ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 August, 2013

ಮತ್ತೆ ಶಾಲೆಗೆ ಹೋದ ಕನಸು ತಂದ ಮುಂಜಾವು!


-
ಲಯಬದ್ಧ ಗೊರಕೆ...
ತಟ್ಟುತ್ತಿದ್ದಾರ್ಯಾರೋ.. ಮೆಲ್ಲನೆ
ಯಾರಿಗಪ್ಪಾ ಇಂತಹ ಸವಿಗನಸಿನ ನಿದ್ದೆಯನ್ನು ಹಾಳುಮಾಡುವ ಧೈರ್ಯ!
ಓರೆಗಣ್ಣ ನೋಟಕ್ಕೆ ಕಂಡುಬಂದಳು  ಜರಿ ಉದ್ದಲಂಗ ಹಾಕಿದ ಪರಿ! (ಪರಿಣಿತಾ)
ಅವಳ ಹಿಂದೆ ಹೊನ್ನ ಬಣ್ಣದ ಸಾರಿಯಲ್ಲಿ ಪ್ರತಿಮಾ..
ಧಡಕ್ಕನೆ ಎದ್ದು ಕುಳಿತೆ..
ಅಯ್ಯೋ, ನಿನ್ನೆ ಪ್ರತಿಮಾ ಕೊಟ್ಟ ಗುದ್ದು..
ಮೆಲ್ಲನೆ ಬೆನ್ನು ಸವರಿದೆ..
ಅರೇ, ಇಬ್ಬರೂ ನನ್ನ  ಎಳಕೊಂಡು ಹೋಗ್ತಿದ್ದಾರೆ..
ಎಲ್ಲೋ ಬಾನುಲಿ ಅರುಣರಾಗ ಹಾಡ್ತಿದೆ.. ಮಂದ ದನಿಯಲಿ...
ಮೋಡದ ಮನೆಯ ಅಂಗಳದಲ್ಲಿ ಬೆಂಚುಗಳು ಆಗಲೇ ಭರ್ತಿ!
ಮೊನಿಟರ್ ಮನೋಹರ್ ಬೋರ್ಡಿನ ಮೇಲೆ ಡೇಟ್ ಹಾಕ್ತಿದ್ದಾನೆ..
ಅಹಲ್ಯ ದಿನದ ನುಡಿ ಮುತ್ತನು..
ಗುಸು ಗುಸು, ಪಿಸಿಪಿಸಿ ಮಾತೆಲ್ಲಾ ಇದ್ದಕ್ಕಿದ್ದಂತೆ ನಿಂತಿತು..
ಶ್ವೇತ ಸಾರಿ ಅಲ್ಲಲ್ಲಿ ಜರಿ ಕಸೂರಿ..  ತುರುಬಿನಲ್ಲಿ ಮಲ್ಲಿಗೆ,
ಕೊರಳಲ್ಲಿ ಮುತ್ತಿನ ಹಾರ, ಕೈಯಲ್ಲಿ ಮಾಯಾದಂಡ...
ಮುಂಜಾನೆ  ಟೀಚರ್!
ಅಯ್ಯೊಯ್ಯೋ.. ನನ್ನ ಅಸೈನ್ ಮೆಂಟ್ ಫಿನಿಶ್ ಮಾಡ್ಲಿಲ್ವಲ್ಲಾ ನಾನು!
ಎಲ್ಲರ ಎದುರು ಮರ್ಯಾದೆ ಹೋಗುತ್ತೆ..
ಬೆಂಚ್ ಮೇಲೆ ನಿಲ್ಲಿಸ್ತಾರೆ..
ದೇವರೇ, ಪ್ಲೀಸ್ ಟೀಚರ್ ಗೆ ಮರೆತೇ ಹೋಗಲಿ!
ಆದರೆ, ಈ ಚಾಡಿ ಬುರುಕ ಅನಿಲ್ ನೆನಪಿಸಿದ್ರೆ!!!
ನಮ್ಮ ಟೀಚರ್ ಪಾಪ ಅಲ್ವಾ..
ಮೊನ್ನೆ ಮೂರು ದಿನ ಚಕ್ಕರ್ ಹೊಡೆದ್ರೂ ಏನೂ ಅನ್ನಿಲಿಲ್ಲ..
ಪನಿಶ್ ಮೆಂಟ್ ಹೆಸರಿನಲ್ಲಿ ಇವತ್ತಿನ ಪ್ರಾರ್ಥನೆ ನನ್ನದು..
ಒಂದು ವೇಳೆ ಬೈದ್ರೂ ಪರವಾಗಿಲ್ಲ.. ನಾನೊಂದು ಚಂದದ ಹಾಡು ಹಾಡಿ ಅವರ ಮನ ಗೆಲ್ತೇನೆ!
ಅಂದುಕೊಂಡ ಹಾಗೆ ನಡೆಯಿತು..
ಅನಿಲ್ ನೆನಪಿಸಿದ..
ಪ್ರಾರ್ಥನೆ.. ಅಂದ್ರು, ಮುಂಜಾವು ಟೀಚರ್!
ಅಹ್.. ಅಹ್... ಮ್ಮ್.. ಮ್ಮ್.. ಗಂಟಲು ಸರಿ ಮಾಡ್ಕೊಂಡೆ..
ಎಲ್ಲರ ದಯನೀಯ ನೋಟ ನನ್ನ ಮೇಲೆ..
ಕೆಂಗಣ್ಣಿನ ನನ್ನ ನೋಟ ಅನಿಲ್ ಮೇಲೆ.. ಕಣ್ಣಲ್ಲೇ ಹೇಳಿದೆ.. “ಇರು ಹೊರಗೆ ಬಾ ಮಾಡ್ತೀನಿ ಪೂಜೆ!”

ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು||
|| ಪೂಜಿಸಲೆಂದೆ.. || (ಖೋರಸ್)

ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ ಮುಂಜಾವಿಗರು ಎತ್ತಿಹರು
ಮುನಿಸು ಬೇಡಿನ್ನು ಸ್ವಾಮಿ||
ತೆರೆಯೋ ಬಾಗಿಲನು ಭಾನು ತೆರೆಯೋ ಬಾಗಿಲನು||
||ಪೂಜಿಸಲು|| (ಖೋರಸ್)

ಒಲಿದರೆ ಚೆನ್ನ ಮುನಿದರಲ್ಲ ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸೋ ಎನ್ನ ಭಾಸ್ಕರ||
ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು||

ಪೂಜಿಸಲೆಂದೆ ಹೂಗಳ ತಂದೆ
ದರುಶನ ಕೋರಿ ನಾ ನಿಂದೆ
ತೆರೆಯೋ ಬಾಗಿಲನು ರವಿಯೇ ತೆರೆಯೋ ಬಾಗಿಲನು|| ( ಖೋರಸ್)

ಮೋಡದ ಜರಿಯ ಅಂಚುಗಳು ಫಳ ಫಳ ಹೊಳೆದವು..
ಆಗಸದಲ್ಲಿ ವರ್ಣಮಯ ಚಿತ್ತಾರ!
ಮುಂಜಾವು ಟೀಚರ್ ಶ್ವೇತ ವಸ್ತ್ರದಲ್ಲಿ ಆ ಚಿತ್ತಾರಗಳ ನರ್ತನ!
ಮುಖದಲಿ ಪ್ರಸನ್ನತೆ!
ಮುಂಜಾವಿಗರ ಮುಖದಲ್ಲೂ ಪ್ರತಿಫಲಿಸಿತು..
ಕ್ಲಾಸ್ ಶುರು ಆಯಿತು..








No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...