ರಾಧಾ ಮಾಧವ! (ಸುನಿತಾ ಮಂಜುನಾಥ್ ಅವರ ಸ್ಟೇಟಸ್ ನಿಂದ ಪ್ರೇರಿತ ಬರಹ)
“ ಮಾಧವ... “
ರಾಧೆಯ ಕರೆ!
ಅನ್ಯಮನಸ್ಕನಾಗಿ, “ಹುಂ, ಹೇಳು.” ಅಂದ ಕೃಷ್ಣ.
“ರಾಧೆ, ನೋಡು ಮೋಹಿನಿಗೆ ಹಸಿರು ಬಣ್ಣ ಎಷ್ಟು ಚೆನ್ನಾಗಿ ಒಪ್ಪುತ್ತದೆಯಲ್ಲವೆ?”
“ನೋಡೇ, ಅವಳ ವೇಣಿಯನ್ನು! ಅಬ್ಬಾ ಎಷ್ಟು ಉದ್ದವಾಗಿದೆ!”
’ಆಹಾ! ರತ್ನಳ ನಡಿಗೆಯನ್ನು ನೋಡು! ಏನು ಲಾಸ್ಯ! ಏನು ಲಾವಣ್ಯ!”
“ರಾಧಾ, ಅವಳ ಹೆಸರೇನೆ? ಅದೇ ಆ ನಾಗವೇಣಿಯ ಬಲಬದಿಯಲ್ಲಿ ನೀಲಿ ದಾವಣಿ ಉಟ್ಟವಳು! ನನಗವಳು ನಾಳೆ ಔತಣ ಕೂಟಕ್ಕೆ ಆಹ್ವಾನಿಸಿದ್ದಾಳೆ!”
ಕೈಯಲ್ಲಿದ್ದ ಕೊಳಲನ್ನು ನೆಲಕ್ಕೆ ಬಡಿದು ಅಲ್ಲಿಂದ ಹೊರಡನುವಾದಳು ರಾಧೆ!
“ಅರೇ, ನಿನಗೇಕೆ ಮುನಿಸೇ? ಅವರೆಲ್ಲ ನಿನ್ನ ಸಖಿಯರೇ ಕಣೇ!”
“ಹೌದೋ ಮಾಧವ! ಅವರೆಲ್ಲ ನನ್ನ ಪ್ರೀತಿಯ ಗೆಳತಿಯರು! ನೀನು ನನ್ನ ಜೀವದ ಗೆಳೆಯ! ನನ್ನ ನಲ್ಲ! ನನ್ನ ಸರ್ವಸ್ವ!”
“ಮತ್ತೇಕೆ ಈ ತಾಪ ರಾಧೆ?”
ಮುಗುಳ್ನಕ್ಕಳು ರಾಧೆ... “ಹೌದೋ ಮಾಧವ, ನೀನಾಡೋ ಆಟವನೆಲ್ಲ ನಾನಲ್ಲದೆ
ಮತ್ತಾರು ಬಲ್ಲರೋ! ನಮ್ಮಿಬ್ಬರ ಒಲವಿನ ಕತೆ ಯುಗ ಯುಗದಲ್ಲೂ ಮಾದರಿ ಕಣೋ. ಎಲ್ಲ ಅರಿತರೂ ನಿನ್ನೀ ಒಲವಿಗಾಗಿ ನಾನು ಸಾಮಾನ್ಯ ಹೆಣ್ಣಿನಂತೇ ಪರಿತಪಿಸುವೆನೋ! ಎಲ್ಲಿ ನಿನ್ನನ್ನು ನನ್ನಿಂದ ಯಾರಾದರೂ ದೂರ ಮಾಡುವರೋ ಎಂದು ಒದ್ದಾಡುವೆನೋ! ನನಗೂ ತಿಳಿದಿದೆ, ನಮ್ಮಿಬ್ಬರ ನೆಂಟು ಇಷ್ಟೇ ಎಂದು. ಭವಿಷ್ಯವನು ನೀನು ಬಲ್ಲೆಯಾದರೂ ನನಗದು ಬೇಡ. ನಾನು ವರ್ತಮಾನದಲಿ ಬದುಕಲಿಚ್ಛಿಸುತ್ತೇನೆ. ಈಗ ನೀನು ನನ್ನವನು; ನನಗಷ್ಟೇ ಸಾಕು! ಉಳಿದದು ಗೌಣ್ಯವೆನಗೆ!”
“ನಾ ತಂತಿ, ನೀನು ವೈಣಿಕ! ನಾ ಮುರಳಿ, ನೀ ಮುರಳೀಧರ! ನಾ ರಾಧೆ, ನೀ ರಾಧಾಮಾಧವ! ನಮ್ಮೀ ಒಲವು ಅಮರ, ಅದಕ್ಕಿಲ್ಲ ಯಾವುದೇ ಬಂಧ! ಹೌದೋ, ನಾವು ಸಪ್ತಪದಿಯನ್ನು ತುಳಿದಿಲ್ಲ, ಅಗ್ನಿ ಸಾಕ್ಷಿಯಾಗಿ ಕೈ ಹಿಡಿದಿಲ್ಲ, ನಮ್ಮ ಒಲವಿಗೆ ಯಾವ ಮಂತ್ರಗಳೂ ಸಾಕ್ಷಿಯಾಗಿಲ್ಲ, ಆದರೂ ನಮ್ಮಿಬ್ಬರ ಆತ್ಮ ಒಂದಾಗಿದೆ. ನಾನು ನೀನೆಂಬ ಭೇದ ದೂರವಾಗಿ ನಾವಾಗಿದ್ದೇವೆ. ನೀನೋ ಅವತಾರ ಪುರುಷ! ನಾನೋ ನಿನ್ನೊಲವನು ಪಡೆದ ಸಾಮಾನ್ಯ ಗೋಪಿಕೆ! ಪತ್ನಿಯಲ್ಲದಿದ್ದರೂ ಪತ್ನಿಯ ಎಲ್ಲಾ ಅಧಿಕಾರವ ನೀಡಿರುವೆ ನೀ ಎನಗೆ! ಹೆಚ್ಚೇನು ಬಯಸೆನು ಬರೇ ಬೇಡುವೆನು ನಿನ್ನೊಲವ ಸಾಕೆನಗೆ!”
ಬಿಗಿದಪ್ಪಿದನು ಮಾಧವ! ಮಾಧವನಲ್ಲಿ ನೆಲೆಯಾದಳು ರಾಧೆ! ಅಜರಾಮರವಾಯಿತು ಅವರ ಒಲವಿನ ಕತೆ!
No comments:
Post a Comment