ತೋಟಗಾರಿಕೆಯ ಹುಚ್ಚಿನ ದಿನಗಳವು, ಎರೆಹುಳ ಗೊಬ್ಬರ ಸ್ವತಃ ತಯಾರಿಸುವ ಹುಚ್ಚಲ್ಲಿ
ಆದಷ್ಟು ಮಾಹಿತಿಗಳನ್ನು ಕಲೆತು ಹಾಕಿ, ಗೊಬ್ಬರ ತಯಾರಿಸುವ ಉಮೇದಿನಲ್ಲಿ ಅಪ್ಪನ ಹಿತ್ತಲಲ್ಲಿರುವ
ಹಳೆಯ ಸಿಮೆಂಟು ಟ್ಯಾಂಕಿನಲ್ಲಿ ತರಕಾರಿ ತಾಜ್ಯಗಳನ್ನು ತುಂಬಿ, ಅದರಲ್ಲಿ ಉದ್ಭವಿಸಿದ ಎರೆಹುಳುಗಳನ್ನು
ಕಂಡು ಮೊದಲ ಬಾರಿ ಅಮ್ಮನಾದಾಗಿನಂತಹುದೇ ಸಂಭ್ರಮ! ಅಂತೂ ಇಂತೂ ಗೊಬ್ಬರ ತಯಾರಿಸಿ ಬಸಳೆ, ಅಳಸಂಡೆ,
ಕುಂಬಳಕಾಯಿ, ಸೋರೆಕಾಯಿ, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು.. ಇನ್ನೂ ಏನೆಲ್ಲಾ ಹೂಗಿಡಗಳು,
ಜತೆಗೆ ತುಳಸೀ ವನ.. ಆ ದಿನಗಳ ಸಂಭ್ರಮ ಒಂದು ಬರೇ ಸವಿ ನೆನಪು. ಮೊದಮೊದಲು ಆ ನೆನಪುಗಳನ್ನು
ಸೆರೆಹಿಡಿಯುಲು ಕ್ಯಾಮರಾ ಸಹ ಇರಲಿಲ್ಲ. ನನ್ನ ಕೈಗೆ ಕೆಮರಾ ಬರುವ ಹೊತ್ತಿಗೆ ಸಂಪಾದನೆಯ ಅಗತ್ಯ
ಹೆಚ್ಚಿತ್ತು. ತೋಟಗಾರಿಕೆ ಮತ್ತು ಮನೆಪಾಠ ಎರಡನ್ನೂ ತೂಗಿಸಿಕೊಂಡೊಯ್ಯಲಾಗಲಿಲ್ಲ. ಸಣ್ಣ
ಮಟ್ಟದಲ್ಲಿ ಬರೇ ಹೂಗಿಡಗಳನ್ನು ಬೆಳೆಸುವದರಲ್ಲೇ ತೃಪ್ತಿ ಪಡಕೊಳ್ಳಬೇಕಾಯಿತು.
ಗೊಬ್ಬರದ ಗುಂಡಿ ಮುಚ್ಚಬೇಕಾಯಿತು ಅನಿವಾರ್ಯವಾಗಿ! ಆದರೂ ಆಗಾಗ ಮಣ್ಣು ಕೆರೆದು ಬುಡ
ಹಸನುಗೊಳಿಸಲು ಬಂದಾಗಲೆಲ್ಲ ಎರೆಹುಳುಗಳ ದರ್ಶನವಾಗುತುತ್ತು, ಮತ್ತದೇ ಸಂಭ್ರಮ ನನಗೆ! ಕಳೆದೆರಡು
ವರ್ಷಗಳಿಂದ ಪೈಂಟಿಂಗ್ ಕೆಲಸವೂ ಹೆಚ್ಚಿ ತೋಟ ಮೂಲೆಗುಂಪಾಯಿತು. ಇನ್ನೂ ಸಣ್ಣದಾಯಿತು. ಆರೈಕೆಗೆ
ಹೊತ್ತೇ ಸಿಗುತ್ತಿರಲ್ಲವಾದರೂ ಒಂದು ಹೊತ್ತಿಗಾದರೂ ಒಂದು ಸುತ್ತು ತಿರುಗಿ ಬಂದು ಮಾತುಕತೆ
ನಡೆಸುವುದು ಮಾತ್ರ ಬಿಡಲಿಲ್ಲ, ಈಗ ಎರೆಹುಳುಗಳ ಜತೆ ಚಿಟ್ಟೆ, ಜೇಡ, ಹೆಸರೇ ಗೊತ್ತಿಲ್ಲದ ಹುಳ,
ಕೀಟ, ಸಣ್ಣ ಜಂತುಗಳೂ, ಲೇಡಿ ಬಗ್, ಮಿಡತೆ, ಮೊದಲಾದ ಬಗ್ ಜಾತಿಯವುಗಳ ಸ್ನೇಹವಾಯಿತು. ಅವುಗಳ ಕೋರಿಕೆ
ಮನ್ನಿಸಿ ಕೆಮರಾದಲ್ಲಿ ಸೆರೆಹಿಡಿದಿದ್ದೇನೆ.
ಮೊನ್ನೆ ಬಟ್ಟೆ ಒಗೆಯುತ್ತಿರುವಾಗ ಫಳ ಫಳ ಮಿಂಚುತ್ತಿರುವ
ಈ ಹುಳ ಸುತ್ತಿಗೆ ಎತ್ತಿ ಹೊಡೆಯುವಂತೆ ಗುರಾಯಿಸಿದಾಗ, ನಾನು ಮೊದಲು ಓಡಿದ್ದು ಕೆಮರಾ
ತರಲು. ಆದಷ್ಟು ಕೋನದಲ್ಲಿ ಕ್ಲಿಕ್ಕಿಸಿದರೆ, ಇದು
ತನ್ನಷ್ಟಕ್ಕೆ ಮೋರೆಕಲ್ಲಿನ ಮೇಲೆ ಸುತ್ತುತ್ತಿತ್ತು. Macro photography ಪ್ರಕಾರ ಅತೀ ಸಣ್ಣ ಜೀವಿಗಳ ಚಿತ್ರವನ್ನು
ಕ್ಲಿಕ್ಕಿಸುವುದಿದ್ದರೆ ಅವುಗಳಿಗೆ ನಮ್ಮಿಂದ ಯಾವುದೇ ತೊಂದರೆ ಬರಬಾರದು, ತಮ್ಮ ಸ್ವಾಭಾವಿಕ
ನೆಲೆಯಿಂದ ಎತ್ತಿ ನಮಗನುಕೂಲವಾಗಿವಂತೆ ಅವುಗಳ ದೇಹವನ್ನು ಮುಟ್ಟಿ ಅವುಗಳಿಗೆ ಅಭದ್ರತೆಯನ್ನುಂಟು
ಮಾಡಬಾರದು.
ಇದುವರೆಗೂ ಬರೇ ಕಂದುಬಣ್ಣದ hammer head worm ನೋಡಿದ್ದೆ, ಆದರೆ ಪುಟ್ಟ ಹಾವಿನ ಹಾಗೆ ಹಳದಿಬಣ್ಣದ ಗೆರೆಗಳನ್ನು
ಹೊಂದಿತ್ತು. ಮತ್ತೆ ಇದ್ದಾನಲ್ವಾ ನಮ್ಮ ಗೂಗಲ್ ಮಾಮ, ಅವನ ಮೊರೆಹೋದೆ, ತಡಕಾಡಿದ ಹಾಗೆ ಮತ್ತಷ್ಟು
ಮಾಹಿತಿಗಳು ಸಿಕ್ಕಿದವು.
ಸಾಮಾನ್ಯವಾಗಿ, ಏಶ್ಯಾ ಖಂಡದಲ್ಲಿರುವುದಾದರೂ ಪ್ರಪಂಚದ
ಎಲ್ಲಾ ಕಡೆ ಹರಡಿಕೊಂಡಿದೆ ಎನ್ನಲಾಗಿದೆ ಈ ರೀತಿಯ ಹುಳಗಳು. ಒದ್ದೆ ನೆಲದಲ್ಲಿ ಕಾಣಬರುತ್ತವೆ,
ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಹೆಚ್ಚು. ಮಾನವನಿಗೆ ನಿರುಪದ್ರಕಾರಿಯೇ, ಎಂದರೆ ಹೌದು ಮತ್ತು
ಅಲ್ಲ ಅನ್ನಬೇಕಾಗುತ್ತದೆ, ಯಾಕೆಂದರೆ ನೇರವಾಗಿ ನಮಗೆ ಹಾನಿಕೊಡದಿದ್ದರೂ ಇವುಗಳ ಆಹಾರ
ಎರೆಹುಳಗಳಾದುದರಿಂದ ಅವುಗಳನ್ನು, ಅವುಗಳ ಮರಿಗಳನ್ನೂ ಸ್ವಹಾ ಮಾಡಿ ತೇಗುತ್ತದೆ. ಸಾಧಾರಣ 30cm ನಷ್ಟು ಉದ್ದ ಮತ್ತು ಚಪ್ಪಟೆ ದೇಹ, ಮೈಯೆಲ್ಲಾ ಲೋಳೆ
ತರಹದ ಅಂಟು, ಉದ್ದ ಬಣ್ಣದ ಗೆರೆಗಳು, ತಾನು ಹೋದಲೆಲ್ಲಾ ಗುರುತಾಗಿ ಅಂಟು ಲೋಳೆಯ ಅಚ್ಚನ್ನು
ಬಿಡುತ್ತದೆ. ಕುತೂಹಲಕಾರಿಯಾದ ವಿಷಯವೆಂದರೆ ತುಂಡುಗಳಾಗಿ ಮಾಡಿದರೂ ಪ್ರತೀ ತುಂಡು ಸ್ವತಂತ್ರವಾಗಿ
ಬೆಳೆದು ಆಹಾರದ ಬೇಟೆಗೆ ಹೊರಡುತ್ತವೆ. ಉಪ್ಪು
ಮತ್ತು ವಿನೇಗರ್ ಇದರ ಜೀವಕ್ಕೆ ಕುತ್ತುತರುತ್ತದೆ.
ಆದರೆ ಅದರ ಅಗತ್ಯ ನಮಗಿಲ್ಲ, ಪ್ರಕೃತಿಯ ಸಮತೋಲನಕ್ಕಾಗಿಯೇ ಸೃಷ್ಟಿಯಾಗಿದೆ ಈ ಜೀವಿ. ನೋಡಿ
ಸಂಭ್ರಮಿಸಬೇಕು ಅಷ್ಟೇ!
No comments:
Post a Comment