ಒಲವೇ,
ಹೀಗೆಯೇ ಹಾಡುತ್ತಿರು...ಕೊಂಚವೂ ವಿರಮಿಸದೇ...
ಆಹಾ! ಸಗ್ಗದ ಗಂಧವ ಹೊತ್ತು ತರುತಿವೆ ನಿನ್ನೀ ಹಾಡು!
- ನನ್ನೊಳಗಿನ ರುಮಿ
**********************
ಒಲವೇ,
ನನ್ನ ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದ ನಿರ್ಣಾಯಕನು ನೀನೇ....
ನಿನಗಾಗಿಯೇ ಮುಡಿಪು ನನ್ನೀ ಬದುಕು!
- ನನ್ನೊಳಗಿನ ರುಮಿ
*****************
ಒಲವೇ,
ಪಂಜರದಲ್ಲೀಗ ಗಿಣಿಯಿಲ್ಲ....
ಕಾಮನಬಿಲ್ಲಿನಿಂದ ರಂಗಾದ
ಆಗಸದಲಿ ಹಾರುತಿದೆ....
ಸ್ವಚ್ಛಂದವಾಗಿ!
- ನನ್ನೊಳಗಿನ ರುಮಿ
************************
ಒಲವೇ,
ಹೌದಲ್ಲವೇ, ನಿನ್ನೀ ಲೋಕ ಸಗ್ಗಕ್ಕಿಂತಲೂ ಸುಂದರ
ಧರ್ಮ, ಜಾತಿ, ಮೇಲು, ಕೀಳು, ರೋಗ, ರುಜಿನ...
ಇವುಗಳ ಕಾಟವೇ ಇಲ್ಲ.
ಎಲ್ಲರೂ ಸೇವಿಸುವ ಗಾಳಿ, ಆಹಾರ ಒಂದೇ..
ಅದುವೇ ಒಲವು!
ಎಲ್ಲರಲ್ಲೂ ನಿನ್ನ ವಾಸ...
ಎಲ್ಲರಲ್ಲೂ ನಿನ್ನದೇ ಛಾಯೆ...
ಎಲ್ಲರಲ್ಲೂ ನಿನ್ನದೇ ಮಾಯೆ...
-ನನ್ನೊಳಗಿನ ರುಮಿ
***************************************
ಒಲವೇ,
ನಿನಗಿದರ ಅರಿವಿದೆಯೊ ಇಲ್ಲವೋ ನಾನರಿಯೆ
ನನಗದರರಿವಿದೆಯೆಂಬುವುದು ಮಾತ್ರ ನಿಜ
ನಿನ್ನನ್ನು ಮೀರಿ ಶ್ರೇಷ್ಟವಿನ್ಯಾವುದೂ ಇಲ್ಲ
ಈ ಬುವಿಯೊಳೂ, ಆ ಸಗ್ಗದೊಳೂ...
ಇನ್ನೇನು ಹೇಳಲು ಉಳಿದಿಲ್ಲ ಬಾಕಿ
ಎಂಬುದನು ಮಾತ್ರ ಹೇಳಬಲ್ಲೆ!
-ನನ್ನೊಳಗಿನ ರುಮಿ
No comments:
Post a Comment