ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

31 January, 2013

ಹೊಸ ಆಟ ತೋರಲು ಕಾದಿರುವ ನಿಶೆ!




ದಿನದ ಪಾಳಿ ಮುಗಿಸಿ
ರಂಗಮಂಟಪದ ಪರದೆಯ ಜಾರಿಸಿ
ಅತ್ತ ರವಿ ಸರಿದನು!
ಇತ್ತ ಝಗಮಗಿಸುವ ಬೆಳಕಿನಲ್ಲಿ
ಹೊಸ ಆಟ ತೋರಲು
ತೆರೆ ಮೇಲೇರಿಸಲು ಕಾದಿರುವ
ನಿಶೆಗೆ ಸ್ವಾಗತ ಕೋರುತಿಹಳು
ಸಂಧ್ಯೆ!

29 January, 2013

ನೀ ನೀನಲ್ಲ.. ಮತ್ಯಾರು???


|| ನೀ ಗುಡಿಯಲ್ಲ, ಅರಮನೆ ||

|| ನೀ ಕತ್ತಲೆಯಲ್ಲ, ಅಮವಾಸ್ಯೆ ||

|| ನಾ ಗಾಯಕಿಯಲ್ಲ, ಕೋಗಿಲೆ ||

|| ನೀ ಮಲ್ಲಿಗೆಯಲ್ಲ, ಸುಗಂಧ ||

|| ನೀ ಅಪ್ಪಯ್ಯನಲ್ಲ, ನೀಲಕಂಠ ||

|| ನೀ ಪ್ರೇಮವಲ್ಲ, ಪರಮಾತ್ಮ ||

|| ನೀ ಒಲವಲ್ಲ, ಅಮೃತ ||

|| ನೀ ಪುಟ್ಟ ಹಣತೆಯಲ್ಲ, ಸೂರ್ಯ ||

|| ನೀ ಚಿಪ್ಪಲ್ಲ, ಸಾಗರ ||

|| ನೀ ಭಾವವಲ್ಲ, ಕಾವ್ಯ ||

|| ನೀ ಸ್ತ್ರೀಯಲ್ಲ, ಸೃಷ್ಟಿ ||

|| ನೀ ನಲ್ಲೆಯಲ್ಲ, ಬೆಳದಿಂಗಳು ||

|| ನೀ ವೈಣಿಕನಲ್ಲ, ವೀಣೆ ||

|| ನೀ ಆಕಾಶ ದೀಪವಲ್ಲ, ಚಂದಿರ ||

|| ನೀ ಪಾತರಗಿತ್ತಿಯಲ್ಲ, ರಂಭೆ ||

|| ನೀ ರತ್ನವಲ್ಲ, ನಕ್ಷತ್ರ ||

|| ನೀ ಕೊಳವಲ್ಲ, ಮಾನಸ ಸರೋವರ ||

|| ನೀ ಕಂದನಲ್ಲ, ಮುತ್ತು ಮಾಣಿಕ್ಯ||

|| ನಿ ಹೂವಲ್ಲ, ಪಾರಿಜಾತ ||


|| ನೀ ಒಲವಲ್ಲ, ಬದುಕು ||


|| ನೀ ಸಖನಲ್ಲ, ಒಲವು ||
|| ನೀ ಸಖಿಯಲ್ಲ, ಒಲವು ||

|| ನೀ ಒಲವಲ್ಲ, ಭಗವಂತ ||

ಮತ್ತೇರಿಸುವ ಮುಸ್ಸಂಜೆ!



ನಲ್ಲನ ಬರವನ್ನೇ ಕಾಯುತ್ತಿರುವ
ನಲ್ಲೆಯ ಗಲ್ಲಕ್ಕೆ ರಂಗನ್ನು ಮೆತ್ತಿ 
ನಲ್ಲನಿಗೆ ಮತ್ತೇರಿಸುವ ಮುಸ್ಸಂಜೆ!

27 January, 2013

ನಿತ್ಯ ಕಾಯಕ ಕಾಯುವಿಕೆ!



ಒಲವೇ,

ನಿನ್ನರಮನೆ ಹೊಳೆಯ ಆ ದಡದಲಿ 
ನನ್ನ ಪುಟ್ಟ ಗುಡಿ ಈ ದಡದಲಿ!
ಓಲೆಯನೇ ದೋಣಿಯಾಗಿಸಿ ನಿನ್ನತ್ತ ತೇಲಿಬಿಡುವೆನು
ಮರುಸಂದೇಶದ  ದಾರಿ ನಿತ್ಯ ಕಾಯುವೆನು!
ಅದರವಿಲ್ಲದೆ ಉಕ್ಕುವ ಹೊಳೆ ಮುಳುಗಿಸುವುದು
ನನ್ನ  ಸಂದೇಶವು ತಳ ಸೇರುವುದು!
ತಂಗಾಳಿಯಲೇ ತೇಲಿಬಿಡುವೆನು ನನ್ನ ನಿಟ್ಟುಸಿರು
ಕಿವಿಯ ಸ್ಪರ್ಶಿಸುವುದೇ ಹೇಳೆನ್ನ ಬಿಸಿಯುಸಿರು!



ಅಳುದುಳಿದ ಹಿಂದಿನ ಬಂಧ ಮತ್ತೆ ಹೆಣೆದಿದೆ ಅನುಬಂಧ!


ಅಳುದುಳಿದ ಹಿಂದಿನ ಬಂಧ ಮತ್ತೆ ಹೆಣೆದಿದೆ ಅನುಬಂಧ!
   ________________________

ಒಲವೇ,
ನಿನಗೂ ಅದರರಿವಿರಲಿಲ್ಲ
ನನಗೂ
ನಿನ್ನ ನೆರಳಿನಲ್ಲಿ 
ಬೆರೆತು  
ಹೆಜ್ಜೆಹಾಕುತಿರುವೆನೆಂದು.
ಕೊನೆಗೂ 
ನಿನಗರಿವಾದಾಗ ನೀ 
ಎಚ್ಚರಿಸಿದೆ
ನೆಚ್ಚದಿರು ಹುಚ್ಚಿ ! 
ಸಮಯ 
ಮೀರಿತ್ತು ನಾನಾಗಲೇ
ಅರ್ಪಿಸಿದ್ದೆ. 
ನನಗರಿವಿಲ್ಲದೆ ನಿತ್ಯವೂ 
ಮನಮಂದಿರಗೊಳಗೆ
ಇಣುಕುವ ಪರಿಯ
ಕಂಡು
ನನಗೇ ಅಚ್ಚರಿ
ಇದಾವ 
ನಮೂನೆಯ ಸೆಳೆತವೆಂದು!
ಅರಿತೆ 
ಕೊನೆಗೂ ಅಳುದುಳಿದ 
ಹಿಂದಿನ 
ಬಂಧ ಮತ್ತೆ 
ಹೆಣೆದಿದೆ 
ಈ ಅನುಬಂಧ!

26 January, 2013

ಮುದಕೊಡುವ ಶಶಿಯ ತೋರುವ ಸಂಜೆ!


ಸಣ್ಣನೆ ಬೀಸುವ 
ತಂಗಾಳಿಗೆ
ಜೋಕಾಲಿಯಾಡುವ
ತೆಂಗಿನ ಗರಿಗಳ 
ಎಡೆಯಿಂದ 
ನುಸುಳಿ, ಗವಾಕ್ಷಿಯಿಂದ
ಒಳನುಗ್ಗಿ 
ಕ್ಷಣಕೊಂದು ಬದಲಾಗುವ
ಕಪ್ಪು-ಬಿಳುಪು 
ಚಿತ್ತಾರವ 
ಕೋಣೆಯೊಳು ಚೆಲ್ಲಿ
ಮುದಕೊಡುವನು
ಶಶಿ ಈ 
ಮುಸ್ಸಂಜೆ!

ನನ್ನ ಮಕ್ಕಳ ಡಿಸೈನ್ !




ನನ್ನ ಮಗಳು adobe illustratorನಲ್ಲಿ ಮಾಡಿದ್ದು!






   

    ನನ್ನ ಮಗ ತನ್ನ ಕಾಲೇಜಿನ T-shirt design ಮಾಡಿದ್ದು!

23 January, 2013

ಈ ಮುಸ್ಸಂಜೆ!



ಭಾವಗಳ ಗಂಟು ಬಿಚ್ಚಿ, 
ಒಲವಿಗೊಂದು ಓಲೆ 
ಬರೆಯುವ ಹೊತ್ತು
ಈ ಮುಸ್ಸಂಜೆ!
*************

"ಕಣ್ಣಾ ಮುಚ್ಚೇ ಕಾಡೇ ಗೂಡೇ...
ಬಿಟ್ಟೇ ಬಿಟ್ಟೆ...
ಕುವ್ಹಾ...ಕೂ...."
ಚುಕ್ಕಿ ಚಂದ್ರಮ
ಗ್ರಹಗಳು  ಜತೆಗೂಡಿ
ಕಣ್ಣುಮುಚ್ಚಾಲೆ ಆಡುತ್ತಿರುವ
ಮುಸ್ಸಂಜೆ!

ಆಗುವೆನೆನೋ ನಾ ಪರಿಣತೆ!


ಒಲವೇ,
ನಾ ನಿತ್ಯವೂ 
ರಚಿಸುವ
ಮಾಲೆಯಲ್ಲಿ
ಬಳಸುವ
ಪುಷ್ಪಗಳು
ಗಂಧ ಭರಿತವೋ
ಕಾಡು ಪುಷ್ಪಗಳೋ 
ಮೋಹಕ ಬಣ್ಣಗಳಿರುವವೋ
ನಾ ಅರಿಯೆ.
ಅದ ಕಟ್ಟುವ
ರೀತಿ, ನೀತಿಯನೂ
ನಾ ತಿಳಿಯೆ.
ಆದರೆ
ನನ್ನದೇ
ಭಾವಗಳನ್ನು 
ಆರಿಸಿ 
ಅಕ್ಕರೆಯಿಂದ
ನಾ ಕಟ್ಟುವೆನು
ಕೇವಲ
ನಿನಗಾಗಿಯೇ.
ಹಾಗೆಯೇ
ಕಟ್ಟುತ್ತ ಕಟ್ಟುತ್ತ
ನಿನ್ನ ಮೆಚ್ಚುಗೆ
ಪಡೆಯುತ್ತ ಪಡೆಯುತ್ತ
ಆಗುವೆನೆನೋ
ನಾ ಪರಿಣತೆ!

22 January, 2013

ಹಳೆ ನೆನಪು ಮರುಕಳಿಸಿದ ಮುಸ್ಸಂಜೆ!


ಹಳೆ ನೆನಪು ಮರುಕಳಿಸಿದ  ಮುಸ್ಸಂಜೆ!
__________________________________

"ದೂದ ಪೀರೆ ಮಝ ಮದನ ಗೋಪಾಲ"
ಹಾಡಿ ಬಾಲಗೋವಳನಿಗೆ ನೇವೈದ್ಯ ಮಾಡಿದ
ಸಿಹಿಹಾಲಿಗಾಗಿ ತಮ್ಮಂದಿರೊಡನೆ ಸ್ಪರ್ಧಿಸಿ
ಕೊನೆಯ  ಗುಟುಕು ಸೇವಿಸಿ ಧನ್ಯತೆ 
ಪಡೆಯುತ್ತಿದ್ದ ನೆನಪು ಮರುಕಳಿಸಿದ ಮುಸ್ಸಂಜೆ!

ನಿನ್ನರಿವ ಯತ್ನದಲೇ ಪ್ರಾಣ ನೀಗುವೆ!





ನಿನ್ನರಿವ ಯತ್ನದಲೇ ಪ್ರಾಣ ನೀಗುವೆ!
___________________
ಒಲವೇ,
ಬರಹಗಳಲ್ಲಿ ಕ್ಯಾನ್ವಾಸ್‍ಗಳಲ್ಲಿ  
ನಿನ್ನ ಸೆರೆ ಹಿಡಿದು  
ನಿನ್ನನರಿಯುವ ಯತ್ನ
ಬಿಡು ಎಂದನ್ನಬೇಡ 
ಯುಗ ಯುಗಗಳಿಂದಲೂ
ಅದೇ ಯತ್ನ 
ನಡೆಯುತ್ತಲೇ ಇದೆಯಾದರೂ 
ಗೆದ್ದವರು ಬೆರಳೆಣಿಕೆಯಷ್ಟೇ!
ನಾನು ಅಷ್ಟೆ 
ಗೆಲುವೋ ಸೋಲೋ
ನನಗಿಲ್ಲದರ ಚಿಂತೆ
ನಿನ್ನನರಿವ ಯತ್ನದಲಿ 
ಮತ್ತೆ ಮತ್ತೆ 
ನಿನ್ನ ನಾನು
ಅಕ್ಷರಗಳಲ್ಲಿ ಮೂಡಿಸಲೆತ್ನಿಸುತ್ತಲೋ,
ಬಣ್ಣಗಳಿಂದ ತುಂಬಿಸಲೆತ್ನಿಸುತ್ತಲೋ
ನೀಗುವೆ ಪ್ರಾಣ.



ಕತ್ತು ಮುರಿಯದಿರುವನೇ, ಶೇಕ್ಸ್ ಪಿಯರ್!


ಕತ್ತು ಮುರಿಯದಿರುವನೇ, ಶೇಕ್ಸ್ ಪಿಯರ್!
 ===================
ಒಲವೇ,
ನನ್ನಂತರಂಗದ ನುಡಿ
ಸವಿಗನ್ನಡ!
ನೀನೂ ನನ್ನೊಡನಾಡುವೆ
ಅಚ್ಚಗನ್ನಡ!
ನಿನ್ನೊಡನಾಡುವ ಮಾತಿಗೆಲ್ಲ
ಕಿವಿಯಾಗುವವರಲ್ಲಿ
ಇರುವವರು ಕನ್ನಡೇತರರೂ!
ಆಂಗ್ಲದಲ್ಲಾಡು
ಒಲವಿನ ಜತೆಗೆನ್ನುವರಲ್ಲ
ಅವರು!
ಪಾಮರ  ಆಡೀದೀ
ಭಾವಗಳನೆಲ್ಲಾ
ಆಂಗ್ಲದಲ್ಲಿ ನಾ 
ಮರುನುಡಿಯಲೆತ್ನಿಸಿದರೆ
ಮುರಿಯದಿರುವನೇ ನನ್ನ 
ಕತ್ತು 
ಹೇಳು, ಶೇಕ್ಸ್ ಪಿಯರ್!

21 January, 2013

ಸದಾ ಶಾಶ್ವತವು ಅವರ ಸವಿನೆನಪುಗಳು!


ಸದಾ ಶಾಶ್ವತವು 
ಅಳಿದವರ ಸವಿನೆನಪುಗಳು
ಭೌತಿಕ ಶರೀರ ಇಲ್ಲದಿದ್ದರೇನಂತೆ
ಇರುವದಲ್ಲವೇ ಹರಕೆಯು ನೆರಳಿನಂತೆ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ 
ನಿತ್ಯವೂ ಮಾತುಕತೆ 
ವಾಹಕಗಳ ಅನಿವಾರ್ಯತೆವಿಲ್ಲವದಕಂತೆ
ಅಪ್ಪ ಅಮ್ಮನ ಕರೆಯು 
ಒಳಗಿವಿ ತೆರೆದರೆ ಕೇಳಿಸುವುದಂತೆ
ಜೋಗುಳದ ಸವಿದನಿಯಂತೆ!

20 January, 2013

ಅರಿತೆ ನಾ ಒಲವಿನ ಕೊಳವಿದು!



ಅರಿತೆ ನಾ ಒಲವಿನ ಕೊಳವಿದು!
_______________________

ಸ್ಫಟಿಕದಂತೆ ಹೊಳೆಯುತ್ತಿತ್ತಲ್ಲ
ಆ ಕೊಳ! 
ರಂಗು ರಂಗಿನ ಜಲಚರಗಳು 
ಅಲೆಗಳ ಮಧುರ
ನಾದಕ್ಕೆ ತಲೆದೂಗುತ್ತಾ
ಕಿಲ ಕಿಲ ನಗುತ್ತಾ
ಅದೇನೋ ಪಿಸುಗಟ್ಟುತ್ತ
ಮುಗುಳ್ನಗುತ್ತ ನನ್ನತ್ತ
ಕೈ ಬೀಸಿದವು
ಈಜಲೇ ಬರದ 
ನಾ ಮೋಡಿಗೊಳಗಾಗಿ
ಕಣ್ಮುಚ್ಚಿ ಧುಮುಕಿಯೇ 
ಬಿಟ್ಟೆ ತೇಲುತ್ತಲೇ
ಅರಿತೆ ಇದುವೇ
ಒಲವಿನ ಕೊಳ!

ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!


ನಂಬಿದವರ ಕೈಯ ಬಿಡ ನಮ್ಮ ದೊರೆಯು ಅಂಬುಜಾಕ್ಷ ಪುರಂದರ ವಿಠಲರಾಯನು!
+++++++++++++++++++++++++++++++++++++++++

ಹಿಂದಿನ ಶನಿವಾರ ಬಸ್ಸು ಅಫಘಾತಕ್ಕೊಳಗಾಗಿ ನನ್ನ ಮಗನಿಗೆ ಒಂದಿಷ್ಟು ತರಚಿದ ಗಾಯಗಳಾಗಿತ್ತು. ಆದರೆ ಮರುದಿನ ಮೂಗಿನಲ್ಲಿ ರಕ್ತ ಬಂದಾಗ ಒಂದಿಷ್ಟು ಹೆದರಿ ಆಸ್ಪತ್ರೆಗೆ ಹೋದರೆ ಮೂಗಿನ ಎಲುಬು ಬಿರುಕು ಬಿಟ್ಟಿರಬಹುದು..ಯಾವುದಕ್ಕೂ ಕ್ಷ-ಕಿರಣ ಮಾಡಿಸುವುದು ಒಳ್ಳೆಯದೆಂದಾಗ, ಸಾಧಾರಣವಾಗಿ ಯಾವುದಕ್ಕೂ ಹೆದರದ ಅವನು ತುಂಬಾ ಗಾಬರಿಯಾಗಿದ್ದ. ಯಾಕೆಂದರೆ ಮುಂದಿನ ವಾರದಲ್ಲಿ ಸಿಮೆನ್ಸ್ ಕಂಪನಿ ಅವನ ಕಾಲೇಜಿಗೆ ಬರಲಿತ್ತು. ಈಗಾಗಲೇ ವಿಪ್ರೊದಲ್ಲಿ ಆಯ್ಕೆಯಾಗಿದ್ದರೂ ಸಿಮೆನ್ಸ್ ಸೇರುವುದು ಅವನ ಕನಸಾಗಿತ್ತು. ಅದರಲ್ಲಿ ಆಯ್ಕೆಯಾಗುದು ಸಹ ಸುಲಭವಾಗಿರಲಿಲ್ಲ. ಜೆತೆಗೆ ಈ ಮೂಗಿನ ಎಲುಬಿನಲ್ಲಿ ಏನಾದರೂ ತೊಂದರೆಯಾದರೆ ಅವನು ಆಸ್ಪತ್ರೆಗೆ ಸೇರಬೇಆಗುತ್ತಿತ್ತು. ಮತ್ತು ಅಪರೇಷನ್ ನಂತರ ಅವನಿಗೆ ಕಾಲೇಜಿಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವನು ಒಂದು ಚೂರು ಧೃತಿಗೆಟ್ಟಿದ್ದನು. ಅದು ನನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ನನ್ನ ಮಂತ್ರ ಒಂದೇ..ಯಾವುದು ನಮ್ಮ ಕೈಯಲ್ಲಿ ಇಲ್ಲ. ನಮಗೆ ಸಾಧ್ಯವಿರುವುದು ಒಂದೇ ಅವನಲ್ಲಿ ವಿಶ್ವಾಸವಿಡುವುದು ಮತ್ತು ಅವನ ಆದೇಶ ಪಾಲಿಸುವುದು. ಪವಾಡ ನಡೆಯಿತು. ವೈದ್ಯರು ಕ್ಷ-ಕಿರಣ ತೆಗೆಸಿದಾಗ ಮೂಗಿನ ಎಲುಬಿಗೆ ಯಾವುದೇ ಹಾನಿಯಾಗಿಲ್ಲವೆಂದು ತಿಳಿಸಿದರು. ಅದೇ ದಿನ ಅಪರಾಹ್ನ ಅವನು ನಿಟ್ಟೆಗೆ ಹೋದನು. ಶುಕ್ರವಾರ ಅಪರಾಹ್ನ ಅವನ ಫೋನು. ಅಮ್ಮ ನಾನು ಸಿಮೆನ್ಸ್ ಕಂಪನಿಯಲ್ಲಿ ಆಯ್ಕೆಯಾದೆನು, ಎರಡನೆಯ ಸುತ್ತಿನಲ್ಲಿ ಮೊದಲಿಗನಾಗಿ!
ಇದು ನನ್ನ ಮಟ್ಟಿಗೆ ಮಾತ್ರವಲ್ಲ ಅವನ ಮಟ್ಟಿಗೂ ಒಂದು ಪವಾಡವೇ ಎನ್ನಬಹುದು. ಇಡೀ ಕಾಲೇಜಿನಲ್ಲಿ ಕೇವಲ ನಾಲ್ಕು ಮಂದಿ ಆಯ್ಕೆಗೊಂಡಿದ್ದಾರೆ. ಅದರಲ್ಲೂ ಇಲೆಕ್ಟ್ರಿಕಲ್ ಡಿಪಾರ್ಟ್ಮೆಂಟಿನಿಂದ ಇವನೊಬ್ಬನೇ ಅದರಲ್ಲೂ R &D ಗೆ ಆಯ್ಕೆಯಾದನು. ಅವನ ಪ್ರತಿಭೆಗೆ ಇಂತಹುದೇ ಒಂದು ಕಂಪನಿಯ ಅಗತ್ಯವಿತ್ತು. 
ಈಗಾಗಲೇ ನನ್ನ ಒಡೆಯನಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸಿದ್ದೇನೆ..ಎಂದಿನಂತೆ! ನನ್ನ ಖುಷಿ ತಮ್ಮೆಲ್ಲರೊಂದಿಗೂ ಹಂಚಿಕೊಂಡು ಇಮ್ಮಡಿ ಮಾಡಿಕೊಳ್ಳೋಣವೆಂದೆನಿಸಿತು

ಇಂದಿನ ಮುಸ್ಸಂಜೆ!


-
ಕ್ಷಿತಿಜದೆಡೆ ಜಾರುತ್ತಿರುವ ರವಿಯ ಬೀಳ್ಕೊಟ್ಟು
ತನ್ನತನವ ಮೆರೆಯಲು ಹವಣಿಸುತಿರುವ
ಚಂದಮನಿಗೆ ತೆರೆದ ಬಾಹುಗಳಿಂದ 
ಮುಗುಳ್ನಗುತ್ತಾ ಸ್ವಾಗತ ಕೋರುವ ಮುಸ್ಸಂಜೆ!

19 January, 2013

ಒಲವೇ, ನೆನಪಿದೆಯೆ ಆ ದಿನಗಳು!





ಒಲವೇ, ನೆನಪಿದೆಯೆ ಆ ದಿನಗಳು!
__________________________

ಒಲವೇ,
ನೆನಪಿದೆಯೆ
ನಾ ಕಾದಿದ್ದೆನಲ್ಲ
ನಿನ್ನ ಕೃಪೆಗಾಗಿ,
ನಿನ್ನೊಲವಿನ 
ನೋಟಕ್ಕಾಗಿ....
ನಿನ್ನ ಬಾಗಿಲ 
ತಟ್ಟಿದೆ...

ನೀ ತೆರೆಯಲಿಲ್ಲ
ನಾ ಸರಿಯಲಿಲ್ಲ
ಕಾಯುತ್ತಲೇ ಇದ್ದೆ
ಕಾಲ ಸರಿಯಿತು..
ಋತುಗಳು 
ಬಂದವು ಹೋದವು...

ಧೃತಿಗೆಟ್ಟೆನೆ...
ಇಲ್ಲವಲ್ಲ..
ಕಾಯುವುದೇ 
ಕಾಯಕವಾಯಿತಲ್ಲ
ಕೊನೆಗೂ ನೀ
ತೆರೆದೆಯಲ್ಲ...

ಹೃದಯ ದೇಗುಲದ
ದ್ವಾರವ. ಮೋಹಕ 
ದೃಷ್ಟಿ ಬೀರಿದೆ...
ನಿನ್ನ ಹೃದಯದಲೇ
ಎನ್ನ ಇರಿಸಿದೆ!


ಎಂದರಿಯುವರು ಮಂದಿ ಒಲವಿನ ಹಿರಿಮೆ!


ಎಂದರಿಯುವರು ಮಂದಿ ಒಲವಿನ ಹಿರಿಮೆ!
_______________________________
ಒಲವೇ,
ಅಚ್ಚರಿಯಾಗುವುದೆನಗೆ
ಎಲ್ಲೆಲ್ಲೂ ನಾ
ಕಾಣುವೆನೋ
ದ್ವೇಷ, ಮತ್ಸರ, 
ಕೋಪ, ಜಗಳ, 
ಆಕ್ರಮಣ, ಕುಹಕತನ, 
ವಂಚನೆ, ಸಮರ 
ಇವುಗಳದೇ ಆಡಳಿತ!
ಎಂದರಿವರೋ ನಾ 
ಅರಿತಂತೆ ನಿನ್ನ 
"ಹಿರಿಮೆ" ಈ ಮಂದಿ!

18 January, 2013

ಮುಸ್ಸಂಜೆ ತಂದ ಸುಂದರ ಕನಸು!


ನಭದಲಿ ಹೊಳೆಯುತಿರುವ ಹುಣ್ಣಿಮೆಯ 
ಚಂದಿರನ ಬಿಂಬವ ತೋರುತ್ತಾ 
ಬಾಲ ರಾಮಚಂದಿರನಿಗೆ ತುತ್ತು 
ಉಣಿಸುತಿರುವ ಕೌಸಲ್ಯೆ ನಾನಾದೆನೆಂದು
ಕ್ಷಣ ಕಾಲ ಕನಸು ಕಂಡ ಮುಸ್ಸಂಜೆ!

ಮುಕ್ತಾದ ಮಂಗಲತ್ತೆ ಒಂದಿಷ್ಟು ಪ್ರಶ್ನೆ ಎಸೆದರು...ನನ್ನುತ್ತರ ಹೀಗಿತ್ತು ಅವುಗಳಿಗೆ!!!


Jayalaxmi Patil:
ಪ್ರೀತಿ, ಸ್ನೇಹ, ಪರಿಚಯ, ಆತ್ಮೀಯತೆ, ನನ್ನವರು, ನಂಬಿಕೆ, ವೈರಿ...... ಈ ಎಲ್ಲದಕ್ಕೂ ಸೆಡ್ಡು ಹೊಡೆದು ನಿಲ್ಲುವುದು, ಎಲ್ಲವನ್ನೂ ಸುಳ್ಳಾಗಿಸುವುದು ಯಾವುದು ಗೊತ್ತಾ?
Shiela Nayak:
 ಜವಾಬ್ದಾರಿ, ಮರ್ಯಾದೆ, ಅಹಂ ಮತ್ತು ಸಂಪತ್ತು
*******************************
Jayalaxmi Patil:
ಸ್ನೇಹವೆಂದರೆ.....
Shiela Nayak:
ಗಟ್ಟಿ ಅಪ್ಪುಗೆ!
*******************************
Jayalaxmi Patil:
ಪರಿಚಯವೆಂದರೆ......
Shiela Nayak:
ಹಿಂದಿನ ಜನ್ಮದ ಅಳಿದುಳಿದ ಬಂಧ!
****************************

Jayalaxmi Patil:
ನನ್ನವರು ಎಂದರೆ.......
Shiela Nayak:
ನನ್ನೊಳಗಿನ ನನ್ನನ್ನು ಅರಿತವರು...ಕಣ್ಣ ಭಾಷೆ, ಹೃದಯ ಭಾಷೆ ಅರಿತವರು!
***************
Jayalaxmi Patil:
ವೈರಿಯೆಂದರೆ......
Shiela Nayak:
ದ್ವೇಷ, ರೋಷ, ಕೋಪ ಮತ್ತು ಮಾತ್ಸರ್ಯ!
*****************

Jayalaxmi Patil:
ಆತ್ಮೀಯತೆಯೆಂದರೆ......
Shiela Nayak:
ಒಬ್ಬರನೊಬ್ಬರು ಅರ್ಥಮಾಡಿಕೊಳ್ಳುವುದು.....ಮಾತಿನ ಹಂಗಿಲ್ಲದೆ!
*****************************
Jayalaxmi Patil:
ನಂಬಿಕೆಯಂದರೆ.........
Shiela Nayak :
ನೀನೆ ನಾನು, ನಾನೇ ನೀನು!
*************
Jayalaxmi Patil:
ಪ್ರೀತಿಯೆಂದರೆ.....
Shiela Nayak:
 ಆತ್ಮ ಬಲ!
*************

16 January, 2013

ಭಾವಗಳೇ ರಂಗುಗಳಾದವು!


ಭಾವಗಳೇ ರಂಗುಗಳಾದವು!
_________________________
ಒಲವೇ,
ಕೇಳಿತೇ..
ಅನ್ನುತ್ತಿದ್ದಾರೆ ನೋಡು
ಭೇಷ್ ಭೇಷ್  
ನನ್ನೀ ಕಲಾಕೃತಿಯ
ಮೋಹಕತೆಗೆ ಮಾರುಹೋಗಿದ್ದಾರಲ್ಲ..
ಲೋಕದ ಜನರು!
ಅವರಿಗದು ತಿಳಿದಿಲ್ಲ
ನನ್ನೀ ಭಾವಗಳೇ
ಈ ಚಿತ್ರಕೆ 
ರಂಗನಿತ್ತವು ಎಂದು!

ಲಾಲಿ ಹಾಡುವ ಮುಸ್ಸಂಜೆ!


ಬಿಸಿಲ ತಾಪದಿಂದ ನಲುಗಿದ ವಸುಂಧರೆಗೆ
ಮಿಣಿ ಮಿಣಿ ಮಿಂಚುವ ಹರಳುಗಳಿಂದ 
ನೇಯ್ದ ಕಡುನೀಲಿ ಚಾದರವನ್ನು ಹೊದಿಸಿ
ಜೋಜೋ ಲಾಲಿ ಹಾಡುತಿಹ ಮುಸ್ಸಂಜೆ!

15 January, 2013

ನಮಿಸುವೆನೋ ನರಹರಿಯೇ!


ಕೃತಜ್ಞತೆ!
_____________________

ಮನ ಕಲಕಿತ್ತು..
ಒಂದಿಷ್ಟು ಅಳುಕಿತ್ತು..
ಏನೋ ಹೇಗೋ
ಹೆದರಿಕೆಯೂ ಇತ್ತು..
ಆದರೂ ನಿನ್ನ ಬೆಂಬಲವಿದೆ
ಎಂಬರಿವೂ ಜತೆಗಿತ್ತು!
"ನಂಬಿದವರ ಕೈಯ ಬಿಡ"
ದಾಸವರೇಣ್ಯರು ಹಾಡುವರಲ್ಲ
ನಾನೂ ಇಂದು 
ಮತ್ತೊಮ್ಮೆ ಮಗದೊಮ್ಮೆ
ಹಾಡಿ ಕೊಂಡಾಡುವೆನೋ
ನಿನ್ನ ನರಹರಿಯೆ!
ಇಂದು ಒಡಹುಟ್ಟಿದವನ
ರೂಪದಲಿ ತ್ವರದಲಿ
ನೀ ಕಾಯ್ದೆಯೋ 
ನನ್ನೊಡೆಯನೇ ನನ್ನ 
ಕರುಳ ಕುಡಿಯ 
ಪೊರೆದೆಯಲ್ಲೋ!
ನಿನಗಿದೋ ಮತ್ತೆ 
ಶಿರ ಬಾಗಿ
ನಮಿಸುವೆನೋ ನರಹರಿಯೇ!

14 January, 2013

ನೀನೇ ಮೆಚ್ಚದಿರೆ ಹೇಗೆ!







ನೀನೇ ಮೆಚ್ಚದಿರೆ ಹೇಗೆ!

ಒಲವೇ,
ಒಮ್ಮೆ ಕೇಳಿಲ್ಲಿ
"ಕವಯತ್ರಿ"  ಎಂದೆಣಿಸಿದ್ದಾರೆ
ಜನರು ನನ್ನನ್ನು !
ಆದರೆ ನಿನಗದು 
ತಿಳಿದಿದೆ ತಾನೇ
ಇವೆಲ್ಲಾ ಬರಹಗಳು
ನನ್ನೊಳಗಿಹ ನಿನ್ನೊಳಗಿನಿಂದಲೇ
ಹೊರ ಹೊಮ್ಮಿತೆಂದು
ಅಂದ ಮೇಲೆ
ನಿನ್ನೀ ಬರಹಗಳನ್ನು
ನೀನೇ ಮೆಚ್ಚದಿರೆ ಹೇಗೆ?



ಒಲವ ಕಂಡೇ ಬಿಟ್ಟೆ !

 ಕಂಡು ಹಿಡಿದೆ ಒಲವ..
-------------------

ವರುಷಗಳಿಂದ ಅಲೆದಾಟ
ಅದರಸ್ತಿತ್ವದ ಗುರುತಿಗಾಗಿ
ಹುಡುಕಾಟ ನಡೆದಿತ್ತು.
ನಿತ್ಯವೂ ವಿಶಾಲವಾದ ಬಾನಿನಂಚಿನವರೆಗೂ
ದೃಷ್ಟಿ ಹಾಯಿಸಿದರೂ ಏನೂ ಕಾಣಿಸಿರಲಿಲ್ಲ...
ಮತ್ತೇರಿ ಅಡ್ಡಾದಿಡ್ಡಿಯಾಗಿ ಏರಿಬರುವ
ಕಡಲ ತೆರೆಗಳನೂ ಬಿಡಲಿಲ್ಲ..
ಅಲ್ಲೂ ಉತ್ತರ ಇರಲಿಲ್ಲ...
ಸೂತ್ರದಾರ ಅವನೆಂದು ನಂಬಿ ಕಲ್ಲಿನ ಮೂರ್ತಿಗಳನ್ನ ಬೇಡಿದೆ..
ಮತ್ತೆ ಮತ್ತೆ ಕಾಡಿದೆ..
ಹ್ಞೂಂ...
ಮೌನದ ಪ್ರತಿಧ್ವನಿಯೇ ಎಲ್ಲೆಡೆ...
ಸೋತು ಸುಣ್ಣವಾಗಿ ಹುಡುಕಾಟವ ನಿಲ್ಲಿಸಿಯೇ ಬಿಟ್ಟೆ.
ಅರೇ ಒಲವ ಕಂಡೇ ಬಿಟ್ಟೆ
ಅದೇ ಘಳಿಗೆಯಲ್ಲಿ..
ಎಲ್ಲೆನ್ನುವಿರಾ
ನನ್ನೊಳಗೇ..
ಮತ್ತೀಗ ಒಲವ ಬಿಂಬ ನಿನ್ನೊಳಗೂ.. 

ಇದನ್ನೇ ವಿಧಿಯಾಟ ಅನ್ನುವರೇನು!



   ಇದನ್ನೇ ವಿಧಿಯಾಟ ಅನ್ನುವರೇನು!




      ಮೊನ್ನೆ ಶನಿವಾರ ೧೨ರಂದು ನಿಟ್ಟೆಯಿಂದ ಮನೆಗೆ ಬರಲು ಬಸ್ಸಿಗಾಗಿ ಕಾದು ನಿಂತಿದ್ದ ನನ್ನ ಮಗ ಮೊದಲು ಬಂದ ನಾಲ್ಕು ಬಸ್ಸುಗಳನ್ನು ಹತ್ತಲಿಲ್ಲ. ಕಾರಣ ಅವುಗಳು ಜನರಿಂದ ತುಂಬಿ ತುಳುಕುತ್ತಿದ್ದವು! ಅವನ ಕೈಯಲ್ಲಿ ಅವನ ಬಟ್ಟೆ, ಗಣಕ ಯಂತ್ರಗಳಿದ್ದ ಲಗೇಜು ಇದ್ದ ಕಾರಣ ಅವನು ನಿಲ್ಲಲೂ ಜಾಗವಿಲ್ಲದ ಆ ಬಸ್ಸುಗಳನ್ನು ಹತ್ತಲಿಲ್ಲ. ಕೊನೆಗೆ ಬಂದ ೫ನೇ ಬಸ್ಸನ್ನು ಹತ್ತಿದ. ಅದರಲ್ಲೂ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಕೊನೆಯ ಸೀಟಿನ ಮತ್ತು ಅದರ ಎದುರಿರುವ ಬಲಗಡೆಯ ಸೀಟಿನ ಮಧ್ಯದಲ್ಲಿರುವ ಖಾಲಿ ಜಾಗಲ್ಲಿ ನಿಂತುಕೊಂಡಿದ್ದ. ಆ ದಿನ ಎಂದಿನಂತೆ ತನ್ನ ಲಗೇಜನ್ನು ಮೇಲಿರಿಸಲಿಲ್ಲ.  ಬಸ್ಸು ವೇಗವಾಗಿ ಹೋಗುತ್ತಿತ್ತು...ಇನ್ನೂ ನಿಟ್ಟೆಯನ್ನು ದಾಟಿರಲಿಲ್ಲ...ಇದ್ದಕ್ಕಿದ್ದಂತೆ ಮುಖ ಹೋಗಿ ಎದುರು ಬಡಿದದು ಮಾತ್ರ ಗೊತ್ತಾಯಿತು. ಕೆಲವು ಕ್ಷಣ ಕಣ್ಣಿಗೆ ಕತ್ತಲು ಬಂದತ್ತಾಯಿತು. ಇದು ಹೇಗೆ ನಡೆಯಿತು ಎಂದು ಅಲ್ಲಿದ್ದವರಿಗ್ಯಾರಿಗೂ ಗೊತ್ತಾಗಲಿಲ್ಲ. ತನ್ನ ಮುಖ ಯಾವುದಕ್ಕೆ ಹೋಗಿ ಬಡಿಯಿತು ಅಂತ ಅವನಿಗೆ ಈಗಲೂ ಅರ್ಥವಾಗಿಲ್ಲ. ಹಾಗೆ ನೋಡಿದರೆ ಅವನು ಈವರೆಗೆ ಎರಡು ಅಫಘಾತದ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಅವನ ಕೂದಲು ಕೂಡ ಕೊಂಕಗದೇ ಪಾರಾಗಿದ್ದನು. ಕ್ಷಣ ಮಾತ್ರದಲ್ಲಿ ಅವನ ಕಣ್ಣಿಗೆ ಕಂಡದ್ದು ರಕ್ತ ಚಿಮ್ಮುವಿಕೆ..ಜನರ ನರಳಾಟ! ಬಸ್ಸಿನ ರೋಡುಗಳು ಬಗ್ಗಿ ಎಲ್ಲವೂ ಅವನತ್ತ ಮುಖಮಾಡಿಕೊಂಡು ನಿಂತಿವೆ! ತಲೆ ಮೇಲಿನ ಮಾಡು ಕಾಣುತ್ತಿಲ್ಲ! ಸ್ವಲ್ಪ ಸುಧಾರಿಸ್ಕೊಂಡು ಹಿಂದಿನಿಂದ ಬಂದ ಕಾಲೇಜು ಬಸ್ಸಿನಲ್ಲಿ ಮಂಗಳೂರಿಗೆ ಬಂದು ತಲುಪಿದನು. ಅಲ್ಲಿ ಯಾರೋ ಹೇಳಿದರಂತೆ..ಮನೆಗೆ ಫೋನು ಮಾಡು..ಇವನು ಮಾಡಲಿಲ್ಲ! 
   ಮುಖದಲ್ಲಿ ಕಣ್ಣಿನ ಕೆಳಗೆ ಒಂದು ಸಣ್ಣ ವೃತ್ತಾಕಾರದಲ್ಲಿ ಚರ್ಮ ಕಿತ್ತು ಹೋಗಿ ಮಾಂಸ ಕಾಣಿಸುತ್ತಿತ್ತು. ಕಣ್ಣಿನ ಕೆಳಗೆ ಚರ್ಮ ಉಬ್ಬಿಕೊಂಡಿತ್ತು ಅಂತ ಬಿಟ್ಟರೆ ಆ ಕ್ಷಣಕ್ಕೆ ಅಂತಹದೇನು ಆಗಿಲ್ಲವೆಂದೇ ಭಾವಿಸಿದೆ. ಆದರೂ ನಮ್ಮ ಮನೆಯ ಬಳಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಿದೆ. ಅವರು ಕುಲಂಕುಷವಾಗಿ ಪರೀಕ್ಷಿಸಿದಾಗ ಕಾಲಿಗೂ ಆದ ಗಾಯ ಕಾಣಿಸಿತು. ರಾತ್ರಿ ಮೈ ಕೈ ನೋವು ಕಾಣಿಸಿತು...ಮರುದಿನ ಮತ್ತಿನ್ನೊಮ್ಮೆ ಎಕ್ಸ್ ರೇ ತೆಗೆಯಲು ಕಳುಹಿಸಿದಾಗ ಮೂಗಿನ ಎಲುಬಿನಲ್ಲಿ ಬಿರುಕು ಬಿಟ್ಟಿದೆ ಅಂತ   ಗೊತ್ತಾಯ್ತು! 
    ಆ ಅಫಘಾತದಲ್ಲಿ ಯಾರೂ ಸಾವನಪ್ಪಲಿಲ್ಲ..ಆದರೆ ನೋವು... ಎಷ್ಟೋ ಮಂದಿಗೆ ತಲೆಗೆ ಪೆಟ್ಟಾಗಿದೆ ಅಂತ ಹೇಳುತ್ತಿದ್ದಾನೆ. ಮತ್ತು ಬಸ್ಸು ಅಫಘಾತಕ್ಕೀಡಾದಾಗ ಮೇಲಿರಿಸಿದ ಲಗೇಜುಗಳು ಕೂಡ ಎಲ್ಲೆಲ್ಲೋ ಹೋಗಿ ಬಿದ್ದವು! ನನಗೆ ಮರುದಿನ ಅವನು ಆ ಅಫಘಾತದ ಚಿತ್ರ ತೋರಿಸಿದಾಗ ಅದರ ಭೀಕರತೆಯ ಬಗ್ಗೆ ಅರಿವಾಯಿತು!

12 January, 2013

ರಂಗಿನ ಮುಸ್ಸಂಜೆ!


ಝಗಮಗಿಸುವ ಹರಳುಗಳಿಂದ ನೇಯ್ದ 
ತನ್ನ ಸೆರಗನ್ನು ನಿಶೆ ಬಾನ 
ತುಂಬಾ ಚೆಲ್ಲಿ ಮೆರೆದಾಗ 
ಮೆಲ್ಲನದ ಸರಿಸಿ ಇಣುಕುವ 
ಚಂದಿರನ ತೋರುವ ಮುಸ್ಸಂಜೆ!

11 January, 2013

ಒಲವಿಗೊಂದು ಓಲೆ!


ಒಲವೇ,
ಅರಿವಿದೆಯೆನಗೆ 
ಇಹರು ನಿನಗೆ 
ಸಾವಿರಾರು 
ಅಭಿಮಾನಿಗಳೆಂದು!
ಆದರೂ, ಒಮ್ಮೆ 
ವಿಚಾರಿಸಿ ನೋಡಂತೆ
ಇಟ್ಟಿರುವರೇನೋ 
ನಿನ್ನನ್ನು ನನ್ನಂತೆ
ತಮ್ಮೊಳಗೆಂದು!

*****************

ಒಲವೇ, ಇಲ್ಲ
ಕಾಯುವಿಕೆಗಿಂತ
ಅನ್ಯ ತಪ
ಅನ್ನುವರಲ್ಲ!
ಕಾಯುತ್ತಲೇ ಇದ್ದೇನೆ
ಹೆಚ್ಚಾಗುತಲಿದೆಯಲ್ಲ
ನನ್ನ ಪರಿತಾಪ!
*****************



ಒಲವೇ,


ನೀನು ಕೇಳಲೆಂದೇ ಸ್ವರವೆತ್ತಿ ಹಾಡುತಿಹೆನು

ಕಳೆದು ಹೋಗುವುದೇನೋ ಹಲವು 

ಸುಸ್ವರಗಳೆಡೆಯಲ್ಲಿ ನನ್ನ ಸ್ವರವೂ

ಬೇಡುವೆ  ಕಾಡುವೆ  ಪ್ರಾರ್ಥಿಸುವೆ 

ನಿನ್ನಲ್ಲಿ ಒಂದಿಷ್ಟು ಕಿವಿ ನಿಮಿರಿಸಿ 

ಆಲಿಸುವೆಯಾ ನನ್ನ ಸ್ವರವನೂ!

10 January, 2013

ಮತ್ತಷ್ಟು ಒಲುಮೆಯ ಕಾವ್ಯಗಳು!


ಒಲವೇ,
   
ನಿನ್ನನ್ನರಸಿ ಹೊರಟೆನಗೆ ನನ್ನನ್ನೇ ತೋರಿಸಿದೆಯಲ್ಲ;
ಅಲ್ಲಿಯ ತನಕ ಕಂಡಿರಲಿಲ್ಲ ನಾನೇ ನನ್ನನಲ್ಲ..
**********

ಒಲವೇ, 

ಅಂಬೆಗಾಲಿಕ್ಕುತ್ತ ನಿನ್ನತ್ತಲೇ
ಹೊರಟಿರುವೆ.. ಒಮ್ಮೆ
ಎತ್ತಿ ಬಿಗಿದಪ್ಪಿ ಮುದ್ದಾಡೆನ್ನ!
************

ಒಲವೇ,

ನಿನ್ನೀ 
ಮೋಹಕ, 
ಪಾರದರ್ಶಕ
ತಿಳಿಗೊಳದಂತಿರುವ
ನೋಟದಲ್ಲೇ
ನನ್ನ ಈಜಾಟ
ನಿತ್ಯವೂ!
*************

ಕೆಲವನ್ನು ಕಳೆದಿರುವೆನಾದರೂ,

ಪಡೆದಿರುವುದು ಹಲವಾರು
ಒಲವೇ,
ಎಲ್ಲವೂ ನಿನ್ನಾಸರೆಯ
ವೈಶಿಷ್ಟ್ಯವಲ್ಲದೆ ಮತ್ತೇನು!

09 January, 2013

ಅಬ್ಬ! ಬಡ ಜೀವವೇ ಬದುಕಿದೆ!


  

        ಮದುವೆಯಾಗಿ ಗಂಡನ ಜತೆ ಹನಿಮೂನಿಗೆ ಹೊರಟಿದ್ದಳು ಹೃದಯದಲ್ಲಿ ಕನಸುಗಳ ಗಂಟನ್ನು ಹೊತ್ತುಕೊಂಡು. ಗಂಡ ಹೆಂಡತಿ ಸರವಾಡುತ್ತ ಕೇರಳದ ನೆಂಟರ ಮನೆಗೆ ತಲುಪಿದರು. 
"ನಮಗೋಸ್ಕರ ಚಿಕ್ಕಪ್ಪ ಕಾಟೇಜ್ ಬುಕ್ ಮಾಡಿದ್ದಾನೆ..ಆರಾಮವಾಗಿ ಅಲ್ಲಿ ಟಿವಿ ನೋಡುತ್ತಾ ನಾಲ್ಕು ದಿನ ಇಲ್ಲಿಯೇ ಇರೋಣ." ಪತಿಯು ಅವಳ ಕಿವಿಯಲ್ಲಿ ಪಿಸುಗುಟ್ಟುತ್ತಾ ಹೇಳಿದನು.. 
ಸ್ವರ್ಗ ಸುಖದ ಕಲ್ಪನೆಯಲ್ಲಿ ಅವಳ ಮುಖ ರಂಗೇರಿತು. ಇನ್ನೂ ರಂಗಿಯಿಳಿಯದ ಮದರಂಗಿ ಮೆತ್ತಿದ ಆ ಕೈಯನ್ನು ಮೆತ್ತಗೆ ಅದುಮಿದನವನು. ಮತ್ತಿಷ್ಟು ನಾಚಿ ಅವನಿಗಂಟಿ ಕುಳಿತವಳು! 

       ಬಂದ ನವ ವಧುವರರನ್ನು ಮನೆಯವರು ಹಾರ್ಧಿಕವಾಗಿ ಸ್ವಾಗತಿಸಿದರು. ಅವರಿಗೋಸ್ಕರ  ಮಹಡಿಯಲ್ಲಿ ಕಾದಿರಿಸಲಾದ ಕೋಣೆಗೆ ಕರೆದೊಯ್ಯಲಾಯಿತು. ಅವಳು ಪತಿಯತ್ತ ಹುಬ್ಬೇರಿಸಿದಳು! ಮತ್ತೆ ತಿಳಿಯಿತು...ಕಾಟೆಜ್ ಗೀಟೇಜು ಏನೂ  ಇಲ್ಲ..ಜತೆಗೆ ಮತ್ತೇನೋ ನೆವನಗಳು. ಮುದುಡಿದಳು..ತಾವಿಬ್ಬರು ಇನ್ನೂ ಪರಸ್ಪರ ಅರಿಯಬೇಕಾದರೆ ಏಕಾಂತದ ಅಗತ್ಯವಿತ್ತು..ಆದರೆ ಅವಳೇನೂ ಮಾಡಲು ಸಾಧ್ಯವಿರಲಿಲ್ಲ. ಊಟ ಗೀಟ ಮುಗಿಯಿತು...ಮತ್ತೆ ಸತಿ ಪತಿ ಈಗ ಏಕಾಂತದಲ್ಲಿ...ಆದರೆ ಇದೇನು ಪತಿ ಯಾವುದೋ ಹೊಲಸು ಚಿತ್ರವನ್ನು ನೋಡುತ್ತಿದ್ದಾನೆ...ಉತ್ಸಾಹವೆಲ್ಲ ಇಳಿಯಿತು. ಸುಮ್ಮನೆ ಹೊದ್ದು ಮಲಗಿದಳು. 

    ಮರುದಿನ ತಿಂಡಿ ಕಾಫಿ ಉಪಚಾರವೆಲ್ಲ ನಡೆಯಿತು. ಪತಿ ಮತ್ತವನ ಚಿಕ್ಕಪ್ಪ ಇನ್ನು ಕೆಲವು ಗೆಳೆಯರೆಲ್ಲ ಸೇರಿದರು...ನೋಡ ನೋಡುವಷ್ಟರಲ್ಲಿ ಇಸ್ಪೀಟು ಎಲೆಗಳು ಹಂಚಿಕೊಳ್ಳಲು ಪ್ರಾರಂಭವಾಯಿತು.. ಜತೆಗೆ ಪಾನ್ ಬೀಡಾ..ಬಿಯರ್...ಕುರುಕುರು ತಿಂಡಿ..ಇವಳೇನು ಮಾಡುವುದು? ಕೋಣೆಗೆ ನಡೆದಳು..ಕನಸನ್ನೆಲ್ಲಾ ಕಟ್ಟಿ ಗಂಟು ಹಾಕಿದಳು...ಕಿಟಿಕಿ ತೆಗೆದು ಮೊದಲು ಬಲಹಾಕಿ ಎತ್ತಿ ಬೀಸಾಕಿಬಿಟ್ಟಳು. ಮುಗಿಯಿತು ನನ್ನ ಜೀವನ! 

    ೩ ದಿನ ಹೀಗೆ ಕಳೆಯಿತು..ಅಲ್ಲಿಂದ ಮತ್ತೊಂದು ನೆಂಟರ ಮನೆಗೆ ಪಯಣ! ಅಲ್ಲಿ ಮತ್ತೆ ಅದೇ ಆಟ! 
  ಮತ್ತಿಷ್ಟು ನೆಂಟರು ಸೇರಿದರಲ್ಲಿ. ಅವಳಿಗೋ ಆಶ್ಚರ್ಯ...ಇವರ ಪತ್ನಿಯರಿಗೆ ಇದರ ಬಗ್ಗೆ ಆಕ್ಷೇಪಣೆ ಇಲ್ಲವೇ? ಯಾಕೆ? ಅಥವಾ ನಾನೇ ಸರಿ ಇಲ್ಲವೆ? 
   

      ಇವಳ ಮುದುಡುವಿಕೆ ಆ ಹೆಂಗಸರಿಗೆ ತಮಾಷೆ! ಎಲ್ಲರೂ ಕೂಡಿದರು ಇವಳ ಸುತ್ತ...ಇವರ್ಯಾಕೆ ಇಲ್ಲಿ ಬಂದಿದ್ದಾರೆ? ಅವಳಿಗೆ ಆಶ್ಚರ್ಯ!
 "ಹೇ ಇವಳ ರೇಪ್ ಮಾಡುವನಾ?" 
"ಅಯ್ಯೊ...ಎಲ್ಲಿ ಸಿಕ್ಕಿಸಿದೆಯಪ್ಪ ಭಗವಂತ" ಗಟ್ಟಿಯಾಗಿ ತನ್ನ ಬಟ್ಟೆಯನ್ನು ಹಿಡಿದಳು...ರಕ್ಷಣೆಗೆ ಏನಾದರೂ ಇದೆಯೇ ಎಂದು ಸುತ್ತಲೂ ನೋಡಿದಳು...
ಎಲ್ಲರಿಗೂ ಇವಳ ಕಣ್ಣಾಲಿಗಳು ತುಂಬಿದ್ದು ನೋಡಿ ಇನ್ನೂ ತಮಾಷೆ ಎಂದೆನಿಸಿತು. ಗಟ್ಟಿಯಾಗಿ ನಕ್ಕರು....
ನಗುತ್ತ ನಗುತ್ತ ಕೋಣೆಯಿಂದ ಹೊರಹೋದರು. ಅಬ್ಬ! ಬಡ ಜೀವವೇ ಬದುಕಿದೆ!
                               
              ******************************************************     

  {ಎರಡು ವರ್ಷದ ಹಿಂದೆ ರೈಲಿನಲ್ಲಿ ಅಕಸ್ಮಾತ್ತಾಗಿ ಭೇಟಿಯಾದ ಸರಿ ಸುಮಾರು ೩೫ರ ಪ್ರಾಯದ ಹೆಣ್ಣು ಮಗಳ ನಿಜ ಕಥೆಯಿದು, ಈ ಕತೆ ಹೇಳಿದ ಮೇಲೆ ಆಕೆ ಹಗುರವಾದ ಅನುಭವವನ್ನು ನಾನೂ ಕಂಡುಕೊಂಡೆ. ಒಬ್ಬಬ್ಬರದು ಒಂದೊಂದು ಕತೆ. ಏನು ಲೀಲೆ ನಿನ್ನದು ಭಗವಂತ}
  

ಸೀತೆ ಮತ್ತು ಕಾಡಿಗೆ!


               ಅವಳ ನಿಜ ಹೆಸರು ಸವಿತಳಾದರೂ ಸೀತೆಯಾಗಿ ಬದಲಾಗಿದ್ದಳು. ನಮ್ಮ ಮನೆಗೆ ಬರುವಾಗ ಅವಳಿಗೆ ೧೧,೧೨ ವರ್ಷವಾಗಿರಬಹುದು. ಚಿಕ್ಕಮ್ಮ ಮದುವೆಯಾಗಿ ನಮ್ಮ ಮನೆ ಪ್ರವೇಶಿಸಿದಾಗ ತಮ್ಮ ಸಹಾಯಕ್ಕಂತ ಅವಳನ್ನು ಕರೆತಂದಿದ್ದರು. ಅವರ ಎಲ್ಲಾ ಕೆಲಸದಲ್ಲಿ ಸೀತಾ ಬಲಗೈಯಂತಾಗಿದ್ದಳು. ಕೆಲಸ ಮುಗಿಸಿ ಟಿವಿ ನೋಡುವುದು ಬಿಟ್ಟು ಬೇರೆ ಗೊತ್ತಿಲ್ಲದ ಅವಳು ನಿಧಾನವಾಗಿ ತನ್ನ ಸೌಂದರ್ಯದ ಕಡೆಗೆ ಗಮನ ಹರಿಸುವುದನ್ನು ಮೊದಲು ಕಂಡದ್ದೇ ನಾನು. ಈಗೀಗ ಅವಳಿಗೆ ಹೊರಗೆ ಹೋಗಿ ಸಾಮಾನು ತರುವ ಕೆಲಸವನ್ನೂ ಚಿಕ್ಕಮ್ಮ ಅಂಟಿಸಿದ್ದರು. ಮತ್ತವಳು ಬಹಳ ಖುಷಿಯಲ್ಲಿ ಹೋಗುತ್ತಿದ್ದಳು.  ನೋಡಲು ಕಪ್ಪಾಗಿದ್ದರೂ ಬಹಳ ಲಕ್ಷಣವಾಗಿದ್ದ ಅವಳ ಕಣ್ಣು ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು. ಒಮ್ಮೆ ಅವಳ ಕಣ್ಣು ನಿತ್ಯಕ್ಕಿಂತಲೂ ಸುಂದರವಾಗಿ ಕಾಣಿಸಿತು. ಅರೇ, ಹೌದು ಕಣ್ಣಿಗೆ ಕಾಡಿಗೆ ಹಾಕಿದರೆ ಇನ್ನೂ ಚಂದ ಕಾಣುತ್ತಾಳೆಯಲ್ಲ ಈ ಹುಡುಗಿ. ನಾನಾವಾಗ ೧೯ವಷದವಳು. ನನ್ನ ಬಳಿ ಕಾಡಿಗೆ ಇದ್ದರೂ ಹೀಗೆ ನಿತ್ಯವೂ ಹಚ್ಚಿಕೊಳ್ಳುವ ಅಭ್ಯಾಸವೂ ಇರಲಿಲ್ಲ. ಇವಳ ಕಣ್ಣು ನೋಡಿ ಇನ್ನು ನಾನೂ ನಿತ್ಯವೂ ಕಾಡಿಗೆ ಹಚ್ಚಿಕೊಳ್ಳಬೇಕೆಂಬ ನಿರ್ಧಾರನೂ ಮಾಡಿಬಿಟ್ಟೆ ಆಗಲೇ. ಆದರೆ ಇವಳ ಬಳಿ ಕಾಡಿಗೆ ಎಲ್ಲಿಂದ ಬಂದಪ್ಪಾ..ನನಗಾಶ್ಚರ್ಯ. ಅವಳ ಬಳಿ ಪೌಡರ್ ಮತ್ತು ಲಾಲ್‍ಗಂಧ  (ಆವಾಗಿನ್ನು ಈ ಟಿಕ್ಲಿಯ ಹಾವಳಿ ಇಷ್ಟಿರಲಿಲ್ಲ. ಬಾಟ್ಲಿಯಲ್ಲಿ ಸಿಗುವ ದಪ್ಪ ಕೆಂಪು ಬಣ್ಣ ಹಾಕಿಕೊಳ್ಳುತ್ತಿದ್ದೆವು ನಾವು ಹುಡುಗಿಯರು) ಮಾತ್ರವಿತ್ತು. 
     
      ಮರುದಿನ ಕಾಕತಾಳಿಯವಾಗಿ ಅವಳು ಹೊರಗೆ ಹೊರಟಾಗ ನಾನು ಮನೆಯಲ್ಲೇ ಇದ್ದೆ. ನನಗೋ ಕುತೂಹಲ ..ಇವಳು ಎಲ್ಲಿಂದ ಕಾಡಿಗೆಯನ್ನು ಸಂಪಾದಿಸಿಕೊಂಡಿದ್ದಾಳೆ ಅಂತ. ಅವಳು ಅತ್ತ ಇತ್ತ ನೋಡಿದಳು..ನಿಧಾನವಾಗಿ ಬಚ್ಚಲು ಕೋಣೆಯ ಹಿಂದೆ ಬೆಂಕಿ ಮಾಡುವಲ್ಲಿ ನಿಂತಳು. ಅಲ್ಲಿ ಗೋಡೆಗೆ ದಪ್ಪ ಕರಿ ಮೆತ್ತಿಕೊಂಡಿತ್ತು. ಜಾಗರೂಕತೆಯಿಂದ ತೆಗೆದು ತನ್ನ ಕಣ್ಣಿಗೆ ಹಚ್ಚಿಕೊಂಡದನ್ನು ನೋಡಿದಾಗ ನಾನು ಮೂರ್ಛೆಹೋಗದೇ ಇದ್ದುದು ನನ್ನ ಪುಣ್ಯ. ಅವಳು ಸೀದ ಹೋಗದೆ ಮತ್ತೊಮ್ಮೆ ಮನೆಯೊಳಗೆ ಬಂದಳು. ತನ್ನ ಕನ್ನಡಿಯೆದುರು ನಿಂತಳು...ನಾಲಗೆ ಸವರಿ ತುಟಿ ಒದ್ದೆಮಾಡಿಕೊಂಡಳು...ಅತ್ತಿತ್ತ ನೋಡದೇ ಸೀದಾ ಹೊರಗೆ ಹೊರಟಳು!

   ಇನ್ನೇನೂ ಹೇಳಬೇಕಂತಿಲ್ಲವಲ್ಲ...ಮತ್ತೆ ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ವಿಚಾರಿಸಲು ಈ ೧೨ ವರ್ಷದ ಹುಡುಗಿಗೂ ಒಬ್ಬ ಬಾಯ್ ಫ್ರೆಂಡ್ ಇದ್ದಾನೆಂದು ಗೊತ್ತಾಗಿ..ಬಹಳ ಗದ್ದಲವಾಯಿತು. ಮತ್ತೆ ಹೇಗೂ ಇದೆಯಲ್ಲವ, ಗೃಹ ಬಂಧನ!!!

{ ಈ ಚಿಕ್ಕ ಹುಡುಗಿಯ ಬಗ್ಗೆ ನನಗೆ ನನ್ನ ಅಮ್ಮನಿಗೆ ಬಹಳ ಅನುಕಂಪವಿತ್ತು. ಅವಳಿಗಿಂತ ದೊಡ್ಡವಳಾದ ನಾನೂ ಆರಾಮವಾಗಿ ಶಾಲೆ ಕಾಲೇಜು ಅಂತ ತಿಂದು ತಿರುಗಿಕೊಂಡಿದ್ದರೆ ಈ ಹುಡುಗಿ ತನ್ನ ಕಲಿಯುವ ವಯಸ್ಸಿನಲ್ಲಿ ಹೀಗೆ ಪರರ ಸೇವೆ ಮಾಡುವುದರಲ್ಲಿ ತನ್ನ ಅಮೂಲ್ಯವಾದ ಕಾಲವನ್ನು ವೇಸ್ಟ್ ಮಾಡುತ್ತಾಳಂತ ಅನಿಸುತ್ತಿತ್ತು.  ನಾನು ತಪ್ಪಿಯೂ ಅವಳ ಕೈಯಲ್ಲಿ ಯಾವ ಕೆಲಸವನ್ನೂ ಮಾಡಿಸುತ್ತಿರಲಿಲ್ಲ. ತುಂಬಾ ಹಿಂಸೆಯಾಗುತ್ತಿತ್ತು. ಅದೇ ಅವಳು ಹೊರಗೆ ಯಾವನೋ ಲೋಫರ್ ಹುಡುಗನ ಜತೆ ಸ್ನೇಹ ಮಾಡಿಕೊಂಡಾಗ ಅಷ್ಟೇ ಕೋಪ ಬಂದಿತ್ತು.. ಆದರೆ ಈಗ ಅರ್ಥವಾಗುತ್ತಿದೆ. ಆ ಹುಡುಗಿಗೆ ಪ್ರಪಂಚ ಗೊತ್ತಿರಲಿಲ್ಲ..ಆ ಹುಡುಗನೂ ಮೋಸ ಮಾಡಿಯಾನು ಎಂಬ ಕಲ್ಪನೆನೂ ಇರಲಿಕ್ಕಿಲ್ಲ...ಟಿ ವಿ ವೀಕ್ಷಣೆ ಅವಳಿಗೆ ಕನಸನ್ನು ಕೊಟ್ಟಿತ್ತು..ನಿಜ ಲೋಕದ ಪರಿಚಯವಲ್ಲವಲ್ಲ}

08 January, 2013

ನನ್ನೊಳಗಿನ ರುಮಿ ಹೇಳುತ್ತಾನೆ!


ಒಲವೇ,
ಬಲು ದೊಡ್ಡ 
ಮಾಯಾವಿಯೋ ನೀನು...
ನಿನ್ನನ್ನೇ ಶಬ್ದಗಳಿಂದ  
ಕಟ್ಟಿಹಾಕಲೆತ್ನಿಸಿದೆನಲ್ಲ!
ನೀನಾದರೋ ಯಾವ 
ಯತ್ನವೇ ಇಲ್ಲದೆ
ಮೌನದೇ ಸೆರೆಹಿಡಿದೆಯಲ್ಲೆನ್ನ!

**********************************


ಒಲವೇ,

ಗಂಟು ಮೂಟೆ ಕಟ್ಟಿಕೊಂಡು
ಹೊರಟಿದ್ದೆ ಯಾವುದೋ ನಗರಿಗೆ;

ಅವೆಲ್ಲವನ್ನೂ ಕಳೆದುಕೊಂಡು 
ತಲುಪಿದೆ ನಿನ್ನೂರಿಗೆ...


07 January, 2013

ಒಲವಿನ ರಹಸ್ಯ!


  ಒಲವೇ,

  ನಮ್ಮೀ ಒಲುಮೆ ಉಳಿಯಲಿದೆ 
  ಸದಾ ರಹಸ್ಯವಾಗಿಯೇ!
 ನಿತ್ಯವೂ ನಾವು ಮುಖಾಮುಖಿ 
 ಆದರೂ ಅದರರಿವಿಲ್ಲ ಯಾರಿಗೂ!
 ಹೇಳುವುವು ಕೇಳುವುವು ಕೇವಲ ಚಕ್ಷುಗಳು
 ಸದ್ದು ಗದ್ದಲವೇ ಇರದ ಒಲವೆಮ್ಮದು!  
  

04 January, 2013

ನನ್ನ ಮುಂಜಾವುಗಳು!



ನಲ್ಲನ ತಲೆಗೂದಲಲ್ಲಿ ಮೃದುವಾಗಿ ಕೈಯಾಡಿಸಿ,
ಕಿವಿಯಲ್ಲಿ ಅದೇನೋ ಪಿಸುಗುಟ್ಟಿ, ಕಚಕುಳಿ
ಇಡುತ್ತಾ ಎಬ್ಬಿಸುವ ನಲ್ಲೆಯ ಪರಿಯ ಕಂಡು,
ರಂಗಾದ ಮುಂಜಾವಿಗೆ ಸುಸ್ವಾಗತ ಸುಸ್ವಾಗತ!
-೦೩-೦೧-೨೦೧೩

03 January, 2013

ಕೊರೆತ!


ಹೀಗೆ ಒಂದು ಆಲೋಚನೆ..
______________________

ಸಂಸ್ಕೃತಿ ಎಂದರೇನು! ಮಾನವನು ಭೂಮಿಯಲ್ಲಿ ಕಾಣಿಸಿಕೊಂಡಾಗ ಅವನ್ಯಾವ ಸಂಸ್ಕೃತಿಯನ್ನು ಪಾಲಿಸುತ್ತಿದ್ದನಪ್ಪಾ! ಕ್ರಮೇಣ ಹಿಂದು, ಮುಸ್ಲಿಮಾನ್, ಕ್ರೈಸ್ತ, ಪಾಶ್ಚಿಮಾತ್ಯ, ಪೌರಾತ್ಯ... ಹೀಗೆ ಅನೇಕ ಸಂಸ್ಕೃತಿಗಳು ಹುಟ್ಟಿಕೊಂಡವು. ಎಲ್ಲವೂ ಇಂದಿಗೂ ತಮ್ಮದೇ ಶ್ರೇಷ್ಟ ಸಂಸ್ಕೃತಿ ಎಂದೇ ನಂಬಿಕೊಂಡಿವೆಯಷ್ಟೇ. ಆದರೆ ನಿಧಾನವಾಗಿ ಎಲ್ಲಾ ಸಂಸ್ಕೃತಿಗಳು ಬೆರಕೆಗೊಂಡವು... ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮಗೆ ಬೇಕಾದುದನ್ನು ಅಳವಡಿಸಿಕೊಂಡರು... ಅಲ್ಲಲ್ಲಿ ಕ್ಷೀಣವಾಗಿ ಸಂಸ್ಕೃತಿ ಹಾಳಾಗುತ್ತಿದೆ ಗೊಣಗಾಟ ಕೇಳಿಬರುತ್ತಿದ್ದಂತೆಯೇ ಜಾಗತೀಕರಣದಿಂದಾಗಿ ಇಂದಿನ ಯುವಜನಾಂಗ ತಮ್ಮದೇ ಆದ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿತು.. ಮತ್ತು ಆಚೆಯೂ ಈಚೆಯೂ ಸಲ್ಲದ ನಮ್ಮಂಥವರು ಡೋಲಾಮಾನದ ಮನಸ್ಸಿನಿಂದ ನಮ್ಮ ಮಕ್ಕಳ ಜೊತೆಗೆ ನಿಲ್ಲಬೇಕಾದ ಪರಿಸ್ಥಿಯು ಕಾಣಿಸಿದೆ.

ನಮ್ಮ ಮಕ್ಕಳು ತಪ್ಪು ದಾರಿಯಲ್ಲಿ ನಡೆದರೆ ನಾವು ಖಂಡಿತ ಅವರನ್ನು ತಾಳ್ಮೆಯಿಂದ ತಿದ್ದಿತರಬೇಕು, ಇದು ಪ್ರತಿಯೊಂದು ಹೆತ್ತವರ ಕರ್ತವ್ಯವೂ ಹೌದು.. ಹಾಗಂತ ನಮ್ಮ ಸಂಸ್ಕೃತಿಯಲ್ಲಿ ಹೇಳಿದಂತೆ ನೀನು ಕಾಸಿನಗಲ ಕುಂಕುಮ, ಕೈತುಂಬ ಬಳೆ, ಸದಾ ಮೈಮುಚ್ಚುವಂತೆ ಸೀರೆಯುಡಬೇಕು ಎಂದು ಆಶಿಸುವುದು ಎಷ್ಟು ಸರಿ... ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯಿಸುವುದೇ ಹಿಂದು ಸಂಸ್ಕೃತಿ... ಮತ್ತೆ ತಮಗೆ... ತಾವೆಲ್ಲ ಜುಬ್ಬ, ದೋತಿ ಹಾಕಿ ಆಫೀಸಿಗೆ ಹೋಗುವಿರಾ! ಪಾಶ್ಚಿಮಾತ್ಯರ ದೇಣಿಗೆ ಈ ಸೆಲ್ ಫೋನು, ವಾಶಿಂಗ್ ಮೆಶಿನ್, ಗಣಕ ಯಂತ್ರ.. ಅವನೆಲ್ಲಾ ತಾವು ಯಾಕೆ ಉಪಯೋಗಿಸುವಿರಾ ನಮ್ಮ ಸಂಸ್ಕೃತಿ ರಕ್ಷಕರೇ?

ಜೀನ್ಸ್ ಪ್ಯಾಂಟಿಗೆ ಕುಂಕುಮ ಹೂವು ಹೊಂದುವುದಿಲ್ಲ... ಇನ್ನು ಜೀನ್ಸ್ ಪ್ಯಾಂಟ್ ಹಾಕಬೇಡಿ ಅನ್ನಬೇಡಿ ಮಾರಾಯರೆ. ಕೈಗೆಟುಕುವ ದರದಲ್ಲಿ ಸಿಗುವಿಕೆ, ಆರಾಮದಾಯಕತನ ಎರಡೂ ಅದನ್ನು ಬರೇ ಯುವ ಜಾನಾಂಗದಲ್ಲಿ ಮಾತ್ರವಲ್ಲ ನನ್ನಂಥಹ ಮಧ್ಯ ವಯಸ್ಕರೂ ಇಷ್ಟಪಡುವಂತಾಗಿದೆ. ಅಸಭ್ಯವಲ್ಲದಾದುದರಿಂದ ಅದ್ಯಾಕಪ್ಪಾ ಅದನ್ನೂ ಹಾಕಲು ಅಡ್ಡಿಮಾಡುವಿರಿ ರಾಯರೆ?

ಕೊನೆಯದಾಗಿ ತಾವು ಬೇರೆಯವರಿಗಿಂತ ಭಿನ್ನರೆಂದು ತೋರುವ ಯತ್ನದಲ್ಲಿ ತಾವು ಪರರ ಖುಷಿಯನ್ನು ಕಿತ್ತುಕೊಳ್ಳಲು ಹೋಗುವಿರಲ್ಲಾ! ಇದಕ್ಕೆ ಹಿಂದು ಸಂಸ್ಕೃತಿಯಲ್ಲಿ ಮನ್ನಣೆ ಕೊಡಲಾಗಿದೆಯೇ? ಒಟ್ಟಾರೆ ಈ ಸಂಸ್ಕೃತಿ ಅನ್ನೋದು "ಮಂಗನ ಕೈಯಲ್ಲಿ ಮಾಣಿಕ್ಯ"ವೆಂಬ ಮಾತನ್ನು ನನಗೆ ನೆನಪಿಸಿದೆ!

               ********************************

ಹಿಂದು, ಮುಸ್ಲಿಮ್, ಕ್ರೈಸ್ತ- ಇವುಗಳನ್ನು ಧರ್ಮಗಳೆಂದು ಎಂದು ಗುರುತಿಸುತ್ತಾರೆ... ಮತ್ತು ಅವು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿವೆ .( ಇಲ್ಲಿ ಸಂಸ್ಕೃತಿಯನ್ನು ಸಹ ತಿರುಚಲಾಗಿದೆ. ಅದನ್ನು ಆಚರಣೆ ಅಥವಾ ಸಂಪ್ರದಾಯ ಅಂತ ಗುರುತಿಸುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ.) ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಹೇಳುವ ಹಾಗೆ ಹಿಂದೂ ಸಂಸ್ಕೃತಿ... ಅದಕ್ಕಾಗಿ ನಾನು ಅಲ್ಲಿ ಧರ್ಮ ಶಬ್ದವನ್ನು ಉಪಯೋಗಿಸಿರಲಿಲ್ಲ. ಅಲ್ಲದೆ ನನ್ನ ಮಟ್ಟಿಗೆ ಧರ್ಮವೆಂದರೆ ಇರುವುದೊಂದೇ; ಅದುವೇ ಮಾನವ ಧರ್ಮ. ಜಾತಿ- ಮನುಷ್ಯ ಜಾತಿ.. ಅದರಲ್ಲೂ ಎರಡೆ- ಗಂಡು, ಹೆಣ್ಣು. ಮತ್ತು ಪ್ರಾಣಿ ಸಂಕುಲವೊಂದು ಜಾತಿ.  

   ಸಂಸ್ಕೃತಿಯೆಂದರೆ ನಮ್ಮ ನಡತೆ- ನಾವು ಹೇಗೆ ಸಮಾಜದಲ್ಲಿ ಬೆರೆತು, ಎಲ್ಲರನ್ನೂ ಸಮಾನ ಮನಸ್ಸಿನಿಂದ ಗೌರವಿಸಬೇಕಾಗಿರುವುದು. ಹಿರಿಯರ ಮೇಲೆ ಭಕ್ತಿ, ಮಕ್ಕಳ ಮೇಲೆ, ಸಮವಯಸ್ಕರ ಮೇಲೆ ಪ್ರೀತಿ, ಗಂಡು ಹೆಣ್ಣು ಬೇಧ ಭಾವ ತೋರದೆ ಸಮಗೌರವ ಕೊಡುವುದು, ಜಾತಿ, ಅಂತಸ್ತುಗಳನ್ನು ಎಣಿಸದೆ ಬಂದ ಅತಿಥಿಗಳನ್ನು ಒಂದೇ ರೀತಿಯಲ್ಲಿ ಸತ್ಕರಿಸುವುದು, ಅಸಹಾಯಕರಿಗೆ ಸಹಾಯ ಹಸ್ತ ನೀಡುವುದು ಮೊದಲಾವುಗಳು- ಇವುಗಳನ್ನೇ ಉತ್ತಮ ಸಂಸ್ಕೃತಿಯೆಂದು ಗುರುತಿಸಬಹುದೆಂದು ನನ್ನ ಅಭಿಪ್ರಾಯ. 

     ಕೆಲವು ವರ್ಷಗಳ ಹಿಂದೆ ನನಗೂ ನನ್ನ ಮಗಳಿಗೂ ಈ ಹಣೆಗೆ ಬಿಂದಿ ಇಡುವ ವಿಷಯದಲ್ಲಿ ಚರ್ಚೆ ನಡೆದಿತ್ತು. ಆಗ ನಾನು ಸಹ ಇದನ್ನು ನಮ್ಮ ಸಂಸ್ಕೃತಿ ಪಾಲಿಸಬೇಕಾದದ್ದು ನಮ್ಮ ಧರ್ಮವೆಂದು ಅವಳ ಬಳಿ ವಾದ ಮಾಡಿದ್ದೆ. ಆದರೆ... ನಿಧಾನವಾಗಿ ನನಗೆ ಹೊಳೆದಿತ್ತು... ಅವೇ ನಾನು ಈ ಮೇಲೆ ಬರೆದ ಮಾತುಗಳು. ಹಣೆಯಲ್ಲಿರುವ ಚಕ್ರವನ್ನು ಉತ್ತೇಜಿಸಲು ಕುಂಕುಮವಿಡುವ ಅಭ್ಯಾಸವನ್ನು ನಮ್ಮ ಪೂರ್ವಜರು ಮಾಡಿರಬಹುದು. ಬಹುಶಃ ಸ್ತ್ರೀಯರು ಪುರುಷರೂ ನಿಯಮ ಬದ್ಧವಾಗಿ ಮಾಡಲ್ಪಟ್ಟ ಕುಂಕುಮವನ್ನು ಇಡುತ್ತಿದ್ದರು ಎಂದು ಕಾಣುತ್ತದೆ. ಕಾಲ ಕ್ರಮೇಣ ಸ್ತ್ರೀಯರು ಇದನ್ನು ಸೌಂದರ್ಯ ವರ್ಧಕವಾಗಿ ಇಡುತ್ತಿರಬಹುದು.. ಹೀಗೆ ಅದೊಂದು ನಿಯಮವೇ ಆಗಿಬಿಟ್ಟಿದೆ. ಆದರೆ ಇಂದಿನ ಹುಡುಗಿಯರಿಗೆ ಇದರ ಅಗತ್ಯ ಕಾಣುವುದಿಲ್ಲ...

           ****************************************



ಇದರ ಜತೆ ಈ ಹೊಸ ವರ್ಷಾಚರಣೆ ಬಗ್ಗೆಯೂ ಅಲ್ಲಲ್ಲಿ ಅಪಸ್ವರದ ಹೇಳಿಕೆ ಓದಿ ಬೇಸರವಾಯಿತು.. ತಮಗೆ ಬೇಡವಾದರೆ ಆಚರಿಸಬೇಡಿ.. ಪರರ  ಸಂತೋಷಕ್ಕೆ ಅಡ್ಡಗಾಲು ಹಾಕಬೇಡಿಯಪ್ಪಾ. ನಾನೆಂದೂ ಹೊಸವರ್ಷ ಅಂತ ಯಾವಾಗಲೂ ಸಂಭ್ರಮದಿಂದ ಆಚರಿಸಿದಿಲ್ಲ.. ನನ್ನ ಮಟ್ಟಿಗೆ ಯುಗಾದಿಯೇ ಹೊಸ ವರ್ಷ.. ಆದರೆ ಈ ವರ್ಷ ನನ್ನ ಎಫ್ ಬಿ ಮಿತ್ರರ ಸಂಭ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ... ಇಲ್ಲಿ ನನ್ನ ವಿದ್ಯಾರ್ಥಿಗಳ ಜತೆಯಲ್ಲೂ ಸಂಭ್ರಮದಿಂದ ೨೦೧೩ನ್ನು ಬರಮಾಡಿಕೊಂಡೆ!

                               *****************************

ದೆಹಲಿಯಲ್ಲಿ ನಡೆದ ಪೈಶಾಚಿಕ ಕೃತ್ಯವನ್ನು ಪ್ರತಿಭಟಿಸಿ ಎಫ್ ಬಿಯಲ್ಲಿ ಮಾನವೀಯತೆಯ ನೆಲೆಯಲ್ಲಿ ಅನೇಕ ಮಿತ್ರರು ಕಪ್ಪು ಬಿಂದುವನ್ನು ತಮ್ಮ ಚಿತ್ರವನ್ನಾಗಿ ಮಾಡಿಕೊಂಡಿದ್ದರು... ಕ್ರಮೇಣ ಅದನ್ನು ಬದಲಾಯಿಸಿದರು.. ಯಾವುದೇ ವಿಷಯವನ್ನು ನಾವು ವಿಪರೀತವಾಗಿ ಮನಸ್ಸಿಗೆ ಹಚ್ಚಿಕೊಂಡರೆ ಅದು ನಮ್ಮ ಮನಸ್ಸಿಗೆ ವಿಷವಾಗುವುದು ಎಂದೇ ನನ್ನ ನಂಬಿಕೆ. ಹೌದು ಪ್ರತಿಭಟಿಸುತ್ತಲೇ ಇರಬೇಕು. ಹಾಗಂತ ನಮ್ಮ ದೈನಂದಿನ ಜೀವನವನ್ನೂ ನಡೆಸಬೇಕು ತಾನೆ. ಇವತ್ತು ನನ್ನ ಮಿತ್ರರೊಬ್ಬರ ಸ್ಟೇಟಸ್ಸಿಗೆ ಅವರ ಮಿತ್ರರೊಬ್ಬರು ಈ ಬಗ್ಗೆ ವ್ಯಂಗವಾಗಿ ಬರೆದಿದ್ದರು. ಖಂಡಿತವಾಗಿ ಆ ದುರ್ಘಟನೆ ಅಷ್ಟು ಬೇಗ ನಮ್ಮ ಮನಸ್ಸಿನಿಂದ ಅಳಸಿ ಹೋಗುವುದಿಲ್ಲ.. ಹೋಗಲೂಬಾರದು; ಹಾಗಂತ ನಾವು ನಿತ್ಯವೂ ಅಳುತ್ತಲೇ, ಬೊಬ್ಬೆಹಾಕುತ್ತಲೇ ಇರಲಾಗದಷ್ಟೇ.. ನಮ್ಮದೇ ರೀತಿಯಲ್ಲಿ ನಮ್ಮಿಂದಾದಷ್ಟು ಸಹಾಯ ಹಸ್ತವನ್ನು ನೀಡುವೆವು. ಏನನ್ನುವಿರಾ ಸಹಮನಸ್ಕರೆ?

02 January, 2013

ನಾನು ಕಂಡ, ಕಾಣುವ ಮುಸ್ಸಂಜೆಗಳು!



ಬಣ್ಣದ ಓಕುಳಿ ಚೆಲ್ಲಿ 
ಮುಗುಳ್ನಗುತ್ತಲೇ ತೆರೆಮರೆಗೆ 
ಸರಿಯುತ್ತಿರುವ ರವಿಯ 
ಬೀಳ್ಕೊಟ್ಟ 
ಹೊಸ ವರುಷದ 
ಮೊದಲ ಮುಸ್ಸಂಜೆ!
-01-01-2013

  ************

ಶಿರದಿ ನವಿಲ ಗರಿಯ ಧರಿಸಿ
"ಗಿಲ್" "ಗಿಲ್" ಗೆಜ್ಜೆ ನಿನಾದದೊಂದಿಗೆ 
ಮುರಳಿಯ ಗಾನವನ್ನು ಮೇಳೈಸುತ್ತಾ
ಗೋಧೂಳಿಯ ನಡುವೆ ತನ್ನ ಗೆಳೆಯ 
ಗೋವಳರೊಡಗೂಡಿ ಬರುತ್ತಿರುವ 
ಗೋಪಾಲನಿಗಾಗಿ ಹೊಸ್ತಿಲ ಬಳಿ 
ಕಾದ ಯಶೋಧೆಯು ನಾನಾದಂತೆ 
ಕನಸ ತಂದ ಮುಸ್ಸಂಜೆಯಿದು!
-03-01-2013

******************



ನನ್ನೆಲ್ಲ ಮನದ ಮಾತುಗಳ ಆಲಿಸಲೆಂದೇ
ನೀಲಾಗಸದಲ್ಲಿ ಹರಡಿರುವ ಬೆಳ್ಳಿಚುಕ್ಕಿಗಳ 
ತೋರುವ ಮುಸ್ಸಂಜೆಗೆ ಸುಸ್ವಾಗತ!
- 04-01-2013

****************************


ಹೊಸ್ತಿಲ ಬಳಿ ನಿಂತು 
ನಲ್ಲನ ನೆನಪುಗಳಲ್ಲಿ
ಕಳೆದು ಹೋದವಳಿಗೆ
ಸೊಳ್ಳೆ ಕಚ್ಚಿದಾಗ
ದುರ್ವಾಸ ಮುನಿಗಳ
ನೆನಪು ತಂದ
ಈ ಮುಸ್ಸಂಜೆ!

ಶಕುಂತಲೆ ದುಶ್ಯಂತನ ನೆನಪಿನಲ್ಲಿ ಕಳೆದುಹೋದದುರಿಂದ ತಾನೆ ದುರ್ವಾಸರ ಶಾಪ ಪಡೆದಳು! ಇಲ್ಲಿ  ಈ ನಲ್ಲೆ ಶಾಪದ ರೂಪದಲ್ಲಿ ಮಲೇರಿಯಾ ಪಡೆಯುವಳೇನೋ..:-)
೦೮-೦೧-೨೦೧೩

01 January, 2013

ನನ್ನಾತ್ಮದ ಪಿಸುನುಡಿ!


"ತಾಳು...ಕಾಯು..."
ಒಲವಂದಿತು.
ಕಾಯುತ್ತಲೇ ಇದ್ದೇನೆ...
"ತಾಳುವಿಕೆಗಿಂತನ್ಯ ತಪವಿಲ್ಲ"
ಹುಂ, ನನಗಿದು ಅನುಭವಕ್ಕೆ ಸಿಕ್ಕಿತಯ್ಯ!

ಒಲವಿನ ಹಾಡು!



  ಒಲವೇ,
  ಹೀಗೆಯೇ ಹಾಡುತ್ತಿರು...ಕೊಂಚವೂ ವಿರಮಿಸದೇ...
  ಆಹಾ! ಸಗ್ಗದ ಗಂಧವ ಹೊತ್ತು ತರುತಿವೆ ನಿನ್ನೀ ಹಾಡು!
    - ನನ್ನೊಳಗಿನ ರುಮಿ
**********************

ಒಲವೇ, 
ನನ್ನ ಪ್ರತಿಯೊಂದು ಉಚ್ಛ್ವಾಸ ನಿಶ್ವಾಸದ ನಿರ್ಣಾಯಕನು ನೀನೇ....
ನಿನಗಾಗಿಯೇ ಮುಡಿಪು ನನ್ನೀ ಬದುಕು!
- ನನ್ನೊಳಗಿನ ರುಮಿ
*****************

ಒಲವೇ,
ಪಂಜರದಲ್ಲೀಗ ಗಿಣಿಯಿಲ್ಲ....
ಕಾಮನಬಿಲ್ಲಿನಿಂದ ರಂಗಾದ 
ಆಗಸದಲಿ ಹಾರುತಿದೆ....
ಸ್ವಚ್ಛಂದವಾಗಿ!
- ನನ್ನೊಳಗಿನ ರುಮಿ
************************


ಒಲವೇ,
ಹೌದಲ್ಲವೇ, ನಿನ್ನೀ ಲೋಕ ಸಗ್ಗಕ್ಕಿಂತಲೂ ಸುಂದರ
ಧರ್ಮ, ಜಾತಿ, ಮೇಲು, ಕೀಳು, ರೋಗ, ರುಜಿನ...
ಇವುಗಳ ಕಾಟವೇ ಇಲ್ಲ.

ಎಲ್ಲರೂ ಸೇವಿಸುವ ಗಾಳಿ, ಆಹಾರ ಒಂದೇ..
ಅದುವೇ ಒಲವು!

ಎಲ್ಲರಲ್ಲೂ ನಿನ್ನ ವಾಸ...
ಎಲ್ಲರಲ್ಲೂ ನಿನ್ನದೇ ಛಾಯೆ...
ಎಲ್ಲರಲ್ಲೂ ನಿನ್ನದೇ ಮಾಯೆ...
-ನನ್ನೊಳಗಿನ ರುಮಿ

***************************************


ಒಲವೇ,

 ನಿನಗಿದರ ಅರಿವಿದೆಯೊ ಇಲ್ಲವೋ ನಾನರಿಯೆ
 ನನಗದರರಿವಿದೆಯೆಂಬುವುದು ಮಾತ್ರ ನಿಜ
 ನಿನ್ನನ್ನು ಮೀರಿ ಶ್ರೇಷ್ಟವಿನ್ಯಾವುದೂ ಇಲ್ಲ
 ಈ ಬುವಿಯೊಳೂ, ಆ ಸಗ್ಗದೊಳೂ...
 ಇನ್ನೇನು ಹೇಳಲು ಉಳಿದಿಲ್ಲ ಬಾಕಿ
 ಎಂಬುದನು ಮಾತ್ರ ಹೇಳಬಲ್ಲೆ!
 -ನನ್ನೊಳಗಿನ ರುಮಿ






ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...