ಇದನ್ನೇ ವಿಧಿಯಾಟ ಅನ್ನುವರೇನು!
ಮೊನ್ನೆ ಶನಿವಾರ ೧೨ರಂದು ನಿಟ್ಟೆಯಿಂದ ಮನೆಗೆ ಬರಲು ಬಸ್ಸಿಗಾಗಿ ಕಾದು ನಿಂತಿದ್ದ ನನ್ನ ಮಗ ಮೊದಲು ಬಂದ ನಾಲ್ಕು ಬಸ್ಸುಗಳನ್ನು ಹತ್ತಲಿಲ್ಲ. ಕಾರಣ ಅವುಗಳು ಜನರಿಂದ ತುಂಬಿ ತುಳುಕುತ್ತಿದ್ದವು! ಅವನ ಕೈಯಲ್ಲಿ ಅವನ ಬಟ್ಟೆ, ಗಣಕ ಯಂತ್ರಗಳಿದ್ದ ಲಗೇಜು ಇದ್ದ ಕಾರಣ ಅವನು ನಿಲ್ಲಲೂ ಜಾಗವಿಲ್ಲದ ಆ ಬಸ್ಸುಗಳನ್ನು ಹತ್ತಲಿಲ್ಲ. ಕೊನೆಗೆ ಬಂದ ೫ನೇ ಬಸ್ಸನ್ನು ಹತ್ತಿದ. ಅದರಲ್ಲೂ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಕೊನೆಯ ಸೀಟಿನ ಮತ್ತು ಅದರ ಎದುರಿರುವ ಬಲಗಡೆಯ ಸೀಟಿನ ಮಧ್ಯದಲ್ಲಿರುವ ಖಾಲಿ ಜಾಗಲ್ಲಿ ನಿಂತುಕೊಂಡಿದ್ದ. ಆ ದಿನ ಎಂದಿನಂತೆ ತನ್ನ ಲಗೇಜನ್ನು ಮೇಲಿರಿಸಲಿಲ್ಲ. ಬಸ್ಸು ವೇಗವಾಗಿ ಹೋಗುತ್ತಿತ್ತು...ಇನ್ನೂ ನಿಟ್ಟೆಯನ್ನು ದಾಟಿರಲಿಲ್ಲ...ಇದ್ದಕ್ಕಿದ್ದಂತೆ ಮುಖ ಹೋಗಿ ಎದುರು ಬಡಿದದು ಮಾತ್ರ ಗೊತ್ತಾಯಿತು. ಕೆಲವು ಕ್ಷಣ ಕಣ್ಣಿಗೆ ಕತ್ತಲು ಬಂದತ್ತಾಯಿತು. ಇದು ಹೇಗೆ ನಡೆಯಿತು ಎಂದು ಅಲ್ಲಿದ್ದವರಿಗ್ಯಾರಿಗೂ ಗೊತ್ತಾಗಲಿಲ್ಲ. ತನ್ನ ಮುಖ ಯಾವುದಕ್ಕೆ ಹೋಗಿ ಬಡಿಯಿತು ಅಂತ ಅವನಿಗೆ ಈಗಲೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅವನು ಈವರೆಗೆ ಎರಡು ಅಫಘಾತದ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಅವನ ಕೂದಲು ಕೂಡ ಕೊಂಕಗದೇ ಪಾರಾಗಿದ್ದನು. ಕ್ಷಣ ಮಾತ್ರದಲ್ಲಿ ಅವನ ಕಣ್ಣಿಗೆ ಕಂಡದ್ದು ರಕ್ತ ಚಿಮ್ಮುವಿಕೆ..ಜನರ ನರಳಾಟ! ಬಸ್ಸಿನ ರೋಡುಗಳು ಬಗ್ಗಿ ಎಲ್ಲವೂ ಅವನತ್ತ ಮುಖಮಾಡಿಕೊಂಡು ನಿಂತಿವೆ! ತಲೆ ಮೇಲಿನ ಮಾಡು ಕಾಣುತ್ತಿಲ್ಲ! ಸ್ವಲ್ಪ ಸುಧಾರಿಸ್ಕೊಂಡು ಹಿಂದಿನಿಂದ ಬಂದ ಕಾಲೇಜು ಬಸ್ಸಿನಲ್ಲಿ ಮಂಗಳೂರಿಗೆ ಬಂದು ತಲುಪಿದನು. ಅಲ್ಲಿ ಯಾರೋ ಹೇಳಿದರಂತೆ..ಮನೆಗೆ ಫೋನು ಮಾಡು..ಇವನು ಮಾಡಲಿಲ್ಲ!
ಮುಖದಲ್ಲಿ ಕಣ್ಣಿನ ಕೆಳಗೆ ಒಂದು ಸಣ್ಣ ವೃತ್ತಾಕಾರದಲ್ಲಿ ಚರ್ಮ ಕಿತ್ತು ಹೋಗಿ ಮಾಂಸ ಕಾಣಿಸುತ್ತಿತ್ತು. ಕಣ್ಣಿನ ಕೆಳಗೆ ಚರ್ಮ ಉಬ್ಬಿಕೊಂಡಿತ್ತು ಅಂತ ಬಿಟ್ಟರೆ ಆ ಕ್ಷಣಕ್ಕೆ ಅಂತಹದೇನು ಆಗಿಲ್ಲವೆಂದೇ ಭಾವಿಸಿದೆ. ಆದರೂ ನಮ್ಮ ಮನೆಯ ಬಳಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಿದೆ. ಅವರು ಕುಲಂಕುಷವಾಗಿ ಪರೀಕ್ಷಿಸಿದಾಗ ಕಾಲಿಗೂ ಆದ ಗಾಯ ಕಾಣಿಸಿತು. ರಾತ್ರಿ ಮೈ ಕೈ ನೋವು ಕಾಣಿಸಿತು...ಮರುದಿನ ಮತ್ತಿನ್ನೊಮ್ಮೆ ಎಕ್ಸ್ ರೇ ತೆಗೆಯಲು ಕಳುಹಿಸಿದಾಗ ಮೂಗಿನ ಎಲುಬಿನಲ್ಲಿ ಬಿರುಕು ಬಿಟ್ಟಿದೆ ಅಂತ ಗೊತ್ತಾಯ್ತು!
ಆ ಅಫಘಾತದಲ್ಲಿ ಯಾರೂ ಸಾವನಪ್ಪಲಿಲ್ಲ..ಆದರೆ ನೋವು... ಎಷ್ಟೋ ಮಂದಿಗೆ ತಲೆಗೆ ಪೆಟ್ಟಾಗಿದೆ ಅಂತ ಹೇಳುತ್ತಿದ್ದಾನೆ. ಮತ್ತು ಬಸ್ಸು ಅಫಘಾತಕ್ಕೀಡಾದಾಗ ಮೇಲಿರಿಸಿದ ಲಗೇಜುಗಳು ಕೂಡ ಎಲ್ಲೆಲ್ಲೋ ಹೋಗಿ ಬಿದ್ದವು! ನನಗೆ ಮರುದಿನ ಅವನು ಆ ಅಫಘಾತದ ಚಿತ್ರ ತೋರಿಸಿದಾಗ ಅದರ ಭೀಕರತೆಯ ಬಗ್ಗೆ ಅರಿವಾಯಿತು!
No comments:
Post a Comment