ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 October, 2014

ಸಡೇಸಾತ್ ಶನಿ!

ಸಡಿ ಸಾತ್ ಶನಿ!
______________

“ಇದು ಟೆನಿಸ್ ಎಲ್ಬೊ!!!”

ಮುಂಗೈ, ಅಂಗೈ, ಮೊಣಕೈ, ಗಂಟು, ಗಿಂಟು ತಿರುವಿ, ಅಲ್ಲಿಲ್ಲಿ ಒತ್ತಿ ಕೊನೆಗೂ ಅನೌನ್ಸ್‌ಮೆಂಟ್ ಕೊಟ್ಳು ಫಿಸಿಯೋಥೆರಪಿಯ ನಾಲ್ಕನೆಯ ವರ್ಷದ ವಿದ್ಯಾರ್ಥಿ, ನನ್ ಮಗಳು!

’ಟೆನಿಸ್ ‌ರಾಕೆಟ್ ಮುಟ್ಟಿದ್ದು ಒಂದೇ ಒಂದು ಸಾರಿ. ಪಿಯುಸಿಯಲ್ಲಿರುವಾಗ ಅದ್ಯಾವುದೋ ಆವೇಶದಲ್ಲಿ ಕಾಲೇಜ್‌ನಲ್ಲಿ ನಡೆಯುವ ಸ್ಪರ್ಧೆಗೆ ಹೆಸರು ಕೊಟ್ಟು, ಒಂದೂ ಸ್ಕೋರ್ ಮಾಡದೆ, ಅವಳಿಗೂ ಮಾಡಲು ಬಿಡದೆ ನನ್ನ ಪಾರ್ಟ್‌ನರ್ ಕೈಯಲ್ಲಿ ನೂರಾರು ಜನ್ಮಕಾಗುವಷ್ಟು ಜಾಲಾಡಿಸಿಕೊಂಡಿದ್ದು ಮರೆಯುವ ಹಾಗಿಲ್ಲ. ಆ ನಂತರ ಬ್ಯಾಡ್‌ಮಿಂಟನ್ ಬ್ಯಾಟ್ ಕೈಗೆತ್ತಿದ್ದೇನೆ ಹೊರತು ಟೆನಿಸ್ ಬ್ಯಾಟ್ ಮಾತ್ರ ಯಾಕೆ ಬಾಲಿನ ಸುದ್ದಿಗೂ ಹೋಗಿರಲಿಲ್ಲ.

ನನ್ನ ಮುಖದಲ್ಲಿ ಕ್ಷಣಾರ್ಧದಲ್ಲಿ ಮೂಡಿದ ಗೊಂದಲ ನೋಡಿ ಮಗಳು,
“ಅಮ್ಮ, ಸಚಿನ್ ತೆಂಡುಲ್ಕರ್ ನೋಡು ಇಂಗ್ಲೆಂಡಿಗೆ ಹೋಗಿ ತನ್ನ ಎಲ್ಬೋ ಅಪರೇಷನ್ ಮಾಡಿಕೊಂಡು ಬಂದಿದ್ದ.. ಅದೇ ಇದು!”

"ಅರೇ, ನಾ ಯಾವತ್ತೂ ಕ್ರಿಕೆಟ್ ಬ್ಯಾಟ್ ಮುಟ್ಟಿರಲಿಲ್ಲ.. ಗುಡಿಸುವಾಗ ಪ್ರಥುವಿನ ಬ್ಯಾಟ್ ಅತ್ತಿತ್ತ ಇಡುವುದರ ಹೊರತು! ನಾ ಆಡಿದ್ದು ಕ್ರಿಕೆಟ್ ತೆಂಗಿನ ಮರದ ಸೋಗೆಯ ಜೊತೆ.. "

ನನ್ನ ಮುಖದಲ್ಲಿ ಬಾಲ್ಯದ ನೆನಪಿನ ತಂಪು ನೋಡಿ ಪ್ರಥ್ವಿ ಹುಬ್ಬು ಹಾರಿಸಿದಳು.

’ಇದು ತೆಂಗಿನ ಸೋಗೆಯಲ್ಲಿ ಕ್ರಿಕೆಟ್ ಆಡಿದರಿಂದ ಆದದಲ್ಲ. ನಿಮಗೆಲ್ಲ ಬಿಸಿ ನೀರು ಮಾಡಲು ಮಡಲು, ಕೊಂಬೆ ಗಿಂಬೆ ಎಲ್ಲ ಕೊಚ್ಚಿ ಹಾಕಿದ್ರದಿಂದ.. ಹ್ಮ್, ಇದೆಲ್ಲ ಹೇಳಿ ಪ್ರಯೋಜನವಿಲ್ಲ!’

ಮನದಲ್ಲಿ ನಡೆಯುವ ತಿಕಲಾಟಗಳ ಮಧ್ಯೆಯೂ ಮಗಳನ್ನು ಕೆಣಕಿದೆ,

“ಅಲ್ವೇ, ಅಪರೇಷನ್ ಇಲ್ಲೇ ಕೆ ಎಮ್ ಸಿಯಲ್ಲಿ ಮಾಡಿಸ್ಬಹುದು..  ಮತ್ತೆ ಮುಂದಿನ ಫಿಸಿಯೋ ಟ್ರೀಟ್‌ಮೆಂಟ್ ಹೇಗೂ ನಿನ್ ಕೈಯಲ್ಲೇ ಆಗ್ತದೆ!”

“ಅಯ್ಯೋ ಅಮ್ಮಾ!!!”

ಪ್ರಥ್ವಿಯ ಗಾಬರಿ ನೋಡಿ,

’ಅಯ್ಯೋ ಹುಡುಗಿ ಹೆದರಿಬಿಟ್ಳು! ಆಪರೇಶನ್ ಅಂದ್ರೆ ಪಾಕೆಟ್ ಮನಿ ಕೋಟಾದಲ್ಲಿ ಕಡಿತ.. ಸಿನೆಮಾ ಹೊಟೆಲ್, ಬೀಚ್.. ಎಲ್ಲಕ್ಕೂ ಸಂಚಕಾರ.’

ಡಯಗ್ನೋಸ್ ಆದ ನಂತರ ನೋವು ಇದ್ದಕ್ಕಿದ್ದಂತೆ ಹೆಚ್ಚಾಯ್ತು! ಮುಖದ ನರವನ್ನೆಲ್ಲ ತಿರುಚಿ ನೋವಿನ ತೀವ್ರತೆ ತೋರಿಸುತ್ತ,

“ಅಲ್ವೇ, ಎಲ್ಲಕ್ಕಿಂತ ಗುಡಿಸೋದು, ಬಟ್ಟೆ ಹಿಂಡೋದು, ತೆಂಗಿನಕಾಯಿ ತುರಿಯೋದು ಕಷ್ಟವಾಗುತ್ತೆ... “

ನನ್ನ ಮಾಡಲಿಕ್ಕಾಗದ ಕೆಲಸದ ಪಟ್ಟಿ ಇನ್ನೂ ಮುಗಿದಿರಲಿಲ್ಲ..

“ಅಮ್ಮಾ ನಾಳೆನೇ ಹಾಸ್ಪಿಟಲ್‌ಗೆ ಬಾ. ನನ್ನ ಸರ್ ಹತ್ರ ತೋರಿಸ್ತೇನೆ. ಕೆಲವು ಸಿಂಪಲ್ ಎಕ್ಸಸೈಸ್‌ಗಳಿವೆ. ಮತ್ತು ವೊಲಿನಿ ಹಚ್ತೇನೆ. ಬೇಗ ಕ್ಯೂರ್ ಆಗುತ್ತೆ. ಆಪರೇಷನ್ ಎಲ್ಲ ಬೇಕಾಗಿಲ್ಲ. ನೀನೇನು ಕ್ರಿಕೆಟ್ ಪ್ಲೇಯರ್ ಅಲ್ಲ!

ಒಂದ್ ನಾಲ್ಕು ದಿನ ತೆಂಗಿನ ಕಾಯಿಯ ಅಡುಗೆ ತಿಂಡಿ ಮಾಡ್ಬೇಡ, ಬಟ್ಟೆ ವಾಶಿಂಗ್ ಮೆಷನ್‌ನಲ್ಲಿ ಹಾಕು.“

“ಮತ್ತೆ ಗುಡಿಸೋದು??? ಅಲ್ದೆ ನಂಗೆ ಒಂದು ಹದಿನೈದು ನಿಮಿಷದಲ್ಲಿ ಒಗೆದು ಹಾಕುವ ಕೆಲಸ ಒಂದು ಗಂಟೆ ತಿರುಗುವ ಆ ಮೆಷನ್‌ನಲ್ಲಿ ಹಾಕಲು ಮನಸ್ಸಿಲ್ಲ.. ಅಲ್ದೇ ಒಂದುವರೆ ಬಕೆಟ್‌ ನೀರಿನಲ್ಲಿ ಮುಗಿಯುವ ಕೆಲಸಕ್ಕೆ ನಾಲ್ಕಾರು ಬಕೆಟ್ ನೀರು ವೇಸ್ಟ್!”

ನನ್ನ ಪಿರಿಪಿರಿ.. ಅಲ್ದೆ, ಒಂದು ಆಸೆ.. ಎಲ್ಲದರೂ ಅವಳ ಬಾಯಿಯಲ್ಲಿ “ಅಮ್ಮ, ನಾನು ಗುಡಿಸ್ತೇನೆ, ವಾಶ್ ಮಾಡ್ತೇನೆ, ನೀನು ಇಷ್ಟು ದಿನ ಮಾಡಿಲ್ವ. ಒಂದ್ಹತ್ತು ದಿನ ರೆಸ್ಟ್ ತಗೋ” ಅಂತ ಹೇಳ್ತಾಳ ಅಂತ.

“ನಿನ್ ಗಾಂಧಿಗಿರಿಯನೆಲ್ಲ ಒಂದು ಸ್ವಲ್ಪ ದಿನ ಕಪಾಟಿನಲ್ಲಿ ಲಾಕ್ ಮಾಡಿ ಇಡು. ಕ್ಯೂರ್ ಆಗ್ಲಿ, ಮತ್ತೆ ತೆಗೆ!”
ನೇರ ಉತ್ತರ!

“ಬಟ್ಟೆ ತುಂಬ ಹಿಂಡಬೇಕಂತಿಲ್ಲ.. ಹೇಗೂ ಒಳ್ಳೆ ಬಿಸಿಲಿದೆ. ಆದ್ರೆ ಬ್ರಶ್ ಮಾತ್ರ ಸರಿ ಹಾಕು. ತೆಂಗು ಇಲ್ಲದ ಊಟ ತಿಂಡಿಗೆ ಟೇಸ್ಟ್ ಇರೊಲ್ಲ.. “
ಕೋಣೆಯಲ್ಲಿ ಫೇಸ್‌ಬುಕ್ ಅಪ್‌ಡೇಟ್ ಮಾಡೋದರಲ್ಲಿ ಮಗ್ನರಾಗಿದ್ದ ಮಗಳ ಅಪ್ಪನ ದನಿ ಸಣ್ಣದಾಗಿ ಕೇಳಿಸಿತು.

ಇವರಿಬ್ರೂ ಹೀಗೆ, ಇನ್ನು ಮಗ ಅಂತೂ ಅಮ್ಮ ಸುಮ್ನೆ ಎಕ್ಸೈಟ್‌ಮೆಂಟ್ ಆಗ್ಬೇಡ. ಗೂಗಲ್ ಮಾಡು.. ಅಂತ ಹೇಳ್ತಾನೆ.

ಹೊಸ ಖಾಯಿಲೆ ಬಗ್ಗೆ ಇದ್ದ ಸಂಭ್ರಮ ಎಲ್ಲಾ ಇಂಗಿ ಹೋಯ್ತು.

ವಿನುತಳಿಗೆ ಫೋನ್ ಮಾಡುವ ಅಂದ್ಕೊಂಡೆ. ಟೈಮ್ ನೋಡಿದ್ರೆ ರಾತ್ರಿ ಹತ್ತು ಗಂಟೆ.

’ಬೇಡ.. ನಾಳೆ ಪಾರಿಜಾತ ತರಲು ಹೋಗುತ್ತೇನಲ್ಲ, ಆಗ್ಲೇ ಹೇಳ್ತೇನೆ’

ಮಲಗಲು ಹೋದವಳಿಗೆ, ಮಂಚದ ಮೇಲೆ ಅಭ್ಯಾಸಬಲದ ಮೇಲೆ ಕೈ ಊರಿದಾಗ ಸಿಕ್ಕಾಪಟ್ಟೆ ನೋವು ಕಾಣಿಸಿಕೊಂಡಿತು.

“ಹಾ! ರಾಮಾ!”

ಮಗಳು ಓಡಿ ಬಂದಳು.. ಕೈಯಲಿ ವೊಲಿನಿ!

ಮಸಾಜ್ ಹಾಯಾಗಿತ್ತು. ಸಣ್ಣ ಉರಿ ಹಿತವೆನಿಸಿತ್ತು.


’ಬರೇ ಮನೆ ಕೆಲಸದ ಸವಾಲಲ್ಲ.. ಇದು ನನ್ನ ಕಂಪ್ಯೂಟರ್ ಕುಟ್ಟುವ, ಪೈಂಟಿಂಗ್ ಮತ್ತು ಕೆಮರಾ ಕ್ಲಿಕ್ಕಿಸುವ ಹುಚ್ಚಿಗೆ ಅಡ್ಡವಾದಿತೇ! ಆಲೋಚನೆ ಬಂದೇ ಕಣ್ಣು ತುಂಬಿತು.

ಮನೆಕೆಲಸ ಅದು ಹೆಣ್ಣಿನ ಗೃಹಿಣಿಯ ಕರ್ತವ್ಯ. ಕೈ ಮುರಿದ್ರೂ ಅಡ್ಜಸ್ಟ್ ಮಾಡ್ಕೊಂಡು ನಾನೇ ಮಾಡ್ಬೇಕು. ಆದ್ರೆ ಈ ನನ್ನ ಹವ್ಯಾಸಗಳಿಂದಲೇ ಕೈ ನೋವು ಅಂತೇನಾದ್ರು ಸುಳಿವು ಗೊತ್ತಾದ್ರೆ.. ಮತ್ತೆ ಗೋವಿಂದ!

’ಅಪ್ಪಾ, ರಾಮಚಂದ್ರ ದಯವಿಟ್ಟು ಕೈ ನೋವು ಬೇಗ ಗುಣವಾಗ್ಲಪ್ಪಾ! ದಿನ 108 ಬಾರಿ ಶ್ರೀರಾಮ ಜಪ ಮಾಡ್ತೇನೆ, ಬರಿತೇನೆ!’

ಹರಕೆ ಹೊತ್ಕೊಂಡೆ.

“ವಿನುತ, ನಂಗೆ ಟೆನಿಸ್ ಎಲ್ಬೋ!”

ಬೆಳಿಗ್ಗೆ ಬಾವಿಕಟ್ಟೆಯ ಮೇಲೆ ಬಿದ್ದಿದ್ದ ಪಾರಿಜಾತ ಹೆಕ್ಕುತ್ತ ಹೇಳಿದೆ, ಹಿಂದಿನ ದಿನದ ಉಮೇದು ಇರಲಿಲ್ಲ.. ನನ್ನ ಹವ್ಯಾಸಗಳಿಗೆ ಈ ನೋವು ಎಲ್ಲಿ ಸಂಚಕಾರ ತರುತ್ತದೋ ಎಂದು ನಿದ್ರೆಯೂ ಸರಿಯಾಗಿ ಮಾಡಿರಲಿಲ್ಲ.

“ನಿನ್ನ ರಾಶಿ ಯಾವುದು? ಹ್ಮ್, ಸಿಂಹ ಅಲ್ವಾ.. ನಕ್ಷತ್ರ ಆದ್ರಾ! “

ಕೈಬೆರಳುಗಳನ್ನು ಮಡಚಿ ಬಿಡಿಸಿ ಅದೇನೋ ಗುಣುಗುಣಿಸಿ,

“ತುಕ್ಕ ಸಾಡಿ ಸಾತ ಶನಿಗೋ!”
(ನಿಂಗೆ ಏಳುವರೆ ವರ್ಷ ಶನಿಕಾಟ)

“ಅಯ್ಯೋ ವಿನುತಾ! ಮಿಜ್ಜೆ ಕರ್ಮ!!!”
(ಮಿಜ್ಜೆ-ನನ್ನ)

ಕೆಲತಿಂಗಳ ಹಿಂದೆ ಸುಪ್ರಭನಿಗೆ ಶನಿಕಾಟ ಅಂತ ಸುಮ್ನೆ ತಲೆಬಿಸಿಮಾಡ್ಬೇಡ.. ಅದೆಲ್ಲಾ ಸುಪರ್ಸ್ಟಿಶನ್ ಅಂತ ದೊಡ್ಡದಾಗಿ ಕೊಚ್ಚಿದ್ದು ಯಾರು ಅಂತ ಅಂತರಾತ್ಮ ತಲೆಗೆ ಮೊಟುಕಿತು!

“ಶ್ಶ್..” ಅಂತಹ ಗದರಿಸಿದೆ!

ಅಸ್ಪರ್ಶಳಂತೆ ನೋಡಿದ್ಲು ವಿನುತ, ಶನಿಕಾಟದ ಲಕ್ಷಣ ತೋರಿಸ್ತಿದ್ದೇನೆ ಅಂತ ಅನಿಸಿರಲೂಬಹುದು.

’ಹೌದಲ್ವ! ನನ್ನ ವೈಟ್ ಹೆಚ್ಚಾಗ್ತಿದೆ. ನೋಡಿದವರೆಲ್ಲಾ ಎಷ್ಟು ಯಂಗ್ ಕಾಣ್ತಿಯಾ ಅಂತ ಹೇಳ್ತಿದ್ರು, ಈಗೀಗ ಯಾರೂ ಹೇಳ್ತಿಲ್ವೆ! ಈ ಶನಿ ಮೊದಲು ಕುತ್ತು ತಂದಿದ್ದೇ ನನ್ ಸ್ಲಿಮ್ ಅಂಡ್ ಟ್ರಿಮ್ ಫಿಗರ್ ಗೆ! ಏನಾದ್ರೂ ಮಾಡಿ ಶನಿಯನ್ನು ಮೆಚ್ಚಿಸಿ ಒಲಿಸಿ ವಾಪಾಸ್ ಕಳಿಸ್ಬೇಕು! ಅದಕ್ಕಾಗಿ ಒಂದಿಷ್ಟು ಖರ್ಚಾದರೂ ಪರವಾಗಿಲ್ಲ. ಹೋಮ, ಜಪ ತಪ ಮಾಡಿಸ್ತೇನೆ, ಅದು ಹೇಗೆ ಅವನು ಹೋಗುದಿಲ್ವೋ ಅಂತ ನೋಡ್ತೇನೆ!’

“ಗೊತ್ತಿಲ್ವೆ! ನಮ್ಮ ಭಟ್ರು ಅದರಲೆಲ್ಲಾ ಸ್ಪೆಶಲಿಸ್ಟ್.. ಅವರನ್ನು ಕೇಳಿ ಹೇಳ್ತೇನೆ. ಹೋದ ಸಲ ನನ್ನ ನಾದಿನಿಗಾಗಿ ಏನೋ ಹೋಮ ಮಾಡಿಸಿದ್ರು.. ಒಂದು ಐವತ್ತು ಸಾವಿರ ಕೈಬಿಟ್ಟಿತ್ತು.”

ಕೈ ನೋವು ಮರೆತು ಈಗ ಐವತ್ತು ಸಾವಿರ ಹೊಂದಿಸುವ ಹೊಸ ಚಿಂತೆ ಹೊತ್ಕೊಂಡು ಮನೆಗೆ ಬಂದಿದ್ದೇನೆ.


No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...