ನೀ ಎಲ್ಲೊಯ್ಯುತ್ತಿರುವಿ ಹೀಗೆ ಕಣ್ಕಟ್ಟಿ ಒಲವೇ.. ಉತ್ತರವಿಲ್ಲ
ಸ್ಪರ್ಶದ ಅರಿವಾಗುತಿದೆ.. ಬರೇ ಗಾಳಿ ಸೋಂಕಿದಂತೆ
ಬೆರಳುಗಳಿಗೆ ಬೆರಳುಗಳು ಬೆಸೆದಿವೆ.. ಆದರೂ
ಸ್ವತಂತ್ರವಾಗಿವೆ
ತಣ್ಣನೆಯ ಹುಲ್ಲು ಸ್ಪರ್ಶ ನಗ್ನ ಪಾದಗಳಿಗೆ..
ಹಿತವಾಗಿದೆ
ನೀರು ಧೋ ಧುಮುಕುವ ಶಬ್ದ ಕಿವಿಗಳಿಗೆ ಸಂಗೀತ..
ಸುಖವಾಗಿದೆ
ಜುಳು ಜುಳು ನಾದ ಲಹರಿ.. ಇಂಪಾಗಿದೆ
ಕೈ ಚಾಚಿ ಸ್ಪರ್ಶ ಸುಖಕಾಗಿ ಒದ್ದಾಟ.. ಕಷ್ಟವಾಗಿದೆ..
ಮರಳುತಿರುವ ದಿನಕರ ಹದವಾದ ಬೆಳಕು ಮೈಗೆ.. ಹಿತಾನುಭವವಾಗಿದೆ
ಮರಿಗಳಿಗೆ ಉಣಿಸುತಿರುವ ಟುವ್ವಿ ಟುವ್ವಿ ರಾಗ ಭಾವ..
ವಾತ್ಸಲ್ಯ ಉಕ್ಕುತಿದೆ
ಕಟ್ಟಿದ ಗಂಟು ಕಳಚಿತು.. ಮುಟ್ಟದೇ
ಚುಚ್ಚಿತು ಕೆಂಬಣ್ಣದ ಕಿರಣ.. ನೋಯಿಸದೇ
ಕಲ್ಲು ಬಂಡೆಗಳ ಪಾಚಿ ಕರೆಯಿತು.. ಕೈಚಾಚದೇ
ಜಾರಿ ಬಿಡುವ ತವಕ.. ಕಾಲಿಡದೇ
ಸ್ಪಟಿಕದಂತಿರುವ ನೀರಿನಲಿ ಆಡಲು.. ಮೀನಾಗದೇ
ಅರೇ, ಎಲ್ಲಿ ಒಲವು!
ಯಾರೂ ಇಲ್ಲ.. ಒಂಟಿ ನಾನೀಗ ಅಲ್ಲಿ!
ಕತ್ತಲಾಗುವುದು ಕ್ಷಣಗಳಲಿ..
ಕ್ರೂರಪ್ರಾಣಿಗಳು ಇರುವವಲ್ಲಿ..
ಇದ್ದಬದ್ದ ಬೆಳಕನು ಮುಚ್ಚುವಂತೆ ಹಬ್ಬಿತು ಧೂಳಿ
ಸಲಗ ಪರಿವಾರ ಧಾವಿಸುತಿದೆ ನನ್ನತ್ತಲೇ
ಓಹೋ, ಕೊನೆಯೀಗ..
ಕಣ್ಣವೆಗಳು ಮುಚ್ಚಿದವು.. ಕೈಗಳು ಜೋಡಿಸಿದವು
ಬಾಯಿ ಏನೋ ಗುಣುಗುಣಿಸಿತೋ..
ಎಲ್ಲವೂ ಶಾಂತ ಮರುಕ್ಷಣದಲಿ
ಇದು ನಾಕವಿರಬೇಕು ಎಂದರೆ
ಮರಿ ಕರಿ.. ಸೊಂಡಿಲ ಮುಖ ಸವರುವ ಪರಿ..
ನಕ್ಕು ಮುದ್ದುಗೈದೆ..
ಸುಖದ ಅನುಭೂತಿ ಉಣಲೆಂದು ಕಣ್ಮುಚ್ಚಿದರೆ
“ಚಾ ಮಾಡಿಕೊಡು”
ಮಗಳ ನುಡಿ ಕಣ್ದೆರೆಸಬೇಕೆ!!!
(ಅಪರಾಹ್ನದ ಸುಖ ನಿದ್ದೆಯಲಿ ಕಂಡ ಸ್ವಪ್ನ)
No comments:
Post a Comment