ಬರುವೆಯೆನೇ ಗೆಳತಿ.
ಒಯ್ಯುವೆನು
ಅಂತರಂಗದ ಅರಮನೆಗೊಮ್ಮೆ...
ಹೌದೇ, ಅಲ್ಲೊಂದು
ಗುಡಿಯನೂ ಬಚ್ಚಿಟ್ಟಿರುವೆ
ಒಲವ ಪೂಜಿಸಲೆಂದೇ..
ಯಾರಿಗೂ
ಹೇಳಬೇಡವೆ..
ಝಗಮಗ ಬೆಳಕಿನಲ್ಲಿ
ಅಡಗಿಸಿಟ್ಟಿದೆ ನೋವನೆಲ್ಲಾಮನೆ,
ಮಿಂಚುವ ಪರದೆಗಳಿಂದ
ಮುಚ್ಚಿದ ಕಿಟಿಕಿ
ಚಿತ್ತಾರಗಳಿಂದ
ಶೃಂಗರಿಸಿದ ಗೋಡೆ
ಮಿರುಗುವ
ಬಣ್ಣಗಳಿಂದ ಮುಚ್ಚಿದ ಭಾವ
ನೋಡುವ ಕಣ್ಣುಗಳಿಗೆ
ಹಬ್ಬ..
ನೋಡು ಕಂಡೆನಲ್ಲಾ
ನಿನ್ನಲ್ಲೂ ಆ ಭಾವ!
ಹೊರಗಿನ
ಕಣ್ಣುಗಳಿಗೆ ಕಾಣದೇ ಹೋಗುವುದು ಒಳಗಿನ ದುಮ್ಮಾನ..
ಇದೆಲ್ಲಾ ಬಯಸಿಯೇ
ಇರಲಿಲ್ಲವಲ್ಲ ನಾನು
ಮತ್ತೇನು ಎಂದು
ಕೇಳುವೆಯೆನೇ ನೀನು..
ಬಯಸಿತ್ತು ಮನವು
ಒಲವ..
ಸಹೃದಯ ಗೆಳೆಯ ಬರಲಿ
ಕೇಳಲಿ ಮನದ ಮಾತೊಮ್ಮೆ...
ಶೂನ್ಯ ಭಾವದ ಕಾಟ
ಮಿತಿಮೀರಿತ್ತು..
ಆದರೂ ಉಸಿರಾಟ
ನಿಲ್ಲಿಸುವ ತವಕವಿರಲಿಲ್ಲವಾಗ,
ಮನದಂಗಳದಲಿ ಅರಳಿದ ಕುಸುಮಗಳ ವಾತ್ಸಲ್ಯದ ಬಲವೇ ಉಸಿರಾಗಿತ್ತು.
ದಿನಗಳ ಲೆಕ್ಕ
ನಡೆದಿತ್ತು..
ದೂರದಲ್ಲಿದ್ದ ಆ ಕೈಲಾಸ ಗಿರಿಯ ಲೋಕದ ಕರೆ..
ಮತ್ತೆ ಮತ್ತೆ ಮೊಳಗುತಿತ್ತು ಕಿವಿಗಳಲ್ಲಿ..
ನಿತ್ಯ ಮೀಯುತ್ತಿದ್ದೆ.. ಗಡ ಗಡ ನಡುಗಿ ಸರೋವರದಲ್ಲಿ..
ಇತ್ತ ವಿಧಿಯ ನಡೆ ಬದಲಾಗಿ ಹೋಗಿತ್ತು..
ಎಳೆದು ತಂದ ಬಣ್ಣದ ಬದುಕಿಗೆ.
ಯಾವ ನಿರೀಕ್ಷೆಯಿಲ್ಲದೆ ಹೊಸ ಹಾದಿಯ ತುಳಿಯುತ್ತಾ ನಡೆದ ಹಾಗೆ,,,
ಹಳೆ ಕನಸುಗಳು
ಅದೇಕೋ ಚಿಗುರಿ ಮೊಳಕೆಯೊಡೆದವು..
ರಂಗನಿತ್ತವು ಬದುಕಿಗೆ...
ನೋವ ಮರೆತು ಹಳೆಯ ನೆನಪನೆಲ್ಲಾ ಕೊಡವಿ
ಉತ್ಸಾಹದ ತೇರನೇರಿ ಬೀದಿಗೊಮ್ಮೆ ಸುತ್ತು..
ಉತ್ಸಾಹದ ತೇರನೇರಿ ಬೀದಿಗೊಮ್ಮೆ ಸುತ್ತು..
ಅಲ್ಲಲ್ಲಿ ಚಪ್ಪಾಳೆ.. ಸಾಕಲ್ಲವೆ.. ಮೈಮರೆತೆನೋ..
ವಿಧಿಯ ಎಚ್ಚರಿಕೆಯ
ಕಡೆಗಣಿಸಿದೆನೇನೋ..
ನೋಡಿಗ ಮತ್ತೆ
ಗೊಂದಲದಲ್ಲಿ ನಾನೀಗ
ಪಾರುಮಾಡುವೆಯೆನೇ ನನ್ನನ್ನು ನೀನೀಗ!
ಪಾರುಮಾಡುವೆಯೆನೇ ನನ್ನನ್ನು ನೀನೀಗ!
2 comments:
ಇಷ್ಟು ಮನಸಿಟ್ಟು ಕರೆಯುವಾಗ ಬರದೇ ಇರ್ಲಿಕ್ಕೆ, ಒದಗದೇ ಇರ್ಲಿಕ್ಕೆ ಆದೀತೇ ಗೆಳತಿಗೆ, ಖಂಡಿತಾ ಬರ್ತಾಳೆ, ಜೊತೆಗಿರ್ತಾಳೆ.. ಆದರೆ ಪಾರಾಗುವ ದಾರಿಯಲ್ಲಿ ಜೊತೆಗೆ ಆಸರೆಯಾಗಿ ಹೆಜ್ಜೆ ಹಾಕಿಯಾಳು, ಕೆಲವೊಮ್ಮೆ ದಾರಿದೀಪವಾಗಿ, ಕೆಲವೊಮ್ಮೆ ಊರುಗೋಲಾಗಿ, ಕೆಲವೊಮ್ಮೆ ತೇರಾಗಿ, ಕೆಲವೊಮ್ಮೆ ಹೊತ್ತೊಯ್ಯುವ ಗಾಳಿಯಾಗಿ... ಹೀಗೇ...ಆದರೆ ಮೀರಿ ಪಾರಾಗುವುದು ಮಾತ್ರ ನಿನ್ನ ಕೈಲಷ್ಟೇ ಇರುವುದು ಶೀಲಾ.
ಇಲ್ಲ ಅನು, ಅದು ಈಗ ನನ್ನ ಕೈಯಲೂ ಇಲ್ಲ. ನನ್ನ ತದೇಕ ಚಿತ್ತ ಆ ನನ್ನ ಒಡೆಯನತ್ತ.. ಕೇವಲ ಅವನು ಮನಸ್ಸು ಮಾಡಿದರೆ ಮಾತ್ರ ಎಲ್ಲಾ ಗೊಂದಲದಿಂದ ಪಾರುಮಾಡುಬಲ್ಲ.
ಹೀಗೆ ಗೆಳತಿಯಲ್ಲಿ ಹಗುರವಾಗುವ ತವಕ..
ನೀ ಮನಸಿಟ್ಟು ಕೇಳಿದರೂ ಸಾಕು..
ಒಂದಿಷ್ಟು ಶಾಂತಿ ಸಮಾಧಾನ..
Post a Comment