ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 January, 2013

ಅಬ್ಬ! ಬಡ ಜೀವವೇ ಬದುಕಿದೆ!


  

        ಮದುವೆಯಾಗಿ ಗಂಡನ ಜತೆ ಹನಿಮೂನಿಗೆ ಹೊರಟಿದ್ದಳು ಹೃದಯದಲ್ಲಿ ಕನಸುಗಳ ಗಂಟನ್ನು ಹೊತ್ತುಕೊಂಡು. ಗಂಡ ಹೆಂಡತಿ ಸರವಾಡುತ್ತ ಕೇರಳದ ನೆಂಟರ ಮನೆಗೆ ತಲುಪಿದರು. 
"ನಮಗೋಸ್ಕರ ಚಿಕ್ಕಪ್ಪ ಕಾಟೇಜ್ ಬುಕ್ ಮಾಡಿದ್ದಾನೆ..ಆರಾಮವಾಗಿ ಅಲ್ಲಿ ಟಿವಿ ನೋಡುತ್ತಾ ನಾಲ್ಕು ದಿನ ಇಲ್ಲಿಯೇ ಇರೋಣ." ಪತಿಯು ಅವಳ ಕಿವಿಯಲ್ಲಿ ಪಿಸುಗುಟ್ಟುತ್ತಾ ಹೇಳಿದನು.. 
ಸ್ವರ್ಗ ಸುಖದ ಕಲ್ಪನೆಯಲ್ಲಿ ಅವಳ ಮುಖ ರಂಗೇರಿತು. ಇನ್ನೂ ರಂಗಿಯಿಳಿಯದ ಮದರಂಗಿ ಮೆತ್ತಿದ ಆ ಕೈಯನ್ನು ಮೆತ್ತಗೆ ಅದುಮಿದನವನು. ಮತ್ತಿಷ್ಟು ನಾಚಿ ಅವನಿಗಂಟಿ ಕುಳಿತವಳು! 

       ಬಂದ ನವ ವಧುವರರನ್ನು ಮನೆಯವರು ಹಾರ್ಧಿಕವಾಗಿ ಸ್ವಾಗತಿಸಿದರು. ಅವರಿಗೋಸ್ಕರ  ಮಹಡಿಯಲ್ಲಿ ಕಾದಿರಿಸಲಾದ ಕೋಣೆಗೆ ಕರೆದೊಯ್ಯಲಾಯಿತು. ಅವಳು ಪತಿಯತ್ತ ಹುಬ್ಬೇರಿಸಿದಳು! ಮತ್ತೆ ತಿಳಿಯಿತು...ಕಾಟೆಜ್ ಗೀಟೇಜು ಏನೂ  ಇಲ್ಲ..ಜತೆಗೆ ಮತ್ತೇನೋ ನೆವನಗಳು. ಮುದುಡಿದಳು..ತಾವಿಬ್ಬರು ಇನ್ನೂ ಪರಸ್ಪರ ಅರಿಯಬೇಕಾದರೆ ಏಕಾಂತದ ಅಗತ್ಯವಿತ್ತು..ಆದರೆ ಅವಳೇನೂ ಮಾಡಲು ಸಾಧ್ಯವಿರಲಿಲ್ಲ. ಊಟ ಗೀಟ ಮುಗಿಯಿತು...ಮತ್ತೆ ಸತಿ ಪತಿ ಈಗ ಏಕಾಂತದಲ್ಲಿ...ಆದರೆ ಇದೇನು ಪತಿ ಯಾವುದೋ ಹೊಲಸು ಚಿತ್ರವನ್ನು ನೋಡುತ್ತಿದ್ದಾನೆ...ಉತ್ಸಾಹವೆಲ್ಲ ಇಳಿಯಿತು. ಸುಮ್ಮನೆ ಹೊದ್ದು ಮಲಗಿದಳು. 

    ಮರುದಿನ ತಿಂಡಿ ಕಾಫಿ ಉಪಚಾರವೆಲ್ಲ ನಡೆಯಿತು. ಪತಿ ಮತ್ತವನ ಚಿಕ್ಕಪ್ಪ ಇನ್ನು ಕೆಲವು ಗೆಳೆಯರೆಲ್ಲ ಸೇರಿದರು...ನೋಡ ನೋಡುವಷ್ಟರಲ್ಲಿ ಇಸ್ಪೀಟು ಎಲೆಗಳು ಹಂಚಿಕೊಳ್ಳಲು ಪ್ರಾರಂಭವಾಯಿತು.. ಜತೆಗೆ ಪಾನ್ ಬೀಡಾ..ಬಿಯರ್...ಕುರುಕುರು ತಿಂಡಿ..ಇವಳೇನು ಮಾಡುವುದು? ಕೋಣೆಗೆ ನಡೆದಳು..ಕನಸನ್ನೆಲ್ಲಾ ಕಟ್ಟಿ ಗಂಟು ಹಾಕಿದಳು...ಕಿಟಿಕಿ ತೆಗೆದು ಮೊದಲು ಬಲಹಾಕಿ ಎತ್ತಿ ಬೀಸಾಕಿಬಿಟ್ಟಳು. ಮುಗಿಯಿತು ನನ್ನ ಜೀವನ! 

    ೩ ದಿನ ಹೀಗೆ ಕಳೆಯಿತು..ಅಲ್ಲಿಂದ ಮತ್ತೊಂದು ನೆಂಟರ ಮನೆಗೆ ಪಯಣ! ಅಲ್ಲಿ ಮತ್ತೆ ಅದೇ ಆಟ! 
  ಮತ್ತಿಷ್ಟು ನೆಂಟರು ಸೇರಿದರಲ್ಲಿ. ಅವಳಿಗೋ ಆಶ್ಚರ್ಯ...ಇವರ ಪತ್ನಿಯರಿಗೆ ಇದರ ಬಗ್ಗೆ ಆಕ್ಷೇಪಣೆ ಇಲ್ಲವೇ? ಯಾಕೆ? ಅಥವಾ ನಾನೇ ಸರಿ ಇಲ್ಲವೆ? 
   

      ಇವಳ ಮುದುಡುವಿಕೆ ಆ ಹೆಂಗಸರಿಗೆ ತಮಾಷೆ! ಎಲ್ಲರೂ ಕೂಡಿದರು ಇವಳ ಸುತ್ತ...ಇವರ್ಯಾಕೆ ಇಲ್ಲಿ ಬಂದಿದ್ದಾರೆ? ಅವಳಿಗೆ ಆಶ್ಚರ್ಯ!
 "ಹೇ ಇವಳ ರೇಪ್ ಮಾಡುವನಾ?" 
"ಅಯ್ಯೊ...ಎಲ್ಲಿ ಸಿಕ್ಕಿಸಿದೆಯಪ್ಪ ಭಗವಂತ" ಗಟ್ಟಿಯಾಗಿ ತನ್ನ ಬಟ್ಟೆಯನ್ನು ಹಿಡಿದಳು...ರಕ್ಷಣೆಗೆ ಏನಾದರೂ ಇದೆಯೇ ಎಂದು ಸುತ್ತಲೂ ನೋಡಿದಳು...
ಎಲ್ಲರಿಗೂ ಇವಳ ಕಣ್ಣಾಲಿಗಳು ತುಂಬಿದ್ದು ನೋಡಿ ಇನ್ನೂ ತಮಾಷೆ ಎಂದೆನಿಸಿತು. ಗಟ್ಟಿಯಾಗಿ ನಕ್ಕರು....
ನಗುತ್ತ ನಗುತ್ತ ಕೋಣೆಯಿಂದ ಹೊರಹೋದರು. ಅಬ್ಬ! ಬಡ ಜೀವವೇ ಬದುಕಿದೆ!
                               
              ******************************************************     

  {ಎರಡು ವರ್ಷದ ಹಿಂದೆ ರೈಲಿನಲ್ಲಿ ಅಕಸ್ಮಾತ್ತಾಗಿ ಭೇಟಿಯಾದ ಸರಿ ಸುಮಾರು ೩೫ರ ಪ್ರಾಯದ ಹೆಣ್ಣು ಮಗಳ ನಿಜ ಕಥೆಯಿದು, ಈ ಕತೆ ಹೇಳಿದ ಮೇಲೆ ಆಕೆ ಹಗುರವಾದ ಅನುಭವವನ್ನು ನಾನೂ ಕಂಡುಕೊಂಡೆ. ಒಬ್ಬಬ್ಬರದು ಒಂದೊಂದು ಕತೆ. ಏನು ಲೀಲೆ ನಿನ್ನದು ಭಗವಂತ}
  

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...