ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 August, 2013

-
ಎಲ್ಲಿ ಜಾರಿತು ಮನವು
ಎಲ್ಲೆ ಮೀರಿತು...
ಎಲ್ಲಿ ಅಲೆಯುತಿಹುದು ಏಕೆ
ನಿಲ್ಲದಾಯಿತು...

ಕೊಟ್ಟಿಗೆಯಲಿ ಅಮ್ಮ ಕರೆದಿಟ್ಟ
ಹಾಲಿನ ನೊರೆ.. ಬಿಳಿ ಮೀಸೆ!
ಸೆಗಣಿಯ ದೋಸೆ ತಟ್ಟಿ
ಬಚ್ಚಲು ಗೋಡೆ ತುಂಬ
ಅಮ್ಮನ ಸೆರಗಿನ ಪರಿಮಳ
ಒದ್ದೆ ಮುಖವೊರಸುವ ನೆವನ!

ಅಜ್ಜನ ಭುಜದ ದ್ರಾಕ್ಷಿ
ಚಿವುಟುತ್ತ ಕೇಳುವ ಕತೆಗಳು
ಅಮ್ಮಮ್ಮನ ಊರಿನಲಿ
ನಡೆಸಿದ ತುಂಟಾಟ
ಗಂಡುಬೀರಿ, ತಾಳೆಮರ...
ಏನೆಲ್ಲ ಬಿರುದುಗಳ ಪದಕ..

ಅಜ್ಜಿ ಅಮ್ಮ ಮಾಡುವ ಹಪ್ಪಳ
ಬಿಡಿಸಲು ಪೈಪೋಟಿ
ಕಾಗೆ ಓಡಿಸಲು ಕಾವಲು..
ಕಾಸಿಗೊಂದು ಬೆಂಡು..
ಕಾಗದ ಸುರುಳಿಯಲ್ಲಿ ಸ್ವರ್ಗ
ಪಚಕ್ ಪಚಕ್ ...
ಮೈಮೇಲೆಲ್ಲ ನೀರು ಸಿಡಿಸುವ ಆಟ..

ಕಾಗದದ ದೋಣಿ..
ನೋಟ ಪೇಜ್.. ಹರಿ ಹರಿದು
ಕೊಡೆಯೆಲ್ಲೋ ನಾವೆಲ್ಲೋ
ಅಮ್ಮನ ಕೈಯ
ಸಿಹಿ ಖಾರ ಮಿಶ್ರಿತ ಕಷಾಯ..

ಬೇಡ ನಿನ್ನ ಹಂಗೆಂದು.. ತಮ್ಮನಿಗಂದು
ಅಪ್ಪನ  ಸ್ಕೂಟರ್ ಗುದ್ದಿ
ಜೇಬು ಹಗುರಮಾಡಿದ್ದು..
ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು..

ಆಹಾ! ಆ ಬಾಲ್ಯ!!
ನನ್ನ ಐಡಿಯವನ್ನು
ಮೊದಲೇ ಪೆಟೆಂಟ್ ಮಾಡ್ಬೇಕಿತ್ತು..
ಪ್ರತಿಮಾ , ನೀವು ಗೆದ್ದಿರಿ!
ಕಾಲವನು ಹಿಂದಕೆ ತಳ್ಳಿ
ಮತ್ತೆ ಬಾಲ್ಯ ನೆನಪಿಸಿದ
ನವನವೀನ ಮುಂಜಾವು!



-
ಇನ್ನೂ ತಾಂತ್ರಿಕತೆ ಪ್ರಗತಿ ಸಾಧಿಸಿರದಿದ್ದರೂ... ಐಷರಾಮ ಬದುಕು ಇಲ್ಲದಿದ್ದರೂ..
ಸೂಟು ಬೂಟು ಕೋಟು.. ಏನಿಲ್ಲದಿದ್ದರೂ, ಏನು ಕೊಡದಿದ್ದರೂ ಅಪರಿಮಿತ ಒಲವು ಧಾರಾಳವಿತ್ತು..
ದಕ್ಕಿದಷ್ಟನ್ನು ಹಂಚಿಕೊಳ್ಳುವ ಮನಸಿತ್ತು..
ಕೂಡು ಕುಟುಂಬದಲಿ ಆಗಾಗ ಗೊಣಗಾಟವಿದ್ದರೂ ಮಾತುಕತೆಯಲಿ ಮುನಿಸು ಕರಗುತಿತ್ತು..
ಹಬ್ಬ-ಹರಿದಿನಗಳಲಿ ಸ್ವರ್ಗ ಭುವಿಗಿಳಿಯುತ್ತಿತ್ತು!

ಎಲ್ಲರ ಮನಸಿನೆಡೆಯಲಿ ಗೂಡುಹಾಕಿದ್ದ ಬಾಲ್ಯವನು ಮುಂಜವಿನ ಬೆಳಕಿನಲಿ ಅದ್ದಿದಿರಿ ಪ್ರತಿಮಾ!
ಪ್ರತಿಮಾ ಅವರ ಮೋರ್ನಿಂಗ್ ರಾಗ-

ಹವಾಯಿ ಚಪ್ಪಲಿ ಬಿಳೀ ಯೂನಿಫಾರಂ ಮೇಲೆ ಮೂಡಿಸಿದ ಕಲೆಗಳನ್ನು ಕರ್ಚೀಫಿನಿಂದ ಒರೆಸುವಾಗ,

ಗಾಳಿಯ ರಭಸಕ್ಕೆ ಡಿಶ್ ನಂತೆ ತಿರುಗಿಕೊಂಡಿರುವ ಛತ್ರಿಯನ್ನು ಅಂತೂ ಇಂತೂ ಯಥಾಸ್ಥಿತಿಗೆ ತರುವಾಗ,

ಅಲ್ಲಲ್ಲಿ ಕೆಸರುಹೊಂಡಗಳಲ್ಲಿ ಈಜಾಡುತ್ತಿರುವ ಗೊದಮೊಟ್ಟೆಗಳನ್ನು ನೋಡುತ್ತಾ ನಿಂತಾಗ,

ರಸ್ತೆ ಬದಿಯಲ್ಲಿ ಗೂಡಂಗಡಿಯಲ್ಲಿ ಸಿಗುತ್ತಿದ್ದ ಉಪ್ಪುಖಾರ ಸವರಿದ ಕಿತ್ತಳೆ ಹಣ್ಣನ್ನು ಕೊಂಡು ಮೆಲ್ಲುವಾಗ ,

ಮಳೆಗಾಲದಲ್ಲಿ ಒಣಗದ ಬಟ್ಟೆಗಳನ್ನು ಅಮ್ಮ ಹಳೇ ಕಾವಲಿಯ ಮೇಲೆ ರೊಟ್ಟಿಯಂತೆ ತಿರುವಿ ಒಣಗಿಸಿಕೊಟ್ಟಾಗ,

ಸೋರುತ್ತಿದ್ದ ಮಾಡಿನ ಮನೆಯಲ್ಲಿ ತೊಟ್ಟಿಕ್ಕುವ ಮಳೆಹನಿಗೆ ಅಲ್ಲಲ್ಲಿ ಪಾತ್ರೆಗಳನ್ನಿಟ್ಟು ಮನೆಯನ್ನು ಕಾಪಿಡುವಾಗ,

ಬೆಂಬಿಡದ ಮಳೆಯಿಂದಾಗಿ ಪಾಚಿ ಕಟ್ಟಿದ್ದ ಅಂಗಳಕ್ಕೆ ಇಷ್ಟಿಷ್ಟೇ ಬ್ಲೀಚಿಂಗ್ ಪೌಡರ್ ಚಿಮುಕಿಸುವಾಗ,

ಹಂಡೆ ಒಲೆ ಉರಿಗೆ ಒಂದೊಂದಾಗಿ ಒಣಗಿದೆಲೆ, ಬೆರಣಿ ತುಂಡು , ಕಟ್ಟಿಗೆ ಚೂರುಗಳನ್ನೆಸೆದು ಮೈ ಕಾಯಿಸಿಕೊಳ್ಳುವಾಗ

ಅನುಭವಿಸಿದ ಥ್ರಿಲ್

ತಾರಸಿ ಮನೆಯ ಕಿಟಕಿಯ ಬಳಿ ನಿಂತು ಬ್ರೂ ಕಾಫಿ ಹೀರುತ್ತಾ, " ಒಹ್, ಎಂಥಾ ಮಳೆಗಾಲ "ಎಂದು ನಿಟ್ಟುಸಿರು ಬಿಡುವಲ್ಲಿಲ್ಲ

ಎಂಬುದನ್ನು ಮನಗಂಡ ಆಗಸ್ಟ್ ತಿಂಗಳ Nostalgic ಮುಂಜಾವು
.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...