ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

26 October, 2013

Friend in need is friend indeed ಅಂದ್ರೆ ಏನೇ!

Friend in need is friend indeed  ಅಂದ್ರೆ ಏನೇ!
-----------------------------------------------

“Friend in need is friend indeed, ಈ ಬಗ್ಗೆ ನೀನು ಏನು ಹೇಳ್ತಿಯಾ?”

ಅವಳು ಕೇಳಿದಾಗ ನಾನು ಕಕ್ಕಾಬಿಕ್ಕಿಯಾದೆ. ಅಲ್ಲ, ದೂರದ ಮುಂಬೈಯಿಂದ ಈ idiom ಬಗ್ಗೆ ನನ್ನ ಅಭಿಪ್ರಾಯ ಕೇಳಲು STD ಕಾಲ್ ಮಾಡ್ತಾರಾ ಯಾರೂ!

“ಎಂತದೇ ಇದು ನಿನ್‍ದು! ನೀನು ಅಲ್ಲಿ ನಿನ್ನ ಕಾಲೇಜಿನ ಲೈಬ್ರೇರಿಯನ್ ಹತ್ತರ ಕೇಳಿದ್ರೂ ಉತ್ತರ ಕೊಡ್ತಿದ್ರು.. ಎಲ್ಲಾ ಬಿಟ್ಟು ನನ್ನ ಬಕ್ರಮಾಡ್ಬೇಕಂತ ಕೇಳ್ತಿದ್ದಿಯಾ?”

“ನನ್ನ ಎಕ್ಸಾಮ್ ಟೈಮ್‍ಗೆ ವಿಶ್ ಮಾಡಿಲ್ಲ.. ಹೇಗಿತ್ತು ಅಂತ ಕೇಳ್ಲಿಲ್ಲ, ಫ್ರೆಂಡ್ ಅಂತೆ ಫ್ರೆಂಡು.. ಹೋಗ್ಲಿ ಅಂದ್ರೆ ಬರ್ತಡೆ ಆದ ಎರಡು ದಿನದ ನಂತರ ಮೆಸೇಜ್- belated birthday wishes ಅಂತ!”

ಓಹೋ ಇದು ನನ್ನ ಬುಡಕ್ಕೇ ಬರ್ತಿದೆ. ಏನು ಹೇಳ್ಲಿ ತಪ್ಪಿಸ್ಕೊಳ್ಲಿ ಅಂತ ಆಲೋಚನೆ ಮಾಡೋದಕ್ಕೂ ಟೈಮಿಲ್ವೇ!

“ಅಲ್ವೇ, ಅದು.. ಅದು.. “

ಸಡನ್ನಾಗಿ ನೆನಪಿಗೆ ಬಂತು!

“ಅಲ್ವೇ ನಂಗೂ ಎಕ್ಸಾಮ್ ಇತ್ತಲ್ವಾ ಆವಾಗ!”

“ಇನ್ನೇನಾದರೂ ಪಿಳ್ಳೆ ನೆವನ ಹುಡ್ಕೊಳ್ಳೆ.. ಅಲ್ಲ, ನಿನ್ನ ಎಕ್ಸಾಮ್ ಆದ ನಂತರ ನನ್ನದಿತ್ತು.. ಮತ್ತು ನಿನ್ನ ಎಕ್ಸಾಮ್ ಆಗುವಾಗಲೆಲ್ಲ ಡೈಲೀ ವಾಟ್ಸ್ ಆಪ್‍ನಲ್ಲಿ ವಿಚಾರಿಸಿಕೊಳ್ತಿದ್ದೆ! ನನಗಿಂತಲೂ ಮೂರು ವರ್ಷ ಸಣ್ಣವಳೇ ನೀನು!”

ತಲೆಕೆರಕೊಂಡೆ.. ಏನು ಹೇಳ್ಲಿಯಪ್ಪಾ! ಕ್ಯಾಂಪು ಗೀಂಪು ಅಂತ ಹೇಳುವಾ ಅಂದ್ರೆ ಅದೂ ಇಲ್ವೇ! ಈ ವರ್ಷ ನಾನು ಯಾವ ಕ್ಯಾಂಪೂ ಮಾಡಿಲ್ಲ! ಅದೇನೋ ಈ ಮೇ ತಿಂಗಳಲ್ಲಿ ನಾನೂ ತುಂಬಾ ಮೌನವಾಗಿಬಿಟ್ಟಿದ್ದೆ! ಬಾಲ್ಯದ ಗೆಳತಿಯ ಹುಟ್ಟಿದ ದಿನವನ್ನೂ ಮರೆತಿದ್ದೆ! ಛೇ.. !

“ಅಗತ್ಯ ಬಿದ್ದಾಗ ಬರದಿದ್ದರೆ ಸ್ನೇಹ ಇದ್ದೂ ಏನು ಪ್ರಯೋಜನ!”

ಹೌದು, ಅವಳಿಗೆ ನನ್ನ ಅಗತ್ಯ ತುಂಬಾ ಇತ್ತು.. ನಾನು ನನ್ನದೇ ಲೋಕದಲ್ಲಿ ಮುಳುಗಿ ಅವಳನ್ನು, ಅವಳ ನೋವನ್ನು ಕಡೆಗಾಣಿಸಿದ್ದೆ! ಆರು ವರ್ಷದ ಹಿಂದೆ ಅವಳ ಪತಿಯ ದೇಹಾಂತ್ಯವಾದಾಗಿನಿಂದ ಎರಡು ಮಕ್ಕಳನ್ನು, ಮನೆವಾರ್ತೆ ಜತೆ ಸಂಪಾದನೆಯನ್ನು ಏಕಾಂಗಿಯಾಗಿ ಮಾಡುತ್ತಿದ್ದಾಳೆ. ಈಗ ಮಕ್ಕಳು ನೌಕರಿ ಹಿಡಿದ ಕಾರಣ ಒಂದಿಷ್ಟು ಸರಾಗವಾಗಿ ಉಸಿರು ಬಿಡುತ್ತಿದ್ದಾಳೆ. ಹಿಂದಿನಿಂದಲೂ caricature style ಚಿತ್ರ ಬಿಡಿಸುವುದರಲ್ಲಿ ಆಸಕ್ತಿ ಇದ್ದ ಅವಳು ಒಂಟಿತನ ನೀಗಲು ಅದ್ಯಾವುದೋ animation ಕ್ಲಾಸಿಗೆ ಸೇರಿದ್ದಳು!

“ಅರೇ, ನಿಂಗೆ ನಾನೂ ಬೆಸ್ಟ್ ವಿಶಸ್ ಅಂತ ಕಳಿಸಿದೆನಲ್ವೇ! ನೀ ಬರೇ ಆ ವಿಷಯಕ್ಕೆ ನನ್ಮೇಲೆ ಹೀಗೆ ಕೋಪಮಾಡೊಲ್ಲ.. ಈಗ ಏನಾಯ್ತು ಹೇಳು?”

“ ಅಲ್ಲೇ ಅವರ ಪರಿಚಯವಾಯ್ತು.. ಅದೇ ನಮ್ಮ ಇನ್ಸ್ಟಿಟ್ಯೂಷನ್ ನಲ್ಲೇ..”

ಸುಮ್ಮನೆ ಕೇಳಿದೆ.. ಹ್ಮೂ, ಲವ್ ಸ್ಟೋರಿ ಕೇಳಿಸ್ತಾಳೆ ಇವಳು ಈಗ ನಂಗೆ!

“ಸರಿ ಸುಮಾರು ನನ್ನದೇ ಪ್ರಾಯದವರು.. ಒಳ್ಳೇ ವಾಗ್ಮಿಗಳು. ಮಾತಾಡ್ತಿದ್ರೆ ಸುಮ್ನೆ ಕೇಳುವ ಅನಿಸ್ತಿತ್ತು. ನಮ್ಮ ಸ್ನೇಹದಲ್ಲೇನೋ ಕೆಟ್ಟದಿರಲಿಲ್ಲ. ಪ್ರತೀದಿನ ಫೋನಲ್ಲೋ, ಆಫೀನಲ್ಲೋ ಮಾತಾಡ್ತಿದ್ವಿ. ಅವರು ನಾನು ನಮ್ಮ ಕಷ್ಟ ಸುಖ ಹಂಚಿಕೊಂಡು ಖಾಲಿಯಾಗ್ತಿದ್ವಿ.

ಮತ್ತೆ ಫೋನು, ಭೇಟಿ ಕಮ್ಮಿಯಾಗ್ತ ಬಂತು.. ಕೇಳಿದ್ರೆ ಏನೇನೋ ಸಬೂಬು! ಪುರುಸೊತ್ತು ಇಲ್ಲ.. ನೆಂಟ್ರು ಬಂದಿದ್ದಾರೆ.. ಮನೆಯವಳಿಗೆ ಸೌಖ್ಯವಿಲ್ಲ.. ಮಗನಿಗೆ ಎಕ್ಸಾಮು.. ನಂಗೆ ಗೊತ್ತಿಲ್ಲದೆ ನಾನು ಆ ಸ್ನೇಹಕ್ಕೆ ನನ್ನನ್ನೇ ಅರ್ಪಿಸಿಕೊಂಡಿದ್ದೆ! ನನ್ನ ಮನಸ್ಸು ಇಂತಹ ಸಂದರ್ಭ ಬರಬಹುದೆಂದು ಒಪ್ಪಲೂ ತಯಾರಿರಲಿಲ್ಲ. ಈ ಪ್ರಾಯದಲ್ಲಿ ಇದೇನು ಹುಚ್ಚಾಟ ನಂಗೆ ಅಂತ ಒಂದು ಘಳಿಗೆಯಲ್ಲಿ ಅನಿಸಿದ್ರೂ ಮತ್ತೊಂದು ಘಳಿಗೆಯಲ್ಲಿ ಆ ಸಮಯದಲ್ಲಿ ಅವರೂ ಹಾಗೇ ಇದ್ರಲ್ವ ಅಂತಾನಿಸ್ತಿತ್ತು! ನಾನು ಹೇಳುವ ಮೊದಲೇ ನನ್ನ ಮನಸ್ಸು ಅವರು ಓದುತಿದ್ರು ಮತ್ತು ಅವರದನ್ನು ನಾನು.. ”

“ಒಳ್ಳೇ ದುಷ್ಯಂತನನ್ನೇ ಹಿಡಿದು ಶಕುಂತಲೆ ಆದೆಯಲ್ವಾ ನೀನು..”

ನಾನಂದ್ರೆ ಕೋಪಿಸಿಕೊಳ್ಳಲಿಲ್ಲ ಅವಳು!

“ಹೌದೇ, ಅವರು ನಂಗೆ ಉಂಗುರನೂ ಕೊಟ್ಟಿದ್ದಾರೆ.. ಮತ್ತದು ಕಳೆದುಹೋಗಿಲ್ಲ. ಎಲ್ಲೋ ಕಾಲವಾದ ನನ್ನ ಪತಿಯೇ ದುರ್ವಾಸರಾಗಿ ನನ್ನ ಶಪಿಸಿದ್ರು ಅಂತ ಕಾಣುತ್ತೆ! ಉಂಗುರ ತೋರಿಸಿದ್ರೂ ನೆನಪಾಗ್ತಿಲ್ಲ! ನಂಗೆ ಭಗವದ್ಗೀತೆಯ ಕರ್ಮಣ್ಯೇ.. ಉಪದೇಶಕೊಟ್ರು.

ಇಲ್ಲಿ ನಾವ್ಯಾರೂ ಯಾರಿಗೂ ಏನೂ ಅಲ್ಲ.. ಮಾಯೆಯಾಟ ಈ ಪ್ರಪಂಚ! ಋತುಗಳು ಬದಲಾದ ಹಾಗೆ ಭಾವಗಳೂ ಬದಲಾಗ್ತವೆ. ಒಂದು ದಿನದಲ್ಲೇ ನೋಡು.. ಪೂರ್ವಾಹ್ನ, ಅಪರಾಹ್ನ, ಸಾಯಂಕಾಲ, ರಾತ್ರಿ.. ಎಷ್ಟೆಲ್ಲ ಬದಲಾವಣೆಯಾಗುತ್ತೆ. ನೀನು ನನ್ನನ್ನು ನೆಚ್ಚಿ ಇರಬೇಡ. ನನಗೆ ಜವಾಬ್ದಾರಿಗಳು ಬಹಳ ಇವೆ. ಪ್ರತೀದಿನ ಮಾತು ಆಡಲಾಗುವುದಿಲ್ಲ. ನನ್ನ ಸಂದರ್ಭಗಳು, ಆಯ್ಕೆಗಳು ಬದಲಾಗುತ್ತಲೇ ಇರುತ್ತವೆ! ಮೇಲಾಗಿ ಒಬ್ಬ ಕಲಾಕಾರ ನಾನು. ನಾವೆಲ್ಲ ಇರುವುದೇ ಹೀಗೆ..  ಹೇಳು, ಹೀಗೆಲ್ಲ ಹೇಳಿದರೆ ನಾನು ಯಾರ ಬಳಿ ಹೇಳಿಕೊಳ್ಳಲಿ ಈಗ.. ಏನು ಮಾಡಲಿ! ನನಗೆ ದೈಹಿಕ ಹಸಿವಿಲ್ಲ ಕಣೇ! ಭೌದ್ಧಿಕವಾಗಿ ನಾನು ಸಂಗಾತಿಯನ್ನು ಬಯಸಿದ್ದೆ.. ತಪ್ಪಾಯಿತು. ಅದ್ಯಾಕೆ ನಮಗೆ ವಿರುದ್ಧ ಲಿಂಗದ ಆಕರ್ಷಣೆ.. ಯಾವಾಗ ಬೇಕೆಂದರು ಆವಾಗ ಕಿವಿ ನೀಡುವ ನಿನ್ನಂತಹ ಬಾಲ್ಯ ಸ್ನೇಹಿತೆ ಇದ್ದೂ ಮತ್ತೊಂದು ಸ್ನೇಹಕ್ಕಾಗಿ ಪರಿತಪಿಸಿದ್ದು ನನ್ನ ದೊಡ್ಡ ತಪ್ಪು!”

“ಇಲ್ವೇ, ನಿನ್ನದಿದರಲ್ಲಿ ಯಾವ ತಪ್ಪಿಲ್ಲ. ನಾವೆಲ್ಲ ಮಾನವರು.. ಸಹಜವಾಗಿ ಬಳಿ ಬಂದ ಸ್ನೇಹವನ್ನು ಸ್ವೀಕರಿಸ್ತೀವಿ. ನಾನೂ ಸ್ವೀಕರಿಸಿದ್ದೇನೆ ಮತ್ತು ಗಂಡು ಹೆಣ್ಣಿನ ಮಧ್ಯೆ ಆಕರ್ಷಣೆ ಪ್ರಕೃತಿಯ ನಿಯಮ! ಅದರಲ್ಲೂ ನಾವು ನಾಗರಿಕರೆಂದು ಕರೆದುಕೊಳ್ಳುವವರು ಒಬ್ಬರಿಗೆ ಒಂದು ಸಂಗಾತಿ ಎಂದು ನಿಷ್ಠೆಯೆಂಬ ನಿಯಮ ಪಾಲಿಸುವೆವು.. ಮತ್ತದನ್ನು ಗಂಡೂ ಹೆಣ್ಣೂ ಇಬ್ಬರೂ ಮುರಿಯುತ್ತಾರೆ. ಅಂಕೆ ಸಂಖ್ಯೆಯಲಿ ವ್ಯತ್ಯಾಸವಿದ್ದೇ ಇರುತ್ತದೆ, ಹೆಣ್ಣು ಹೆಚ್ಚು ನಿಷ್ಠಾವಂತಳೆಂಬುರಲ್ಲಿ ಸಂಶಯವಿಲ್ಲವಾದರೂ ಇಂದಿನ ಯುವಪೀಳಿಗೆ ಅದನ್ನು ಬದಲಾಯಿಸಲು ನೋಡುತ್ತಿದೆ!”

“ನೋಡು, ಎಲ್ಲಾ ಮರೆತುಬಿಡು, ಆಧ್ಯಾತ್ಮಿಕ ಪ್ರವಚನ ಕೇಳು, ಓದು.. ಇದೆಲ್ಲಾ ಉಪದೇಶ ಮಾಡುವುದಿಲ್ಲ.. ನಿನ್ನ ಸ್ಥಾನದಲ್ಲಿ ನಿಂತು ಹೇಳುವುದು ಇಷ್ಟೇ. ಮರೆಯಲಾಗುವುದಿಲ್ಲ ಹಳೇಯದಿನಗಳನ್ನು ಎಂಬುದನ್ನು ಒಪ್ಪುತ್ತೇನೆ.. ಆದರೆ ಅದನ್ನೇ ಮತ್ತೆ ಮತ್ತೆ ನೆನೆದು ಆರೋಗ್ಯವನ್ನು ಹಾಳುಮಾಡಿಕೊಳ್ಳುವುದೂ ಸರಿಯಲ್ಲ. ಏಕಾಗ್ರತೆಯಿಂದ ನಿನ್ನ ಕೋರ್ಸು ಮುಗಿಸು ಅಂತಲೂ ಹೇಳೊಲ್ಲ ನಾನು.. ಒಮ್ಮೆಗೆ ಎದ್ದ ಬಿರುಗಾಳಿಗೆ ಸಿಲುಕಿ ಹಾಯಿದೋಣಿ ಓಲಾಡ್ತಿದೆ.. ನೀರಿನಲ್ಲಿ ಬಿದ್ರೆ ಈಜಲೂ ಗೊತ್ತಿಲ್ಲ ನಿನಗೆ.. ಹುಟ್ಟುಹಾಕಲೂ ಆಗುವುದಿಲ್ಲ... ಸುಮ್ಮನೆ ಗಟ್ಟಿಯಾಗಿ ಹಿಡಿದು ಕೂತ್ಕೋ.. ಹುಟ್ಟು ಹಾಕಲು ಬಂದೇ ಬರ್ತಾನೆ  ಮೇಲಿನ ಅಂಬಿಗ. ನನಗಿದೆ ಅವನಲ್ಲಿ ವಿಶ್ವಾಸ, ನಂಬಿಕೆ! ನಂಬಿದವರ ಎಂದೂ ಬಿಡೊಲ್ಲ ಅವನು.. ಒಂದಿಷ್ಟು ತಾರತಮ್ಯ, ಲೇಟು ಮಾಡ್ತಾನೆ ಹೊರತು.. ಕೊನೆ ಕ್ಷಣದಲ್ಲಾದರೂ ಬಂದು ಕೈಹಿಡಿದು ನಡೆಸ್ತಾನೆ ಮತ್ತು ದಡ ಸೇರಿಸ್ತಾನೆ! “

ನಿಂಗೆ ಯಾವಾಗ ಬೇಕೆನಿಸಿದಾಗ ಆವಾಗ ಫೋನು ಮಾಡು.. ಏನ್ ಬೇಕಾದರೂ ಹೇಳ್ಕೊ.. ಕಿವಿ ಕೊಡ್ತೇನೆ, ಅಷ್ಟೇ! You have to take care of yourself. I am always with you! 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...