ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

06 February, 2014

“ಎಲ್ಲಾ ಫೇಸ್ ಬುಕ್ ಮಹಿಮೆ!”

“ಎಲ್ಲಾ ಫೇಸ್ ಬುಕ್ ಮಹಿಮೆ!”
---------------------------


ಪ್ಲೀಸ್ ಕಣೇ, ಅದೆಷ್ಟು ಹೊತ್ತು ತೆಗಿತಿಯಾ? ನಂಗೆ ಸ್ವಲ್ಪ ಪ್ಲಾಸ್ಟಿಕ್ ಐಟಮ್ ಗಳು ಬೇಕಿತ್ತೇ! ಲೇಟ್ ಆಗುತ್ತೆ!“

ಅಷ್ಟು ಹೇಳಿದವಳ ಮುಖದಲ್ಲಿ ಈಗ ಪರಮಾಶ್ಚರ್ಯ! ಕುಮಾರವ್ಯಾಸರ “ಗದುಗಿನ ಭಾರತ”ದ ಮೇಲಿನ ಟಿಪ್ಪಣಿ ಪುಸ್ತಕ ನನ್ನ ಕೈಯಲ್ಲಿ ನೋಡಿದಾಗ!

“ಏನೇ, ಏನೋ ಫೇಸ್ ಬುಕ್‍ನಲ್ಲಿ ಕವನ ಗೀಚೊದ್ದು ನೋಡಿದ್ದೆ, ಅದ್ಯಾವಾಗದಿಂದ ಹಳೆಗನ್ನಡ ಓದೋ ಅಭ್ಯಾಸ ಮಾಡಿದಿ? ನಂಗಾದ್ರೂ ಒಂಚೂರು ಗೊತ್ತಿತ್ತು, ಆದ್ರೆ ನೀನು ಬರೇ ಸಂಸ್ಕೃತ ಓದಿದೋಳು!”

ಎಂದಿನಂತೆ ಬಾಯಿ ಅಗಲವಾಗಿ ಬಿಡಿಸಿ ಪಕಪಕ ನಕ್ಕೆ!

“ನೋಡು ಇಪ್ಪತ್ತಮೂರು ವರ್ಷದ ನಂತರ ಸಿಕ್ಕಿದ್ದಿ, ಆದ್ರೂ ನಿನ್ನ ಮಂಕು ಅನ್ಲೇ ಬೇಕಾಗುತ್ತೆ ನೋಡು! ಬುಕ್ಸ್ ತೆಕೊಂಡ ಮಾತ್ರಕ್ಕೆ ಓದ್ಲೇಬೇಕಂತ ರೂಲ್ ಇದೆನಾ? ಓಹೋ, ಹಂಗಾರೆ ನನ್ನ ಪೋಸ್ಟ್‌ಗಳನ್ನೆಲ್ಲಾ ನೋಡ್ತಿ,, ಮತ್ತೆ ಒಂದಿನಾದ್ರೂ ಲೈಕ್ ಬಿಸಾಕಿಲ್ಲ!

ಹ್ಮೂಂ, ನಿಮ್ಗೆಲ್ಲಾ ಹೊಟ್ಟೆಕಿಚ್ಚು! ಹ್ಮ್ ನೀವೂ ಇದ್ದಿರಾ.. ಫ್ರೆಂಡ್ಸ್ ಗಳಂತೆ..

ನೀನು, ಕುಮುದ, ಸುಮನ, ಪಲ್ಲವಿ, ಮಾಧವದಾಸ್, ರಘುವೀರ್, ದಾಮೋದರ್.. ಎಲ್ಲರೂ ದಂಡ ಪಿಂಡ! ಆ ಮುಕ್ತ ಒಬ್ಬಳೇ ಆಗ್ಬಹುದು.. ಅಪರೂಪಕ್ಕೆ ಬಂದು ಲೈಕ್ ಹಾಕಿ ಹೋಗ್ತಾಳೆ!"

ಶೈಲಾ ನನ್ನ ಕಾಲೇಜುಮೇಟ್! ಇಪ್ಪತ್ತೆರಡು ವರ್ಷದ ನಂತರ ಅಜಾನಕ್ಕಾಗಿ ಜಾತ್ರೆಯಲ್ಲಿ ಸಿಕ್ಕಿದಳು. ಬುಕ್ ಸ್ಟಾಲ್ ನೋಡಿ ಅವಳನ್ನು ಎಳೆದು ಅಲ್ಲಿಗೊಯ್ದಿದ್ದೆ.

“ಅಲ್ವೇ, ಸಪ್ನ ಬುಕ್‍ನವರದು ಡಿಸ್ಕೌಂಟ್ ಇತ್ತಲ್ವಾ?”

“ಬಿಡೆ, ಪುರುಸೊತ್ತಾಗಲಿಲ್ಲ.. ನೋಡು ಇವ್ನ ಹತ್ತಿರ ಅದಕ್ಕಿಂತಲೂ ಹೆಚ್ಚು ಡಿಸ್ಕೌಂಟ್‍ನಲ್ಲಿ ತಕ್ಕೊಳ್ತೇನೆ.”

“ಮೇಡಂ.. “

ಕತ್ತು ತಿರುಗಿಸಿದವಳಿಗೆ ಕಂಡಿದ್ದು ಚಂದನ ಹೆಸರು ಬರೆದಿದ್ದ ಮೈಕು!

ಹರೆಯದ ಹುಡುಗನೊಬ್ಬ ನನ್ನ ಮೂಗಿನ ಹತ್ತಿರ ಮೈಕು ತಂದು,

“ಮೇಡಂ, ಕುಪ್ಪಳ್ಳಿಯಲ್ಲಿ ನಡೆದಿದ್ದ ಕಾವ್ಯ ಕಮ್ಮಟಕ್ಕೆ ಹೋಗಿದ್ರಾ?”

’ಅಯ್ಯೋ, ಇವತ್ತು ಹೆಚ್ಚೇ ಪೌಡರ್ ಹಾಕ್ಬೇಕಿತ್ತು! ಈ ಮಂಗ್ಳೂರಿನ ಬಿಸಿಲಿಗೆ ಬಿಸ್ಕುಟ ಅಂಬಡೆಯನ್ನೂ ಕಾಯಿಸುವಷ್ಟು ಎಣ್ಣೆ ಮುಖದ ಮೇಲೆ ಶೇಖರವಾಗ್ತದೆ. ಲಿಪ್‍ಸ್ಟಿಕ್ ಒಣಗಿದೆಯೇನೋ, ಶೈಲನ ಹತ್ತಿರ ಹೆಚ್ಚು ಮಾತಾಡ್ಬಾರದಿತ್ತು! ಈ ಇಂಟರ್ನಾಷನಲ್ ಕಂಪನಿಯವರು ಮುನ್ನೂರು ರೂಪಾಯಿಗೂ ಬಣ್ಣ ಹಾಕಿದ ವ್ಯಾಕ್ಸ್ ಕಡ್ಡಿ ಕೊಡೊದು.. ಇತ್ತೀಚೆಗೆ ಇವ್ರ ವಾಲೆಟ್ ಇತ್ತೀಚೆಗೆ ಸಿಗುದೇ ಕಷ್ಟವಾಗಿದೆ..  ಹತ್ತಹತ್ತು ಎಗರಿಸಿಯೂ ಸಿಕ್ಕಿಬೀಳ್ತೇನೆ!

ಅಯ್ಯೋ ಕರ್ಮ, ಹೋಗಿದ್ದೆ ಅಂತ ಹೇಳ್ಲಾ, ಬೇಡ ಬೇಡ, ಸುಳ್ಳು ಹೇಳಿ ಇದ್ದ ಮರ್ಯಾದೆಯನ್ನೂ ಮೂರು ಕಾಸಿಗೆ ಹರಾಜು ಮಾಡೋದು ಬೇಡ!’

“ಇಲ್ಲರೀ, ನಂಗೆ ಆಮಂತ್ರಣನೂ ಬಂದಿತ್ತು.. ನಾನು ಹೋಗಿಲ್ಲ ಅಂತ ಎಲ್ರೂ ಬೇಜಾನ್ ಬೇಜಾರಾಗಿದ್ರು! ಯು ಸೀ, ನಾನು ಸ್ವಲ್ಪ ಬಿಜಿ! ಆದ್ರೆ ನಿಮ್ಗೆ ಅಲ್ಲಿ ನಡೆದುದನೆಲ್ಲಾ ಹೇಳ್ಬಲ್ಲೆ!”

“ಏಯ್ ಹೇಗೂ ಮೇಡಂ ಅಲ್ಲಿ ನಡೆದುದನೆಲ್ಲಾ ಹೇಳ್ತಾರಂತಲ್ಲ.. ಇನ್ನು ಯಾರನ್ನು ಹುಡುಕೊಂಡು ಹೋಗೋದು! ಇವ್ರ ಸಂದರ್ಶನನೇ ತಕ್ಕೊ!”

ಹಿಂದಿನಿಂದ ಆದೇಶ ಬಂತು!

ಗಂಟಲು ಸರಿಮಾಡ್ಕೊಂಡೆ!

“ಮೇಡಂ ಕವನ, ಕಾವ್ಯ, ಗದ್ಯ್ .. ಹೀಗೆ ಯಾವುದೇ ಪ್ರಕಾರವಿರಲಿ, ಇವನೆಲ್ಲಾ ರಚಿಸ್ಲಿಕ್ಕೆ ಬೇಕಾದ ಮುಖ್ಯ ಅರ್ಹತೆ ಏನು?”

ಮೂರು ನಾಲ್ಕು ದಿನಗಳಿಂದ ರೂಪಲಕ್ಷ್ಮಿಯವರ ಸ್ಟೇಟಸ್ ಓದಿದ್ದ ನಂಗೆ ಮೂಗಿಗೆ ವಾಸನೆ ಬಡಿಯಿತು.. ಆಹ್! ಮತ್ತಿಷ್ಟು ಗೊಜಲು ಗೊಂದಲ!

“ಅಯ್ಯಾ ಹುಡುಗಾ, ನಿಂಗೆ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಗೊತ್ತಾ?”

ಹುಡುಗನ ಮುಖದಲ್ಲಿ ಗಲಿಬಿಲಿ..

“ಇವ್ರೆಲ್ಲಾ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳೇನು?”

’ಓಹೋ ಈ ಬೆಪ್ಪುತಕ್ಕಡಿಗೆ ಏನೂ ಗೊತ್ತಿಲ್ಲ.

ತಕ್ಷಣ ಈಶ್ವರಕಿರಣ್ ಭಟ್ ಮತ್ತು ರಾಧಾಕೃಷ್ಣ ಹಾಕ್ತಿದ್ದ ಕುಮಾರವ್ಯಾಸರ ನಾಲ್ಕು ಲೈನುಗಳನ್ನು ರೈಲಿನಂತೆ ಬಿಟ್ಟೆ!

’ಹೋಗ್ಲಿ, ನಿಂಗೆ ದಲಿತ ಕಾವ್ಯ ಗೊತ್ತಾ’

ಮಹಾದೇವ ಅವರದ್ದು ಬಸೂ ಅವ್ರ ಬ್ಲಾಗ್ ನಲ್ಲಿ ಓದಿದ್ದು ನೆನಪಿತ್ತು..

’ಪಾಪ, ನವ್ಯ ಕಾವ್ಯ ಗೊತ್ತಿರ್ಬೇಕು ಅಲ್ವಾ?

ಕಾವ್ಯ ಕಾರಣದ ನನಪು ಬಂತು.. ಮತ್ತಷ್ಟು ಬುರುಡೆ ಬಿಟ್ಟೆ. (ಯಪ್ಪಾ ಪ್ರವರನ ಫ್ರೆಂಡ್ ರಿಕ್ವೆಸ್ಟ್ ಒಪ್ಪಿದ್ದು ಒಳ್ಳೆದಾಯ್ತು!)

“ಸಖೀಗೀತೆ, ದಾಸ ಸಾಹಿತ್ಯ.. ಏನಾದ್ರೂ..”

ಹುಡುಗನ ಮುಖದ ಮೇಲೆ ಸ್ವಲ್ಪ ಕಳೆ..

ಮಲ್ಲಿಗೆ ಕವಿ ಗೊತ್ತು ಮೇಡಂ, ಅದೇ ಪ್ರೇಮಕವಿ- ಕೆ ಎಸ್ ನ, ಆದ್ರೆ ಸಖಿ..

ತಟ್ಟನೆ ಆಸು ಮತ್ತು ಗಂಗಾಧರರನ್ನು ಉದ್ಧರಿಸಿದೆ!

ಮತ್ತೆ ಚುಟುಕು ಸಾಹಿತ್ಯ..

ದಿನಕರ ದೇಸಾಯಿಗಿಂತ  ಪರೇಶ್ ಮತ್ತು ಗುರುನಾಥ್ ಬೋರಗಿ ಅಣ್ಣ ಅವರ ಬರಹಗಳ ನೆನಪು ಚೆನ್ನಾಗಿತ್ತು..

ಸಿನೆಮಾ ಸಾಹಿತ್ಯ, ಹಾಯ್ಕು, ದ್ವಿಪದಿ, ತ್ರಿಪದಿ.. ನೆನಪಾದ ಷಟ್ಪದಿ..

ಜಯಂತ್ ಕಾಯ್ಕಿಣಿ, ವಿವೇಕಾನಂದ ಕಾಮತ್.. ಬಸು, ಪ್ರಕಾಶ್ ಖಾಡೆ..

ರಾಘವೇಂದ್ರ ಜೋಷಿಯವರ ಕೈಬರವಣಿಗೆಯ ಹಾಯ್ಕ ಓದಿದ್ದು ಸಾರ್ಥಕವಾಯ್ತು,.. ಮಧ್ಯದಲ್ಲಿ ಆಜಾದಣ್ಣನೂ ನೆನಪಿಗೆ ಬಂದ್ರು.

ಅದು ಹೇಗೋ ಕೈಲಾಸಂ ಅವ್ರೂ ನೆನಪಿಗೆ ಬಂದ್ರು, ಲಂಕೇಶ್ ಅವ್ರ ನೀಲು.. ನಮ್ಮ ಬ್ಲಾಗ್ ಮಿತ್ರ ಡಾ|ಕೇಶವ ಕುಲಕರ್ಣಿಯವರ ಕೃಪೆಯಿಂದ!

ಹೀಗೆ ನನಗೂ ಕನ್ಫ್ಯೂಜನ್ ಆಗುವಷ್ಟು ಭಾಷಣ  ಮಾಡಿದೆ!

“ಮೇಡಂ, ಕಾವ್ಯ ರಚಿಸಬೇಕಾದ್ರೆ ಇದೆಲ್ಲಾ ಓದುವುದು ಕಂಪಲ್ಸರಿನಾ?”

“ಹೌದಪ್ಪಾ, ನೋಡು ಈಗ ನೀನು ಬರೆಯುವುದು ಯಾರಿಗಾಗಿ.. ಹಾಗೆ ಅವರು ಬರೆದದ್ದು ನಿಮಗೆ ಓದಲಿಕ್ಕಾಗದಿದ್ರೆ ಮತ್ತೆ ನೀವು ಹೇಗಪ್ಪಾ ಕಾವ್ಯವನ್ನು ರಚಿಸ್ತಿರಿ?”

ಕೆಮರಾ ಮ್ಯಾನಿನಿಂದ ಹಿಡಿದು ಅಲ್ಲಿ ಸೇರಿದವರೆಲ್ಲಾ ದಂಗಾಗಿದ್ರು.

ಎಲ್ಲಾ ಪ್ರಕಾರಗಳ ಚಿತ್ರಣ ಕೊಟ್ಟ ಈ ಹೆಂಗಸು ಅವರಿಗೆಲ್ಲಾ ಒಂದು ವಿಚಿತ್ರ ಪ್ರಾಣಿಯಂತೆ ಕಂಡಿರಬೇಕು.. ಅದರಲ್ಲೂ ಮಂಗಳೂರಿಗೂ ಸಾಹಿತ್ಯಕ್ಕೂ ಎಣ್ಣೆ ಸೀಗೆಕಾಯಿ ಸಂಬಂಧ!

“ಯಪ್ಪಾ ಯಾವಾಗ ಬರುತ್ತೆ ಈ ಸಂದರ್ಶನ?”

 ಇತ್ತೀಚಿಗಂತೂ ಎಲ್ಲರೂ “ಥಟ್ ಅಂತ ಹೇಳಿ”ಯಲ್ಲಿ ಭಾಗವಹಿಸಿ ನನ್ನ ಹೊಟ್ಟೆ ಉರಿಸ್ತಿದ್ರು! ಈವಾಗ ನಾನು ಹೇಳ್ಬಹುದು! ನಂದೂ ಸಂದರ್ಶನ ಚಂದನದಲ್ಲಿ ಅಂತ! ಸುವರ್ಣ ಅಥವಾ ಈಟಿವಿಯಾಗಿದ್ರೆ ಇನ್ನೂ ಚೆನ್ನಾಗಿರುತಿತ್ತು! ಪರವಾಗಿಲ್ಲ, ಇಷ್ಟಾದರೂ ಭಾಗ್ಯ ಸಿಕ್ಕಿತ್ತಲ್ಲ.

“ನಾಳೆನೇ ಮೇಡಂ, ಪ್ರೈಮ್ ಟೈಮ್ ನಲ್ಲಿ! ತಪ್ಪದೇ ನೋಡಿ ಮೇಡಂ! ತುಂಬಾ ಚೆನ್ನಾಗಿ ಮಾತಾಡಿದ್ರಿ ಮೇಡಂ”

ಎಲ್ಲರೂ ಜಾಗೆ ಖಾಲಿ ಮಾಡಿದ ನಂತರ ಶೈಲಾ,

“ಅಲ್ವೇ, ನಂಗೊತ್ತಿದ್ದ ಹಾಗೆ ನೀನು ಓದಿದ್ದು ಬರೇ ಕಾದಂಬರಿಗಳು! ಅದೂ ಹತ್ತನೇ ತರಗತಿಯ ನಂತರ ಓದಿದ್ದೇ ಕಮ್ಮಿ. ಮದುವೆಯಾದ ಮೇಲೆ ಓದಿದಂದ್ರೆ ಬರೇ ಬಿಲ್‍ಗಳು,  ರಿಸೀಟುಗಳು, ರೇಶನ್ ಕಾರ್ಡ್, ಮತ್ತು ರೆಸಿಪಿ ಬುಕ್! ಎಲ್ಲೋ ಮಕ್ಕಳಿಗೆ ಕಲಿಸುವಾಗ ಅದೂ ಐದನೆಯ ತರಗತಿಯವರೆಗೆ ಓದಿದ್ದು ಮಕ್ಕಳ ನೋಟ್ಸ್! ಆದ್ರೂ ಇದೆಲ್ಲ ಹೇಗೆ ಹೇಳಿದ್ದಿಯೇ?”

ವಿಜಯದ ನಗೆ ನನ್ನ ಮುಖದಲ್ಲಿ!

“ಎಲ್ಲಾ ಫೇಸ್ ಬುಕ್ ಮಹಿಮೆ!”

“ಒಂದು ಕೇಳ್ಲಾ? ನೀನು ಈಗ ಹೇಳಿದ ಹೆಸರುಗಳಲ್ಲಿ ಒಂದೂ ಹೆಂಗಸರದ್ದು ಇಲ್ವೆ? ಅದ್ಯಾಕೆ ಹೆಂಗಸರು ಪ್ರತಿಭಾಶಾಲಿಗಳಲ್ವೆ? ಕವನ ಕಾವ್ಯ ರಚಿಸ್ತಾರಲ್ವಾ!”

“ಅಯ್ಯೋ ಬೆಪ್ಪೇ, ಅದು ಫೇಸ್ ಬುಕ್ಕಿದು ಅನ್‍ರಿಟರ್ನ್ಡ್ ರೂಲ್! ಹೆಂಗಸರಿಗೆ ಗಂಡಸರು ಫ್ಯಾನುಗಳು ಮತ್ತು ವೈಸ್ ವರ್ಸಾ! ನಾನೂ ಅದನ್ನೇ ಫೊಲೊ ಮಾಡ್ಬೇಕಾಗುತ್ತೆ ತಾನೆ!”

ಮತ್ಸರ ಭರಿತ ಮೆಚ್ಚುಗೆ ಶೈಲಳ ಮುಖದಲ್ಲಿ..

ಜತೆಗೆ ಬೆನ್ನಿಗೆ ಜೋರು ಗುದ್ದು ಬಿತ್ತು!

 “ಅದ್ಯಾಕೆ ಗುದ್ದು ಮಾರಾಯ್ತಿ?”

“ಮತ್ತಿನ್ನೇನು, ಆಗದಿಂದ ಅಲ್ರಾಂ ಕಿರುಚುತಿದ್ರೆ ನೀನು ಥಾಂಕ್ಸ್ ಥಾಂಕ್ಸ್ ಅನ್ತಾ ನಗ್ತಿದ್ದೆ! ಅದೇನೋ ನೀನೋ ನಿನ್ನ ಕವಿತೆಗಳೊ, ಫೇಸ್‍ಬುಕ್ಕೋ.. ನನ್ನ ತಲೆ ಕೆಟ್ಟು ಹೋಗದಿದ್ರೆ ಸಾಕು!”

ಇವರ ದೊಂಡೆ ಕೇಳಿ ಕಣ್ಬಿಟ್ಟು ನೋಡಿದ್ರೆ ಬೆಳ್ಳನೆ ಬೆಳಗಾಗಿತ್ತು!




1 comment:

nenapina sanchy inda said...

haha good one!!
:-)
malathi S

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...