1.
ಹೆಣ್ಣು ಜನುಮ
ಬಯಸಿದ ಮುಂಜಾವು!
----------------------------------
ತಲೆಗೆ ಕಟ್ಟಿದ ಅರಿವೆಯೆಡೆಯಿಂದ
ಹೊರಗಿಣುಕುತ ಕಣ್ಣ ಕೆಣಕುವ ಮುಂಗುರುಳು..
ಕಣ್ಣ ಜತೆ ಸರಸವಾಡುವ
ಮುಂಗುರುಳ ಅತ್ತ ಅಟ್ಟುವ ಮುಂಗೈಯ ಘಲ್ ಘಲ್ ನಾದದ ಮಾರ್ದನಿ..
ಕಣ್ಣು ಕತ್ತಿನ ಯುಗಳ
ನಾಟ್ಯಕೆ ಮುತ್ತಿನ ಝುಮುಕಿಯ, ಕಪ್ಪು ಮಣಿಯ ಹಾರದ ತಾಳ..
ಮಿಡಿಮಾವಿನ
ಕಾಯಿಯೆಡೆಯಿಂದ ಹೊರಡುವ ಪಂಚಮ ರಾಗದ ಕೋಗಿಲೆಯ ಕುಹೂ ಕುಹೂ..
ಬಿಸಿ ನೀರಿನ ಜಳಕಕೆ
ಬೆವರ ಮುತ್ತುಗಳು ಬೆನ್ನ
ಮೇಲೆ ಕಚಕುಳಿಯಿಡುತ ಎಳೆಕಿರಣಗಳೊಡನೆ
ಆಡುತಿವೆ ಕಣ್ಮುಚ್ಚಾಲೆ..
ಸೊಂಟಕೆ ಬಿಗಿದ
ಸೆರಗು ಜಾರಿ ನೆಲ ಮುತ್ತಿಕ್ಕಲು ಇಂಚಿಚಾಗಿ ಜಾರುತಿದೆ, ಮರುತನ ಸಂಚೇನೋ..
“ಕೌಸಲ್ಯಾ ಸುಪ್ರಜಾ
ರಾಮಾ.. “ ಇದ್ಯಾವುದರ ಪರಿವಿಯಿಲ್ಲದ ಮಗ್ನಳಾಗಿ ಚುಕ್ಕಿ ಇಡುವ ನೀರೆ
ಈ ಪರಿಗೆ ಸೋತ ಮುಂಜಾವು ಹೆಣ್ಣು ಜನುಮ ಬಯಸಿದುದರಲಿ ತಪ್ಪೇನೂ
ಇಲ್ಲವೆನುವೆ!
No comments:
Post a Comment