ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 August, 2013

ಆ ಪೀಳಿಗೆ- ಈ ಪೀಳಿಗೆಯ ಸ್ವಾತಂತ್ರ್ಯ ದಿನಾಚರಣೆ!

ಇಂದಿನ ಪೀಳಿಗೆಯಂತೆ ನಮ್ಮ ಪೀಳಿಗೆಯವರೂ ಹುಟ್ಟುವ ಮೊದಲೇ ನಮಗೆ ಸ್ವಾತಂತ್ರ್ಯ ದೊರಕಿತ್ತು.. ಆದರೂ ನಮಗೆ ಸ್ವಾತಂತ್ರ್ಯದ ಮಹತ್ವ, ಅದರ ಹಿಂದಿನ ಶ್ರಮದ ಕತೆ ತಿಳಿದಿತ್ತು!
ದೇಶ ಭಕ್ತಿ ಗೀತೆಗಳನ್ನು ಕೇಳಿದಾಗಲೆಲ್ಲ ರೋಮಗಳು ಎದ್ದು ನಿಲ್ಲುತ್ತಿದ್ದವು.. ಬ್ರಿಟಿಷರು ನಮ್ಮವರಿಗೆ ಹಿಂಸೆ, ತಿರಸ್ಕಾರ.. ನೋವು ಕೇಳಿದಾಗಲೆಲ್ಲಾ ರಕ್ತ ಕುದಿಯುತಿತ್ತು..

ಆದರೆ, ಇಂದಿನ ಪೀಳಿಗೆಯವರಿಗೆ ಯಾವುದರ ಅರಿವೇ ಇಲ್ಲ.. ನನ್ನಲ್ಲಿ ಮನೆಪಾಠಕ್ಕೆ ಬರುವ ಮಕ್ಕಳು ಅಚ್ಚರಿಗೊಳ್ಳುತ್ತಾರೆ.. ಅದರಲ್ಲೂ ಕಾಲಾಪಾನಿ ಜೈಲ್ ನ ಕ್ರೂರ ವ್ಯವಹಾರ, ನಮ್ಮ ನಾಡಿನಲ್ಲೇ ನಮಗೆ ಪರಕೀಯರನ್ನಾಗಿ ಮಾಡಿ, ನಮ್ಮಲೇ ಭೇದ ಹುಟ್ಟಿಸಿ ನಮ್ಮನ್ನು ಲೂಟಿ ಮಾಡಿ ತಮ್ಮ ಸಾಮ್ರಾಜ್ಯವನ್ನು ಬೇರೂರಿಸುವ ಅವರ ಹುನ್ನಾರ.. ತಾವು ಶಾಲೆಯಲ್ಲಿ ಮಾಸ್ ಪಿ ಟಿ ಮಾಡಿ, ಧ್ವಜಾರೋಹಣ ಮಾಡುವ ಸ್ವಾತಂತ್ರ್ಯಾದಿನಾಚರಣೆಗೆ ಇಷ್ಟೆಲ್ಲ ಹಿನ್ನಲೆಯಿದೆಯೇ?

 ಛೇ! ನಮಗಾಗಿ ತಮ್ಮ ತನು ಮನ ಧನಗಳನ್ನೆಲ್ಲವೂ ತ್ಯಾಗ ಮಾಡಿದ ಹುತಾತ್ಮರ ಆತ್ಮ ಇಂದಿನ ಪೀಳಿಗೆಯ ಅಜ್ಞಾನವನ್ನು ನೋಡಿದಾಗ ಎಷ್ಟು ನೊಂದುಕೊಳ್ಳುತ್ತದೆ ಏನೋ!
ಅಂದು ಆಕಾಶವಾಣಿಯಲ್ಲಿ ಹಾಕುವ ದೇಶಭಕ್ತಿಗೀತೆಗಾಗಿ ಕಾದುಕೂತ ದಿನಗಳಿದ್ದವು! ಪ್ರತೀಬಾರಿ ಕೇಳಿದಾಗಲೂ ಅದೇ ಭಾವ.. ಮೈಯೆಲ್ಲಿ ನವಿರು ಕಂಪನ.. ಇಂದೂ ಅದೇ ಭಾವ, ಅದೇ ಕಂಪನ! ಇಂತಹ ಭಾವ ಇರಬೇಕಾದರೂ ಪುಣ್ಯಮಾಡಿರಬೇಕು!

ಆರ್.ಎನ್. ಜಯಗೋಪಾಲರ ಸಾಹಿತ್ಯ; ಎಂ. ಬಿ. ಶ್ರೀನಿವಾಸ್ ಅವರ ಸಂಗೀತದಲ್ಲಿ ಈ ಹಾಡು

ಕಣ ಕಣದಲೂ ಭಾರತೀಯ ರಕ್ತ ನಮ್ಮದು!
-------------------------------------
ಈ ಮಣ್ಣು ನಮ್ಮದು
ಈ ಗಾಳಿ ನಮ್ಮದು
ಕಲ ಕಲನೆ ಹರಿಯುತಿಹ
ನೀರು ನಮ್ಮದು..
ಕಣ ಕಣದಲು ಭಾರತೀಯ
ರಕ್ತ ನಮ್ಮದೂ ನಮ್ಮದು|| ಈ ಮಣ್ಣು ನಮ್ಮದು||

ನಮ್ಮ ಕಾಯ್ವ ಹಿಮಾಲಯವೆ
ತಂದೆ ಸಮಾನ
ಗಂಗೆ ತುಂಗೆ ಕಾವೇರಿಯು
ತಾಯಿ ಸಮಾನ
ಈ ದೇಶದ ಜನರೆಲ್ಲರೂ
ಸೋದರ ಸಮಾನ
ಈ ನಾಡಿನ ಹೃದಯವದು
ದೈವ ಸನ್ನಿಧಾನ|| ಈ ಮಣ್ಣು ನಮ್ಮದು||

ಅಜಂತಾ ಎಲ್ಲೋರ ಹಳೇಬೀಡು ಬೇಲೂರ
ಶಿಲೆಗಳಿವು ಕಲೆಯ ಆಗರ
ಹಿಂದು ಬುದ್ಧ ಜೈನ ಕ್ರಿಸ್ತ
ಮುಸಲ್ಮಾನ ಧರ್ಮಗಳ ಮಹಾಸಾಗರ
ನಡೆದು ಹೋದ ಚರಿತೆಯೊ
ನಾಳೆ ಇರುವ ಕವಿತೆಯೊ
ಈ ನಾಡ ಮಣ್ಣಿನಲ್ಲಿದೆ
ಜೀವ ಸಾರ|| ಈ ಮಣ್ಣು ನಮ್ಮದು||

ತಂಗಾಳಿಗೆ ತಲೆಯ ತೂಗೊ
ಪೈರಿನ ಹಾಡು
ಆ ಹಾಡಿಗೆ ತಾಳ ಕೊಡುವ
ಯಂತ್ರದ ಜಾಡು
ವಿಜ್ಞಾನವು ಅಜ್ಞಾನವ
ಗೆಲ್ಲುವ ಪಾಡು
ಹೊಸ ಭಾರತ ನಿರ್ಮಾಣವು
ಸಾಗಿದೆ ನೋಡು||ಈ ಮಣ್ಣು ನಮ್ಮದು||





No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...