“ಹುಂ, ನಿನಗೇನು ಬೇಕು ತೆಗೆದುಕೊ!”
ತನ್ನ ಐದು ವರ್ಷದ ಮಗಳನ್ನು 13 ವರ್ಷದ ತಮ್ಮನ ಡೆಸ್ಕಿನ ಮೇಲೆ ನಿಲ್ಲಿಸಿ ಅಪ್ಪ ಹೇಳುತ್ತಾನೆ. ಆ ಮುಗ್ಧ ಮಗು ಕಣ್ಣರಳಿಸಿ ಖುಷಿಯಿಂದ ತನ್ನ ಪೆನ್
ನ್ನು, ನೋಟು ಬುಕ್ ನ್ನು ಎತ್ತಿಕೊಳ್ಳುತ್ತಿರುವುದನ್ನು ನೋಡಿ ಪ್ರತಿಭಟಿಸುವ ಧೈರ್ಯವಿಲ್ಲದೆ ಆ
ಹುಡುಗ ಅಸಹಾಯಕತೆಯಿಂದ ಕಣ್ಣೀರು ತುಂಬಿದ ಕಣ್ಣುಗಳಿಂದ ಸುಮ್ಮನೆ ನಿಲ್ಲಬೇಕಷ್ಟೇ! ಅಣ್ಣನ ಮಗಳು ತನ್ನ ನೋಟು ಬುಕ್ಕಿನಲ್ಲಿ ಗೀಚುವುದನ್ನು
ನೋಡಿ ಮರುದಿನ ಬೆತ್ತ ತನ್ನ ಬೆನ್ನ ಮೇಲೆ ನಾಟ್ಯವಾಡುವುದನ್ನು ನೆನೆದುಕೊಂಡು ಅವನ ಗಲ್ಲ
ಒದ್ದೆಯಾಗುತ್ತದೆ!. ಮನೆಯ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಮಗನ ಮೇಲಿನ ಅತೀ ಅಭಿಮಾನದಿಂದ ತನ್ನ ಅಪ್ಪನಾಗಲಿ ಅಮ್ಮನಾಗಲಿ
ಅಥವಾ ಅಕ್ಕಂದಿರಾಗಲಿ ಈ ದೊಡ್ಡಣ್ಣನ ಯಾವುದೇ ಕುಕಾರ್ಯಕ್ಕೂ ಅಡ್ಡಬರುವುದಿಲ್ಲವೆಂಬ ಸತ್ಯ ಆ
ಹುಡುಗನಿಗೆ ಅದಾಗಲೇ ತಿಳಿದ ಕಾರಣ ಅವನು ಮೌನಿಯೇನೋ ಆಗಿದ್ದನು, ಆದರೆ ದೊಡ್ಡಣ್ಣ ಮತ್ತವನ ಪರಿವಾರವನ್ನೇ ದ್ವೇಷಿಸಲು
ಪ್ರಾರಂಭಿಸಿದ! ಮುಗ್ಧಳಾಗಿದ್ದ ಆ ಹುಡುಗಿಗೆ ಚಿಕ್ಕಪ್ಪನ ಕೋಪ ದ್ವೇಷದ ಕಾರಣ ತಿಳಿಯುವಾಗ
ಪರಿಸ್ಥಿತಿ ವಿಷಮಿಸಿತ್ತು... ತನಗೆ ತಿಳಿಯದೇ ಚಿಕ್ಕಪ್ಪನ ಅಸಹಾಯತೆಯನ್ನು ದುರುಪಯೋಗ ಮಾಡಿದ
ಬಗ್ಗೆ ಪಶ್ಚಾತಾಪಪಟ್ಟರೂ ಪ್ರಯೋಜನವಿರಲಿಲ್ಲ. ಅಹಂಕಾರದಿಂದ ಅಪ್ಪ ಮಾಡಿದ ಫಲವನ್ನು ಅವನ ಮಕ್ಕಳು
ಜೀವಮಾನ ಪೂರ್ತಿ ಅನುಭವಿಸುತ್ತಿದ್ದಾರೆ. ತಮ್ಮ ಬಂಧುಗಳೆಲ್ಲರ ದ್ವೇಷದ ಬೆಂಕಿಯ ಶಾಖದಲ್ಲಿ
ಬಾಡುತ್ತಿದ್ದಾರೆ!
ಮಾಡಿದುಣ್ಣೋ ಮಹಾರಾಯ
ಅನ್ನುವರು ತಿಳಿದವರು
ಮಾಡಿದವನೊಂದಿಗೆ ಉಣ್ಣಬೇಕು
ಅವನ ಮನೆಯವರು
ಎಂಬುದೂ ತಿಳಿಯಿತಿಂದು
ಏಸು ಜನುಮವೆತ್ತಬೇಕು
ಕರ್ಮದ ಫಲವೆಲ್ಲವು
ತೀರಿ ಹೋಗಲು
ಮರಳಿ ಬರದಿರಲು!
ಮರಳಿ ಬರದಿರಲು!
No comments:
Post a Comment