಇದ್ದಕ್ಕಿದ್ದಂತೆ ನಾವಿದ್ದಲ್ಲಿಗೆ ಬಂದು ಮೈಮನದೊಳಗೆಲ್ಲ ಪಸರಿಸಿ.. ತಟ್ಟನೆ ಮಾಯವಾದರೆ ಹೇಗೆ! ಆ ಕ್ಷಣದ ಅನುಭವ ಮಾತ್ರ ನಮ್ಮೊಳಗೆ ಬುತ್ತಿಯಂತೆ ಉಳಿಯುತ್ತದೆ..

ಪ್ರತೀ ಬದಲಾಗುವ ಘಳಿಗೆ, ಬದಲಾಗುವ ಬದುಕು.. ಸ್ವೀಕರಿಸಲು ಸಾಧ್ಯವಾಗುವುದೇ.. ಒಲವು ಕ್ಷಣಿಕ.. ಹಾಗೆಯೇ ಶಾಶ್ವತವೂ, ಅದರ ಅನುಭೂತಿ.. ಒಲವಿನ ಜತೆ ಬರುವ ಏರುಪೇರುಗಳನು ಸ್ವೀಕರಿಸುವ ಸಾಮರ್ಥ್ಯ ಯಾರಿಗಿದೆ!

ಹೀಗೆ ಬಂದು ಹಾಗೆ ಹೋಗುವ ಒಲವು.. ಹ್ಮೂಂ, ಮತ್ತೆ ಬರುವುದು ಹೊಸ ರೂಪದಿ..


 ಮೂರನೆಯ ಅನುಭೂತಿ.. 

ಒಳಾತ್ಮದಲಿ ಒಲವಿನ ಬೇರು ಎಲ್ಲೆಡೆ ಹಬ್ಬುತ್ತದೆ, ಹಗಲು ರಾತ್ರಿ, ಮಳೆಗಾಲ, ಚಳಿಗಾಲ, ಬೇಸಗೆ.. ಹ್ಮೂಂ, ಕಾಲಗಳ ಮಿತಿಯನ್ನು ಮೀರಿ ಆತ್ಮವನ್ನು ಆವರಿಸುತ್ತದೆ. ಅಲ್ಲಿ ಪೂರ್ಣ ಸಂಗಮ. ನಂತರವೇ ಆ ಜೀವ ಒಲವನ್ನು ಬಾಹ್ಯ ಒಳ ಎರಡೂ ಇಂದ್ರಿಯಗಳ ಮೂಲಕ ಅನುಭವಿಸುತ್ತದೆ! 

ನೋವಿನಲ್ಲೂ ನಲಿವು, ಆರೋಗ್ಯ ಭಾಗ್ಯ, ಹೊಸ ಚೈತನ್ಯ, ಮನವೆಲ್ಲ ಹತ್ತಿಯಷ್ಟು ಹಗುರ, ಹೊರಜಗತ್ತಿನ ಅಪವಾದ, ನೋವಿಗಳಿಗೆಲ್ಲ ಬರೇ ಮುಗುಳ್ನಗೆಯ ಪ್ರತಿಕ್ರಿಯೆ! ನಿಧಾನವಾಗಿ ಈ ಬದಲಾವಣೆಗಳು ಕಾಣಿಸುತ್ತವೆ!

ಜಗತ್ತಿನ ಆಗುಹೋಗುಗಳಲಿ ಬರೇ ದೇಹ ತನ್ನ ಪಾತ್ರ ಮಾಡುತ್ತದೆ, ಆತ್ಮ ತನ್ನ ಒಲವಿನ ಸಂಗದಲಿ ತನ್ಮಯವಾಗಿ ಅಲೌಕಿಕ ಆನಂದದಲಿ ತೇಲಾಡುತ್ತದೆ!

ಜಗತ್ತಿನ ಆಗುಹೋಗುಗಳ ನಿರ್ಣಾಯಕನ ಒಲುಮೆಯ ಧನ್ಯತೆ!

 ಎಲ್ಲಾ ದೈಹಿಕ ಭಾವಗಳನು ಮೀರಿ.. ಅಲೌಕಿಕ ಅನುಭೂತಿ, ಇಂತಹ ಭಾವವೇ ನಿಜವಾದ ಒಲುಮೆ!
-      -ಓಶೋ (ನನಗರ್ಥವಾದಂತೆ)No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...