ಏನಿದು ಬೆಳಕು ನನ್ನ ಮನದ ಗುಡಿಯಲಿ
ಮಲಗಿದವಳನು ಎಬ್ಬಿಸಿದೆ ಅರ್ಧರಾತ್ರಿಯಲಿ
ಬೆಳಕಿನ ನಗು ಮಾರ್ದನಿಸಿತು ಕಣಕಣದಲಿ
ಅರ್ಥವಾಗಿ ಮೂಡಿತು ನಸುನಗೆ ತುಟಿಯಲಿ
ಬೆಳಕು ಕೇಳಿತು,
“ಇದೇನಿದು ಎಷ್ಟೊಂದು ಬಿಂಬ ತೂಗುತಿವೆ ಗೋಡೆಯಲಿ.. !”
ನಕ್ಕುಬಿಟ್ಟೆ,
“ನಿನ್ನದೇ ಬಿಂಬಗಳ ಗುರುತಿಸಲಾರೆಯಾ!”
ಹುಬ್ಬೇರಿತು,
“ಹ್ಮ್, ಹಾಗಿದ್ದರೆ ನೋವಿನ ಬಿಂಬವ್ಯಾಕೆ ಇಲ್ಲಿ?”
ಆರ್ದ್ರವಾಯಿತು ದೃಷ್ಟಿ,
“ಚಂದದ ಮಾತು ಆಡುತ್ತಾ ಮುಳ್ಳು ನೆಲದಲಿ ತಳ್ಳಿದರು.
ಮುಳ್ಳುಗಳ ಕೆರೆತಕೆ ಗಾಯ ಸೋರುತಿದೆ, ನೋವು ಕಾಡುತಿದೆ!”
ಹೊಳೆಯುವ ದಾರದ ತುದಿಯನು ಕೈಗಿತ್ತು,
"ಕಟ್ಟಿಕೋ.. ಎಳೆದೊಯ್ಯುವೆನು.
ಎಚ್ಚರವಿರಲಿ, ನಾಜೂಕು ದಾರವಿದು!”
ಕೈಯನತ್ತ ಚಾಚಿದೆ..
ಮಸ್ತಕೊಂದು ಕುಟ್ಟಿ..
’ಹಾ.. !!!’
“ಯಾಕಿಷ್ಟು ಕ್ರೂರ ಭಾವ ಬೆಳಕೇ?”
ದೊಡ್ಡದಾಗಿ ಅರಳಿತು ಕಣ್ಣು,
“ನೆನಪಿರಲಿ, ಸದಾ ದೈನ್ಯ ಭಾವವಿರಲಿ,
ನೋವು ನಲಿವಾಗಿ ಬದಲಾಗಲಿ..
ಒಲವಿಗಾಗಿ ಅರ್ಪಣಾ ಭಾವವಿರಲಿ..
ಬಾಹ್ಯ ಇಂದ್ರಿಯಗಳಿಗೆ ದಕ್ಕಲಾರದದು..
ಒಲವಿನ ದರುಶನ ಅಂತಚಕ್ಷುಗಳಿಂದ ಮಾತ್ರ ಸಾಧ್ಯ!”
ರೂಮಿ ಭಾವಾನುವಾದ
No comments:
Post a Comment