ಅವಳ ವ್ಯಾಲಂಟೈನ್
ದಿನದ ಸಂಭ್ರಮ..
-------------------------
“ಟ್ರೀಣ್ ಟ್ರೀಣ್..
”
ಎತ್ತಿಕೊಳ್ಳಲು
ಚಾಚಿದ ಮಗನ ಕೈ ಸರಿಸಿ ಅವಳೇ ಫೋನು ಎತ್ತಿಕೊಂಡಳು.
“ಸಾರಿ.. “
ಮರೆತಿಲ್ಲ ಅವಳು ಈ
ಸ್ವರ, ಹೆಚ್ಚು ಕಮ್ಮಿ ಏಳು ವರ್ಷಗಳಾಗಿದ್ದವು! ಒಮ್ಮೆಲೆ ಮುಖ ಕೆಂಪೇರಿತು, ಬಿಸಿಗಾಳಿ ಸೋಂಕಿದ
ಹಾಗೆ.. ಮೈ ಅದುರಿತು,. ಕಣ್ಣಂಚು ಒದ್ದೆಯಾಯಿತು!
ಟಪ್ಪನೆ
ಇಟ್ಟುಬಿಟ್ಟಳು. ಆ ಎಳೆಯ ಮುಖಗಳ ಮೇಲೆ ಪ್ರಶ್ನೆಗಳು! ಸೆರಗನು ಜಗ್ಗಿ ಕೆಳಗೆ ಬಗ್ಗಿಸಿದನು. ಅಲ್ಲೆ
ಕೂತವಳ ಮಡಿಲಲಿ ಮಗಳು, ಕೊರಳನಪ್ಪಿ ಮುದ್ದು ಮಾಡಿದಳು!
“ಟ್ರೀಣ್ ಟ್ರೀಣ್..
“
ಏಳಲೊಪ್ಪದ ಮಗಳನು
ಸರಿಸಿ ಎದ್ದು ಫೋನು ಎತ್ತಿ ಹಾಗೆ ಇಟ್ಟಳು.
ಉಹ್ಮೂಂ, ಅವನು ಕೇಳಲಿಲ್ಲ.. ಮತ್ತೆ ಟ್ರೀಣ್..
“ಏನು?”
“ಪ್ಲೀಸ್,
ಕ್ಷಮಿಸು!”
“ಸರಿ!”
ಅಲ್ಲೇ ಕುಸಿದಳು!
ಏಳು, ಐದು ವರ್ಷದ
ಮಕ್ಕಳಿಬ್ಬರೂ ಅಮ್ಮನ ಈ ಹೊಸ ವರಸೆಗೆ ತಬ್ಬಿಬ್ಬಾಗಿದ್ದವು! ಹತ್ತಿರ ಕರೆದು ಏನೋ ಸಬೂಬು ಹೇಳಿ
ಅವಕ್ಕೆ ಆಡಲು ಹೇಳಿ ಅಡುಗೆ ಕೋಣೆಗೆ ಹಿಂದಿರುಗಿದವಳಿಗೆ ತಟ್ಟನೆ ಹೊಳೆಯಿತು! ಕಣ್ಣು ಬೆಳಗಿತು!
’ಕೊನೆಗೂ ಸತ್ಯ
ಗೊತ್ತಾಯಿತು!’
ಮನ ಕಾಲಚಕ್ರವನು ಹಿಂದಕ್ಕೆ ತಿರುಗಿಸಿತ್ತು!
’ಕನಸಗಳನು ಹುಟ್ಟಿಸುತಿರುವನೆ, ಇಲ್ಲಾ ತಾನೊಂದು ಬರೀ ತಮಾಷೆಯ
ವಸ್ತುವೇ, ತನಗೆ ಅವನು ಎಂದೂ ಅರ್ಥವೇ ಆಗಿರಲಿಲ್ಲ. ಅವನು ಎಂದೂ ಎದುರು ಬಂದು ಏನೂ ಹೇಳಿರಲಿಲ್ಲ..
ಬಂದರೂ ತಾನು ಅವನನ್ನು ನಂಬುತ್ತಿದ್ದೆನೆ! ಹೆಚ್ಚು ಕಡಿಮೆ ತಾನು ಮತ್ತಿಷ್ಟು ಆಮೆಯ ಚಿಪ್ಪೆಯಂತೆ
ಒಳಗೊಳಗೆ ಅಡಗಿದ್ದೆ. ಒಂದೆರಡು ವರ್ಷವಲ್ಲ.. ಹ್ಮೂಂ, ಕೊನೆಯ ದಿವಸಗಳಲಂತೂ ನರಕವನ್ನೇ
ಸೃಷ್ಟಿಸಿದ್ದ! ಎಲ್ಲೋ ಇಲ್ಲ ಇಲ್ಲ ಎಂದರೂ ತಾನೂ ಕಾದಿದ್ದೆ ಅಂತ ಮತ್ತೆ ತಿಳಿದಿತ್ತು, ಮತ್ತು
ಕಾಲ ಮೀರಿತ್ತು!’
ಅಜಾನಕ್ಕಾಗಿ
ದೃಷ್ಟಿ ಕ್ಯಾಲೆಂಡರ್ ಮೇಲೆ ಬಿತ್ತು!
ಫೆಬ್ರವರಿ 14.. !
ಅವನೊಮ್ಮೆ
ಸಿಕ್ಕಿದರೆ ಕೇಳಿ ಚೆನ್ನಾಗಿ ಚಚ್ಚಬೇಕು ಅಂತ ಅಂದುಕೊಂಡ ಪ್ರಶ್ನೆಗಳಿಗೆಲ್ಲ ಉತ್ತರ ಆ
ತಾರೀಕಿನಲ್ಲೇ, ಅವನ “ಸಾರಿ”ಯಲ್ಲೇ ಅಡಗಿತ್ತು!
ಮತ್ತೆಂದೂ ಅವನ
ಫೋನು ಬರಲಿಲ್ಲ!
ಆದರೆ ಅವನು ಆ ದಿನ,
ಅದೇ ಫೆಬ್ರವರಿ 14ರಂದು ಫೋನು ಮಾಡಿ ಅವಳಲ್ಲಿ
ಉಸಿರು ತುಂಬಿದ.. ಮತ್ತೆ ಬದುಕುವ ಕನಸು ಕೊಟ್ಟನು!
ಅವಳು ಈಗ
ಪ್ರತಿವರ್ಷ ವ್ಯಾಲೆಂಟೈನ್ ದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾಳೆ!
ಕಾಲಚಕ್ರ
ಉರುಳಿದೆ.. ಬೆಳ್ಳಿ ಕೂದಲು, ಮುಖದಲ್ಲಿ ನೆರಿಗೆ ಕಾಣಿಸುತ್ತಿದೆ. ಆ ಉದ್ದ ಸಂಪಿಗೆ ಮೂಗಿನ ವಜ್ರದ
ನತ್ತು ಮತ್ತಷ್ಟು ಹೊಳಪಿನಿಂದ ಮಿಂಚುತ್ತಿದೆ. ಮಗ, ಮಗಳಿಗೂ ಮದುವೆಯಾಗಿ ಮನೆಗೆ ಸೊಸೆ, ಅಳಿಯ
ಬಂದಿದ್ದಾರೆ, ತಮ್ಮ ಸಂಪ್ರದಾಯಸ್ತ ಅತ್ತೆಯ ಈ ವ್ಯಾಲಂಟೈನ್ ದಿನದ ಸಂಭ್ರಮ ಅವರಿಗೆಲ್ಲ ಒಂದು ಅಚ್ಚರಿಯೇ ಆಗಿ
ಉಳಿದಿದೆ!
No comments:
Post a Comment