ಒಂದು ಜಿಜ್ಞಾಸೆ..
--------------------
ದೂರ ಸರಿ ಗೆಳೆಯ!
ದಿಟದಿ ಚಂಚಲೆಯೀ
ಸೊಬಗಿನವಳು;
ಹೆಡೆಯನಾಡಿಸುವ
ಚೆಲುವ ನಾಗರವ
ಹೋಲುವಳು.
ದೂರದಿಂದಲೇ ತನ್ನ
ಕುಡಿ ನೋಟವೆನ್ನುವ
ವಿಷದ ಉರಿಯಲ್ಲೇ
ನಿನ್ನ ಸುಡಬಲ್ಲಳು!
ನಿನ್ನ ಕಚ್ಚಿದರೆ
ಬೇರೆ ಹಾವುಗಳು,
ಬದುಕಿಸಿಯಾರು
ನುರಿತ ವೈದ್ಯರು
ಚತುರೆ ಹೆಣ್ಣೆಂಬ
ಹಾವಿಗೆ ಸಿಲುಕಲು
ಉಳಿಸುವ ಆಸೆಯ
ತೊರೆದುಬಿಡುವರು!
- ಕವಿಯ ಹೆಸರು ತಿಳಿದಿಲ್ಲ
ಸಂಸ್ಕೃತ ಮೂಲ:
ಅಪಸರ ಸಖೇ ದೂರಾದಸ್ಮಾತ್ ಕಟಾಕ್ಷ ವಿಷಾನಲಾತ್
ಪ್ರಕೃತಿ ಕುಟಿಲಾದ್ಯೋಷಿತ್ಸರ್ಪಾದ್ವಿಲಾಸಫಣಾಭೃತಃ |
ಇತರ ಫಣಿನಾ ದಷ್ಟಃ ಶಕ್ಯಶ್ಚಿಕಿತ್ಸಿತುಮ್ ಔಷಧೈಃ
ಚತುರವನಿತಾ ಭೋಗಿಗ್ರಸ್ತಂ ತ್ಯಜಂತಿ ಹಿ ಮಂತ್ರಿಣಃ |
ಮಿತ್ರರ ಕುತೂಹಲ.. ಇಲ್ಲಿ ಹೆಣ್ಣನ್ನು ತೆಗಳಲಾಗಿದಿಯೆ, ಇಲ್ಲಾ ಹೊಗಳಲಾಗಿದೆಯೇ?
ಅದಕ್ಕೆ ನನ್ನ ಉತ್ತರ-
“ನಾರಿ ಮುನಿದರೆ ಮಾರಿ”
ಸ್ತ್ರೀ ಗುಲಾಬಿಯ ಪಕಳೆಗಳಂತೆ ಕೋಮಲ.. ಆದರೆ ವಜ್ರದಷ್ಟೇ ಕಠೋರಳೂ ಹೌದು. ತನ್ನವರಿಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಡುವವಳು, ವಾತ್ಸಲ್ಯದ ಗಣಿಯೂ ಹೌದು! ವಾತ್ಸಲ್ಯದ ಉಡುಗೊರೆ ಮಾತ್ರವಲ್ಲ, ಪ್ರಕೃತಿಯು ಅವಳಿಗೆ ತನ್ನ ಸೌಂದರ್ಯದ ಮಹತ್ತರ ಪಾಲನ್ನೂ ದಯಪಾಲಿಸಿದೆ.
ಪ್ರಕೃತಿಯ ನಂತರ ಸ್ತ್ರೀಯೇ ಎಲ್ಲಾ ಕಲಾಕಾರರಿಗೆ ನಿಕಟವಾದ ಸಬ್ಜೆಕ್ಟ್! ವಿದ್ಯೆಯ ಅಧಿಪತಿಯೂ ಒಬ್ಬ ಸ್ತ್ರೀಯೇ. ತೋಳಿನ ಬಲವಿಲ್ಲದೆಯೂ ಅವಳು ಬಲ ತೋರಬಲ್ಲಳು. ಒಬ್ಬ ಸ್ತ್ರೀ ಸಮರ್ಥವಾಗಿ ದೇಶವನ್ನೂ ಆಳಬಲ್ಲಳು.. ಅಂತೆಯೇ ಬಲಿಷ್ಠ ಪುರುಷನನ್ನೂ ತನ್ನ ಕಣ್ ನೋಟದಲ್ಲಿ ಕುಣಿಸಲೂ ಬಲ್ಲಳು!
ಮನೆ ಮಕ್ಕಳು ಜತೆ ಸಂಪಾದನೆಯನ್ನೂ ಮಾಡಿ ಸಂಸಾರ ಚಕ್ರವನ್ನು ಒಬ್ಬಳೇ ನಡೆಸಬಲ್ಲ ಚತುರೆಯೂ ಹೌದು!
ಇಷ್ಟೆಲ್ಲ ಇದ್ದೂ ಅವಳು ಬಲಹೀನಳು.. ಬರೇ ಭಾವನಾತ್ಮಕವಾಗಿ ಆಲೋಚಿಸುವುದರಿಂದ ಸೋತುಬಿಡುತ್ತಾಳೆ! ತನ್ನವರ ಘನತೆಗಾಗಿ, ವಾತ್ಸಲ್ಯಕ್ಕಾಗಿ ಸೋಲನೊಪ್ಪಿಕೊಳ್ಳಲೂ ತಯಾರಾಗುತ್ತಾಳೆ.
ಇಲ್ಲಿ ಸೂಕ್ಷವಾಗಿ ಗಮನಿಸಿದರೆ ಕವಿ ಹೆಣ್ಣಿನ ಹಿರಿಮೆಯನ್ನು ಎತ್ತಿ ಹಿಡಿದು ಹೊಗಳಿದ್ದಾನೆ.. ಎಚ್ಚರಿಸಿದ್ದಾನೆ. ಅವಳ ತಾಳ್ಮೆಯ ಅಣೆಕಟ್ಟು ಒಡೆಯದಿರು.. ಹಾಗಾದರೆ ಮುಂದೆ ಆಗುವ ಅನಾಹುತಗಳನ್ನು ತಿಳಿಸಿದ್ದಾನೆ!
ಅವಳು,
ತಣ್ಣಗಿನ ಮಂಜೂ ಹೌದು,
ಭಗ ಭಗ ಉರಿವ ಅಗ್ನಿಯೂ ಹೌದು,
ಅರ್ಥವಾಗದವಳು ಹೌದು,
ಅರ್ಥವಾಗುವವಳೂ ಹೌದು,
ಕಣ್ ನೋಟದಲ್ಲೇ ಆಡಿಸಬಲ್ಲ ಚತುರೆಯೂ ಹೌದು,
ಕಣ್ ಸನ್ನೆಗೆ ಮರುಳಾಗಿ ದಾಸಿಯೂ ಆಗಬಲ್ಲಳೂ ಹೌದು!
No comments:
Post a Comment