ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 October, 2013

ಅಮ್ಮಾ.. ಪ್ಲೀಸ್, ಇನ್ನು ಸಾಕು. ಹೊತ್ತಾಗ್ತದೆ!”

ಮಸಾಲೆದೋಸೆಯ ಒಂದು ಕಾಲು ತುಂಡು ಇನ್ನೂ ಪ್ಲೇಟ್‍ನಲ್ಲಿ ಹಾಗೆ ಇತ್ತು!

’ಮತ್ತೆ ಮುಂದಿನ ಜನ್ಮ.. “

ಅಲ್ಲಿಂದೆದ್ದು ಕೈತೊಳಿಲಿಕ್ಕೆ ಓಡಿದ್ಲು.

ಮುಖ ಒರ್ಸಿಕೊಳ್ಳುತ್ತಾ,

“ಎಷ್ಟು ಸಲ ಈ ಡೈಲಾಗ್ ಕೇಳಿ ಆಯ್ತು.. ಹೇಳಿದ್ನಲ್ಲಾ ಗೊತ್ತಿದೆ ಮುಂದಿನ ಜನ್ಮ ಆಫ್ರಿಕಾದಲ್ಲೇ.. ನೀನು ಹೇಳಿ ಹೇಳಿ ಬ್ರಹ್ಮ ತಥಾಸ್ತು ಅಂದ ಕಾಣ್ತದೆ!”

“ಆದ್ರೂ, ಇದನೆಲ್ಲ ನೀನು ಮಾಮನ ಹಿತ್ತಲಲ್ಲಿರುವ ಕಾಗೆ, ರಾಬಿನ್, ಅಳಿಲು, ಕೋಗಿಲೆಗಳಿಗೆ ಹಾಕ್ತಿಯಲ್ಲ.. ಆ ಪುಣ್ಯದಲ್ಲಿ ನನಗೂ ಪಾಲಿದೆ. ಹಾಗಾಗಿ ಬ್ರಹ್ಮ ಕನ್ಸೆಷನ್ ತೋರಿಸ್ತಾನೆ! ಕೆನ್ಯಾದಲ್ಲಿ ಹುಟ್ಟೋಲ್ಲ.. ಸೌತ್ ಆಫ್ರಿಕಾದಲ್ಲೇ ಹುಟ್ತೀನಿ! “
ನಾಲಿಗೆ ಮುಂದೆ ಮಾಡಿ ಓಡಿದ್ಲು!

ಮಣಿಬೇಕಲ್ವಾ ಮಗಳ ಮುದ್ದು ಮಾತಿಗೆ.. ಹಸಿಮುನಿಸು ತೋರುತ್ತಾ ನಾನು ಆ ಸಣ್ಣ ದೋಸೆಯ ತುಂಡು ಹಿಡ್ಕೊಂಡು ಅಮ್ಮನ ಹಿತ್ತಲಿಗೆ ನಡೆದೆ. ಕಂಪೌಂಡ್ ಗೋಡೆಯ ಮೇಲೆ ದೋಸೆಯಿರಿಸಿ, ಹೊರ ಬಂದ ಅಮ್ಮನ ಬಳಿ ಮಾತನಾಡುತ್ತಿದವಳ ಕಣ್ಣಿನ ತುದಿಗೆ ದೋಸೆ ತಿನ್ನಲು ಬಂದ ಚಿಟ್ಟೆ ಹಕ್ಕಿ ಕಾಣಿಸಿತು!

“ಅರೇ, ನನ್ನ ಸವತಿ! ಎಲ್ಲಿದ್ದಿಯಾ ಇಷ್ಟು ದಿನಗಳ ತನಕ?”

ಗಾಳಿಗಿಂತ ವೇಗವಾಗಿ ಕೆಮರಾ ತೆಗೆದುಕೊಂಡು ಹಿಂದಿರುಗಿದೆ.. ಇನ್ನೂ ಅಲ್ಲೇ ದೋಸೆ ತಿನ್ನುತಿತ್ತು! ನಾ ಹತ್ತಿರ ಹೋಗಲಿಲ್ಲ.. ಝೂಮ್ ಮಾಡಿಕೊಂಡು ತೆಗೆದೆ! ಒಮ್ಮೆ ದುರುಗುಟ್ಟಿ ನೋಡಿದಳು ನನ್ನ ಸವತಿ!

“ಹೆದರಬೇಡವೇ, ನಿನ್ನವನು ನನ್ನನೀಗ ಮುಂಜಾನೆ ರಾಗ ಹಾಡಿ ಎಬ್ಬಿಸ್ತಿಲ್ಲ.. ನೀನು ಅವನ ಕಿವಿಹಿಂಡಿದಿಯಾ? ಇರ್ಲಿ ಬಿಡು! ಈಗ ನಿನ್ನ ಕಾಲ! ಬರ್ಲಿ, ವಸಂತ ಕಾಲ! ಹೇಳ್ತೇನೆ ಅವನು ಯಾರವನು ಅಂತ!”


ನಾ ತಿರುಗಿ ಅವಳನ್ನು ಗುರ್ ಗುರ್ ಎಂದೆ! ಕೋಪ ಬಂತೆನೋ, ಸೀದ ಬೆನ್ನು ತಿರುಗಿಸಿದಳು.. ಇನ್ನೂ ದೋಸೆಯ ತುಂಡು ತಿಂದಾಗಿರಲಿಲ್ಲ..

 ಆದ್ರೂ ಸೀದ ಪುರ್‌ನೇ ಹಾರಿಹೋದಳು ನನ್ನ ಸವತಿ, ಹೆಣ್ಣು ಕೋಗಿಲೆ!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...