ಮಿತ್ರರಿಬ್ಬರ ಆಲೋಚನಾ ದಾಟಿ..
-------------------------
“ತುಂಬಾ ನೋವಾಗ್ತಿದೆಯಲ್ವಾ!”
“ನೋವೇನೋ ಹೌದು, ಜತೆ ನಿತ್ಯವೂ ಸಂವಹನ
ನಡೆಯುತ್ತಿದ್ದದ್ದೂ ನಿಂತಿದೆಯಲ್ವಾ! ಬಹುಶಃ ಅದನ್ನು ಒಪ್ಪಿಕೊಳ್ಳಲು ಮನಸ್ಸಿನ್ನೂ ತಯಾರಿಲ್ಲ.
ಜತೆಗೆ ಅಹಮಿಕೆಗೆ ಪೆಟ್ಟು ಬಿದ್ದಿದೆ ಎಂದು ಕಾಣುತ್ತದೆ!”
ನಸುನಕ್ಕೆ..
“ಅಹಮಿಕೆಗೆ ಪೆಟ್ಟು ಬೀಳುವ ಮಾತೇ ಇಲ್ಲವಲ್ಲ ಇಲ್ಲಿ.
ಅಹಮಿಕೆಯೇ ಇಲ್ಲ ನಿಮಗೆ!
ಅಹಮಿಕೆಗೆ ಪೆಟ್ಟುಬಿದ್ದ ಕ್ಷಣದಲ್ಲೇ ಕೋಪ, ಮೋಹ ಭಾವ
ಜಾಗ್ರತವಾಗುತ್ತದೆ.. ನಮ್ಮೆಲ್ಲಾ ಏಕಾಗ್ರತೆಯೂ ನಮ್ಮ ಅಹಮಿಕೆಯನ್ನು ಕೆಣಕಿದವರ ಮೇಲೇ ಕೇಂದ್ರೀಕೃತವಾಗುತ್ತದೆ. ಬಾಣಗಳು ಬತ್ತಳಿಕೆಯಿಂದ ಹೊರಟು ಆ ವ್ಯಕ್ತಿಯನ್ನು
ಎಷ್ಟು ಗಾಯಗೊಳಿಸಲು ಸಾಧ್ಯವೋ ಅಷ್ಟು ಪ್ರಯತ್ನವಾಗುತ್ತದೆ. ಮನಗೊಂದಲದ ಗೂಡು.. ಮಾತು ಚೂರಿ!
ನೀವು ಹಾಗೆ ಮಾಡಿಲ್ಲವಲ್ಲ!
ಅನೇಕ ವರ್ಷದ ಸಂಗ.. ಕಳಚಿ ದೂರ ನಡೆದಾಗ ನೋವು ಆಗುವುದು
ಸಹಜ.. ಮೌನದ ತೆರೆಗಳು ಮತ್ತೆ ಮತ್ತೆ ಬಂದು ಮನದ ಅಂಗಣವನ್ನು ಬಡಿದಾಗ ಆ ನೋವು ಅಕ್ಷರಗಳ
ಮಾಲೆಯಾಗಿ ಹೊರಬರುತ್ತವೆ. ಅದನ್ನು ಅಹಮಿಕೆಯನ್ನೊಲ್ಲ.. ಅದು ಸ್ವಕೇಂದ್ರೀಕೃತವಾಗಿರುತ್ತವೆ.
ಅಲ್ಲಿ ಕಾಲನ ಆಟಕ್ಕೆ ಮಣಿಯುವ ಮಾತು.. ಅಥವಾ ಮನದ ಖಾಲಿತನವನು ವ್ಯಕ್ತಪಡಿಸುವಿಕೆ.. ಹೀಗೆ ಈ
ಭಾವವನು ಎತ್ತಿತೋರುತದೆ ಹೊರತು ನೋವಿತ್ತವರಿಗೆ ಕೆಡುಕನು ಬಯಸುವುದಿಲ್ಲ.. ಅವರ ಬಗ್ಗೆ ಚೂಚಾ
ಅನ್ನೊಲ್ಲ!”
ಮನದಲ್ಲಿ ಮತ್ತಿಷ್ಟು ಮಾತುಗಳ ಮಂಥನ-
’ಕೆಲಕಾಲದ ಹಿಂದೆ ಇದೇ ಭಾವ ಸಾಗರದಲ್ಲಿ ಬಿರುಗಾಳಿಯೆದ್ದು
ನನ್ನ ನಾವೆ ಅಲೆಗಳ ಮಧ್ಯೆ ಹೋರಾಡುತಿತ್ತು..
ಹುಟ್ಟು ಕೈಯಿಂದ ಜಾರಿತ್ತು.. ದಿಕ್ಕುತೋಚದೆ ಕಂಗೆಟ್ಟಿದ್ದೆ! ನನ್ನ ಭರವಸೆಯನ್ನು
ಹುಸಿಗೊಳಿಸಲಿಲ್ಲ ಅವನು.. ಎಲ್ಲಿಂದಲೋ ಅದ್ಯಾವುದೋ ರೂಪದಲಿ ಬಂದು ಸ್ವತಃ ಹುಟ್ಟುಹಾಕಿ ಮತ್ತೆ
ನಾವೆಯನ್ನು ಹಿಡಿತಕ್ಕೆ ತಂದ.. ಈಗಿನ್ನು ಯಾವುದೇ ಬಿರುಗಾಳಿಗೆ ಹೆದರಬೇಕಾಗಿಲ್ಲ. ಅವನೆಲ್ಲಿದ್ದರೂ ಓಗೊಟ್ಟು ಬಂದೇ ಬರುತ್ತಾನೆ..
ಅವನೊಬ್ಬನೇ ರೂಪ ಮಾತ್ರ ಬೇರೆ ಬೇರೆ!’
No comments:
Post a Comment