ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

21 June, 2013

ಹಳೇ ಪೋಸ್ಟೆಲ್ಲ ಒಂದು ಕಡೆ... ಒಲವಿನ ನೆನಪಿನಲ್ಲಿ (ರೂಮಿ ಪ್ರೇರಕ ಶಕ್ತಿ)!


ನನ್ನೊಳಗಿನ ಒಲವು (ಪ್ರೇರಣೆ ರೂಮಿ)

             ರೂಮಿಯಿಂದ ಕಲಿತ ಮೊದಲ ಪಾಠ-ನಮ್ಮಾತ್ಮವನ್ನು ತೆರೆದಿರಿಸಲು ಶಕ್ಯರಾದರೆ ಪ್ರಕೃತಿ ದುಃಖ ನುಂಗಿ ಸುಖ ಪಡುವ ಕಲೆಯನ್ನು ಕಲಿಸುತ್ತದೆ......
      
         ನನ್ನ ಅಲರಾಮ್ ಹೊಡಕೊಳ್ಳುವ ಮೊದಲೇ ಜೀರುಂಡೆಗಳ ಗೆಜ್ಜೆಕಟ್ಟಿ ಕುಣಿಯುವ ಶಬ್ದ, ಕಪ್ಪೆಗಳ ವಟರ್ ವಟರ್ ಗಾಯನ, ಗುನುಗು ಹಕ್ಕಿಯ ಗೊಣಗಾಟ, ಕೋಗಿಲೆಗಳ ಮಂದರಾಗ, ರಾಬಿನ್‍ಗಳ ಚಿಲಿಪಿಲಿ, ಬುಲ್ ಬುಲ್‍ಗಳ ಗುಣು ಗುಣು ಹಾಡು ಜೊತೆಗೆ ಮಂದವಾಗಿ ಬೀಸುವ ಮರುತನ ಮೌನ ತರಂಗಗಳ ಉದಯರಾಗಗಳು ನನ್ನನ್ನು ಕಚುಕುಳಿಯಿಡುತ್ತಾ ಎಬ್ಬಿಸುತ್ತವೆ.  ಈ  catalystಗಳು ನನ್ನ ನಿತ್ಯದ otherwise same old boring ಕೆಲಸಗಳಿಗೆ ಹೊಳಪನ್ನು ಕೊಡುತ್ತವೆ. ಬಿಸಿಲೇರುವ ಮೊದಲೇ ಮತ್ತೊಮ್ಮೆ ತೋಟದ ಗಿಡಗಳ ಜೊತೆ ಒಂದಿಷ್ಟು ಪಂಚಾದಿಕೆ( ನಮ್ಮ ಕೊಂಕಣಿಯಲ್ಲಿ ಸುಮ್ಮಸುಮ್ಮನೆ ಮಾತನಾಡುವುದಕ್ಕೆ ಹೀಗೆನ್ನುತ್ತಾರೆ) ನಡೆಸಿ, ಹೆಚ್ಚು ಕಡಿಮೆ ಪ್ರತಿದಿನ ಕಾಣಿಸುವ ಹೊಸ ಹೊಸ ಕೀಟ, ಜೇಡಗಳ ವೀಕ್ಷಣೆ, ಬೆಕ್ಕಿನ ಮರಿಯೊಡನೆ ತೊದಲಾಟ, ಚಿಟ್ಟೆಗಳ ಜೊತೆ ಒಂದಿಷ್ಟು ಹಾರಾಟ ( ಕೆಮರಾ ತೆಗೆದುಕೊಂಡು ಹಾರಾಟನೇ ಮಾಡಬೇಕಾಗುತ್ತೆ) ಇವೆಲ್ಲಾ ನಡೆಸಿದರೆ ಆ ದಿನದ ನೇಚರ್ ವಾಕ್ ಮುಗಿಯುತ್ತದೆ. 

ಮತ್ತೆ ನಾಲ್ಕು ಗೋಡೆಯೊಳಗೆ ಬದುಕು.. ಮಧ್ಯ ಮಧ್ಯದಲ್ಲಿ ಅಂತರ್ಜಾಲವೆಂಬ ಕಿಟಿಕಿಯಿಂದ ಪ್ರಪಂಚದ ಕಿರುನೋಟದ ವೀಕ್ಷಣೆ... ನೆವನದಲ್ಲಿ ಸಿಗುವ ಮಕ್ಕಳ ಒಡನಾಟ... ಆಗಾಗ ಕುಂಚ ರಂಗಿನಲ್ಲಿ ಅದ್ದಿ ಗೋಡೆಗಳ ಮೇಲೆ, ಕ್ಯಾನ್‍ವಾಸಿನ ಮೇಲೆ ಚೆಲ್ಲುವ ಆಟ ಪಾಠ! ಇಲ್ಲೆಲ್ಲಾ ನಾನು ರೂಮಿಯನ್ನು ನೋಡುತ್ತಿರುತ್ತೇನೆ. ಪ್ರಕೃತಿ ತೆರೆದುಕೊಳ್ಳುವ ವಿಸ್ಮಯಗಳನ್ನು ನೋಡಬೇಕಾದರೆ ನಮ್ಮ ಹೊರಕಣ್ಣಿನ ಜೊತೆ ಒಳಗಿನ ಕಣ್ಣನ್ನೂ ವಿಶಾಲವಾಗಿ ತೆರೆದಿರಿಸಬೇಕು. ಆಗ ಮಾತ್ರ ಜೇನಿಗಿಂತ ಸ್ವಾದಿಷ್ಟವಾಗಿರುವ-ಪ್ರಕೃತಿಯಲ್ಲಿ ಅಡಗಿರುವ ಒಲವಿನ ಸಾಗರದಲ್ಲಿ ಮುಳುಗು ಹಾಕಿ ಪ್ರೇಮವೆಂಬ ಅಮೃತದ ರುಚಿಯನ್ನು ಆಸ್ವಾದಿಸಬಹುದು.  
************           ************              ************

ನನ್ನಾತ್ಮವೇ, ರಹಸ್ಯವೊಂದನ್ನು ಅರುಹುವೆ
ಆಲಿಸುವವಳಾಗು...
ಈ ಒಲವೆಂಬ  ತರುವಿನ ಸಂಗವನೆಂದಿಗೂ ಬಿಡದಿರು-
ಸದಾ ಬಾಡದ, ಕಂಪನ್ನೀವ ಕುಸುಮಗಳ ವರ್ಷವನ್ನೇ ಸುರಿಸುವುದದು.



v  ನನ್ನೊಲವೆ,
ಅದೇನೋ ಹಾಡು ಗೊಣಗುತ್ತಾ, ಕುಣಿಯುತ್ತಾ ಹೋಗುತ್ತಿದ್ದಿಯಾ...
        ಅರೆ, ಅದೇಕೆ ಈ ಮೊದಲು ನಾ ನಿನ್ನ ನೋಡಿಲ್ಲ!
        ನೋಡ ನೋಡುತ್ತಲೇ... ಕುಣಿಯತೊಡಗಿದೆ ನಿನ್ನ ಸುತ್ತಲೂ ನಾನೂ...
        ಆಹಾ! ಲೋಕವೆಲ್ಲಾ ನಮ್ಮ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದೆಯಲ್ಲಾ...
        ಎಂದೂ ಮುಗಿಯದಿರಲಿ ಈ ಅಲೌಕಿಕ ಆನಂದ!

          *****************************

v  ಒಲವೇ,
ಸಂಪೂರ್ಣವಾಗಿ ನಾನು ನಿನ್ನವಳೋ..
           ಹಿಂದಿರುಗಿಸಬೇಡವೋ ಮತ್ತೆ ನನ್ನನ್ನು ನನಗೇ!

       *****************************

v  ಕೇಳುತ್ತಿದೆಯಾ... 
          ದಶ ದಿಕ್ಕುಗಳಿಂದಲೂ 
          ಪ್ರೀತಿಯು ನಿನ್ನನ್ನು  ಕರೆಯುತ್ತಲೇ ಇದೆ... 
          ಯಾವಾಗಲೂ...
          ಇನ್ನಾದರೂ ಬರುವಿಯಲ್ಲಾ ನೀನು...
          ಹೆಚ್ಚು ಕಾಯಿಸಬೇಡವೋ!

****************************
v  ಒಲವೇ,
ನಿನ್ನ ಹಾದಿಯಲಿ ಪಯಣಿಗಳಾಗಲು... 
ಇರುವ ನಿನ್ನ ಕರಾರುಗಳಿಗೆಗೆಲ್ಲ
ನನ್ನ ತಕರಾರುಗಳಿಲ್ಲ.
ಸದಾ ತಗ್ಗಿ ಬಗ್ಗಿಯೇ ನಡೆವೆನೆಂದರೆ 
ನಂಬುವೆ ತಾನೆ!
 **************************************

v  ಒಲವೇ
ನೀನೆಷ್ಟು ನಿಕಟವಾಗಿರುವಿ ನನಗೆ?
ಖಂಡಿತವಾಗಿ ನನಗೊತ್ತು ನಿನಗಿದು ತಿಳಿದಿರಲಿಕ್ಕಿಲ್ಲವೆಂದು...
ಹೇಳಲೇ... ಕೇಳುವೆಯಾ...
ನನ್ನಾತ್ಮವನ್ನೂ ಮರೆಯುವಷ್ಟು...
ಕನ್ನಡಿಯೊಳಗೆ ಕಂಡ ಕಣ್ಣ ಬಿಂಬ ಹೇಳಿತು ಆ ಸತ್ಯವ!

************************************

v  ನಿಸರ್ಗ ನನ್ನೊಳು ಹುಟ್ಟಿಸಿತು 
ಅನುರಾಗ ಭಾವವನ್ನು...
ಆ ಭಾವವೇ ಕವಿತೆಗಳ  
ಹುಟ್ಟಿಗೆ ಪ್ರೇರಣೆಯಂತೆ!

*********************************

v  ಒಲವಿನ ಹೃದಯದ ಆಳದ ಪರೀಕ್ಷೆ 
ಮಾಡಲು ಹೊರಟವಳು ತನ್ನನ್ನೇ ಕಳಕೊಂಡಳಂತೆ!

*****************************
v  ಒಲವೇ...
ಹೇಳಲೇನೋ ಕಾತರಿಸಿದೆ...
ಕ್ಷಣದಲ್ಲೇ ತನ್ನ ತೆಕ್ಕೆಗೆ ಸೆಳೆಯಿತು...
ಮಾತ ಮರೆತು ಮೌನಿಯಾದೆ....
ಅದರ ಆಲಿಂಗದಲ್ಲಿ!

**************************
v  ಒಲವೇ,
 ನಿನ್ನ ನೋಟ ಚೆಲ್ಲಿದ ಕಿರಣ
 ನನ್ನೆದೆಯ ಹಣತೆಯ ಬೆಳಗಿಸಿದೆ!
**********************************

v  ಒಲವೇ,
          ಹೀಗೆಯೇ ಹಾಡುತ್ತಿರು...
ಕೊಂಚವೂ ವಿರಮಿಸದೇ...
           ಆಹಾ! ಸಗ್ಗದ ಗಂಧವ ಹೊತ್ತು ತರುತಿವೆ ನಿನ್ನೀ ಹಾಡು!
   
**********************
v  ಒಲವೇ
ನನ್ನ ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದ ನಿರ್ಣಾಯಕನು ನೀನೇ
ನಿನಗಾಗಿಯೇ ಮುಡಿಪು ನನ್ನೀ ಬದುಕು!
-
*****************
v  ಒಲವೇ,
ಪಂಜರದಲ್ಲೀಗ ಗಿಣಿಯಿಲ್ಲ ಕಾಮನಬಿಲ್ಲಿನಿಂದ ರಂಗಾದ 
ಆಗಸದಲಿ ಹಾರುತಿದೆ ಸ್ವಚ್ಛಂದವಾಗಿ!

************************

v  ಒಲವೇ,
          ಹೌದಲ್ಲವೇ, ನಿನ್ನೀ ಲೋಕ ಸಗ್ಗಕ್ಕಿಂತಲೂ ಸುಂದರ
ಧರ್ಮ, ಜಾತಿ, ಮೇಲು-ಕೀಳು, ರೋಗ-ರುಜಿನ...
ಇವುಗಳ ಕಾಟವೇ ಇಲ್ಲ.
ಎಲ್ಲರೂ ಸೇವಿಸುವ ಗಾಳಿ, ಆಹಾರ ಒಂದೇ..
ಅದುವೇ ಒಲವು!
ಎಲ್ಲರಲ್ಲೂ ನಿನ್ನ ವಾಸ...
ಎಲ್ಲರಲ್ಲೂ ನಿನ್ನದೇ ಛಾಯೆ...
ಎಲ್ಲರಲ್ಲೂ ನಿನ್ನದೇ ಮಾಯೆ...
-

***************************************

v  ಒಲವೇ,
          ನಿನಗಿದರ ಅರಿವಿದೆಯೊ ಇಲ್ಲವೋ ನಾನರಿಯೆ
          ನನಗದರರಿವಿದೆಯೆಂಬುವುದು ಮಾತ್ರ ನಿಜ
          ನಿನ್ನನ್ನು ಮೀರಿ ಶ್ರೇಷ್ಟವಿನ್ಯಾವುದೂ ಇಲ್ಲ
          ಈ ಬುವಿಯೊಳೂ, ಆ ಸಗ್ಗದೊಳೂ...
ಇನ್ನೇನು ಹೇಳಲು ಉಳಿದಿಲ್ಲ ಬಾಕಿ
          ಎಂಬುದನು ಮಾತ್ರ ಹೇಳಬಲ್ಲೆ!
 ******************************************

v  ಒಲವೇ,
ಬಲು ದೊಡ್ಡ 
ಮಾಯಾವಿಯೋ ನೀನು...
ನಿನ್ನನ್ನೇ ಶಬ್ದಗಳಿಂದ  
ಕಟ್ಟಿಹಾಕಲೆತ್ನಿಸಿದೆನಲ್ಲ!
ನೀನಾದರೋ ಯಾವ 
ಯತ್ನವೇ ಇಲ್ಲದೆ
ಮೌನದೇ ಸೆರೆಹಿಡಿದೆಯಲ್ಲೆನ್ನ!

**********************************

v  ಒಲವೇ,
ಗಂಟು ಮೂಟೆ ಕಟ್ಟಿಕೊಂಡು
ಹೊರಟಿದ್ದೆ ನಾನ್ಯಾವುದೋ ನಗರಿಗೆ
ಅವೆಲ್ಲವನ್ನೂ ಕಳೆದುಕೊಂಡು 
ತಲುಪಿದೆ ನಿನ್ನೂರಿಗೆ...


*************************************
v  ಒಲವೇ,
ಮರುಳಾದೆ ನಿನ್ನ ಮುದ್ದುಮಾತಿನ ಸೆಳೆತಕೆ
ಒಲಿದೆ ನಿನ್ನ ಜೇನಿನಂತ ಸವಿನುಡಿಗೆ
ಉರಿಯುತಿರುವೆ ನೀನೀಯುವ ನೋವಿಗೆ
ಸೋತೆ ಒಲವಿನ ಆಟದಲಿ
ಸೋತು ಗೆಲುವ ತವಕವೆನಗೆ
*************************
v  ಒಲವೇ,

ಕಳೆದೆವು ನಾವು ತಿನ್ನುಣ್ಣುವುದರಲ್ಲೇ ಹಗಲನ್ನೆಲ್ಲಾ

ಈ ಇರುಳಾದರೂ ನಮ್ಮಿಬ್ಬರದಾಗಿರಲಿ

ಸವಿಮಾತುಗಳನ್ನು ಕಿವಿಯೊಳಗೆ ಪಿಸುಗುಟ್ಟುತ್ತ

ಕಳೆಯೋಣ ಚಂದ್ರನಿಗೂ ಕಿಚ್ಚಾಗುವಂತೆ!
******************************

ಅರೇ, ನಾನ್ಯಾವಾಗ ಈ ಹಾದಿಗೆ ತಿರುಗಿದೆ
ನಾನೇ ಅಕ್ಕರೆಯಿಂದ ಆರಿಸಿದ ಹಾದಿ ತಪ್ಪಿದೆನೇ
ಗೊಂದಲದ ಭಾವ ಕ್ಷಣ ಮಾತ್ರ...
ಮುಖದ ಮೇಲೆ ಮೂಡಿದ ನಸುನಗು ತಿಳಿಸಿತು
’ಇದೆಲ್ಲಾ ನೀನೇ ಅಷ್ಟೇ ಅಕ್ಕರೆಯಿಂದ ಆರಿಸಿದ ಒಲವಿನ ಪ್ರೇರಣೆ ಕಣೇ!’
******************************


ಒಲವೇ,

ನೀನಿರೆ ಬಳಿಯಲಿ ಬದುಕಿನ ಭಾರವು ಹಗುರ!

ನೀನಿರೆ ಬಳಿಯಲಿ ಸುಡುವ ಬಿಸಿಲೂ ಬೆಳದಿಂಗಳು!

ನೀನಿರೆ ಬಳಿಯಲಿ ಚಂದ್ರನಿಲ್ಲದ ಇರುಳೂ ಹುಣ್ಣಿಮೆ!

ನೀನಿರೆ ಬಳಿಯಲಿ ನಡುಗುವ ದೇಹವೂ ಬೆಚ್ಚಗೆ!

ನೀನಿರೆ ಬಳಿಯಲಿ ಕಾಡದು ಹಸಿವು ತೃಷೆ!

ನೀನಿರೆ ಬಳಿಯಲಿ ಬಾರಳು ನಿಶೆ!

ನೀನಿರೆ ಬಳಿಯಲಿ ನನಗದೇ ನಶೆ!

***********************


ನನ್ನ  ದೃಷ್ಟಿ
ನನ್ನ  ಮನಸು
ನನ್ನ  ಬದುಕು
ಎಲ್ಲವೂ ಒಂದಾಗಿ ಹೋಗಿವೆ

ಒಲವಿನ ಮನದಲಿ ಅವಿತಿವೆ!

**********************

“ನಾನೇ ನಿನ್ನ ಮನವ ಬೆಳಗುವ ದಿನಕರ
ಪಾದದಿಂದ ನೆತ್ತಿಯವರೆಗೂ ಅಲೆಯುಕ್ಕಿಸಿ
ಮುತ್ತಿನ ಮತ್ತು ಚೆಲ್ಲುವ ಸಾಗರ
ನಿನ್ನೊಳಗಿರುವ ನನ್ನಾತ್ಮವೇ ಭೋಗದರಮನೆ
ಹೊರಗಿರುವುದು ಬರೇ ಮಣ್ಣಿನ ನೆಲ”
ನನ್ನ ಒಲವಂದಿತು ಮೆಲ್ಲನೆ ಕಿವಿಯೊಳಗೆ!












1 comment:

Anushanth said...

wonderful sheila

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...