ಅಂಗಣದ ಮೂಲೆಯಲ್ಲಿ
ಕರಿಶಿಲೆ
ಆಕರ್ಷಕವಿತ್ತೇನೋ..
ಮತ್ತೆ ಮತ್ತೆ
ಕೆತ್ತಲೆತ್ನಿಸಿದರೂ ಇವನು..
ಎಲ್ಲಿ ಏನೂ
ಬದಲಾವಣೆಯಿಲ್ಲ..
ಹ್ಮ್! ಇವನು
ಶಿಲ್ಪಿಯೇ ಅಲ್ಲ.. ಉಳಿಗೆಯೇ ಇಲ್ಲ ಇವನಲ್ಲಿ!
ನಸುನಕ್ಕಿತು ಶಿಲೆ!
ಹೊತ್ತೊಯ್ದರು ಅವರು..
ಇದೀಗ ಉಳಿಗೆ
ಪೆಟ್ಟು.. ಅಷ್ಟಿಷ್ಟಲ್ಲ.. ಲೆಕ್ಕವಿಟ್ಟವರ್ಯಾರು!
ಛೀ.. ಛೀ..
ಬಡವಾಯಿತು.. ಅನಾಕರ್ಷವಾಯಿತಲ್ಲ!
ಮತ್ತೆ ಬಿಸುಟರು ಅದೇ
ಅಂಗಣಕ್ಕೆ..
ಕೆಲಕಾಲ ಶಿಲೆ ಮೌನ
ತಪಸ್ಸಿನಲ್ಲೇ..
ಮತ್ತೆ ಬೆಳೆಯಿತೇ..
ಅರೇ! ಇವನ್ಯಾರು..
ಏನೆಲ್ಲಾ ಸಲಕರಣೆ..
ನೋವೇ ಇಲ್ಲವಲ್ಲ..
ಅತ್ತಿತ್ತ,
ಹೊರಗೊಳಗೆ ನಡೆಯುತ್ತ ಉಳಿಗೆ ಪೆಟ್ಟು ಕೊಡುತ್ತಾ... ಶಿಲ್ಪಿ ಮೆಚ್ಚಿದನೇ..
ಓಹೋ! ಸುಂದರ.. ಅತೀ
ಸುಂದರ ಶಿಲ್ಪ!
ಆಚೀಚೆ ಹೋಗುವವರು
ತಲೆದೂಗುವರು..
ಮುಟ್ಟಲೆತ್ನಿಸುವರು..
ಶಿಲೆಗೋ ಹೆಮ್ಮೆ..
ತಾನೂ ಶಿಲ್ಪವಾದೆ!
ಕತ್ತೆತ್ತಿ
ಕೆತ್ತಿದವನಿಗೊಂದು ಸಲಾಂ ಕೊಡಬೇಕೆಂದರೆ.. ಎಲ್ಲಿ ಅವನು?
ಮತ್ತಿಷ್ಟು
ಕೆತ್ತಲವನು.. ಇನ್ನೂ ಚಂದವಾಗುವಾಸೆ..
“ಕಾಣೆಯಾಗಿಹನು
ನನ್ನ ಶಿಲ್ಪಿ.. ಹುಡುಕಿಕೊಡುವಿರಾ .. “
ಇದೀಗ ನೋಡಲು
ಬಂದವರೆಲ್ಲರಲ್ಲಿ ಶಿಲೆಯ ಗೋಳು!
No comments:
Post a Comment