ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

23 February, 2014

ಮನದ ಮಾತು..

ಮನದ ಮಾತು..
-------------

ಏನು, ಶಿವರಾತ್ರಿ ಗಾಳಿ ಜೋರು ಬೀಸ್ತಿದೆ! “
ಇವಳೊಬ್ಬಳದು ವ್ಯಂಗ್ಯ ಬಾಕಿ ಇತ್ತು. ಸರಿ, ನೀರಿಗಿಳಿದಾಗಿದೆ, ಇನ್ನು ಚಳಿ ಅಂತ ನೆವನ ಗಿವನ ಯಾಕೆ!
“ಹೌದು ಕಣೆ! ಇನ್ನೇನಾದ್ರು ಉಪದೇಶ?”
“ಅಲ್ವೇ, ಏನು ಗೊತ್ತಿದೆಯಂತ ಅವರಿವರ ಜತೆ ಪೈಪೋಟಿಗಿಳಿತಿಯಾ?”
“ಹ್ಮ್.. ನಿಂಗೆ ನಾ ಹೇಳೋದೆಲ್ಲ ಕೇಳುವಷ್ಟು ತಾಳ್ಮೆ ಇದೆಯಾ?”
“ಹೇಳ್ಲಿಕ್ಕೆ ಸುರು ಮಾಡು.. ನೋಡುವಾ!”
1. ನಾ ಬರೆದುದನ್ನು ಎಂದೂ ಸಾಹಿತ್ಯ ಅಂತ ಪರಿಗಣಿಸಿಲ್ಲ.. ಬರವಣಿಗೆ ನನಗೆ ಒಂದು ಥೆರಪಿ!
2. ಒಲವು.. ಪ್ರೀತಿ, ನದಿ, ಜಲಪಾತ, ಹಸುರು, ಕ್ರಿಮಿ, ಕೀಟ, ಮಿಗ, ಖಗ..  ಭಾವುಕತೆ.. ಜತೆಗೆ ನನ್ನ ಬದುಕಿನಲ್ಲಿ ಹಾಸುಕೊಕ್ಕಾದ ಆತ್ಮೀಯರು.. ಇವುಗಳ ಸುತ್ತಲೂ ನನ್ನ ಬದುಕು ಮತ್ತು ಅವರೆಲ್ಲ ನನಗೆ ಆಮ್ಲಜನಕದ ಹಾಗೆ.. ಒಮ್ಮೆ ಬದುಕಲ್ಲಿ ಪ್ರವೇಶಿಸಿದವರು ಮತ್ತೆ ಹೊರಹೋಗಲಾರರು..  ಹವಮಾನದ ಬದಲಾದಂತೆ ನಾ ಬದಲಾಗೊಲ್ಲ!
3. ಸಣ್ಣವಳಾಗಿನಿಂದಲೂ ಕೋಗಿಲೆ ಅತೀ ಪ್ರಿಯವಾಗಿದ್ದರೂ, ಕಳೆದ ವಸಂತ ಋತುವಿನಲ್ಲಿ ನನ್ನ ಬರವಣಿಗೆಯ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿತು.
4. ಬರೆಯುತ್ತಾ ಮನದೊಳಗಿನ ಸಾಂದ್ರತೆ ಕಡಿಮೆಯಾಯಿತು.. ಹರಳುಗಟ್ಟಿದ ಭಾವಗಳಿಗೆ ಇಲ್ಲಿನ ದಿನನಿತ್ಯದ ಓದಿನ ಬಿಸಿ.. ಮತ್ತೆ ಕರಗದೇ ಇದ್ದಿತೇ!
5. ಅಂತರ್ಜಾಲದ ಕಿಟಿಕಿಯ ಮೂಲಕ ಸಾಹಿತ್ಯದ ವಿವಿಧ ಪ್ರಕಾರ, ಉದ್ದಗಲ, ಆಳದ ಅನುಭೂತಿ ಸ್ವರ್ಗದ ಬಾಗಿಲಿಗೆ ತಲುಪಿಸಿತು.. ಆದರೆ ನನ್ನ ಬರವಣಿಗೆ ಸ್ವರ್ಗದ ಬಾಗಿಲನ್ನೇ ತೆರೆಸಿತು!
6. ಬಹುಶಃ ಆರೇಳು ತಿಂಗಳ ಹಿಂದೆ ಹೈಕು ಪರಿಚಯ.. ಮೊದಲ ನೋಟಕ್ಕೆ ಅನುರಾಗ.. ಅದು ಪ್ರಕೃತಿಗೆ ಅತೀ ಹತ್ತಿರವೆಂದು ಮತ್ತಿಷ್ಟು ಹೆಮ್ಮೆ.. ಆದರೆ ಅರ್ಥವಾಗಿರಲಿಲ್ಲ. ಬಿಟ್ಟು ಕೊಡುವ ಜಾತಿಯವಳಲ್ಲ.. ಓದುತ್ತಿದ್ದೆ.. ಬರೆಯುತ್ತಿದ್ದೆ.
7. ಬಹುಶಃ ಮುಖ ಪುಸ್ತಕದಲ್ಲಿ ವ್ಯಾಪಕವಾಗಿರುವ ಎಲ್ಲಾ ಪ್ರಕಾರದ ಸಾಹಿತ್ಯದಿಂದಲೇ ನಾನು ಹೆಚ್ಚಿನದನ್ನು ಕಲಿತೆ. ನನ್ನ ಅಂಬೆಗಾಲಿನ ಹೆಜ್ಜೆಗೆ ಬಹಳಷ್ಟು ಸ್ನೇಹಿತರ ಸಹಾಯ ಹಸ್ತದ ನೆರವನ್ನು ನಾನು ಯಾವತ್ತೂ ಮರೆಯಲಾರೆ.
8. ರೂಮಿ.. ನನ್ನ ಹರೆಯದ ದಿನಗಳಲ್ಲೇ ಹತ್ತಿರವಾದವ.. ಆದರೆ ಅವನನ್ನು ಅರ್ಥಮಾಡಿಕೊಂಡದ್ದು ಈಗ. “ಅರೇ, ಅದ್ಹೇಗೆ ನೀ ನನ್ನ ಮನ ಓದಿದಿಯಾ? “ ಅಂತ ನಾನೇ ಅವನಿಗೆ ಹೇಳ್ತಿರ್ತೇನೆ! ಆದರೂ ನನ್ನ ಬರಹಗಳಿಗೆ ಅವನು ಸ್ಫೂರ್ತಿ ಅಂತಲೇ ಹೇಳ್ತೇನೆ ಹೂರತು ಎಂದೂ ನನ್ನದೇ ಅಂತ ಡಂಗುರ ಹೊಡಿಯೊಲ್ಲ. ಬೇರೆಯವರ ಭಾವ, ಶಬ್ದ ಬಳಸಿ ಮೆಚ್ಚುಗೆ ಪಡೆಯುವ ಇರಾದೆ ನನ್ನಲ್ಲಿ ಇಲ್ಲ.
9. ಕೊನೆಯದಾಗಿ, ನನ್ನ ಕಾಗುಣಿತ ತಪ್ಪುಗಳನ್ನಾಗಲಿ, ಅಥವಾ ಅನರ್ಥವಾಗುವ ಶಬ್ದ ಬಳಕೆಯನ್ನಾಗಲಿ ತಿದ್ದಿಕೊಳ್ಳಲು ಯಾವತ್ತೂ ತಯಾರು... ಭಾವವನ್ನು ಅಲ್ಲ! ಇಷ್ಟು ಹೇಳಿಯೂ ನಿನಗೆ ನನ್ನ ಹೈಕು, ರೂಮಿ, ಒಲವು ಅಥವಾ ಸುಭಾಷಿತ ಕವನ.. ಅಸಮ್ಮತಿ ಇದ್ದರೆ.. ಒಂದೋ ನನ್ನ ಬರಹಗಳನ್ನು ಓದಬೇಡ. ಇಲ್ಲಾ ಕಾಣದಂತೆ ಇರುವ ಸೌಲಭ್ಯವನ್ನು ಪ್ರಯೋಗಿಸು!


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...