ಗಾನಲೋಲ ಮಾಧವ, ಗೋವಿಂದ, ನರಹರಿ,
ಬಹುಶಃ ಈ ಹೊತ್ತಿಗಾಗಲೇ ಆ ಸಂತಿಣಿಯರೆಲ್ಲ ನಿನ್ನ ದರ್ಶನ ಮಾಡಿರಬಹುದು! ವೃಂದಕ್ಕ ಇಲ್ಲಿ ತಲುಪಿದ ನಂತರ ಅವಳನ್ನೊಮ್ಮೆ ಸ್ಪರ್ಶಿಸಿ ನಿನ್ನ ಭೇಟಿಯ ಅವರ ಅನುಭೂತಿಯನ್ನು ನನ್ನದಾಗಿರಿಸಿಕೊಳ್ಳುವೆ!
ಇದು ನಾಲ್ಕನೆಯ ಪತ್ರ! ಇವತ್ತು ಮೊದಲಾಗಿ ನನ್ನ ಹೆತ್ತವರಿಗೆ ನನಗೆ ಈ ಮರಾಠಿ ಅಭಂಗಳನ್ನು ಕೇಳಿಸಿದಕ್ಕೆ ಬಹಳಷ್ಟು ಕೃತಜ್ಞತೆ ಅರ್ಪಿಸಬೇಕೆನಿಸಿತು.. ಆ ಗ್ರಾಮಫೋನಿನ ಸೂಜಿ ಆಗಾಗ ವಕ್ರವಾಗ್ತಿತ್ತು.. ನನ್ನ ಒತ್ತಾಯಕ್ಕೆ ಅಪ್ಪ ಪ್ರತೀಬಾರಿ ಸರಿಮಾಡಿಸಿ ತರ್ತಿದ್ರು! ಅಮ್ಮ ನಿತ್ಯವೂ ಸುಶ್ರಾವ್ಯವಾಗಿ ಹಾಡುವ ಭಜನೆ ಹಾಡುಗಳು ಕಿವಿಗೆ ಬಿದ್ದು ಬಿದ್ದು.. ಎಲ್ಲವೂ ತನ್ತಾನೆ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಒಂದಿಷ್ಟು ವರ್ಷ ಮನೆ ಮಕ್ಕಳು ಅಂತ ನನ್ನ ಧ್ಯಾನ ಸಂಪೂರ್ಣವಾಗಿ ಸಂಸಾರದಲ್ಲಿ ಮುಳುಗಿತ್ತು. ನಿಧಾನವಾಗಿ ಕುಂಚದ ಮೂಲಕ, ಬರವಣಿಗೆಯ ಮೂಲಕ.. ಈಗೀಗ ಕೆಮರಾದ ಮೂಲಕವೂ ನಿನ್ನ ನೆನಪು, ಧ್ಯಾನ ಕ್ಷಣ ಮಾತ್ರವೂ ವ್ಯರ್ಥಮಾಡದೇ ಆಗುತ್ತಿದೆ. ಇಂತಹ ಪುಣ್ಯ ಎಷ್ಟು ಜನರಿಗೆ ದೊರಕುತ್ತೆ ಹೇಳು ನನ್ನೊಡೆಯ!
ಇರುಳಿನಲ್ಲಿ ಕಪ್ಪೆ, ಜೀರುಂಡೆಗಳ ಗಾಯನದಲ್ಲೂ ನಿನ್ನ ಬಿಂಬವೇ ತೋರುತ್ತಿದೆ... ಮುಂಜಾವಿನ ಕೋಗಿಲೆ, ಮಡಿವಾಳ(ಬುಲ್ ಬುಲ್), ಪಿಕಳಾರ(ರಾಬಿನ), ಕರಿ, ಬಿಳಿ ಗಿಡುಗ, ಹದ್ದು, ಬೆಚ್ಚುವಂತಹ ಕೂಗಿನ ರೂಫಸ್ ಟ್ರೀಪೈ.. ಹಾ! ಅಂಗೈಯಲ್ಲಿ ಹಿಡಿಯುವಷ್ಟು ಚಿಕ್ಕದಾದ ದರ್ಜಿಹಕ್ಕಿಯ ಇಂಪು ಗಾನ.. ಎಲ್ಲವೂ ನಿನ್ನಂತಹ ಸುಂದರ ಸೃಷ್ಟಿಕರ್ತನ ನೆನಪನ್ನು ಮರೆಯಲು ಬಿಡುವುದೇ ಇಲ್ಲ ನೋಡು!
ನಾನೇನು ಇವತ್ತು ನಿನ್ನೆಯಿಂದ ಈ ಪ್ರಕೃತಿ ಆರಾಧನೆ ಮಾಡಲು ತೊಡಗಿದ್ದಲ್ಲವೆಂಬುದು ನಿನಗೂ ಗೊತ್ತು. ಆದರೆ, ನಿಜ ಹೇಳಲಾ, ಈ ಎಫ್ ಬಿಯ ನಂಟು ಮತ್ತು ನನಗೆ ಕೆಮರಾ ಕೈಗೆತ್ತಿಕೊಳ್ಳಲು ಪ್ರೇರೇಪಿಸಿದ ವೃಂದಾ ಕಾಮತ್ ಹಾಗೂ ನನ್ನ ತೋಟದ ಹೂಗಿಡಗಳಿಗೆ ಶೋಭೆ ಕೊಡಲೆಂದೇ ಬರುವ ರಂಗುರಂಗಿನ ಪಾತಗಿತ್ತಿಯರನ್ನು ಅವರ ಹೆಸರಿಡಿದು ಕರೆಯಲು ಕಲಿಸಿದ ಸಮ್ಮಿಲ ಶೆಟ್ಟಿಗೆ ಶ್ರೇಯಸ್ಸು ಕೊಡದಿದ್ದರೆ ತಪ್ಪಾಗುತ್ತೆ ಅಲ್ವಾ!
ತನ್ನ ಜೂಮ್ ಲೆನ್ಸ್ ಅಲ್ಲದೆ ಫೋಟೋಗ್ರಾಫಿಗೆ ಸಂಬಂಧಿಸಿದ ಪುಸ್ತಕಗಳನ್ನು ಉದಾರವಾಗಿ ನಂಗೆ ಕೊಡ್ತಿರುವ ಮಿತ್ರನಿಗೂ ದೊಡ್ಡ ಪಾಲಿದೆ. ಜತೆಗೆ ನನ್ನನ್ನು ಆ ಕೃಷ್ಣಮೋಹನರ ಪೇಜಿಗೆ ಪರಿಚಯಿಸಿದ ಗೋಪಾಲಕೃಷ್ಣ ಬಾಳಿಗರಿಗೂ! ನಂಗೆ ಅನಿಸುತ್ತೆ ನನ್ನ ಕೃತಜ್ಞತೆ ಕೊಡುವ ಪಟ್ಟಿ ಮುಗಿಲಿಕ್ಕಿಲ್ಲ. ನಿಂಗೂ ಬೋರ್ ಮಾಡಿಸೊಲ್ಲ, ಬಿಡು!
ಇಲ್ಲಿಗೆ ಇವತ್ತಿನ ಪತ್ರ ಮುಗಿಸಲಾ ಕೇಶವಾ, ಈ ಏಕನಾಥನ ಕನ್ನಡಿಕರಿಸಿದ ಅಭಂಗದ ಜತೆ!
https://www.youtube.com/watch?v=OYPCrkl1lC8
ಪರೋಪಕಾರವು ಪುಣ್ಯ, ಪರಪೀಡನೆಯೇ ಪಾಪ
ಇಲ್ಲ ನೋಡು ಇನ್ಯಾವ ಮಾನದಂಡ||
ಸತ್ಯವೇ ಧರ್ಮ, ಅಸತ್ಯವೇ ಕರ್ಮ(ಸಂಚಿತ)
ಇದಕ್ಕಿಲ್ಲ ನೋಡು ಬೇರ್ಯಾವ ಮರ್ಮ||
ಜಿಹ್ವೆಯಲಿ ನಾಮಸ್ಮರಣೆಯೊಂದೇ ಗತಿ
ವಿಮುಖನಿಗೋ ಉಳಿಯುವುದೊಂದೇ ಅಧೋಗತಿ||
ಸಂತರ ಸಂಗವು ಸ್ವರ್ಗವಾಸ
ಸಂತರತ್ತ ಅಲಕ್ಷವೂ ನರಕವಾಸ||
ಹಿತ ಅಹಿತವೆಲ್ಲವನ್ನೂ ಹೇಳಿದೆ, ತುಕರಾಮನು ನಾನು
ಅಂತರ್ಯಕ್ಕೆ ಉಚಿತವೆನಿಸಿದನು ಮಾಡಪ್ಪಾ ನೀನು||
No comments:
Post a Comment