ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

27 October, 2013

ಹೀಗೊಂದು ಭಜನಾ ಸಂಡೆ!

ಹೀಗೊಂದು ಭಜನಾ ಸಂಡೆ!
----------------------

“ನಂಗೆ ಒಂಬತ್ತು ಮಕ್ಕಳು ತಾಯಿ!”

“ರಾಮ ರಾಮ!” ಅಂತ ಅಲ್ಲಿ ಅವರ ಹಾಡು ಕೇಳಲು ಕುಳಿತಿದ್ದ ನಾನು, ನನ್ನಮ್ಮ, ಮಗಳು ಒಟ್ಟಿಗೆ ಹೆಚ್ಚು ಕಮ್ಮಿ ಕಿರಿಚಿದ್ವಿ!

“ಶೀಲಾ, ಇವತ್ತು ಭಾನುವಾರ ಅಂತ ನಿಧಾನ ಕೆಲಸ ಮಾಡ್ಬೇಡ. ಕಿರಣನ ಮನೆ ವಕ್ಕಲಿಗೆ ಹೋಗ್ಲಿಕುಂಟು. ಮರಿಬೇಡ!”

ಅಮ್ಮ ನಿನ್ನೆ, ಇವತ್ತು ಪದೇ ಪದೇ ನೆನಪು ಮಾಡ್ತಿದ್ದರಿಂದ ರಾಬೊಟ್  ತರ ಒಂದೇ ಸಮನೆ ಕೆಲಸ ಮಾಡ್ತಿದ್ದೆ.. ಫೇಸ್ ಬುಕ್, ವಾಟ್ಸ್ ಆಪ್ ಮುಟ್ಲಿಕ್ಕೆ ಹೋಗಿರ‍್ಲಿಲ್ಲ! (ಝುಕರ್‌ಬರ್ಗ್ ಆಣೆ!)

ಇಡ್ಲಿ ದೊಣ್ಣೆಗಳು, ಹಾಲಿನ ಪಾತ್ರೆ, ಪ್ಲೇಟು, ಗ್ಲಾಸು.. ಸಿಂಕಿನಲ್ಲಿ ಪಾತ್ರೆಗಳು ಅಣಕಿಸ್ತಿದ್ದವು! ಹುಸ್ಸಪ್ಪಾ! ಯಾಕೀ ಸಂಡೆ ಬರ್ತದೋ.. ಸುಮ್ನೆ ಅಲಸಿನ ಎಲೆಯ ಕೊಟ್ಟೆ ಮಾಡ್ಬೇಕಿತ್ತು.. ಆಲಸ್ಯದಿಂದಲೋ, ಮನ್ನಾ ಡೇ ಹಾಡಿನಲ್ಲಿ ಮುಳುಗಿದರಿಂದಲೋ ಎಲೆಗಳನ್ನು ತರ‍್ಲಿಕ್ಕೆ ಹೋಗದೆ ತಪ್ಪು ಮಾಡ್ಬಿಟ್ಟೆ!

ಕರ್ಮ! ಹಣೆಚಚ್ಚಿಕೊಳ್ತಾ ತಿಕ್ತಿದ್ದವಳ ಕಿವಿ ನಿಮಿರಿತು! ಹಾರ್ಮೋನಿಯಮ್...  ಓಹೋ ಆ ಭಜನೆ ಹಾಡುವವರು ನಮ್ಮ ಓಣಿಯಲ್ಲಿದ್ದಾರೆ! ಮುಸುರೆ ಕೈತೊಳೆದು ರಾಕೆಟ್ ತರ ಓಡಿ ಅಮ್ಮನಂಗಳದಲ್ಲಿ ನಿಂತು,

“ ಅಮ್ಮಾ! ಅಮ್ಮಾ!”

ನನ್ನ ಬೊಬ್ಬೆ ಕೇಳಿ ಏನಾಯ್ತೋ ಎಂದು ಗಾಬರಿಯಾಗಿ ಬಂದ ಅಮ್ಮನಿಗೆ, "ಎಲ್ಲಾ ಬಿಡು.. ಬಾ ಆ ಭಜನೆ ಹಾಡುವವನು ಬಂದಿದ್ದಾನೆ ಅಂದ್ರೆ!"

 “ಹೋಗ್ಲಿಕುಂಟಲ್ವೇ.. ಒಂದೇ ಹಾಡು ಸಾಕು ಅಂತ ಹೇಳು ಅವನಿಗೆ!”

ಆಗಲೇ ಅವರು ನಮ್ಮ ನೆರೆಮನೆಯಲ್ಲಿ ಹಾಡುತ್ತಿದ್ದರು.

ಗೋಡೆ ಬದಿಯಲ್ಲೇ ನಿಂತು ,

“ಪ್ಲೀಸ್, ಒಂದು ಕೃಷ್ಣನ ಪದ ಹಾಡಿ!” ಅಮ್ಮ ಅಲ್ಲೆ ಅವರಂಗಳದಲ್ಲಿ ಕೇಳಿತಿದ್ರೆ ನಾನು ಕೆಮರಾ ಸಮೇತ ನೆರೆಮನೆಯಂಗಳದಲ್ಲಿ.

ಇಬ್ಬರಿಗೂ ತೃಪ್ತಿಯಾಗಲಿಲ್ಲ.. ಕೊನೆಗೂ ಅಮ್ಮನ ಮನೆಯಂಗಳದಲ್ಲಿ ಕುಳಿತು ಬಸವಣ್ಣನವರ ವಚನ ಸಮೇತ ನಾಲ್ಕು ಹಾಡು ಕೇಳಿಸಿಯೇ ಅವರನ್ನು ಬೀಳ್ಕೊಟ್ಟೆವು.

ಆಶ್ಚರ್ಯ ಅಂದ್ರೆ ನನ್ನ ಮಗಳು ಮನೆಗೆ ಬೀಗ ಹಾಕಿ ನನ್ಹಿಂದೇ ಬಂದಿದ್ದಾಳೆ.. ಮತ್ತು ಎಲ್ಲ ಹಾಡುಗಳನ್ನು ಶೃದ್ಧೆಯಿಂದ ಕೇಳಿದ್ಲು! ಅಹ್! ನನ್ನ ಮಗಳಂತ ಪ್ರೂವ್ ಮಾಡಿಬಿಟ್ಟಲ್ಯೆ!!!

ಅಮ್ಮ ಸಣ್ಣದಾಗಿ ಅವರ ಸಂದರ್ಶನ ಮಾಡಿದ್ರು!

ಮೂಲತಃ ಸೊರಬದವರಾದ ಅವರು ಇಲ್ಲಿ ಮಂಗಳೂರಿನಲ್ಲಿ ನೆಲೆನಿಂತು ಒಂದಿಪ್ಪತ್ತು ವರ್ಷವಾಯ್ತು ಅಂತ ಹೇಳಿದ್ರು.

ತಮ್ಮ ತಂಡದವರೆಲ್ಲಾ ಒಟ್ಟಿಗೆ ಒಂದೇ ಕಡೆ ಇದ್ದು ಮುಖ್ಯವಾಗಿ ನಾಟಕಗಳಲ್ಲಿ  ತಬಲಾ ಹಾರ್ಮೋನಿಯಮ್ ನುಡಿಸುವುದು, ರಿಪೇರಿ ಮಾಡುವುದು, ಅಮೆಚ್ಯೂರ್ ತಂಡಗಳಿಗೆ ನಾಟಕ ತರಬೇತಿ ನೀಡುವುದು... ಒಟ್ಟಾರೆ ಹಾಡುವಿಕೆ, ವಾದ್ಯ ನುಡಿಸುವಿಕೆಯೇ ಜೀವನಕ್ಕೆ ಆಧಾರ!

ಹೀಗೆ ಮಾತಾಡ್ತಾ ಎಷ್ಟು ಮಕ್ಕಳು ಅಂತ ಕೇಳಿದಾಗ ಅವರು ಒಂಬತ್ತು ಅಂತ ಹೇಳಿದ ಕೂಡಲೇ ಮೂರ್ಛೆ ಹೋಗಿಲ್ಲ ನಾವು!

ಆದರೆ ಅವರು ಅದಕ್ಕೆ ಉತ್ತರ ಕೊಟ್ಟದನ್ನು ಕೇಳಿ ಅದಕ್ಕಿಂತ ಹೆಚ್ಚು ದಂಗಾದೆವು!

“ಹೆಣ್ಣು ಮಗುವಿನ ಆಸೆಗೆ ಬಿದ್ದು ಒಂಬತ್ತು ಮಕ್ಕಳಾದವು ತಾಯೀ! ಎಷ್ಟು ಗಂಡು ಮಕ್ಕಳಿದ್ರೂ ಕರುಳು ಚುರ್ರ್ ಅಂತ ಮಾಡೋದು ಹೆಣ್ಣು ಜೀವ ಮಾತ್ರ ತಾಯೀ! ಹಾಗೇಯೇ ಹೆಣ್ಣು ಮಕ್ಕಳು ಎಷ್ಟೇ ಇರ್ಲಿ, ಮನೆಗೆ ದೀಪ ಹಚ್ಚಲಿಕ್ಕಂತ ಒಂದು ಗಂಡು ಬೇಕಲ್ವಾ! “

ಅನಕ್ಷರಸ್ತರು ಅವರು. ಶಾಲೆಯ ಮುಖವನ್ನೂ ನೋಡದಿದ್ದರೂ ತಮ್ಮ ಮಕ್ಕಳಿಗೆಲ್ಲ  ಶಾರದೆಯ ಅನುಗ್ರಹ ಇರಲಿ ಅಂತ ಸ್ಕೂಲಿಗೆ ಸೇರಿಸಿದ್ದಾರೆ. ಇಬ್ಬರು ಮಕ್ಕಳು ಈಗಾಗಲೇ ಕಲ್ತು ಮೈಸೂರಿನಲ್ಲಿ ನೌಕರಿ ಹಿಡಿದು ಪಾರ್ಟ್ ಟೈಮ್ ನಾಟಕನೂ ಮಾಡ್ತಿದ್ದಾರೆ ಅಂತ ಹೆಮ್ಮೆಯಿಂದ ಹೇಳಿದ್ರು. ಮೊಮ್ಮಕ್ಕಳಿವೆ.. ಪುಣ್ಯಕ್ಕೆ ಗಂಡು ಹೆಣ್ಣು ಇಬ್ಬರೂ ಇವೆ.. ಹಾಗಾಗಿ ಮಗನಿಗೆ ಆಪರೇಷನ್ ಮಾಡ್ಕೋ ಅಂದೆ ಅಂದಾಗ ಬದುಕಿದ ಬಡ ಜೀವ ಅಂದ್ಕೊಂಡೆ! ಇವರ ಕೊನೆಯ ಮಗಳು ಎರಡನೆಯ ತರಗತಿ!

ಭಜನೆ ಹಾಡು ಹೇಳುವವರು ಬಂದಾಗಲೆಲ್ಲ ಅವರ ಬಳಿ ನಮಗೆ ಬೇಕಾದುದನ್ನೆಲ್ಲಾ ಹೇಳಿಸಿಕೊಳ್ತಿದ್ದೆವು. ರೆಕಾರ್ಡ್ ಮಾಡಿರಲಿಲ್ಲ. ಆದರೆ ಈ ಸಲ ಮರೆಯದೆ ರೆಕಾರ್ಡ್ ಮಾಡಿ ಯು ಟ್ಯೂಬ್‍ಗೆ ಎತ್ಹಾಕ್ತಿದ್ದೇನೆ! ನೋಡಿ ಖುಷಿ ಪಟ್ರೆ ನಂಗೂ ಖುಷಿಯಾಗುತ್ತೆ.. ಇಲ್ಲಾಂದ್ರೆ ನಿಮ್ಮಿಷ್ಟ ಮಾರಾಯ್ರೆ!

ಓಡಿ ಬಾರಯ್ಯ ಕೃಷ್ಣಯ್ಯ..



ಹರಿ ಕುಣಿದಾ ನಮ್ಮ..


ಮನೆಯೊಳಗಾಡೋ ಗೋವಿಂದ..


ಉಳ್ಳವರು ಶಿವಾಲಯವ ಮಾಡುವರು..


ವಿಠ್ಠಲ ಪ್ರಣಾಮಿ..

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...