ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 February, 2014

ಮನೆ ಮದ್ದು

“ ಢಣ್ ಢಣ್.. !”

ಭೀಮಸೇನ ಜೋಶಿಯವರ “ಕರುಣಿಸೋ ರಂಗ.. “ ದಲ್ಲಿ ಲೀನವಾಗಿದ್ದವಳನ್ನು ಎತ್ತಿ ಬಿಸಾಡಿದಂತಾಯಿತು!

ನಾ ಪೂರ್ತಿ ಬಾಗಿಲು ತೆರೆಯುವ ಮೊದಲೇ ಎರಡು ತುಂಬಿದ ಪ್ಲಾಸ್ಟಿಕ್ ಚೀಲಹಿಡಿದ ದಡೂತಿ ಹೆಂಗಸಳೊಬ್ಬಳು ಒಳನುಗ್ಗಿದಳು.

“ ಅರೇ ಸುಧಾ.. ಏನೇ? ಏನಾಯ್ತು? “

“ಮೊದಲು ಫ್ಯಾನು ಹಾಕು! ಲಿಂಬೆ ಶರಬತ್ತು ಮಾಡಿ ತಾ.. “

ಮರುಮಾತಾಡದೆ ಮೊದಲು ಫ್ರಿಡ್ಜ್ ನಲ್ಲಿ ಲಿಂಬೆ ಇದೆಯೇ ಅಂತ ನೋಡಿದರೆ ಇವಳ ಪುಣ್ಯ... ಅರ್ಧ ಕಾಯಿ ಇತ್ತು! ಐಸ್ ಹಾಕಿ ತಂದುಕೊಟ್ಟದನ್ನು ನಿಧಾನವಾಗಿ ಸಿಪ್ ಮಾಡುತ್ತಿದವಳು,

“ಅದೇನು ಜಾದು ಮಾಡ್ತಿಯಾ! ಪರ್ಫೆಕ್ಟ್ ರುಚಿ! ನಾ ಪ್ರತಿಸಲ ಮಾಡಿದಾಗ ಇಲ್ಲ ಸಕ್ಕರೆ ಹೆಚ್ಚು, ಅಥವಾ ಹುಳಿ.. ಮೊನ್ನೆಯಂತೂ ಉಪ್ಪು ಹೆಚ್ಚಾಯ್ತಂತ ಇವರ ಹತ್ತಿರ ಜ್ಯೂಸಿಗೆ ಉಪ್ಪು ಹಾಕಿದೆ ಅಂತ ಸಹಸ್ರನಾಮ ಅರ್ಚನೆ ಕೇಳಿಸ್ಕೊಳ್ಳಬೇಕಾಯಿತು!”

“ಅದ್ ಸರಿ.. ಇದೇನು ಇಷ್ಟು ಮಾತ್ರೆಗಳು? ತರಕಾರಿಗಿಂತ ಮಾತ್ರೆಗಳೇ ಹೆಚ್ಚಿವೆ!”

“ಅದು ಇದ್ದದೇ ಅಲ್ವೆ! ಬಿಪಿ, ಡಯಬಿಟಿಸ್.. ಇದೆಯಲ್ವಾ ಇಬ್ಬರಿಗೂ. ಶೃತಿಗೆ ವಾಂತಿ.. “

ಸುಧಾ ನನ್ನದೇ ಪ್ರಾಯದವಳು. ಒಬ್ಬಳೆ ಮಗಳು! ಆರ್ಥಿಕವಾಗಿ ಚೆನ್ನಾಗಿದ್ದಾರೆ. ಸ್ವಂತ ಫ್ಲಾಟು.. ಸ್ವಂತ ಕಾರೋಬಾರು!

“ಶೃತಿಗೆ ಏನಾಯ್ತು?”

“ಪ್ರತಿಸಲ ಎಕ್ಸಾಮ್ ಬಂದಾಗ ಇದೇ ಅವಸ್ಥೆ!“

“ಅರೇ ಮರತೇ ಹೋಗಿತ್ತು.. ನೀನು ನೆನಪು ಮಾಡಿಸಿದು ಒಳ್ಳೆದಾಯ್ತು.”

ಅಂದವಳು ಅಡುಗೆ ಕೋಣೆಗೆ ಹೋಗಿ ಹೊರಬಂದವಳ ಕೈಯಲ್ಲಿ ಕತ್ತಿಯಿದ್ದದನ್ನು ನೋಡಿ ಸುಧಾ ನಡುಗಿದಳು!

“ಅಲ್ವೇ, ನಾನೇನು ಮಾಡಿದೆ ನಿಂಗೆ? ಬಿಸಿಲಲ್ಲಿ ಬಾಯಾರಿತ್ತು.. ಜ್ಯೂಸು ಕೇಳಿದ್ದೂ ತಪ್ಪಾ?”

’ಅಯ್ಯೋ ನಿಂಗಲ್ವೇ ಮಾರಾಯ್ತಿ. ನೀ ಕೂತಿರು ಈಗ ಬಂದೆ!”

ಹೊರಹೋಗಿ ಬಂದವಳ ಕೈಯಲ್ಲಿ ಮರದ ತೊಗಟೆ, ಸಣ್ಣ ಸಣ್ಣ ಗೆಲ್ಲುಗಳು..

“ಇದೆಲ್ಲಾ ಏನು?”

“ನನ್ನ ಮಗಳಿಗೂ ಎಕ್ಸಾಮ್.. ಈಗಿನ ಮಕ್ಕಳು ಹಾಗೇ ಅಲ್ವಾ! ಪರೀಕ್ಷೆ ಹತ್ತಿರ ಬರುವ ತನಕ ಬುಕ್ ಮುಟ್ಟಲಿಕ್ಕಿಲ್ಲ.. ಮತ್ತೆ ರಾತ್ರಿ ಪೂರಾ ಕುಳಿತು ಬೆಳಿಗ್ಗೆ ತಲೆ ತಿರುಗ್ತದೆ.. ವಾಂತಿ! ಪಿತ್ತ ಕೆದರುತ್ತೆ!

ಅದಕ್ಕೆ ಅಮ್ಮ ಅತ್ತಿ ಮರದ ಕೆತ್ತೆಯ ಕಷಾಯ ಮಾಡಿ ಕೊಡು ಅಂದ್ರು. ಈವಾಗ ವಾರಕ್ಕೊಮ್ಮೆಯಾದರೂ ಮಾಡಿಕೊಡ್ತೇನೆ. ನಾನೂ ನನ್ನ ಗಂಡನೂ ಕುಡಿಯುತ್ತೇವೆ.. ಉಷ್ಣ ದೇಹಕ್ಕೂ ಒಳ್ಳೆಯದು!”

’ಈಗ್ಲೆ ಮಾಡ್ತಿಯಾ?’

ಆಸೆಯಿಂದ ಕೇಳಿದ್ಳು ಸುಧಾ!

’ನೋಡಮ್ಮ, ದೇಹ ಪ್ರಕೃತಿ ಗೊತ್ತಿರಬೇಕು! ನಂಗೆ ನನ್ನದು ನನ್ನ ಮಕ್ಕಳದು ನನ್ನ ಪತಿಯದ್ದು ಚೆನ್ನಾಗಿ ಗೊತ್ತಿದೆ! ಅದರ ಪ್ರಕಾರ ಈ ಸೊಪ್ಪಿದು ಕಷಾಯ ಮಾಡ್ತೇನೆ. ಆದರೆ ನಿಂದು ಹೇಗಂತ ಗೊತ್ತಿಲ್ಲ. ಈ ಹಿಂದೆನೂ ನಿಂಗೆ ನಾನು ಅಮೃತ ಬಳ್ಳಿ ಎಲೆಗಳನ್ನು ತಿನ್ನು ಅಂತ ಹೇಳಿ ಕೊಟ್ಟಿದ್ದೆ. ನೀ ತೆಗೆದುಕೊಂಡು ಹೋದವಳು ಅಲ್ಲೇ ಅಡುಗೆ ಮನೆಯಲ್ಲಿ ಬಿಸಾಕಿದಿಯ! ಕೇಳಿದಕ್ಕೆ ರುಚಿಯಿಲ್ಲ.. ಕಹಿ , ಬಾಯಿ ಒಗರು ಅಂತೆಲ್ಲ ಹೇಳ್ತಿಯಾ!

ಬಾಯಿಗೆ ಕಹಿಯಾದರೂ ಕಾಯಕ್ಕೆ ಒಳ್ಳೆಯದಮ್ಮ! ಒಂದಿಷ್ಟು ಮೈ ಬಗ್ಗಿಸಿ ಕೆಲಸ ಮಾಡು. ನಿತ್ಯ ಜೀವನದಲ್ಲಿ ಉಲ್ಲಾಸ ಉತ್ಸಾಹಗಳನ್ನು ತುಂಬುವಂತ ಬರಹಗಳನ್ನು ಓದು. ಸಂಜೆ ಗಾಂಧಿ ಪಾರ್ಕಿನಲ್ಲಿ ಮಕ್ಕಳು ಜೋಕಾಲಿಯಲ್ಲಿ ಆಡುವುದನ್ನು ನೋಡುತ್ತಾ ಒಂದು ಐದಾರು ಸುತ್ತು ಹಾಕು. ಹದಿನೈದು ದಿನದಲ್ಲಿ ಬದಲಾವಣೆ ಕಾಣದಿದ್ದರೆ ನನ್ನ ಹೆಸರನ್ನೇ ಬದಲಿಸ್ತೇನೆ.”

“ಇಲ್ವೆ, ಇನ್ನು ಮುಂದೆ ನೀ ಹೇಳಿದ ಹಾಗೆ ಅಮೃತ ಬಳ್ಳಿ ಎಲೆ ದಿನಾ ತಿನ್ತೇನೆ. ಬೆಳಿಗ್ಗೆ ನಿಮ್ಮಮನೆ ಕಡೆಯಿಂದಲೇ ವಾಕಿಗೆ ಹೋಗುವಾಗ ತಿಂದು ಹೋಗ್ತೇನೆ. ಪ್ಲೀಸ್ ಕಣೆ, ಈಗ ಕೋಪ ಮಾಡದೇ ಕಷಾಯ ಮಾಡು.. ನನ್ನ ಮಗಳಿಗೆ ಕೊಡ್ತೇನೆ. ಅವಳ ಅವಸ್ಥೆ ನೋಡ್ಲಿಕ್ಕೆ ಆಗೊಲ್ಲ.”

ನಂಗೆ ಹೇಳ್ಬೇಕಾ.. ಪ್ರವಚನ ಮಾಡ್ಲಿಕ್ಕೆ..
ಹಿರಣ್ಯಕಶ್ಯಪುವಿನ ಹೊಟ್ಟೆ ಬಗೆದು ಕರುಳನ್ನು ಮಾಲೆಯಾಗಿ ಹಾಕಿಕೊಂಡ ನರಸಿಂಹನಿಗೆ ಹಿರಣ್ಯಕಶ್ಯಪನ ಹೊಟ್ಟೆಯಲ್ಲಿದ್ದ ವಿಷದ ಪರಿಣಾಮವಾಗಿ ಉರಿಯಲಾರಂಭಿಸಿತಂತೆ. ಆಗ ಮಾಹಾಲಕ್ಷಿ ಇದೇ ಅತ್ತಿ ಹಣ್ಣಿನ ಲೇಪ ಮಾಡಿ ಉರಿತಣಿಸಿದಳಂತೆ..

 ಮಾತಾಡ್ತಾ ಎಲೆ ಸಿಪ್ಪೆಗಳನ್ನು ದೊಡ್ಡ ತಪಲೆಯಲ್ಲಿ ಮುಕ್ಕಾಲು ನೀರು ಇಟ್ಟು ಗ್ಯಾಸ್‍ನಲ್ಲಿ ಕಾಯಿಸ್ಲಿಕ್ಕೆ ಇಟ್ಟೆ. ಒಳ್ಳೆ ಕುದಿ ಬಂದ ನಂತರ ತಣಿಸಿ ಬಾಟ್ಲಿಯಲ್ಲಿ ಹಾಕಿ ಮೊದಲು ಖಾಲಿ ಹೊಟ್ಟೆಯಲ್ಲಿ ಮಗಳಿಗೆ ಕುಡಿಯಲು ಕೊಡು ಮತ್ತು ವಾಂತಿಗೆ ಒಂದಿಷ್ಟು ಏಳಕ್ಕಿ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಆ ನೀರು ಕುಡಿಯಲು ಕೊಡು ಎಂದು ಹೇಳಿದ್ದೆ.  ಮತ್ತೆ ಫೋನು ಬಂದಿತ್ತು. ಹಾಗೆ ಮಾಡಿದ್ದಾಳಂತೆ. ಮಗಳು ಆರಾಮಾಗಿದ್ದಾಳೆ ಅಂತೆ!

ಅತ್ತಿ ಮರದ ಸಿಪ್ಪೆ ಪಿತ್ತಕ್ಕೆ ರಾಮಬಾಣ! ಅದರ ಎಲೆ ಮತ್ತು ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಅರ್ಧಕ್ಕೆ ಇಳಿಸಿ ಕಷಾಯ ಮಾಡಿ ಕುಡಿದರೆ ಉಷ್ಣಕ್ಕೂ ಪಿತ್ತಕ್ಕೂ ಸಕ್ಕರೆ ಖಾಯಿಲೆಗೂ ಒಳ್ಳೆಯದು. ಸ್ವತಃ ಉಷ್ಣ ಬಾಧೆಯಿಂದ ಮುಕ್ತಳಾಗಿದ್ದೇನೆ. ಆದರೂ ಯಾವುದಕ್ಕೂ ಆಯುರ್ವೇದಿಕ ವೈದ್ಯರ ಸಲಹೆಯಿಲ್ಲದೆ ಮತ್ತು ದೇಹ ಪ್ರಕೃತಿ ಗೊತ್ತಿಲ್ಲದೆ ಮದ್ದು ಮಾಡುವುದು ಒಳ್ಳೆಯದಲ್ಲ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...