“ರಾಧೆ!”
ಮನೆಯ ತುಂಬಾ ದೀಪಗಳು ಪ್ರಜ್ವಲಿಸುತ್ತಿದ್ದವು! ಮಾವಿನ
ತೋರಣ, ಹೂವಿನ ಅಲಂಕಾರ.. ವರುಷಗಳಿಂದ ಧೂಳು, ಬಲೆಯಲ್ಲಿ ಮುಳುಗಿ ಹೋದ ಮನೆಯೇ ಇದು!!! ಗೋಪಿಗೆ
ಅಚ್ಚರಿ.
“ರಾಧೆ.. “
ಕೋಣೆಯಿಂದ ದನಿ ಕೇಳಿಸಿತು..
“ಈ ಕುಬ್ಬಸದ ದಾರವನ್ನು ಕಟ್ಟಿಬಿಡೆ.. ಹೊತ್ತಾಗುತ್ತದೆ!”
ಒಳಹೋದ ಗೋಪಿಯ ಬಾಯಿ ಇಷ್ಟಗಲ ತೆರೆಯಿತು..
’ಅರೇ, ಅದೆಷ್ಟು ಕಾಲವಾಗಿತ್ತು ಇವಳು ತುರುಬನ್ನು
ಕಟ್ಟಿ! ಮುಖ ನೋಡು ಹೇಗೆ ನಳನಳಿಸುತ್ತಿದೆ, ನೆತ್ತಿಯ ಮೇಲೆ ಕೆಂಪು ಕಲ್ಲಿನ ಜಾಲರಿ
ನೇತಾಡುತ್ತಿದೆ, ಕಿವಿಯ ಝಮುಕಿ ಗಲ್ಲಕೆ ಬಡಿಯುತ್ತ ಜೂಲಾಡುತ್ತಿದೆ.. ನಾಸಿಕದ ಬೊಟ್ಟಿನ ಬೆಳಕು
ಕಣ್ಣಲ್ಲಿ ಪ್ರತಿಫಲಿಸುತಿದೆ, ಮುತ್ತಿನ ಸರ ಕುತ್ತಿಗೆಯನಪ್ಪಿ ಕುಳಿತಿದೆ, ಹೊನ್ನ ಬಣ್ಣದ ಸೆರಗು
ಲಾವಣ್ಯವನು ಮರೆಮಾರಚಲು ಯತ್ನಿಸಿ ಸೋತಿದೆ.
ಗಾಜಿನ ಬಳೆಯ ಗಲ್ ಗಲ್ ನಾದ ಕೋಣೆಯಲಿ ಹರಡಿದೆ. ಭಾರದ
ಬೆಳ್ಳಿ ಗೆಜ್ಜೆ ಅಲಂಕರಿಸಿದ ಪಾದಕೆ ಹಚ್ಚಿದ ಕೆಂಪು ಮದರಂಗಿ ಏನೋ ಗುಟ್ಟನು ಹೇಳುವಂತಿದೆ..
“ರಾಧೆ, ಏನಿದು? ಬೆಳಗಿನ ನಿನ್ನ ಗೋಳು ಕೇಳಿ ಅತ್ತೆ
ನಿನ್ನನ್ನು ಸಮಾಧಾನ ಪಡಿಸೆಂದು ಕಳುಹಿಸಿದರೆ, ಇಲ್ಲಿ ನೀನು.. “
ರಾಧೆಯ ರಂಗು ಹಚ್ಚಿದ ತುಟಿ ಲಜ್ಜೆ ತುಂಬಿದ ನಸುನಗೆ
ಚೆಲ್ಲಿತು..
“ಮಾಧವನು ಬರುವನಂತೆ, ಕರೆ ಕಳುಹಿಸಿದವನು.. ನೋಡು ಆ ಹಂಸ
ತಂದಿತು ಸಂದೇಶ!
ಯಮುನಾ ನದಿ ತೀರದಲಿ ಕಾದಿರುವನಂತೆ, ನನಗಾಗಿ, ಕೇವಲ
ನನಗಾಗಿ! “
’ಹುಚ್ಚಿಯಾಗಿಹಳು ಇವಳು, ಕೃಷ್ಣನೀಗಾಗಲೇ ನಮ್ಮನ್ನೆಲ್ಲ
ಮರೆತಿರುವನು, ದೇವಲೋಕದ ಸುಂದರಿಯರನ್ನು ಮೀರಿದ ಅಷ್ಟ ಮಹಿಷಿಯರ ಮೋಹಕ ಪತಿಯವನು!’
ಅವಳತ್ತ ನೋಡದೇ ರಾಧೆ ಸೆರಗು ಬೀಸಿಕೊಂಡು
ಹೊರಧಾವಿಸಿದಳು!
ಚಿಂತಾಕ್ರಾಂತಳಾದ ಗೋಪಿ ಮತ್ತಿಷ್ಟು ಗೋಪಿಯರ ಜತೆ ಯಮುನಾ
ನದಿಯತ್ತ ನಡೆದಳು..
ಹುಣ್ಣಿಮೆ ಚಂದಿರ ಬೆಳಗಿನಲ್ಲಿ ಯಮುನೆ ಝಳ ಝಳ ನಿನಾದ..
ರಾಧೆ ಕೋಲಾಟದ ಅಭಿನಯ ಮಾಡುತ್ತಿದಾಳೆ.. ಒಂದೇ ಕೋಲನು ಗಾಳಿಯಲ್ಲಿ ಬೀಸುತ್ತಿದ್ದರೂ ರಾತ್ರಿಯ ನೀರವತೆಯಲ್ಲಿ
ಎರಡು ಕೋಲುಗಳ ಬಡಿತದ ನಾದ ರಾಧೆಯ ಗೆಜ್ಜೆಯ ಶಬ್ದದೊಂದಿಗೆ ಮಿಳಿತವಾಗಿ ಕಿವಿಗಳಿಗೆ ಹಿತಾನುಭವ
ಕೊಡುತಿದ್ದವು.
ಗೋಪಿಯರೆಲ್ಲರೂ ಗರಬಡಿದವರಂತೆ ರಾಧೆಯ ಹುಚ್ಚು ಉನ್ಮಾದದ
ನೃತ್ಯವನ್ನು ನೋಡುತ್ತಲೇ ಇದ್ದರು..
ಚಂದ್ರನ ಬಿಂಬ ಮಸುಕಾಗುವಂತೆ ಬಾನಿನಲ್ಲಿ ಬಣ್ಣಗಳ ಮೇಳದ
ಸಂತೆ.. ಕೆಂಪು ಗೋಳವನು ಮೂಡಣ ದಿಕ್ಕಿನಲಿ ಕಂಡ ರಾಧೆ ನೃತ್ಯವನು ನಿಲ್ಲಿಸಿ ಕೋಲನ್ನು ತನ್ನ
ಉಡಿಗೆ ಸಿಲುಕಿಸಿ ಇತ್ತ ತಿರುಗಿದಳು.
ಹತ್ತಿರ ಬಂದಾಗ ಅವಳ ಸೆರಗಿಗೆ ನವಿಲಿನ ಪುಕ್ಕಗಳು
ಅಂಟಿಕೊಂಡಿದ್ದವು. ಉಡಿಗೆ ಕೋಲಿನ ಜತೆ ಕೊಳಲೂ ಸಿಲುಕಿಸಿತ್ತು!
ಗೋಪಿಯರು ಸ್ತಬ್ಧರಾದರು. ರಾಧೆಯ ಒಲವಿನ ಪರಿಯ ಕಂಡು
ದಿಗ್ಮೂಢರಾದರು!
No comments:
Post a Comment