ವಿಠೋಬ,
ಮಾತು ಮಾತಿಗೂ ಪ್ರಿಯ ಸಖ ನೀನು ಅಂತ ಹೇಳ್ತೇನೆ ಏನೋ ಹೌದು! ಅದನ್ನೇ ಮುಂದುವರೆಸಿ ಗುರೂವೂ, ಮಾಯಿ ಬಾಪ್.. ಬಂಧು.. ಸರ್ವಸ್ವವೂ ನೀನೇ ಅಂತಲೂ ಹೇಳ್ತೇನಲ್ಲ.
ಆಫ್ಟರ್ ಆಲ್, ರಕ್ತ ಮಾಂಸದಿಂದ ಕೂಡಿದ ಕ್ಷುಲ್ಲಕ ಕಾಯವಿದು. ಹಲವಾರು ಬಾರಿ ಧರ್ಮ-ಅಧರ್ಮ, ಸತ್ಯ-ಅಸತ್ಯ, ನ್ಯಾಯ-ಅನ್ಯಾಯಗಳ ಅರಿವಿಲ್ಲದೇ ನಾನು ಮಾಡಿದ್ದೇ ಸರಿ ಎಂಬ ಭ್ರಮೆಯಿಂದ ತಪ್ಪುಗಳನ್ನು ಎಸಗುತ್ತೇನೆ. ಅಮ್ಮ ಯಾವಾಗಲೂ ಹೇಳ್ತಾರೆ, ಮನೆಯವರು ಮಗುವಿಗೆ ಕೊಡುವ ಸಂಸ್ಕಾರ ಬಲು ಮುಖ್ಯ! ಅದಕ್ಕೆ ನನ್ನದು ಯಾವಾಗಲೂ ಸಿದ್ಧ ಉತ್ತರ- ಹಿಂದಿನ ಎಲ್ಲ ಜನ್ಮಗಳ ಸಂಸ್ಕಾರದ ಫಲ ಈ ಜನ್ಮದ ನಮ್ಮ ನಡವಳಿಕೆ! ನಲ್ವತ್ತು ವರ್ಷ ದಾಟಿದ ಮೇಲೆ ಆ ಮನುಷ್ಯನ ಯೋಗ್ಯತೆ ಏನು ಅಂತ ಗೊತ್ತಾಗುತ್ತೆ.. ನಿಧಾನವಾಗಿ ಮುಖವಾಡಗಳ ಹಿಂದಿನ ಮುಖದ ಅನಾವರಣವಾಗುತ್ತದೆ. ಹೋಗ್ಲಿ ಬಿಡು, ಆದರೆ ಯಾವುದನ್ನೂ ಇದಂ ಮಿತ್ತಂ ಅಂತ ಹೇಳಲು ಸಾಧ್ಯವೇ ಇಲ್ಲ.. ಯಾರ ಮೇಲೆ ಯಾವಾಗ ಯಾಕೆ ನೀ ಕರುಣೆ ತೋರಿಸ್ತಿಯೋ ಅಂತ ಹೇಳೋದು ಬಿಲ್ಕುಲ್ ಸಾಧ್ಯವಿಲ್ಲವಲ್ಲ!
||ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ಚ ಸಖಾ ತ್ವಮೇವ|
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮದೇವ ದೇವಮ್||
ಮೊದ ಮೊದಲು ಅಮ್ಮ ಹೇಳಿಕೊಟ್ರು.. ಸುಮ್ನೆ ಅದನ್ನ ಹೇಳ್ತಿದ್ವಿ. ಆದರೆ ಬಹುಶಃ ರಾಮಕೃಷ್ಣ ಪರಮಹಂಸರ ಗೋಪಾಳನ ಕತೆ ಕೇಳಿದಾಗಿನಿಂದ ನನ್ನ ಭಾವವೂ ಬದಲಾಯ್ತು.. ಅಂದಿನಿಂದ ಒಂಟಿತನ ಕಾಡಿದಾಗಲೆಲ್ಲ ನೀನು ಇಲ್ವೇ, ಹನುಮಂತ ಸದಾ ಜತೆ ಕೊಟ್ರಿ. ನರಹರಿ, ನಿನ್ನಲ್ಲಿಗೆ ಬರುವುದೆಂದರೆ ತವ್ರು ಮನೆಗೆ ಬರುವ ಹಾಗೆ ಅಲ್ವೋ! ಆ ದಿನ ವೃಂದಕ್ಕ ಹೇಳಿದಾಗಿನಿಂದ ಕನಸು ತನ್ತಾನೆ ಮೂಡಿತ್ತು. ಮತ್ತೆ ಇದ್ದಕ್ಕಿದ್ದಂತೆ ಕನಸುಗಳ ರೆಕ್ಕೆ ಕಳಚಿ ಪುಕ್ಕಗಳೆಲ್ಲ ಉದುರಹತ್ತಿದವು. ನಿರಾಸೆ ಸಹಜ ತಾನೆ! ಇದನ್ನೆಲ್ಲ ನಿನ್ನ ಹತ್ರ ತಾನೇ ಹೇಳ್ಕೊಳ್ಳಬಹುದು.. ಮತ್ತೆ ಭಕುತರೆಲ್ಲ ಭಾವಕೆ ಮುಕುತಿ ನೀಡುವವನು ನೀನಲ್ಲದೆ ಬೇರೆ ಯಾರು.
ಬಾಪ್ಪಾ, ಆಯಿ, ನಿಮಗಿಬ್ಬರಿಗೂ ಇಲ್ಲಿಂದಲೇ ಸಾಷ್ಟಾಂಗ ನಮಸ್ಕಾರಗಳು.
ಇಬ್ಬರೂ ಈ ಏಕನಾಥನ ಕನ್ನಡೀಕರಿಸಿದ ಅಭಂಗವನ್ನು ಕೇಳಿರಲ್ಲ!
ಭೀಮಾ ತೀರದಲಿದೆ ಪಂಡರಿ, ಅದೇ ನನ್ನ ತೌರು
ಆಯಿ ಮತ್ತು ಬಾಪ, ನನ್ನ ವಿಠ್ಠಲ ರಕುಮಾಯಿ||
ಪುಂಡಲೀಕನು ನನ್ನ ಬಂಧು
ಜಗದವಿಖ್ಯಾತಿ ಅವನದು||
ನನ್ನ ಸಹೋದರಿ ಚಂದ್ರಭಾಗಳು
ಪಾವನ ಮಾಡುವಳು ಎಮ್ಮನು||
ಜನಾರ್ದನಿಗೆ ಶರಣು ಏಕನಾಥನು
ಮರೆಯಲಾರನು ತನ್ನ ತೌರನೆಂದಿಗೂ||
No comments:
Post a Comment