ತೆಳ್ಳಗಿನ ಮಂಜಿನ ತೆರೆಯೊಳಗೆ
ಬೆಚ್ಚನೆ ಮುಗಿಲ ತೊಟ್ಟಿಲೊಳಗೆ
ನಲ್ಲಿರುಳ ಬೆಚ್ಚನೆಯ ಹೊದಿಕೆಯೊಳಗೆ
ಉಂಗುಷ್ಟ ಚೀಪುತಾ ಕಣ್ಣೆವೆಗಳ
ಬಿಗಿಯಾಗಿ ಬೆಸೆದು ನಿದ್ದೆಯ
ನಾಟಕವಾಡುವ ಬಾಲರವಿಯೇ,
ಏಳಯ್ಯ ನನ್ನರಸ, ನನ ಕಂದ,
ಬೆಳ್ಳಿಯ ಲೋಟದಲಿ ನೊರೆಚೆಲ್ಲುತ್ತಿದೆ
ಕಪಿಲೆಯ ಹಾಲು ಕುಡಿಯಂತೆ
ಅವಲಕ್ಕಿ-ಕಡಲೆ ಬುತ್ತಿ ಕಟ್ಟಿಕೊಡುವೆ
ಏಳಯ್ಯ ಮುದ್ದು, ಲೋಕವ ಬೆಳಗು
ಕಣ್ಣುಜ್ಜುತ್ತಾ ಆಕಳಿಸುತಾ ಬಾಯ್ದೆರೆವನ
ಬಾಯಿಯೊಳಗೆ ನನ್ನಂತಹ
ಲಕ್ಷ ಲಕ್ಷ ಅಮ್ಮಂದಿರು
ಬುತ್ತಿ ಹಿಡಿದು ನಿಂತಿಹರು!
(ಮುಂಜಾನೆ ಹಾಲು ತರಲು ಹೋದವಳಿಗೆ ಮಂಜಿನ ಮುಸುಕಿನಲಿ ಮರೆಯಾದವನಡೆ ಮಾತೆಯ ಮಮತೆಯ ಮಾಯಾಜಾಲ)
No comments:
Post a Comment