ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

19 June, 2014

ಫೇಸ್‌ಬುಕ್ಕೂ ಮತ್ತು ಕವನ ಕವಿತೆಗಳೂ..


ಫೇಸ್‌ಬುಕ್ಕೂ ಮತ್ತು ಕವನ ಕವಿತೆಗಳೂ..
-----------------------------------

“All Facebook poets are cordially invited to attend a meeting which will be held at 8 am today.”

ಎಷ್ಟು ಗಂಟೆಗೆ ಮೆಸೇಜು ಬಂದದೆಂದು ನೋಡಿದರೆ ಏಳು ಗಂಟೆ!

ಈಗ ಏಳುವರೆ.. ಅಯ್ಯೋ ಎಲ್ಲಾ ಹಾಳು ಮಳೆಗಾಲದಿಂದ!

ಮಳೆಗಾಲ ಅಂತ ಮೂರು ದಿನಕ್ಕಾಗುವಷ್ಟು ಹಿಟ್ಟು ಮಾಡಿದ್ದೆ. ನೋಡಿದರೆ ಸೂರ್ಯನ ಪ್ರತಾಪ ವೈಶಾಖಕ್ಕಿಂತ ಹೆಚ್ಚು.. ಆಗೀಗ ಬೀಸಿ ಬರುವ ಗಾಳಿಗೆ ಒಂದಿಷ್ಟು ಹನಿ ಸುರಿದು ಸೆಕೆ ಇನ್ನೂ ಹೆಚ್ಚಾಗಿದೆ. ಹಿಟ್ಟು ಹುಳಿಯಾಗಿ ದೋಸೆ ಕಾವಲಿಯಿಂದ ಮೇಲಕ್ಕೇಳ್ಲಿಕ್ಕೆ ಸ್ಟ್ರೈಕ್ ಮಾಡ್ತಿದೆ.

ಯಾವಾಗ್ಲೂ ಎಡಗೈಯಲ್ಲಿ ವಾಟ್ಸ್ ಆಪ್ ಮೆಸೇಜು ನೋಡುತ್ತಾ ಬ್ರೇಕ್‌ಫಾಸ್ಟ್ ರೆಡಿ ಮಾಡ್ತಿದ್ದೆ. ಇವತ್ತು ಹೇಗೂ ಆ ಸಪ್ಪೆ ಗುಡ್ ಮಾರ್ನಿಂಗ್ ಮೆಸೇಜುಗಳಲ್ವಾ ಅಂತ ಉದಾಸೀನ ಮಾಡಿದ್ದೇ ತಪ್ಪಾಯ್ತು.

’ಛೇ! ಎಂತಹ ಒಳ್ಳೆಯ ಅವಕಾಶ. ಅಲ್ದೇ, ನಾನೂ ಕವಯಿತ್ರಿ ಅಂತ ಮಾನ್ಯತೆ ಬೇರೆ.’

ಕೆಲವೇ ಕ್ಷಣಗಳಲ್ಲಿ ಇಡೀ ಮನೆಯ ನೋಟವೇ ಬದಲಾಯ್ತು. ಗೊರೆಕೆ ಹೊಡೆಯುತ್ತಿದ್ದ ಪತಿ ಮಗಳ ಹೊದೆಕೆ ಎಳೆದ ರಭಸಕ್ಕೆ ಇಬ್ಬರೂ ಭೂತ ನೋಡಿ ಬೆಚ್ಚಿದವರ ಹಾಗೆ ಎದ್ದರು. ಎಲ್ಲವನ್ನೂ ಸಂಕ್ಷಿಪ್ತವಾಗಿ, ಆದರೆ ಹೆಮ್ಮೆಯಿಂದ ಹೇಳಿ,

“ಮ್ಯಾಗ್ಗಿ ಮಾಡ್ಕೊಳ್ಲಿ”

ಎಂದ್ಹೇಳಿ. ಇಬ್ಬರೂ ಹಾಗೆ ಬಿದ್ದದನ್ನು ನೋಡಿಯೂ ನೋಡದವರ ಹಾಗೆ ಮಾಡಿ ನಾನು ತಯಾರಾಗ್ಲಿಕ್ಕೆ ನಡೆದೆ

ಛೇ, ಹಾಗೆಲ್ಲ ಐದು ಹತ್ತು ನಿಮಿಷದಲ್ಲಿ ತಯಾರಾಗ್ಲಿಕ್ಕೆ ನನ್ ಕೈಯಿಂದ ಸಾಧ್ಯನಾ? ಸುಧಾದಲ್ಲಿ ನಿಮಿಷಗಳಲ್ಲೇ ಸಾರಿ ಉಡಲು ಬರುವ ಲೇಖನ ಓದ್ಬೇಕಿತ್ತು. ಉಮಾ ಅವರನ್ನು ಭೇಟಿಯಾಗ್ಬೇಕಿತ್ತು. ನಂಗೆ ಫುಗ್ಗೆ ಕೈ ಬ್ಲೌಸ್ ಚೆನ್ನಾಗಿ ಕಾಣುತ್ತೆ ಅಂತ ಎಲ್ರೂ ಹೇಳ್ತಾರೆ. ಕೊನೆಗೂ ಚೂಡಿದಾರವೇ ಗತಿ.

ಕಾರಿನ ಬಾಗಿಲು ತೆಗೆದಿತ್ತು.

“ಪ್ಲೀಸ್ ಮೇಡಂ, ಕಣ್ಣು ಮುಚ್ಕೊಳ್ಳಿ”

ಕಣ್ಣು ತೆರೆದಾಗ ಝಗಝಗಿಸುವ ಅರಮನೆ ಎದುರು ನಿಂತಿದ್ದೆ.

ಅರೇ, ಇವ್ರು ಆರತಿ ಘಾಟಿಕರ್.. ಆಹಾ, ಅನುರಾಧಾ ಬ್ಲೂ ಚುಡಿದಾರ್ ಹಾಕಿದ್ದಾರೆ, ಚೆನ್ನಾಗಿ ಒಪ್ಪುತ್ತೆ. ದಿವ್ಯಾ, ರಜನಿ, ಪ್ರೇಮಕ್ಕ, ಉಷಾ, ಗೀತಾ ಕೋಟೆ, ಸುಗುಣ, ಸೌಮ್ಯ, ಭಾರತಿ, ಅಂಜಲಿ, ಸಂಧ್ಯ..

ಅರೇ ನಮ್ಮ ಹುಡುಗ್ರ ಗುಂಪು.. ರಾಜಶೇಖರ್, ಗೋರೂರು, ಚಕ್ರವರ್ತಿ, ರಾಜೇಂದ್ರ ಪ್ರಸಾದ್, ವತ್ಸ, ಶಂಕರ, ಆಶೀಷ್..  ಅಯ್ಯೋ ಎಲ್ರೂ ಬಂದಿದ್ದಾರೆ.

ಚಂದದ ರೆಡ್ ಕಾರ್ಪೆಟ್, ಗುಲಾಬಿ ಪಕಳಗಳ ಹಾಸಿಗೆ..

ಅರೇ, ನನ್ ಕೆಮರಾ ತರ್ಲಿಲ್ವೇ!

ಸರ ಸರ ಮುಂದೆ ಹೋಗ್ತಿದ್ದವಳನ್ನು ನೀಲಿರಂಗಿನ ಸೀರೆ ಉಟ್ಟಿದ ಸುಂದರಿ ತಡೆದಳು..

“ಇದು ಫೇಸ್ಬುಕ್ ವಿಐಪಿ ಮೀಸಲು!”

ಕಾಲು ಹಿಮ್ಮೆಟ್ಟಿತು. ಕುತೂಹಲವಾಯ್ತು. ಮೊನ್ನೆ ಉಪೇಂದ್ರಣ್ಣ ಫೇಸ್ ಬುಕ್ ವಿಐಪಿಗಳ ಬಗ್ಗೆ ಹೇಳ್ತಿದ್ರು. ಯಾರು ಅಂತ ಮಾತ್ರ ಹೇಳಿರ್ಲಿಲ್ಲ.

ರಜ್ನಿ, ಉಪೇಂದ್ರಣ್ಣ ಇಬ್ರೂ ಮಾತಾಡ್ತಾ ಒಳಗೆ ಹೋಗ್ತಿದ್ರು. ಅರೇ, ತಾನೂ ವಿಐಪಿ ಅಂತ ಹೇಳೇ ಇಲ್ಲ. ನಂಗೆ ಗೊತ್ತಾದ್ರೆ ಇವ್ರ ಗಂಟೇನು ಹೋಗ್ತಿತ್ತು. ನನ್ನ ಅಣ್ಣ ಅಂತ ಒಂಚೂರು ಹೆಚ್ಚು ಹೆಮ್ಮೆ ತೋರಿಸ್ತಿದ್ದೆನಲ್ವಾ. ಇರ್ಲಿ, ಮತ್ತೆ ತರಾಟೆ ತಕೊಂಡ್ರಾಯ್ತು.

ಗುರುಗುಟ್ಟುತ್ತಿದ್ದ ಸ್ವಯಂಸೇವಕಿ ಇನ್ನು ಹೆಚ್ಚು ಹೊತ್ತು ನಿಂತಿದ್ರೆ ಕತ್ತು ಹಿಡಿದು ಸಭೆಯ ಆಚೆ ತಳ್ತಿದ್ಲೇನೋ..

“ಮೇಡಂ, ಇದು ಮುನ್ನೂರಕ್ಕಿಂತ ಹೆಚ್ಚು ಲೈಕ್ ಪಡೆದವರಿಗೆ ಮೀಸಲು!”

ಪೆಚ್ಚಾಯ್ತು ನನ್ನ ಮುಖ.

“ಒಂದು ಪ್ರೊಫೈಲ್ ಫೋಟೊಗೆ ಮುನ್ನೂರಕ್ಕೆ ಸ್ವಲ್ಪ ಕಡಿಮೆ ಸಿಕ್ಕಿದೆ.. ಆಗ್ಬಹುದಾ” ಅಂದ್ರೆ,

“ಇಲ್ಲ ಮೇಡಂ, ಫೋಟೊಗೆ ಸಿಗುವ ಲೈಕುಗಳನ್ನು ನಾವು ಲೆಕ್ಕಕ್ಕಿರಿಸಿಲ್ಲ. ಅದು ಬೇರೆ ಮೀಟಿಂಗ್.. ಸಧ್ಯದಲ್ಲೇ ನಡಿಲಿಕ್ಕಿದ್ದೆ. ಇದು ಬರೇ ಕವನಗಳ ಬಗ್ಗೆಯ ಮೀಟಿಂಗ್!”

ಎಲ್ಲಾ ಕಡೆಯಿಂದ ಉಗಿಸಿಕೊಂಡು  ಮುವತ್ತು ಮತ್ತು ಅದಕ್ಕಿಂತ ಕಡಿಮೆ ಲೈಕಿಗೆ ಮೀಸಲಾಗಿದ್ದ  ಸ್ಥಳದ ಹತ್ರ ಬರೋವಾಗ ಶ್ರೀನಿಧಿ ಸರ್ ನೂರು ಮತ್ತೆ ಹೆಚ್ಚು ಲೈಕ್ ಸ್ಥಳದ ಹತ್ರ ನಿಂತಿದ್ರು. ನನ್ನ ಅಲ್ಲೇ ಕರೆದ್ರು.

“ನಂಗೆ ಸ್ಪೆಶಲ್ ಕನ್ಸೆಷನ್.. ನೀನೂ ಬಾ. ಪರವಾಗಿಲ್ಲ,”

ಸಭೆಯ ಗುಜು ಗುಜು ನಿಂತು ಮೌನವಾಯ್ತು. ನೋಡಿದ್ರೆ,  ಕಟಕಟೆಯಲ್ಲಿ ನಡು ಪ್ರಾಯದ ಬಂಗಾರ ಹೇರಿದ್ದ ಹೆಂಗಸು! ವೀಣೆಯನ್ನು ಕಟಕಟೆಯ ಹೊರಗೆ ಒರಗಿಸಿಡಲಾಗಿತ್ತು.

ಮರೆತೆ ನಾ ಹೇಳಿರ್ಲಿಲ್ಲ ಅಲ್ಲ.. ಅಲ್ಲಲ್ಲಿ ದೊಡ್ಡ ಪರದೆಯ ಮೇಲೆ ಪ್ರಸಾರ ಮಾಡ್ತಿದ್ರು. ಹಾಗಾಗಿ ಕ್ಲೋಸ್ ಅಪ್ ತೋರಿಸಿದಾಗ ಗುರುತು ಹಿಡಿದೆ.

’ಅರೇ, ಇವಳು ಸರಸ್ವತಿ. ಹ್ಮ್, ರವಿವರ್ಮ ಚಿತ್ರದಲ್ಲಿ ತೋರಿಸಿದಕ್ಕಿಂತ ಸ್ವಲ್ಪ ಪ್ರಾಯ ಹೆಚ್ಚು. ಮೋಹನ ಕಂಠಿ ಚಂದ ಇದೆ.. ಸೊಂಟದ ಡಾಬುವಿನ ಮೇಲೆ ಕೆತ್ತನೆ.. ’

ನಾನು ಅವಳ ಬಂಗಾರ ಸೀರೆಯ ಅಂದ ಚಂದ ಸವಿತಾ ಇದ್ರೆ, ನನ್ನ ಪಕ್ಕದಲ್ಲಿ ಕೂತ ಹಿರಿಯರು ಮೊಣಕೈಯಿಂದ ಚುಚ್ಚಿ ಎದ್ದು ನಿಲ್ಲಲು ಹೇಳಿದ್ರು.

ಗಂಭೀರವದನರಾಗಿ ಕಾಳಿದಾಸ, ಬಾಣ, ಪಂಪ, ರನ್ನ, ಕುವೆಂಪು, ಕೆ ಎಸ್ ಎನ್, ಕಾರಂತ, ಪು ತಿ ನ, ರೂಮಿ, ಗಾಲಿಬ್, ಶೇಕ್ಸ್‌ಪಿಯರ್... ನಿಧಾನವಾಗಿ ಸಭೆ ಪ್ರವೇಶಿಸುತ್ತಿದ್ದರು.

ರೂಮಿಯನ್ನು ನೋಡಿ ಕೈಕಾಲು ತಣ್ಣಗಾಯಿತು... ’ಅಯ್ಯೋ ನಂಗೆ ಬೇಕಿತ್ತಾ ಅನುವಾದ ಗಿನುವಾದ. ಸುಮ್ನೆ ಮೊದಲಿನ ಹಾಗೆ ಓದಿ ಸಿಕ್ಕಾಪಟ್ಟೆ ವಿಮರ್ಶೆ ಮಾಡೋ ಬದುಕೇ ಸಾಕಿತ್ತು.’

’ಸಭೆಯಲ್ಲಿ ರೂಮಿ, ಓಶೋ, ಗಾಲಿಬ್ ನನ್ನ ಹೆಸರು ಹೇಳಿ ಅವಮಾನ ಮಾಡುವ ಮೊದಲೇ ಜಾಗ ಖಾಲಿ ಮಾಡೋದು ಒಳ್ಳೆದು ಅಂತ ಅಂದ್ಕೊಂಡ್ರೂ ನಾ ಬಂದ ದಾರಿಯೇ ಗೊತ್ತಿರಲಿಲ್ಲ. ಕೈ ಕಾಲು ತಣ್ಣಗೆ ಆಯ್ತು. ಬಾಯಿ ಒಣಗಿತ್ತು.

ಶೀನಿಧಿ ಸರ್ ನನ್ನ ಅವಸ್ಥೆ ನೋಡಿ ನಗು ಬಂದ್ರೂ ತಡ್ಕೊಂಡಿದ್ರು.

“ಸರ್, ಏನು ವಿಷಯ?”

ಶ್ರೀನಿಧಿ ಸರ್ ತಲೆ ಬಗ್ಗಿಸಿ, ಸ್ವರ ತಗ್ಗಿಸಿ,

“ಫೇಸ್ ಬುಕ್ಕಿನಲ್ಲಿ ಕವನಗಳ ಹಾವಳಿ ಹೆಚ್ಚಾಗಿದೆಯಂತೆ, ಸರಸ್ವತಿಯ ಮೇಲೆ ದೂರು. ಸಿಕ್ಕಿದವರ ಮೇಲೆಲ್ಲಾ ಅವಳ ಕೃಪೆ ಹೆಚ್ಚಾಗಿ ಎಲ್ಲರೂ ಬರೆಯಲು ಶುರು ಮಾಡಿ ಕವನಗಳ ಮಟ್ಟ ತಳ ಸೇರಿದೆಯಂತೆ. ಭೂಲೋಕದ ಹಿರಿಯ ಕವಿಗಳು ಪರಲೋಕ ಸೇರಿದ ಕವಿಗಳ ಮೂಲಕ ಬ್ರಹ್ಮನಿಗೆ ಕಂಪ್ಲೈಂಟ್ ಕೊಟ್ಟಿದ್ದಾರೆ. ಹಾಗಾಗಿ ಎಲ್ಲಾ ಫೇಸ್ ಬುಕ್ ಕವಿಗಳಿಗೆ ವಾರ್ನಿಂಗ್ ಕೊಡಲು ಈ ಮೀಟಿಂಗ್!”

“ಅಂದ್ರೆ ಫೇಸ್ ಬುಕ್ಕಿನಲ್ಲಿ ಬರೆಯುವುದೆಲ್ಲ ಕಳಪೆ ಬರಹಗಳೆಂದು ಹೇಗೆ ತಿರ್ಮಾನಿಸಿದರು?”

“ನನ್ನ ಪೂರ್ವಜರು ಪಂಪನ ಫ್ರೆಂಡ್ ಆಗಿದ್ರು. ಹಾಗಾಗಿ ನನಗೆ ಒಳಗುಟ್ಟು ಗೊತ್ತಾಗಿದೆ. ಎಲ್ರೂ ಕಳಪೆ ಅಲ್ಲ. ಸಾವಿರ ಫ್ರೆಂಡ್ಸ್ ಇದ್ದು ನೂರಕ್ಕಿಂತ ಕಡಿಮೆ ಲೈಕ್ ಸಿಕ್ಕಿದವರು ಇನ್ನು ಮುಂದೆ ಬರೆಯುವ ಹಾಗಿಲ್ಲ ಅಂತ ಮೊದಲೇ ತೀರ್ಮಾನ ಆಗಿದೆ. ಈಗ ಬರೇ ನಾಟಕ ಅಷ್ಟೇ. “

ನನ್ನ ಕಣ್ಣಲ್ಲಿ ನೀರು ಇಣುಕಿತು.

“ಅಯ್ಯೋ, ಫೇಸ್ ಬುಕ್‍ ನಲ್ಲಿ ಬರೆಯುವುದು ನನ್ನ ಬದುಕಿನಲ್ಲಿ ಸೇರಿಕೊಂಡು ಹೋಗಿದೆ.. ಅಯ್ಯೋ ನಾಳೆ ಅಲ್ಲಲ್ಲ, ಇವತ್ತಿನಿಂದ್ಲೇ  ಹೇಗೆ ಬದುಕಲಿ. ಸಾಯುದೇ ಮೇಲು!”

“ಅಷ್ಟು ಡೆಸ್ಪರೇಟ್ ಆಗುದು ಬೇಡ. ಹೆಣ್ಣು ಮಕ್ಕಳಿಗೆ ಕನ್ಸೆಷನ್ ಇದೆ. ಅವ್ರು ಯಾವಾಗಲೂ ಬರಿಬಹುದು. ಇವತ್ತಲ್ಲ ನಾಳೆ ಅವ್ರಿಗೆ ಸಿಗುವ ಲೈಕುಗಳು ನೂರನ್ನು ದಾಟುತ್ತವೆ. ಅಲ್ದೆ, ಸ್ವಲ್ಪ ಒಳ ವ್ಯಾಪಾರ ನಡೆದ್ರೆ ಹುಡುಗ್ರೂ ಬರಿಬಹುದು.. ನಿನಗೆ ನಾನು ನನಗೆ ನೀನು ಅಂತ ಎಲ್ರೂ ಮಾತಾಡಿಕೊಂಡು ಲೈಕು ಕಮೆಂಟು ಹಾಕ್ತಿದ್ರೆ ಆಚೆ ಮೂವತ್ತು ಮತ್ತೆ ಕಡಿಮೆಯಲ್ಲಿ  ಕುಳಿತವರೆಲ್ಲ ವಿಐಪಿಗಳೂ ಆಗ್ಬಹುದು.”

“ಅಬ್ಬಬ್ಬ.. ಸೋ ಹಾಗಾದ್ರೆ ಮಸ್ಕಿ ಹೊಡ್ದು ಮತ್ತೆ ಕವಯಿತ್ರಿ ಪಟ್ಟಗಿಟ್ಟಿಸ್ಬಹುದು ಅನ್ನಿ.”

“ಸಧ್ಯ ಹಾಗೆ ಕಾಣ್ತಿದೆ. ಕೆಲವ್ರು ಸಾಹಿತ್ಯ ಹಾಳಾಗ್ತಿದೆ ಅಂತ ಬಂಡಾಯ ಮಾಡ್ಬಹುದು. ಆದ್ರೆ ಅವ್ರ ಬಾಯಿ ಮುಚ್ಚಿಸುವ ವಿಧಾನ ನಮ್ಮ ನವ್ಯ ಕವಿಗಳಿಗೆ ಗೊತ್ತು. ಅಲ್ದೆ ಅವ್ರು ವಿರುದ್ಧ ಬರೆದದಷ್ಟು ವಿರೋಧಿಗಳಿಗೆ ಹೆಚ್ಚು ಪ್ರಚಾರ. ಅಲ್ದೆ ಫೇಸ್ ಬುಕ್ ಪ್ರಶಸ್ತಿಗಳು ಘೋಷಿಸುವ ಲಕ್ಷಣಗಳೂ ಕಾಣ್ತಿವೆ. ಹಾಗಾಗಿ ಸಧ್ಯಕ್ಕೆ ಮೀಟಿಂಗ್ ನಲ್ಲಿ ಒಂದಿಷ್ಟು ಗಲಾಟೆ ಆದ್ರೂ ಇಲ್ಲಿಯ ಕವಿಗಳ ಭವಿಷ್ಯಕ್ಕೆ ತೊಂದರೆ ಇಲ್ಲ.”

“ಮೇಡಮ್ ಮೇಡಮ್.. “

ಡಬ ಡಬ ಸದ್ದು. ಬೆಚ್ಚಿ ಎದ್ದು ಕುಳಿತೆ. ಅಪರಾಹ್ನ ಮೂರು ಗಂಟೆ! ಮಕ್ಕಳು ಮನೆಪಾಠಕ್ಕೆ ಬಂದು ಕಾದುನಿಂತಿದ್ದಾರೆ,

“ಅಯ್ಯೋ, ನನ್ನ ಕರ್ಮ! ಮನೆಕೆಲಸ, ಜತೆಗೆ ಟ್ಯೂಷನ್, ಇದ್ರ ಜತೆಗೆ ಈ ಕವನ ಕತೆ ಬರೆಯುವ ಹುಚ್ಚು, ಎಲ್ಲಿ ತನಕ ಅಂದ್ರೆ ಅದೇ ಕನಸೂ ಬೀಳುತ್ತೆ. ಬೇಕಿತ್ತ ಇದೆಲ್ಲ ನಂಗೆ. ಬ್ಲಾಗ್ ಫ್ರೆಂಡ್ಸ್‌ಗಳಿಂದ ಪ್ರೇರಿತಳಾಗಿ ಬರೆಯುವ ಹುಚ್ಚು ತಾಗಿಸ್ಕೊಂಡು ಮುಂದೆ ಸ್ವರ್ಗಕ್ಕೆ ಹೋದಾಗ ರೂಮಿ, ಗಾಲಿಬ್ ಓಶೋರಿಂದ ಉಗಿಸಿಕೊಳ್ಳೋ ಸ್ಥಿತಿ ತಂದ್ಕೊಂಡೆ!’

ಎದ್ದು ಮಕ್ಕಳ ಜತೆ ಕುಳಿತವಳು ಫೇಸ್ ಬುಕ್ ಹಾಗು ಕವಿ ಕವನ ಎಲ್ಲ ಮರೆತೆ. ಮಕ್ಕಳ ಜತೆ ಮಗುವಾಗಿ ಬೆರೆತೆ! ಮತ್ತೆ ಎಂಟು ಗಂಟೆಗೆ ಅದೇ ಕವನ ಕವಿತೆ.. ಮತ್ತು ರೂಮಿ ವಾಪಸ್ಸು ಬರ್ತಾರೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...